ಲೇಖಕರು:ಷಣ್ಮುಖ ಎ, ಪ್ರಾಧ್ಯಾಪಕರು, ಸ್ನಾತಕೋತ್ತರ ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ, ಶಿವಮೊಗ್ಗ

ಭಾರತೀಯ ಸಂವಿಧಾನದಂತೆ ಯಾವುದೇ ನಾಗರಿಕನನ್ನು ಆತನ ರಿಲಿಜನ್ನು ಮತ್ತು ಜಾತಿಯ ಆಧಾರದಲ್ಲಿ ಪ್ರಭುತ್ವ ತಾರತಮ್ಯ ಮಾಡುವಂತಿಲ್ಲ. ಹಾಗಾಗಿ ರಾಜ್ಯನಿರ್ದೇಶಕ ತತ್ವದಡಿಯಲ್ಲಿ ಏಕರೂಪ ನಾಗರಿಕ ಸಂಹಿತೆಯ ಜಾರಿಗೆ ಪ್ರಭುತ್ವವು ಬದ್ಧವಾಗಿರಬೇಕಿದೆ. ಆದರೆ ಮುಸ್ಲೀಮರು ಸೆಕ್ಯುಲರ್ ತತ್ವದಡಿ ತಮ್ಮ ವೈಯುಕ್ತಿಕ ಕಾನೂನನ್ನು ಅನುಸರಿಸುವುದು ರಿಲಿಜನ್ನಿನ ಸ್ವಾತಂತ್ರ‍್ಯವೆಂದು ವಾದಿಸುತ್ತಲೇ ಬರುತ್ತಿದ್ದಾರೆ. ಈ ಕಾರಣಕ್ಕೆ ಏಕರೂಪ ನಾಗರಿಕ ಸಂಹಿತೆಗೆ ಮುಸ್ಲೀಂ ಸಂಘಟನೆಗಳು ವಿರೋಧಿಸುತ್ತಲೇ ಬಂದಿದ್ದಾರೆ. ಅವರಿಗೆ ಬೆಂಬಲವಾಗಿ ಎಡಪಂಥೀಯ ಸೆಕ್ಯುಲರ್ ಚಿಂತಕರಿದ್ದಾರೆ.

ಆದರೆ ಅದೇ ಸಂದರ್ಭದಲ್ಲಿ ವಸಾಹತು ಪ್ರಭುತ್ವಕ್ಕಿಂತ ಇನ್ನೂ ತೀವ್ರತರವಾಗಿ ಸ್ವತಂತ್ರ ಭಾರತದ ಪ್ರಭುತ್ವವು ಹಿಂದೂ ಸಮುದಾಯಗಳಿಗೆ ಸಂಬಂಧಿಸಿದ ವೈಯುಕ್ತಿಕ ಕಾನೂನಿನ ವಿಷಯದಲ್ಲಿ ಅವರ ಆಚರಣೆಗಳನ್ನು ಮಾನ್ಯಮಾಡದೆ ಪ್ರಭುತ್ವವು ತನ್ನದೇ ವೈಯುಕ್ತಿಕ ಕಾನೂನುಗಳನ್ನು ಹೇರುತ್ತಾ ಬರುತ್ತಿದೆ. ಹಿಂದೂಗಳ ದೇವಾಲಯ ನಿರ್ವಹಣೆಯಿಂದ ಹಿಡಿದು, ಅವರ ಕೌಟಂಬಿಕ ಜೀವನ ಪದ್ಧತಿ, ವಿವಾಹ, ವಿಚ್ಛೇಧನ, ಆಸ್ತಿ ಉತ್ತರಾಧಿಕಾರತ್ವ, ಆಸ್ತಿಯ ಹಕ್ಕಿನ ಸ್ವರೂಪ ಇತ್ಯಾದಿ ಎಲ್ಲಾ ವಿಚಾರಗಳಿಗೆ ಸಂಬಂಧಸಿದಂತೆ ಪ್ರಭುತ್ವವು ತನ್ನದೇ ಆದ ವೈಚಾರಿಕ ಕಾನೂನುಗಳನ್ನು ಮಾಡಿ ಅದನ್ನು ಹಿಂದೂ ಕಾನೂನೆಂದು ಜಾರಿಗೊಳಿಸುತ್ತಾ ಬಂದಿದೆ. ವಾಸ್ತವದಲ್ಲಿ ಇದೂ ಸಹ ಸೆಕ್ಯುಲರ್‌ವಾದದಡಿಯಲ್ಲಿ ಹಿಂದೂಗಳ ರಿಲಿಜನ್ನಿನ ಸ್ವಾತಂತ್ರ‍್ಯದ ಧಕ್ಕೆ ಎಂದೇ ಆಗುತ್ತದೆ.

