ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಧಾರ್ಮಿಕ ಹಕ್ಕನ್ನು ನೀಡಿರುವಾಗ ಬಲವಂತದ ಮತಾಂತರದ ಪ್ರಕ್ರಿಯೆ ರಾಷ್ಟ್ರದ ಸಂವಿಧಾನಕ್ಕೆ ವಿರೋಧವಾದದ್ದು. ದೇಶಕ್ಕೆ ಅಂಟಿರುವ ರೋಗವಾದ ಮತಾಂತರದ ಪಿಡುಗನ್ನು ಗುಣಪಡಿಸಬೇಕೇ ಹೊರತು ಅದರ ಆಧಾರದಲ್ಲೇ ರಾಜ್ಯದಲ್ಲಿ ಅಶಾಂತಿಯನ್ನು ಉಂಟು ಮಾಡುವುದು ಸರಿಯಲ್ಲ ಎಂದು ಹಿಂದೂ ಮುಖಂಡ ಪ್ರಕಾಶ್ ರಾಜು ಹೇಳಿದರು.
ವಿಶ್ವ ಹಿಂದೂ ಪರಿಷದ್ – ಬಜರಂಗದಳದ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಮತಾಂತರ ನಿಷೇಧ ಕಾಯಿದೆ ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಶುಕ್ರವಾರ ಮಾತನಾಡಿದರು.
ಸರ್ಕಾರ ರಚನೆಯಾಗಿ ತಿಂಗಳಾಗುವ ಮುನ್ನ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆದ ತರಾತುರಿ ಕಾಂಗ್ರೆಸ್ ಪಕ್ಷದ ಒಳ ಒಪ್ಪಂದವನ್ನು ಸಾಕ್ಷೀಕರಿಸುತ್ತದೆ. ಧರ್ಮ ಒಡೆಯುವ ಕೆಲಸವನ್ನು ಕರಗತ ಮಾಡಿಕೊಂಡಿರುವ ಕಾಂಗ್ರೆಸ್ ಈಗ ಮನೆಯೊಡೆಯುವ ಕೆಲಸಕ್ಕೆ ಕೈ ಹಾಕಿದೆ. ಸೋನಿಯಾ ಗಾಂಧಿಯವರ ದಲ್ಲಾಳಿಗಳಂತೆ ವರ್ತಿಸುವ ಕರ್ನಾಟಕದ ಕಾಂಗ್ರೆಸ್ ನಾಯಕರು ತನ್ನ ಹೈಕಮಾಂಡ್ ಅನ್ನು ಮೆಚ್ಚಿಸಿ ಅಧಿಕಾರ ಪಡೆದುಕೊಳ್ಳುವ ದುರಾಸೆಯಿಂದ ಧರ್ಮ ದ್ರೋಹದ ಕಾರ್ಯವೆಸಗುತ್ತಿದೆ ಎಂದರು.
ಮುಕ್ಕೋಟಿ ದೇವರನ್ನು, ಸಕಲ ಚರಾಚರಗಳನ್ನು ಪೂಜಿಸುವ ನಮ್ಮ ನಾಡಿನಲ್ಲಿ ಕೆಲವರು ಅಲ್ಲಾ ಹಾಗೂ ಯೇಸುವನ್ನು ಪೂಜಿಸುವುದು ಏನೂ ತೊಂದರೆಯಾಗುವುದಿಲ್ಲ, ಅದಕ್ಕೆ ನಮ್ಮ ವಿರೋಧವೂ ಇಲ್ಲ. ಆದರೆ ಆಮಿಷಗಳನ್ನು ಒಡ್ಡಿ, ಹೆದರಿಸಿ, ಮರುಳು ಮಾಡಿ ಮಾಡುವ ಬಲವಂತದ ಮತಾಂತರವನ್ನು ಖಂಡಿಸುತ್ತೇವೆ. ರಾಷ್ಟ್ರದಲ್ಲಿ ಬಲವಂತದ ಮತಾಂತರಗಳಿಂದ ಆಗುತ್ತಿರುವ ಅನ್ಯಾಯಗಳನ್ನು ಕಣ್ಣಾರೆ ಕಂಡರೂ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾಂಗ್ರೆಸ್ ಸರ್ಕಾರ ಅಧಿಕಾರ ಶಾಶ್ವತ ಅಲ್ಲ,ಒಳ್ಳೆಯ ಆಡಳಿತ ಶಾಶ್ವತ ಎನ್ನುವುದನ್ನು ಮನಗಂಡು ಓಲೈಕೆ ರಾಜಕಾರಣವನ್ನು ಬಿಡಬೇಕಾಗಿದೆ ಎಂದು ನುಡಿದರು.
