ಬೆಂಗಳೂರು ಮಾರ್ಚ್ 18, 2016: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕರಾದ ಶ್ರೀ ವಿ ನಾಗರಾಜ್ ಇಂದು ಬೆಂಗಳೂರಿನ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್ ನ 3ನೇ ಮಹಡಿಯ ಕಾನ್ಫರೆನ್ಸ್ ಹಾಲ್ ನಲ್ಲಿ ಮಾರ್ಚ್ 18, 2016ರ ಶುಕ್ರವಾರ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ವಿ ನಾಗರಾಜ್ ಮುಂದಿರಿಸಿದ ಪತ್ರಿಕಾ ಪ್ರಕಟಣೆಯನ್ನು ಇಲ್ಲಿ ನೀಡಲಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ
#74, ಕೇಶವ ಕೃಪಾ, ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು – ೫೬೦ ೦೦೪,
ಪತ್ರಿಕಾ ಪ್ರಕಟಣೆ
ಮಾರ್ಚ್ 18, 2016
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ ನಿರ್ಧಾರಗಳನ್ನು ನಿರೂಪಿಸುವ ಮಹತ್ವದ ವಾರ್ಷಿಕ ಸಭೆ ಅಖಿಲ ಭಾರತೀಯ ಪ್ರತಿನಿಧಿ ಸಭಾ ಮಾರ್ಚ್ 11, 12 ಮತ್ತು 13, 2016 ರಂದು ರಾಜಸ್ಥಾನದ ನಾಗೌರ್ ಬಳಿಯ ಶಾರದಾಪುರಂನ ಶಾರದಾ ಬಾಲನಿಕೇತನ ವಿದ್ಯಾಮಂದಿರದ ವಿಶಾಲ ಪರಿಸರದಲ್ಲಿ ನಡೆಯಿತು. 3 ದಿನಗಳ ಈ ಅಧಿವೇಶನವನ್ನು ಸರಸಂಘಚಾಲಕ್ ಮೋಹನ್ ಭಾಗವತ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಘದ ಸರಕಾರ್ಯವಾಹ ಸುರೇಶ್ ಭಯ್ಯಾಜಿ ಜೋಶಿ ಅವರು ಸಂಘದ ೨೦೧೫-೧೬ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸುತ್ತಾ ದೇಶಾದ್ಯಂತ ಸಂಘದ ಶಾಖೆಗಳು ಹೆಚ್ಚಾಗಿರುವುದನ್ನು ಉಲ್ಲೇಖಿಸಿದರು.
ಸಂಘ ಶಾಖೆಗಳ ಹೆಚ್ಚಳ :
ಅಖಿಲ ಭಾರತ ಮಟ್ಟದ ಶಾಖಾವಿಸ್ತಾರ
೨೦೧೪-೧೫ ೨೦೧೫-೧೬
ಸ್ಥಾನ ೩೩,೨೩೩ ೩೬,೮೬೭
ಶಾಖೆ (ದಿನನಿತ್ಯ) ೫೧,೩೩೨ ೫೬,೮೫೯
ಮಿಲನ್ (ವಾರಕ್ಕೊಮ್ಮೆ) ೧೨,೪೮೭ ೧೩,೭೮೪
ಮಂಡಳಿ (ತಿಂಗಳಿಗೊಮ್ಮೆ) ೯೦೦೮ ೮೨೨೬
ಕಳೆದ ವರ್ಷವಿದ್ದ ೩೩,೨೩೩ ಸಂಘಸ್ಥಾನಗಳ ಸಂಖ್ಯೆ ಈ ವರ್ಷ ೩೬,೮೬೭ಕ್ಕೇರಿದೆ. ದೈನಿಕ ಶಾಖೆಗಳ ಸಂಖ್ಯೆ ೫೬,೮೫೯ಕ್ಕೇರಿದೆ. ಕಳೆದ ವರ್ಷ ಇದು ೫೧,೩೩೨ ಇತ್ತು. ಸಾಪ್ತಾಹಿಕ ಮಿಲನ ೧೩,೭೮೪ಕ್ಕೇರಿದೆ. ಕಳೆದ ವರ್ಷವಿದು ೧೨,೪೮೭ ಆಗಿತ್ತು. ಮಾಸಿಕ ಮಂಡಲಿ ೮೨೨೬ ಆಗಿದ್ದು, ಇದು ಕಳೆದ ವರ್ಷ ೯೦೦೮ ಆಗಿತ್ತು.
ಸಂಘ ವಿಸ್ತಾರಕರ (ಅಲ್ಪ ಕಾಲೀನ ಪೂರ್ಣಾವಧಿ ಕಾರ್ಯಕರ್ತರು) ಸಂಖ್ಯೆ ೨೦೧೪-೧೫ರಲ್ಲಿ ೭,೫೨೨ ಇದ್ದುದು ಈ ಸಾಲಿನಲ್ಲಿ ದುಪ್ಪಟ್ಟಾಗಿದ್ದು ಇವರ ಸಂಖ್ಯೆ ೧೪,೫೯೨ಆಗಿದೆ.
ಸಂಘಶಿಕ್ಷಾ ವರ್ಗ(ಒಟಿಸಿ)ಗಳು ೮೩ಕಡೆಗಳಲ್ಲಿ ನಡೆದಿದೆ. ಪ್ರಥಮ ವರ್ಷದ ಶಿಕ್ಷಾ ವರ್ಗದಲ್ಲಿ ೧೭,೮೩೫ ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರೆ, ದ್ವಿತೀಯ ವರ್ಷದಲ್ಲಿ ೩೭೧೫ಮಂದಿ ಮತ್ತು ತೃತೀಯ ವರ್ಷದ ಶಿಕ್ಷಾವರ್ಗದಲ್ಲಿ ೮೭೫ಮಂದಿ ಪಾಲ್ಗೊಂಡಿದ್ದಾರೆ. ಮೊದಲ ವರ್ಷದ ವಿಶೇಷ ಶಿಬಿರದಲ್ಲಿ ೧೭೯೫ ಮಂದಿ ಮತ್ತು ಮೂರನೇ ವರ್ಷದ ವಿಶೇಷ ವರ್ಗದಲ್ಲಿ ೬೧೧ಮಂದಿ ಪಾಲ್ಗೊಂಡಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಸಂಘದ ಪ್ರಾಥಮಿಕ ಶಿಕ್ಷಾವರ್ಗಗಳಲ್ಲಿ ೩೩,೨೩೩ಶಾಖೆಗಳಿಂದ ೧,೧೨, ೫೨೦ಸ್ವಯಂಸೇವಕರು ಪಾಲ್ಗೊಂಡಿದ್ದಾರೆ.
