ಲೇಖಕರು: ದು.ಗು.ಲಕ್ಷ್ಮಣ, ಹಿರಿಯ ಪತ್ರಕರ್ತರು
“ಹಿಂದೂ ಧರ್ಮ ಮತ್ತು ಹಿಂದೂ ಸಮಾಜ ಉಳಿದು ಬೆಳೆಯಬೇಕೆಂಬುದು ಸರ್ವಶಕ್ತ ಪರಮಾತ್ಮನ ಬಯಕೆಯಾಗಿದೆ. ಆದ್ದರಿಂದಲೇ ಆತ(ಪರಮಾತ್ಮ) ಈ ಸಂಘಟನೆಯನ್ನು(ಆರೆಸ್ಸೆಸ್) ಸೃಷ್ಟಿಸಿದ್ದಾನೆ.ಈ ಕಾರ್ಯ ದೇವರ ಕಾರ್ಯವಾಗಿದೆ”.(It is the desire of God Almighty that Hindu Dharma and Society should be saved and developed and hence he has created this organisation(RSS).This work
Is God’s work).
– ತಮಿಳುನಾಡಿನ ಆರೆಸ್ಸೆಸ್ ಸಂಘಚಾಲಕರುಗಳ ವಾರ್ಷಿಕ ಬೈಠಕ್ ನಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶ್ರೀ ರಾಮಕೃಷ್ಣ ತಪೋವನಂ ನ ಸ್ವಾಮಿ ಚಿದ್ಭವಾನಂದರು ಹೇಳಿದ್ದ ಮಾತಿದು. ತಮಿಳುನಾಡಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಳವಣಿಗೆಯನ್ನು ವಿವೇಕಾನಂದರು ಕಂಡ ಕನಸಿನೊಂದಿಗೆ ತುಲನೆ ಮಾಡಿ ಸ್ವಾಮೀಜಿ ಹೀಗೆ ಹೇಳಿದ್ದರು.
“ಇಡೀ ರಾಷ್ಟ್ರವು ಸ್ವಾಮಿ ವಿವೇಕಾನಂದರ 150ನೇ ಜಯಂತಿ ಆಚರಿಸುವ ಸಡಗರದಲ್ಲಿರುವಾಗ ಸಂಘದ ಹಿರಿಯ ಪ್ರಚಾರಕರಾಗಿರುವ ಶ್ರೀ ಕೃ.ಸೂರ್ಯನಾರಾಯಣ ರಾವ್ ಬರೆದು ಪ್ರಕಟಿಸಿರುವ ಈ ಕೃತಿ ಒಂದು ಅತ್ಯುತ್ತಮ ಸಂಗ್ರಹಯೋಗ್ಯ ಕೃತಿ. ನಿಜವಾಗಿಯೂ ವಿವೇಕಾನಂದರಿಗೆ ಇದೊಂದು ತಕ್ಕ ಕಾಣಿಕೆ” ಎಂದು 2012ರಲ್ಲಿ ಚೆನ್ನೈ ಮೈಲಾಪುರದ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಗೌತಮಾನಂದರು ಆ ಪುಸ್ತಕ ಲೋಕಾರ್ಪಣೆಯ ಸಾನಿಧ್ಯವಹಿಸಿ ನುಡಿದಿದ್ದರು. ಕರ್ನಾಟಕದವರೇ ಆದ ಕೃ.ಸೂರ್ಯನಾರಾಯಣ ರಾವ್(ಸೂರೂಜಿ) ತಮಿಳುನಾಡಿನ ಪ್ರಾಂತ ಪ್ರಚಾರಕರಾಗಿದ್ದಲ್ಲದೆ ಸಂಘದ ಅ.ಭಾ.ಸೇವಾ ಪ್ರಮುಖ್ ಹೊಣೆಗಾರಿಕೆಯನ್ನೂ ಯಶಸ್ವಿಯಾಗಿ ನಿರ್ವಹಿಸಿದವರು. ಅವರು 2012ರಲ್ಲಿ “The vision of Swami Vivekananda and the Mission of Rashtriya Swayamsevak Sangh(RSS)”ಎಂಬ ಬೃಹತ್ ಕೃತಿಯೊಂದನ್ನು ರಚಿಸಿದ್ದರು. ಆ ಕೃತಿಗೆ ಖ್ಯಾತ ಅಂಕಣಕಾರ ಎಸ್.ಗುರುಮೂರ್ತಿಯವರು 120 ಪುಟಗಳ ಮುನ್ನುಡಿ ಬರೆದಿದ್ದರು.