ಮುಸ್ಲೀಮರಿಗೆ ವೈಯುಕ್ತಿಕ ಕಾನೂನಿಗೆ ಸಂಬಂಧಿಸಿದಂತೆಯೂ ಪ್ರಭುತ್ವದ ಮೂಲಕ ಕೆಲವು ಸುಧಾರಣೆಗಳು ನಡೆದವು. 20ನೇ ಶತಮಾನದ ಆರಂಭದಲ್ಲಿ ಭಾರತದ ಹಲವೆಡೆ ಮುಸ್ಲೀಮರಲ್ಲಿದ್ದ ಸ್ಥಳೀಯ ರೂಢೀಸಂಪ್ರದಾಯಗಳ ಆಚರಣೆಗಳನ್ನು ನಿಲ್ಲಿಸಿ, ಅವುಗಳ ಬದಲಿಗೆ ಷರಿಯಾವನ್ನು ಅನುಸರಿಸುವಂತೆ ಮಾಡುವ ಸಂಘಟಿತ ಪ್ರಯತ್ನಗಳು ದಿಯೋಬಂದ್‌ನ ಜಮಾತ್ ಅಲ್-ಉಲೇಮ-ಇ-ಹಿಂದ್ ನೇತೃತ್ವದಲ್ಲಿ ನಡೆದವು. ಕೇರಳದ ಮಾಪಿಳ್ಳಾ ಮುಸ್ಲೀಮರು, ಪಶ್ಚಿಮ ಭಾರತದ ಮೆಮೋನ್ ಮುಸ್ಲೀಮರು, ರಾಜಸ್ಥಾನ ಮತ್ತು ಪಂಜಾಬ್‌ನಲ್ಲಿದ್ದ ಹಲವು ಮುಸ್ಲೀಂ ಗುಂಪುಗಳಲ್ಲಿ ಚಾಲ್ತಿಯಲ್ಲಿದ್ದ ಸ್ಥಳೀಯ ವಿಶೇಷ ವಿವಾಹ ಮತ್ತು ಉತ್ತರಾಧಿಕಾರತ್ವ ಆಚರಣೆಗಳನ್ನು ಅನುಸರಿಸುತ್ತಿದ್ದು, ಅವನ್ನು ನ್ಯಾಯಾಲಯಗಳೂ ಮಾನ್ಯಮಾಡುತ್ತಿದ್ದವು. ನ್ಯಾಯಾಲಯಗಳು ಮುಸ್ಲೀಮರ ವ್ಯಾಜ್ಯಗಳಿಗೆ ಸ್ಥಳೀಯ ಆಚರಣೆಗಳನ್ನು ಅನುಸರಿಸುವುದು ಇಸ್ಲಾಂ ವಿರೋಧಿ ಎಂದು ಈ ಸಂಘಟನೆಗಳು ಹೋರಾಡಿದವು.

ಮುಸ್ಲೀಂ ಸಂಘಟಣೆಗಳ ಆಂದೋಲನದ ಪರಿಣಾಮವಾಗಿ ಮಾಪಿಳ್ಳಾ ಉತ್ತರಾಧಿಕಾರತ್ವ ಕಾಯ್ದೆ 1918, ಕುಚ್ಚಿ ಮೆಮೋನ್ಸ್ ಕಾಯ್ದೆ 1920 ಮತ್ತು 1938, NWFP ಮುಸ್ಲೀಂ ವೈಯುಕ್ತಿಕ ಕಾನೂನು (ಷರಿಯತ್) ಅನುಷ್ಠಾನ ಕಾಯ್ದೆ 1935 ಇತ್ಯಾದಿಗಳನ್ನು ಪ್ರಾಂತ್ಯ ಸರ್ಕಾರಗಳು ಜಾರಿಗೊಳಿಸಿದವು. ಕೇಂದ್ರ ಶಾಸಕಾಂಗವು ಸಹ 1937ರಲ್ಲಿ ಷರಿಯಾ ಕಾಯ್ದೆಯನ್ನು ಅನುಷ್ಠಾನ ಗೊಳಿಸಿತು. ಮಹಮದಾಲಿ ಜಿನ್ನಾರ ಒತ್ತಾಯದ ಮೇರೆಗೆ ಷರಿಯಾ ಅಥವಾ ಸ್ಥಳೀಯ ಪದ್ಧತಿಗಳನ್ನು ಅನುಸರಿಸುವ ಆಯ್ಕೆಯನ್ನೂ ಕಾಯ್ದೆಯಲ್ಲಿ ಇಡಲಾಗಿತ್ತು.

