ಪುತ್ತೂರು January 16: ‘ಯಾವುದೇ ಕಾರಣಕ್ಕೂ ಘರ್‌ವಾಪಾಸಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಮತಾಂತರಗೊಂಡ ಹಿಂದೂಗಳನ್ನು ಮರಳಿ ಮಾತೃಧರ್ಮಕ್ಕೆ ತರುವ ಪ್ರಯತ್ನ ಮಾತ್ರ ನಡೆಯುತ್ತಿದೆ ಇಲ್ಲಿ. ಹಾಗಿದ್ದರೆ ಮತಾಂತರ ಕಾಯಿದೆಯನ್ನೇ ಜಾರಿಗೆ ತನ್ನಿ. ಭಾರತ ದೇಶದಲ್ಲಿ ಹಿಂದೂ ಸಂವಿಧಾನ ಜಾರಿಗೆ ಬರಲಿ’-ಹೀಗೆಂದು ಘೋಷಣೆ ಮಾಡಿದವರು ವಿಶ್ವಹಿಂದೂ ಪರಿಷದ್ ಅಂತರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ತೊಗಾಡಿಯಾ.
ಅವರು ವಿಶ್ವ ಹಿಂದು ಪರಿಷದ್‌ನ ಸುವರ್ಣ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ಧೆಯಲ್ಲಿ ನಡೆದ ವಿರಾಟ್ ಹಿಂದೂ ಹೃದಯ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
‘ಮತಾಂತರಗೊಂಡ ಹಿಂದೂಗಳನ್ನು ಮಾತೃಧರ್ಮಕ್ಕೆ ಕರೆತರುವ ಪ್ರಯತ್ನ ಮಾತ್ರ ನಾವು ಮಾಡುತ್ತಿದ್ದೇವೆ. ಆದರೆ ಇದಕ್ಕೆ ಇಷ್ಟು ಬೊಬ್ಬೆ ಹೊಡೆಯುವ ಅಗತ್ಯವಿಲ್ಲ. ಏಕೆಂದರೆ ಮತಾಂತರವಾಗುವ ವೇಳೆ ಈ ಬೊಬ್ಬೆ ಏಕೆ ಇರಲಿಲ್ಲ ಎಂದು ಪ್ರಶ್ನಿಸಿದ ಅವರು, ಯಾವುದೇ ಕಾರಣಕ್ಕೂ ಘರ್‌ವಾಪಾಸಿ ಕೆಲಸ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು. ಸುಮಾರು 2000 ವರ್ಷಗಳ ಹಿಂದೆ ಇದು ಹಿಂದೂ ದೇಶವಾಗಿತ್ತು, ಮೆಕ್ಕಾ ಮದೀನ, ರೋಂ ಇತ್ಯಾದಿ ಎಲ್ಲವೂ ನಮ್ಮದೇ ಆಗಿತ್ತು. ಆದರೆ ನಂತರ ಮತಾಂತರ ಹಾಗೂ ಇತರ ಕಾರಣಗಳಿಂದ ಈಗ ಇಲ್ಲವಾಗಿದೆ. ಹಿಂದೂ ಎನ್ನಲು ಭಯವಾಗಿದೆ. ಇನ್ನು ಹಾಗಿಲ್ಲ, ಹಿಂದೂಗಳೆಲ್ಲಾ ಒಂದಾಗಿ ಭವಿಷ್ಯದ ದೃಷ್ಟಿಯಿಂದ ಸಂಘಟಿತರಾಗಬೇಕಾಗಿದೆ’ ಎಂದು ಹೇಳಿದರು.
