– ಲೇಖಕರು: ದು.ಗು.ಲಕ್ಷ್ಮಣ, ಹಿರಿಯ ಪತ್ರಕರ್ತರು

ಇಂಗ್ಲಿಷ್ ಕವಿಯೊಬ್ಬನ ಕವಿತೆಯ ಸಾಲು ಹೀಗಿದೆ:
Wanted men!
Not systems;fit and wise
Not faith,with rigid eyes
Not wealth in mountain piles
Not power with gracious smiles
Not even the potent penಉ
Wanted men!

ಕವಿ ಹೇಳುತ್ತಾನೆ: ನನಗೆ ಮನುಷ್ಯರು ಬೇಕಾಗಿದ್ದಾರೆ! ಜೋಡಿಸಿದ ವ್ಯವಸ್ಥೆಗಳು ಬೇಡ. ಅಂಧಶ್ರದ್ಧೆ ಬೇಡ. ಸಂಪತ್ತಿನ ರಾಶಿಯೂ ಬೇಡ. ಉದಾತ್ತ ಹಿತಕಾರಿ ಅಧಿಕಾರವೂ ಬೇಡ ಹಾಗೂ ಹರಿತ ಲೇಖನಿಯೂ ಬೇಡ. ಕೇವಲ ಕರ್ತವ್ಯ ನಿಭಾಯಿಸಬಲ್ಲ ಮನುಷ್ಯತ್ವದ ಮೂರ್ತಿವೆತ್ತರೂಪದ ಮನುಷ್ಯರು ಬೇಕಾಗಿದ್ದಾರೆ.

ಸಂಘ ಹೇಳುವ ವ್ಯಕ್ತಿನಿರ್ಮಾಣದ ವಿಚಾರಕ್ಕೆ ಈ ಕವಿತೆ ಅದೆಷ್ಟು ಪೂರಕ ಅಲ್ಲವೇ?ಸಂಘದ ಸಂಸ್ಕಾರ ಪಡೆದು ನಿರ್ಮಾಣವಾಗುವ ವ್ಯಕ್ತಿ ಇಂತಹ ಗುಣಗಳ ಗಣಿಯಾಗಿರಬೇಕೆಂಬುದು ನಿರೀಕ್ಷೆ. ಸಂಘ ಸಂಸ್ಕಾರ ಪಡೆದವರೆಲ್ಲರೂ ಇಂತಹ ಗುಣಗಳ ಗಣಿಯಾಗಿರುತ್ತಾರೆ ಎಂದೇನಿಲ್ಲ. ಗಿಡವೊಂದರಲ್ಲಿ ಬಿಡುವ ಹಣ್ಣುಗಳೆಲ್ಲವೂ ಸಮಾನ ರುಚಿ, ಸ್ವಾದ ಹೊಂದಿರಲು ಸಾಧ್ಯವಿಲ್ಲವಲ್ಲವೇ?

ಆದರೆ ಮೊನ್ನೆ ಮಾರ್ಚ್10ರಂದು ನಿಧನರಾದ ಕಾಸರಗೋಡು ತಾಲೂಕಿನ ಕಿದೂರು ಶಂಕರನಾರಾಯಣ ಭಟ್ (ಕಿದೂರು ಶಂಕರಣ್ಣ ಎಂದೇ ಎಲ್ಲರಿಗೂ ಅವರು ಚಿರಪರಿಚಿತರು) ಮನುಷ್ಯತ್ವದ ಮೂರ್ತಿವೆತ್ತ ರೂಪದಂತಿದ್ದರು ಎಂದರೆ ಅದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಸಂಘದ ಹಿರಿಯ ಕಾರ್ಯಕರ್ತ, ಸಹಕಾರ ಭಾರತಿಯ ಕಾಸರಗೋಡು ಜಿಲ್ಲಾ ಸಂಘಟನಾ ಪ್ರಮುಖ್, Campco ಸಂಸ್ಥೆಯ ಮಾಜಿ ನಿರ್ದೇಶಕ ಮುಂತಾದ ಹತ್ತು ಹಲವು ಸಾಮಾಜಿಕ ಜವಾಬ್ದಾರಿ ನಿರ್ವಹಿಸಿದವರಾದರೂ ಎಲ್ಲರೂ ಅವರನ್ನು ಗುರುತಿಸುತ್ತಿದ್ದುದು – ನಮ್ಮ ಪರಿವಾರದ ಒಬ್ಬ ಮಾರ್ಗದರ್ಶಕ, ಆಪ್ತ ಹಿತೈಷಿ, ಸಂಕಟಕ್ಕೊದಗುವ ವೆಂಕಟರಮಣ, ಆಪದ್ಭಾಂಧವ, ಇತರರ ಕಷ್ಟಗಳಿಗೆ ಮರುಗುವ ಕಾರುಣ್ಯಜೀವಿ ಎಂದು. ಮಾ.12ರಂದು ಕುಂಬಳೆಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದ ಪ್ರಮುಖರೆಲ್ಲರ ಮಾತಿನ ಸಾರ ಇದೇ ಆಗಿತ್ತು. ಶಂಕ್ರಣ್ಣನ ಸಜ್ಜನಿಕೆ, ಅಪಾರ ತಾಳ್ಮೆ, ಸಂದಿಗ್ಧ ಪರಿಸ್ಥಿತಿಗಳಲ್ಲಿ ಅವರು ಆಳವಾಗಿ ಚಿಂತಿಸಿ ಕೈಗೊಳ್ಳುತ್ತಿದ್ದ ಯೋಗ್ಯ ಹಾಗೂ ಸೂಕ್ತ ನಿರ್ಧಾರಗಳು, ಸಂಘಟನಾ ಚಾತುರ್ಯ, ಎಂಥದೇ ಜಟಿಲ ಸನ್ನಿವೇಶಗಳ ಸಂದರ್ಭದಲ್ಲೂ ಅವರಲ್ಲಿರುತ್ತಿದ್ದ ಅನುದ್ವಿಗ್ನ ಮನಸ್ಥಿತಿ, ಸ್ಥಿತಪ್ರಜ್ಞತೆ ಇಂದಿನ ಕಿರಿಯ ಕಾರ್ಯಕರ್ತರೆಲ್ಲರಿಗೂ ಮೇಲ್ಪಂಕ್ತಿ.

