ಸುಬ್ರಹ್ಮಣ್ಯ : ಸಾವಿರಾರು ವರ್ಷಗಳಿಂದ ಹಿಂದೂ ಸಮಾಜದಲ್ಲಿ ಅಂಟಿದ ಮೇಲು- ಕೀಳುಗಳೆಂಬ ತಾರತಮ್ಯವನ್ನು ತೊಳೆದುಹಾಕುವ ನಿಟ್ಟಿನಲ್ಲಿ ಮಂಗಳೂರು ವಿಭಾಗದಾದ್ಯಂತ ತುಡರ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಅದೇ ರೀತಿಯಲ್ಲಿ ಸುಬ್ರಹ್ಮಣ್ಯದ ‘ಸಾಮರಸ್ಯ’ದ ತಂಡ ಕಳೆದ ಬಾರಿಯಂತೆ ಈ ಬಾರಿಯೂ ಕಾರ್ಯಕ್ರಮದ ಯೋಜನೆ ಹಾಕಿತ್ತು. ಈ ಬಾರಿ ಸುಬ್ರಹ್ಮಣ್ಯದ ವಾಲಗದಕೇರಿಯಲ್ಲಿ ಮಾಡುವಂತೆ ಯೋಜನೆ ರೂಪಿಸಲಾಗಿತ್ತು. ಅದರಂತೆ ಆ ಭಾಗದ ಸಮಾಜದ ಪ್ರಮುಖರ ಜೊತೆ ಚರ್ಚೆ ಮಾಡಿದಾಗ ಕಾರ್ಯಕ್ರಮಕ್ಕೆ ನಗುಮುಖದಲ್ಲಿಯೇ ಕಾರ್ಯಕ್ರಮ ಮಾಡುವುದಕ್ಕೆ ಸ್ವಾಗತ ನೀಡಿದರು. ಈ ಬಾರಿಯ ಕಾರ್ಯಕ್ರಮಕ್ಕೆ ಚಿತ್ರದುರ್ಗದ ಸಂತರಾದ ಮಾದಾರ ಚೆನ್ನಯ್ಯ ಸ್ವಾಮಿಗಳು ಸುಬ್ರಹ್ಮಣ್ಯಕ್ಕೆ ಮೂರು ದಿನ ಮುಂಚಿತವಾಗಿ ಆಗಮಿಸಿ ಕುಕ್ಕೆಯಲ್ಲಿ ಸರ್ಪಸಂಸ್ಕಾರ ಇನ್ನಿತರ ಧಾರ್ಮಿಕ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡದಲ್ಲದೆ ಸುಬ್ರಹ್ಮಣ್ಯದ ಒಟ್ಟು ವಾತಾವರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಜೆ 5 ಗಂಟೆಗೆ ಮಂಗಳಾರತಿ ನೆರವೇರಿದ ನಂತರ ಗರ್ಭಗುಡಿ ಮಂಗಳಾರತಿಯನ್ನು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೆಯೆ ಪರಿವಾರದ ಪ್ರಮುಖರು, ಉಪೇಕ್ಷಿತ ಬಂಧುಗಳ ಗುರಿಕ್ಕಾರ್ ಅವರ ಸಮ್ಮುಖದಲ್ಲಿ ದೀಪ ಉರಿಸಿ ನಂತರ ಚೆಂಡೆ ವಾದ್ಯಘೋಷಗಳ ಜೊತೆ ಪುಟಾಣಿ ಮಕ್ಕಳು ತಮ್ಮ ಸೈಕಲ್ಲಿಗೆ ಧ್ವಜ ಶೃಂಗಾರಗಳನ್ನು ಮಾಡಿ ಸೈಕಲ್ ನಲ್ಲಿ ಸಾಮರಸ್ಯದ ಸಂದೇಶಗಳನ್ನು ಪ್ರದರ್ಶಿಸುತ್ತ ಮೆರವಣಿಗೆಯು ವಾಲಗದಕೇರಿಯು ತಲುಪಿತು. ವಾಲಗದಕೇರಿಯ ಸುಮಾರು 18 ಮನೆಗಳಿಗೆ ಭೇಟಿಕೊಟ್ಟು, ಪ್ರತಿ ಮನೆಯ ದೇವರಕೋಣೆಯಲ್ಲಿ ಸ್ವತಃ ಸ್ವಾಮಿಗಳೇ ದೀಪ ಹಚ್ಚಿದರು. ಪ್ರತಿ ಮನೆಯವರಿಗೂ ಹಬ್ಬದ ಪ್ರಯುಕ್ತ ಹೊಸ ಬಟ್ಟೆಗಳನ್ನು ನೀಡಲಾಯಿತು. 18 ಮನೆಗಳ ಭೇಟಿಯ ನಂತರ ಗೋ ಪೂಜೆ ನೆರವೇರಿತು. ಸಭಾಕಾರ್ಯಕ್ರಮದ ಮುಂಚಿತವಾಗಿ ಕಂಗಿಲು ಜಾನಪದ ನೃತ್ಯ ಪ್ರದರ್ಶನ ಮಾಡುವ ಮೂಲಕ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಲಾಯಿತು. ಸಾಮರಸ್ಯದ ಸಂದೇಶ ಸಾರುವ ವೈಯಕ್ತಿಕ ಗೀತೆಯ ನಂತರ ಸ್ವಾಮೀಜಿಯವರು ಮಾತನಾಡಿ, “ಸಮಾಜದಲ್ಲಿ ಅಸ್ಪೃಶ್ಯತೆ, ಮಡಿ, ಮೈಲಿಗೆ, ಜಾತಿ, ವರ್ಣ ಭೇದಗಳನ್ನು ಬಿಟ್ಟು ನಾವೆಲ್ಲ ಒಂದು ಸಮಾಜವಾಗಿ ಬದುಕೋಣ”, ಎಂದು ಕಾರ್ಯಕ್ರಮದಲ್ಲಿ ಸಾಮರಸ್ಯಕ್ಕೆ ಬೇಕಾದ ಮುಖ್ಯವಾದ ತೆರೆದ ಮನಸ್ಸುಗಳು ಯಾವುದು ಅನ್ನುವುದರ ಕುರಿತಾಗಿ ಸವಿಸ್ತಾರವಾಗಿ ವಿವರಿಸಿದರು.
ಸಭಾ ಕಾರ್ಯಕ್ರಮದ ನಂತರ ಕುಟುಂಬಗಳು ಜೊತೆ ಕುಳಿತು ಸಹಭೋಜನ ಮಾಡಲಾಯಿತು. ಕಾರ್ಯಕ್ರಮದ ಕುರಿತು “ಹೀಗೆ ಈ ಒಂದು ಕಾರ್ಯಕ್ರಮ ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುವ ದುಷ್ಟಶಕ್ತಿಗಳಿಗೆ ಒಂದು ಒಳ್ಳೆಯ ಸಂದೇಶದ ರೂಪದಲ್ಲಿ ತಲುಪುವ ಸಮಾಜದ ಕೆಲಸ ರಾಮನ ಕಾರ್ಯ, ರಾಷ್ಟ್ರದ ಕಾರ್ಯ, ಸಮಾಜಕಟ್ಟುವ ಕಾರ್ಯಕ್ಕೆ ಇದು ಒಂದು ಒಳ್ಳೆಯ ಅಡಿಗಲ್ಲು ಆಗಲಿದೆ” ಎನ್ನುತ್ತಾರೆ ಸ್ಥಳೀಯ ಸ್ವಯಂಸೇವಕರಾದ ಕೇಶವ ಪೆರುವಾಜೆ.