ಜನವರಿ 27 ರಿಂದ 3 ದಿನಗಳ ಕಾಲ ಹುಬ್ಬಳ್ಳಿಯಲ್ಲಿ ಜರುಗಲಿರುವ “ಹಿಂದು ಶಕ್ತಿ ಸಂಗಮದ”ದ ಹಿನ್ನೆಲೆಯಲ್ಲಿ 27-11-2011 ರವಿವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಾಲಯ “ಕೇಶವ ಕುಂಜ”ದ ಆವರಣದಲ್ಲಿ ಘೋಷ ಅಭ್ಯಾಸ ವರ್ಗ ನಡೆಯಿತು.
ಕರ್ನಾಟಕ ಉತ್ತರ ಪ್ರಾಂತದ 16 ಜಿಲ್ಲೆಗಳಿಂದ ಆಗಮಿಸಿದ್ದ ಸ್ವಯಂಸೇವಕರಿಗೆ ಒಂದು ದಿನದ ಘೋಷ ತರಬೇತಿ ನೀಡಲಾಯಿತು. ಬಾಗಲಕೋಟೆ ಜಿಲ್ಲೆ ಮುಧೋಳದ ಶ್ರೀ ನಾಗರಾಜರವರು ಘೋಷ ಪ್ರಮುಖರಾಗಿದ್ದರು. ವಂಶಿಯಲ್ಲಿ ಮತ್ತು ಆನಕದಲ್ಲಿ ಮೀರಾ ರಚನೆ, ಶಂಖದಲ್ಲಿ ಗಾಯತ್ರಿ ಮತ್ತು ಉದಯ ರಚನೆಗಳ ವಾದನ ಮಾಡಲಾಯಿತು.
ಸ್ವಯಂಸೇವಕರು ಘೋಷ ವಾದ್ಯಗಳೊಂದಿಗೆ ಸೂರ್ಯಮಂಡಲ, ಕಿರಣ, ಚೌಕ ಹೀಗೆ ವಿವಿಧ ವಿನ್ಯಾಸಗಳನ್ನು ರಚಿಸಿ ಗಮನ ಸೆಳೆದರು.
ಪ್ರಾಥಮಿಕವಾಗಿ ಕರ್ನಾಟಕ ಉತ್ತರ ಪ್ರಾಂತದ 64 ಸ್ವಯಂಸೇವಕರಿಗೆ ಮಾತ್ರ ಈ ಅಭ್ಯಾಸ ವರ್ಗದಲ್ಲಿ ತರಬೇತಿಯನ್ನು ನೀಡಲಾಯಿತು. ನಂತರ ಉತ್ತರ ಪ್ರಾಂತದ ವಿವಿಧೆಡೆಗಳಲ್ಲಿ ಇಲ್ಲಿ ತರಬೇತಿ ಪಡೆದ ಸ್ವಯಂಸೇವಕರು ಈ ವಿನ್ಯಾಸಗಳನ್ನು ತಮ್ಮ ಕ್ಷೇತ್ರದಲ್ಲಿ ಉಳಿದ ವಾದಕರಿಗೆ ಕಲಿಸಲಿದ್ದಾರೆ. ಹಿಂದು ಶಕ್ತಿ ಸಂಗಮದಲ್ಲಿ ಒಟ್ಟು 1200 ಕ್ಕೂ ಹೆಚ್ಚು ಸ್ವಯಂಸೇವಕರು ಘೋಷ ಪ್ರದರ್ಶನ ನೀಡಲಿದ್ದು, ಇಂಥ ಪಥಕಗಳನ್ನು ಒಟ್ಟುಗೂಡಿಸಿ ರಚಿಸುವ ವಿನ್ಯಾಸ ಅಂದು ಗಮನ ಸೆಳೆಯಲಿದೆ.
ದಕ್ಷಿಣ ಪ್ರಾಂತ ಶಾರೀರಿಕ ಪ್ರಮುಖ ಶ್ರೀ ಚಂದ್ರಶೇಖರ ಜಹಗೀರದಾರರು ಮಾಧ್ಯಮದವರಿಗೆ ಮಾಹಿತಿ ನೀಡಿ “ಈವರೆಗೆ ನಮ್ಮ ದೇಶದ ಸೈನ್ಯದಲ್ಲಿ ಇಂಥ ಘೋಷ್(ಬ್ಯಾಂಡ್) ತಂಡದವರು ಕೇವಲ ಅಂಗ್ಲರ ರಚನೆಗಳನ್ನೇ ಸಾದರ ಪಡಿಸುತ್ತಿದ್ದರು. ಜಪಾನ್ ನಲ್ಲಿ ಪ್ರದರ್ಶನಕ್ಕೆ ಹೋದಾಗಿನ ಸಂದರ್ಭದಲ್ಲಿ ಭಾರತದ್ದೇ ಆದ ರಚನೆ ಬಾರಿಸಿ ಎಂದಾಗ ನಮ್ಮಲ್ಲಿ ಅಂಥಹ ಸ್ವತಂತ್ರ ರಚನೆಗಳು ಇಲ್ಲಿರಲಿಲ್ಲ. ಈ ಕಾರಣಕ್ಕಾಗಿಯೇ ಆರ್.ಎಸ್.ಎಸ್. ದೇಶೀಯ ರಾಗ, ತಾಳ ಮತ್ತು ಸ್ವರಗಳ ಸಂಯೋಜನೆಯಿಂದ ರಚಿಸಲಾಗಿರುವ ಭಾರತೀಯ ರಚನೆಗಳ ಆವಿಷ್ಕಾರ ಮಾಡಿದೆ ಎಂದರು. 1982 ರಲ್ಲಿ ನಡೆದ ಏಶಿಯಾಡ್ ಓಲಂಪಿಕ್ ಆರಂಭದಲ್ಲಿ ಮೊತ್ತ ಮೊದಲ ಬಾರಿಗೆ ದೇಶೀಯ ರಚನೆ “ಶಿವರಾಜ್” ನ್ನು ಸಂಘದ ಸ್ವಯಂಸೇವಕರು ಸಾದರ ಪಡಿಸಿದ್ದರು. ಕೊಳಲಿನಲ್ಲಿ ಶಿವರಂಜನಿ, ಹಂಸಧ್ವನಿ, ಭೀಮ ಪಲಾಸ್, ತಾಳದಲ್ಲಿ ಕೇರವಾ, ಖೇಮಟಾ, ದಾದ್ರಾ, ರೂಪಕ, ಝಂಪತಾಳ ಮೊದಲದ ತಾಳಗಳನ್ನು ಅಳವಡಿಸಿಕೊಳ್ಳಲಾಗಿದೆ” ಎಂದರು.
ಅಖಿಲ ಭಾರತೀಯ ಸಹಶಾರೀರಿಕ ಪ್ರಮುಖ ಶ್ರೀ ಜಗದೀಶ್ ಪ್ರಸಾದ್ ರವರು, ಉತ್ತರ ಪ್ರಾಂತ ಘೋಷ ಪ್ರಮುಖ ಶ್ರೀನಿವಾಸ್, ದಕ್ಷಿಣ ಪ್ರಾಂತ ಘೋಷ ಪ್ರಮುಖ ಕರುಣಾಕರ್ ಮತ್ತು ಇತರ ಹಿರಿಯ ಸ್ವಯಂಸೇವಕರ ಉಪಸ್ಥಿತರಿದ್ದರು.