ಬೆಂಗಳೂರು, ಫೆ.24,2024: ದಿಶಾಭಾರತ್ ಸಂಸ್ಥೆಯು 20 ವರ್ಷಗಳ ಕಾಲ ಸಾಮಾಜಕ್ಕೆ ನೀಡಿರುವ ಕೊಡುಗೆ ನಿಜಕ್ಕೂ ಶ್ಲಾಘನೀಯ. ದಿಶಾಭಾರತ್ ನ ವಾರ್ಷಿಕ ಯೋಜನೆಗಳು ಸಂಸ್ಥೆಯ ವ್ಯಾಪಕ ವಿಸ್ತರಣೆಗೆ ಸಾಕ್ಷಿಯಾಗಿದೆ. ಮೌಲ್ಯಾಧಾರಿತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಸಂಸ್ಥೆಯು ಯಶಸ್ಸನ್ನು ಕಂಡಿದೆ ಎಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯು.ಜಿ.ಸಿ ಅಧ್ಯಕ್ಷ ಪ್ರೊ. ಎಂ ಜಗದೀಶ್ ಕುಮಾರ್ ಹೇಳಿದರು.
ದಿಶಾಭಾರತ್ ಸಂಸ್ಥೆಯ 20ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಬೆಂಗಳೂರಿನ ಅರ್.ವಿ ಟೀರ್ಚಸ್ ಕಾಲೇಜಿನ ಸಭಾಂಗಣದಲ್ಲಿ ʼಸಂಭ್ರಮʼ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂಬರುವ ದಿನಗಳಲ್ಲಿ ಮೌಲ್ಯಾಧಾರಿತ ಶಿಕ್ಷಣದ ಜೊತೆಗೆ ನಮ್ಮ ಪರಿಸರಕ್ಕೆ, ಸಮಾಜಕ್ಕೆ ಹಾಗು ಜಗತ್ತಿಗೆ ಕಂಟಕವಾಗಿರುವ ಜಾಗತಿಕ ತಾಪಮಾನ ಏರಿಕೆ, ಶುದ್ಧ ಕುಡಿಯುವ ನೀರಿನ ಕೊರತೆ, ಬಡತನ ನಿರ್ಮೂಲನೆ, ಉತ್ತಮ ವ್ಯವಸಾಯ ವ್ಯವಸ್ಥೆ, ಅವಶ್ಯಕ ಸಂಪನ್ಮೂಲಗಳ ಕೊರತೆ ಮತ್ತು ಅತಿಬಳಕೆ, ಹೀಗೆ ಮುಂತಾದ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಸಹಾಯವಾಗುವ ಪ್ರಕಲ್ಪಗಳನ್ನು ಹೊರತರುವುದರ ಬಗ್ಗೆ ಸಂಸ್ಥೆಯು ಗಮಹರಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ದಿಶಾಭಾರತದ ಮಾರ್ಗದರ್ಶನ ಮಂಡಲಿಯ ಸದಸ್ಯ ಡಾ.ಗುರುರಾಜ ಕರಜಗಿ, ನಮ್ಮ ದೇಶದ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದು ತಂದೆ-ತಾಯಿ ಮತ್ತು ಶಿಕ್ಷಕರ ಜವಾಬ್ದಾರಿ. ದೇಶದ ಬಗ್ಗೆ ಅರಿವಿರುವ ವಿದ್ಯಾರ್ಥಿಗಳು ದೇಶದ ಒಳಿತಿಗಾಗಿ ಶ್ರಮಿಸುತ್ತಾರೆ. ಇಂದಿನ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ನೋಡಿದಾಗ ನಮ್ಮ ದೇಶಕ್ಕೆ ಉಜ್ವಲವಾದ ಭವಿಷ್ಯವಿದೆ ಎಂದೆನಿಸುತ್ತದೆ. ಅಂತಹ ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವ ಕಾರ್ಯವನ್ನು ದಿಶಾಭಾರತ್ ಸತತ 20 ವರ್ಷಗಳಿಂದ ಮಾಡುತ್ತಿದೆ. ನಾವೆಲ್ಲರೂ ಅದರ ಭಾಗವಾಗಿರುವುದು ಬಹಳ ಸಂತಸ ತರುವ ವಿಚಾರ ಎಂದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಿಶಾಭಾರತದ ಮಾರ್ಗದರ್ಶನ ಮಂಡಲಿಯ ಸದಸ್ಯ ಡಾ.ಬಿ ಮಹಾದೇವನ್ ದೇಶದ ಯುವಜನತೆಗೆ ನಮ್ಮ ಸಂಸ್ಕೃತಿಯಲ್ಲಿರುವ ಸದ್ವಿಚಾರಗಳನ್ನು ತಿಳಿಸಿಕೊಡಬೇಕು. ನಮ್ಮ ಮಕ್ಕಳಿಗೆ ಸಮೃದ್ಧವಾದ ನಮ್ಮ ಸಂಸ್ಕೃತಿ ಬಗ್ಗೆ ತಿಳಿಸಿಕೊಡದೆ ಹೋದರೆ ಅವರಿಗೆ ನಮ್ಮ ದೇಶದ ಬಗ್ಗೆ ಗೌರವಿರುವುದಿಲ್ಲ ಹಾಗಾಗಿ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿ ಹೇಳಬೇಕು ಎಂದರು.