ಇದನ್ನೆಲ್ಲ ಇಲ್ಲಿ ಉಲ್ಲೇಖಿಸಿದ ಹಿನ್ನೆಲೆಯೇನೆಂದರೆ ಸ್ವಾಮಿ ವಿವೇಕಾನಂದರ ವಿಚಾರಧಾರೆ, ಚಿಂತನೆ, ದೃಷ್ಟಿಕೋನವೇ ಬೇರೆ. ಆರೆಸ್ಸೆಸ್ ಪ್ರತಿಪಾದಿಸುವ ವಿಚಾರಧಾರೆ,ಚಿಂತನೆ,ದೃಷ್ಟಿಕೋನ ಗಳೇ ಬೇರೆ. ಒಂದಕ್ಕೊಂದು ಸಂಬಂಧವೇ ಇಲ್ಲ. ಆರೆಸ್ಸೆಸ್ ಸಾವರ್ಕರ್ ವಿಚಾರಧಾರೆಯಿಂದ ಪ್ರಭಾವಿತಗೊಂಡು ಸೈನಿಕೀಯ ಮಾದರಿಯ ಸಂಘಟನೆ ಕಟ್ಟುತ್ತಿದೆ. ರಾಷ್ಟ್ರೀಯತೆ ಹೆಸರಿನಲ್ಲಿ ಹಿಂದೂಗಳನ್ನು ಎತ್ತಿಕಟ್ಟುವ ಕೃತ್ಯದಲ್ಲಿ ತೊಡಗಿದೆ. ಇತ್ಯಾದಿ ತಥಾಕಥಿತ ಆರೋಪಗಳನ್ನು ಈಗಲೂ ಮಾಡುತ್ತಿರುವ ಕೆಲವು ಪ್ರಗತಿಪರರು, ಎಡಪಂಥೀಯರಿಗೆ ಸ್ವತಃ ರಾಮಕೃಷ್ಣ ಮಠಕ್ಕೆ ಸಂಬಂಧಿಸಿದವರೇ ಆರೆಸ್ಸೆಸ್ ಕುರಿತು ಏನು ಹೇಳಿದ್ದಾರೆ ಎಂಬುದನ್ನು ನೆನಪಿಸುವುದಕ್ಕಾಗಿ ಮಾತ್ರ ಈ ಉಲ್ಲೇಖ ಮಾಡಬೇಕಾಯಿತು.
ಹಾಗೆ ನೋಡಿದರೆ ವಿವೇಕಾನಂದರು ಎಡಪಂಥೀಯರೂ ಆಗಿರಲಿಲ್ಲ. ಬಲ ಪಂಥೀಯರೆಂದೂ ಗುರುತಿಸಿಕೊಂಡಿರಲಿಲ್ಲ. ಸ್ವಾಮಿ ವಿವೇಕಾನಂದರು ಎಡಪಂಥೀಯರಿಗೂ ಬಲಪಂಥೀಯರಿಗೂ ಸಲ್ಲುವ ಒಬ್ಬ ಮಹಾತ್ಮನೆನಿಸಿಕೊಂಡಿರುವುದಕ್ಕೆ ಅವರಲ್ಲಿದ್ದ ಅಸಾಮಾನ್ಯ ಮಾನವೀಯತೆಯೇ ಮುಖ್ಯ ಕಾರಣ ಎಂಬುದನ್ನು ನಾವು ಮರೆಯಬಾರದು. ವಿವೇಕಾನಂದರು ಪಂಥ, ಪಂಗಡ, ಪಕ್ಷ ಮೀರಿ ನಿಂತು ಮಾನವತೆಯ ಮೇರು ತುದಿಗೆ ತಲಪಿದ್ದರು. ಅದೇ ಕಾರಣದಿಂದಲೇ ಅವರು ಜಗದ್ವಿಖ್ಯಾತರಾದರು. ಜನಿಸಿದ 160 ವರ್ಷಗಳ ಬಳಿಕವೂ ಈಗಲೂ ಪ್ರಸ್ತುತರಾಗಿಯೇ ಉಳಿದಿರುವುದು ಇದೇ ಕಾರಣಕ್ಕೆ.
