ನವೀನ್ ಹುಲಿಯೂರದುರ್ಗ, ದಿಶಾ ಭಾರತ್ ಸ್ವಯಂಸೇವಕರು

ರಾಜ್ಯದ ಯುವಜನತೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸ್ವಾತಂತ್ರ್ಯ ಸಂಗ್ರಾಮದ ಅರಿವು ಮತ್ತು ಮಹತ್ವ ಮೂಡಿಸುವ, ದೇಶದ ಕುರಿತು ಶ್ರದ್ಧೆ, ಅಭಿಮಾನ, ಸಮರ್ಪಣ ಭಾವ, ಕರ್ತವ್ಯ ಪ್ರಜ್ಞೆ, ಇತ್ಯಾದಿ ಮೌಲ್ಯಗಳನ್ನು ಜಾಗೃತಗೊಳಿಸುವ ಉದ್ದೇಶದೊಂದಿಗೆ ದಿಶಾಭಾರತ್ ಸಂಸ್ಥೆ ಆಯೋಜಿಸಿದ ‘ನನ್ನ ಭಾರತ’ ಅಭಿಯಾನದ ಭಾಗವಾಗಿ ಸ್ವರಾಜ್ಯ ರಥದ ರಾಜ್ಯವ್ಯಾಪಿ ಸಂಚಾರವನ್ನು ಕಳೆದ ಎರಡು ವರ್ಷಗಳಿಂದ ಕೈಗೊಂಡಿದೆ. ಆಗಸ್ಟ್ 1 ರಂದು ಬೆಂಗಳೂರಿನಲ್ಲಿ ಚಾಲನೆ ದೊರೆಯುವ ಈ ರಥ ಹದಿನೈದು ದಿನಗಳ ಕಾಲ ರಾಜ್ಯವಾಪಿ ಸಂಚರಿಸಿ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ದಿನ ಸಂಚಾರವನ್ನು ಮುಕ್ತಾಯಗೊಳಿಸುತ್ತದೆ. ಈ ಬಾರಿಯ ಸ್ವರಾಜ್ಯ ರಥಕ್ಕೆ ಅಗಸ್ಟ್ 1 ರಂದು ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದಿಂದ ಚಾಲನೆ ದೊರಕಿತು. ಹೊಸದಿಗಂತ ಪತ್ರಿಕೆಯ ಸಂಪಾದಕರಾದ ವಿನಾಯಕ ಭಟ್ ಮುರೂರು ಚಾಲನೆ ನೀಡಿದರು.

ಮಂತ್ರಾಲಯ
ಸಿದ್ದಗಂಗಾ ಮಠ

ಅದಮ್ಯ ರಾಷ್ಟ್ರಭಕ್ತಿಯ ಪರಿಚಯ: ಸ್ವರಾಜ್ಯರಥವು ಬೆಂಗಳೂರಿನಿಂದ ಹೊರಟು ಬೆಂಗಳೂರು ಗ್ರಾಮಂತರ, ರಾಮನಗರ, ಮಂಡ್ಯ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ, ಯಾದಗಿರಿ, ರಾಯಚೂರು, ಬಳ್ಳಾರಿ, ಹೊಸಪೇಟೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ರಾಜ್ಯದ್ಯಂತ ಒಟ್ಟು 26 ಜಿಲ್ಲೆಗಳನ್ನು ತಲುಪಿದೆ. ಒಟ್ಟು 3151ಕಿ.ಮೀ. ಸಂಚಾರವನ್ನು ಸ್ವರಾಜ್ಯ ರಥ ಮಾಡಿದೆ. ಸ್ವರಾಜ್ಯ ರಥವನ್ನು ಸ್ವಾಗತಿಸಿದ ಮತ್ತು ಸ್ವರಾಜ್ಯ ರಥದೊಂದಿಗೆ ಜನರು ಭಾವನಾತ್ಮಕವಾಗಿ ಒಂದಾದ ಪ್ರತಿ ಕ್ಷಣವೂ ನಾಡಿನ ಜನಮಾನಸದಲ್ಲಿ ಅಂತರ್ಗತವಾಗಿದ್ದ ಅಗಾಧವಾದ ರಾಷ್ಟ್ರಪ್ರೇಮದ ಪರಿಚಯವಾಗುತ್ತಿತ್ತು.