ಸಂವಿಧಾನ ರಚನಾ ಸಭೆಯ ಚರ್ಚೆಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಸಂವಿಧಾನದ ರಾಜ್ಯ ನಿರ್ದೇಶಕ ತತ್ವದಡಿಯಲ್ಲಿ ಸೇರಿಸುವ ಚರ್ಚೆ ನಡೆಯುತ್ತದೆ. ಆಗ ಮುಸ್ಲೀಂ ಲೀಗ್‌ನ ಹಲವು ಪ್ರತಿನಿಧಿಗಳು `ಮದುವೆ, ವಿಚ್ಛೇಧನ ಮತ್ತು ಕೌಟಂಬಿಕ ನಿರ್ವಹಣೆಯಂತ ವಿಷಯಗಳು ರಿಲಿಜನ್ನಿನ ಅತ್ಯಗತ್ಯ ಅಂಶಗಳಾಗಿರುವುದರಿಂದ ಅವುಗಳನ್ನು ಪ್ರಭುತ್ವದ ಹಸ್ತಕ್ಷೇಪದಿಂದ ಮುಕ್ತವಾಗಿಡಬೇಕು. ಒಂದು ಸೆಕ್ಯುಲರ್ ವ್ಯವಸ್ಥೆ ಎಂದರೆ ಅಲ್ಲಿ ನಾಗರಿಕನಿಗೆ ತನ್ನ ರಿಲಿಜನ್ನಿನ ಬೋಧನೆಯಲ್ಲಿರುವಂತೆ ಬದುಕುವ ಸಂಪೂರ್ಣವಾದ ಸ್ವಾತಂತ್ರ‍್ಯವನ್ನು ನೀಡುವುದೇ ಆಗಿದೆ. ಸಾವಿರಾರು ವರ್ಷಗಳಿಂದ ವೈಯಕ್ತಿಕ ಕಾನೂನುಗಳ ಆಧಾರದ ಮೇಲೆ ಬದುಕುತ್ತಿರುವ ಮುಸ್ಲೀಮರ ಜೀವನಪದ್ಧತಿಯಲ್ಲಿ ಪ್ರಭುತ್ವವು ಹಸ್ತಕ್ಷೇಪ ಮಾಡಬಾರದು. ಸಮಾನ ನಾಗರಿಕ ಸಂಹಿತೆ ಹೆಸರಲ್ಲಿ ಮುಸ್ಲೀಮರ ವೈಯಕ್ತಿಕ ಕಾನೂನುಗಳಿಗೆ ಅಡ್ಡ ಬಂದರೆ ಅದು ಸೆಕ್ಯುಲರ್ ರಾಷ್ಟ್ರವಾಗಲು ಸಾಧ್ಯವಿಲ್ಲ’ ಎಂದು ವಾದಿಸುತ್ತಾರೆ.

