ಉದಯಪುರದಲ್ಲಿ ದರ್ಜಿಯೊಬ್ಬರನ್ನು ನೂಪುರ್ ಶರ್ಮ ಅವರ ಹೇಳಿಕೆಗೆ ಬೆಂಬಲಿಸಿ ಮಾತನಾಡಿರುವುದಕ್ಕೆ ಹಾಡಹಗಲೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿರುವುದು ಅತ್ಯಂತ ಅಮಾನವೀಯವಾಗಿದೆ. ಕನ್ಹಯ್ಯಾಲಾಲ್ ಎನ್ನುವ ಸಾಮಾನ್ಯ ಟೇಲರೊಬ್ಬರ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ನುಗ್ಗಿದ ಇಬ್ಬರು ಕೊಲೆಗಡುಕರು, ಅಳತೆ ತೆಗೆದುಕೊಳ್ಳುವ ಸಲುವಾಗಿ ಹತ್ತಿರ ಬಂದಾಗ ಮಚ್ಚಿನಿಂದ ಕುತ್ತಿಗೆಗೆ ಚಾಕು ಹಾಕಿದ್ದಾರೆ.ಇನ್ನೋರ್ವ ಇದನ್ನೆಲ್ಲ ತನ್ನ ಕ್ಯಾಮೆರಾದಿಂದ ಸೆರೆ ಹಿಡಿದ್ದಾನೆ. ರಕ್ತದ ಕೋಡಿಯೇ ಹರಿದಿದೆ.
ಇಸ್ಲಾಮಿನ ಮತಾಂಧತೆ ಅದೆಷ್ಟು ಹೀನಾಯ ಸ್ಥಿತಿ ತಲುಪಿದೆಯೆಂದರೆ ಮಾನವರನ್ನು ಕೊಂದು ಕೋಡಿಗಟ್ಟಲೆ ರಕ್ತ ಹರಿಸಿ ಅದರ ಮೇಲೆ ನಡೆದು ಪಾರಾರಿಯಾಗುವಾಗ ಘಟನೆಯ ಸ್ಥಳಕ್ಕೆ ಆಗಮಿಸಿದ ಪೋಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಅನೇಕ ಪೋಲಿಸ್ ಪೇದೆಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಅಷ್ಟು ಮಾತ್ರವೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ತಾವೇ ಕೊಲೆ ಮಾಡಿರುವುದಾಗಿ ಖುದ್ದು ಶಸ್ತ್ರಗಳ ಸಮೇತ ಒಪ್ಪಿಕೊಂಡಿರುವುದಲ್ಲದೆ ಇಸ್ಲಾಮಿನ ಕಾರಣ ನೀಡಿ ಜಿಹಾದ್ ನಡೆಸಿರುವುದಾಗಿ ಪೈಶಾಚಿಕ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
ಅಲ್ಲದೆ ಪ್ರಧಾನಿ ನರೇಂದ್ರ ಮೋಯವರಿಗೆ ಧಮಕಿ ಹಾಕಿರುವ ಜಿಹಾದಿಗಳು, ತಮ್ಮನ್ನು ತಡೆಯಲು ಸವಾಲು ಹಾಕಿದ್ದಾರೆ.ಅಲ್ಲದೆ ‘ನೀನು ಬೆಂಕಿ ಹಚ್ಚಿದ್ದೀಯಾ,ನಾವು ಅದನ್ನು ಆರಿಸುತ್ತೇವೆ’ ಎಂದು ಎಚ್ಚರಿಕೆಯ ರೂಪದಲ್ಲಿ ಮಾತನಾಡಿದ್ದಾರೆ.
