
ಡಿ ಆರ್ ಡಿ ಒ ಮಾಜಿ ವಿಜ್ಞಾನಿ ವಿಜ್ಞಾನ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ಅವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ಹಿಂದಿನ ವಾರವಷ್ಟೇ ಹೃದಯಾಘಾತದಿಂದಾಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಸುಧೀಂದ್ರ ಹಾಲ್ದೊಡ್ಡೇರಿ ಅವರು ವಿಜಯ ಕರ್ನಾಟಕ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ ಸೇರಿದಂತೆ ಅನೇಕ ಕನ್ನಡ ಪತ್ರಿಕೆಗಳಿಗೆ ವಿಜ್ಞಾನ ಅಂಕಣಗಳನ್ನು, ಲೇಖನಗಳನ್ನು ಬರೆಯುತ್ತಿದ್ದರು.

ಸುಧೀಂದ್ರ ಹಾಲ್ದೊಡೇರಿ ಅವರ ನಿಧನ ಅತೀವ ದುಖಃ ತಂದಿದೆ. ವಿಜ್ಞಾನಿಯಾಗಿ, ವಿಜ್ಞಾನ ವಿಷಯಗಳ ಅಂಕಣಕಾರರಾಗಿ ಉಪನ್ಯಾಸಕಾರರಾಗಿ ನಾಡಿಗೆ ಅನುಪಮ ಸೇವೆಯನ್ನು ಸಲ್ಲಿಸದ್ದರು. ಸರಳ ಭಾಷೆಯಲ್ಲಿ ವಿಜ್ಞಾನದ ಅಂಶಗಳನ್ನು ಎಂಥವರೂ ಅರ್ಥಮಾಡಿಕೊಳ್ಳಬಹುದಾಗಿ ವಿವರಿಸುತ್ತಿದ್ದ ಸುಧೀಂದ್ರ ಅವರ ನಿಧನದಿಂದ ವಿಜ್ಞಾನ ಬರವಣಿಗೆಯಲ್ಲಿ ನಿರ್ವಾತ ಮೂಡಲಿರುವುದು ನಿಸ್ಸಂಶಯ. ಅವರು ಸಂಘದ ಹಿತೈಷಿಗಳಾಗಿದ್ದರು. ಸಂಘದ ಕಾರ್ಯಕ್ರಮಗಳಲ್ಲಿಯೂ ಅವರು ಭಾಗವಹಿಸಿದ್ದವರು. ಅವರ ಆತ್ಮಕ್ಕೆ ಸದ್ಗತಿಯನ್ನು ಮತ್ತು ಕುಟುಂಬಕ್ಕೆ ದುಖಃವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಪರಮಾತ್ಮನನ್ನು ಪ್ರಾರ್ಥಿಸುತ್ತೇನೆ ಎಂದು ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕರಾದ ವಿ ನಾಗರಾಜ್ ಸುಧೀಂದ್ರ ಹಾಲ್ದೊಡ್ಡೇರಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