ವಿವೇಕಾನಂದರು ಹಿಂದೂ ಸಮಾಜದಲ್ಲಿದ್ದ ಮೂಡನಂಬಿಕೆ,ಕಂದಾಚಾರಗಳನ್ನು ಖಂಡಿಸುವ ಕೆಲಸಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ಹಿಂದೂ ಧರ್ಮಕ್ಕೆ ಅಂಟಿದ ಕಂದಾಚಾರ, ಮಡಿವಂತಿಕೆ, ದಾರಿದ್ರ್ಯ, ಮೂಢನಂಬಿಕೆಗಳ ಕೊಳೆ ಕಶ್ಮಲಗಳನ್ನು ತೊಳೆದು ಮತ್ತೆ ಪ್ರಕಾಶಮಾನವಾಗಿ ಬೆಳಗುವ ಕೆಲಸವನ್ನೂ ಮಾಡಿದ್ದು ಅವರ ಹೆಗ್ಗಳಿಕೆ. ವಿವೇಕಾನಂದರು ಒಬ್ಬ ಸನ್ಯಾಸಿಯಾಗಿದ್ದರೂ ಉಳಿದ ಸನ್ಯಾಸಿಗಳಂತೆ ಹಿಂದೂ ಧರ್ಮದ ಅಸಂಖ್ಯಾತ ದೇವರುಗಳ ಪೂಜೆಯ ಗೊಡವೆಗೆ ಹೋಗಲಿಲ್ಲ. ಕನ್ಯಾಕುಮಾರಿಯ ಕಡಲ ನಡುವಣ ಬಂಡೆಯ ಮೇಲೆ ವಿವೇಕಾನಂದರ ಮನಸ್ಸಿನಲ್ಲಿ ನಡೆದಿದ್ದ ಮಹಾಕ್ರಾಂತಿಯ ಪರಿಣಾಮವಾಗಿ ಅಸಂಖ್ಯಾತವಾಗಿದ್ದ ಹಳೆಯ ದೇವರುಗಳ ಜಾಗದಲ್ಲಿ ಹೊಸದೊಂದು ದೇವರು ಸೃಷ್ಟಿಯಾಗಿದ್ದರು. ಆ ದೇವರೇ ಮನುಷ್ಯ. ಜಗತ್ತಿನ ಆಧ್ಯಾತ್ಮಿಕ ಇತಿಹಾಸದಲ್ಲಿ ನಡೆದ ಅತಿ ಮಹತ್ವಪೂರ್ಣವಾದ ಪವಾಡವೆಂದರೆ ಈ ನೂತನ ದೇವರ ಆವಿರ್ಭಾವ. ಶಂಖ ಚಕ್ರ ಗದಾ ಧಾರಿಯಲ್ಲದ, ಪೀತಾಂಬರವನ್ನುಡದ, ರುಂಡಮಾಲಾಲಂಕೃತ ಸ್ಮಶಾನವಾಸಿಯಲ್ಲದ, ಆದರೆ ಬೆನ್ನಿಗಂಟಿದ ಹೊಟ್ಟೆಯ, ನೂರಾರು ಕ್ಲೇಶ ಸಂಕಟಗಳಿಂದ ಜರ್ಝರಿತನಾದ, ನಿರಾಶೆಯ ಬಾವಿಗಳಂತೆ ಆಳವಾದ ಕಣ್ಣುಗಳನ್ನುಳ್ಳ ಸಾಮಾನ್ಯ ಮಾನವನೇ ವಿವೇಕಾನಂದರು ಕಂಡುಕೊಂಡ ಆ ದೇವರು. ಅದಕ್ಕೇ ಅವರು ಹೇಳಿದ್ದು-ಮೂರ್ಖ ದೇವೋಭವ, ದರಿದ್ರ ದೇವೋ ಭವ, ದೀನ ದೇವೋ ಭವ ಎಂದು. ದೇವರನ್ನು ಧೂಪ ದೀಪ ನೈವೇದ್ಯಾದಿಗಳಿಂದ ಅರ್ಚಿಸುವ ಕಾಯಕ ಬದಿಗಿಟ್ಟು ಈ ಹೊಸ ದೇವರಿಗೆ ಅನ್ನ ನೀಡಿ, ವಸ್ತ್ರ ನೀಡಿ, ಸೇವೆ ಸಲ್ಲಿಸಿ. ಅದೇ ನಿಮಗೆ ಸಾಕ್ಷಾತ್ಕಾರ, ಮುಕ್ತಿ ಎಲ್ಲವನ್ನೂ ದೊರಕಿಸಿ ಕೊಡುತ್ತದೆ ಎಂದಿದ್ದರು.