ಈ ವಾದವನ್ನು ತಿರಸ್ಕರಿಸುವ ಕೆ.ಎಮ್ ಮುನ್ಷಿಯವರು ಎಲ್ಲಾ ಪ್ರಜಾಪ್ರಭುತ್ವ ಸರ್ಕಾರಗಳು ಸಮಾನ ನಾಗರಿಕ ಕಾನೂನು ಅಳವಡಿಸಿಕೊಂಡಿದೆ. ವೈಯಕ್ತಿಕ ಕಾನೂನು ಎಂಬುದಾಗಿ ಉಲ್ಲೇಖಿಸುತ್ತಿರುವ ಮದುವೆ, ವಿಚ್ಛೇಧನ ಮತ್ತು ಕೌಟಂಬಿಕ ನಿರ್ವಹಣೆಯ ವಿಷಯಗಳು ರಿಲಿಜನ್ನಿನ ಭಾಗವಾಗಿರದೆ ಸಾಮಾಜಿಕವಾಗಿರುವಂತಹದು' ಎಂದು ವಾದಿಸುತ್ತಾರೆ. ಇದಕ್ಕೆ ಆಕ್ಷೇಪಿಸುತ್ತಾ ಮುಸ್ಲೀಂ ಲೀಗ್ನ ನೇತಾರ ಇಸ್ಮಾಯಿಲ್ನಮ್ಮ ರಿಲಿಜನ್‌ನಲ್ಲಿ ನಿಖಾ ರಿಲಿಜಿಯಸ್ ಆಚರಣೆಯಾಗಿದ್ದರೆ ಬೇರೆ ರಿಲಿಜನ್‌ನಲ್ಲಿ ಅದು ಸೆಕ್ಯುಲರ್ ವಿಷಯಕ್ಕೆ ಬರುತ್ತದೆ. ಹೀಗಿರುವಾಗ ಸಮಾನ ನಾಗರಿಕ ಕಾನೂನು ಅಳವಡಿಸಿಕೊಳ್ಳಲು ಹೇಗೆ ಸಾಧ್ಯ? ಆದ್ದರಿಂದ ಪ್ರತಿಯೊಂದು ರಿಲಿಜನ್ನಿನ ವೈಯಕ್ತಿಕ ಕಾನೂನಿಗೆ ಮಾನ್ಯತೆ ಕೊಡಬೇಕು ಮತ್ತು ಸಂವಿಧಾನದ ವಿಧಿ 35 (ಈಗ 44)ರಲ್ಲಿ ಭಾರತದ ಭೂಪ್ರದೇಶದಾದ್ಯಂತ ಇರುವ ನಾಗರಿಕರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಖಾತರಿಪಡಿಸಲು ಪ್ರಭುತ್ವವು ಪ್ರಯತ್ನಿಸುತ್ತದೆ ಮತ್ತು ಅದರಲ್ಲಿ ವೈಯುಕ್ತಿಕ ಕಾನೂನು ಸಹ ಒಳಗೊಂಡಿರುತ್ತದೆ ಎನ್ನುವ ತಿದ್ದುಪಡಿಯನ್ನು ಸೇರಿಸಬೇಕು'” ಎನ್ನುತ್ತಾರೆ.

