ಲೇಖಕರು: ಡಾ. ಗೀತಾ ಕುಮಾರಿ ಟಿ, ಕನ್ನಡ ಸಹಾಯಕ ಪ್ರಾಧ್ಯಾಪಕಿ, ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು

ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ
ವೆಲ್ಲವರಿಗಿಲ್ಲ ಸರ್ವಜ್ಞ

ಸರ್ವಜ್ಞನ ಹೆಸರನ್ನು ಕೇಳಿದ ತಕ್ಷಣ ಆತನ ಪ್ರಾಸಬದ್ಧ ತ್ರಿಪದಿಗಳು ನೆನಪಾಗುವುದು ಸಹಜ. ಸದಾ ಲೋಕಸಂಚಾರಿಯಾದ ಸರ್ವಜ್ಞ ತನ್ನ ಜೀವನದ ಬಹುಭಾಗವನ್ನು ಪರ್ಯಟನೆಗೆ ಬಳಸಿಕೊಂಡು ಸಾಕಷ್ಟು ಜೀವನಾನುಭವವನ್ನು ಪಡೆದುಕೊಂಡವನು. ಚಂಪೂವಿಗೆ ಪಂಪ, ರಗಳೆಗೆ ಹರಿಹರ, ವಚನಗಳಿಗೆ ಬಸವಣ್ಣ, ಷಟ್ಪದಿಗೆ ಕುಮಾರವ್ಯಾಸ ಇರುವಂತೆ ತ್ರಿಪದಿಗೆ ಸರ್ವಜ್ಞನೇ ಮೇರುಕವಿ. ಈತನನ್ನು ತ್ರಿಪದಿ ಬ್ರಹ್ಮ ಎಂದು ಗುರುತಿಸಲಾಗಿದೆ.

ಸರ್ವಜ್ಞನ ಹುಟ್ಟಿನ ಹಿನ್ನಲೆಯ ಕುರಿತು ಜಿಜ್ಞಾಸೆಗಳಿವೆಯಾದರೂ ಈತನ ತಂದೆ ಹಾವೇರಿ ಜಿಲ್ಲೆಯ ಮಾಸೂರಿನ ಬಸವರಸ ಎಂಬ ಬ್ರಾಹ್ಮಣ ಮತ್ತು ತಾಯಿ ಹಾವೇರಿಯ ಅಬಲೂರಿನ ಕುಂಬಾರ ಮಾಳಿ ಎಂಬುದನ್ನು ಆತನ ಒಂದು ವಚನದಿಂದ ತಿಳಿಯಬಹುದು. ಆತನ ಕಾಲದ ವಿಚಾರವಾಗಿ 1300-1800 ರ ನಡುವಿನ ಭಾಗ ಎಂಬ ಗೊಂದಲವಿದ್ದರೂ ಆತ ಬಳಸಿದ ಭಾಷೆ, ಪೂರ್ವಕವಿಗಳ ಅನುಕರಣೆ ಇತ್ಯಾದಿಗಳ ಆಧಾರದಲ್ಲಿ 16ನೇ ಶತಮಾನದ ನಡುಭಾಗದವನು ಎಂದು ಗುರುತಿಸಲಾಗಿದೆ. ಈತನ ವಚನಗಳ ವಸ್ತುವಿನ ಆಧಾರದಲ್ಲಿ ವೀರಶೈವಕವಿ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಜಾನಪದ ಕವಿಯಂತೆ ಗ್ರಾಮೀಣತೆ, ಆಶು ಕಾವ್ಯತ್ವ ಅವನ ಕಾವ್ಯ ಶ್ರೀಮಂತಿಕೆಯಾಗಿದೆ. ತನ್ಮೂಲಕ ಅವನ ತ್ರಿಪದಿಗಳು ಸಾರುವ ಲೋಕಾನುಭವದ ಪಾಠವೂ ಶ್ರೀಮಂತವಾದುದೇ ಆಗಿದೆ. ಸುಮಾರು ಏಳು ಸಾವಿರದಷ್ಟು ತ್ರಿಪದಿಗಳು ಆತನ ಹೆಸರಿನಲ್ಲಿ ದೊರೆತರೂ ಅವುಗಳಲ್ಲಿ ಪ್ರಕ್ಷಿಪ್ತವೂ ಇವೆ. ಒಂದು ಸಾವಿರ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ.

