ತೀರ್ಥಹಳ್ಳಿ: ‘ಸಾವಯವ ಎನ್ನುವುದು ಜೀವನ ಧರ್ಮ. ಇದು ಪ್ರಕೃತಿ ಧರ್ಮವೂ ಹೌದು. ಈ ಧರ್ಮದಲ್ಲಿ ಜೀವನ ನಡೆಸಿದವರು ಕೃಷಿಋಷಿಗಳಾದರು. ತೀರ್ಥಹಳ್ಳಿಯ ಪುರುಷೋತ್ತಮರಾಯರು ಅಂತಹ ಒಬ್ಬರು ’ಕೃಷಿಋಷಿ’. ಅವರಂತೆಯೇ ನಮ್ಮ ಸಮಾಜದಲ್ಲಿ ಬದುಕುತ್ತಿರುವ ಸಾಧಕರು ಅನೇಕರಿದ್ದಾರೆ. ಪುರುಷೋತ್ತಮರಾಯರ ನೆನಪಿನಲ್ಲಿ ಸಮಾಜದಲ್ಲಿ ನಮಗೆ ಬೆಳಕು ನೀಡುತ್ತಿರುವ ಇಂತಹ ಕೃಷಿ ಸಾಧಕ ಕುಟುಂಬಕ್ಕೆ ಸನ್ಮಾನ ಮಾಡುವ ಈ ಕಾರ್ಯಕ್ರಮವೇ ನಮ್ಮ ಪರಂಪರೆಯ ಪ್ರತೀಕ. ನಮ್ಮಲ್ಲಿ ವ್ಯಷ್ಟಿಗಿಂತ ಸಮಷ್ಟಿ ದೊಡ್ಡದು. ವ್ಯಕ್ತಿಗಿಂತ ಕುಟುಂಬ ದೊಡ್ಡದು. ಕುಟುಂಬಕ್ಕಿಂತ ಸಮಾಜ ದೊಡ್ಡದು. ಸಮಾಜಕ್ಕಿಂತ ದೇಶ ದೊಡ್ಡದು. ಇದನ್ನು ಈ ಸಮಾರಂಭ ತೋರಿಸಿಕೊಟ್ಟಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಬೌದ್ಧಿಕ್ ಪ್ರಮುಖರಾದ ಶ್ರೀ ವಿ. ನಾಗರಾಜ್ ಹೇಳಿದರು. ಅವರು ತೀರ್ಥಹಳ್ಳಿಯ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನವು ಪ್ರತಿ ವರುಷ ನೀಡುತ್ತಿರುವ ’ಪುರುಷೋತ್ತಮ ಸನ್ಮಾನ’ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಸರಳ ಬದುಕಿನ ಸಂತೃಪ್ತ ಸಾವಯವ ಕೃಷಿಯನ್ನು ಮಾಡುತ್ತಿರುವ ಪುತ್ತೂರಿನ ಮರಿಕೆ ಗ್ರಾಮದ ಶ್ರೀಮತಿ ರಮಾದೇವಿ ಮತ್ತು ಶ್ರೀ ತಿಮ್ಮಪ್ಪಯ್ಯ ಎ.ಪಿ. ಇವರ ಕುಟುಂಬಕ್ಕೆ ೨೦೧೨ರ ’ಪುರುಷೋತ್ತಮ ಸನ್ಮಾನ’. ಶ್ರೀಮತಿ ನಿರ್ಮಲ ಮತ್ತು ಶ್ರೀ ಚಂದ್ರಶೇಖರ ಹಾಗೂ ಶ್ರೀಮತಿ ಉಮಾಶಂಕರಿ ಮತ್ತು ಶ್ರೀ ಸದಾಶಿವ ದಂಪತಿಗಳು ಕುಟುಂಬದ ಪರವಾಗಿ ಸನ್ಮಾನವನ್ನು ಸ್ವೀಕರಿಸಿದರು. ಸನ್ಮಾನಿತರ ಪರವಾಗಿ ಶ್ರೀ ಚಂದ್ರಶೇಖರ್ ಮಾತನಾಡಿ ಈ ಸನ್ಮಾನ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಅರ್ಜಿ ಬರೆಯದೇ ಬರುವ ವಿಶಿಷ್ಟ ಸನ್ಮಾನದ ಈ ಸಂದರ್ಭದಲ್ಲಿ ಪುರುಷೋತ್ತಮರಾಯರ ಸಾಧನೆಗಳನ್ನು ಅವರು ನೆನಪುಮಾಡಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಸುಬ್ಬರಾವ್ರವರು ವಹಿಸಿದ್ದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಸಾವಯವ ಕೃಷಿ ಸಂಸ್ಥೆಯ ಮುಖ್ಯಸ್ಥರು ಹಾಗೂ ಬೇಸಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಎಚ್.ಬಿ. ಬಬಲಾದರವರು ಭಾಗವಹಿಸಿದ್ದರು.
ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀ ಆರಗ ಜ್ಞಾನೇಂದ್ರ ಸ್ವಾಗತಿಸಿ ಅತಿಥಿಗಳ ಪರಿಚಯ ಮಾಡಿದರು. ಸಹಕಾರ್ಯದರ್ಶಿ ಶ್ರೀ ರಾಮಚಂದ್ರ ವರದಿ ವಾಚಿಸಿದರು. ಪ್ರಾಸ್ತಾವಿಕವಾಗಿ ಸಾವಯವ ಕೃಷಿ ಮಿಷನ್ ಅಧ್ಯಕ್ಷರಾದ ಶ್ರೀ ಆನಂದ ಮಾತನಾಡಿದರು. ಸನ್ಮಾನಿತರ ಕುರಿತಾಗಿ ಶ್ರೀ ಶ್ರೀವತ್ಸ ಮಾತನಾಡಿದರೆ ಶ್ರೀ ಅರುಣ ವಂದಿಸಿದರು. ಶ್ರೀ ದಿನೇಶ ಸರು ಕಾರ್ಯಕ್ರಮವನ್ನು ನಿರೂಪಿಸಿದರು. ಸಾಧಕ ಕುಟುಂಬದ ಸಾಧನೆಗಳನ್ನು ಪರಿಚಯಿಸುವ ’ಸಾಧಕ – ಸಾಧನೆ’ ಹೊತ್ತಿಗೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಮಧ್ಯಾಹ್ನದ ನಂತರ ಸನ್ಮಾನಿತರ ಜೊತೆ ’ಸಾವಯವ ಕೃಷಿ – ವೈವಿಧ್ಯ’ ಕುರಿತು ಸಂವಾದ ನಡೆಯಿತು.