ಈ ಹಿಂದೆ ಕನ್ಹಯ್ಯಾಲಾಲ್ ಅವರಿಗೆ ಅನೇಕ ಬೆದರಿಕೆಗಳು ಬಂದಿದ್ದು,ಜೂನ್ 15ರಂದು ಉದಯಪುರದ ಪೋಲಿಸ್ ಠಾಣೆಗೆ ದೂರು ಸಲ್ಲಿಸಿ ಬಂದಿದ್ದಾರೆ. ‘ನಝೀಮ್ ಮತ್ತು ಇತರ ಐದು ಮಂದಿ ನನ್ನನ್ನು ಹಿಂಬಾಲಿಸುತ್ತಿದ್ದು ಕಂಡಲ್ಲಿ ನನ್ನನ್ನು ಹತ್ಯೆ ಮಾಡುವ ಸಂಚು ಹೂಡಿದ್ದಾರೆ, ದಯಮಾಡಿ ನನ್ನನ್ನು ರಕ್ಷಿಸಿ’ ಎಂದು ಪೋಲೀಸರ ಮೊರೆ ಹೋಗಿದ್ದಾರೆ.
ಅಲ್ಲಿ ತಿಳಿಸಿರುವ ನಝೀಮ್ ಸ್ವತಃ ಕನ್ಹಯ್ಯಾಲಾಲ್ ಅವರ ನೆರೆಮನೆಯವನು.ಅವನೇ ಕನ್ಹಯ್ಯಾಲಾಲ್ ಅವರ ವಿಳಾಸ ಗುರುತು ಮಾಡಿ ತಮ್ಮ ಜಿಹಾದಿ ವಾಟ್ಸಪ್ ಗ್ರೂಪುಗಳಲ್ಲಿ ವೈರಲ್ ಮಾಡಿದ್ದು, ಅದರ ಸಹಾಯದ ಮೂಲಕವೇ ಅವರನ್ನು ಟ್ರಾಕ್ ಮಾಡಲಾಗಿದೆ.
ಈ ರೀತಿಯ ಜಿಹಾದಿ ಮನಸ್ಥಿತಿಯಿಂದ ಸಮಾಜದ ಸಾಮರಸ್ಯ ಹಾಗಿರಲಿ ಬದುಕುವುದಕ್ಕೆ ಹೆದರಿಕೆಯ ವಾತಾವರಣ ನಿರ್ಮಾಣವಾಗುತ್ತದೆ.ಇಸ್ಲಾಮ್ ತನ್ನ ಮತೀಯವಾದವನ್ನು ಜಿಹಾದ್ನ ಮೂಲಕ ಕಾರ್ಯಗತಗೊಳಿಸುವ ಕೆಲಸವನ್ನು ಅದಾಗಲೇ ಕತ್ತಿ ಹಿಡಿದು ಮಾಡಲು ಸಿದ್ಧಗೊಂಡಂತಿದೆ.ಈ ಹಿಂದೆ ಹಿಜಾಬ್ ವಿಚಾರವಿರಬಹುದು ಅಥವಾ ನೂಪುರ್ ಶರ್ಮ ವಿಚಾರವಿರಬಹುದು,ಆ ಎಲ್ಲ ಸವಾಲುಗಳಿಗೂ ಯಾವುದನ್ನೂ ಸಹಿಸದ ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಏಕಾಏಕಿ ಬೀದಿಗಿಳಿಯುವ, ಎಲ್ಲವನ್ನೂ ಧ್ವಂಸ ಮಾಡುವ, ಎಲ್ಲವನ್ನೂ ಧೂಳೀಪಟಗೊಳಿಸುವ, ನಿರ್ದಯೆಯಿಂದ ಮುಗಿಸುವ ತಣ್ಣಗಿನ ಕ್ರೌರ್ಯದಿಂದಲೇ ತನ್ನ ಉತ್ತರ ನೀಡಿದೆ.
