ಸೆಪ್ಟೆಂಬರ್‌ 5ರಂದು ಪ್ರತಿ ವರ್ಷ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರಸಿದ್ಧ ವಿದ್ವಾಂಸ, ಭಾರತರತ್ನ ಪುರಸ್ಕೃತ, ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.

1962ರಲ್ಲಿ ಡಾ. ಎಸ್. ರಾಧಾಕೃಷ್ಣನ್ ಅವರು ಭಾರತದ ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಅವರ ವಿದ್ಯಾರ್ಥಿಗಳು ಅವರ ಜನ್ಮದಿನವನ್ನು ಆಚರಿಸುವ ಕುರಿತು ಸ್ವತಃ ಅವರ ಬಳಿಯೇ ಪ್ರಸ್ತಾಪಿಸಿದರು. ಆದರೆ ರಾಧಾಕೃಷ್ಣನ್ ಅವರು ಯಾವುದೇ ವೈಭವದ ಆಚರಣೆಯನ್ನು ಒಪ್ಪದೇ, ಅದರ ಬದಲಾಗಿ ಶಿಕ್ಷಕರ ದಿನವೆಂದು ಆಚರಿಸಲು ಮನವಿ ಮಾಡಿದರು.


ಡಾ. ರಾಧಾಕೃಷ್ಣನ್ ಅವರ ವಿದ್ಯಾರ್ಥಿಗಳು ಅವರ ಸಲಹೆಯನ್ನು ಮನಃಪೂರ್ವಕವಾಗಿ ಸ್ವೀಕರಿಸಿದರು. ನಂತರ ಭಾರತದಲ್ಲಿ ಸೆಪ್ಟೆಂಬರ್‌ 5ರಂದು ಶಿಕ್ಷಕರ ದಿನವೆಂದು ಘೋಷಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಸೆಪ್ಟೆಂಬರ್‌ 5ರಂದು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವು ಶಿಕ್ಷಕರು ನೀಡಿದ ಕೊಡುಗೆ ಮತ್ತು ಅವರ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಗುತ್ತದೆ.


ಮಹತ್ವ
ಡಾ. ರಾಧಾಕೃಷ್ಣನ್ ಅವರಂತೆ ಶಿಕ್ಷಕರು ನಮ್ಮ ರಾಷ್ಟ್ರದ ಭವಿಷ್ಯದ ಶಿಲ್ಪಿಗಳು. ಅವರು ವಿದ್ಯಾರ್ಥಿಗಳನ್ನು ಜ್ಞಾನ ಮತ್ತು ಬುದ್ಧಿವಂತಿಕೆಯಿಂದ ಸಜ್ಜುಗೊಳಿಸುತ್ತಾರೆ. ಜವಾಬ್ದಾರಿಯುತ ಮತ್ತು ಯಶಸ್ವಿ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತಾರೆ.
ಶಿಕ್ಷಕರು ವಹಿಸುವ ಪ್ರಮುಖ ಪಾತ್ರ ಹಾಗೂ ಅವರು ಎದುರಿಸುತ್ತಿರುವ ಸವಾಲುಗಳು ಮತ್ತು ನಮ್ಮ ಸಮಾಜದಲ್ಲಿ ಅವರ ಹಕ್ಕುಗಳನ್ನು ತಿಳಿಸಲು ಈ ದಿನ ಸಹಾಯಕಾರಿಯಾಗಿದೆ.

ಸರ್ವಪಲ್ಲಿ ರಾಧಕೃಷ್ಣನ್ ಪರಿಚಯ

ಡಾ. ರಾಧಾಕೃಷ್ಣನ್ ಅವರು ಸೆಪ್ಟೆಂಬರ್ 5, 1888 ರಂದು ತಮಿಳುನಾಡಿನ ತಿರುಟ್ಟಣಿಯಲ್ಲಿ ಜನಿಸಿದರು. ಅವರ ತಂದೆ ಸರ್ವಪಲ್ಲಿ ವೀರಸ್ವಾಮಿ ಮತ್ತು ತಾಯಿ ಸೀತಮ್ಮ. ಇವರು ಆರಂಭಿಕ ಶಿಕ್ಷಣವನ್ನು ವೆಲ್ಲೂರಿನ ಶಾಲೆಯಲ್ಲಿ ಮುಗಿಸಿದರು. ನಂತರ ಮದ್ರಾಸ್‌ ಕ್ರಿಶ್ಚಿಯನ್‌ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು. ಅದೇ ಕಾಲೇಜಿನಲ್ಲಿ 1906ರಂದು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.