‘ನನ್ನ ತರುಣ ಸ್ನೇಹಿತರೇ, ಮೊದಲು ಬಲಿಷ್ಠರಾಗಿ. ಗೀತಾಧ್ಯಯನಕ್ಕಿಂತ ಫುಟ್ಬಾಲ್ ಆಟ ಆಡಿದರೆ ಮುಕ್ತಿಗೆ ಹತ್ತಿರ ಹೋಗುವಿರಿ’.
‘ಶಕ್ತಿಯೇ ಜೀವನ. ದುರ್ಬಲತೆಯೇ ಮರಣ. ಜಯ ಹೊಂದಬೇಕಾದರೆ ಅತ್ಯದ್ಭುತವಾದ ಇಚ್ಚಾಶಕ್ತಿ, ಛಲ ಇವುಗಳು ಬೇಕು.’
‘ನಮಗೆ ಇಂದು ಅವಶ್ಯವಾಗಿ ಬೇಕಾಗಿರುವುದು ಜನ, ಜನ. ಉಳಿದುವೆಲ್ಲ ಅನಂತರ ಬರುವುವು. ವೀರ್ಯವಾನ್, ತೇಜಸ್ವಿ, ಶ್ರದ್ಧಾಸಂಪನ್ನ, ಕೊನೆಯವರೆಗೂ ನಿಷ್ಕಪಟಿಗಳಾದ ಯುವಕರು ಬೇಕಾಗಿದ್ದಾರೆ. ಇಂತಹ ನೂರು ಜನರು ಸಿಕ್ಕಿದರೆ ಪ್ರಪಂಚವನ್ನೇ ಬದಲಾಯಿಸಬಹುದು.’
‘ಈ ಪ್ರಪಂಚ ಒಂದು ದೊಡ್ಡ ಗರಡಿಯ ಮನೆ. ನಾವಿಲ್ಲಿ ಬಲಿಷ್ಠರಾಗುವುದಕ್ಕೆ ಬಂದಿರುವೆವು.’
‘ನೀವು ಒಳಗಿನಿಂದ ಹೊರಗೆ ಬೆಳೆಯಬೇಕಾಗಿದೆ. ಯಾರೂ ನಿಮಗೆ ಬೋಧಿಸಲಾರರು. ಯಾರೂ ನಿಮ್ಮನ್ನು ಆಧ್ಯಾತ್ಮಿಕ ಜೀವಿಗಳನ್ನಾಗಿ ಮಾಡಲಾರರು. ನಿಮಗೆ ನಿಮ್ಮ ಆತ್ಮನಲ್ಲದೆ ಬೇರೆ ಗುರುವಿಲ್ಲ.’
‘ನಮ್ಮ ಜೀವನ ಒಳ್ಳೆಯದಾಗಿದ್ದರೆ ಶುದ್ಧವಾಗಿದ್ದರೆ ಆಗ ಮಾತ್ರ ಜಗತ್ತು ಒಳ್ಳೆಯದಾಗುವುದು. ಶುದ್ಧವಾಗುವುದು. ಆದ್ದರಿಂದ ಮೊದಲು ನಾವು ಶುದ್ಧರಾಗೋಣ.’
‘ಎಲ್ಲವನ್ನೂ ಪರಿಹಾಸ್ಯ ಮಾಡುವ ಹುಡುಗಾಟಿಕೆಯ ರೋಗ ನಮ್ಮ ರಾಷ್ಟ್ರಜೀವನದ ರಕ್ತವನ್ನು ಹೊಕ್ಕಿದೆ. ಮೊದಲು ಅದನ್ನು ತ್ಯಜಿಸಿ. ಧೀರರಾಗಿ ಶ್ರದ್ಧಾವಂತರಾಗಿ, ಉಳಿದುದೆಲ್ಲ ಸ್ವಾಭಾವಿಕವಾಗಿ ಸಿದ್ಧಿಸುವುದು.’