ಸರ್ವಜ್ಞನು ತ್ರಿಪದಿಗಳಲ್ಲಿ ವಚನಕಾರರಿಗೆ ಸಾಕಷ್ಟು ಋಣಿಯಾಗಿದ್ದಾನೆ. ಇವನ ತ್ರಿಪದಿಗಳನ್ನು ವಚನಗಳು ಎಂದು ಕರೆದರೂ ಇವು ಶಿವಶರಣರ ವಚನಗಳಿಗಿಂತ ಭಿನ್ನವಾದವು. ವಚನಗಳು ಗದ್ಯ ಪದ್ಯ ಮಿಶ್ರಿತವಾಗಿದ್ದು ಸಾಲುಗಳು ಎಷ್ಟೂ ಇರಬಹುದಾದರೆ, ಸರ್ವಜ್ಞ ಬರೆದಿರುವುದು ನಿಯಮಬದ್ಧವಾದ ಮೂರೇ ಸಾಲು. ಆದರೂ ಜನಪದ ತ್ರಿಪದಿಗಳಿಗಿಂತ ಭಿನ್ನ. ಜನಪದ ತ್ರಿಪದಿಯಲ್ಲಿ ಕವಿ ಪರಿಚಯ ಸಿಗುವುದಿಲ್ಲ, ಮಾತ್ರವಲ್ಲ ಅಂಕಿತವೂ ಇಲ್ಲ. ಇಲ್ಲಿ ಅಂಕಿತ ಸರ್ವಜ್ಞ ಅಂತ ಇದೆ. ಅದು ಅವನ ಹೆಸರಲ್ಲ. ಆತನ ಕಾವ್ಯದ ಅಂಕಿತವಾಗಿದೆ. ಅಥವಾ ಅವನ ಅನುಭವಕ್ಕೆ ಜನ ಕೊಟ್ಟ ಹೆಸರೂ ಆಗಿರಬಹುದು. ಸರ್ವಜ್ಞನ ತ್ರಿಪದಿಗಳಲ್ಲಿ ಬರುವ ‘ಸರ್ವಜ್ಞನೆಂಬವನು ಓರ್ವನೆ ಜಗಕೆಲ್ಲ’, ‘ಒಬ್ಬ ಸರ್ವಜ್ಞ ಕರ್ತನು’ ಇತ್ಯಾದಿ ಸಾಲುಗಳು ಸರ್ವಜ್ಞ ಆತನ ಇಷ್ಟದೇವತೆ ಇರಬಹುದು, ಅದು ಅಂಕಿತವೆ ಹೊರತು ನಿಜನಾಮ ಅಲ್ಲ ಎಂಬುದನ್ನು ತಿಳಿಸುತ್ತದೆ. ಆದ್ದರಿಂದ ಕೃತಿಯಲ್ಲಿ ಕವಿ ಮರೆಯಾಗಿದ್ದಾನೆ ಎಂದೇ ಹೇಳಬಹುದು. ಹಾಗಾಗಿ ಇವನ ಸಾಹಿತ್ಯ ಜನಪದ ಪರಂಪರೆಯ ಸಾಲಿಗೂ ಸೇರುತ್ತದೆ. ಒಂದು ತಿಳುವಳಿಕೆಯ ಪ್ರಕಾರ ಆತನ ಹೆಸರು ಪುಷ್ಪದತ್ತ ಎಂದು ಹೇಳಲಾಗಿದೆ.