ಗಣ್ಯರಿಗೆ ಶ್ರದ್ಧಾಂಜಲಿ
ಈ ಸಂದರ್ಭ ಕಳೆದ ಆರು ತಿಂಗಳಿಂದೀಚೆಗೆ ನಿಧನರಾದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್, ಸಿಪಿಐಯ ಮಾಜಿ ನಾಯಕ ಎ.ಬಿ. ಬರ್ಧಾನ್, ಲೋಕಸಭೆಯ ಮಾಜಿ ಸ್ಪೀಕರ್ ಬಲರಾಮ್ ಜಾಖಡ್, ಖ್ಯಾತ ಉದ್ಯಮಿ ಭನ್ವರ್ಲಾಲ್ ಜೈನ್, ಮಹಾರಾಷ್ಟ್ರದ ಖ್ಯಾತ ಕವಿ ಮಂಗೇಶ್ ಪಡ್ಗಾಂವ್ಕರ್, ಖ್ಯಾತ ನೃತ್ಯಗಾರ್ತಿ ಮೃಣಾಲಿನಿ ಸಾರಾಭಾಯಿ, ಆಚಾರ್ಯ ಬಲದೇವ್ಜೀ, ಮಾಜಿ ಸ್ಪೀಕರ್ ಪಿ.ಎ. ಸಂಗ್ಮಾ, ವಿಹಿಂಪ ಮಾರ್ಗದರ್ಶಕ ಅಶೋಕ್ ಸಿಂಘಾಲ್ಜೀ, ಅಸ್ಸಾಮಿನ ಮಾಜಿ ಪ್ರಾಂತ ಪ್ರಚಾರಕ್ ಮಧುಜೀ ಲಿಮಯೆ, ಸಂಘದ ಜೇಷ್ಠ ಕಾರ್ಯಕರ್ತ ಮುಕುಂದ್ ಪನ್ಶಿಕರ್, ವನವಾಸಿ ಕಲ್ಯಾಣ ಆಶ್ರಮದ ಸಂಜಯ್ ಕುಲಾಸ್ಪುರ್ಕರ್, ರಾಜನಾರಾಯಣ್ ಠಾಕೂರ್, ಹಿರಿಯ ಪ್ರಚಾರಕ್ ಕೃಷ್ಣ ಚಂದ್ರ ಸೂರ್ಯವಂಶಿ, ಎಬಿವಿಪಿಯ ಮಾಜಿ ಮುಖಂಡ ಅರುಣ್ಭಾಯಿ ಯಾರ್ಡಿ, ತಮಿಳ್ನಾಡು ಸೇವಾ ಭಾರತಿಯ ಡಾ. ಕೆ.ಎನ್. ಸೆಂಗೊಟ್ಟಾಯನ್ ಅವರಲ್ಲದೆ ಚೆನ್ನೈ ಪ್ರವಾಹ ದುರಂತ ಹಾಗೂ ಪಠಾಣ್ಕೋಟ್ ಸೇರಿದಂತೆ ದೇಶದ ವಿವಿಧೆಡೆ ಭಯೋತ್ಪಾದಕರ ಕ್ರೌರ್ಯಕ್ಕೆ ಬಲಿಯಾದ ನಾಗರಿಕರಿಗೆ ಹಾಗೂ ಸಿಯಾಚಿನ್ನಲ್ಲಿ ಹಿಮಪಾತಕ್ಕೆ ಸಿಲುಕಿ ವೀರಮರಣ ಹೊಂದಿದ ಯೋಧರಿಗೆ ಸಂಘವು ಶ್ರದ್ಧಾಂಜಲಿ ಸಲ್ಲಿಸಿದೆ.
ಅಖಿಲ ಭಾರತ ಪ್ರತಿನಿಧಿ ಸಭಾ ನಿರ್ಣಯ -1:
ಕೈಗೆಟಕಲಿ ವೈದ್ಯಸೇವೆ; ಉತ್ತಮ ಆರೋಗ್ಯಕ್ಕಾಗಿ ಯೋಗ್ಯ ಆರೋಗ್ಯ ಸವಲತ್ತು
ಅನಾರೋಗ್ಯಕರ ಜೀವನಶೈಲಿಯಿಂದಾಗಿ ಇಂದು ಜನರಲ್ಲಿ ಕಾಯಿಲೆಗಳು ಉಲ್ಬಣಿಸುತ್ತಿದೆ. ಇದೇ ವೇಳೆ ವೈದ್ಯಕೀಯ ಸೌಲಭ್ಯಗಳು ದುಬಾರಿಯಾಗುತ್ತಿರುವುದರಿಂದ ಉತ್ತಮ ವೈದ್ಯಕೀಯ ಸೇವೆಯಿಂದ ಜನಸಾಮಾನ್ಯರು ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತಮ ಆರೋಗ್ಯ ಮತ್ತು ಆರೋಗ್ಯಕರ ಜೀವನಶೈಲಿ ಕಾಯ್ದುಕೊಳ್ಳುವುದಕ್ಕಾಗಿ ಜನಸಾಮಾನ್ಯರಿಗೆ ಯೋಗ್ಯ ಆರೋಗ್ಯ ಸೇವೆ ಲಭಿಸುವಂತಾಗಬೇಕು. ದೇಶದ ಎಲ್ಲ ನಾಗರಿಕರೂ ಕಾಯಿಲೆಮುಕ್ತ ಮತ್ತು ಆರೋಗ್ಯಕರ ಜೀವನ ನಡೆಸುವುದನ್ನು ಖಾತ್ರಿಗೊಳಿಸುವಂತಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಒತ್ತಿ ಹೇಳಿದೆ.
ದೇಶದ ಅಸಂಖ್ಯಾತ ಕುಟುಂಬಗಳು ಕಾಯಿಲೆಪೀಡಿತ ತಮ್ಮ ಕುಟುಂಬದ ದುಡಿಯುವ ಸದಸ್ಯರ ಚಿಕಿತ್ಸೆಗಾಗಿ ದುಬಾರಿ ವೆಚ್ಚ ಮಾಡಿ ಸಾಲದ ಸುಳಿಗೆ ಸಿಲುಕುವ ಜೊತೆಗೆ ಅನೇಕ ಬಡಕುಟುಂಬಗಳು ಸೂಕ್ತ ಚಿಕಿತ್ಸೆ ಒದಗಿಸಲಾಗದೆ ಸಂಕಷ್ಟಕ್ಕೆ ಗುರಿಯಾಗಿರುವ ದೃಶ್ಯಗಳು ಗೋಚರಿಸುತ್ತಿವೆ. ಇದು ತೀವ್ರ ಕಳವಳಕಾರಿ ಸಂಗತಿ. ಸರಕಾರವು ಈ ನಿಟ್ಟಿನಲ್ಲಿ ಎಚ್ಚೆತ್ತು ಜನಸಾಮಾನ್ಯರಿಗೂ ಸೂಕ್ತ ಆರೋಗ್ಯ ಸೇವೆ ಒದಗಿಸುವಲ್ಲಿ ಮುತುವರ್ಜಿ ವಹಿಸಬೇಕಾದ ತುರ್ತು ಅಗತ್ಯವಿದೆ ಎಂದು ನಿರ್ಣಯ ತಿಳಿಸಿದೆ.
ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರಕ್ರಮ, ಉತ್ತಮ ಜೀವನಶೈಲಿ, ಸದಾಚಾರ, ಆಧ್ಯಾತ್ಮಿಕತೆ, ಪ್ರತಿದಿನ ಯೋಗಾಭ್ಯಾಸ ಹಾಗೂ ಸ್ವಚ್ಛತೆ ಅತಿಮುಖ್ಯ. ಮಕ್ಕಳಿಗೆ ಸಕಾಲದಲ್ಲಿ ಲಸಿಕೆಗಳನ್ನು ಹಾಕಿಸುವುದು ಅಗತ್ಯ. ಇದರಿಂದ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿಂದ ಸಮಾಜ ಮುಕ್ತವಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಂಘದ ಸ್ವಯಂಸೇವಕರು ದೇಶಾದ್ಯಂತ ಜನಜಾಗೃತಿ, ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ಆರೆಸ್ಸೆಸ್ ತನ್ನ ಕಾರ್ಯಕರ್ತರಿಗೆ ಕರೆ ನೀಡಿದೆ.
ಇಂದು ವೈದ್ಯಕೀಯ ಸೌಲಭ್ಯಗಳು ದೇಶದ ಬೃಹತ್ ನಗರಗಳಲ್ಲಿ ಕೇಂದ್ರಿತವಾಗಿವೆ. ಆದರೆ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆಗಳ ತೀವ್ರ ಕೊರತೆ ಬಾಧಿಸುತ್ತಿದೆ. ಬೃಹತ್ ಸಂಖ್ಯೆಯ ಜನತೆ ಸಾಕಷ್ಟು ವೈದ್ಯಕೀಯ ಸೌಲಭ್ಯಗಳ ಕೊರತೆ, ವೈದ್ಯಕೀಯ ಸಿಬ್ಬಂದಿಯ ಕೊರತೆ ಮತ್ತು ಅಲ್ಲಲ್ಲಿ ವಿರಳವಾಗಿರುವ ಆರೋಗ್ಯ ಕೇಂದ್ರಗಳಲ್ಲಿ ಪ್ರವೇಶ ಪಡೆಯಲು, ರೋಗಪತ್ತೆ ಕೇಂದ್ರಗಳಲ್ಲಿ ಮತ್ತು ಚಿಕಿತ್ಸೆಗಾಗಿ ದೀರ್ಘಸಮಯ ಕಾಯಬೇಕಾದ ದೃಶ್ಯಗಳು ಕಂಡುಬರುತ್ತಿವೆ.
ವೈದ್ಯಕೀಯ ಶಿಕ್ಷಣ ವೆಚ್ಚ ಅತಿ ದುಬಾರಿಯಾಗುತ್ತಿರುವುದು ವೈದ್ಯಕೀಯ ಸೇವೆಗಳನ್ನು ತೀರಾ ವೆಚ್ಚದಾಯಕವಾಗಿಸಲು ಮುಖ್ಯ ಕಾರಣವಾಗಿದೆ. ಇದು ವೈದ್ಯಕೀಯ ಸೇವೆಗಳ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಪ್ರಶ್ನೆಯನ್ನು ಕೂಡಾ ಹುಟ್ಟುಹಾಕಿದೆ. ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಗಳು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ದೇಶದ ಎಲ್ಲ ನಾಗರಿಕರಿಗೂ ಲಭಿಸುವಂತಾಗಬೇಕು. ಇದಕ್ಕಾಗಿ ದೇಶದ ಎಲ್ಲ ಭಾಗಗಳಲ್ಲಿ ಎಲ್ಲ ಮಾದರಿಯ ವೈದ್ಯಕೀಯ ಸೇವೆಗಳು ಲಭಿಸುವಂತಾಗಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಬುಡಗಟ್ಟು, ವನವಾಸಿ ಜನರಿಗೂ ಈ ಉತ್ತಮ ಆರೋಗ್ಯ ಸೇವೆ ತಲುಪುವಂತೆ ಮಾಡಲು ಗಮನ ಹರಿಸಬೇಕಾಗಿದೆ. ಇದಕ್ಕಾಗಿ ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಉತ್ತಮ ಚಿಕಿತ್ಸೆ ಮತ್ತು ತಜ್ಞರ ಕೌನ್ಸಿಲಿಂಗ್ ಸೌಕರ್ಯ ಒದಗಿಸುವಂತೆ ಮಾಡಬೇಕು ಎಂದು ನಿರ್ಣಯ ಪ್ರತಿಪಾದಿಸಿದೆ.
ವಿವಿಧ ಸಾಮಾಜಿಕ, ಧಾರ್ಮಿಕ, ಸಮುದಾಯಿಕ ಸಂಘಟನೆಗಳು ದೇಶದ ವಿವಿಧ ಕಡೆಗಳಲ್ಲಿ ಸೇವೆ ಮತ್ತು ಲೋಕೋಪಕಾರ ಮನೋಭಾವದಿಂದ ಸಮಾಜದ ಜನಸಮಾನ್ಯರಿಗೆ ಪರಿಣಾಮಕಾರಿ ಮತ್ತು ನ್ಯಾಯ ರೀತಿಯಲ್ಲಿ ವೈದ್ಯಕೀಯ ಸೇವೆ ಒದಗಿಸುವಂತಾಗಬೇಕು. ಸರಕಾರ ಈ ನಿಟ್ಟಿನಲ್ಲಿ ಬೆಂಬಲ ನೀಡಬೇಕಾದ ಅಗತ್ಯವಿದೆ. ಈಗ ನಡೆಯುತ್ತಿರುವ ಇಂತಹ ಎಲ್ಲ ಪ್ರಯತ್ನಗಳನ್ನೂ ಪ್ರತಿನಿಧಿ ಸಭಾ ಶ್ಲಾಘಿಸಿ ಬೆಂಬಲಿಸುತ್ತದೆ. ದೇಶದ ಕೈಗಾರಿಕಾ ಸಂಸ್ಥೆಗಳು, ಸ್ವಯಂಸೇವಾ ಮತ್ತು ಸಾಮಾಜಿಕ ಸಂಘಟನೆಗಳು, ಚಾರಿಟೇಬಲ್ ಟ್ರಸ್ಟ್ಗಳು ಈ ನಿಟ್ಟಿನಲ್ಲಿ ಇನ್ನಷ್ಟು ಕಾಳಜಿಯಿಂದ ಮುಂದೆ ಬಂದು ಸಾರ್ವಜನಿಕ ಮತ್ತು ಸಮುದಾಯಿಕ ಪಾಲುದಾರಿಕೆ ಮತ್ತು ಸಹಕಾರಿ ಸಂಸ್ಥೆಗಳ ಸಹಭಾಗಿತ್ವದಿಂದ ಇಂತಹ ವೈದ್ಯಕೀಯ ಸೇವೆಗಳನ್ನು ವಿಸ್ತರಿಸಲು ಮುಂದೆಬರಬೇಕೆಂದು ಸಂಘ ಕರೆ ನೀಡಿದೆ.
