ಕೊರೋನಾ ವಿರುದ್ಧ ಹೋರಾಡಲು ಬೇಕಾದ ವ್ಯಾಕ್ಸಿನ್ನನ್ನು ಕೇವಲ ಎರಡು ಕಂಪೆನಿಗಳು ಮಾತ್ರ ಉತ್ಪಾದಿಸುತ್ತಿವೆ. ಹಾಗಾಗಿ ಇಡೀ ದೇಶದಲ್ಲಿ ಎಲ್ಲರಿಗೂ ವ್ಯಾಕ್ಸಿನೇಷನ್ ಅಸಾಧ್ಯವಾಗುತ್ತದೆ. ಆದ್ದರಿಂದ ಪೇಟೆಂಟ್ ಮುಕ್ತ ವ್ಯಾಕ್ಸಿನ್ ಮತ್ತು ಔಷಧಿಗಳ, ಅದರ ತಾಂತ್ರಿಕ ವರ್ಗಾವಣೆಯ ತುರ್ತು ಅಗತ್ಯದ ಕುರಿತು ಸ್ವದೇಶಿ ಜಾಗರಣ ಮಂಚ್ ವತಿಯಿಂದ ದೇಶಾದ್ಯಂತ ಆನ್ ಲೈನ್ ಪಿಟಿಷನ್ ಅಭಿಯಾನ ನಡೆಸುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಆನ್ ಲೈನ್ ಪತ್ರಿಕಾಗೋಷ್ಠಿಯಲ್ಲಿ, ಖ್ಯಾತ ಅರ್ಥಶಾಸ್ತ್ರಜ್ಞರೂ, ವಿಷಯ ತಜ್ಞರು ಮತ್ತು ಸ್ವದೇಶಿ ಜಾಗರಣ ಮಂಚ್ ನ ರಾಷ್ಟ್ರೀಯ ನಾಯಕರಾದ ಪ್ರೊಫೆಸರ್. ಬಿ. ಎಂ. ಕುಮಾರಸ್ವಾಮಿಯವರು ಹೆಚ್ಚಿನ ವಿವರಗಳನ್ನು ಇಂದು ಹಂಚಿಕೊಂಡರು. ಸ್ವದೇಶೀ ಜಾಗರಣ ಮಂಚ್ ನ ಪತ್ರಿಕಾ ಪ್ರಕಟಣೆ ಹೀಗಿದೆ :
ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕಿನ ವಿರುದ್ಧ ಸಮರ್ಥವಾಗಿ ಹೋರಾಡಲು ಲಸಿಕೆಗಳು, ಔಷಧಗಳನ್ನು ಪೇಟೆಂಟ್ ಮುಕ್ತಗೊಳಿಸಿ, ಉತ್ಪಾದನೆ ಹೆಚ್ಚಿಸುವ ಅಗತ್ಯವಿದೆ.
ವಿಶ್ವದ ಜನಸಂಖ್ಯೆಯ ಬಹುಪಾಲು ಜನರು ಇಂದು ಕೊರೋನಾದ ಸೋಂಕಿನ ಭಯದಿಂದ ಬಳಲುತ್ತಿದ್ದಾರೆ. ಪೇಟೆಂಟ್ ಹೊಂದಿರುವುದರಿಂದ ದೊಡ್ಡ ಕಂಪನಿಗಳು ಈ ಸೋಂಕಿನ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗಾಗಿ ಇರುವ ಔಷಧಿಗಳು ಮತ್ತು ಲಸಿಕೆಗಳ ಮೇಲೆ ಏಕಸ್ವಾಮ್ಯದ ಹಕ್ಕುಗಳನ್ನು ಹೊಂದಿವೆ. ಹೀಗಾಗಿ, ಈ ಔಷಧ ಲಸಿಕೆಗಳನ್ನು ಹೆಚ್ಚು ಉತ್ಪಾದಿಸಲು, ಎಲ್ಲರೂ ಪಡೆಯಲು ಅಸಾಧ್ಯ. ಮಾನವರ ಜೀವಿಸುವ ಹಕ್ಕು ಸಾರ್ವತ್ರಿಕ ಮೂಲಭೂತ ಹಕ್ಕು. ಕೆಲವು ಕಂಪನಿಗಳಿಗೆ ಪೇಟೆಂಟುಗಳಿಂದ ಅಪರಿಮಿತ ಲಾಭ ಗಳಿಸಲು ಅನಿಯಮಿತ ಹಕ್ಕುಗಳನ್ನು ನೀಡುವ ಮೂಲಕ, ಕೋಟ್ಯಂತರ ಜನರ ಜೀವಿಸುವ ಹಕ್ಕನ್ನು ರಾಜಿ-ಹೊಂದಾಣಿಕೆ ಮಾಡಲಾಗುತ್ತಿದೆ, ಹೀಗೆ ಮಾಡಲು ನಾವೆಲ್ಲ ಒಪ್ಪಬಹುದೆ?
ಈ ಲಸಿಕೆಗಳು ಮತ್ತು ಔಷಧಿಗಳನ್ನು ಅಗ್ಗವಾಗಿಸಿ, ಹಾಗೂ ಎಲ್ಲರಿಗೂ ಸಿಕ್ಕುವಂತೆ ಮಾಡಲು, ಈ ಲಸಿಕೆಗಳು ಮತ್ತು ಔಷಧಿಗಳನ್ನು ಪೇಟೆಂಟ್ ಮುಕ್ತವಾಗಿಸಿ, ತಯಾರಿಕಾ ತಂತ್ರಜ್ಞಾನವನ್ನು ವರ್ಗಾಯಿಸಲು ಭಾರತದ ಜನರು ತೀವ್ರವಾದ ಅಭಿಯಾನವನ್ನು ಪ್ರಾರಂಭಿಸುತ್ತಿದ್ದಾರೆ. ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದ ಹಲವಾರು ಔಷಧಿಗಳನ್ನು ಸ್ಥಳೀಯವಾಗಿ ಉತ್ಪಾದಿಸಲಾಗುತ್ತಿದ್ದರೂ, ಸಮಸ್ಯೆಯ ತೀವ್ರತೆಯಿಂದಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಲಭ್ಯವಿರುವ ಪ್ರಮಾಣವು ಸಾಕಾಗುತ್ತಿಲ್ಲ.
ಇಸ್ರೇಲ್, ಅಮೆರಿಕ, ಯುನೈಟೆಡ್ ಕಿಂಗ್ಡಮ್ ಮುಂತಾದ ಆರು ದೇಶಗಳಲ್ಲಿ ವಯಸ್ಕ ಜನಸಂಖ್ಯೆಗೆ ಸಂಪೂರ್ಣವಾಗಿ ಲಸಿಕೆ ಹಾಕಿದ್ದರಿಂದ ಅಲ್ಲೆಲ್ಲ ಕೊರೋನಾ ಬಿಕ್ಕಟ್ಟು ಬಹುತೇಕ ಮುಗಿದಿದೆ. ಆದ್ದರಿಂದ, ಭಾರತವೂ ಸೇರಿದಂತೆ ವಿಶ್ವದ ಎಲ್ಲ ದೇಶಗಳ ಇಡೀ ವಯಸ್ಕ ಜನಸಂಖ್ಯೆಗೆ ತಕ್ಷಣ ಲಸಿಕೆ ಹಾಕುವುದು ಅಗತ್ಯ. ಇದಕ್ಕಾಗಿ, ಸ್ವದೇಶಿ ಜಾಗರಣ ಮಂಚ್ ಸಾಮೂಹಿಕ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದ್ದು, ಕೋವಿಡ್ ಲಸಿಕೆಗಳು ಮತ್ತು ಔಷಧಿಗಳನ್ನು ಪೇಟೆಂಟ್ ಮುಕ್ತವಾಗಿಸಲು ಮತ್ತು ಅವುಗಳ ತಂತ್ರಜ್ಞಾನವು ಅವನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಎಲ್ಲಾ ಉದ್ಯಮಿಗಳಿಗೆ ಸಿಕ್ಕುವಂತೆ ಮಾಡಲು ಕೋರಿದೆ. ಈ ಅಭಿಯಾನವನ್ನು, "ಲಸಿಕೆಗಳು ಮತ್ತು ಔಷಧಿಗಳ ಸಾರ್ವತ್ರಿಕ ಲಭ್ಯತೆ" (ಯುಎವಿಎಂ) ಎಂಬ ಹೆಸರಿನಲ್ಲಿ ಅಂದರೆ, ದೇಶದೆಲ್ಲೆಡೆ ಮತ್ತು ವಿಶ್ವದಾದ್ಯಂತ ಲಸಿಕೆಗಳು ಮತ್ತು ಔಷಧಿಗಳ ಸಂಪೂರ್ಣ ಲಭ್ಯತೆಯನ್ನು ಪಡೆಯಲು ಪ್ರಾರಂಭಿಸಲಾಗಿದೆ.
