
ಲೇಖನ ಕೃಪೆ: ಹೊಸ ದಿಗಂತ ಆನ್ಲೈನ್
ಸಂಸ್ಕೃತದಲ್ಲಿ ಪ್ರಕಟವಾಗುತ್ತಿದ್ದ ಏಕೈಕ ದೈನಿಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸುಧರ್ಮ ದಿನಪತ್ರಿಕೆಯ ಸಂಪಾದಕರಾದ ಕೆ ವಿ ಸಂಪತ್ ಕುಮಾರ್ (64) ಮೈಸೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂಸ್ಕೃತಾಭಿಮಾನಿಗಳು ಕಂಬನಿ ಮಿಡಿದು, ಸುಧರ್ಮದಂಥ ಅನನ್ಯ ಸಾಧನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

2020ರಲ್ಲಷ್ಟೇ ಮೋದಿ ಸರ್ಕಾರ ಸಂಪತ್ ಕುಮಾರ್ ಮತ್ತು ಅವರ ಪತ್ನಿ ಜಯಲಕ್ಷ್ಮೀ ಅವರಿಗೆ ಪದ್ಮ ಪುರಸ್ಕಾರವನ್ನು ನೀಡುವ ಮೂಲಕ ಕಳೆದ ಮೂರು ದಶಕಗಳಿಂದ ಈ ದಂಪತಿ ನಡೆಸಿಕೊಂಡು ಬರುತ್ತಿದ್ದ ತಪಸ್ಸಿನಂಥ ಕಾರ್ಯವನ್ನು ಗುರುತಿಸಿತ್ತು, ಜನಸಾಮಾನ್ಯರು ಇವರ ಪ್ರಯತ್ನದ ಬಗ್ಗೆ ಅರಿವು-ಆಸಕ್ತಿ ಮೂಡಿಸಿಕೊಳ್ಳುವುದಕ್ಕೆ ಇಂಬು ಕೊಟ್ಟಿತ್ತು.
ಸಂಪತ್ ಕುಮಾರ್ ಮತ್ತವರ ಪತ್ನಿ ಸುಧರ್ಮವನ್ನು ನಡೆಸಿಕೊಂಡು ಬರುತ್ತಿರುವುದೇ ಒಂದು ಸಾಹಸ ಹಾಗೂ ಶ್ರದ್ಧೆಯ ಕತೆ ಎಂದರೆ ತಪ್ಪಾಗಲಾರದು. ಸುಮಾರು ನಾಲ್ಕು ಸಾವಿರ ಚಂದಾದಾರರ ಕೊಡುಗೆಯಿಂದಲೇ ಮುಂದುವರಿಯಬೇಕಾದ ಪತ್ರಿಕೆಗೆ ಜಾಹೀರಾತಿನ ವಿಶೇಷ ಬೆಂಬಲವೇನಿಲ್ಲ. ಸುಧರ್ಮ ತನ್ನ ಅಂತರ್ಜಾಲ ಅವತರಣಿಕೆಯಲ್ಲಿ ಸುಮಾರು ಒಂದೂವರೆ ಲಕ್ಷ ಓದುಗರನ್ನು ಹೊಂದಿದೆ ಎಂಬುದೊಂದು ಅಂದಾಜು.

1970ರಲ್ಲಿ ವರದರಾಜ ಅಯ್ಯಂಗಾರ್ ಅವರು ಪ್ರಾರಂಭಿಸಿದ್ದ ಪತ್ರಿಕೆ ಸುಧರ್ಮ. ಸಂಸ್ಕೃತ ಎಂದರೆ ಕೇವಲ ವಿದ್ವಾಂಸರಿಗೆ ಎಂಬ ಗ್ರಹಿಕೆಯನ್ನು ಬದಲಾಯಿಸುವುದಕ್ಕೆ, ದೈನಂದಿನ ಆಗುಹೋಗುಗಳೂ ಸಂಸ್ಕೃತದಲ್ಲಿ ವರದಿಯಾಗಿ ಅವನ್ನು ಜನ ಓದುವಂತಾಗಲಿ ಎಂಬ ಉದಾತ್ತ ಧ್ಯೇಯದಿಂದ ಪ್ರಾರಂಭಿಸಿದ್ದ ಪತ್ರಿಕೆ ಅದು.
1990ರಲ್ಲಿ ವರದರಾಜ ಅಯ್ಯಂಗಾರ್ ಅವರ ಮರಣಾನಂತರ ಸಂಪತ್ ಕುಮಾರ್ ದಂಪತಿ ಅದನ್ನು ಮುಂದುವರಿಸಿಕೊಂಡು ಬಂದರು. ನಾಲ್ಕು ಪುಟಗಳ ಪತ್ರಿಕೆಯಲ್ಲಿ ದಿನದ ಮುಖ್ಯ ವಿದ್ಯಮಾನ, ಶೈಕ್ಷಣಿಕ ಕೋರ್ಸುಗಳ ಕುರಿತ ಮಾಹಿತಿ, ಕ್ರೀಡೆ ಇತ್ಯಾದಿ ಸಂಗತಿಗಳ ಕುರಿತ ಬರಹಗಳೂ ಪ್ರಕಟವಾಗುತ್ತವೆ.
ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲೂ ಸುಧರ್ಮ ಕುರಿತು ಉಲ್ಲೇಖ ಮತ್ತು ಪ್ರಶಂಸೆಗಳು ವ್ಯಕ್ತವಾಗಿತ್ತು.
ಭಾರತದ ಹಲವು ಬಗೆಯ ಪರಂಪರೆ ಮತ್ತು ಜ್ಞಾನಗಳಿಗೆ ಕೀಲಿಕೈಯಂತಿರುವ ಸಂಸ್ಕೃತ ಭಾಷೆಯಲ್ಲಿ ನಿರಂತರ ದಿನಪತ್ರಿಕೆ ಪ್ರಕಟಣೆ ಮಾಡಿಕೊಂಡು ಬಹುದೊಡ್ಡ ಸಂಸ್ಕೃತಿ ಸೇವೆಯಲ್ಲಿ ತೊಡಗಿಸಿಕೊಂಡಿದ್ಧ ಕೆವಿ ಸಂಪತ್ ಕುಮಾರ್ ಅವರ ಅಗಲಿಕೆ ಸೃಷ್ಟಿಸಿರುವ ನಿರ್ವಾತ ಸುಲಭಕ್ಕೆ ತುಂಬಲಾಗದ್ದು.