-ಸ್ವಾಮಿ ವಿವೇಕಾನಂದರು ಬೇರೆಬೇರೆ ಸಂದರ್ಭಗಳಲ್ಲಿ ಜನತೆಗೆ, ಯುವಕರಿಗೆ ನೀಡಿದ ಮೇಲಿನ ಸಂದೇಶಗಳು ಸಂಘ ಪ್ರತಿಪಾದಿಸುತ್ತಿರುವ ನಿಲುಮೆಗಳಂತೆಯೇ ಇದೆಯಲ್ಲ ಎಂದು ವಿವೇಕಾನಂದರ ಈ ಉಪದೇಶಾಮೃತ ನುಡಿಗಳನ್ನು ಇದುವರೆಗೆ ಒಮ್ಮೆಯೂ ಕೇಳದೆ ಇರುವವರಿಗೆ ಅನಿಸುವುದು ಸ್ವಾಭಾವಿಕ. ಅಂದರೆ ವಿವೇಕಾನಂದರ ವಿಚಾರಧಾರೆ, ಚಿಂತನೆಗಳನ್ನು ಸಂಘವು ಸದ್ದಿಲ್ಲದೆ ಕಾರ್ಯರೂಪಕ್ಕೆ ತರಲು ಹೊರಟಿದೆಯೆಂದೇ ಇದರರ್ಥವಲ್ಲವೇ?ಸಂಘದ ಬೈಠಕ್, ಬೌದ್ಧಿಕ್, ಸಭೆ, ಸಮಾವೇಶಗಳಲ್ಲಿ ಪಾಲ್ಗೊಂಡವರಿಗೆ ಸಂಘದ ಚಿಂತನೆ, ವಿವೇಕಾನಂದರ ಚಿಂತನೆ ಎರಡೂ ಭಿನ್ನ ಎಂದು ಖಂಡಿತ ಅನಿಸಲು ಸಾಧ್ಯವಿಲ್ಲ. ಸಂಘ ಆಧ್ಯಾತ್ಮಿಕತೆಗೆ ಅಷ್ಟೊಂದು ಒತ್ತು ನೀಡದಿದ್ದರೂ ವಿವೇಕಾನಂದರು ಪ್ರತಿಪಾದಿಸಿದ ವ್ಯಕ್ತಿ ನಿರ್ಮಾಣ, ಚಾರಿತ್ರ್ಯ ನಿರ್ಮಾಣ, ಶಕ್ತಿಯ ಆರಾಧನೆ, ಸೇವಾ ಭಾವನೆ, ಮಾನವೀಯ ದೃಷ್ಟಿಕೋನ ಬೆಳೆಸುವುದು, ಮನುಷ್ಯ-ಮನುಷ್ಯರ ನಡುವೆ ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯ ಗೋಡೆಗಳನ್ನೆಬ್ಬಿಸದೆ ನಿತ್ಯ ಶಾಖೆಯ ಮೂಲಕ ಸಾಮಾಜಿಕ, ಸಾಂಸ್ಕೃತಿಕ ಸಾಮರಸ್ಯ ನಿರ್ಮಾಣ, ಮಾನವ ಪ್ರೀತಿಯ ಮೂಲಕ ಮನಸ್ಸು-ಮನಸ್ಸುಗಳ ನಡುವೆ ಸೇತುವೆ ನಿರ್ಮಿಸುವುದು, ಇಂತಹ ಸಮಾಜಮುಖಿ, ರಾಷ್ಟ್ರಮುಖಿ ಕಾರ್ಯಗಳನ್ನೇ ಕಳೆದ 99 ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬಂದಿದೆ.