ಕಣ್ಮನ ಸೆಳೆಯುವ ರಥದ ವಿನ್ಯಾಸ: ಬೆಂಗಳೂರಿನಿಂದ ಹೊರಟ ಸ್ವರಾಜ್ಯ ರಥ ತನ್ನ ಆಕರ್ಷಕ ವಿನ್ಯಾಸದ ಮೂಲಕ ರಸ್ತೆಯಲ್ಲಿ ಸಾಗುವ ಎಲ್ಲರ ಗಮನ ಸೆಳೆಯುತಿತ್ತು. ಸಾಗುತ್ತಿದ್ದ ರಥದ ಮುಂದೆ ರಾರಾಜಿಸುತ್ತಿದ್ದ ರಾಷ್ಟ್ರಧ್ವಜ ಹಾಗೂ ತಾಯಿ ಭಾರತಿಯ ಭಾವಚಿತ್ರವನ್ನು ಕಂಡ ಪ್ರತಿಯೊಬ್ಬರೂ ಭಾವನಾತ್ಮಕವಾಗಿ ರಥದೊಂದಿಗೆ ತಮ್ಮನ್ನು ಒಂದಾಗಿಸಿಕೊಳ್ಳುತ್ತಿದ್ದರು. ರಥವನ್ನು ಕಂಡ ಎಲ್ಲಾ ವಯಸ್ಸಿನ ವಯಕ್ತಿಗಳು ಕೈಮುಗಿದು ನಮಸ್ಕರಿಸಿದಾಗ ವ್ಯಕ್ತಗೊಂಡ ಮುಗ್ಧತೆ, ಸೆಲ್ಯುಟ್ ಮಾಡುವಾಗ ಕಂಗಳಲ್ಲಿ ರಾರಾಜಿಸುತ್ತಿದ್ದ ಅಭಿಮಾನ, ವಿದ್ಯಾರ್ಥಿಗಳ ಉತ್ಸಾಹಿ ಕಂಗಳಲ್ಲಿ ಕಾಣುತ್ತಿದ್ದ ಮೆರಗು ಭಾರತದ ಉಜ್ವಲ ಭವಿಷ್ಯದ ಸಂಕೇತವಾಗಿ ಭಾಸವಾಗುತ್ತಿತ್ತು. ಈ ರಾಷ್ಟ್ರ ಮೃತ್ಯುಂಜಯ ರಾಷ್ಟ್ರವಾಗಿ ಅಸ್ತಿತ್ವದಲ್ಲಿರುವ ಕಾರಣವೂ ತಿಳಿಯುವಂತಾಯಿತು.

ಸ್ವರಾಜ್ಯ ರಥಕ್ಕೆ ತಾಂತ್ರಿಕ ಮೆರಗು: ಸ್ವರಾಜ್ಯ ರಥವು ತನ್ನ ವಿನ್ಯಾಸವಷ್ಟೇಯಲ್ಲದೇ ಆಧುನಿಕ ತಂತ್ರಜ್ಞಾನದ ಮೂಲಕವೂ ವಿಶಿಷ್ಟವಾಗಿ ಕಾಣುತ್ತಿತ್ತು. ವಿದ್ಯಾರ್ಥಿಗಳನ್ನು ತಲುಪುವ ದೃಷ್ಟಿಯಿಂದ ರಥದಲ್ಲಿ ಎಲ್‌ಇಡಿ ಪರದೆ ಅಳವಡಿಸಿ 1857ರ ಸ್ವಾತಂತ್ರ್ಯ ಸಂಗ್ರಾಮದಿಂದ 1947ರ ವರೆಗಿನ ಘಟನೆಗಳನ್ನು ಆಧರಿಸಿದ ಕಿರು ಸಾಕ್ಷ್ಯಚಿತ್ರಗಳನ್ನು ರಥ ಭೇಟಿ ನೀಡುತ್ತಿದ್ದ ಶಾಲಾ-ಕಾಲೇಜುಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು. ಮಕ್ಕಳಲ್ಲಿ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದ ಹಾಗೂ ದೇಶಕ್ಕಾಗಿ ವೀರಾವೇಷದಿಂದ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಹಾಗೂ ಮಕ್ಕಳಲ್ಲಿ ದೇಶಭಕ್ತಿ ಜಾಗೃತಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಕಿರುಚಿತ್ರ ವೀಕ್ಷಿಸಿದ ಮಕ್ಕಳಲ್ಲಿ ಸ್ವಾತಂತ್ರ್ಯ ಹೋರಾಟ ಘಟನೆಗಳು ಮೈರೋಮಾಂಚನಗೊಳಿಸುವಂತಿತ್ತು.