ಕೆಲವು ರಾಜ್ಯಗಳಲ್ಲಿ ಉಚಿತ ಔಷಧಿಗಳ ವಿತರಣೆ ಯೋಜನೆಯು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆ. ಇದೀಗ ಕೇಂದ್ರ ಸರಕಾರವು ಈ ವರ್ಷದ ಬಜೆಟ್ನಲ್ಲಿ ಜನಸಾಮಾನ್ಯರ ಆರೋಗ್ಯ ಮತ್ತು ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ದೇಶಾದ್ಯಂತ ೩೦೦೦ ಅಗತ್ಯ ಜನರಿಕ್ ಔಷಧ ಮಳಿಗೆಗಳನ್ನು ಸ್ಥಾಪಿಸುವುದಾಗಿ ಪ್ರಕಟಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಮೂಲಕ ಜನಸಾಮಾನ್ಯರಿಗೆ ಬೇಕಾಗಿರುವ ಅಗತ್ಯ ಔಷಧಗಳು ಲಭಿಸುವಂತೆ ಮಾಡಲು ನೆರವಾಗಲಿದೆ. ಹಾಗೆಯೇ ಔಷಧಗಳ ಬೆಲೆ ಏರಿಕೆಗೂ ಕಡಿವಾಣ ಹಾಕಲು ಸಾಧ್ಯವಾಗಲಿದೆ. ಉತ್ತಮ ಗುಣಮಟ್ಟದ ಔಷಧಿಗಳ ಖಾತ್ರಿಗಾಗಿ ಪೇಟೆಂಟ್ ವ್ಯವಸ್ಥೆಯ ಅಗತ್ಯವಿದೆ. ಔಷಧಗಳನ್ನು ನಿರಂತರವಾಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಿ ಔಷಧಗಳ ಗುಣಮಟ್ಟ ಕಾಯುವ ಜೊತೆಗೆ ಆಯುರ್ವೇದ, ಯುನಾನಿ ಮತ್ತಿತರ ಔಷಧಿಗಳ ಪರೀಕ್ಷಾ ವಿಧಾನದ ಅಭಿವೃದ್ಧಿಗೂ ಒತ್ತು ನೀಡಬೇಕು . ಈ ನಿಟ್ಟಿನಲ್ಲಿ ಸ್ವಯಂಸೇವಕರು ಸೇರಿದಂತೆ ದೇಶದ ಎಲ್ಲ ಜನರು, ಸ್ವಯಂಸೇವಾ ಸಂಸ್ಥೆಗಳು ಮತ್ತು ಸರಕಾರ ದೇಶದ ಜನತೆಯನ್ನು ಕಾಯಿಲೆಮುಕ್ತ ಮತ್ತು ಆರೋಗ್ಯಪೂರ್ಣ ಜೀವನ ನಡೆಸುವಂತೆ ಮಾಡಲು ಒಂದಾಗಿ ಕಾರ್ಯಾಚರಿಸಬೇಕು. ಇದಕ್ಕೆ ಬೇಕಾದ ಮೂಲಸೌಕರ್ಯಗಳ ಅಭಿವೃದ್ಧಿ, ಕಾನೂನುಗಳನ್ನು ಬಲಪಡಿಸಬೇಕು.
ಅಖಿಲ ಭಾರತ ಪ್ರತಿನಿಧಿ ಸಭಾ ನಿರ್ಣಯ -2:
ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಲಭಿಸಬೇಕು
ದೇಶದ ಎಲ್ಲ ನಾಗರಿಕರಿಗೂ ಗುಣಮಟ್ಟದ ಶಿಕ್ಷಣ ಲಭಿಸುವಂತಾಗಬೇಕು. ಯಾವುದೇ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಉತ್ತಮ ಶಿಕ್ಷಣ ಅತ್ಯಗತ್ಯ. ಇದನ್ನು ಸಮಾಜ ಮತ್ತು ಸರಕಾರ ಒಂದಾಗಿ ಸಾಧಿಸಬೇಕಾದುದು ಆದ್ಯ ಕರ್ತವ್ಯವೇ ಆಗಿದೆ. ಕಲ್ಯಾಣ ರಾಜ್ಯವೊಂದರ ಗುರಿ ಸಾಧನೆಯಲ್ಲಿ ಪ್ರತಿ ನಾಗರಿಕನಿಗೆ ಉತ್ತಮ ಶಿಕ್ಷಣ, ಆರೋಗ್ಯ, ಆಹಾರ, ಬಟ್ಟೆ, ವಸತಿ, ಉದ್ಯೋಗ ಒದಗಿಸಬೇಕಾದುದು ಸರ್ಕಾರದ ಪ್ರಾಥಮಿಕ ಕರ್ತವ್ಯವಾಗಿದೆ.
ಭಾರತವು ಅತಿ ಹೆಚ್ಚು ಯುವವರ್ಗವನ್ನು ಹೊಂದಿರುವ ದೇಶ. ಈ ಯುವಶಕ್ತಿಗೆ ಸೂಕ್ತ ಶಿಕ್ಷಣ ಒದಗಿಸಿ ಅವರನ್ನು ದೇಶದ ವೈಜ್ಞಾನಿಕ, ತಂತ್ರಜ್ಞಾನ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ತೊಡಗಿಸುವುದರಿಂದ ಭಾರತದ ಉನ್ನತಿ ಸಾಧಿಸಲು ಸಾಧ್ಯವಿದೆ. ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಬಯಸುತ್ತಿರುವುದು ಶ್ಲಾಘನೀಯ. ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಅನುದಾನದ ಕೊರತೆಯಿದ್ದು, ಸರಕಾರ ಇದಕ್ಕೆ ನೀಡುತ್ತಿರುವ ಆದ್ಯತೆ ಸಾಲದು. ಶಿಕ್ಷಣ ಸಂಸ್ಥೆಗಳು ಕೇವಲ ಲಾಭದ ಉದ್ದೇಶ ಹೊಂದಿರುವುದರಿಂದ ಇಂದು ಬಡಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲಾಗದಂತಾಗಿದೆ. ಇದರಿಂದ ಸಮಾಜದಲ್ಲಿ ಆರ್ಥಿಕ ಅಸಮಾನತೆ ಬೆಳೆಯುವಂತಾಗಿದ್ದು ಇದು ದೇಶದ ಹಿತಕ್ಕೆ ಮಾರಕವಾಗಿದೆ. ಸರಕಾರಗಳು ಈ ನಿಟ್ಟಿನಲ್ಲಿ ತುರ್ತು ಗಮನ ಹರಿಸಿ ಸಾಕಷ್ಟು ಅನುದಾನವನ್ನು ಒದಗಿಸಿ, ಯೋಗ್ಯ ನೀತಿಗಳನ್ನು ರೂಪಿಸಿ, ಶಿಕ್ಷಣದ ವ್ಯಾಪಾರಿಕರಣವನ್ನು ತಡೆಯಲು ಕ್ರಮ ಕೈಗೊಳ್ಳಬೇಕು.
