
ಬೆಂಗಳೂರು, ಫೆ.11,2024: ಸ್ವದೇಶಿ, ಭಾರತದ ದೂರದರ್ಶಿತ್ವದ ಮತ್ತು ಸಂಕಲ್ಪಶಕ್ತಿಯ ಸಂಕೇತ. ಸ್ವದೇಶಿ ಮೇಳ ಸ್ವಾಭಿಮಾನದ ಶಕ್ತಿಯ ಪ್ರತೀಕ. ಇಂತಹ ಮೇಳಗಳನ್ನು ಆಯೋಜಿಸುವ ಮೂಲಕ ಭಾರತದ ಅಂತಃಸತ್ವವನ್ನು ಜಾಗೃತಗೊಳಿಸುವ ಕೆಲಸ ಸ್ವದೇಶಿ ಜಾಗರಣ ಮಂಚ್ ಮಾಡುತ್ತಿದೆ ಎಂದು ಬೇಲಿ ಮಠದ ಪೂಜ್ಯ ಶ್ರೀ ಶಿವರುದ್ರ ಸ್ವಾಮೀಜಿ ಹೇಳಿದರು.

ಸ್ವದೇಶಿ ಜಾಗರಣ ಮಂಚ್ ವತಿಯಿಂದ ಫೆಬ್ರವರಿ 7, 2024 ರಿಂದ ಫೆಬ್ರವರಿ 11, 2024ರ ವರೆಗೆ ನಡೆದ ಸ್ವದೇಶಿ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತ ಸಂಸ್ಕಾರವನ್ನು, ಯೋಜನೆ, ಯೋಚನೆಯನ್ನು ಜಗತ್ತಿಗೆ ಕಲಿಸಿಕೊಟ್ಟಂತಹ ರಾಷ್ಟ್ರ. ಆದರೆ ವ್ಯಾಪಾರದ ಹೆಸರಲ್ಲಿ ಈ ನಾಡಿಗೆ ಆಗಮಿಸಿದ ಪಾಶ್ಚಾತ್ಯರು ಇಲ್ಲಿನ ಸಂಸ್ಕೃತಿಗೆ ಧಕ್ಕೆ ತಂದರು. ಇಲ್ಲಿನ ಸ್ವಾಭಿಮಾನದ ಆಧಾರವಾಗಿದ್ದ ಕರಕುಶಲ ವ್ಯಾಪಾರವನ್ನು ಧ್ವಂಸಗೊಳಿಸಿದರು. ಮುಖ್ಯವಾಗಿ ನಮ್ಮ ಯೋಚನೆಯೇ ತಪ್ಪೆಂದರು. ಅದನ್ನೇ ನಂಬಿಕೊಂಡು ಆದಂತಹ ಅವಾಂತರಗಳಿಂದ ಹೊರಗೆ ಬರಬೇಕು. ರಾಷ್ಟ್ರ ಮುಖ್ಯ ಎನ್ನುವ ಭಾವ ನಮ್ಮಲ್ಲಿ ಜಾಗೃತವಾಗಬೇಕು ಎಂದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸ್ವದೇಶಿ ಆಂದೋಲನದ ಮೂಲಕ ಮೂಡಿದ ರಾಷ್ಟ್ರಭಾವದ ಜಾಗರಣ ಸ್ವಾತಂತ್ರ್ಯದ ನಂತರದಲ್ಲಿ ಮತ್ತೆ ಹಿನ್ನೆಲೆಗೆ ಸರಿದಿತ್ತು. ಆದರೆ ಪ್ರಸ್ತುತ ನಾವು ಯಾರ ಗುಲಾಮರೂ ಅಲ್ಲ ಎನ್ನುವ ನಾಯಕತ್ವ ಬಂದ ಪರಿಣಾಮವಾಗಿ ಭಾರತದ ಕರ್ತೃತ್ವ ಶಕ್ತಿಯ ಪರಿಚಯವನ್ನು ಜಗತ್ತಿಗೆ ಮಾಡಿಕೊಡುತ್ತಿದೆ. ನಮ್ಮ ಭಾರತೀಯ ಪದ್ಧತಿಗಳನ್ನು ಮರಳಿ ಮ್ಮುನೆಲೆಗೆ ತರುವ ಮೂಲಕ ಸದ್ದುಗದ್ದಲವಿಲ್ಲದೆ ಆತ್ಮ ನಿರ್ಭರ ಭಾರತದ ಸಂಕಲ್ಪ ಶಕ್ತಿ ಜಗತ್ತನ್ನು ಆವರಿಸಿಕೊಂಡಿದೆ ಎಂದು ತಿಳಿಸಿದರು.