ಬಹುಶಃ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಇವತ್ತಿಗೂ ಸತ್ಯವೆಂದೇ ತೋರುತ್ತದೆ.ಸುಳ್ಳು ಸೆಕ್ಯುಲರಿಸಮ್ಮಿನ,ಸುಳ್ಳೇ ಬ್ರದರ್ಹುಡ್ನ ರೋಮ್ಯಾಂಟಿಕ್ ಪರಿಕಲ್ಪನೆಯ ಸಮಾಜವನ್ನು ಇಸ್ಲಾಂನಿಂದ ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯನ್ನು ನಮ್ಮ ಸಮಾಜ ತಲುಪುತ್ತಿದೆಯೇ? ಎನ್ನುವ ಸಂಶಯ ಬಂದಾಗ ಅಂಬೇಡ್ಕರ್ ಅವರು ಪಾಕಿಸ್ಥಾನ್ ಆರ್ ಪಾರ್ಟಿಶನ್ ಆಫ್ ಇಂಡಿಯಾ ಪುಸ್ತಕದಲ್ಲಿ ಹೇಳಿದ ಈ ಮಾತುಗಳು ನನಗೆ ನೆನಪಾಗುತ್ತದೆ. “For Islam divides as inexorably as it binds. Islam is a close corporation and the distinction that it makes between Muslims and non-Muslims is a very real, very positive and very alienating distinction.” ಇಲ್ಲಿ ಕನ್ಹಯ್ಯಾಲಾಲ್ ಒಬ್ಬ ಹಿಂದೂ ಅನ್ನುವ ಕಾರಣಕ್ಕಾಗಿ ಅವರ ಪಕ್ಕದ ಮನೆಯ ನಝೀಮ್ ಈ ಮತಾಂಧರ ಜೊತೆ ಸೇರಿಕೊಳ್ಳುತ್ತಾನೆ.ಅಲ್ಲಿಗೆ ಮುಸಲ್ಮಾನ ಮತ್ತು ಮುಸಲ್ಮಾನನಲ್ಲದವರು ಎಂಬ ಪ್ರತ್ಯೇಕತೆ ಬಂದಿದೆ. ಮತ್ತು ಮುಸಲ್ಮಾನನಲ್ಲದವನನ್ನು ನಡೆಸಿಕೊಳ್ಳುವ ಪ್ರಜ್ಞೆ ಯಾವ ಮಾನವೀಯತೆಯ ನೆಲೆಯನ್ನೂ ಒಳಗೊಳ್ಳುವುದಿಲ್ಲ.ಇಲ್ಲಿ ಇಸ್ಲಾಂ ಮಾನವೀಯತೆಗಿಂತಲೂ ಹೆಚ್ಚಾಗಿ ಹೋಗಿದೆ, ಮನುಷ್ಯರನ್ನು ಕೊಲ್ಲುವುದಕ್ಕೂ ಆ ಜಿಹಾದಿಗಳು ಹಿಂದುಮುಂದು ನೋಡದೆ ಸಮರ್ಥಿಸಿಕೊಂಡಿದ್ದಾರೆ.ಅಂದರೆ ಬಾಬಾಸಾಹೇಬರು ಹೇಳಿದ ಈ ಮಾತುಗಳು ಈ ಘಟನೆಗಂತೂ ಸತ್ಯವಾಗಿದೆ.
ಅವರು ಮುಂದುವರೆಯುತ್ತಾ ಹೇಳುತ್ತಾರೆ,”The brotherhood of Islam is not the universal brotherhood of man. It is a brotherhood of Muslims for Muslims only. There is a fraternity, but its benefit is confined to those within that corporation. For those who are outside the corporation, there is nothing but contempt and enmity”. ಬಹುಶಃ ಈ ಬಡ ಟೇಲರ್ನ ಮೇಲೆ ಮತೀಯವಾದ ದ್ವೇಷ, ಆತ ಕಾಫಿರ,ಅವನು ಸಮರ್ಥಿಸಿದ ಹೇಳಿಕೆ ಇಸ್ಲಾಂ ವಿರೋಧಿ ಎಂಬುದೊಂದನ್ನು ಬಿಟ್ಟು ಮತ್ತೇನಿರಲು ಸಾಧ್ಯ? ಹಾಗಾದರೆ ಮುಸಲ್ಮಾನರ ಬ್ರದರ್ಹುಡ್ ಕನ್ಹಯ್ಯಾಲಾಲ್ ಅವರನ್ನು ಕೊಲ್ಲುವಾಗ ಎಲ್ಲಿ ಹೋಗಿತ್ತು?