ಶಂಕ್ರಣ್ಣನವರದು ವಿಶಿಷ್ಟ ವ್ಯಕ್ತಿತ್ವ. ಕೆಲವೊಮ್ಮೆ ಅವರೊಬ್ಬ ವಿಚಿತ್ರ ವ್ಯಕ್ತಿಯೆಂದು ಕೆಲವರಿಗೆ ಅನಿಸಿದ್ದಿರಲೂಬಹುದು. ಸಾಧಾರಣವಾದ ಒಂದು ಪಂಚೆ, ಮೇಲೊಂದು ಸಾಧಾರಣ ಶರಟು, ಕಾಲಿಗೊಂದು ಸಾಧಾರಣ ದರ್ಜೆಯ ಚಪ್ಪಲಿ, ಹೆಗಲಲ್ಲೊಂದು ಚೀಲ. ಆ ಚೀಲದೊಳಗೆ ಇಡೀ ಸಂಘಪರಿವಾರವೇ ಅಡಗಿರುತ್ತಿತ್ತು! ವಿಶ್ವಹಿಂದೂ ಪರಿಷತ್ತಿನ ಯಾವುದೋ ಅಭಿಯಾನಕ್ಕೆ ಸಂಬಂಧಿಸಿದ ರಶೀದಿ ಪುಸ್ತಕ, ಸಂಘದ ಒಂದಿಷ್ಟು ಹೊಸ ಪ್ರಕಟಣೆಗಳು, ವಿಕ್ರಮ, ಹೊಸದಿಗಂತ, ಉತ್ಥಾನ ಪತ್ರಿಕೆಗಳಿಗೆ ಚಂದಾದಾರರಾಗ ಬಯಸುವವರಿಗೆ ಕೊಡಲು ರಶೀದಿ ಪುಸ್ತಕಗಳು, ಜೊತೆಗೆ ಒಂದೆರಡು ಹಳೆಯ ಪತ್ರಿಕೆಗಳು. ಹೀಗೆ ಅವರ ಕೈಚೀಲ ಸಂಪದ್ಭರಿತ ಸಂಘಪರಿವಾರದ ಉಗ್ರಾಣವೇ ಆಗಿರುತ್ತಿತ್ತು. ಸಂಘದ ಬೈಠಕ್ ಗಳಿಗೆ ಸಂಜೆ ಹೋದರೆ ಆಗೆಲ್ಲ ಸಮಯಕ್ಕೆ ಸರಿಯಾಗಿ ರಾತ್ರಿ ಮನೆಗೆ ತಲುಪಲಾಗುತ್ತಿರಲಿಲ್ಲ. ಮರುದಿನ ಬೆಳಿಗ್ಗೆ ಇನ್ನಾವುದೋ ಊರಿಗೆ ನಿಗದಿತ ವೇಳೆಗೆ ಶಾಖೆಗೆ ಹೋಗಬೇಕಿತ್ತು. ಮನೆಗೆ ಹೋದರೆ ತೊಂದರೆಯಾಗುತ್ತದೆಂದು ರಾತ್ರಿ ಬಸ್ ನಿಲ್ದಾಣದಲ್ಲೇ ಶಂಕ್ರಣ್ಣ ಆನಂದವಾಗಿ ಮಲಗಿಬಿಡುತ್ತಿದ್ದರು. ಆಗ ಅವರಿಗೆ ಉಪಯೋಗಕ್ಕೆ ಬರುತ್ತಿದ್ದುದು ಅವರ ಕೈಚೀಲದಲ್ಲಿರುತ್ತಿದ್ದ ಅದೇ ಹಳೆಯ ಎರಡು ಪತ್ರಿಕೆಗಳು. ನೆಲಕ್ಕೆ ಹಾಸಲೊಂದು, ಮೇಲೆ ಹೊದೆಯಲು ಇನ್ನೊಂದು ಪತ್ರಿಕೆ. ಸಂಘ ಕಲಿಸಿದ ಸಮಯಪಾಲನೆಗೆ ತಮ್ಮನ್ನು ಅವರು ಅಣಿಗೊಳಿಸಿಕೊಂಡಿದ್ದು ಹೀಗೆ! ಬಸ್ ನಿಲ್ದಾಣವೇ ರಾತ್ರಿಯ ವೇಳೆ ವಸತಿ. ಹಳೆಯ ಪತ್ರಿಕೆಗಳೇ ಹಾಸಿಹೊದೆಯಲು ಬೆಡ್ಶೀಟ್ ಗಳು. ಸಾರ್ವಜನಿಕ ನಲ್ಲಿಯೇ ಅವರ ಬಚ್ಚಲುಮನೆ. ಶಂಕ್ರಣ್ಣನಂಥ ಅದೆಷ್ಟೋ ಸಂಘದ ಹಿರಿಯರು ಸಂಘವೃಕ್ಷ ಬೆಳೆಸಲು ಪಟ್ಟ ಪರಿಶ್ರಮ ಈ ಪರಿಯದು. ಇಂದಿನ ನಮ್ಮ ಅನೇಕ ಯುವಪೀಳಿಗೆಯ ಕಾರ್ಯಕರ್ತರಿಗೆ ಈ ಸಂಗತಿ ಖಂಡಿತ ಅರಿಯದು.