ಇದಕ್ಕಾಗಿ ಸರಕಾರವು ಶಿಕ್ಷಣ ಸಂಸ್ಥೆಗಳ ಗುಣಮಟ್ಟ, ಮೂಲಸೌಕರ್ಯ, ಸೇವಾ ಪರಿಸರ, ಶುಲ್ಕ, ಉನ್ನತ ಮಟ್ಟ ಹೊಂದುವಂತೆ ಮಾಡುವಲ್ಲಿ ಸ್ವಾಯತ್ತ ಸ್ವಯಂ ನಿಯಂತ್ರಣ ವ್ಯವಸ್ಥೆಯೊಂದನ್ನು ರೂಪಿಸಿ ಅದನ್ನು ಪಾರದರ್ಶಕ ರೀತಿಯಲ್ಲಿ ಜಾರಿಗೆ ತರಲು ಮುಂದಾಗಬೇಕು. ದೇಶದ ಪ್ರತಿ ಮಗುವೂ ಮೌಲ್ಯಾಧಾರಿತ, ರಾಷ್ಟ್ರೀಯ ದೃಷ್ಟಿಯ , ಉದ್ಯೋಗಕೇಂದ್ರಿತ, ಕೌಶಲಾಧಾರಿತ ಶಿಕ್ಷಣ ಪಡೆಯುವಂತೆ ಮಾಡುವ ವಾತಾವರಣ ರೂಪಿಸುವುದು ಕೂಡಾ ಅಷ್ಟೇ ಮುಖ್ಯ. ಇದಕ್ಕಾಗಿ ಯೋಗ್ಯ ತರಬೇತಿ, ಸೂಕ್ತ ವೇತನ, ಕರ್ತವ್ಯನಿಷ್ಠ ಶಿಕ್ಷಕ ಪಡೆಯೊಂದನ್ನು ಬಲಗೊಳಿಸಬೇಕು.
ಅಖಿಲ ಭಾರತ ಪ್ರತಿನಿಧಿ ಸಭಾ ನಿರ್ಣಯ -3:
ದೈನಂದಿನ ಬದುಕಿನಲ್ಲಿ ಸಾಮಾಜಿಕ ಸಾಮರಸ್ಯ ಆದ್ಯತೆ
ದೈನಂದಿನ ಬದುಕಿನಲ್ಲಿ ಸಾಮಾಜಿಕ ಸಾಮರಸ್ಯವನ್ನು ಅನುಸರಿಸುವಂತೆ ದೇಶವಾಸಿಗಳಿಗೆ ಆರೆಸ್ಸೆಸ್ ಕರೆ ನೀಡಿದೆ. ಪ್ರಾಚೀನ ದೇಶವಾದ ಭಾರತವು ಹಿರಿಯರ ವಿಚಾರಧಾರೆಯನ್ನು ಮಾನ್ಯ ಮಾಡುತ್ತದೆ. ಎಲ್ಲ ಮಾನವ ಜೀವಿಗಳು ಸರಿಸಮಾನರು. ಹಾಗಾಗಿ ಎಲ್ಲ ಜೀವಾತ್ಮರು ಸಮರಸಪೂರ್ಣರಾಗಿ ಬದುಕಬೇಕೆಂದು ಋಷಿಮುನಿ ಸಂತರು ಹಾಗೂ ಸಮಾಜ ಸುಧಾರಕರು ಬೋಧಿಸಿದ್ದಾರೆ. ಋಷಿ ಮುನಿಗಳು ಪ್ರಾಚೀನ ಕಾಲದಿಂದ ನೀಡಿರುವ ಜೀವನದ ಉತ್ಕೃಷ್ಟ ಸಂದೇಶ ನಾಶವಾಗದಂತೆ ರಕ್ಷಿಸಿ, ಸಮರಸತೆ ಸಾರಬೇಕಿದೆ. ದೈನಂದಿನ ಬದುಕಿನಲ್ಲಿ ಸಮರಸತೆಯೊಂದಿಗೆ ಬದುಕು ನಿರ್ವಹಿಸುವುದೇ ಮುಖ್ಯ. ಸಮಗ್ರತೆ ಸಾಮರಸ್ಯ ಮತ್ತು ಭ್ರಾತೃತ್ವ ನಮ್ಮ ಸಮಾಜವನ್ನು ಸದೃಢವಾಗಿಸುವುದು.
ಸಮಾಜದಲ್ಲಿ ಬದಕುವ ಎಲ್ಲರೂ ಸರ್ವಸಮಾನರು. ಇಲ್ಲಿ ಮೇಲು-ಕೀಳು ಎಂಬ ಭೇದವಿಲ್ಲ. ಆತ್ಮವತ್ ಸರ್ವಭೂತೇಶು ಹಾಗೂ ಅದ್ವೇಷ್ಠಾಂ ಸರ್ವಭೂತಾನಾಂ (ಯಾರ ವಿರುದ್ಧವೂ ದ್ವೇಷ ಸಾಧಿಸದಿರಿ), ಒಂದೇ ಬೆಳಕಿನಿಂದ ಇಡೀ ವಿಶ್ವ ಜನಿಸಿತು. ಹಾಗಾದಲ್ಲಿ ಒಬ್ಬರು ಮೇಲು, ಒಬ್ಬರು ಕೀಳು ಎನ್ನಲು ಹೇಗೆ ಸಾಧ್ಯ ಎಂಬುದಾಗಿ ಉದ್ಗ್ರಂಥಗಳು ಹೇಳಿವೆ. ಎಲ್ಲರನ್ನು ಘನತೆ-ಗೌರವ-ಸಮಾನತೆಯಿಂದ ಕಾಣುವುದೇ ಹಿಂದು ಚಿಂತನೆ.
