

ಮಾಜಿ ಮುಖ್ಯ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಪ್ರಸ್ತುತ ನಡೆಯುತ್ತಿರುವ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಕುರಿತಾಗಿ, ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವುದು ತಿಳಿಯಿತು. ಯಾತಕ್ಕೆ ಹೀಗೆ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ. ಹಿಟ್ಲರ್ ಕಾಲದಲ್ಲಿ ನಾಜಿ-ಯಹೂದಿಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಎಲ್ಲಿ ತಲುಪುತ್ತದೆ ಗೊತ್ತಿಲ್ಲ ಎಂದು ಟ್ವಿಟ್ ಮಾಡಿದ್ದಾರೆ.

ವಿಶ್ವ ಹಿಂದೂ ಪರಿಷತ್ತು ಶ್ರೀ ರಾಮ್ ಮಂದಿರ ನಿಧಿ ಸಮರ್ಪಣಾ ಅಭಿಯಾನದ ನೇತೃತ್ವ ವಹಿಸುತ್ತಿದ್ದು ಮಾಜಿ ಮುಖ್ಯ ಮಂತ್ರಿಗಳ ಟ್ವಿಟ್ ಬಾಲಿಶ ಹಾಗೂ ಬೇಜವಾಬ್ದಾರಿಯಿಂದ ಕೂಡಿದ್ದಾಗಿದೆ ಎಂದು ತೀಕ್ಷವಾಗಿ ಖಂಡಿಸಿದೆ. ವಿಹಿಂಪ ನ ಕರ್ನಾಟಕ ರಾಜ್ಯದ ಸಂಘಟನಾ ಕಾರ್ಯದರ್ಶಿ ಶ್ರೀ ಬಸವರಾಜು ತಮ್ಮ ಪತ್ರಿಕಾ ಹೇಳಿಕೆಯಲ್ಲಿ, ಇಡಿಯ ಸಮಾಜವು ಧನಾತ್ಮಕವಾಗಿ ನಿಧಿ ಸಮರ್ಪಣೆಯಲ್ಲಿ ತೊಡಗಿದೆ. ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿರ್ಮಿಸಲು ಸಹಾಯವಾಗುವಂತೆ ಜನಸಾಮಾನ್ಯರೆಲ್ಲರೂ ನಿಧಿ ಸಮರ್ಪಿಸುತ್ತಿರುವಾಗ, ಮಾಜಿ ಮುಖ್ಯಮಂತ್ರಿಯೊಬ್ಬರಿಂದ ಇಂತಹ ಬೇಜವಾಬ್ದಾರಿ ಹೇಳಿಕೆ ಸಲ್ಲದು. ವಿಹಿಂಪ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಮನೆ ಮನೆಗೆ ತೆರಳಿ ನಿಧಿಯನ್ನು ಸಂಗ್ರಹಿಸುವಾಗ ಇಂತಿಷ್ಟೇ ಹಣವನ್ನು ದಾನ ಮಾಡಬೇಕೆಂದು ಕೇಳುವುದಿಲ್ಲ. ಪ್ರಭು ಶ್ರೀ ರಾಮನ ಆದರ್ಶವನ್ನು ಜೀವನದಲ್ಲಿ ಪಾಲಿಸಬೇಕು, ಹಾಗೂ ಈ ದೇಶದ ಅಸ್ಮಿತೆಯಾದ ಶ್ರೀ ರಾಮನ ಮಂದಿರಕ್ಕೆ ವಿವಿಧ ಸ್ಥರದ ಹಲವಾರು ಜನಸಾಮಾನ್ಯರು ತಮ್ಮ ಕೊಡುಗೆ ಸಮರ್ಪಣೆ ಮಾಡುತ್ತಿರುವುದನ್ನು ಗಮನಿಸಬೇಕು.

ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಇಂತಹ ಬೇಜವಾಬ್ದಾರಿ ಹೇಳಿಕೆಯನ್ನು ವಿಹಿಂಪ ಖಂಡಿಸುತ್ತದೆ, ಹಾಗೂ ಆರೆಸ್ಸೆಸ್ ಅಂತಹ ಸಂಘಟನೆಯ ಬಗ್ಗೆ, ವೃಥಾ ಆರೋಪ ಮಾಡುವುದು ಯಾವುದೇ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ. ಸಾರ್ವಜನಿಕ ವಲಯದಲ್ಲಿ ಸೊರಗುತ್ತಿರುವ ಸಂವಾದ ಹಾಗೂ ಅದರಲ್ಲಿ ನೇರವಾಗಿ ಭಾಗಿಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ನಡೆಗೆ ವಿಹಿಂಪ ಆಕ್ಷೇಪ ವ್ಯಕ್ತಪಡಿಸುತ್ತದೆ ಎಂದಿದ್ದಾರೆ.
ಇನ್ನು ಬಜರಂಗ ದಳದ ಸೂರ್ಯನಾರಾಯಣ ಅವರು ಮಾತನಾಡಿ ಸ್ವ ಇಚ್ಛೆಯಿಂದ ಜನರು ನೀಡುವ ದೇಣಿಗೆಗೆ ಕುಮಾರಸ್ವಾಮಿಯವರು ಅವಮಾನಿಸಿದ್ದಾರೆ ಹಾಗೂ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ,