ಇಂದು ಸ್ವಾಭಿಮಾನದ ಅರುಣೋದಯದ ಕಾಲದಲ್ಲಿ ನಾವಿದ್ದೇವೆ. ಸ್ವಾಭಿಮಾನದ ಸಂಕೇತವಾಗಿ ನಡೆಯುತ್ತಿರುವ ಅನೇಕ ಪ್ರಯತ್ನಗಳು ಜನಸಾಮಾನ್ಯರಿಗೂ ತಲುಪಬೇಕು. ಸ್ವದೇಶಿ ಮೇಳದಂತಹ ಪ್ರಯತ್ನಗಳಿಂದ ಭಾರತೀಯ ಉತ್ಪಾದನೆಗಳಿಗೆ ಅಭಿಮಾನದ ನೆಲೆ ಸಿಕ್ಕಿದೆ. ಜನರ ಸಾಧನೆ ಮತ್ತು ಕ್ರಿಯಾಶಕ್ತಿಯನ್ನು ಪ್ರೋತ್ಸಾಹಿಸುವಂತಾಗಿದೆ. ಸ್ವದೇಶಿಯನ್ನು ಜಗಜ್ಜಾಹೀರು ಮಾಡಬೇಕೆಂಬ ಈ ಅದಮ್ಯ ಮತ್ತು ಅದ್ಭುತ ಸಂಕಲ್ಪಕ್ಕೆ ಜನರ ಪ್ರೋತ್ಸಾಹವೂ ಸಿಗಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸ್ವಭಾಷಾ, ಸ್ವಭೂಷಾ, ಸ್ವದೇಶಿ, ಸ್ವಧರ್ಮ ವಿದ್ದಾಗ ಮಾತ್ರ ಸ್ವರಾಜ್ಯಕ್ಕೆ ಪರಿಪೂರ್ಣವಾದ ಅರ್ಥ ಬರುತ್ತದೆ ಎಂದು ತಿಲಕರು, ಅರವಿಂದರಾದಿಯಾಗಿ ಅನೇಕ ಹಿರಿಯರು ತಿಳಿಸಿದ್ದಾರೆ. ವಿವಿಧತೆಯಿಂದ ಕೂಡಿದ ಸಂಸ್ಕೃತಿ ನಮ್ಮದು. ಇಲ್ಲಿನ ಸಾಂಸ್ಕೃತಿಕ ನೆಲಗಟ್ಟಿನಲ್ಲಿ ನಿರ್ಮಾಣವಾದ ಉದ್ಯಮಗಳಿಗೆ ಬ್ರ್ಯಾಂಡಿಂಗ್ ನೀಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ದೊಡ್ಡ ದೊಡ್ಡ ಕಂಪೆನಿಗಳ ಜೊತೆಗೆ ಸ್ವದೇಶಿ ವಸ್ತುಗಳು ಸ್ಪರ್ಧಿಸಬೇಕಾದರೆ ರಾಷ್ಟ್ರದ ವ್ಯಾಪಾರ ಕ್ಷೇತ್ರದಲ್ಲಿ ಇರಬೇಕಾದ ವಾತಾವರಣವನ್ನು ನಿರ್ಮಿಸುವಲ್ಲಿ ಸ್ವದೇಶಿ ಜಾಗರಣ ಮಂಚ್ ನ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಸರ್ಕಾರದ್ದೂ ಇದೆ.
ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಆತ್ಮನಿರ್ಭರದ ಕರೆ ಸ್ವದೇಶಿತನಕ್ಕೆ ಹೊಸ ಹುರುಪನ್ನು ನೀಡಿದೆ. ವೋಕಲ್ ಫಾರ್ ಲೋಕಲ್, ಮೇಕ್ ಇನ್ ಇಂಡಿಯಾ, ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್, ಒನ್ ಸ್ಟೇಷನ್ ಒನ್ ಪ್ರಾಡಕ್ಟ್, ಮುದ್ರಾದಂತಹ ಅನೇಕ ಯೋಜನೆಗಳ ಮೂಲಕ ಕೇಂದ್ರ ಸರ್ಕಾರ ಭಾರತೀಯ ಉದ್ಯಮಗಳಿಗೆ ಬೆಂಬಲ ನೀಡುತ್ತಿದೆ. ಇದರ ಪರಿನಾಮವಾಗಿ ಹೊಸ ಭಾರತದ ಕನಸುಗಳು ಬೃಹತ್ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ವದೇಶಿ ಜಾಗರಣ ಮಂಚ್ ನ ಅಖಿಲ ಭಾರತೀಯ ಸಹ ಸಂಯೋಜಕ ಅಶ್ವಿನ್ ಮಹಾಜನ್ ಮಾತನಾಡಿ ಭಾರತ ಮೇಳಗಳ ದೇಶ. ಇಲ್ಲಿನ ಹೊಸ ಆಲೋಚನೆಗಳಿಗೆ ಹಿಡಿದ ಕೈಗನ್ನಡಿಯಂತ ಇಂತಹ ಸ್ವದೇಶಿ ಮೇಳಗಳು ತಿಳಿಸುತ್ತಿವೆ. ಪ್ರಸ್ತುತ ಭಾರತವನ್ನು ಜಗತ್ತು ಗುರುತಿಸುತ್ತಿರುವಂತಹ ಸಂದರ್ಭದಲ್ಲಿ ಬೃಹತ್ ಉತ್ಪಾದಕ ರಾಷ್ಟ್ರವಾಗಿ ಬೆಳೆಯುವ ಹಂತದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ಆಗುತ್ತಿರುವ ಇಂತಹ ಪ್ರಯತ್ನಗಳು ಹೊಸದಿಕ್ಕನ್ನು ನೀಡುತ್ತಿವೆ. ಈ ರೀತಿಯ ಪ್ರಯತ್ನಗಳಿಗೆ ಭಾರತದಲ್ಲಿ ಹೊಸದೊಂದು ಸ್ಪಂದನೆಯೂ ಉಂಟಾಗುತ್ತಿದೆ.

ಅಂದು ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಕುರಿತು ಮಾತನಾಡುತ್ತಿದ್ದ ಸರ್ಕಾರಗಳು ಇಂದು ಇಂದು ವೋಕಲ್ ಫಾರ್ ಲೋಕಲ್, ಆತ್ಮನಿರ್ಭರ ಭಾರತದ ಕುರಿತು ಮಾತನಾಡುತ್ತಿದೆ. ಇದರ ಪರಿಣಾಮವಾಗಿ ಯುನಿಕಾರ್ನ್ ಗಳ ಸಂಖ್ಯೆ ಜಾಸ್ತಿಯಾಗಿದೆ. ಆತ್ಮನಿರ್ಭರದ ಕಲ್ಪನೆಯ ಮುಲಕ ಜಗತ್ತಿನ ನಂಬರ್ ವನ್ ರಾಷ್ಟ್ರ ನಾವಾಗಬೇಕು. 2047ರಲ್ಲಿ ವಿಕಸಿತ ಭಾರತವಾಗುವುದಕ್ಕೆ ನಾವೆಲ್ಲರೂ ಕೈಗೂಡಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯನಗರದ ಶಾಸಕ ಸಿ ಕೆ ರಾಮಮೂರ್ತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ವದೇಶಿ ಮೇಳದ ಸಂಯೋಜಕ ಅಶ್ವತ್ಥ್ ನಾರಾಯಣ ಟಿಎಸ್, ಸಂಘಟಕ ಅಮಿತ್ ಅಮರನಾಥ್ ಉಪಸ್ಥಿತರಿದ್ದರು.

ಫೆಬ್ರವರಿ 7 ರಿಂದ 11 ರ ವರೆಗೆ ನಡೆದ ಸ್ವದೇಶಿ ಮೇಳದಲ್ಲಿ 233 ಮಳಿಗೆಗಳಿದ್ದವು. ಒಂದುಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದರು.