ನಾಲ್ಕು ಪ್ರಮುಖ ವಿಷಯಗಳ ಕುರಿತು ಸಂಘದ ನಿಲುವು
1. ಮಹಿಳೆಯರು ಮತ್ತು ದೇವಸ್ಥಾನ ಪ್ರವೇಶ:- ಸಾಮಾಜಿಕ ಸ್ವಾಸ್ಥ್ಯಕ್ಕೆ ವಿರೋಧಿಗಳಾದ ಕೆಲವು ಶಕ್ತಿಗಳು ಕಳೆದ ಕೆಲವು ದಿನಗಳಲ್ಲಿ ಮಹಿಳೆಯರ ದೇವಸ್ಥಾನ ಕುರಿತಂತೆ ಅಹಿತಕರ ವಿವಾದವನ್ನು ಹುಟ್ಟುಹಾಕಿವೆ. ಪುರಾತನ ಕಾಲದಿಂದಲೇ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ, ಪೂಜೆ ಪುನಸ್ಕಾರಗಳಲ್ಲಿ ಗಂಡು ಹೆಣ್ಣುಗಳಿಬ್ಬರೂ ಸಮಾನ ಪಾಲುದಾರರು ಎಂದು ಸಹಜವಾಗಿ ಕಾಣುವ ಉನ್ನತ ಸಂಪ್ರದಾಯವನ್ನು ನಾವು ಪಾಲಿಸಿಕೊಂಡು ಬಂದಿದ್ದೇವೆ. ದೇವಾಲಯಗಳಲ್ಲಿ ಪುರುಷರು ಮತ್ತು ಮಹಿಳೆಯರು ಎಂದು ತಾರತಮ್ಯ ಮಾಡದೇ ಎಲ್ಲರಿಗೂ ಸಮಾನ ಪ್ರವೇಶ ನೀಡಲಾಗುತ್ತದೆ. ಮಹಿಳೆಯರೂ ಸಹ ವೇದಮಂತ್ರಗಳನ್ನು ಕಲಿತು ದೇವಾಲಯಗಳಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸುವ ಉದಾಹರಣೆಗಳನ್ನೂ ಕಾಣುತ್ತೇವೆ. ಆದರೆ ಕೆಲವು ಸರಿಯಲ್ಲದ ಸಂಪ್ರದಾಯಗಳಿಂದ ಒಂದಿಷ್ಟು ಸ್ಥಳಗಳಲ್ಲಿ ದೇವಸ್ಥಾನ ಪ್ರವೇಶ ಕುರಿತಂತೆ ಒಮ್ಮತ ಮೂಡುವುದು ಸಾಧ್ಯವಾಗಿಲ್ಲ. ಅಂತಹ ಸಮಸ್ಯೆಗಳಿರುವಲ್ಲಿ ಸರಿಯಾದ ಚರ್ಚೆಯ ಮೂಲಕ ಅವರ ವಿಚಾರಗಳಲ್ಲಿ ಬದಲಾವಣೆ ತಂದು ಒಮ್ಮತ ಮೂಡಿಸುವ ಪ್ರಯತ್ನ ಮಾಡಬೇಕು. ಹಾಗೆಯೇ ಇಂತಹ ಸೂಕ್ಷ್ಮ ವಿಷಯಗಳನ್ನು ರಾಜಕೀಯಗೊಳಿಸದೇ ಚರ್ಚೆ ಸಂವಾದಗಳ ಮುಖಾಂತರ ಬಗೆಹರಿಸಬೇಕು, ಚಳುವಳಿಗಳಿಂದ ಅಲ್ಲ. ಸಮಾಜ ಹಿತದೃಷ್ಟಿಯಿಂದ ಸಾಮಾಜಿಕ ಹಾಗೂ ಧಾರ್ಮಿಕ ನಾಯಕತ್ವ ದೇವಸ್ಥಾನದ ಆಡಳಿತ ಮಂಡಳಿಯ ಜೊತೆ ಸೇರಿ ಪ್ರತಿ ಹಂತದ ಮಾನಸಿಕತೆಯಲ್ಲಿ ಬದಲಾವಣೆ ತರಲು ಪ್ರಯತ್ನಿಸಬೇಕು.
2. ದೇಶವಿರೋಧಿ ಶಕ್ತಿಗಳ ಗುರಿಗಳಾಗುತ್ತಿರುವ ಸುರಕ್ಷತಾ ಸಂಸ್ಥೆಗಳು:- ಕಳೆದ ಅನೇಕ ದಶಕಗಳಿಂದ ಸುರಕ್ಷತಾ ಸಂಸ್ಥೆಗಳು ಪದೇಪದೇ ಹೊಡೆತಕ್ಕೆ ಒಳಗಾಗುತ್ತಿದ್ದು ದೇಶದ ಸುರಕ್ಷತಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸತತವಾಗಿ ತಮ್ಮ ಶೌರ್ಯ ಪ್ರದರ್ಶಿಸುತ್ತಿರುವ ಭದ್ರತಾ ಸಂಸ್ಥೆಗಳು ನಮ್ಮ ವಿರೋಧಿಗಳು ಆಗಾಗ ನಡೆಸುವ ದಾಳಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿವೆ. ಪಠಾಣ್ಕೋಟ್ ವಾಯನೆಲೆಯ ಮೇಲೆ ಉಗ್ತ ದಾಳಿ ಇತ್ತೀಚಿನ ನಿದರ್ಶನ. ಸುರಕ್ಷತಾ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಿ ವಿಫಲವಾಗಲು ಆಸ್ಪದ ಕೊಡದೆ ಇಂತಹ ಘಟನೆಗಳು ಮರುಕಳಿಸದಂತೆ ಮಾಡುವುದು ಅತ್ಯಗತ್ಯವಾಗಿದೆ. ಭದ್ರತಾ ದಳಗಳ ಕ್ಷಮತೆಯನ್ನು, ಶಸ್ತ್ರಾಸ್ತ್ರ ಸಾಮಗ್ರಿಗಳು, ಸಂಭಂಧಪಟ್ಟ ಅಧಿಕಾರಿಗಳನ್ನು ಪರಿಶೀಲಿಸಿ ಅಗತ್ಯ ಬದಲಾವಣೆಗಳನ್ನು ಮಾಡಬೇಕು. ಅಕ್ರಮ ವಲಸೆ, ಕಳ್ಳಸಾಗಣೆ, ಪಾಕ್ ಪ್ರೇರಿತ ಭಯೋತ್ಪಾದನೆ ಮುಂತಾದ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ಗಮನಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಈ ದೃಷ್ಟಿಯಿಂದ ಗಡಿಪ್ರದೇಶದ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿ, ಗಡಿಸುರಕ್ಷತೆ ಮತ್ತು ಅಗತ್ಯ ಸಾಮಗ್ರಿಗಳ ಪರಿಶೀಲನೆಯನ್ನು ಕಾಲಕಾಲಕ್ಕೆ ನಡೆಸಬೇಕು. ಪಾಕಿಸ್ತಾನದ ಭಾರತ ದ್ವಿಪಕ್ಷೀಯ ಸಂಭಂಧ ನೀತಿಯು ಆಯ್ಕೆಯಾದ ಸರ್ಕಾರಕ್ಕಿಂತ ಸೇನೆಯಿಂದಲೇ ನಿರ್ದೇಶವಾಗುತ್ತಿರುವಂತೆ ಗೋಚರವಾಗುತ್ತದೆ. ಮುಂಬೈಯಿಂದ ಪಠಾಣ್ಕೋಟ್ವರೆಗಿನ ದಾಳಿಗಳು ಇದನ್ನು ಪುಷ್ಟಿಗೊಳಿಸುತ್ತವೆ. ಪ್ರಸ್ತುತ ಸನ್ನಿವೇಶದಲ್ಲಿ ಇಡಿ ಜಗತ್ತು ಬೆಳೆಯುತ್ತಿರುವ ಭಯೋತ್ಪಾದಕತೆಯ ವಿಪತ್ತಿನಿಂದ ಚಿಂತಿತವಾಗಿದೆ.