ಅದು 1986-87ರ ಕಾಲಘಟ್ಟ. ಸಂಘಕಾರ್ಯ ನಿಮಿತ್ತ ಮನೆಯೊಂದರ ಸಂಪರ್ಕಕ್ಕೆ ಶಂಕ್ರಣ್ಣ ಹೋಗಿದ್ದರು. ಆ ಮನೆಯವರು ಕಟ್ಟರ್ ಕಮ್ಯುನಿಸ್ಟರು. ಆದರೆ ಅವರ ಮಗನನ್ನು ಸಂಘದ ಸಂಪರ್ಕಕ್ಕೆ ತರಬೇಕೆಂಬ ಹಂಬಲ ಶಂಕ್ರಣ್ಣನದು. ಸಂಘ ಎಂದರೆ ಬ್ರಾಹ್ಮಣರದು ಎಂಬ ಅಪಪ್ರಚಾರ ಜೋರಾಗಿದ್ದ ಕಾಲವದು. ಆ ಮನೆಯವರಾದರೊ ಬ್ರಾಹ್ಮಣೇತರರು. ಆದರೇನು, ಶಂಕ್ರಣ್ಣ ಆ ಮನೆಗೆ ತೆರಳಿ, ಎಲ್ಲರೊಂದಿಗೆ ನಗುತ್ತ ಮಾತಾಡಿ, ಅಲ್ಲೇ ಊಟ ಮುಗಿಸಿದಾಗ ಮನೆಮಂದಿಗೆಲ್ಲ ಆಘಾತ! ಬ್ರಾಹ್ಮಣರಾಗಿ ನೀವು ನಮ್ಮ ಮನೆಯಲ್ಲಿ ಊಟ ಮಾಡ್ತೀರಾ? ಎಂಬ ಮನೆಯ ಹಿರಿಯರ ಪ್ರಶ್ನೆಗೆ ಶಂಕ್ರಣ್ಣ ಕೊಟ್ಟ ಉತ್ತರ: “ಸಂಘ ನಮಗೆ ಕಲಿಸಿದ್ದು ನಾವೆಲ್ಲ ಹಿಂದೂ, ನಾವೆಲ್ಲ ಬಂಧು ಎಂದು. ಹಾಗಾಗಿ ಎಲ್ಲಿ ಊಟ ಮಾಡಿದರೇನು? “ಮನೆಯವರಿಗೆ ಅವರ ಈ ಮಾತನ್ನು ತಕ್ಷಣ ಅರಗಿಸಿಕೊಳ್ಳಲಾಗಲಿಲ್ಲ. ಆದರೆ ಅನಂತರ ಆ ಇಡೀ ಮನೆ ಸಂಘದ ಮನೆಯಾಗಿ ಬದಲಾಗಿದ್ದಕ್ಕೆ ಶಂಕ್ರಣ್ಣನ ಈ ಸಹಜ ನಡವಳಿಕೆ, ನಿರ್ಮಲ ಪ್ರೀತಿಯಲ್ಲದೆ ಬೇರೇನು ಕಾರಣ?