ಆಗ ಚರ್ಚೆಗೆ ಪ್ರವೇಶಿಸುವ ಡಾ. ಅಂಬೇಡ್ಕರರು ಮುಸ್ಲೀಂಲೀಗ್‌ನ ವೈಯಕ್ತಿಕ ಕಾನೂನಿನ ಪ್ರಸ್ತಾವವನ್ನು ತಿರಸ್ಕರಿಸುತ್ತಾ `ಈ ದೇಶದಲ್ಲಿ ಈಗಾಗಲೇ ಏಕರೂಪ ಅಪರಾಧ ಸಂಹಿತೆ ಅಸ್ತಿತ್ವದಲ್ಲಿದೆ, ಇಡೀ ರಾಷ್ಟ್ರಕ್ಕೆ ಅನ್ವಯವಾಗುವ ಆಸ್ತಿ ವರ್ಗಾವಣೆಯ ಕಾನೂನಿದೆ. ಮದುವೆ ಮತ್ತು ಉತ್ತರಾಧಿಕಾರ ಮಾತ್ರವೇ ಈ ನಾಗರಿಕ ಕಾನೂನಿಂದ ಇನ್ನೂ ಹೊರಗುಳಿದಿವೆ. ಅಲ್ಲದೆ ಸಾವಿರಾರು ವರ್ಷಗಳಿಂದ ಮುಸ್ಲೀಮರು ವೈಯುಕ್ತಿಕ ಕಾನೂನನ್ನು ಅನುಸರಿಸುತ್ತಿದ್ದಾರೆನ್ನುವುದು ವಾಸ್ತವವಲ್ಲ. ಮುಸ್ಲೀಂ ಬಾಹುಳ್ಯದ ವಾಯವ್ಯ ಪ್ರಾಂತ್ಯವೂ ಸೇರಿದಂತೆ ಸಂಯುಕ್ತ ಪ್ರಾಂತ್ಯ, ಕೇಂದ್ರ ಪ್ರಾಂತ್ಯ, ಬಾಂಬೆ, ಮಲಬಾರ್ ಪ್ರಾಂತ್ಯಗಳೆಲ್ಲೆಡೆ ಸಹ ಸ್ಥಳೀಯ ಹಿಂದೂ ಕಾನೂನುಗಳನ್ನೇ ಮುಸ್ಲೀಮರು ಅನುಸರಿಸುತ್ತಿದ್ದರು. ಇಲ್ಲೆಲ್ಲಾ ಮುಸ್ಲೀಮರು ಷರಿಯಾವನ್ನೇ ಅನುಸರಿಸುವಂತೆ ಮಾಡಲು 1937ರಲ್ಲಿ ಶಾಸನ ಮಾಡಲಾಯಿತು. ಹಾಗಾಗಿ ಪುರಾತನ ಕಾಲದಿಂದಲೂ ಮುಸ್ಲೀಮರು ಷರಿಯಾ ಕಾನೂನನ್ನೇ ಅನುಸರಿತ್ತಿರುವುದರಿಂದ, ಏಕರೂಪ ನಾಗರಿಕ ಸಂಹಿತೆಯು ಅವರ ಆ ರಿಲಿಜನ್ನಿನ ಸ್ವಾತಂತ್ರ‍್ಯಕ್ಕೆ ಧಕ್ಕೆ ಎನ್ನುವುದು ಅವಾಸ್ತವ” ಎನ್ನುತ್ತಾರೆ.

ಅಂಬೇಡ್ಕರ್‌ರ ಪ್ರಕಾರ “ಏಕರೂಪ ನಾಗರಿಕ ಸಂಹಿತೆ ರೂಪಿಸಿದರೆ ಏಕಪಕ್ಷೀಯವಾಗಿ ಹೇರಬೇಕೆಂದೇನಿಲ್ಲ, ಯಾರಿಗೆ ಇಚ್ಛೆಯಿರುವುದೋ ಅವರಿಗೆ ಮಾತ್ರವೇ ಅನ್ವಯವಾಗುವಂತೆ ಶಾಸನ ಮಾಡುವ ಅವಕಾಶವಂತೂ ಭವಿಷ್ಯತ್ತಿನಲ್ಲಿ ಸಂಸತ್ತಿಗೆ ಇದ್ದೇ ಇದೆ. ಇಚ್ಛೆ ಇದ್ದವರು ಏಕರೂಪ ನಾಗರಿಕ ಸಂಹಿತೆ ಅನುಸರಿಸಲಿ ಇಲ್ಲದವರು ಅವರ ವೈಯುಕ್ತಿಕ ಕಾನೂನನ್ನೇ ಅನುಸರಿಸಲಿ” ಎನ್ನುತ್ತಾರೆ. ಈ ಹಿನ್ನೆಲೆಯಲ್ಲಿ ಸಂವಿಧಾನ ರಚನಾ ಸಭೆಯು ವೈಯುಕ್ತಿಕ ಕಾನೂನಿಗೆ ಮಾನ್ಯತೆ ನೀಡಬೇಕು ಎನ್ನುವ ಮುಸ್ಲೀಂ ಲೀಗ್‌ನ ತಿದ್ದುಪಡಿಯನ್ನು ತಿರಸ್ಕರಿಸಿ, ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಬೇಕು ಎನ್ನುವ ವಿಧಿಯನ್ನು ಅಂಗೀಕರಿಸುತ್ತದೆ.

