ಬೆಂಗಳೂರು, ಜುಲೈ ೧೧ ೨೦೧೭. ರಾಷ್ಟ್ರೀಯ ವಿಚಾರಗಳನ್ನು ಓದುಗರಿಗೆ ಮುಟ್ಟಿಸುತ್ತಿರುವ ಕನ್ನಡದ ‘ವಿಕ್ರಮ’ ಸಾಪ್ತಾಹಿಕ ೭೦ನೇ ಸಂವತ್ಸರಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಬೆಂಗಳೂರು ಚಾಮರಾಜಪೇಟೆಯ ಆದರ್ಶ ಕಾಲೇಜು ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿಗಳಾದ ಶ್ರೀ ಡಿ ಎಚ್ ಶಂಕರಮೂರ್ತಿ, ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಹಾಗೂ ನಿವೃತ್ತ ರಾಜ್ಯಪಾಲರಾದ ರಾಮಾಜೋಯಿಸ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖರಾದ ಶ್ರೀ ಮಂಗೇಶ್ ಭೇಂಡೆ, ಹಿರಿಯ ಪತ್ರಕರ್ತರಾದ ಶ್ರೀ ಎಸ್ ಕೆ ಶೇಷಚಂದ್ರಿಕ ಉಪಸ್ಥಿತರಿದ್ದರು.
’ವಿಕ್ರಮಕ್ಕೆ ೭೦ ವರ್ಷ ವಯಸ್ಸಾಗಿಲ್ಲ. ಅದು ತಾರುಣ್ಯದ ಸ್ಥಾನದಲ್ಲಿ ನಿಂತು ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದೆ. ದಿನ ಕಳೆದಂತೆ ಸಮಾಜಕ್ಕೆ ಪೂರಕವಾದ ಸಂಗತಿಗಳನ್ನು ನೀಡುವಲ್ಲಿ ಪ್ರಬಲವಾಗುತ್ತಿದೆ’ ಎಂದು ಶಂಕರಮೂರ್ತಿಯವರು ಅಭಿಪ್ರಾಯಪಟ್ಟರು.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಪತ್ರಿಕೆ ರಾಷ್ಟ್ರೀಯ ವಿಚಾರಗಳನ್ನು ತೆಗೆದುಕೊಂಡು ಲೇಖನಗಳನ್ನು ಪ್ರಕಟಿಸುತ್ತಿದೆ. ಅದರ ಜೊತೆಗೆ ಕಾಂಗ್ರೆಸ್ ಸರಕಾರ ಹಲವು ಸಂದರ್ಭಗಳಲ್ಲಿ ಪತ್ರಿಕೆಯನ್ನು ಮುಚ್ಚುವ ಪ್ರಯತ್ನ ಮಾಡಿದರೂ ಅದರ ಓದುಗರ ಸಂಖ್ಯೆ ಬೆಳೆಯುತ್ತಲೇ ಇದೆ.
‘ಗದುಗಿನಲ್ಲಿ ಬ್ಯಾಂಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆ ಸು ನಾ ಮಲ್ಯರು ದೊಡ್ಡ ಸಂಬಳದ ಉದ್ಯೋಗವನ್ನು, ಹುದ್ದೆಯನ್ನು ಬಿಟ್ಟು ಆದಾಯವಿಲ್ಲದ ಪತ್ರಿಕೋದ್ಯಮಕ್ಕೆ ಕಾಲಿಟ್ಟು ತಮ್ಮ ನಿಸ್ಪೃಹ ಸೇವೆಯಿಂದ ಪತ್ರಿಕೆಯನ್ನು ಕಟ್ಟಿದರು’ ಎಂದು ಮಂಗೇಶ್ ಭೇಂಡೆ ನೆನಪಿಸಿಕೊಂಡರು.
ಶ್ರೀ ವೃಶಾಂಕ ಭಟ್ ಪತ್ರಿಕೆಯ ನೂತನ ಸಂಪಾದಕರಾಗಿ ಹಾಗೂ ನ ನಾಗರಾಜ ವ್ಯವಸ್ಥಾಪಕ ಸಂಪಾದಕರಾಗಿ ಇನ್ನು ಮುಂದೆ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿವರ್ಷವೂ ಗುರು ಪೌರ್ಣಮಿಗೆ ಪತ್ರಿಕೆಯ ಹೊಸ ಸಂಪುಟ ಅನಾವರಣಗೊಳ್ಳುತ್ತದೆ. ಈ ಸಮಾರಂಭದಲ್ಲೇ ವರ್ಷದ ಹೊಸ ಸಂಪುಟವನ್ನು ಬಿಡುಗಡೆ ಮಾಡಲಾಯಿತು. ಅಲ್ಲದೇ ವಿಕ್ರಮ ಮಾಧ್ಯಮ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಅರ್ಹತಾ ಪತ್ರ ವಿತರಿಸಲಾಯಿತು.
Sri Mangesh Bhende, Akhila Bharata Vyavastha Pramukh of the RSS
ಕೃಪೆ : ಹೊಸ ದಿಗಂತ / ವಿಕ್ರಮ