ಇಂದು ಜಯಂತಿ
ವಿಶ್ವನಾಥ್‌ ಪ್ರತಾಪ್‌ ಸಿಂಗ್‌ ಅವರು ರಾಜಕೀಯ ನಾಯಕರಾಗಿದ್ದರು. ಅವರು ಭಾರತದ 7ನೇ ಪ್ರಧಾನಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಪ್ರತಾಪ್‌ ಸಿಂಗ್‌ ಅವರು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಅವರ ಆಡಳಿತಾವಧಿಯಲ್ಲಿ ಮೀಸಲಾತಿ ಕುರಿತು ಮಂಡಲ್ ಆಯೋಗದ ಶಿಫಾರಸ್ಸನ್ನು ಜಾರಿಗೆ ತಂದಿದ್ದರು. ಇಂದು ಅವರ ಜಯಂತಿ.


ಪರಿಚಯ
ವಿಶ್ವನಾಥ್‌ ಪ್ರತಾಪ್‌ ಸಿಂಗ್‌ ಅವರು ಜೂನ್ 25, 1931ರಂದು ಅಲಹಾಬಾದ್ ಜಿಲ್ಲೆಯ ಬೇಲನ್‌ ಎಂಬಲ್ಲಿ ಜನಿಸಿದರು. ಇವರ ತಂದೆ ರಾಜಾ ಬಹದ್ದೂರ್ ರಾಮ್ ಗೋಪಾಲ್ ಸಿಂಗ್. ವಿಶ್ವನಾಥ್‌ ಪ್ರತಾಪ್‌ ಸಿಂಗ್‌ ಅವರು ಡೆಹ್ರಾಡೂನ್‌ ನ ಕರ್ನಲ್‌ ಬ್ರೌನ್‌ ಕೇಂಬ್ರಿಡ್ಜ್‌ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪಡೆದರು. ನಂತರ ಅವರು ಅಲಹಾಬಾದ್‌ ವಿಶ್ವವಿದ್ಯಾಲಯದಿಂದ ಕಲೆ ಮತ್ತು ಕಾನೂನು ಪದವಿ ಪಡೆದರು. ಪುಣೆ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಪದವಿ ಪಡೆದರು.


ರಾಜಕೀಯ ಜೀವನ
ವಿಶ್ವನಾಥ್‌ ಪ್ರತಾಪ್‌ ಸಿಂಗ್‌ ಕಾಂಗ್ರೆಸ್‌ ಪಕ್ಷದ ಸದಸ್ಯರಾಗಿ ರಾಜಕೀಯಕ್ಕೆ ಪ್ರವೇಶಿಸಿದರು. 1971ರಲ್ಲಿ ಲೋಕಸಭೆಗೆ ಚುನಾಯಿತರಾದರು. 1974ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರ ಅಧಿಕಾರಾವಧಿಯಲ್ಲಿ ವಾಣಿಜ್ಯ ಸಚಿವರಾಗಿ ನೇಮಕಗೊಂಡರು . 1977ರವರೆಗೆ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ಇಂದಿರಾ ನೇತೃತ್ವದ ಕಾಂಗ್ರೆಸ್ ಆರನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದ ಎದುರು ಸೋತಿತು. ನಂತರ ಜೂನ್ 9, 1980ರಂದು ಉತ್ತರ ಪ್ರದೇಶದ ಸಿಎಂ ಆಗಲು ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ನವೆಂಬರ್ 21, 1980ರಂದು ಉತ್ತರ ಪ್ರದೇಶ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. ಬಳಿಕ ತಿವಾರಿ ಅಸೆಂಬ್ಲಿ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ, ಜೂನ್ 14, 1981ರಂದು ಶಾಸಕರಾದರು. ಜೂನ್ 28, 1982ರವರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. 1983ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ನಂತರ 1987 ರಲ್ಲಿ, ಸಿಂಗ್ ಅವರು ಮೊದಲ ಬಾರಿಗೆ ಭಾರತದ ರಕ್ಷಣಾ ಸಚಿವ ಸ್ಥಾನಕ್ಕೆ ನೇಮಕಗೊಂಡರು. 2 ಡಿಸೆಂಬರ್ 1989ರಲ್ಲಿ 16 ನೇ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ಕಾಂಗ್ರೆಸ್‌ ನಿಂದ ಹೊರಬಂದು 1988ರಲ್ಲಿ ಜನತಾ ದಳವನ್ನು ಸ್ಥಾಪಿಸಿದರು. ಜನತಾ ದಳದ ಅಧ್ಯಕ್ಷರಾಗಿ ಆಯ್ಕೆಯಾದರು. ದ್ರಾವಿಡ ಮುನ್ನೇತ್ರ ಕಳಗಂ, ತೆಲುಗು ದೇಶಂ ಪಕ್ಷ , ಮತ್ತು ಅಸೋಮ್ ಗಣ ಪರಿಷತ್ ಸೇರಿದಂತೆ ಪ್ರಾದೇಶಿಕ ಪಕ್ಷಗಳೊಂದಿಗೆ ಜನತಾ ದಳದ ವಿರೋಧ ಒಕ್ಕೂಟವು ಅಸ್ತಿತ್ವಕ್ಕೆ ಬಂದಿತು. ಡಿಸೆಂಬರ್ 2, 1989ರಂದು ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು.


ವಿಶ್ವನಾಥ್‌ ಪ್ರತಾಪ್‌ ಸಿಂಗ್‌ ಅವರು ನವೆಂಬರ್‌ 27, 2008ರಂದು ತಮ್ಮ 77ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.