
ಕನ್ನಡ ಸಾಹಿತ್ಯಗಳ ವಿಡಿಯೋ ಪರಿಚಯ ಮಾಡುತ್ತಿರುವ ‘ಸುಕೃತಿ’
ಕನ್ನಡ ಕೃತಿಗಳ ತಿಳಿಯೋಣ – ಕನ್ನಡ ಕಂಪನು ಸವಿಯೋಣ
ಲಕ್ಷಾಂತರ ಪುಸ್ತಕಗಳಿವೆ , ನೂರಾರು ಪುಸ್ತಕಗಳು ಹೊಸದಾಗಿ ಪ್ರಕಾಶವಾಗುತ್ತ ಇರುತ್ತದೆ. ಪುಸ್ತಕ ಓದಬೇಕು ಎಂಬ ಹಂಬಲವಿದೆ ಆದರೆ ಇಷ್ಟೊಂದು ಪುಸ್ತಕ ರಾಶಿಯಲ್ಲಿ ಉತ್ತಮ ಪುಸ್ತಕ (ಸುಕೃತಿ ) ಯಾವುದು ಎಂಬುದೇ ಅನೇಕರ ಪ್ರಶ್ನೆ. ಎಲ್ಲಾ ಪುಸ್ತಕವನ್ನು ಒಮ್ಮೆ ತಿರುವು ಹಾಕಿ ನಿರ್ಣಯ ಮಾಡಲು ಸಮಯವೂ ಇಲ್ಲ ಅಸಾಧ್ಯವೇ ಸರಿ. ಈ ಸಮಸ್ಯೆಗೆ ಉತ್ತರ ರೂಪದಲ್ಲಿ ‘ಸುಕೃತಿ’ ಪ್ರಯತ್ನ ಮಾಡುತ್ತಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ‘ಸುಕೃತಿ’ಯು ವಿಶಿಷ್ಟವಾದ ರೀತಿಯಲ್ಲಿ ಸಾಹಿತ್ಯ ಪ್ರಸಾರವನ್ನು ಮಾಡುತ್ತಾ ಬಂದಿದೆ. ‘ಸುಕೃತಿ’ಯು ಪುಸ್ತಕ ಪರಿಚಯ ವಿಡಿಯೋಗಳ ಮೂಲಕ ಈಗಾಗಲೇ ಸಾವಿರಾರು ಜನರನ್ನು ಸಾಮಾಜಿಕ ಜಾಲತಣದಲ್ಲಿ ತಲುಪಿದೆ. ಒಂದು ಪುಸ್ತಕದ ಪರಿಚಯವನ್ನು ಕಡಿಮೆ ಸಮಯದಲ್ಲಿ ಸರಳವಾಗಿ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ( ಫೇಸ್ಬುಕ್ / ಯೂಟ್ಯೂಬ್ ) ಎಲ್ಲರಿಗೂ ಸಿಗುವಂತೆ ಮಾಡಿದ್ದಾರೆ ‘ಸುಕೃತಿ’ ತಂಡ.
‘ಸುಕೃತಿ’ಯು ಕನ್ನಡ ರಾಜ್ಯೋತ್ಸವ ನಿಮಿತ್ತ ನವೆಂಬರ್ ತಿಂಗಳಲ್ಲಿ ಪ್ರತಿನಿತ್ಯ ಕೆಲವು ಪುಸ್ತಕದ ಪರಿಚಯ ವಿಡಿಯೋಗಳನ್ನು ಹಾಕುತ್ತ ‘ಕನ್ನಡ ಸಾಹಿತ್ಯದ ತೇರ’ನ್ನು ಎಳೆಯುತ್ತಿದೆ.
ಕುಮಾರ ವ್ಯಾಸ, ಡಿ,ವಿ.ಜಿ, ಬೇಂದ್ರೆ, ಕುವೆಂಪು, ಕಾರಾಂತರ ಕೃತಿಗಳಿಂದ ಪ್ರಾರಂಭಿಸಿ ಈಗಿನ ಕೆ.ಎಸ್. ನಾರಾಯಣಾಚಾರ್ಯ , ಎಚೆಸ್ವಿ, ಶತಾವಧಾನಿ ಗಣೇಶ್ , ಎ.ಆರ್.ಮಣಿಕಾಂತ್ ರವೆರೆಗೆ ಹಲವಾರು ಕವಿ-ಲೇಖಕರ ಒಂದೆರಡು ಸಾಹಿತ್ಯವನ್ನು ಆರಿಸಿಕೊಂಡಿದ್ದಾರೆ. ಕನ್ನಡ ನಾಡಿನಲ್ಲಿ ಸುಪರಿಚಿತರಾದ ಮಾಳವಿಕಾ ಅವಿನಾಶ್, ಡಾ. ಶತಾವಧಾನಿ ಆರ್. ಗಣೇಶ್, ಡಾ.ಬಿ.ವಿ.ವಸಂತ ಕುಮಾರ್ (ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ) ಮುಂತಾದವರಿಂದ ಮೊದಲ್ಗೊಂಡು ಉದಯೋನ್ಮುಖ ಸಾಹಿತ್ಯ ಪ್ರೇಮಿಗಳೂ ಪುಸ್ತಕ ಪರಿಚಯ ಮಾಡಿಕೊಟ್ಟಿದ್ದಾರೆ.
ಕಳೆದ 17 ದಿನಗಳಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಪುಸ್ತಕಗಳ ಪರಿಚಯವನ್ನು ವಿಡಿಯೋ ಮೂಲಕ ಮಾಡಲಾಗಿದೆ. ಅದೇ ರೀತಿ ನವೆಂಬರ್ 30 ರವರೆಗೆ , ಪ್ರತಿನಿತ್ಯ ಕನ್ನಡದ ಅತ್ಯುತ್ತಮ ಪುಸ್ತಕಗಳ ಪರಿಚಯವನ್ನು ಮಾಡಿಕೊಳ್ಳಲು ನೀವೂ ‘ಸುಕೃತಿ’ ಫೇಸ್ಬುಕ್ ಪೇಜ್ ಅಥವಾ ಯೂಟ್ಯೂಬ್ ಚ್ಯಾನಲ್ ಭೇಟಿಕೊಡಬಹುದಾಗಿದೆ.
https://www.facebook.com/Sukruthi-Pustaka-Parichaya-100200858329401/
https://www.youtube.com/channel/UCnGmEgIenhA8R8vBK43jqKA
ಕನ್ನಡ ಕೃತಿಗಳ ತಿಳಿಯೋಣ – ಕನ್ನಡ ಕಂಪನು ಸವಿಯೋಣ.