ಕಾರ್ಯಕರ್ತನೊಬ್ಬನಿಗೆ ತೀವ್ರ ಅನಾರೋಗ್ಯ. ಆದರೆ ಆತನ ಮನೆಯಲ್ಲಿ ಕಿತ್ತುತಿನ್ನುವ ಬಡತನ. ಯಾರಲ್ಲೂ ಹೇಳಿಕೊಳ್ಳಲಾಗದ ಅಸಹಾಯಕತೆ.ಶಂಕ್ರಣ್ಣನಿಗೆ ಈ ವಿಷಯ ತಿಳಿಯುತ್ತಲೇ ತಕ್ಷಣ ಆತನನ್ನು ಮಂಗಳೂರಿನ ದೊಡ್ಡಅಸ್ಪತ್ರೆಗೆ ಕರೆದುಕೊಂಡು ಬಂದರು. ಆತನಿಗೆ ತುರ್ತಾಗಿ ರಕ್ತ ಕೊಡಬೇಕಿತ್ತು. ಆಗಿನ ಕಾಲದಲ್ಲಿ ಅಷ್ಟು ಸುಲಭವಾಗಿ ರಕ್ತದಾನಕ್ಕೆ ಯಾರೂ ಮುಂದಾಗುತ್ತಿರಲಿಲ್ಲ.”ನಾನೇ ಇದ್ದೆನಲ್ಲ. ನನ್ನ ರಕ್ತವನ್ನೇ ತೆಗೊಳ್ಳಿ” ಎಂದವರೇ ಶಂಕ್ರಣ್ಣ ಬೆಡ್ ಮೇಲೆ ಮಲಗಿ ರಕ್ತ ನೀಡಿಯೇ ಬಿಟ್ಟರು. ಆ ಬಡಪಾಯಿಯ ಪ್ರಾಣ ಉಳಿಸಿ, ಮನೆಗೆ ಕರೆದುಕೊಂಡು ಬಂದರು. ಆತನೇನೂ ಇವರ ಬಂಧು ಆಗಿರಲಿಲ್ಲ. ಆದರೆ ಬಂಧುವಿಗಿಂತಲೂ ಹೆಚ್ಚಾಗಿ ಆತನ ಆರೈಕೆ ಮಾಡಿ, ಆಸ್ಪತ್ರೆ ಬಿಲ್ ವೆಚ್ಚವನ್ನೂ ಭರಿಸಿದರು. ಆದರೆ ಈ ವಿಷಯವನ್ನು ಮಾತ್ರ ಯಾರಿಗೂ ಅವರು ತಿಳಿಸಲಿಲ್ಲ. ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಕೂಡದೆಂಬ ಶಂಕ್ರಣ್ಣ ನಂಬಿದ ಜೀವನಸಿದ್ಧಾಂತ, ಪರೋಪಕಾರದ ಸಹಜ ಸ್ವಭಾವ ಅದೆಷ್ಟು ಕಾರ್ಯಕರ್ತರಲ್ಲಿರಬಹುದು?

ಹೊಸದಿಗಂತ ಪತ್ರಿಕೆ ಇನ್ನೂ ಅಂಬೆಗಾಲಿಡುತ್ತಿದ್ದ ಸಮಯ. ಶಂಕ್ರಣ್ಣ ಮೈಮೇಲೆ ಹೊಸದಿಗಂತದ ಭೂತವನ್ನು ಆವಾಹಿಸಿಕೊಂಡವರಂತೆ ವರದಿಗಾರರಾಗಿ, ಪ್ರಸರಣ ಕಾರ್ಯಕರ್ತರಾಗಿ, ಜಾಹೀರಾತು ಸಂಗ್ರಾಹಕರಾಗಿ ಬೆವರು ಹರಿಸಿ ಪತ್ರಿಕೆಗೆ ಜೀವ ತುಂಬಿದ್ದಕ್ಕೆ ಲೆಕ್ಕವಿಟ್ಟವರ್ಯಾರು? ಅವರ ಈ ಪರಿಶ್ರಮಕ್ಕೆ ಯಾವ ವೇತನವನ್ನೂ ನಿರೀಕ್ಷಿಸಲಿಲ್ಲ (ವೇತನ ಕೊಡುವಷ್ಟು ಆರ್ಥಿಕ ಶಕ್ತಿಯೂ ಪತ್ರಿಕೆಗಿರಲಿಲ್ಲ!) ಎಷ್ಟೋ ಬಾರಿ ಮಲೆಯಾಳ ಪತ್ರಿಕೆಗಳಲ್ಲಿ ಪ್ರಕಟವಾದ ಮಾನವೀಯ, ಸಮಾಜ ಜಾಗೃತಿಯ ಉತ್ತಮ ವರದಿಗಳನ್ನು ಹುಡುಕಿ, ಕನ್ನಡಕ್ಕೆ ತಾನೇ ಅನುವಾದಿಸಿ ಹೊಸದಿಗಂತದಲ್ಲಿ ಅದು ಪ್ರಕಟವಾಗುವಂತೆ ನೋಡಿಕೊಳ್ಳುತ್ತಿದ್ದರು. ಲವ್ ಜಿಹಾದ್, ಭಯೋತ್ಪಾದನೆ, ಗೋಹತ್ಯೆ, ಸ್ಮಗ್ಲಿಂಗ್ ನಂತಹ ಸಾಮಾಜಿಕ ಪಿಡುಗುಗಳ ಕುರಿತು ಸ್ಫೋಟಕ ಮಾಹಿತಿಗಳನ್ನು ನನಗೊದಗಿಸಿ ನನ್ನಿಂದ ಲೇಖನಗಳನ್ನು ಬರೆಸಿದ್ದರು. ನನ್ನ ಹಲವು ಅಂಕಣಬರಹಗಳಿಗೆ ಶಂಕ್ರಣ್ಣನೇ ವಿಶ್ವಾಸಾರ್ಹ ಮಾಹಿತಿದಾರರಾಗಿದ್ದರು. ಹೊಸದಿಗಂತದ ಏಳಿಗೆಯೇ ಶಂಕ್ರಣ್ಣನ ಖುಷಿಯ ಮಾಳಿಗೆ ಆಗಿತ್ತು.