ಹಿಂದೂ ಸಂವಿಧಾನ ಜಾರಿಯಾಗಬೇಕು ಎಂಬುದು ಗುರಿ :
ಅಖಂಡ ಭಾರತವಾಗಿದ್ದ ಭಾರತ ತುಂಡಾಗಿದೆ, ಕಾಶ್ಮೀರದಲ್ಲಿ ನಿರಂತರ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ.ಈಗಾಗಲೇ ಸುಮಾರು ೪ ಲಕ್ಷ ಹಿಂದೂಗಳನ್ನು ಮಸಲ್ಮಾನರು ಓಡಿಸಿದ್ದಾರೆ.ಅವರನ್ನೆಲ್ಲಾ ಮತ್ತೆ ಕಾಶ್ಮೀರದಲ್ಲೇ ನೆಲಸುವಂತೆ ಮಾಡಬೇಕು. ವಿಶ್ವಹಿಂದೂ ಪರಿಷದ್ ಕಳೆದ ೫೦ ವರ್ಷಗಳಲ್ಲಿ ಇಂತಹ ಕೆಲಸ ಕಾರ್ಯಗಳನ್ನೇ ಮಾಡುತ್ತಿದೆ.ರಾಮಮಂದಿರ ನಿರ್ಮಾಣ, ಹಿಂದೂ ಸಂವಿಧಾನ ರಚನೆಯೇ ನಮ್ಮ ಗುರಿ ಎಂದ ತೊಗಾಡಿಯಾ ವಿಶ್ವಹಿಂದೂ ಪರಿಷದ್ ಕಳೆದ ೫೦ ವರ್ಷಗಳಲ್ಲಿ ೨ ಲಕ್ಷಕ್ಕಿಂತಲೂ ಅಧಧಿಕ ಸೇವಾ ಕಾರ್ಯಗಳನ್ನು ಮಾಡಿದೆ. ಮುಂದಿನ ದಿನಗಳಲ್ಲಿ ಲಾಹೋರ್‌ನಲ್ಲಿ ಕೂಡಾ ಭಗವಧ್ವಜ ಹಾರಾಟ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಔರಂಬಜೇಬನ ಆಡಳಿತವೇ ? :
ಸಮೃದ್ಧವಾದ ಭಾರತದಲ್ಲಿ ಹಿಂದೂಗಳ ಆರಾಧನಾ ಕೇಂದ್ರಗಳು, ಮಠ, ಮಂದಿರಗಳನ್ನು ಈ ಹಿಂದೆ ಔರಂಗಜೇಬ ಮೊದಲಾದ ರಾಜರು ಕೊಳ್ಳೆ ಹೊಡೆದಿದರು. ಇದೀಗ ರಾಜ್ಯ ಸರ್ಕಾರ ಹಿಂದೂಗಳ ಮಠ, ಮಂದಿರಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇದೇನು ರಾಜ್ಯದಲ್ಲಿ ಮತ್ತೆ ಔರಂಬಜೇಬನ ಆಡಳಿತ ಇದೆಯೇ. ಇದಕ್ಕೆ ಯಾವುದೇ ಕಾರಣಕ್ಕೂ ಈಗ ಅವಕಾಶ ನೀಡಬಾರದು ಎಂದು ತೊಗಾಡಿಯಾ ಹೇಳಿದರು.
ಭಾರತದ ಸುರಕ್ಷತೆಗೆ ಆದ್ಯತೆ ಇರಲಿ :
ಭಾರತವನ್ನು ಮತ್ತೆ ಹಿಂದೂ ರಾಷ್ಟ್ರ ಮಾಡಲು ಎಲ್ಲರೂ ದೀಕ್ಷೆ ತೊಡಬೇಕು. ಇದಕ್ಕಾಗಿ ೩ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ದೇಶದ ಸುರಕ್ಷತೆ, ಸಮೃದ್ಧಿ ಹಾಗೂ ಗೌರವ ಕಾಪಾಡಲು ಕಟಿಬದ್ದರಾಗಬೇಕು. ಈ ಹಿನ್ನೆಲೆಯಲ್ಲಿ ಮರುಮತಾಂತರಕ್ಕೆ ಸಹಾಯ, ಲವ್‌ಜಿಹಾದ್‌ಗೆ ಉತ್ತರ, ಸಮಾನ ನೀತಿಸಂಹಿತೆ, ಅಕ್ರಮಗಳಿಗೆ ಕಡಿವಾಣ ಸೇರಿದಂತೆ ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದರು.
ಜಿಹಾದ್ ತಡೆಗೆ ಸಿದ್ದರಾಗಿ :
ದೇಶದಲ್ಲಿ ವಿವಿಧ ರೀತಿಯಲ್ಲಿ ಜಿಹಾದ್‌ಗಳು ನಡೆಯುತ್ತಿದೆ.ಲವ್ ಜಿಹಾದ್, ಪ್ರಾಪರ್ಟಿ ಜಿಹಾದ್, ಬಾಂಬ್ ಜಿಹಾದ್,ಆರ್ಥಿಕ ಜಿಹಾದ್ ಹೀಗೆ ವಿವಿಧ ರೀತಿಯಲ್ಲಿ ಜಿಹಾದ್ ನಡಸಿ ದೇಶವನ್ನು ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ.ಆದರೆ ಇದನ್ನೆಲ್ಲಾ ಮೆಟ್ಟಿ ನಿಲ್ಲಲು ಇಂದೇ ಸಂಕಲ್ಪ ಬದ್ದರಾಗಬೇಕು. ಹಿಂದೂಗಳಿಗೇ ಆದ್ಯತೆ ನೀಡಿ ವ್ಯವಹಾರ ಮಾಡಬೇಕು ಎಂದು ತೊಗಾಡಿಯಾ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ.ಕಲ್ಲಡ್ಕ ಪ್ರಭಾಕರ ಭಟ್, ಹಿಂದೂ ಸಮಾಜವು ಕಳೆದ ಅನೇಕ ವರ್ಷಗಳಿಂದ ಧಾಳಿಗೆ ಒಳಗಾಗುವುದರ ಜೊತೆಗೆ ಮೋಸದ ಬಲೆಯೊಳಗೆ ಸಿಲುಕಿಸಿ ವಂಚನೆಗೂ ಒಳಗಾಗಿದೆ. ಹೀಗಾಗಿ ಈಗ ಎಚ್ಚೆತ್ತುಕೊಂಡಿದ್ದಾರೆ. ಜಗತ್ತಿಗೆ ಒಳ್ಳೆಯದನ್ನು ಬಯಸುವ ಏಕೈಕ ಧರ್ಮ ಹಿಂದೂ ಧರ್ಮ ಮಾತ್ರ. ಈಗ ಇಲ್ಲಿ ನಮ್ಮವರಿಂದಲೇ ಅನ್ಯಾಯವಾಗುತ್ತಿದೆ. ಮರುಮತಾಂತರದ ಬಗ್ಗೆ ಮಾತನಾಡುವ ಮಂದಿ ಮತಾಂತರದ ಬಗ್ಗೆ ಮಾತನಾಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು. ಗೋಹತ್ಯೆ ಬಗ್ಗೆ ಮಾತನಾಡಿದರೆ ಜೈಲು, ಲವ್‌ಜಿಹಾದ್ ಮೂಲಕ ವಂಚನೆ, ಕಳ್ಳತನದ ಮೂಲಕ ದೇಶವನ್ನೇ ಕೊಳ್ಳೆ ಹೊಡೆಯುವ ಕೆಲಸವಾಗುತ್ತಿದೆ. ಇದಕ್ಕೆಲ್ಲಾ ಈಗ ಉತ್ತರಿಸುವ ಕಾಲ ಬಂದಿದೆ ಎಂದರು. ಮತಾಂತರ ಮಾಡುವ ಬಗ್ಗೆ ಹಿಂದೂ ಧರ್ಮಕ್ಕೆ ವಿಶ್ವಾಸ ಇಲ್ಲ, ಆದರೆ ಮರಳಿ ಮಾತೃಧರ್ಮಕ್ಕೆ ಆಗಮಿಸುವ ಮಂದಿಯನ್ನು ಸ್ವಾಗತಿಸುವ ಮತ್ತು ಆಹ್ವಾನಿಸುವ ಕೆಲಸ ಮಾಡುತ್ತದೆ ಎಂದರು. ಹಿಂದೂಗಳಿಗೆ ದೇಶವೂ ದೇವರೂ ಎರಡೂ ಒಂದೇ, ಹೀಗಾಗಿ ಸಂಕುಚಿತರಾಗದೆ ದೇವರ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ವಜ್ರದೇಹಿ ಗುರುಪುರ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಯೋಗಿ ಕೌಸ್ತುಭ ಮೋಹನದಾಸ ಸ್ವಾಮೀಜಿ, ಕನ್ಯಾನ ಬಾಳೆಕೋಡಿ ಶಿಲಾಂಜನ ಶಶಿಕಾಂತ ಮಣಿಸ್ವಾಮೀಜಿ, ಉದ್ಯಮಿ ಕುಡ್ಗಿ ಸುಧಾಕರ ಶೆಣೈ, ಬಂಟ್ವಾಳ ತಾಪಂ ಮಾಜಿ ಅಧ್ಯಕ್ಷ ಬಾಬು ಮುಗೇರ, ವಿಹಿಂಪ ಪ್ರಮುಖರಾದ ಕೃಷ್ಣಮೂರ್ತಿ, ಗೋಪಾಲ್‌ಜೀ, ರಾಜಮಾತಾ ಚಂದ್ರಕಾಂತ ದೇವಿ, ಮೀನಾಕ್ಷಿ ಪೇಶ್ವೆ,ಜರಂಗದಳ ಪ್ರಮುಖ ಶರಣ್ ಪಂಪ್‌ವೆಲ್, ಭಾಸ್ಕರ ಧರ್ಮಸ್ಥಳ ಉಪಸ್ಥಿತರಿದ್ದರು.
ವಿರಾಟ್ ಹಿಂದೂ ಹೃದಯ ಸಂಗಮ ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಪ್ರಸಾದ್ ಸ್ವಾಗತಿಸಿ, ವಿಶ್ವಹಿಂದೂ ಪರಿಷದ್ ಕಾರ್ಯಗಳ ಬಗ್ಗೆ ಜಿಲ್ಲಾ ವಿಹಿಂಪ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಮಾತನಾಡಿದರು. ವಿಶ್ವಹಿಂದೂ ಪರಿಷದ್ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಪ್ರಸ್ತಾವನೆಗೈದರು. ಪುತ್ತೂರು ವಿಹಿಂಪ ಅಧ್ಯಕ್ಷ ಡೀಕಯ್ಯ ಪೆರುವೋಡಿ ವಂದಿಸಿದರು.
