ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾಗಿ ಕಾರ್ಯನಿರ್ವಹಿಸಿದ್ದ ಜ್ಯೇಷ್ಠ ಪ್ರಚಾರಕ ಹಾಗೂ ಈ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾಗಿದ್ದ ಶ್ರೀ ಮದನ್ ದಾಸ್ ದೇವಿ (81 ವರ್ಷಗಳು) ಇಂದು ಮುಂಜಾನೆ 5.00 ಗಂಟೆಗೆ ನಿಧನರಾಗಿದ್ದಾರೆ.

ಮದನ್ ದಾಸ್ ದೇವಿ: ಪರಿಚಯ
ಜುಲೈ 9, 1942ರಲ್ಲಿ ಜನಿಸಿದ ಮದನ್ ದಾಸ್ ದೇವಿ ಅವರು ಮೂಲತಃ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಕರ್ಮಾಳ ಗ್ರಾಮಕ್ಕೆ ಸೇರಿದವರು. ಶಾಲಾ ಶಿಕ್ಷಣದ ನಂತರ, ಉನ್ನತ ಶಿಕ್ಷಣಕ್ಕಾಗಿ 1959 ರಲ್ಲಿ ಪುಣೆಯ ಪ್ರಸಿದ್ಧ ಬಿಎಂಸಿಸಿ ಕಾಲೇಜಿನಲ್ಲಿ ಪ್ರವೇಶ ಪಡೆದರು. M.Com ಸ್ನಾತಕೋತ್ತರ ಪದವಿಯ ನಂತರ, ILS ಕಾನೂನು ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ LLB ವ್ಯಾಸಂಗ ಪೂರ್ಣಗೊಳಿಸಿದರು. ನಂತರ ಸಿಎ ಮಾಡಿದರು. ಪುಣೆಯಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಸಮಯದಲ್ಲಿ ಹಿರಿಯ ಸಹೋದರ ಶ್ರೀ ಖುಶಾಲ್ದಾಸ್ ದೇವಿಯವರ ಪ್ರೇರಣೆಯಿಂದ ಸಂಘದ ಸಂಪರ್ಕಕ್ಕೆ ಬಂದರು.

1964 ರಿಂದ ಮುಂಬೈನಲ್ಲಿ ಎಬಿವಿಪಿಯ ಕೆಲಸವನ್ನು ಪ್ರಾರಂಭಿಸಿದರು. 1966ರಲ್ಲಿ ಎಬಿವಿಪಿ ಮುಂಬೈನ ಕಾರ್ಯದರ್ಶಿಯಾದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕರ್ಣಾವತಿ ರಾಷ್ಟ್ರೀಯ ಸಮಾವೇಶದಲ್ಲಿ (1968), ಗೌರವಾನ್ವಿತ ಮದನ್ ದಾಸ್ ಜಿ ಅವರಿಗೆ ಪೂರ್ಣಾವಧಿ ಕಾರ್ಯಕರ್ತರಾಗಿ ಮತ್ತು ಪಶ್ಚಿಮಾಂಚಾಲ ಕ್ಷೇತ್ರೀಯ ಸಂಘಟನಾ ಮಂತ್ರಿಯಾಗಿ ಜವಾಬ್ದಾರಿಯನ್ನು ಘೋಷಿಸಲಾಯಿತು.

1970ರಿಂದ 1992ರವರೆಗೆ ಸತತ 22 ವರ್ಷಗಳ ಕಾಲ ಎಬಿವಿಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಅವರು ದೇಶಾದ್ಯಂತ ತಾಲೂಕು, ಮಹಾವಿದ್ಯಾಲಯ ಮತ್ತು ನಗರ ಮಟ್ಟದಲ್ಲಿ ಸುಸಂಸ್ಕೃತ ಕಾರ್ಯಕರ್ತರ ತಂಡದ ಸ್ಥಾಪನೆಗೆ ವಿಶೇಷ ಗಮನ ಹರಿಸಿದ್ದರು. ಸಂಘಟನೆಯ ಅಡಿಗಲ್ಲಿನಂತೆ ಕಾರ್ಯನಿರ್ವಹಿಸಿ ಎಬಿವಿಪಿಯನ್ನು ಹೆಸರಿಗೆ ತಕ್ಕಂತೆ ಅಖಿಲ ಭಾರತ ಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾದರು. ದೇಶಾದ್ಯಂತ ಅನೇಕ ಸಮರ್ಪಿತ ಕಾರ್ಯಕರ್ತರನ್ನು ಬೆಳೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

1991 ರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರಕ್ ಪ್ರಮುಖ್ ಆಗಿ ಮತ್ತು 1993 ರಲ್ಲಿ ಸಂಘದ ಸಹ-ಸರಕಾರ್ಯವಾಹರಾಗಿ ಜವಾಬ್ದಾರಿಯನ್ನು ಸಹ ನಿರ್ವಹಿಸಿದ್ದರು. 2009ರಲ್ಲಿ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರಾಗಿ ಜವಾಬ್ದಾರಿ ಸ್ವೀಕರಿಸಿದ್ದರು.