ಸಂದೇಶ ರೂಪದ ಕರ್ತವ್ಯ ಮನದಟ್ಟು: ಸ್ವರಾಜ್ಯ ರಥವು ಶಾಲಾ ಕಾಲೇಜುಗಳಲ್ಲಿ ಮಕ್ಕಳಲ್ಲಿ ದೇಶಭಕ್ತಿ ಜಾಗೃತಗೊಳಿಸುವುದರೊಂದಿಗೆ ಮಕ್ಕಳಿಗೆ ಅನೇಕ ಸಂದೇಶಗಳ ರೂಪದಲ್ಲಿ ಅವರ ಕರ್ತವ್ಯವನ್ನು ಪರಿಚಯಿಸಲಾಯಿತು. ಅವುಗಳೆಂದರೆ
೧. ಸ್ವಚ್ಛ ಭಾರತದ ಕಲ್ಪನೆ ತಿಳಿಸಿ ‘ಪ್ಲಾಸ್ಟಿಕ್ ತ್ಯಜಿಸಿ’ ಎಂಬ ಸಂದೇಶ ನೀಡಲಾಯಿತು.
೨. ಎಲ್ಲರನ್ನು ಗೌರವಿಸಿ ಎಂಬ ಸಾಮಾಜಿಕ ಸಾಮರಸ್ಯದ ಮನೋಭಾವದ ಕುರಿತು ತಿಳಿಸಲಾಯಿತು.
೩. ಗಿಡಮರಗಳನ್ನು ಬೆಳೆಸಿ ಎಂಬ ಸಾರ್ವಕಾಲಿಕ ಜವಾಬ್ದಾರಿಯನ್ನು ನೆನಪಿಸಲಾಯಿತು.
೪. ಮಾದಕ ವಸ್ತುಗಳನ್ನು ತ್ಯಜಿಸಿ ಭಾರತವನ್ನು ಬಲಿಷ್ಠಗೊಳಿಸುವಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರವಹಿಸಬೇಕು ಎನ್ನುವುದನ್ನು ಮನದಟ್ಟು ಮಾಡಲಾಯಿತು.

ಸ್ವರಾಜ್ಯ ರಥದ ಪಥ: ಸ್ವರಾಜ್ಯ ರಥವು 15 ದಿನಗಳಲ್ಲಿ ರಾಜ್ಯದ ಒಟ್ಟು 132 ಶಾಲಾ ಕಾಲೇಜುಗಳನ್ನು ತಲುಪುವಲ್ಲಿ ಯಶಸ್ವಿಯಾಯಿತು. 65000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಿತು. ಸ್ವರಾಜ್ಯ ರಥವನ್ನು ರಾಜ್ಯದ 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದರು. ಪ್ರತಿನಿತ್ಯ ಆಯೋಜಿಸಲಾದ ನನ್ನ ಭಾರತ ಸರಣಿ ಉಪನ್ಯಾಸದ ನೇರಪ್ರಸಾರವನ್ನು ರಾಜ್ಯದ ಒಟ್ಟು 30-35 ಸಾವಿರ ಜನರು ವೀಕ್ಷಿಸಿದರು. ಈರೀತಿಯಾಗಿ ಸ್ವರಾಜ್ಯ ರಥವು 15 ದಿನಗಳ ತನ್ನ ಅಭಿಯಾನದಲ್ಲಿ ರಾಜ್ಯದ ಮಕ್ಕಳು ಹಾಗೂ ಜನತೆಯಲ್ಲಿ ದೇಶಭಕ್ತಿ ಜಾಗೃತಗೊಳಿಸುವಲ್ಲಿ ಯಶಸ್ವಿಯಾಯಿತು.

Leave a Reply

Your email address will not be published.

This site uses Akismet to reduce spam. Learn how your comment data is processed.