ಒಮ್ಮೆ ಕುಂಬಳೆಯಲ್ಲೊಂದು ಹೊಸದಿಗಂತ ಓದುಗರ, ಹಿತೈಷಿಗಳ ಸಭೆ. ಆಗಿನ್ನೂ ಪತ್ರಿಕೆಗೆ ಶೈಶವಾವಸ್ಥೆ. ಪತ್ರಿಕೆಯಲ್ಲಿ ಸಾಕಷ್ಟು ಮುದ್ರಣದೋಷಗಳು, ಸಕಾಲಕ್ಕೆ ಪತ್ರಿಕೆ ಓದುಗರ ಕೈ ಸೇರದ ಸ್ಥಿತಿ, ಲೇಟೆಸ್ಟ್ ಸುದ್ದಿಗಳ ಪ್ರಕಟಣೆ ಕೊರತೆ – ಹೀಗೆ ನಾನಾ ಬಗೆಯ ತಕರಾರುಗಳ ಬಗ್ಗೆ ಆ ಸಭೆಯಲ್ಲಿ ಬಿಸಿಬಿಸಿ ಆಕ್ರೋಶ ಹೊಮ್ಮಿತ್ತು. ಎಲ್ಲರೂ ಪತ್ರಿಕೆಯ ಕುಂದುಕೊರತೆಗಳ ಬಗ್ಗೆ ಇನ್ನಿಲ್ಲದಂತೆ ಝಾಡಿಸುತ್ತಿದ್ದಾಗ ಅಲ್ಲಿದ್ದ ಪತ್ರಿಕೆಯ ಪ್ರಮುಖರಿಗೂ ಉತ್ತರಿಸಲಾಗದ ಅಸಹಾಯಕ ಸ್ಥಿತಿ. ಇಡೀ ಸಭೆಯಲ್ಲಿ ಕಾವೇರಿದ ವಾತಾವರಣ. ಆಗ ಶಂಕ್ರಣ್ಣ ಕೈಯಲ್ಲಿ ಮಜ್ಜಿಗೆ ತುಂಬಿದ ಬಕೆಟ್, ಲೋಟ ಹಿಡಿದು ಏನೂ ಆಗಿಯೇ ಇಲ್ಲ ಎಂಬಂತೆ ಎಲ್ಲರ ಬಳಿ ಸಾರಿ “ಸ್ವಲ್ಪ ಮಜ್ಜಿಗೆ ಕುಡಿಯಿರಿ. ತಂಪಾಗುತ್ತದೆ” ಎಂದು ಮಜ್ಜಿಗೆ ವಿತರಿಸತೊಡಗಿದಾಗ ಉಸಿರುಗಟ್ಟಿಸುವ ಆ ಸಭೆಯಲ್ಲಿ ಆಹ್ಲಾದಕರ ತಂಗಾಳಿ ಬೀಸಿದಂತಾಯ್ತು. ಎಲ್ಲರೂ ಅದುವರೆಗಿನ ಆಕ್ರೋಶದ ಮಾತು ಮರೆತು ಖುಷಿಯಿಂದ ಮಜ್ಜಿಗೆ ಹೀರತೊಡಗಿದರು. ಅಲ್ಲಿದ್ದ ಪ್ರಮುಖರಿಗೂ ನಗು ತಡೆಯಲಾಗಲಿಲ್ಲ. ಶಂಕ್ರಣ್ಣನ ಈ ಪ್ರಸಂಗಾವಧಾನತೆ, ಸಂಘಟನಾ ಚಾತುರ್ಯವನ್ನು ಮರೆಯಲು ಸಾಧ್ಯವೇ?