3. ದೇಶದಲ್ಲಿ ಬೆಳೆಯುತ್ತಿರುವ ಕೋಮುವಾದದ ಮತಿಭ್ರಮೆ:- ದೇಶದ ವಿವಿಧೆಡೆಯಲ್ಲಿ ನಡೆದ ಹಿಂಸಾಚಾರ ಮತ್ತು ಭಯೋತ್ಪಾದನಾ ದಾಳಿಯ ಘಟನೆಗಳು ದೇಶಪ್ರೇಮಿ ಹಾಗೂ ಶಾಂತಿಪ್ರಿಯ ದೇಶವಾಸಿಗಳಿಗೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ವ್ಯವಸ್ಥೆಗೆ ತುಂಬಾ ಆತಂಕ ನೀಡುವ ವಿಷಯವಾಗಿದೆ. ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದಂತೆ ಸಣ್ಣಪುಟ್ಟ ಘಟನೆಗಳಿಗೂ ಕೆಲವು ಪ್ರದೇಶಗಳಲ್ಲಿ ಅತಿದೊಡ್ಡ ಸಂಖ್ಯೆಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದ ಜನರು ಬೀದಿಗಿಳಿಸದು ಭಯ ಗೊಂದಲದ ವಾತಾವರರಣವನ್ನು ನಿರ್ಮಾಣ ಮಾಡುವುದು ಒಂದು ಸಾಂಕ್ರಾಮಿಕವಾಗಿ ಬೆಳಯುತ್ತಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಮಾಡುವುದು, ಪೋಲಿಸ್ ದಳಗಳ ಮೇಲೆ ದಾಳಿ ಮಾಡಿ ಕಾನೂನನ್ನು ಗಾಳಿಗೆ ತೂರುವುದು, ಅಂಗಡಿ ವ್ಯವಹಾರ ಸ್ಥಳಗಳನ್ನು-ವಿಶೇಶವಾಗಿ ಹಿಂದೂಗಳು ನಡೆಸುವ ಅಂಗಡಿಗಳು, ಲೂಟಿ ಮಾಡಿ ಬೆಂಕಿ ಹಚ್ಚುವುದು, ಮುಂತಾದ ಘಟನೆಗಳು ನಡೆಯುತ್ತಿವೆ. ರಾಜಕೀಯ ಪಕ್ಷಗಳು ತಮ್ಮ ತುಷ್ಟೀಕರಣದ ನೀತಿಯನ್ನು ಕೈಬಿಟ್ಟು ಇಂತಹ ಘಟನೆಗಳನ್ನು ಗಂಭಿರವಾಗಿ ಪರಿಗಣಿಸಬೇಕು ಮತ್ತು ಕಾನೂನು ವ್ಯವಸ್ಥೆಯನ್ನು ಸುಧಾರಿಸ ಶಾಂತಿ ಸ್ಥಾಪನೆಗೆ ಪ್ರಯತ್ನಿಸಬೇಕು. ಆಡಳಿತ ಪಕ್ಷ ಮತ್ತು ಉಳಿದ ರಾಜಕೀಯ ಪಕ್ಷಗಳು ತುಚ್ಛ ರಾಜಕೀಯ ಹಿತಾಸಕ್ತಿಯನ್ನು ಬದಿಗಿರಿಸಿ ಸರಿಯಾದ ಮಾರ್ಗದಲ್ಲಿ ಒಟ್ಟಿಗೆ ಪ್ರಯತ್ನಿಸಿದರೇ ಮಾತ್ರ ಇದು ಸಾಧ್ಯವಾಗಬಲ್ಲದು. ಯಾವುದೇ ರಾಜಕೀಯ ಪಕ್ಷ ಅಥವಾ ನೇತಾರ ದೇಶದ ಸುರಕ್ಷೆಗಿಂತ ದೊಡ್ಡವಲ್ಲ. ದೇಶದ ಸುರಕ್ಷತೆಯ ಬಗ್ಗೆ ಜನರಲ್ಲಿ ಬಲವಾದ ವಿಶ್ವಾಸವನ್ನು ಮೂಡಿಸುವುದ ಒಂದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯವಾಗಿದೆ.
4. ರಾಷ್ಟ್ರ ವಿರೋಧಿ ಕೃತ್ಯಗಳಿಗೆ ಕಳವಳ
ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ದೇಶವಿರೋಧಿ ಚಟುವಟಿಕೆ, ಮೀಸಲಾತಿ ಹೆಸರಿನಲ್ಲಿ ಗುಜರಾತ್ ಹಾಗೂ ಹರ್ಯಾಣದಲ್ಲಿ ನಡೆದ ಅವಿವೇಕದ ಹಿಂಸಾಚಾರಗಳು, ದೇಶದ ಭದ್ರತಾ ಸಂಸ್ಥೆಗಳ ಮೇಲೆ ಹಾಗೂ ಯೋಧರ ಮೇಲೆ ನಡೆದ ಆಕ್ರಮಣಗಳ ಕುರಿತು ಸಂಘ ತೀವ್ರ ಕಳವಳ ವ್ಯಕ್ತಪಡಿಸಿದೆ.
ದೇಶದ ಜನತೆಯಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸುವಲ್ಲಿ ಕೇಂದ್ರ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಾಧಾನ ವ್ಯಕ್ತಪಡಿಸಿರುವ ಸಂಘವು, ಇದು ಇನ್ನಷ್ಟು ವ್ಯಾಪಕಗೊಳ್ಳಬೇಕಾಗಿದೆ.
ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಭಯೋತ್ಪಾದಕರ ಪರ ಮತ್ತು ದೇಶವಿರೋಧಿ ಚಟುವಟಿಕೆಗಳು ನಡೆಯುತ್ತಿರುವುದನ್ನು ಆರೆಸ್ಸೆಸ್ ತೀವ್ರವಾಗಿ ಖಂಡಿಸುತ್ತದೆ ಹಾಗೂ ಚಟುವಟಿಕೆಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಕೃತ್ಯಗಳ ವಿರುದ್ಧ ದೇಶದ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಇಂತಹ ಕೃತ್ಯಗಳು ದೇಶದ ಸಂವಿಧಾನ, ಸಂಸತ್ತು, ಕಾನೂನಿನಲ್ಲಿ ನಂಬಿಕೆ ಇಲ್ಲದವರು ಎಸಗಿದ ಕೃತ್ಯವಾಗಿದೆ. ಈವರೆಗೆ ಇಂತಹ ವಿಭಜನಕಾರಿಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದು ಇಂತಹ ಚಟುವಟಿಕೆಗಳು ನಡೆಯಲು ಕಾರಣವಾಗಿದೆ. ಇದನ್ನು ಸಹಿಸಲಾಗದು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಸಭ್ಯ ಸಂಸ್ಕೃತಿಯನ್ನು ಎತ್ತಿಹಿಡಿದು ಶೈಕ್ಷಣಿಕ ಪರಿಸರವನ್ನು ಕಾಯ್ದುಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಉತ್ತರ ಪ್ರದೇಶದ ಮುಜಾಫರ್ನಗರ, ಪಶ್ಚಿಮಬಂಗಾಳದ ಮಾಲ್ಡಾ ಮುಂತಾದೆಡೆಗಳಲ್ಲಿ ಹಿಂದುಗಳ ಮೇಲೆ ನಡೆದ ಮತೀಯ ಆಕ್ರಮಣ, ಹಿಂಸಾಚಾರಗಳ ಬಗ್ಗೆ ಉಲ್ಲೇಖಿಸಿದ ಅವರು, ಪೊಲೀಸ್ ಸೇರಿದಂತೆ ಭದ್ರತಾ ಪಡೆಗಳ ಮೇಲೂ ಆಕ್ರಮಣಗಳು ನಡೆಯುತ್ತಿವೆ ಎಂಬುದು ಗಂಭೀರ ಸಂಗತಿ ಇಂತಹ ಕೃತ್ಯಗಳಿಗೆ ವೋಟ್ಬ್ಯಾಂಕ್ ಹಿನ್ನೆಲೆಯಲ್ಲಿ ನೀಡಲಾಗುತ್ತಿರುವ ರಾಜಕೀಯ ಕುಮ್ಮಕ್ಕನ್ನು ಹತ್ತಿಕ್ಕಬೇಕಾಗಿದೆ. ದೇಗುಲಗಳಿಗೆ ಮಹಿಳೆಯರ ಪ್ರವೇಶದ ಹೆಸರಿನಲ್ಲಿ ಕೆಲವು ಸ್ಥಾಪಿತ ಹಿತಾಸಕ್ತಿಗಳು ಎಬ್ಬಿಸಿರುವ ಗೊಂದಲವನ್ನು ಸಂಘ ಖಂಡಿಸುತ್ತದೆ. ಸಮಾಜದಲ್ಲಿನ ಕೆಲವು ಹಳೆಯ ಕುರೂಢಿಗಳನ್ನು ಸರಿಪಡಿಸಬೇಕಾಗಿದೆ. ಇದಕ್ಕೆ ಧಾರ್ಮಿಕ, ಸಾಮಾಜಿಕ ನಾಯಕತ್ವದ ಜಂಟಿ ಪ್ರಯತ್ನ ನಡೆಯಬೇಕು.
