ಭಾರತೀಯ ಧಾರ್ಮಿಕ ಸುಧಾರಣೆಯ ಇತಿಹಾಸದಲ್ಲಿ ದಯಾನಂದ ಸರಸ್ವತಿ ಅವರ ಕೊಡುಗೆ ಅವಿಸ್ಮರಣೀಯ. ಸಮಾಜ ಸುಧಾರಕರಾಗಿ, ತತ್ತ್ವಜ್ಞಾನಿ ಮತ್ತು ಸಂಸ್ಕೃತ ವಿದ್ವಾಂಸರಾಗಿ ಪ್ರಸಿದ್ಧಿ ಪಡೆದವರು. ಇಂದು ಅವರ 200ನೇ ವರ್ಷದ ಜನ್ಮದಿನ.
ಪರಿಚಯ:
ದಯಾನಂದ ಸರಸ್ವತಿ ಅವರು ಫೆಬ್ರವರಿ 12, 1824 ರಲ್ಲಿ ಗುಜರಾತಿನ ಟಂಕಾರಾ ಎಂಬಲ್ಲಿ ಜನಿಸಿದರು. ಇವರ ಮೂಲ ಹೆಸರು ಮೂಲಶಂಕರ. ತಂದೆ ಕೃಷ್ಣಜೀ ಲಾಲ್ಜಿ ಕಪಾಡಿ. ತಾಯಿ ಯಶೋದಾಬಾಯಿ. ಬಾಲ್ಯದಿಂದಲೇ ಹೆಚ್ಚು ಶಿವನ ಆರಾಧಕರಾಗಿದ್ದರು. ಉಪವಾಸ ವೃತವನ್ನು ಕೈಗೊಳ್ಳುತ್ತಿದ್ದರು. ಅವರ ಅಧ್ಯಾತ್ಮಕ ಕಡೆಗಿನ ಒಲವು ಅವರನ್ನು ತಮ್ಮ 24ನೇ ವಯಸ್ಸಿನಲ್ಲಿ ಸನ್ಯಾಸದೀಕ್ಷೆ ಪಡೆಯುವಂತೆ ಮಾಡಿತು. 1848ರಲ್ಲಿ ಪೂರ್ಣಾನಂದ ಸರಸ್ವತಿಗಳು ಮೂಲಶಂಕರನಿಗೆ ಸನ್ಯಾಸ ದೀಕ್ಷೆಯನ್ನು ಕೊಟ್ಟು ದಯಾನಂದ ಸರಸ್ವತಿ ಎಂದು ಹೆಸರಿಟ್ಟರು. ನಂತರ ದಯಾನಂದ ಸರಸ್ವತಿ ಅವರು ಮಥುರೈಗೆ ಬಂದು ವಿರಜಾನಂದ ಸರಸ್ವತಿ ಅವರ ಜೊತೆ ವೇದವೇದಾಂಗಗಳನ್ನು ಅಧ್ಯಯನ ನಡೆಸಿದರು.
ಸಮಾಜ ಸುಧಾರಕರಾಗಿ ದಯಾನಂದ ಸರಸ್ವತಿ:
ದಯಾನಂದ ಸರಸ್ವತಿ ಅವರು ಏಪ್ರಿಲ್ 7, 1875 ರಲ್ಲಿ ಮುಂಬೈಯಲ್ಲಿ ಆರ್ಯ ಸಮಾಜ ಎಂಬ ಹಿಂದೂ ಸುಧಾರಣಾ ಸಂಘಟನೆಯನ್ನು ಸ್ಥಾಪಿಸಿದರು. ಮಾನವ ಜನಾಂಗದ ಭೌತಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಸುಧಾರಣೆಗಳ ಮೂಲಕ ವ್ಯಕ್ತಿ ಮತ್ತು ಸಮಾಜವನ್ನು ಮುಂದುವರಿಸುವ ಗುರಿಯನ್ನು ಹೊಂದಿದ 10 ತತ್ವಗಳನ್ನು ರಚಿಸಿದರು.