ಇನ್ನೊಂದು ಪ್ರಸಂಗ. ಹೊಸದಿಗಂತ ದೀಪಾವಳಿ ವಿಶೇಷ ಸಂಚಿಕೆ ಪುಸ್ತಕದ ಹಿಂಬದಿ ಪುಟದಲ್ಲಿ ಕಾಂಗ್ರೆಸ್ ಪಕ್ಷದ ಜಾಹೀರಾತೊಂದು ಪ್ರಕಟವಾಗಿತ್ತು. ಅದು ದೊಡ್ಡ ಮೊತ್ತದ ಜಾಹೀರಾತು. ಅಷ್ಟು ದೊಡ್ಡ ಮೊತ್ತದ ಜಾಹೀರಾತು ಬೇರೆಲ್ಲೂ ಸಿಗದಿದ್ದಾಗ, ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಹಿರಿಯ ರಾಜಕಾರಿಣಿ ಜನಾರ್ದನ ಪೂಜಾರಿಯವರನ್ನು ವಿನಂತಿಸಿಕೊಂಡಾಗ ಮರುಮಾತಿಲ್ಲದೆ ಆ ಜಾಹೀರಾತು ಮಂಜೂರು ಮಾಡಿದ್ದರು. “ನಿಮಗೇನೂ ಇದರಿಂದ ತೊಂದರೆ ಆಗುವುದಿಲ್ಲವೇ?”ಎಂದು ಪೂಜಾರಿಯವರು ಕನಿಕರದಿಂದ ನನ್ನನ್ನು ವಿಚಾರಿಸಿದ್ದರು. ಭಂಡ ಧೈರ್ಯದಿಂದ ‘ಹಾಗೇನೂ ಆಗದು’ ಎಂದಿದ್ದೆ. ಆದರೆ ವಿಶೇಷ ಸಂಚಿಕೆ ಓದುಗರ ಕೈ ಸೇರಿದೊಡನೆಯೇ ಕೆಲವು ಕಟ್ಟರ್ ಅಭಿಮಾನಿಗಳಿಂದ ಸಂಪಾದಕನಾಗಿದ್ದ ನನಗೆ ಆಕ್ರೋಶದ ‘ಸಹಸ್ರ ಅರ್ಚನೆ!’ “ನಿಮಗೇನು ಬೇರೆ ಗತಿ ಇರಲಿಲ್ಲವೇ? ಕಾಂಗ್ರೆಸ್ ಜಾಹೀರಾತು ಪ್ರಕಟಿಸುವ ಬದಲು ಭಿಕ್ಷೆ ಬೇಡಿ ಹಣ ಸಂಗ್ರಹಿಸಬಹುದಿತ್ತಲ್ಲ…” ಇತ್ಯಾದಿ ನಿಂದನೆಯ ಕೂರಂಬುಗಳು ತೂರಿ ಬಂದವು. ಶಂಕ್ರಣ್ಣನ ಕಿವಿಗೆ ಈ ವಿಚಾರ ತಲಪಿತು. “ಹೊಸದಿಗಂತ ಎಂದರೆ ಒಂದು ಜ್ಞಾನದೇಗುಲ ಇದ್ದಂತೆ. ಅದಕ್ಕೆ ಕಾಣಿಕೆ ರೂಪದಲ್ಲಿ ಯಾರು ಹಣ ಕೊಟ್ಟರೂ ತಪ್ಪಿಲ್ಲ. ದೇಗುಲಕ್ಕೆ ಯಾವ ಭಕ್ತರ ಹಣವಾದರೇನು?” – ಶಂಕ್ರಣ್ಣನ ಈ ತರ್ಕಬದ್ಧ, ತಾತ್ವಿಕ ವಾದಸರಣಿ ಆಲಿಸಿದ ಬಳಿಕ ಆಕ್ರೋಶಗೊಂಡ ಅಭಿಮಾನಿಗಳೆಲ್ಲ ಗಪ್ ಚುಪ್! ಕಟ್ಟರ್ ಅಭಿಮಾನಿಗಳ ಆಕ್ರೋಶಕ್ಕೆ ನಾನು ಬಲಿಪಶು ಆಗುವುದನ್ನು ಶಂಕ್ರಣ್ಣ ತಪ್ಪಿಸಿದ್ದರು! ಮನದಲ್ಲೇ ಅವರಿಗೊಂದು ನಮನ ಸಲ್ಲಿಸಿದ್ದೆ.