ಒಂದು ಸಂಸ್ಥೆಯ ಉನ್ನತಿಗೆ ಪೂರಕವಾಗಬಹುದಾದ ಐದು ಅಂಶಗಳನ್ನ ತಿಳಿಸಿಕೊಟ್ಟು, ಒಂದು ಸಂಸ್ಥೆಯ ಪ್ರಾರಂಭ ಮಾಡುವ ಉದ್ದೇಶ ಮತ್ತು ಅದರ ಕಾರ್ಯಗಳು ಎಷ್ಟು ಮುಖ್ಯವೋ ಹಾಗೆ ಸಂಸ್ಥೆಯ ವಿಚಾರಗಳ ವಿಸ್ತರಣೆಯು ಅಷ್ಟೇ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದ ಮೂಲಕ ದಿಶಾಭಾರತ್ ಸಂಸ್ಥೆಯ 20 ವರ್ಷದ ಅವಧಿಯಲ್ಲಿ ಸಹಯೋಗದ ಮೂಲಕ ಸಹಕರಿಸಿದ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ, ಉಪಕುಲಪತಿಗಳಿಗೆ, ಪ್ರಾಂಶುಪಾಲರುಗಳಿಗೆ ಮತ್ತು ಶಿಕ್ಷಕ ವೃಂದಕ್ಕೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಜಗದೀಶ್ ಕುಮಾರ್, ದಿಶಾಭಾರತದ ಪ್ರಸಕ್ತ ವರ್ಷದ ಯೋಜನೆಗಳಿಗೆ ಚಾಲನೆ ನೀಡಿದರು. ಸಂಸ್ಥೆಯ ಹಿರಿಯ ಸಂಯೋಜಕಿ ಲಾವಣ್ಯ ಪ್ರಸಕ್ತ ವರ್ಷದಲ್ಲಿ ಆಯೋಜಿಸಲಾಗುವ 16 ಕಾರ್ಯಕ್ರಮಗಳ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ 2020ರಿಂದ ಪ್ರತಿ ವರ್ಷ ಆಗಸ್ಟ್ 1 ರಿಂದ 15ರವರೆಗೆ ದಿಶಾಭಾರತ್ ವತಿಯಿಂದ ಆಯೋಜಿಸಲಾದ ‘ನನ್ನ ಭಾರತ’ ಯುವ ಅಭಿಯಾನದ ಉಪನ್ಯಾಸ ಸರಣಿಯ ಕುರಿತಾದ ‘ಮೈ ಭಾರತ್’ ಪುಸ್ತಕ ಮತ್ತು ‘ಥಾಟ್ ಫಾರ್ ದಿ ಡೇ’ ಪುಸ್ತಕ ಬಿಡುಗಡೆ ಮಾಡಲಾಯಿತು.
ಅಧ್ಯಕ್ಷೀಯ ಭಾಷಣ ಮಾಡಿದ ದಿಶಾಭಾರತ್ ಸಂಸ್ಥೆಯ ಅಧ್ಯಕ್ಷ ಪ್ರೊ. ಎನ್ ವಿ ರಘುರಾಮ್ ದಿಶಾಭಾರತ್ ಸಂಸ್ಥೆಯ 20 ವರ್ಷದ ಪಯಣದ ಬಗ್ಗೆ ತಿಳಿಸಿ ಸಂಸ್ಥೆಯ ಮುಂದಿನ ಕಾರ್ಯಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ದಿಶಾಭಾರತದ ಟ್ರಸ್ಟಿಗಳಾದ ವಿ. ನಾಗರಾಜ್ ಸಭೆಯನ್ನು ಸ್ವಾಗತಿಸಿ, ಡಾ. ಹೇಮಂತ್ ವಂದಿಸಿದರು. ದಿಶಾ ಭಾರತ್ ಟ್ರಸ್ಟಿಗಳಾದ ರೂಪಾ ವಾಸುದೇವನ್, ರಾಜೇಶ್ ಪದ್ಮಾರ್ ಉಪಸ್ಥಿತರಿದ್ದರು. ಸಂಸ್ಥೆಯ ಸಂಯೋಜಕಿ ಸ್ಮೃತಿ ಖರೆ ಆಗಮಿಸಿದ ಗಣ್ಯರನ್ನು ಪರಿಚಯಿಸಿ, ಹಿರಿಯ ಸಂಯೋಜಕಿ ಸ್ನೇಹಾ ದಾಮ್ಲೆ ಕಾರ್ಯಕ್ರಮವನ್ನು ನಿರೂಪಿಸಿದರು.