ಇಸ್ಕಾನ್ ನ ಸನ್ಯಾಸಿ ಚಿನ್ಮಯಿಕೃಷ್ಣ ದಾಸ್ ಅವರ ಅನ್ಯಾಯಪೂರ್ವಕ ಸೆರೆವಾಸವನ್ನು ಮುಕ್ತಗೊಳಿಸಬೇಕು – ಆರ್ ಎಸ್ ಎಸ್ ಆಗ್ರಹ
ನಾಗ್ಪುರ ನ.30, 2024: ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರೆ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಆಗುತ್ತಿರುವ ದೌರ್ಜನ್ಯ ಹಾಗೂ ಅನ್ಯಾಯವನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಇಸ್ಕಾನ್ ನ ಸನ್ಯಾಸಿ ಚಿನ್ಮಯಿಕೃಷ್ಣ ದಾಸ್ ಅವರ ಬಂಧನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಖಂಡಿಸಿದೆ. ಆರ್ ಎಸ್ ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರು ಪ್ರಕಟಣೆಯ ಮೂಲಕ ಬಾಂಗ್ಲಾದಲ್ಲಾಗುತ್ತಿರುವ ಘಟನೆಗಳ ಕುರಿತು ಹೇಳಿಕೆಯನ್ನು ನೀಡಿದ್ದಾರೆ.
ಆರ್ ಎಸ್ ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರ ಹೇಳಿಕೆ:
ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ದಾಳಿ, ಹತ್ಯೆ, ಲೂಟಿ, ಬೆಂಕಿಯ ದಾಳಿ ಹಾಗೂ ಮಹಿಳೆಯರ ಮೇಲಿನ ಅಮಾನವೀಯ ದೌರ್ಜನ್ಯಗಳನ್ನು ನಡೆಸುತ್ತಿರುವುದು ಅತ್ಯಂತ ಚಿಂತಾಜನಕ ಸಂಗತಿ. ಇಂತಹ ಹೇಯಕೃತ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಂಪೂರ್ಣವಾಗಿ ಖಂಡಿಸುತ್ತದೆ. ವರ್ತಮಾನದ ಬಾಂಗ್ಲಾದೇಶದ ಸರ್ಕಾರ ಮತ್ತು ಅನ್ಯ ಏಜೆಂಸಿಗಳು ಇದನ್ನು ನಿಲ್ಲಿಸುವ ಬದಲು ಕೇವಲ ಮೂಕದರ್ಶಕರಾಗಿದ್ದಾರೆ. ಬಾಂಗ್ಲಾದೇಶದ ಹಿಂದೂಗಳ ವಿರುದ್ಧ ಬಲವಂತವಾಗಿ ತಮ್ಮ ಸ್ವರಕ್ಷಣೆಗಾಗಿ ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಎದ್ದ ಧ್ವನಿಯನ್ನು ಹತ್ತಿಕ್ಕುವ ಮತ್ತು ಅವರ ಮೇಲೆ ಅನ್ಯಾಯ ಹಾಗೂ ಅತ್ಯಾಚಾರದಂತಹ ದುಷ್ಕೃತ್ಯಗಳ ಹೊಸ ಯುಗವು ಹೊರಹೊಮ್ಮುತ್ತಿರುವಂತೆ ತೋರುತ್ತಿದೆ.
ಹಾಗೆಯೇ ಇಂತಹ ಘಟನೆಗಳ ವಿರುದ್ಧ ಹಿಂದುಗಳ ಪರ ಶಾಂತಿಯುತ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಇಸ್ಕಾನ್ ನ ಸನ್ಯಾಸಿ ಚಿನ್ಮಯ್ ಕೃಷ್ಣದಾಸರನ್ನು ಬಾಂಗ್ಲಾದೇಶದ ಸರಕಾರದ ಮೂಲಕ ಸೆರೆಮನೆಗೆ ಕಳುಹಿಸಿರುವುದು ಅನ್ಯಾಯಪೂರ್ಣವಾದದ್ದು.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಬಾಂಗ್ಲಾದೇಶ ಸರ್ಕಾರದೊಂದಿಗೆ ಮನವಿ ಮಾಡುವುದೇನೆಂದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ತಕ್ಷಣವೇ ನಿಲ್ಲುವುದನ್ನು ಅವರು ಖಚಿತಪಡಿಸಿಕೊಳ್ಳಬೇಕು ಹಾಗೂ ಇಸ್ಕಾನ್‌ನ ಚಿನ್ಮಯ್ ಕೃಷ್ಣದಾಸ್ ಅವರನ್ನು ಸೆರೆವಾಸದಿಂದ ಮುಕ್ತಗೊಳಿಸಬೇಕು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಭಾರತ ಸರ್ಕಾರದೊಂದಿಗೂ ಮನವಿ ಮಾಡುವುದೇನೆಂದರೆ ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರೆ ಎಲ್ಲಾ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ತಡೆಯುವ ತನ್ನ ಪ್ರಯತ್ನವನ್ನು ಸರ್ಕಾರ ಸಾಧ್ಯವಾದಷ್ಟು ಮುಂದುವರಿಸಬೇಕು. ಹಾಗೂ ಅದಕ್ಕೆ ಪೂರಕವಾಗಿ ವೈಶ್ವಿಕ ಅಭಿಮತವನ್ನು ರಚಿಸುವ ಮತ್ತು ಅತೀಶೀಘ್ರದಲ್ಲಿ ಆವಶ್ಯಕ ಹೆಜ್ಜೆಯನ್ನು ಇಡಬೇಕು.
ಈ ಮಹತ್ವಪೂರ್ಣ ಸಮಯದಲ್ಲಿ ಭಾರತ ಮತ್ತು ವೈಶ್ವಿಕ ಸಮುದಾಯ ಹಾಗೂ ಸಂಸ್ಥೆಗಳು ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೆ ಒಳಗಾದವರ ಜೊತೆ ನಿಂತು ಅವರಿಗೆ ನಾವು ನಮ್ಮ ಬೆಂಬಲವನ್ನು ವ್ಯಕ್ತಪಡಿಸಬೇಕು ಮತ್ತು ಇದಕ್ಕಾಗಿ ನಮ್ಮ ನಮ್ಮ ಸರ್ಕಾರಗಳಿಂದ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಒತ್ತಾಯಿಸಬೇಕು, ಇದು ವಿಶ್ವ ಶಾಂತಿ ಮತ್ತು ಸಹೋದರತ್ವಕ್ಕೆ ಅವಶ್ಯಕವಾಗಿದೆ.
– ದತ್ತಾತ್ರೇಯ ಹೊಸಬಾಳೆ,
ಸರಕಾರ್ಯವಾಹ,
ರಾಷ್ಟ್ರೀಯ ಸ್ವಯಂಸೇವಕ ಸಂಘ
30-11-2024