ಸ್ವತಂತ್ರ ಭಾರತದಲ್ಲಿ ಸಂವಿಧಾನ ರಚನಾ ಸಭೆಯ ಈ ನಿಲುವಿಗೆ ವ್ಯತಿರಿಕ್ತವಾಗಿ ಭಾರತೀಯ ಮುಸ್ಲೀಮರೆಲ್ಲರನ್ನೂ ಕಡ್ಡಾಯವಾಗಿ ಷರಿಯಾ ಕಾಯ್ದೆಯಡಿ ತರುವ ಪ್ರಯತ್ನ ಮುಂದುವರೆಯಿತು. ಫಲವಾಗಿ 1937ರ ಷರಿಯಾ ಕಾಯ್ದೆಯಲ್ಲಿ ನೀಡಲಾಗಿದ್ದ ಷರಿಯಾ ಅಥವಾ ಸ್ಥಳೀಯ ಪದ್ಧತಿಗಳನ್ನು ಅನುಸರಿಸುವ ಆಯ್ಕೆಯನ್ನು ಕೈಬಿಡಲಾಯಿತು. 1947ರ ನಂತರ ಹೊಸದಾಗಿ ಸೇರ್ಪಡೆಯಾದ ಎಲ್ಲಾ ಪ್ರಾಂತ್ಯಗಳಲ್ಲೂ ಷರಿಯಾವನ್ನೇ ಮುಸ್ಲೀಮರು ಅನುಸರಿಸುವುದನ್ನು ಕಡ್ಡಾಯಗೊಳಿಸಿ ಅನ್ವಯಿಸಲಾಯಿತು.

ಅದೇ ಹಿಂದೂಗಳಿಗೆ ಸಂಬಂಧಿಸಿದಂತೆ, ವಸಾಹತು ಪ್ರಭುತ್ವವೇ ತಂದಿದ್ದ ಹಲವು ಸುಧಾರಣೆಗಳ ಜೊತೆಗೆ ಸ್ವತಂತ್ರ ಭಾರತದ ಪ್ರಭುತ್ವದ ಕೇಂದ್ರ ಮತ್ತು ರಾಜ್ಯ ಶಾಸಕಾಂಗಗಳು ಹಲವಾರು ಸುಧಾರಣಾವಾದಿ ಕಾನೂನುಗಳನ್ನು ತರಲಾರಂಭಿಸಿದವು. ಈ ಆಧುನಿಕ ಸುಧಾರಣೆಗಳ ಶಾಸನಗಳೊಂದಿಗೆ 1955ರ ಹಿಂದೂ ವಿವಾಹ ಕಾಯ್ದೆ ಮತ್ತು 1956ರ ಆಸ್ತಿ ಉತ್ತರಾಧಿಕಾರತ್ವ ಕಾಯ್ದೆಗಳೆಲ್ಲವೂ ಸೇರಿಕೊಂಡು ಹಿಂದೂ ಕುಟಂಬ ಪದ್ಧತಿಯ ಚೌಕಟ್ಟನ್ನೇ ಆಮೂಲಾಗ್ರವಾಗಿ ಬದಲಾಯಿಸಿದವು. ಈ ಸುಧಾರಣೆಗಳು ತೀವ್ರಗತಿಯಲ್ಲಿ ಅವಿಭಕ್ತ ಕುಟುಂಬಗಳ ನಾಶ ಮತ್ತು ವಿಭಕ್ತ ಕುಟುಂಬಗಳ ಹೆಚ್ಚಳಕ್ಕೆ ಚಾಲನೆಯನ್ನು ನೀಡಿದವು. ಹೀಗೆ ಪ್ರಭುತ್ವದ ಕಾನೂನುಗಳ ಮೂಲಕ ಹಿಂದೂ ವೈಯುಕ್ತಿಕ ಜೀವನ ಪದ್ಧತಿಯಲ್ಲಿ ಆಧುನಿಕ ಕಾಲದ ಅಗತ್ಯಗಳೆಂದು ಬದಲಾವಣೆಗಳನ್ನು ತರುವ ಹಿಂದೂ ಸುಧಾರಣಾ ಕಾನೂನುಗಳ ಚಳುವಳಿಯೇ ಆರಂಭವಾಯಿತು. ಈ ಬದಲಾವಣೆಯ ತೀವ್ರತೆ ಎಷ್ಟಿತ್ತೆಂದರೆ ಹಿಂದೂ ಕಾನೂನಿನೊಳಗೆ `ಹಿಂದೂ’ ಎನ್ನುವ ಶಬ್ದವನ್ನೊಂದು ಹೊರತು ಪಡಿಸಿ ಹಿಂದೂ ಜೀವನಪದ್ಧತಿಗೆ ಸಂಬಂಧಪಟ್ಟ ಯಾವೊಂದೂ ಹಿಂದೂವಾಗಿ ಉಳಿದಿರಲಿಲ್ಲ.

ಪ್ರಭುತ್ವದ ಹಸ್ತಕ್ಷೇಪದ ಮೂಲಕ ಹಿಂದೂಗಳ ಧಾರ್ಮಿಕ ರೂಢಿಪದ್ಧತಿಯ ಆಚರಣೆಗಳನ್ನು ಬಿಟ್ಟುಕೊಟ್ಟು ವೈಚಾರಿಕ ನೆಲೆಗಟ್ಟಿನ ಸಾರ್ವತ್ರಿಕ ವೈಯುಕ್ತಿಕ ಕಾನೂನುಗಳನ್ನು ಅನುಸರಿಸುವಂತೆ ಮಾಡಲಾಯಿತು. ಅದೇ ಪ್ರಭುತ್ವದ ಅಧಿಕಾರದ ಮೂಲಕ ಮುಸ್ಲೀಮರು ಅವರ ಸ್ಥಳೀಯ ಸಾಂಪ್ರದಾಯಿಕ ಮತ್ತು ರೂಢಿಪದ್ಧತಿಗಳನ್ನು ಬಿಟ್ಟುಕೊಟ್ಟು ಸಾರ್ವತ್ರಿಕವಾಗಿ ಷರಿಯತ್ ಅಥವಾ ಮುಸ್ಲೀಂ ವೈಯುಕ್ತಿಕ ಕಾನೂನನ್ನೇ ಸ್ವೀಕರಿಸುವಂತೆ ಮಾಡಲಾಯಿತು.

ಬಹುಮುಖ್ಯವಾಗಿ, ಸೆಕ್ಯುಲರ್ ತತ್ವದ ಪ್ರಕಾರ ರಿಲಿಜನ್ನಿನ ಸ್ವಾತಂತ್ರ‍್ಯವೆನ್ನುವುದು ವ್ಯಕ್ತಿಯ ವೈಯುಕ್ತಿಕ ಆಯ್ಕೆಯಾಗಿದ್ದು, ಅದೇ ಸಂವಿಧಾನದ ನೀತಿಯೂ ಸಹ. ಆದರೆ ಭಾರತೀಯ ಮುಸ್ಲೀಮರಿಗೆ ಇದು ವೈಯುಕ್ತಿಕ ಆಯ್ಕೆಯಾಗಿ ಲಭ್ಯವಿಲ್ಲ. ಅವರು ಮುಸ್ಲೀಮರಾಗಿದ್ದಾರೆ, ಹಾಗಾಗಿ ಷರಿಯಾವನ್ನೇ ಅವರು ಅನುಸರಿಸಬೇಕು, ಅಷ್ಟೆ. ಬೇರೆ ಆಯ್ಕೆಗಳೇ ಮುಸ್ಲೀಮರಿಗೆ ನಿಷಿದ್ಧ. ಅಂದಮೇಲೆ ಇಲ್ಲಿ ರಿಲಿಜನ್ನಿನ ಸ್ವಾತಂತ್ರ‍್ಯವನ್ನು ವೈಯುಕ್ತಿವಾಗಿ ಮುಸ್ಲೀಂ ನಾಗರಿಕನಿಗೆ ನೀಡಿಲ್ಲ, ಬದಲಿಗೆ ಮುಸ್ಲೀಂ ಸಮುದಾಯಕ್ಕೆ ನೀಡಲಾಗಿದೆ. ಆ ಮೂಲಕ ಮುಸ್ಲೀಂ ವ್ಯಕ್ತಿಯಿಂದ ವೈಯುಕ್ತಿಕವಾದ ರಿಲಿಜನ್ನಿನ ಸ್ವಾತಂತ್ರ‍್ಯವನ್ನು ಕಿತ್ತುಕೊಳ್ಳಲಾಗಿದೆ. ಅಲ್ಲಿಗೆ ಭಾರತದ ಪ್ರಭುತ್ವವು ಮುಸ್ಲೀಮರಿಗೆ ಇಸ್ಲಾಮಿಕ್ ಪ್ರಭುತ್ವವಾಗಿದೆಯೇ ಹೊರತು ಸೆಕ್ಯುಲರ್ ಪ್ರಭುತ್ವವಾಗಿ ಉಳಿದಿಲ್ಲ.