ಈ ಪ್ರಯತ್ನದ ಅಡಿಯಲ್ಲಿ, ವೆಬಿನಾರ್ಗಳು, ಸೆಮಿನಾರ್ಗಳು, ಪ್ರದರ್ಶನಗಳು ಇತ್ಯಾದಿಗಳನ್ನು ಆಯೋಜಿಸಲಾಗುತ್ತಿದೆ ಮತ್ತು ಆನ್ಲೈನ್ ಸಹಿ ಅಭಿಯಾನ ಸೇರಿದಂತೆ ಜನಸಮುದಾಯದ ಸಂಪರ್ಕವು ನಡೆಯುತ್ತಿದೆ.
ಭಾರತದಲ್ಲಿನ ಕನಿಷ್ಠ 70% ಜನಸಂಖ್ಯೆಗೆ ಲಸಿಕೆ ನೀಡಲು ಸುಮಾರು 200 ಕೋಟಿ ಡೋಸ್ ಬೇಕಾಗುತ್ತವೆ. ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಯ ತುರ್ತು ಅವಶ್ಯಕತೆಯಿದೆ, ಇದಕ್ಕಾಗಿ ಅಂತಾರಾಷ್ಟ್ರೀಯ ತಂತ್ರಜ್ಞಾನದ ಅಗತ್ಯವಿದೆ. ತಂತ್ರಜ್ಞಾನದ ವರ್ಗಾವಣೆಯನ್ನು ಸುಲಭಗೊಳಿಸಲು ಪೇಟೆಂಟ್, ವ್ಯಾಪಾರೀ ರಹಸ್ಯಗಳು ಸೇರಿದಂತೆ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಅಡೆತಡೆಗಳನ್ನು ನಿವಾರಿಸಲು ಸೂಕ್ತ ಕ್ರಮಗಳು ಬೇಕಾಗಿವೆ.
'ಲಸಿಕೆ ಮತ್ತು ಔಷಧಿಗಳ ಸಾರ್ವತ್ರಿಕ ಲಭ್ಯತೆ (ಯುಎವಿಎಂ) ಅಭಿಯಾನದ ಪರವಾಗಿ ವಿವಿಧ ಸಾಮಾಜಿಕ, ಸಾಂಸ್ಕøತಿಕ ಮತ್ತು ಇತರ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು, ಪ್ರಬುದ್ಧ ಜನರು, ಶಿಕ್ಷಣ ತಜ್ಞರು, ಭಾರತ ಮತ್ತು ವಿದೇಶಗಳ ನ್ಯಾಯಾಧೀಶರಿಂದ ಸಹಕಾರವನ್ನು ಕೋರಲಾಗುತ್ತಿದೆ. ಈ ನಿಟ್ಟಿನಲ್ಲಿ 28 ಮೇ 2021 ರಂದು ಕೆಲವು ವಿಶ್ವವಿದ್ಯಾಲಯಗಳು ಮತ್ತು ಭಾರತೀಯ ವಿಶ್ವವಿದ್ಯಾಲಯಗಳ ಸಂಘವು ಒಂದು ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿತ್ತು.