ಸಂಘದ ಗಣವೇಷ ಬದಲಾವಣೆ: ಖಾಕಿ ಚಡ್ಡಿ ಬದಲು ಇನ್ನು ಕಂದು ಬಣ್ಣದ ಪ್ಯಾಂಟ್
ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಂಘಟನೆಯಲ್ಲಿ ಸ್ವರೂಪಾತ್ಮಕ ಬದಲಾವಣೆಯೊಂದನ್ನು ಘೋಷಿಸಿದೆ. ಇದರಂತೆ ಸಂಘ ಸ್ವಯಂಸೇವಕರಿಗೆ ಪಾರಂಪರಿಕ ಖಾಕಿ ಚಡ್ಡಿ ಬದಲು ಇನ್ನು ಸೊಂಟದಿಂದ ಪಾದದವರೆಗೆ ಮುಚ್ಚುವ ಕಂದು ಬಣ್ಣದ ಪ್ಯಾಂಟ್ ಸಮವಸ್ತ್ರವಾಗಿರಲಿದೆ. ನಾವು ಕಾಲದೊಂದಿಗೆ ಸಾಗುವ ನಿಶ್ಚಯ ಮಾಡಿದ್ದೇವೆ. ಆದ್ದರಿಂದ ನಮಗೆ ಈ ಧಿರಿಸು ಸಂಹಿತೆ ಬದಲಾಯಿಸುವಲ್ಲಿ ಯಾವುದೇ ಹಿಂಜರಿಕೆಯಿಲ್ಲ ಎಂದು ಸಂಘದ ಸರಕಾರ್ಯವಾಹ ಸುರೇಶ್ ಭಯ್ಯಾಜಿ ಜೋಶಿ ಅವರು ತಿಳಿಸಿದರು.
ಸಂಘದ ಗುರುತು ಕೇವಲ ಗಣವೇಷದಿಂದಲ್ಲ. ಶಾರೀರಿಕ ಅಭ್ಯಾಸಗಳನ್ನೂ ಗಮನದಲ್ಲಿರಿಸಿಕೊಂಡು ಇಂತಹ ನಿರ್ಧಾರಕ್ಕೆ ಬರಲಾಗಿದೆ. ಈವರೆಗೆ, ಖಾಕಿ ಚಡ್ಡಿ, ಬೂದಿ ಬಣ್ಣದ ಬೆಲ್ಟ್, ಬಿಳಿ ಬಣ್ಣದ ಪೂರ್ಣತೋಳಿನ ಅಂಗಿ (ಮೊಣಕೈಯವರೆಗೆ ಇದನ್ನು ಮಡಚಿರಬೇಕು), ಕಪ್ಪು ಟೋಪಿ, ಕಪ್ಪು ಬೂಟು ಮತ್ತು ಖಾಕಿ ಸಾಕ್ಸ್ ಸಂಘದ ಗಣವೇಷದ ಭಾಗಗಳಾಗಿತ್ತು. ವಿಶೇಷವಾಗಿ ಈಶಾನ್ಯ ಸೇರಿದಂತೆ ದೇಶದ ಎಲ್ಲ ಭಾಗಗಳ ಹವಾಮಾನ, ಪರಿಸರ ಇತ್ಯಾದಿ ಅಂಶಗಳನ್ನು ಪರಿಗಣಿಸಿ ವ್ಯಾಪಕವಾಗಿ ಚರ್ಚೆ, ಸಮಾಲೋಚನೆ, ಚಿಂತನೆ ನಡೆಸಿದ ಬಳಿಕ ಸಂಘ ಇಂತಹ ಒಂದು ನಿರ್ಧಾರಕ್ಕೆ ಬಂದಿದೆ ಎಂದು ಅವರು ಹೇಳಿದರು.
ಮೀಸಲಾತಿಯು ಸಮಾಜದ ದುರ್ಬಲ ವರ್ಗದ ಅಭ್ಯುದಯಕ್ಕೆ ಕಾರಣವಾಗಬೇಕು. ಸಮಾಜದ ಸಂಪನ್ನವರ್ಗವೂ ಮೀಸಲಾತಿಗೆ ಬೇಡಿಕೆ ಮುಂದಿಟ್ಟರೆ ಇದರಿಂದ ಸಮಾಜಕ್ಕೆ ಒಳಿತಾಗದು. ಇದು ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾದುದು ಎಂದು ಸುರೇಶ್ ಭಯ್ಯಾಜಿ ಜೋಶಿ ತಿಳಿಸಿದರು.
ಕರ್ನಾಟಕದಲ್ಲಿ 3 ಬದಲಾವಣೆ
ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ತಂಡವನ್ನು ಪುನರ್ರಚಿಸಲಾಗಿದೆ. ಪ್ರಾಂತ ಸಹ ಸಂಘಚಾಲಕರಾಗಿ ಶ್ರೀ ಅರವಿಂದ ರಾವ್ ದೇಶಪಾಂಡೆ, ಪ್ರಾಂತ ಕಾರ್ಯವಾಹರಾಗಿ ಶ್ರೀ ರಾಘವೇಂದ್ರ ಕಾಗೆವಾಡ ಹಾಗೂ ಸಹ ಪ್ರಾಂತ ಪ್ರಚಾರಕರಾಗಿ ಶ್ರೀ ಸುಧಾಕರ ನೇಮಕಗೊಂಡಿದ್ದಾರೆ. ಆರೆಸ್ಸೆಸ್ನ ಕರ್ನಾಟಕ ದಕ್ಷಿಣ ಮತ್ತು ಅಖಿಲ ಭಾರತೀಯ ಪದಾಧಿಕಾರಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
******************************************************************