ಮುಕ್ತಕ ಅಥವಾ ಸುಭಾಷಿತ ವಿಧಾನದ ಬಳಕೆಯ ಮೂಲಕ ವಿಶಿಷ್ಟ ಶೈಲಿಯನ್ನು ಸರ್ವಜ್ಞ ರೂಪಿಸಿಕೊಂಡಿದ್ದಾನೆ. ಈ ತ್ರಿಪದಿಗಳು ಬಿಡಿ ಬರಹಗಳಂತೆ ಕಂಡರೂ, ಒಂದು ವಿಷಯಕ್ಕೆ ಸಂಬಂಧಿಸಿದ ತ್ರಿಪದಿಗಳನ್ನು ಒಂದೆಡೆ ಜೋಡಿಸಿದಾಗ ನೀತಿಕಾವ್ಯದಂತೆ ಗೋಚರಿಸುತ್ತದೆ. ಸರ್ವಜ್ಞ ಕವಿಯಾಗಲು ಹೊರಟವನಲ್ಲ. ಆಧ್ಯಾತ್ಮಿಕ ಸಾಧನೆ ಮಾಡ ಹೊರಟಾಗ ಅದರ ಭಾಗವಾಗಿ ಕವಿತೆ ಮೂಡಿದ್ದು ಕಂಡು ಬರುತ್ತದೆ. ಕೆಲವು ತ್ರಿಪದಿಗಳು ಕಾವ್ಯದಂತೆ ಕಂಡರೂ ಅಲ್ಲಿ ದರ್ಶನಾಭಿವ್ಯಕ್ತಿಯಿದೆ. ಭಾವಗೀತೆಯ ತೀವ್ರತೆಯಿದೆ. ಅದರಲ್ಲಿ ಸರಳತೆ, ಪ್ರಾಸಬದ್ಧತೆಯಿದೆ, ಈ ನಾಡಿನ ಮಣ್ಣಿನ ಸೊಗಡು, ಬೆಡಗು ಇದೆ. ಆತನ ಅಪಾರ ಅನುಭವ, ದೊರಕಿಸಿಕೊಂಡ ವಿದ್ಯೆ, ಅಹಂಕಾರ ರಹಿತ ಕಲಿಕೆ ಇವು ಆತನ ಕಾವ್ಯದ ಗುಣವನ್ನು ವೃದ್ಧಿಸಿವೆ.
ಸತ್ಯವನ್ನು ನುಡಿಯುವ ಧೈರ್ಯ, ನೇರವಾದ ನಡೆ, ಸಮಾಜದ ಲೋಪದೋಷಗಳನ್ನು ಹೇಳುವ ಕೆಚ್ಚು ಅವನ ವಿಶಿಷ್ಟ ಶೈಲಿಯಾಗಿದೆ. ಸರ್ವಜ್ಞನಲ್ಲಿ ಕನ್ನಡ ಪ್ರಜ್ಞೆ ಇದೆ. ಅನನ್ಯವಾದ ಕನ್ನಡತನವನ್ನು ಮೆರೆದ ಕವಿ ಆತ.

ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ವಿಡಂಬನೆ, ಕಟುತ್ವ, ಕೊಂಕು ಬಳಕೆಯ ಮೂಲಕ ಸಮಾಜ ಸುಧಾರಕನಾಗಿ ಕಾಣಿಸುತ್ತಾನೆ. ಆತನ ಸಮಾಜ ಪ್ರಜ್ಞೆ, ಜನಜೀವನ ದರ್ಶನ ಅಮೋಘವಾದದ್ದು. ಮನರಂಜನೆ ಮಾತ್ರ ಈತನ ಸಾಹಿತ್ಯದ ಗುರಿಯಲ್ಲ. ಜೀವನ ವಿಮರ್ಶೆ, ಆತ್ಮೋದ್ಧಾರ, ಸಮಾಜ ಕಲ್ಯಾಣವು ಆತನ ಬದುಕಿನ ಭಾಗವೂ ಕಾವ್ಯದ ಮೂಲೋದ್ದೇಶವೂ ಆಗಿದೆ. ವಿಸ್ತಾರವಾದ ಲೋಕಾನುಭವದ ಹಿನ್ನೆಲೆಯಲ್ಲಿ ಜೀವನ ಮೌಲ್ಯವನ್ನು ರೂಪಿಸಿದ ನೆಲೆಯಲ್ಲಿ ಸರ್ವಜ್ಞ ಸಾರ್ವಕಾಲಿಕನೂ ಸಾರ್ವತ್ರಿಕನೂ ಆಗಿ ಮನ್ನಣೆ ಪಡೆಯುತ್ತಾನೆ.