`ಕಳೆದ ವರ್ಷ ಅಕ್ಟೋಬರ್ನಲ್ಲಿಯೇ ಭಾರತ ಸರ್ಕಾರ ಮತ್ತು ದಕ್ಷಿಣ ಆಫ್ರಿಕಾಗಳು ವಿಶ್ವ ವ್ಯಾಪಾರ ಸಂಸ್ಥೆಯ ಮುಂದೆ ಕೊರೋನಾ ಲಸಿಕೆಗಳು ಮತ್ತು ಔಷಧಿಗಳನ್ನು ಪೇಟೆಂಟ್ ರಹಿತಗೊಳಿಸಿ, ಅವುಗಳ ಉತ್ಪಾದನೆಯನ್ನು ಸುಗಮಗೊಳಿಸುವ, ಟಿ.ಆರ್.ಐ.ಪಿ.ಎಸ್ ಒಪ್ಪಂದದಿಂದ ಮನ್ನಾ ಕೋರಿದ ಪ್ರಸ್ತಾಪವನ್ನು ಕೈಬಿಟ್ಟಿದ್ದು, ಇದನ್ನು 120 ದೇಶಗಳು ಈವರೆಗೆ ಬೆಂಬಲಿಸಿವೆ. ಮಾನವೀಯತೆಯ ಹಿತದೃಷ್ಟಿಯಿಂದ, ಈ ಪ್ರಸ್ತಾಪವನ್ನು ವಿರೋಧಿಸುವ ದೇಶಗಳು / ಕಂಪನಿಗಳು / ವ್ಯಕ್ತಿಗಳ ಗುಂಪುಗಳನ್ನು ಹಾಗೆ ವಿರೋಧಿಸುವುದನ್ನು ಯಾವುದೇ ವಿಳಂಬವಿಲ್ಲದೆ ನಿಲ್ಲಿಸಬೇಕೆಂದು ನಾವು ಬಲವಾಗಿ ಒತ್ತಾಯಿಸುತ್ತೇವೆ.
ವಿಶ್ವದ ಎಲ್ಲಾ ಸರ್ಕಾರಗಳು ಮತ್ತು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಓ) ಯನ್ನು ಯುಎವಿಎಂ ಬಲವಾಗಿ ಒತ್ತಾಯಿಸುತ್ತದೆ:
- ಔಷದಿ ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಎಲ್ಲಾ ಸಂಭಾವ್ಯ ತಯಾರಕರಿಗೆ ತಂತ್ರಜ್ಞಾನ ವರ್ಗಾವಣೆ, ಕಚ್ಚಾ ವಸ್ತುಗಳ ಲಭ್ಯತೆ, ವ್ಯಾಪಾರ ರಹಸ್ಯಗಳು ಸೇರಿದಂತೆ ಎಲ್ಲವೂ ಒದಗುವುದÀನ್ನು ಖಾತ್ರಿಪಡಿಸಬೇಕು.
- ರೆಮ್ಡೆಸಿವಿರ್, ಫವಿರಾಸೈರ್, ಟೊಸಿಲುಜುಮಾಬ್ ಮತ್ತು ಮೊಲ್ನುಪಿರಾವಿರ್ ನಂತಹ ಹೊಸ ಔಷಧಿಗಳ ಹೇರಳ ಉತ್ಪಾದನೆಯನ್ನು ಖಚಿತಪಡಿಸಬೇಕು.
- ಜಾಗತಿಕ ಮಟ್ಟದಲ್ಲಿ ಲಸಿಕೆಗಳು ಮತ್ತು ಔಷಧಿಗಳ ಸಮರ್ಪಕ ಉತ್ಪಾದನೆಗೆ ಅವಕಾಶ ಒದಗಿಸಿ, ಬೆಲೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ.