ಕಿದೂರಿಗೆ ಸಮೀಪದ ಕಾಡುಗುಡ್ಡದ ಮೇಲಿರುವ ಮನೆಯೊಂದರ ತರುಣನೊಬ್ಬ ಸಂಘದ ತರಬೇತಿ ಶಿಬಿರಕ್ಕೆ ಬರುವುದೆಂದು ನಿರ್ಧಾರವಾಗಿತ್ತು. ಆತ ಕೂಡ ಒಪ್ಪಿದ್ದ. ಅಷ್ಟರಲ್ಲಿ ಆತನಿಗೆ ಏನಾಯಿತೋ ಗೊತ್ತಿಲ್ಲ. ಆತನನ್ನು ಕೊನೆಯ ಬಾರಿ ಮಾತನಾಡಿಸಿ ಖಚಿತಪಡಿಸಿಕೊಳ್ಳಲೆಂದು ಶಂಕ್ರಣ್ಣನೊಂದಿಗೆ ನಾನು ಮಟಮಟ ಮಧ್ಯಾಹ್ನದ ಸುಡುಬಿಸಿಲಿನಲ್ಲಿ ಗುಡ್ಡ ಹತ್ತಿ ಆತನ ಮನೆಗೆ ಹೋಗಿ ವಿಚಾರಿಸಿದಾಗ ‘ನಾನು ಶಿಬಿರಕ್ಕೆ ಬರುವುದಿಲ್ಲ’ ಎಂದು ಆತ ಹೇಳಬೇಕೆ?ಗುಡ್ಡ ಏರಿದ ಆಯಾಸ, ಬಿಸಿಲಿನ ಧಗೆ, ನನಗೆ ಸಿಟ್ಟು ನೆತ್ತಿಗೇರತೊಡಗಿತ್ತು. ಆದರೆ ಅಷ್ಟರಲ್ಲಿ ಶಂಕ್ರಣ್ಣ ಏನೂ ಆಗೇ ಇಲ್ಲ ಎಂಬಂತೆ ತಣ್ಣಗಿನ ಧ್ವನಿಯಲ್ಲಿ “ಪರವಾಗಿಲ್ಲ. ಮುಂದಿನ ವರ್ಷದ ಶಿಬಿರಕ್ಕೆ ನೀನು ಈಗಿನಿಂದಲೇ ತಯಾರಿ, ನಿರ್ಧಾರ ಮಾಡಿಕೋ. ನಾವಿನ್ನು ಬರ್ತೇವೆ” ಎಂದು ನಗುತ್ತ ನನ್ನೊಂದಿಗೆ ವಾಪಸ್ ಬಂದರು. ಈ ಶಂಕ್ರಣ್ಣನಿಗೇಕೆ ಸಿಟ್ಟು ಬರೋದಿಲ್ಲ?ಈ ಮನುಷ್ಯನಿಗೆ ಇಷ್ಟೊಂದು ಅಪಾರ ತಾಳ್ಮೆ, ಸಂಯಮ ಬಂದಿದ್ದು ಹೇಗೆ? ಎಂದು ಅವತ್ತಿನಿಂದಲೂ ಯೋಚಿಸುತ್ತಿರುವೆ. ಇವತ್ತಿಗೂ ಅರ್ಥವಾಗಿಲ್ಲ.

ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ನಡೆಯುವ ಸಂಘ ಶಿಕ್ಷಾವರ್ಗ(ತರಬೇತಿ ಶಿಬಿರ)ದಲ್ಲಿ ಶಂಕ್ರಣ್ಣ ಸಾಮಾನ್ಯವಾಗಿ ಪಾಕಶಾಲೆಯ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಒಂದು ಬಾರಿ ಶಿಬಿರದಲ್ಲಿ ಅವರ ಕಾಲ ಮೇಲೆ ಸುಡುಸುಡು ಬಿಸಿಯ ಪಂಚಾನ್ನ (ಬೇಳೆ ಗಂಜಿ)ದ ಬಕೆಟ್ ಜಾರಿಬಿದ್ದು, ಮೊಣಕಾಲು ಪೂರ್ತಿ ಸೀದು, ಬೆಂದುಹೋಗಿ ಬೊಬ್ಬೆ ಎದ್ದಿತ್ತು. ‘ಏನಾಯ್ತು ಶಂಕ್ರಣ್ಣ?’ಎಂದು ನಾನು ಕಂಗಾಲಾಗಿ ಕೇಳಿದರೆ, ಏನಿಲ್ಲ, ಪಂಚಾನ್ನ ದ ಬಕೆಟ್ ಚೂರು ತಾಗಿದೆ ಎಂದು ಏನೂ ಆಗದವರಂತೆ ಶಾಂತವಾಗಿ ಹೇಳಿದರು. ನೋವಿನಿಂದ ಕಿರುಚಿಕೊಳ್ಳಬೇಕಾದ ಸನ್ನಿವೇಶ ಅದಾಗಿದ್ದರೂ ನಿರುದ್ವಿಗ್ನರಾಗಿದ್ದ ಅವರನ್ನು ಕಂಡು ಈ ಶಂಕ್ರಣ್ಣ ಒಬ್ಬ ಅವಧೂತನೆ ಎಂಬ ಸಂಶಯ ಉಂಟಾಗಿತ್ತು. ಕಾಲಿನ ಸುಟ್ಟ ಗಾಯ ವಾಸಿಯಾಗಲು ಹಲವು ದಿನಗಳೇ ಬೇಕಾಯ್ತು. ಶಂಕ್ರಣ್ಣ ಮಾತ್ರ ಸ್ಥಿತ ಪ್ರಜ್ಞನಂತೆ ಸಂಘಕಾರ್ಯದಲ್ಲಿ ಮಗ್ನರಾಗಿದ್ದರು.

