ಬೆಂಗಳೂರು: ವಿಶ್ವ ಹಿಂದೂ ಪರಿಷದ್ ನ ಬೆಂಗಳೂರು ( ದಕ್ಷಿಣ) ಕ್ಷೇತ್ರೀಯ ಕಾರ್ಯದರ್ಶಿ ಹಾಗೂ ಕೇಂದ್ರ ಕಾರ್ಯಕಾರಿ ಸದಸ್ಯರಾಗಿದ್ದ ಶ್ರೀ ಬಿ. ಎನ್. ಮೂರ್ತಿ (80) ಅವರು ದೈವಾಧೀನರಾಗಿದ್ದಾರೆ.

ಅನಾರೋಗ್ಯದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದ ಅವರು ಇಂದು (ಅಕ್ಟೋಬರ್ 29) ಮಧ್ಯಾಹ್ನ 2:45 ವಿಧಿವಶರಾಗಿದ್ದಾರೆ.

ಹೆಚ್ ಎ ಎಲ್ ನಲ್ಲಿ ಎಂಜಿನಿಯರ್ ಆಗಿದ್ದ ಮೂರ್ತಿಯವರು ಅವಿವಾಹಿತರಾಗಿಯೇ ಉಳಿದು ತಮ್ಮ ಸಂಪೂರ್ಣ ಬದುಕನ್ನು ಹಿಂದೂ ಸಂಘಟನೆಯ ಕಾರ್ಯಕ್ಕೆ ಮುಡುಪಾಗಿಟ್ಟಿದ್ದರು. ಅಶೋಕ್ ಸಿಂಘಾಲ್,ಉಮಭಾರತಿ, ಆಡ್ವಾಣಿ, ಪೇಜಾವರ ಹಿರಿಯ ಶ್ರೀಗಳು, ಮುಂತಾದ ಗಣ್ಯರ ನಿಕಟ ಪರಿಚಯ ಉಳ್ಳವರಾಗಿದ್ದರು.

ಸೇವಾಭಾರತಿ ಶಿಕ್ಷಣ ಸಂಸ್ಥೆ ಚಾಮರಾಜನಗರ ಇದರ ಪ್ರಾರಂಭಿಕ ವಿಶ್ವಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಶ್ರೀ ರಾಮ ಜನ್ಮಭೂಮಿ ಆಂದೋಲನ, ಗಂಗಾಜಲ ವಿತರಣಾ ಅಭಿಯಾನ, ಗೋ ಹತ್ಯಾ ನಿಷೇಧ ಚಳುವಳಿಗಳಲ್ಲಿ ಸಕ್ರಿಯರಾಗಿದ್ದರು.

ಅವರ ಹಲವು ಕ್ರಿಯಾಶೀಲ ಪ್ರಯೋಗದಲ್ಲಿ, ಕಾಗಿನೆಲೆಯಲ್ಲಿ ಕನಕದಾಸ ಜಯಂತಿ ಆಚರಣೆ, ಕರ್ನಾಟಕದ ವಿವಿಧ ಭಾಗಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಪ್ರವಚನಕಾರರಿಗೆ ಪ್ರಶಿಕ್ಷಣ ಪ್ರಮುಖವಾದದ್ದು. ಇವರ ಸಾಮರಸ್ಯದ ಕಾರ್ಯವನ್ನು ಗುರುತಿಸಿ, ರಾಜ್ಯ ಸರ್ಕಾರ ಪ್ರತಿಷ್ಠಿತ ‘ಕನಕ ಶ್ರೀ’ ಪ್ರಶಸ್ತಿಯನ್ನು ನೀಡಿದೆ.

ಶ್ರೀ ಮೂರ್ತಿಯವರು ಜಯನಗರದ ಮಾಜಿ ಶಾಸಕ ದಿವಂಗತ ಬಿ.ಎನ್ ವಿಜಯಕುಮಾರ್ ಅವರ ಹಿರಿಯ ಸೋದರರು. ಶ್ರೀ ಮೂರ್ತಿಯವರು ಸೋದರಿ, ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಂತ ಕಾರ್ಯವಾಹಿಕಾ ವಸಂತ ಸ್ವಾಮಿ, ಸೋದರರಾದ ಹರಿಪ್ರಕಾಶ್, ಮುರಳಿ, ಪ್ರಹ್ಲಾದ್ ಬಾಬು ಬಂಧುಮಿತ್ರರನ್ನು ಅಗಲಿದ್ದಾರೆ.

ಗಣ್ಯರಿಂದ ಸಂತಾಪ: ಶ್ರೀ ಬಿ ಎನ್ ಮೂರ್ತಿ ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಪೇಜಾವರ ಶ್ರೀಗಳು, ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ವಿ. ನಾಗರಾಜ, ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಶಂಕರಾನಂದ ಬಿ.ಆರ್. ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.