- ಟ್ರಿಪ್ಸ್ (ಟಿ.ಆರ್.ಐ.ಪಿ.ಎಸ್) ಮನ್ನಾ ಉದ್ದೇಶವನ್ನು ಸಾಧಿಸಲು ಡಬ್ಲ್ಯುಟಿಒ, ಜಿ -7, ಜಿ -20 ಮತ್ತು ಇತರ ಜಾಗತಿಕ ವೇದಿಕೆಗಳ ಮೂಲಕ ರಾಜತಾಂತ್ರಿಕ ಪ್ರಯತ್ನಗಳನ್ನು ವೇಗಗೊಳಿಸಿ. ಭಾರತ ಮತ್ತು ಇನ್ನೂ 20 ದೇಶಗಳಿಂದ ಡಿಜಿಟಲ್ ಸಿಗ್ನೇಚರ್ ಅಭಿಯಾನದಲ್ಲಿ ಈವರೆಗೆ ಸುಮಾರು ಆರು ಲಕ್ಷ ಜನರು ಅರ್ಜಿಗೆ ಸಹಿ ಹಾಕಿದ್ದಾರೆ.
ಮತ್ತೊಂದು ಅರ್ಜಿಯಲ್ಲಿ ಭಾರತ ಮತ್ತು ವಿದೇಶಗಳ 1600 ಉನ್ನತ ಶಿಕ್ಷಣ ತಜ್ಞರು / ಪ್ರಬುದ್ಧ ನಾಗರಿಕರು ಈ ಬೇಡಿಕೆಗೆ ಸಹಿ ಹಾಕಿದ್ದಾರೆ:
- ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಓ)ಯು ತನ್ನ ಬೌದ್ಧಿಕ ಆಸ್ತಿ ಹಕ್ಕುಗಳ ನಿಬಂಧನೆಗಳನ್ನು ಸಡಿಲಿಸಬೇಕು.
- ಜಾಗತಿಕ ಔಷಧ ತಯಾರಕರು ಮತ್ತು ಲಸಿಕೆ ತಯಾರಕ ಕಂಪನಿಗಳು ಮಾನವ ಜನಾಂಗದ ಒಳಿತಿಗಾಗಿ ತಂತ್ರಜ್ಞಾನ ವರ್ಗಾವಣೆ ಸೇರಿದಂತೆ ಪೇಟೆಂಟ್ ಮುಕ್ತ ಹಕ್ಕುಗಳನ್ನು ಸ್ವಯಂಪ್ರೇರಣೆಯಿಂದ ಇತರ ತಯಾರಕರಿಗೆ ನೀಡಬೇಕು.
- ಪೇಟೆಂಟ್ ಹೊಂದಿರುವವರನ್ನು ಹೊರತುಪಡಿಸಿ ಉಳಿದೆಲ್ಲ ಸಮರ್ಥ ಔಷಧ ತಯಾರಕರುಗಳು ಲಸಿಕೆಗಳು ಮತ್ತು ಔಷಧಿಗಳನ್ನು ಹೆಚ್ಚಾಗಿ ಉತ್ಪಾದಿಸಲು – ಅವನ್ನು ತಯಾರಿಸುವ ಹಕ್ಕು, ಅಗತ್ಯ ತಂತ್ರಜ್ಞಾನ ಮತ್ತು ಉತ್ಪಾದನಾ ಸಾಮಗ್ರಿಗಳ ಲಭ್ಯತೆಗಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಂತಹ ತಯಾರಕರಿಗೆ ಪ್ರೋತ್ಸಾಹ ನೀಡಬೇಕು.
- ಕೊರೋನಾ ವಿರುದ್ಧ ಹೋರಾಡಲು ಮತ್ತು ಲಸಿಕೆಗಳು ಮತ್ತು ಔಷಧಿಗಳ ಜಾಗತಿಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಎಲ್ಲಾ ದೇಶಭಕ್ತ ಜನರು, ಸಂಬಂಧಪಟ್ಟ ವ್ಯಕ್ತಿಗಳು ಮತ್ತು ಸಂಸ್ಥೆಗಳು ಮುಂದೆ ಬಂದು ಈ ಪ್ರಯತ್ನಗಳಿಗೆ ಸೇರಿಕೊಳ್ಳಬೇಕು.