ಈ ಹಿನ್ನೆಲೆಯಲ್ಲಿ ಹಿಂದೂಗಳ ಜೀವನ ಪದ್ಧತಿಯನ್ನು ರಕ್ಷಿಸಿಕೊಳ್ಳಲು ಮತ್ತು ಮುಸ್ಲೀಮರ ವೈಯುಕ್ತಿಕ ರಿಲಿಜನ್ನಿನ ಸ್ವಾತಂತ್ರ‍್ಯವನ್ನು ನೀಡಲು ಇರುವ ಏಕೈಕ ಆಯ್ಕೆ ಎಂದರೆ ಡಾ. ಅಂಬೇಡ್ಕರರು ಪ್ರತಿಪಾದಿಸಿದಂತೆ ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸಿ ಅದನ್ನು ಎಲ್ಲರಿಗೂ ಆಯ್ಕೆಯನ್ನಾಗಿ ಇಡುವುದು. ಅಂದರೆ ಪ್ರಭುತ್ವದ ಕಾನೂನಾಗಿ ಏಕರೂಪ ನಾಗರಿಕ ಸಂಹಿತೆ ಮಾತ್ರವೇ ಇರಬೇಕು. ಮುಸ್ಲೀಮರಿಗೆ ಷರಿಯಾದ ಆಯ್ಕೆ ಇದೆ. ಆದರೆ ಕೋರ್ಟುಗಳಲ್ಲಲ್ಲ, ಅವರ ಮಸೀದಿಗಳಲ್ಲಿ, ಮೌಲ್ವಿಗಳಲ್ಲಿ ಮಾತ್ರ. ಹಾಗೆಯೇ ಹಿಂದೂಗಳಿಗೂ ಕೂಡ ಕೋರ್ಟುಗಳ ಮೂಲಕ ನಾಗರಿಕ ಸಂಹಿತೆಯನ್ನು ಅನುಸರಿಸುವ ಇಲ್ಲವೇ ತಮ್ಮ ಸ್ಥಳೀಯ ಕೌಟಂಬಿಕ ಪದ್ಧತಿಗಳಂತೆ ತಮ್ಮ ಇಷ್ಟದ ನ್ಯಾಯ ಪಂಚಾಯತಿಗಳಲ್ಲಿ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವ ಆಯ್ಕೆ ಮುಕ್ತವಾಗಿರಬೇಕು. ಹಾಗೆಯೇ ಮುಸ್ಲೀಮರಿಗೆ ಹಿಂದಿನ ಶತಮಾನಗಳಂತೆ ಸ್ಥಳೀಯ ಹಿಂದೂ ಪದ್ಧತಿಗಳನ್ನು ಅನುಸರಿಸುವ ಆಯ್ಕೆಯೂ ಇರಬೇಕು. ಅಲ್ಲಿಗೆ ಏಕರೂಪ ನಾಗರಿಕ ಸಂಹಿತೆಯಿಂದಾಗಿ ಅವರ ರಿಲಿಜನ್ನಿನ ಸ್ವಾತಂತ್ರ‍್ಯಕ್ಕೆ ಧಕ್ಕೆ ಎನ್ನವ ಮುಸ್ಲೀಂ ಸಂಘಟನೆಗಳ ಆತಂಕಗಳಿಗೂ ಆಸ್ಪದವಿರುವುದಿಲ್ಲ, ಮುಸ್ಲೀಂ ನಾಗರಿಕರಿಗೂ ವೈಯುಕ್ತಿಕವಾದ ಮುಕ್ತ ಆಯ್ಕೆಯೂ ಲಭ್ಯ. ಜೊತೆಗೆ ಹಿಂದೂ ಜೀವನ ಪದ್ಧತಿಗಳೂ ತಮ್ಮ ಮೌಲ್ಯಗಳನ್ನು ಪುನರ್ಗಳಿಸಲು ಅವಕಾಶವಾಗುವುದು.

Leave a Reply

Your email address will not be published.

This site uses Akismet to reduce spam. Learn how your comment data is processed.