ಇಂದು ಜಯಂತಿ
ಸರ್.ಎಂ ವಿ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ಎಂ. ವಿಶ್ವೇಶ್ವರಯ್ಯ ಅವರು ಸಾರ್ವಕಾಲಿಕವಾಗಿ ಭಾರತೀಯರ ಸ್ಮೃತಿಪಟಲದಲ್ಲಿ ನೆನಪಿರುವ ಗಣ್ಯ ಅಭಿಯಂತರರಲ್ಲಿ ಒಬ್ಬರು. ಇವರ ಹುಟ್ಟಿದ ದಿನವನ್ನು ಭಾರತ ದೇಶದಾದ್ಯಂತ ‘ಅಭಿಯಂತರರ ದಿನ’ ಎಂದು ಆಚರಿಸುತ್ತಾರೆ. ಇಂಜಿನಿಯರಿಂಗ್‌ ಕ್ಷೇತ್ರದಲ್ಲಿ ಅಗಾಧ ಕೊಡುಗೆ ನೀಡಿದ ಅಪ್ರತಿಮ ಕನ್ನಡಿಗ ಸರ್ ಎಂ ವಿಶ್ವೇಶ್ವರಯ್ಯ. ಇವರು ಇಂಜಿನಿಯರಿಂಗ್‌ ನಲ್ಲಿ ಮಾತ್ರವಲ್ಲದೆ ಸಾಹಿತ್ಯದಲ್ಲೂ ಸಹ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಇಂದು ಅವರ ಜಯಂತಿ.


ಪರಿಚಯ
ಸರ್‌ ಎಂ ವಿಶ್ವೇಶ್ವರಯ್ಯ ಅವರು ಸೆಪ್ಟೆಂಬರ್ 15, 1861ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬಲ್ಲಿ ಜನಿಸಿದರು. ಇವರ ತಂದೆ ‘ಶ್ರೀನಿವಾಸ ಶಾಸ್ತ್ರಿ ಹಾಗೂ ತಾಯಿ ‘ವೆಂಕಟಲಕ್ಷ್ಮಮ್ಮ. ಅವರ ಪೂರ್ವಜರು ಈಗಿನ ಆಂಧ್ರಪ್ರದೇಶದ ‘ಮೋಕ್ಷಗುಂಡಂ’ ಎಂಬ ಸ್ಥಳದಿಂದ ವಲಸೆ ಬಂದು ಮುದ್ದೇನಹಳ್ಳಿಯಲ್ಲಿ ವಾಸವಾಗಿದ್ದ ಕಾರಣ ಅವರ ಹೆಸರಿನೊಡನೆ ಮೋಕ್ಷಗುಂಡಂ ಸೇರಿಸಲಾಯಿತು. ವಿಶ್ವೇಶ್ವರಯ್ಯನವರ ತಂದೆ ಸಂಸ್ಕೃತ ವಿದ್ವಾಂಸರು; ಧರ್ಮ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರೂ ಆಗಿದ್ದರು. ವಿಶ್ವೇಶ್ವರಯ್ಯನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ಮುಗಿಸಿದರು. 1881ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದರು.


ವಿಶ್ವೇಶ್ವರಯ್ಯನವರು 1884ರಲ್ಲಿ ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸೇರಿದರು. ನಂತರ ಭಾರತೀಯ ನೀರಾವರಿ ಆಯೋಗದಲ್ಲಿ ಕೆಲಸ ಮಾಡಿದರು. ಈ ಆಯೋಗದಲ್ಲಿದ್ದಾಗ ಅವರು ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ಪರಿಚಯಿಸಿದರು. ಅವರ ಪ್ರಯತ್ನದ ಫಲವಾಗಿ ಮೊದಲ ಬಾರಿಗೆ 1903 ರಲ್ಲಿ ಫ್ಲಡ್ ಗೇಟ್ ಗಳು ಪುಣೆಯ ‘ಖಡಕ್ವಾಸ್ಲಾ’ ಅಣೆಕಟ್ಟಿನಲ್ಲಿ ಸ್ಥಾಪಿತವಾದವು.


ವಿಶ್ವೇಶ್ವರಯ್ಯನವರು ಪುಣೆ, ಕೊಲ್ಹಾಪುರ, ಸೋಲಾಪುರ, ವಿಜಾಪುರ, ಮತ್ತು ಧಾರವಾಡ ಈ ನಗರಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಮುಂಬೈ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಇಟಲಿ ದೇಶದ ಮಿಲಾನ್ ಮತ್ತು ಈಡನ್ ನಗರಗಳಿಗೆ ಭೇಟಿ ನೀಡಿ ಆ ನಗರಗಳ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳ ಯೋಜನೆಯನ್ನು ರೂಪಿಸಿದ್ದರು.


1908ರಲ್ಲಿ ಸ್ವಯಂ-ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯನವರು ನಂತರ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. ಮಹಾರಾಜ ಕೃಷ್ಣರಾಜ ಒಡೆಯರ್ ರವರ ಜೊತೆ ಮೈಸೂರು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಕೆಲಸ ಮಾಡಿದರು. 1917ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಇದೇ ಕಾಲೇಜಿಗೆ ನಂತರ ಅವರ ಹೆಸರನ್ನೇ ಇಡಲಾಯಿತು. ಮೈಸೂರು ವಿಶ್ವವಿದ್ಯಾಲಯದ ಬೆಳವಣಿಗೆಗಾಗಿಯೂ ಸಾಕಷ್ಟು ಶ್ರಮಿಸಿದರು
ಸರ್ ವಿಶ್ವೇಶ್ವರಯ್ಯ ಅವರ ಕೊಡುಗೆಗಳು

  • ಕೃಷ್ಣರಾಜಸಾಗರದ ನಿರ್ಮಾಣ. ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಚೇರಮನ್ನರಾಗಿ ಅದರ ಅಭಿವೃದ್ಧಿಗೆ ಕೊಡುಗೆ.  ಮೈಸೂರು ಸಾಬೂನು ಕಾರ್ಖಾನೆಯ ಸ್ಥಾಪನೆ.  ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆ. ಮೈಸೂರು ಬ್ಯಾಂಕ್ ಸ್ಥಾಪನೆ. ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸ್ಥಾಪನೆ. ಮೈಸೂರು ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ. ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ. ಶ್ರೀ ಜಯಚಾಮರಾಜೇಂದ್ರ ವೃತ್ತಿಶಿಕ್ಷಣ ತರಬೇತಿ ಸಂಸ್ಥೆಯ ಸ್ಥಾಪನೆ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದರು.
  • ಸಾಹಿತ್ಯ ಕ್ಷೇತ್ರ
    1902ರಲ್ಲಿ ವಿಶ್ವೇಶ್ವರಯ್ಯ ನವರು ಮುಂಬೈಯಲ್ಲಿ ಸೇವೆಯಲ್ಲಿದ್ದಾಗಲೇ “Present State of Education in Mysore” ಎನ್ನುವ ಪುಸ್ತಕವನ್ನು ಬರೆದು ಆಗಿನ ಮೈಸೂರು ಸಂಸ್ಥಾನದಲ್ಲಿ ಇರುವ ಸ್ಥಿತಿಗತಿಗಳನ್ನು ಉತ್ತಮ ಪಡಿಸುವುದಕ್ಕಾಗಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ರೂಪುರೇಷೆಗಳನ್ನು ಹಾಕಿದ್ದರು. 1920ರಲ್ಲಿ Reconstructing India, 1934ರಲ್ಲಿ Planned Economy for India ಪುಸ್ತಕಗಳನ್ನು ಪ್ರಕಟಿಸಿದರು.
  • ಪ್ರಶಸ್ತಿ
    1915 ರಲ್ಲಿ, ಸಾರ್ವಜನಿಕ ಒಳಿತಿಗಾಗಿ ಅವರು ನೀಡಿದ ಕೊಡುಗೆಗಳಿಗಾಗಿ ಅವರಿಗೆ “ನೈಟ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್ (ಕೆಸಿಐಇ)” ಎಂಬ ಬಿರುದನ್ನು ನೀಡಲಾಯಿತು.1955ರಲ್ಲಿ ಭಾರತ ಸರ್ಕಾರವು ಅವರ ಕೈಗಾರಿಕಾ, ಆರ್ಥಿಕ ಮತ್ತು ಸಾಮಾಜಿಕ ಯೋಜನೆಗಳಿಗಾಗಿ ಅವರಿಗೆ ಅತ್ಯುನ್ನತ ನಾಗರಿಕ ಗೌರವ ಅಂದರೆ ಭಾರತ ರತ್ನ ನೀಡಿ ಗೌರವಿಸಿದೆ.
    ವಿಶ್ವೇಶ್ವರಯ್ಯನವರು ಏಪ್ರಿಲ್ 14 , 1962 ರಂದು ತಮ್ಮ 100 ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.