ದಿ ಎಥಿಕ್ಸ್ ಆಫ್ ದಿ ವೇದಾಂತ ಮತ್ತು ಅದರ ಮೆಟಾಫಿಸಿಕಲ್ ಪ್ರಿಸ್ಪೊಸಿಷನ್ಸ್ ಎಂಬ ವಿಷಯದಡಿ ಸರ್ವೇಪಲ್ಲಿ ಅವರು ಪ್ರಬಂಧ ಬರೆದರು. ಅವರ ಇಬ್ಬರು ಪ್ರಾಧ್ಯಾಪಕರಾದ ರೆ.ವಿಲಿಯಂ ಮೆಸ್ಟನ್ ಮತ್ತು ಡಾ. ಆಲ್ಫ್ರೆಡ್ ಜಾರ್ಜ್ ಹಾಗ್ ಅವರ ಪ್ರಬಂಧವನ್ನು ಶ್ಲಾಘಿಸಿದರು. ರಾಧಾಕೃಷ್ಣನ್ ಕೇವಲ ಇಪ್ಪತ್ತು ವರ್ಷ ವಯಸ್ಸಿನವನಾಗಿದ್ದಾಗ ಅವರ ಪ್ರಬಂಧವನ್ನು ಪ್ರಕಟಿಸಲಾಯಿತು.
ರಾಧಾಕೃಷ್ಣನ್‌ ಅವರು 1909ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ನಂತರ ಅವರನ್ನು ಮಹಾರಾಜ ಕಾಲೇಜಿಗೆ ಕಳುಹಿಸಿದರು. ಅಲ್ಲಿದ್ದಾಗ ಪ್ರತಿಷ್ಠಿತ ನಿಯತಕಾಲಿಕೆಗಳಾದ ದಿ ಕ್ವೆಸ್ಟ್, ಜರ್ನಲ್ ಆಫ್ ಫಿಲಾಸಫಿ ಮತ್ತು ಇಂಟರ್ನ್ಯಾಷನಲ್ ಜರ್ನಲ್ ಆಫ್ ಎಥಿಕ್ಸ್‌ಗಳಿಗೆ ಹಲವಾರು ಲೇಖನಗಳನ್ನು ಬರೆದರು.


1921ರಲ್ಲಿ ಅವರು ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಕಗೊಂಡರು. 1931ರಲ್ಲಿ ಅವರು ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸಿದರು. 1936ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಈಸ್ಟರ್ನ್ ರಿಲಿಜನ್ಸ್ ಮತ್ತು ಎಥಿಕ್ಸ್‌ನ ಸ್ಪಾಲ್ಡಿಂಗ್ ಪ್ರೊಫೆಸರ್ ಆಗಿ ನೇಮಕಗೊಂಡರು. ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಯಾಗಿದ್ದರು.


ರಾಜಕೀಯ ಜೀವನ
ಕಾಲೇಜಿನಿಂದ ನಿವೃತ್ತಿಯಾಗಿ ರಾಜಕೀಯ ಜೀವನ ಶುರು ಮಾಡಿದರು. ಸಂವಿಧಾನ ಸಭೆಗೆ ಆಯ್ಕೆಯಾದರು. ಅವರು ಯುನೆಸ್ಕೋ ಮತ್ತು ನಂತರ ಮಾಸ್ಕೋಗೆ ರಾಯಭಾರಿಯಾಗಿ ಸೇವೆ ಸಲ್ಲಿಸಿದರು. ಅವರು 1952ರಲ್ಲಿ ಭಾರತದ ಮೊದಲ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು ಮತ್ತು ಭಾರತದ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.


ಪ್ರಶಸ್ತಿ
ರಾಧಾಕೃಷ್ಣನ್ ಅವರಿಗೆ 1954 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನವನ್ನು ನೀಡಲಾಯಿತು. 1961ರಲ್ಲಿ ಜರ್ಮನ್ ಪುಸ್ತಕ ವ್ಯಾಪಾರದ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು. 1968ರಲ್ಲಿ, ಸಾಹಿತ್ಯ ಅಕಾಡೆಮಿಯು ಬರಹಗಾರರಿಗೆ ನೀಡುವ ಅತ್ಯುನ್ನತ ಗೌರವವಾದ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಅನ್ನು ನೀಡಿ ಗೌರವಿಸಲಾಯಿತು.


ರಾಧಕೃಷ್ಣನ್ ಅವರು ಏಪ್ರಿಲ್ 17, 1975ರಂದು ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.