ಶಂಕ್ರಣ್ಣ ಭಗವದ್ಗೀತೆ ಓದಿದ್ದರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಅರ್ಜುನನಿಗೆ ಶ್ರೀಕೃಷ್ಣ ಬೋಧಿಸುವ ಸ್ಥಿತಪ್ರಜ್ಞನಿಗಿರಬೇಕಾದ ಗುಣಸ್ವಭಾವಗಳೆಲ್ಲ ಅವರಲ್ಲಿದ್ದುದನ್ನು ನಾವೆಲ್ಲರೂ ಕಂಡಿದ್ದೇವೆ. ಅರ್ಜುನನಿಗೆ ಶ್ರೀಕೃಷ್ಣ ಭಗವದ್ಗೀತೆ ಬೋಧಿಸುವ ಬದಲು ಸಂಘದ ಗಣವೇಶ ಹಾಕಿಸಿ, ಶಾಖೆಗೆ ಹೋಗಲು ಹೇಳಿದ್ದರೆ ಅರ್ಜುನ ಇನ್ನೂ ಬೇಗ ಗಾಂಡೀವ ಎತ್ತಿಕೊಂಡು ಯುದ್ಧಕ್ಕೆ ಸಿದ್ಧನಾಗುತ್ತಿದ್ದನೇನೋ!

ಶಂಕ್ರಣ್ಣನನ್ನು ಯಾರು ಯಾವ ಹೊತ್ತಿನಲ್ಲಿ ಮಾತನಾಡಿಸಿದರೂ ಅವರಲ್ಲಿ ನಿರುತ್ಸಾಹ, ಉದ್ವಿಗ್ನತೆ, ಕೋಪ, ಅಹಂಕಾರ ಭಾವ, ಸ್ವಾರ್ಥ, ದ್ವೇಷಾಸೂಯೆಗಳನ್ನು ಯಾರೂ ಕಂಡವರಿಲ್ಲ. ಎರಡು ತಿಂಗಳ ಹಿಂದೆ ಅವರಿಗೆ ಹುಷಾರಿಲ್ಲವೆಂದು ತಿಳಿದಾಗ ತಡೆಯಲಾಗದೆ ಫೋನಾಯಿಸಿದ್ದೆ. ಅವರು ಎಂದಿನಂತೆ ಒಂದೆರಡು ಮಾತನಾಡಿ, ಅನಂತರ ಆಯಾಸವಾಗಿದ್ದರಿಂದ ತಮ್ಮ ಪತ್ನಿ ಕೃಷ್ಣವೇಣಿಗೆ ಫೋನ್ ವರ್ಗಾಯಿಸಿದ್ದರು. ಸೋದರಿ ಕೃಷ್ಣವೇಣಿ ಶಂಕ್ರಣ್ಣನ ತೀವ್ರ ಅನಾರೋಗ್ಯ ಹಾಗೂ ಇನ್ನಿತರ ವಿಷಯಗಳ ಕುರಿತು ತುಂಬಾ ಹೊತ್ತು ಮಾತನಾಡಿದ್ದರು. ಸದಾ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸಾಮಾಜಿಕ ಕೆಲಸಗಳಿಗಾಗಿ ಓಡಾಡುತ್ತಿದ್ದ ಶಂಕ್ರಣ್ಣ ಈಗ ಮನೆಯಲ್ಲೇ ಕುಳಿತು ಕಾಲಹರಣ ಮಾಡಬೇಕಾಯಿತಲ್ಲ, ಅವರಿಗೆಷ್ಟು ವೇದನೆ, ಯಾತನೆ ಆಗಿರಬಹುದೆಂದು ಮನದಲ್ಲೇ ಹಳಹಳಿಸಿದ್ದೆ.

ಇನ್ನು ಶಂಕ್ರಣ್ಣ ಕೇವಲ ನೆನಪು. ಆ ದಿವ್ಯ ನೆನಪೇ ನಮಗೆಲ್ಲ ಪ್ರೇರಣಾಸ್ರೋತವಾಗಲಿ.

Leave a Reply

Your email address will not be published.

This site uses Akismet to reduce spam. Learn how your comment data is processed.