ಬೆಂಗಳೂರು: ಪತ್ರಕರ್ತರಾದವರು ಎಲ್ಲರೊಂದಿಗೂ ಬೆರೆತು ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಬೇಕು. ಲೋಕಹಿತಕ್ಕಾಗಿ ಅವರು ಕಾರ್ಯನಿರ್ವಹಿಸಬೇಕು ಎಂದು ಆರ್ಗನೈಸರ್ ಸಂಪಾದಕ ಪ್ರಫುಲ್ಲ ಕೇತ್ಕರ್ ಹೇಳಿದರು.
ವಿಶ್ವ ಸಂವಾದ ಕೇಂದ್ರ ಕರ್ನಾಟಕದ ವತಿಯಿಂದ ಅವರು ಬಸವನಗುಡಿಯ ಬಿ.ಎಂ.ಎಸ್ ಇಂಜಿನಿಯರಿಂಗ್ ಕಾಲೇಜ್ ಸಭಾಂಗಣದಲ್ಲಿ ಆಯೋಜಿಸಲಾದ 2024ನೆಯ ಸಾಲಿನ ವಿಎಸ್‌ಕೆ ಮಾಧ್ಯಮ ಪ್ರಶಸ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾರದ ಮಹರ್ಷಿಗಳನ್ನು ಆದ್ಯ ಪತ್ರಕರ್ತರೆಂದು ಗುರುತಿಸುತ್ತೇವೆ. ಏಕೆಂದರೆ ಸಂವಹನದ ಸ್ಥಿರವಾದ ಸಂಸ್ಥೆಯಂತೆ ಅವರು ತಮ್ಮ ಪಾತ್ರವನ್ನು ನಿಭಾಯಿಸಿದ್ದರು. ಆದರೆ ಅವರನ್ನು ವ್ಯಂಗ್ಯವಾಗಿ ಚಿತ್ರಿಸುವ ಕಥನಗಳು ವ್ಯಾಪಕತೆಯನ್ನು ಪಡೆದುಕೊಂಡಿದ್ದರಿಂದ ಜನಸಾಮಾನ್ಯರಿಗೆ ಅವರ ಪ್ರಾಮುಖ್ಯತೆಯ ಕುರಿತು ಹೆಚ್ಚು ಗಮನವಹಿಸುವುದಕ್ಕೆ ಸಾಧ್ಯವಾಗಲಿಲ್ಲ. ವಾಸ್ತವದಲ್ಲಿ ನಾರದ ಮಹರ್ಷಿಗಳು ಧರ್ಮದ ಉಳಿವಿಗಾಗಿ, ಲೋಕಹಿತಕ್ಕಾಗಿ ಶ್ರಮಿಸಿದ ಮಹಾನ್ ಸಂವಹನಕಾರ ಎಂದು ನುಡಿದರು.
ಯಾವುದೇ ವೃತ್ತಿಯಲ್ಲಿ ಕೆಲಸ ಮಾಡುವವರು ತಮ್ಮ ವೃತ್ತಿಯ ಕಡೆಗೆ ಭಕ್ತಿಯನ್ನು, ಬದ್ಧತೆಯನ್ನು ಹೊಂದಿರಬೇಕು. ವಿಷಯವನ್ನು ಕೇಳಿ ತಿಳಿಯುವುದು ಮಾತ್ರವಲ್ಲದೆ ಪರಿಶೀಲಿಸಬೇಕು. ನಮ್ಮ ಸಂಚಾರದ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಂಡು ಅನುಭವವನ್ನು ಪಡೆಯಬೇಕು. ಪತ್ರಕರ್ತರಿಗೆ ಈ ಮೂರು ಗುಣ ಅತ್ಯಂತ ಪ್ರಮುಖವಾದದ್ದು. ನಾರದ ಮಹರ್ಷಿಗಳೂ ಈ ಗುಣಗಳನ್ನು ಒಳಗೊಂಡಿದ್ದರು ಮತ್ತು ನಾರದ ಸೂತ್ರದಲ್ಲಿ ಇವುಗಳ ಪ್ರಾಮುಖ್ಯತೆಯ ಕುರಿತು ತಿಳಿಸಿದ್ದಾರೆ ಎಂದರು.