ಸ್ವಾಮೀಜಿಗಳು ಹೀಗೆ ಮಾತನಾಡಿದರು.
- ಹಿಂದೂ ಸಮಾಜ ಮೃತ್ಯುಂಜಯ ಸಮಾಜ. ರತ್ನಾಕರ ಎಂಬ ಹೆಸರಿನ ಸಮುದ್ರ ಅರಬೀ ಸಮುದ್ರವಾಯಿತು. ಆದರೆ ಪುತ್ತೂರಿನಲ್ಲಿ ಹಿಂದೂ ಮಹಾಸಾಗರವೇ ಸೇರಿತು. ಹಿಂದೂಗಳ ಮೇಲೆ ದೌರ್ಜನ್ಯ ಮಾಡುವ ಸರ್ಕಾರವನ್ನು ಕಿತ್ತೊಗೆಯಬೇಕು, ಆ ಕಾಲ ಬಂದಿದೆ. ಭಟ್ಕಳದಲ್ಲಿ ಭಯೋತ್ಪಾದಕರ ಬಗ್ಗೆ ಮಾತನಾಡಲು ಸರ್ಕಾರಕ್ಕೇ ಭಯವಾಗುತ್ತದೆ, ಆದರೆ ಹಿಂದೂಗಳ ಮೇಲೆ ಯಾವುದೇ ಭಯವಿಲ್ಲ ಈ ಸರ್ಕಾರಕ್ಕೆ. ಮುಂದೆ ತಾಲೂಕು ಮಟ್ಟದಲ್ಲಿ ಹಿಂದೂ ಸಂಘಟನೆ ಆಗಲೇಬೇಕಾಗಿದೆ. – ವಜ್ರದೇಹಿ ಗುರುಪುರ ಶ್ರಶ್ರೀ ರಾಜಶೇಖರಾನಂದ ಸ್ವಾಮೀಜಿ
- ಈಗ ಹಿಂದೂ ಎನ್ನಲು ಯಾರಿಗೂ ಭಯವಿಲ್ಲ. ಏಕೆಂದರೆ ಕೆಲವರು ಬಣ್ಣ ಬದಲಾಯಿಸುತ್ತಿದ್ದಾರೆ. ಅವರನ್ನು ಸ್ವಾಗತಿಸಬೇಕು ಹಾಗೂ ಅಭಿನಂದಿಸಬೇಕು. ಈ ಹಿಂದೆ ಓಲೈಕೆಯನ್ನೇ ಮಾಡುತ್ತಿದ್ದವರು ಈಗ ಹಿಂದೂ ಶಕ್ತಿಯ ಬಗ್ಗೆ ಅವರಿಗೂ ಅರಿವಾಗಿದೆ. ಹಿಂದೂ ಸಮಾಜ ಇನ್ನಷ್ಟು ಗಟ್ಟಿಯಾಗಲಿ, ಇದಕ್ಕಾಗಿ ಎಲ್ಲರೂ ಶ್ರಮಿಸೋಣ – ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ.
- ಗೋಮಾತೆ ಹಾಗೂ ತಾಯಂದಿರ ಮೇಲೆ ಇಲ್ಲಿ ನಿರಂತರ ಅನ್ಯಾಯಾ, ಅತ್ಯಾಚಾರ ಅನಾಚಾರಗಳು ನಡೆಯುತ್ತಲೇ ಇದೆ. ಹೀಗಾಗಿ ರಕ್ಷಣೆ ಅನಿವಾರ್ಯ. ಪ್ರತಿಯೊಬ್ಬರೂ ಎಚ್ಚೆತ್ತುಕೊಂಡು ದೇಶದ ರಕ್ಷಣೆಯಲ್ಲಿ ತೊಡಗಬೇಕು.ಭಯೋತ್ಪಾದನೆ ಇತ್ಯಾದಿ ವಿಚಾರಗಳಲ್ಲಿ ಜಾಗೃತರಾಗಬೇಕು. ಕುರಿಗಿಂತ ಕನಿಷ್ಟವಾಗಿರುವ ರಾಜಕಾರಣಿಗಳ ಬುದ್ದಿಯಲ್ಲಿ ಅಧಿಕಾರ ಮಾತ್ರ ಕಾಣಿಸುತ್ತದೆ – ಶ್ರೀಧಾಮ ಮಾಣಿಲದ ಶ್ರೀ ಯೋಗಿ ಕೌಸ್ತುಭ ಮೋಹನದಾಸ ಸ್ವಾಮೀಜಿ