ಇನ್ನು ಕೊಲೆಯಾದ ಘಟನಾಸ್ಥಳಕ್ಕೆ ಆಗಮಿಸಿದ ಪೋಲೀಸರ ಮೇಲೆ ಸುರಿದ ಕಲ್ಲಿನ ಮಳೆಯ ಬಗೆಗೆ ಮಾತನಾಡುವುದಾದರೆ, ಇಂತಹ ಜಿಹಾದೀ ಮತಾಂಧರನ್ನು ಬೆಂಬಲಿಸುವ ಸಂವಿಧಾನದತ್ತವಾದ ಪೋಲೀಸ್ ಇಲಾಖೆಯ ಕೆಲಸಗಳಿಗೆ ಅಡ್ಡಿಯುಂಟು ಮಾಡುವ ಜಿಹಾದ್ ಮನಸ್ಥಿತಿಯ ಕುರಿತೂ ಆತಂಕವಾಗುತ್ತದೆ. ಅಂಬೇಡ್ಕರ್ ಅವರು ಹೇಳುವ ಈ ಮಾತುಗಳು ಅದರ ಬಗೆಗೆ ಸ್ಪಷ್ಟವಾದ ದೃಷ್ಟಿಯಿಂದ ನೋಡಲು ಅನುವು ಮಾಡಿಕೊಡಬಲ್ಲದೇನೋ.”Islam is a system of social self-government and is incompatible with local self-government because the allegiance of a Muslim does not rest on his domicile in the country which is his but on the faith to which he belongs.” ಇದನ್ನು ಓದಿದಾಗ, ಇಸ್ಲಾಂ ಕುರಿತಾಗಿ ಬಾಬಾ ಸಾಹೇಬರು ನೀಡಿದ ಒಳನೋಟಗಳು ಅದೆಷ್ಟು ನೈಜ ಎನ್ನುವುದು ಮತ್ತು ಎಚ್ಚರಿಕೆಯ ನುಡಿಗಳಾಗಿದ್ದವು ಎನ್ನುವುದು ನಮಗೆ ಅರಿವಾಗುತ್ತದೆ.
ಸಮಾಜದ ಶಾಂತಿ ಸುವ್ಯವಸ್ಥೆ ಇದೆಲ್ಲವನ್ನು ಗಾಳಿಹೆ ತೂರಿ ಅಸಹಿಷ್ಣುಗಳಾಗಿ ವರ್ತಿಸುವವರಿಗೆ ಅದೇ ಭಾಷೆಯಲ್ಲಿ ಸಂವಿಧಾನ ಉತ್ತರ ನೀಡಬೇಕಿದೆ. ಕನ್ಹಯ್ಯಾಲಾಲ್ನಂತಹ ಸಾಮಾನ್ಯ ಜನರಿಗೆ,ಮುಗ್ಧರಿಗೆ ರಕ್ಷಣೆಯ ಅಗತ್ಯವಿದೆ,ಅಲ್ಲದೆ ಯಾವುದೇ ಸಾಮಾನ್ಯ ಮನುಷ್ಯನಿಗೂ ಅವನದೇ ಆದ ವಾಕ್ಸ್ವಾತಂತ್ರ್ಯವಿರಬೇಕು.ಅದು ಕೇವಲ ಕೆಲವೇ ಕೋಮಿಗೋ, ಕೆಲವೇ ಜನರಿಗೋ ಅಲ್ಲದೆ ಆಯ್ಕೆಯ ಸ್ವಾತಂತ್ರ್ಯವನ್ನು ಸಂವಿಧಾನ ಎಲ್ಲರಿಗೂ ನೀಡಿದೆ,ಅದು ಎಲ್ಲರಿಗೂ ಸಮಾನವಾಗಿ ಜಾರಿಯಾಗಬೇಕಾದ ಮಾನವೀಯತೆಯ ನೆಲೆಯಲ್ಲೇ ಜಾರಿಯಾಗಬೇಕಾದ ಅಗತ್ಯವಿದೆ.
– ತನ್ಮಯಿ ಪ್ರೇಮ್ಕುಮಾರ್