ಸುಳ್ಳು ಸುದ್ದಿ ಎಂಬ ಪರಿಭಾಷೆ ಸೂಕ್ತವಾದದ್ದಲ್ಲ. ಏಕೆಂದರೆ ಸುಳ್ಳಿನಿಂದ ಕೂಡಿರುವುದು ಸುದ್ದಿಗಳಾಗಲು ಸಾಧ್ಯವಿಲ್ಲ. ಅವುಗಳನ್ನು ಸುಳ್ಳು ಕಥನಗಳೆಂದು ಗುರುತಿಸಬಹುದು. ಸುದ್ದಿಗಳನ್ನು ನೀಡುವಾಗ ಅವುಗಳನ್ನು ತಿರುಚುತ್ತಿರುವುದು ಇಂದಿನ ಸವಾಲು. ಇದರ ಕುರಿತು ಪರಿಹಾರಗಳನ್ನು ಕಂಡುಕೊಳ್ಳಲು ಇಂದಿನ ಪತ್ರಿಕೋದ್ಯಮ ಗಮನ ಹರಿಸಬೇಕಾಗಿದೆ. ಭಾಷೆ, ಭೌಗೋಳಿಕ ವಿಭಿನ್ನತೆ, ಪ್ರಾದೇಶಿಕತೆ ಇವೆಲ್ಲವೂ ವಿವಿಧತೆಯನ್ನು ಸಂಭ್ರಮಿಸುವ ಸಂಸ್ಕೃತಿಯಾದ ನಮಗೆ ಎಂದಿಗೂ ಪ್ರತ್ಯೇಕತೆಯ ಸರಕಾಗಿಲ್ಲ. ಆದರೆ ಇತ್ತೀಚೆಗಿನ ದಿನಗಳಲ್ಲಿ ಸಮಾಜದಲ್ಲಿ ಒಡಕನ್ನು ಮೂಡಿಸುವುದಕ್ಕಾಗಿ ಅವುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆದ್ದರಿಂದ ಪತ್ರಕರ್ತರು ಸತ್ಯಾಧಾರಿತ ಭಾರತೀಯ ಕಥನವನ್ನು ಸರಿಯಾದ ವ್ಯಕ್ತಿಗಳಿಗೆ ತಲುಪಿಸುವ ಕಾರ್ಯವನ್ನು ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಘಚಾಲಕ ಡಾ.ಪಿ.ವಾಮನ್ ಶೆಣೈ, ವಿಶ್ವ ಸಂವಾದ ಕೇಂದ್ರ ಕರ್ನಾಟಕದ ವಿಶ್ವಸ್ಥ ಶ್ರೀನಿವಾಸ ಭಟ್, ಮುಖ್ಯ ಅತಿಥಿ ಪ್ರಫುಲ್ಲ ಕೇತ್ಕರ್ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ವಿಶ್ವ ಸಂವಾದ ಕೇಂದ್ರ ಕರ್ನಾಟಕದ ವತಿಯಿಂದ ನೀಡಲಾದ ತಿ.ತಾ.ಶರ್ಮ ಪತ್ರಿಕೋದ್ಯಮ ಪ್ರಶಸ್ತಿಯನ್ನು ವಿಜಯಕರ್ನಾಟಕ ಪತ್ರಿಕೆಯ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ, ಚಂದ್ರಶೇಖರ ಭಂಡಾರಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ಏಷಿಯಾನೆಟ್ ಸುವರ್ಣನ್ಯೂಸ್‌ನ ಸಂಪಾದಕ ಅಜಿತ್ ಹನಮಕ್ಕನವರ್, ಬೆ.ಸು.ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಸ್ತ್ರೀಜಾಗೃತಿ ಪತ್ರಿಕೆಯ ಸಂಪಾದಕಿ ಶೋಭಾ ಎಚ್. ಜಿ., ಹೊ.ವೆ.ಶೇಷಾದ್ರಿ ಅಂಕಣಕಾರ ಪ್ರಶಸ್ತಿಯನ್ನು ಖ್ಯಾತ ಅಂಕಣಕಾರ ಪ್ರೊ.ಪ್ರೇಮಶೇಖರ, ವಿಎಸ್‌ಕೆ ಡಿಜಿಟಲ್ ಮಾಧ್ಯಮ ಪ್ರಶಸ್ತಿಯನ್ನು ಡಾ.ಪೂರ್ವಿ ಜಯರಾಜ್ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ವಿಶ್ವ ಸಂವಾದ ಕೇಂದ್ರದ ಟ್ರಸ್ಟಿಗಳು, ಚಿಂತಕರು, ಅಧ್ಯಾಪಕರು, ಸಾಮಾಜಿಕ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.