ಕೇಂದ್ರ ಸರ್ಕಾರ ಅಥವಾ ರಾಮಕೃಷ್ಣ ಮಿಷನ್ ಸಂಸ್ಥೆ ಹಮ್ಮಿಕೊಳ್ಳಬೇಕಿದ್ದ ಸ್ವಾಮಿ ವಿವೇಕಾನಂದರ ಜನ್ಮ ಶತಾಬ್ದಿಯನ್ನು ಆರೆಸ್ಸೆಸ್ ವಿಶಿಷ್ಟ ರೀತಿಯಲ್ಲಿ ಹಮ್ಮಿಕೊಂಡಿದ್ದು ಸಂಘವು ವಿವೇಕಾನಂದರ ಗುರಿಯನ್ನು ಸಮರ್ಥ ರೀತಿಯಲ್ಲಿ ಈಡೇರಿಸುತ್ತಿದೆ ಎಂದು ರಾಮಕೃಷ್ಣ ಆಶ್ರಮದ ಪ್ರಮುಖರೇ ಶಹಭಾಸ್ ಗಿರಿ ನೀಡಿದ್ದಾರೆ. ಸಂಘವು ಈ ಜನ್ಮಶತಾಬ್ದಿಯನ್ನು ಆಚರಿಸಿದ ಬಗೆ ಮಾತ್ರ ವಿಶಿಷ್ಟ. ಅದು ರಾಮಕೃಷ್ಣ ಮಿಷನ್ ಗೂ ಬಹುಶಃ ಸಾಧ್ಯವಾಗದ ಕಾರ್ಯವಾಗಿತ್ತು. ವಿವೇಕಾನಂದರು ವಿದೇಶಗಳಿಗೆ ಹೋಗುವ ಮುನ್ನ ಧ್ಯಾನಸ್ಥರಾಗಿ ಕುಳಿತ ಕನ್ಯಾಕುಮಾರಿಯ ಕಡಲ ನಡುವಿನ ಬಂಡೆಯ ಮೇಲೆ ಅವರ ವ್ಯಕ್ತಿತ್ವಕ್ಕೆ ತಕ್ಕ, ಸೂಕ್ತ, ಯೋಗ್ಯ ಸ್ಮಾರಕ ನಿರ್ಮಿಸುವ ಬಹುದೊಡ್ಡ ಸವಾಲನ್ನು ಸ್ವೀಕರಿಸಿದ್ದು ಆರೆಸ್ಸೆಸ್. 1962ರಲ್ಲಿ ಆಗಷ್ಟೇ ನಮ್ಮ ದೇಶದ ಮೇಲೆ ಚೀನಾದ ಆಕ್ರಮಣ ನಡೆದು ನಮಗೆ ಯುದ್ಧದಲ್ಲಿ ಸೋಲುಂಟಾಗಿತ್ತು.ಇಡೀ ದೇಶ ಹತಾಶೆಯ ಅಂಚಿನಲ್ಲಿತ್ತು. ಇಡೀ ದೇಶಕ್ಕೆ ಮತ್ತೊಮ್ಮೆ ಸ್ಫೂರ್ತಿ, ಪ್ರೇರಣೆ ತುಂಬಲು ವಿವೇಕಾನಂದ ಜನ್ಮ ಶತಾಬ್ದಿ ಆಚರಣೆಗಿಂತ ಮಹತ್ವದ ವಿದ್ಯಮಾನ ಮತ್ತೆ ಯಾವುದು? ಸಂಘಕ್ಕೆ ಈ ಯೋಜನೆ ಹೊಳೆದದ್ದೇ ತಡ, ವಿವೇಕಾನಂದರ ಸಾಧನೆಗಳ ಕುರಿತು ಮೊದಲು ಒಂದು ಪುಸ್ತಕ ರಚಿಸುವಂತೆ ಆಗ ಸಂಘದ ಸರಕಾರ್ಯವಾಹರಾಗಿದ್ದ ಏಕನಾಥ ರಾನಡೆಯವರಿಗೆ ಸೂಚಿಸಲಾಯಿತು. ಏಕನಾಥ ರಾನಡೆ ಜೀ ಮೊದಲು ಕೋಲ್ಕತ್ತಾದಲ್ಲಿರುವ ಬೇಲೂರು ಮಠಕ್ಕೆ ತೆರಳಿ ವಿವೇಕಾನಂದರಿಗೆ ಸಂಬಂಧಿಸಿದ ಅಲ್ಲಿದ್ದ ಎಲ್ಲ ಕೃತಿಶ್ರೇಣಿಗಳನ್ನೂ ಅಧ್ಯಯನ ಮಾಡಿ,1963 ಜನವರಿ 17ರಂದು ಬಿಡುಗಡೆಗೊಳಿಸಿದ ಕೃತಿಯೇ Rousing call to Hindu Nation. ಅನಂತರ ಇದು ಎಲ್ಲ ಭಾಷೆಗಳಲ್ಲೂ ಪ್ರಕಟವಾಗಿ ಜನ ಮೆಚ್ಚುಗೆ ಪಡೆಯಿತು.