ಸರ್ವಜ್ಞನ ಕಾವ್ಯದ ಒಂದು ಮುಖ ಎಂಬಂತೆ ಆತನ ನಡೆ ನುಡಿಯಲ್ಲಿ ಕ್ರಾಂತಿಕಾರಿ ನಿಲುವನ್ನು ನೋಡಿದರೆ ಇನ್ನೊಂದು ಮುಖವಾಗಿ ಆತನೊಬ್ಬ ವಿರಕ್ತ, ಆಧ್ಯಾತ್ಮ ಸಾಧಕ ಎಂಬುದು ಸುಸ್ಪಷ್ಟ. ಸುತ್ತಣ ಸಮಾಜ ಮತ್ತು ಲೋಕವೇ ಅವನ ಗುರು. ವಿಶ್ವಪ್ರಜ್ಞೆ ಉಳ್ಳ ದಾರ್ಶನಿಕನೀತ. ಸಾಧು, ಶಿವಯೋಗಿ ಮಾತ್ರವಲ್ಲ, ಲೋಕಕಾರುಣ್ಯವುಳ್ಳ ಸಂತ. ಇವನ ತ್ರಿಪದಿಗಳಲ್ಲಿ ಒಂದು ಕಡೆ ಜಾತಿಬೇಧವನ್ನು ಖಂಡಿಸಿ ಸಮಾಜದಲ್ಲಿ ತಾರತಮ್ಯ ದೂರವಾಗಿ ಸಮಾನತೆಯನ್ನು ಬಯಸುವ ಮಾದರಿ ಇದ್ದರೆ, ಇನ್ನೊಂದು ಕಡೆ ಜ್ಞಾನದ ಬೆಳಕಿನಲ್ಲಿ ಮುನ್ನಡೆದು ಆತ್ಮಸಾಕ್ಷಾತ್ಕಾರವನ್ನು ಬಯಸುವ ಅನನ್ಯ ತುಡಿತವನ್ನು ಹೊಂದಿರುವುದನ್ನು ಕಾಣಬಹುದು.

ಸರ್ವಜ್ಞನ ತ್ರಿಪದಿಗಳ ವಸ್ತುವಿನ ಹರಹು ವಿಶಾಲವಾದುದು. ಸಮಾಜದಲ್ಲಿ ಬೇರುಬಿಟ್ಟ ಜಾತಿಯ ಅಸಮಾನತೆ, ಲಿಂಗತಾರತಮ್ಯ ಇತ್ಯಾದಿಗಳನ್ನು ಖಂಡಿಸುವುದರ ಜೊತೆಗೆ ಆರೋಗ್ಯ, ಕಲೆ, ಸಾಹಿತ್ಯ, ಉದ್ಯೋಗ, ದಾನದ ಮಹತ್ವ, ಗುರುವಿನ ಮಹಿಮೆ ಇತ್ಯಾದಿ ಅರಿವನ್ನು ಮೂಡಿಸುವ ಮಾದರಿಯ ತ್ರಿಪದಿಗಳನ್ನು ರಚಿಸಿದ್ದಾನೆ. ಇದರ ಜೊತೆಗೆ ಜ್ಯೋತಿಷ್ಯ, ಕಾಲಜ್ಞಾನ, ಜ್ಞಾನ, ಮುಕ್ತಿ ಮಾರ್ಗ, ವೇದಾಂತ- ಹೀಗೆ ವ್ಯಕ್ತಿಸಾಧನೆಗೆ ಪೂರಕವಾದ ಹಲವು ಸಂಗತಿಗಳು ಅನುಭವಜನ್ಯವಾಗಿ ಹೊರಹೊಮ್ಮಿವೆ. ಒಗಟಿನ ಮಾದರಿಯಲ್ಲೂ ಇರುವ ಈತನ ತ್ರಿಪದಿಗಳು ತಮ್ಮಅರ್ಥವಿಸ್ತಾರದ ಮೂಲಕ ಓದುಗರ ಜ್ಞಾನವಿಸ್ತರಣೆಗೆ ಅವಕಾಶವನ್ನು ಮಾಡಿಕೊಟ್ಟಿದೆ.

ಸಮಾಜದಲ್ಲಿ ಮನುಷ್ಯ ಬಾಳಬೇಕಾದ ಕ್ರಮವನ್ನು ಸರ್ವಜ್ಞ ಬಹಳ ಚೆನ್ನಾಗಿ ಗುರುತಿಸಿದ್ದಾನೆ.