ವಯೋಸಹಜ ಕಾರಣಕ್ಕಾಗಿ ವಿಶ್ರಾಂತಿ ಮತ್ತು ಆರೈಕೆಯಲ್ಲಿದ್ದ ಮದನ್ ದಾಸ್ ದೇವಿ ಅವರು ಇಂದು ಜುಲೈ 24, 2023 ಬೆಳಗ್ಗೆ 5.00 ಗಂಟೆಗೆ ರಾಜರಾಜೇಶ್ದೈವರಿ ನಗರದ ರಾಷ್ವ್ರೋತ್ಥಾನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಎಬಿವಿಪಿಯ ಸಂಸ್ಥಾಪನಾ ದಿನವಾದ ಜುಲೈ 9 ರಂದೇ ಮದನ್ ಜಿಯ ಜನನವಾಗಿರುವುದು ದೈವ ಸಂಕೇತವಿದ್ದಂತಿದೆ ಎಂದು ಹಲವಾರು ಎಬಿವಿಪಿಯ ಕಾರ್ಯಕರ್ತರು ಆಗಾಗ ನೆನಪಿಸಿಕೊಳ್ಳುತ್ತಾರೆ.
ಅಂತಿಮ ದರ್ಶನ:
ಇಂದು ಮಧ್ಯಾಹ್ನ 1 ರಿಂದ ಸಂಜೆ 4 ಗಂಟೆಯವರೆಗೆ ಕರ್ನಾಟಕದ ಬೆಂಗಳೂರಿನ ಸಂಘ ಕಾರ್ಯಾಲಯ, ಕೇಶವಕೃಪಾದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯೆಗಳು ನಾಳೆ 25 ಜುಲೈ 2023 ರಂದು ಬೆಳಿಗ್ಗೆ 11:00 ಗಂಟೆಗೆ ಮಹಾರಾಷ್ಟ್ರದ ಪುಣೆಯ ವೈಕುಂಠ ಸ್ಮಶಾನದಲ್ಲಿ ನಡೆಯಲಿದೆ.
ಶ್ರದ್ದಾಂಜಲಿ:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ , ಪ್ರಧಾನಿ ನರೇಂದ್ರ ಮೋದಿ, ಕ್ಷೇತ್ರೀಯ ಸಂಘಚಾಲಕ್ ವಿ.ನಾಗರಾಜ್, ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ.
ಅಭಾವಿಪ ಮತ್ತು ಸಂಘ ಕಾರ್ಯವನ್ನು ಹಿಂದಿನ ತಲೆಮಾರಿನಲ್ಲಿ ಯಶಸ್ವಿಯಾಗಿ ಕಟ್ಟಿ ಬೆಳಸಿದವರು. ಇಂದಿನ ಅನೇಕ ಪ್ರಮುಖ ಕಾರ್ಯಕರ್ತರನ್ನು ರೂಪಿಸಿದವರು. ಅವರಿಗೆ ನನ್ನ ಶತಶತ ನಮನಗಳು. ಓಂ ಶಾಂತಿ.
– ವಿ. ನಾಗರಾಜ್, ಕ್ಷೇತ್ರೀಯ ಸಂಘಚಾಲಕ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹಸರಕಾರ್ಯವಾಹ ಸಿ.ಆರ್.ಮುಕುಂದ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಹಿರಿಯ ರಾಜಕಾರಣಿ ಪಿ.ಜಿ.ಆರ್ ಸಿಂಧಿಯಾ, ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ಸೇತು ಮಾಧವನ್, ಪರ್ಯಾವರಣ್ ಸಂರಕ್ಷಣೆ ಗತಿವಿಧಿಯ ಅಖಿಲ ಭಾರತೀಯ ಸಂಯೋಜಕ ಗೋಪಾಲ ಆರ್ಯನ್, ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಕಾರ್ಯದರ್ಶಿ ಸ್ಥಾಣುಮಾಲಯನ್, ಹಿರಿಯ ಸಾಮಾಜಿಕ ಕಾರ್ಯಕರ್ತ ವೈ.ಕೆ.ರಾಘವೇಂದ್ರ ರಾವ್, ಎಬಿವಿಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಪ್ರಫುಲ್ಲ ಆಕಾಂತ್, ಚಾಣಕ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ಶ್ರೀಧರ್, ರಾಷ್ಟ್ರೋತ್ಥಾನ ಪರಿಷತ್ ನ ಅಧ್ಯಕ್ಷ ಎಂ.ಪಿ.ಕುಮಾರ್, ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗಡೆ, ಕೆಪಿಸಿಸಿ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ಹಾಗೂ ರಾಜಕೀಯ ಚಿಂತಕ ಪ್ರೊ. ಕೆ.ಇ.ರಾಧಾಕೃಷ್ಣ, ಮಾಜಿ ಶಿಕ್ಷಣ ಸಚಿವ ಮತ್ತು ಶಾಸಕ ಸುರೇಶ್ ಕುಮಾರ್, ಮಾಜಿ ಉನ್ನತ ಶಿಕ್ಷಣ ಸಚಿವ ಮತ್ತು ಶಾಸಕ ಅಶ್ವತ್ಥ್ ನಾರಾಯಣ್, ಮಾಜಿ ಶಾಸಕ ಅರವಿಂದ ಲಿಂಬಾವಳಿ, ಬೆಂಗಳೂರಿನಲ್ಲಿರುವ ಸಂಘ ಕಾರ್ಯಾಲಯ ಕೇಶವಕೃಪಾದಲ್ಲಿ ಅಂತಿಮ ದರ್ಶನ ಪಡೆದರು.