ಬಿಎನ್ ಮೂರ್ತಿ ಅವರು ನಮಗೂ ಹಾಗೂ ನಮ್ಮ ಗುರುಗಳಿಗೂ ಅತ್ಯಂತ ಆತ್ಮೀಯರಾಗಿದ್ದವರು. ಶ್ರೀ ರಾಮ ಜನ್ಮಭೂಮಿ ಆಂದೋಲನ, ಗಂಗಾಜಲ ವಿತರಣಾ ಅಭಿಯಾನ, ಗೋ ಹತ್ಯಾ ನಿಷೇಧ ಚಳವಳಿಗಳಲ್ಲಿ ಮೂರ್ತಿ ಅವರದ್ದು ಮಹತ್ತರ ಪಾತ್ರ.

– ಪೇಜಾವರ ಶ್ರೀ


ಬಿ ಎನ್ ಮೂರ್ತಿಯವರು ಇನ್ನಿಲ್ಲ ಎನ್ನುವ ಸುದ್ದಿ ಅಪಾರ ದುಃಖ ತಂದಿತು. ಅವರು ಒಬ್ಬ ನೈಜ, ಸಮರ್ಪಿತ ಸ್ವಯಂಸೇವಕರಾಗಿದ್ದರು. ಹಿಂದು ಸಂಸ್ಕೃತಿಯ ರಕ್ಷಣೆ-ಪೋಷಣೆಯ ಕಾರ್ಯಗಳಲ್ಲಿ ಸದಾ ಮುಂದಿರುತ್ತಿದ್ದ ಮೂರ್ತಿಯವರ ಕೀರ್ತಿ ವ್ಯಾಪಕ. ಅವರು ಪ್ರತಿಭೆ- ಪರಿಶ್ರಮಗಳ ಸಾಕಾರ ಮೂರ್ತಿಯಾಗಿದ್ದರು. ಅದೆಲ್ಲವನ್ನೂ ಸಂಘಕಾರ್ಯಕ್ಕೆ ಸಮರ್ಪಿಸಿದ ಅಚ್ಚ ಸ್ವಯಂಸೇವಕ. ಅವರ ನಿಧನದಿಂದ “ದಿವ್ಯಧ್ಯೇಯ ಕೀ ಓರ ತಪಸ್ವೀ ಅವಿಚಲ ಚಲತಾ ಹೈ” ಎಂಬ ಪಂಕ್ತಿಯನ್ನು ಬದುಕಿದ ಒಬ್ಬ ಧ್ಯೇಯಪಥಿಕ ಇಲ್ಲದಂತಾಯಿತು. ಬಿ ಎನ್ ಮೂರ್ತಿಯವರ ಸ್ಮೃತಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ.
ಅವರ ಕುಟುಂಬದ ಎಲ್ಲರಿಗೆ ವಿಹಿಂಪದ ಎಲ್ಲರಿಗೆ ಸಂತಾಪಗಳು. ಪರಮಾತ್ಮ ದಿವಂಗತ ಆತ್ಮಕ್ಕೆ ಸದ್ಗತಿ ನೀಡಲಿ.
ॐ ಶಾಂತಿಃ॥
– ದತ್ತಾತ್ರೇಯ ಹೊಸಬಾಳೆ, ಸರಕಾರ್ಯವಾಹ, ಆರ್ ಎಸ್ ಎಸ್


ಶ್ರೀಯುತ ಬಿ.ಎನ್.ಮೂರ್ತಿ ಅವರು ಶ್ರದ್ಧಾವಂತ, ನಿಷ್ಟಾವಂತ, ಕರ್ತೃತ್ವವಂತ ಕಾರ್ಯಕರ್ತನ ಪ್ರತೀಕ. ಅವರ ಇಡೀ ಕುಟುಂಬ ಸಂಘದ ಕುಟುಂಬವಾಗಿ ಇರಲು ಅವರೇ ನಿರಂತರ ಪ್ರೇರಣೆ. ಸಂಘದ ಕಾರ್ಯಕರ್ತರಾಗಿ, ವಿಶ್ವಹಿಂದು ಪರಿಷತ್ತಿನ ಹಿರಿಯ ಕಾರ್ಯಕರ್ತರಾಗಿ ಅನೇಕ ದಶಕಗಳು ಸೇವೆಯನ್ನು ಸಲ್ಲಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಒಳ್ಳಯ ಪ್ರಭುತ್ವ ಇದ್ದ ಅವರು ಅನೇಕ ಹಿರಿಯರ ಬೌದ್ಧಿಕಗಳನ್ನು ಅಚ್ಚುಕಟ್ಟಾಗಿ ದಾಖಲಿಸುತ್ತಿದ್ದರು. ಅವರಿಗೆ ನನ್ನ ಶತ ನಮನಗಳು.

– ವಿ.ನಾಗರಾಜ
ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯರು,
ರಾಷ್ಟ್ರೀಯ ಸ್ವಯಂಸೇವಕ ಸಂಘ


Leave a Reply

Your email address will not be published.

This site uses Akismet to reduce spam. Learn how your comment data is processed.