ಮಾತು ಬಂದಲ್ಲಿ ತಾ ಸೋತು ಬರುವುದು ಲೇಸು
ಮಾತಿಂಗೆ ಮಾತ ಮಥನಿಸೆ ವಿಧಿ ಬಂದು
ಆತುಕೊಂಡಿಹುದು ಸರ್ವಜ್ಞ

ಇದು ಮಾತು ವಿರಸಕ್ಕೆ ತಿರುಗದಂತೆ ವಹಿಸಬೇಕಾದ ಜಾಗೃತೆ, ಮಾತಿನ ಮಹತ್ವವನ್ನು ತಿಳಿಸುತ್ತದೆ. ಮಾತು ಬಲ್ಲಾತನಿಗೆ ಅದು ಮಾಣಿಕ್ಯವಾದರೆ, ಮಾತನಾಡಲರಿಯದವನಿಗೆ ಅದು ತೂತಾದ ಮಾಣಿಕ್ಯದಂತೆ ವ್ಯರ್ಥ. ಸಂದರ್ಭೋಚಿತ ಮಾತು ಬಹಳ ಮುಖ್ಯ ಎಂಬುದನ್ನು ಮನಗಾಣಬೇಕಾದ ಅವಶ್ಯಕತೆ ಇದೆ. ಮಾತಿಗೆ ಸಂಬಂಧಿಸಿದ ಇಂತಹ ಹಲವಾರು ತ್ರಿಪದಿಗಳು ದೊರೆಯುತ್ತವೆ. ಹೀಗೆ ಬೇರೆಬೇರೆ ವಿಷಯಕ್ಕೆ ಸಂಬಂಧಿಸಿ ತನ್ನ ಜ್ಞಾನದ ಪರಿಧಿಯಲ್ಲಿ ಕಟ್ಟಿಕೊಟ್ಟ ಕಾವ್ಯಮುತ್ತುಗಳು ಆತನ ಜ್ಞಾನಸಾಗರವನ್ನೇ ಪರಿಚಯಿಸುತ್ತದೆ. ಇಷ್ಟೆಲ್ಲ ಜೀವನಪಾಠವನ್ನು ಹೇಳಿಯಾದ ಬಳಿಕವೂ ಆತ ತನ್ನನ್ನು ತಾನು ಕಂಡುಕೊಳ್ಳುವುದು ವಿನಯದ ಮೂಲಕ, ವಿನಮ್ರತೆಯ ಮೂಲಕ. ಅದು ಮನುಷ್ಯ ಕಲಿಕೆಯ ಮೊದಲ ಪಾಠ, ಕಲಿತ ನಂತರವೂ ಮರೆಯಬಾರದ ಪಾಠವೂ ಹೌದು.

ಸರ್ವಜ್ಞನೆಂಬುವನು ಗರ್ವದಿಂದಾದವನೆ
ಸರ್ವರೊಳೊಂದೊಂದು ನುಡಿಗಲಿತು ವಿದ್ಯದ
ಪರ್ವತವೆ ಆದ ಸರ್ವಜ್ಞ

ಪರಿಪೂರ್ಣ ವ್ಯಕ್ತಿತ್ವದ ಹಾದಿ ಸುಗಮವಾದದ್ದೇನಲ್ಲ, ಅದನ್ನು ಸಾಧಿಸಿಕೊಳ್ಳುವ ಮಾರ್ಗ ಕಠಿಣವೇ ಆದರೂ ಮಾರ್ಗ ಇದ್ದೇ ಇದೆ. ಅದನ್ನು ಸಾಧಿಸಿ ತೋರಿಸಿದವನು ಸರ್ವಜ್ಞ. ಇದು ಸರ್ವಜ್ಞ ಸಮಾಜಕ್ಕೆ ನೀಡಿದ ಸಾರ್ವಕಾಲಿಕ ಮೌಲ್ಯವಾಗಿದೆ. ಇದನ್ನು ಅರಿತು ನಡೆಯಲು ಇದು ಸಕಾಲವಾಗಿದೆ. ಸರ್ವರಿಗೂ ಸರ್ವಜ್ಞ ಜಯಂತಿಯ ಶುಭಾಶಯಗಳು.

Leave a Reply

Your email address will not be published.

This site uses Akismet to reduce spam. Learn how your comment data is processed.