ಅದರ ಮುಂದಿನ ಭಾಗವಾಗಿ ನಿರ್ಮಾಣವಾಗಿದ್ದೇ ಕನ್ಯಾಕುಮಾರಿಯ ಕಡಲ ನಡುವಿನ ವಿವೇಕಾನಂದ ಶಿಲಾಸ್ಮಾರಕ. ಅದೇನೂ ಅಷ್ಟು ಸುಲಭದ ಕಾರ್ಯವಾಗಿರಲಿಲ್ಲ. ಸ್ಥಳೀಯ ಕ್ರೈಸ್ತರು, ತಮಿಳುನಾಡು ಸರ್ಕಾರ, ಕೇಂದ್ರ ಸರ್ಕಾರ, ಪ್ರಗತಿಪರರು ಎಲ್ಲರದೂ ತೀವ್ರ ವಿರೋಧವಿತ್ತು. ಆದರೆ ಎಲ್ಲರ ವಿರೋಧಗಳ ಹೆಬ್ಬಂಡೆಯನ್ನು ಮೆಟ್ಟಿ ನಿಂತು, ಕಡಲ ನಡುವಿನ ಬಂಡೆಯ ಮೇಲೆ ಭವ್ಯ ಶಿಲಾ ಸ್ಮಾರಕ ನಿರ್ಮಿಸಿದ್ದು ಮಾತ್ರ ಸಂಘದ ಛಲ ಹಾಗೂ ಅದರ ಪ್ರಚಂಡ ಬಲಕ್ಕೆ ಉಜ್ವಲ ಸಾಕ್ಷಿ. ಏಕನಾಥಜೀ ಹಗಲಿರುಳು ಈ ಕಾರ್ಯಸಾಧನೆಗಾಗಿ ತಮ್ಮ ರಕ್ತವನ್ನು ನೀರಾಗಿಸಿದರು.ವಿರೋಧಿಗಳೂ ಸೇರಿದಂತೆ ಎಲ್ಲರಿಂದಲೂ, ಕಮ್ಯುನಿಸ್ಟ್ ಸರ್ಕಾರ(ಪ.ಬಂಗಾಳ)ದಿಂದಲೂ ಹಣ ಸಂಗ್ರಹಿಸಿ 1970ರಲ್ಲಿ ವಿವೇಕಾನಂದರಿಗೆ ಭವ್ಯ ಸ್ಮಾರಕ ನಿರ್ಮಿಸಿಯೇ ಬಿಟ್ಟರು. ಈ ಸ್ಮಾರಕವನ್ನು ದರ್ಶಿಸಿದ ರಾಮಕೃಷ್ಣಾಶ್ರಮದ ಪ್ರಮುಖರೇ ಸಂಘಶಕ್ತಿಗೆ, ಅದರ ಛಲಗಾರಿಕೆಗೆ ನಿಬ್ಬೆರಗಾಗಿದ್ದುಂಟು.
ಈ ಸ್ಮಾರಕ ನಿರ್ಮಾಣದ ಬಳಿಕ ಏಕನಾಥಜೀ ತಮ್ಮ ಕೆಲಸ ಮುಗಿಯಿತೆಂದು ಸುಮ್ಮನಾಗಲಿಲ್ಲ.ವಿವೇಕಾನಂದ ಕೇಂದ್ರ ಸ್ಥಾಪನೆಗೆ ಮುಂದಾದರು. ವಿವೇಕಾನಂದರ ಸಂದೇಶವನ್ನು ಕೃತಿಗಿಳಿಸಲು ನೂರಾರು, ಸಾವಿರಾರು ಸೇವಾವ್ರತಿಗಳ ತರಬೇತಿ ಕಾರ್ಯ, ಗ್ರಾಮೀಣ ಅಭಿವೃದ್ಧಿ ಯೋಜನೆ,ದೂರದ ಪೂರ್ವಾಂಚಲದಲ್ಲಿ ಬುಡಕಟ್ಟು ಜನರ ಬಡಮಕ್ಕಳಿಗಾಗಿ ವಿವೇಕಾನಂದ ಶಾಲೆಗಳು, ಹಾಸ್ಟೆಲ್ ಗಳ ನಿರ್ಮಾಣ, ಆಸ್ಪತ್ರೆ, ಅನಾಥಾಲಯ, ವಿವೇಕಾನಂದ ಅಂತಾರಾಷ್ಟ್ರೀಯ ಫೌಂಡೇಶನ್(ವಿ ಐ ಎಫ್), ಯುವ ಮನಸ್ಸುಗಳನ್ನು ಜಾಗೃತಗೊಳಿಸುವ ವಿಚಾರಧಾರೆಯುಳ್ಳ ಸಾಹಿತ್ಯ, ಪತ್ರಿಕೆಗಳ ಪ್ರಸಾರ ಹೀಗೆ ಹತ್ತು ಹಲವು ಯೋಜನೆಗಳನ್ನು ಕಾರ್ಯಗತಗೊಳಿಸುತ್ತಲೇ ಕೊನೆಯುಸಿರೆಳೆದರು. ಏಕನಾಥಜೀ ಕಾವಿವಸ್ತ್ರಧಾರಿಯಾಗಿರಲಿಲ್ಲ. ಆದರೆ ಶ್ವೇತವಸ್ತ್ರಧಾರಿಯಾಗಿ ವಿವೇಕಾನಂದರ ವಿಚಾರಧಾರೆಯನ್ನು ವಿಶಿಷ್ಟ ರೀತಿಯಲ್ಲಿ ಕೃತಿಗಿಳಿಸಿದರು.
“ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ವಾಮಿ ವಿವೇಕಾನಂದರ ಚಿಂತನೆಗಳು ಮತ್ತು ಸಿದ್ಧಾಂತದ ನಿಜವಾದ ಪ್ರಣಾಳಿಕೆ ಆಗಿತ್ತು…ಸಂಘದ ಪ್ರತಿಯೊಬ್ಬ ಸ್ವಯಂಸೇವಕನ ದೇಶಪ್ರೇಮ, ಮಾತೃಭೂಮಿಯ ಸೇವೆಗಾಗಿ ಸಲ್ಲಿಸುವ ಪ್ರಾಮಾಣಿಕ ಕರ್ತವ್ಯಗಳಲ್ಲಿ ಸ್ವಾಮೀಜಿ ಜೀವಂತವಾಗಿದ್ದಾರೆ” – ದೆಹಲಿಯ ಐ ಐ ಟಿ ಯಲ್ಲಿ ಜರುಗಿದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಶೋಕ ಸಿಂಘಾಲ್ ಅವರ ನುಡಿಗಳಿವು.
ವಿಮಾನ ಅಪಘಾತ, ನೆರೆ ಹಾವಳಿ, ಭೂಕಂಪ, ಸುನಾಮಿ, ಕರೊನಾ ಮಾರಿ, ಕೋಮು ಗಲಭೆ,ಶತೃದೇಶದ ಕಿರಿಕಿರಿ ಮುಂತಾದ ಎಲ್ಲ ದುರಿತಗಳ ಸಂದರ್ಭದಲ್ಲಿ ಯಾರ ಸೂಚನೆಗೂ ಕಾಯದೆ ಸಂತ್ರಸ್ತರ ಕಣ್ಣೀರೊರೆಸಲು ಸ್ಥಳಕ್ಕೆ ಧಾವಿಸುವ, ಹಲವು ಬಾರಿ ಈ ಸೇವಾಕಾರ್ಯದಲ್ಲಿ ಬಲಿದಾನ ಮಾಡಿದ ಸತ್ಪರಂಪರೆ ಸಂಘದ್ದು. ದೀನದುಃಖಿಗಳ, ಆರ್ತರ ಸೇವೆಗಾಗಿ ಧಾವಿಸುವ ಸಂಘದ ಸ್ವಯಂಸೇವಕರು ವಿವೇಕಾನಂದರು ನುಡಿದಿರುವ ವೀರ್ಯವಾನ್, ತೇಜಸ್ವಿ, ಶ್ರದ್ಧಾಸಂಪನ್ನ, ನಿಷ್ಕಪಟಿ, ನಿಸ್ವಾರ್ಥ ಯುವಕರಲ್ಲದೆ ಮತ್ತೇನು?
ಸ್ವಾಮಿ ವಿವೇಕಾನಂದರ ಅದ್ಭುತ ವಿಚಾರಗಳನ್ನು ಜಗದಗಲ ಪಸರಿಸುವಲ್ಲಿ ರಾಮಕೃಷ್ಣ ಮಿಷನ್ ಯಶಸ್ವಿಯಾಗಿರುವುದು ನಿಜ. ಆದರೆ ವಿವೇಕಾನಂದರ ಸಂದೇಶಗಳನ್ನು ಕಾರ್ಯರೂಪಕ್ಕಿಳಿಸುತ್ತಿರುವುದು ಆರೆಸ್ಸೆಸ್ ಎಂಬುದೂ ಅಷ್ಟೇ ನಿಜ.ವಿವೇಕಾನಂದರ ಸಮಾಜಮುಖಿ, ರಾಷ್ಟ್ರಮುಖಿ ಚಿಂತನೆಗಳ ಬೀಜ ಬಿತ್ತಿ ಸಮೃದ್ಧ ಫಲಗಳನ್ನು ಬೆಳೆಸುವ ಕಾರ್ಯವನ್ನು ಆರೆಸ್ಸೆಸ್ ನಿರಂತರವಾಗಿ ಮಾಡಲಿದೆ.