ಇದು ಮೂಢನಂಬಿಕೆ, ಸಂಪ್ರದಾಯ ಮತ್ತು ಸಮಾಜದ ಮೇಲೆ ಬೀರುತ್ತಿದ್ದ ಸಾಮಾಜಿಕ ದುಷ್ಪರಿಣಾಮಗಳನ್ನು ತೆಗೆದುಹಾಕುವುದಕ್ಕೆ ಶ್ರಮಿಸುತ್ತಿತ್ತು. ಪ್ರಾಚೀನ ವೇದಗಳ ಬೋಧನೆಗಳನ್ನು ಪುನರ್ ಸ್ಥಾಪಿಸುವುದು ಅವರ ಗುರಿಯಾಗಿತ್ತೇ ವಿನಃ ಪ್ರತ್ಯೇಕ ಪಂಥದ ರಚನೆಯಲ್ಲ. ಸತ್ಯಾರ್ಥ ಪ್ರಕಾಶನಲ್ಲಿ ಹೇಳಿದಂತೆ, ಸರ್ವಶ್ರೇಷ್ಠ ಸತ್ಯದ ಸ್ವೀಕಾರದ ಮೂಲಕ ಮಾನವಕುಲದ ಬೆಳವಣಿಗೆಯನ್ನು ಅವರು ಬಯಸಿದ್ದರು. ಆಸ್ಟ್ರೇಲಿಯಾ, ಬಾಲಿ, ಕೆನಡಾ, ಫಿಜಿ, ಗಯಾನಾ, ಇಂಡೋನೇಷಿಯಾ, ಮಾರಿಷಸ್, ಮ್ಯಾನ್ಮಾರ್, ಕೀನ್ಯಾ, ಸಿಂಗಪೂರ್, ದಕ್ಷಿಣ ಆಫ್ರಿಕಾ, ಸುರಿನಾಮ್, ಥೈಲ್ಯಾಂಡ್, ಟ್ರಿನಿಡಾಡ್ ಮತ್ತು ಟೊಬಾಗೊ, ಯುಕೆ, ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಆರ್ಯ ಸಮಾಜ ಪ್ರಚಲಿತದಲ್ಲಿದೆ.
ಶುದ್ಧಿ ಚಳುವಳಿ: ಹಿಂದೂ ಧರ್ಮದಿಂದ ಬೇರೆ ಧರ್ಮಗಳಿಗೆ ಮತಾಂತರಗೊಂಡಿದ್ದ ಜನರನ್ನು ಮತ್ತೆ ಹಿಂದು ಧರ್ಮಕ್ಕೆ ಕರೆ ತರುವುದಕ್ಕಾಗಿ ಶುದ್ಧಿ ಚಳುವಳಿಯನ್ನು ಆರಂಭಿಸಿದರು. ಇದು ಮತಾಂತರಗೊಂಡು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದ, ಮರಳಿ ಮಾತೃಧರ್ಮಕ್ಕೆ ಬರಲು ಹಾತೊರೆಯುತ್ತಿದ್ದ ಸಾವಿರಾರು ಜನರಿಗೆ ಮಾರ್ಗವಾಯಿತು.
ಕೃತಿಗಳು: ಗೀತಾ ಭಾಷ್ಯಾ, ಋಗ್ವೇದ ಭಾಷ್ಯಾ, ಯುಜುರ್ವೇದ ಭಾಷ್ಯಾ, ಸತ್ಯಾರ್ಥ ಪ್ರಕಾಶ, ವೇದಾಂಗ ಪ್ರಕಾಶ ಸೇರಿದಂತೆ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ.
ಸಂದೇಶ: ದಯಾನಂದ ಸರಸ್ವತಿ ಅವರ ಮುಖ್ಯ ಸಂದೇಶ – “ವೇದಗಳಿಗೆ ಹಿಂತಿರುಗಿ” – ಅವರ ಎಲ್ಲಾ ಆಲೋಚನೆಗಳು ಮತ್ತು ಕಾರ್ಯಗಳ ತಳಹದಿಯಾಗಿ ರೂಪುಗೊಂಡಿತು. ಇವುಗಳಲ್ಲಿ ವಿಗ್ರಹ ಪೂಜೆ ಮತ್ತು ಬಹುದೇವತೆ, ಮತ್ತು ಜಾತಿವಾದ ಮತ್ತು ಅಸ್ಪೃಶ್ಯತೆ, ಬಾಲ್ಯ ವಿವಾಹ ಮತ್ತು ಬಲವಂತದ ವಿಧವ್ಯಾಧಿ ಮುಂತಾದ ಸಾಮಾಜಿಕ ಕಳಂಕಗಳು 19 ನೇ ಶತಮಾನದಲ್ಲಿ ಪ್ರಚಲಿತದಲ್ಲಿದ್ದವು.
ದಯಾನಂದ ಸರಸ್ವತಿ ಅವರು ಅಕ್ಟೋಬರ್ 30, 1883 ರಲ್ಲಿ ನಿಧನರಾದರು.