ಹಿಂದೂ ಸಮಾಜ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲಾ ಮಠಗಳ ಪೂಜ್ಯ ಮಠಾಧಿಪತಿಗಳು ಮಠದಿಂದ ಹೊರಬಂದು ಸಮಾಜದ ರಕ್ಷಣೆಗಾಗಿ ಧ್ವನಿ ಎತ್ತಬೇಕಾಗಿದೆ. ನಮ್ಮ ಜಾತಿಯವನಿಗೆ ಪಕ್ಷ ಮತ್ತು ಸರ್ಕಾರಗಳಲ್ಲಿ ಪ್ರಾತಿನಿಧ್ಯ ಸಿಗಬೇಕು ಎಂದು ಪತ್ರಿಕಾ ಪ್ರಕಟಣೆ ನೀಡುವ ಮಠಾಧಿಪತಿಗಳು ಬಲವಂತದ ಮತಾಂತರದ ವಿರುದ್ಧ ಮಾತಾಡಬೇಕಿದೆ. ಹಿಂದೂ ಸಮಾಜ ಮೃತ್ಯುಂಜಯ ಸಮಾಜ ಎನ್ನುವುದನ್ನು ಸಾಬೀತುಪಡಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಜರಂಗದಳದ ವಿಭಾಗ ಸಂಯೋಜಕ ಗೋವರ್ಧನ್ ರಾಜ್ಯದಲ್ಲಿ ಜಿಹಾದಿ ಮಾನಸಿಕತೆಯ ಸರ್ಕಾರ ಆಡಳಿತ ನಡೆಸುತ್ತಿದೆ. 1947ರಲ್ಲಿ ದೇಶ ವಿಭಜನೆಗೊಂಡಾಗ ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನಾ ತೆಗೆದುಕೊಂಡ ಹಿಂದೂ ವಿರೋಧಿ ನಿಲುವುಗಳನ್ನೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.
ರಾಷ್ಟ್ರಾದ್ಯಂತ ಬಲವಂತದ ಮತಾಂತರದ ಸಂಖ್ಯೆ ಹೆಚ್ಚಾಗುತ್ತಿದೆ. ಹಿಂದೂ ಹೆಣ್ಣು ಮಕ್ಕಳು ಲವ್ ಜಿಹಾದ್ ಗೆ ಬಲಿಯಾದ ಅಸಂಖ್ಯಾತ ಸುದ್ದಿಗಳನ್ನು ಮಾಧ್ಯಮಗಳೇ ವರದಿ ಮಾಡಿವೆ. ಕೇರಳದಲ್ಲಿ ಲವ್ ಜಿಹಾದಿಗೆ ಬಲಿಯಾದ ಹಿಂದೂ ಮತ್ತು ಕ್ರಿಶ್ಚಿಯನ್ ಯುವತಿಯರು ಉಗ್ರವಾದಕ್ಕೆ ಸಹಾಕರಿಯಾಗಿ, ಲೈಂಗಿಕ ದಾಸಿಯರಾಗಿ ನರಕ ವೇದನೆ ಅನುಭವಿಸುತ್ತಿರುವ ಸಾಕ್ಷಿಗಳು ದೊರೆತಿವೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಬಲಪಡಿಸಬೇಕಿತ್ತೇ ವಿನಃ ಹಿಂತೆಗೆದುಕೊಳ್ಳಬಾರದು. ಕಾಂಗ್ರೆಸ್ ನ ಈ ನಿಲುವು ರಾಷ್ಟ್ರದ ಇಸ್ಲಾಮೀಕರಣದ ಸಂಚಿನ ಭಾಗವಾಗಿದೆ ಎಂದರು.
ಸ್ವ ಇಚ್ಛೆಯ ಕಾನೂನು ಬದ್ಧ ಮತಾಂತರಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕ್ರೈಸ್ತ ಮಿಷನರಿಗಳು ಆಮಿಷಗಳನ್ನು ಒಡ್ಡುವ ಮೂಲಕ, ಮುಸಲ್ಮಾನರು ಲವ್ ಜಿಹಾದಿನ ಮೂಲಕ ಮತಾಂತರಕ್ಕೆ ಮುಂದಾಗುತ್ತಿರುವುದನ್ನು ವಿಶ್ವ ಹಿಂದೂ ಪರಿಷತ್- ಬಜರಂಗದಳ ಬರುವಂತಹ ಸಂಘರ್ಷದ ದಿನಗಳಲ್ಲಿ ಯಾವುದೇ ಕೇಸುಗಳಿಗೆ ಅಂಜದೆ ಪ್ರಬಲವಾಗಿ ಖಂಡಿಸುತ್ತದೆ ಎಂದು ನುಡಿದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ – ಬಜರಂಗದಳ ಹಾಗೂ ಇನ್ನಿತರ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದರು.