ಲೇಖನ: ಚೈತನ್ಯ ಹೆಗಡೆ

ಪ್ರಧಾನಿ ನರೇಂದ್ರ ಮೋದಿ: ಇಸ್ರೇಲ್ ಮೇಲಾಗುತ್ತಿರುವ ಭಯೋತ್ಪಾದಕ ದಾಳಿ ಆಘಾತವನ್ನುಂಟುಮಾಡಿದೆ. ಬಲಿಪಶುಗಳಾಗಿರುವ ಮುಗ್ಧರು ಮತ್ತವರ ಕುಟುಂಬದ ಪರ ನಮ್ಮ ಸಹಾನೂಭೂತಿ ಮತ್ತು ಪ್ರಾರ್ಥನೆಗಳಿರುತ್ತವೆ. ಈ ಕಷ್ಟದ ಸಮಯದಲ್ಲಿ ನಾವು ಇಸ್ರೇಲ್ ಜತೆಗಿದ್ದೇವೆ. (ಇಸ್ರೇಲ್ ಮೇಲೆ ದಾಳಿಯಾದ ಬೆನ್ನಲ್ಲೇ ಹೇಳಿದ್ದು)

ಕಾಂಗ್ರೆಸ್ ಪಕ್ಷ: ಇಸ್ರೇಲಿನಲ್ಲಾಗುತ್ತಿರುವುದು ಕಳವಳಕಾರಿ. ತಕ್ಷಣಕ್ಕೆ ಯುದ್ಧವಿರಾಮವಾಗಬೇಕು. ಪ್ಯಾಲಸ್ಟೀನಿಯರು ಸ್ವಾಯತ್ತೆ ಮತ್ತು ಗೌರವದ ಬದುಕು ಹೊಂದುವುದನ್ನು ಬೆಂಬಲಿಸುತ್ತೇವೆ. (ಸೆಪ್ಟೆಂಬರ್ 9ರಂದು ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಕೈಗೊಂಡ ನಿರ್ಣಯ)

ಭಾರತದ ‘ಉದಾರವಾದಿ’ ಅಭಿಪ್ರಾಯ ನಿರೂಪಕರು: ಇಸ್ರೇಲ್ ಎಂಬುದು 1948ರ ಮೊದಲು ಅಸ್ತಿತ್ವದಲ್ಲೇ ಇದ್ದಿರಲಿಲ್ಲ. ನ್ಯಾಯ ಇರೋದು ಪ್ಯಾಲಸ್ಟೀನಿಯರ ಪರ ಮಾತ್ರ.

ಈ ಪೈಕಿ ಬಹಳ ಅಪಾಯಕಾರಿಯಾದದ್ದು ಮೂರನೇ ಅಭಿಪ್ರಾಯ. ಏಕೆಂದರೆ, ಅವತ್ತಿನ ಬ್ರಿಟಿಷ್ ಸಾಮ್ರಾಜ್ಯದ ಸಹಕಾರದೊಂದಿಗೆ ಅರಬ್ ನೆಲದಲ್ಲಿ ಜಾಗ ಮಾಡಿಕೊಂಡು ಇಸ್ರೇಲ್ ಸ್ಥಾಪನೆಯಾಗಿದ್ದು 1948ರಲ್ಲೇ ಆದರೂ, ಅದು ಅರಬ್ ನೆಲವನ್ನು ಯಹೂದಿಯರು ವಶಪಡಿಸಿಕೊಂಡಿದ್ದು ಎಂದು ಅರ್ಥೈಸಿಕೊಳ್ಳುವುದೇ ಅನರ್ಥ. ಏಕೆಂದರೆ, ಅದೇ ನೆಲದಿಂದ ಯಹೂದಿಯರನ್ನು ಸಾವಿರ ವರ್ಷಗಳ ಹಿಂದೆ ಹೊರಗೆ ತಳ್ಳಿದವರ್ಯಾರು ಎಂಬುದನ್ನೂ ಗಮನಿಸಬೇಕಾಗುತ್ತದೆ.

ಜಮ್ಮು-ಕಾಶ್ಮೀರದಲ್ಲೂ ಎಡಪಂಥೀಯರು ಮತ್ತು ಇಸ್ಲಾಮಿಸ್ಟುಗಳು ಸೇರಿ ಹುಟ್ಟುಹಾಕಿರುವುದು ಇದೇ ಕಥನ. ವರ್ತಮಾನದಲ್ಲಿ ಮತ್ತು ಮಹಾರಾಜ ಹರಿಸಿಂಗ್ ಆಳುತ್ತ ಇದ್ದಾಗಲೂ ಆ ನೆಲದಲ್ಲಿದ್ದದ್ದು ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರೇ. ಹೀಗಾಗಿ ಭಾರತಕ್ಕೆ ಅದರ ಮೇಲೆ ಹಕ್ಕಿಲ್ಲ ಎಂಬ ರೀತಿಯ ವ್ಯಾಖ್ಯಾನವನ್ನು ಎಡಪಂಥೀಯರು-ಇಸ್ಲಾಮಿಸ್ಟುಗಳು ಸೇರಿ ಕಟ್ಟಿ ನಿಲ್ಲಿಸ್ತಾರೆ. ಮೇಲ್ನೋಟಕ್ಕೆ ಅರೆ ಹೌದಲ್ಲ ಅಂತಲೂ ಈ ವಾದ ಅನ್ನಿಸಿಬಿಡುತ್ತೆ. ಆದರೆ ಭಾರತ ಕೇಳ್ತಿರೋದು, ಇಸ್ಲಾಮಿನ ಈ ಬಲವಂತದ ಖಡ್ಗದ ನೆರಳಿನ ಮತಾಂತರ ಆಗುವುದಕ್ಕಿಂತ ಪೂರ್ವದಲ್ಲಿ ಕಲ್ಹಣನ ಕಾಲದ, ಅಭಿನವ ಗುಪ್ತನ ಕಾಲದ, ಶಿವ-ಶಾರದೆಯರ ಪರಂಪರೆ ಆವರಿಸಿದ್ದ ಕಾಶ್ಮೀರವೊಂದು ಇತ್ತಲ್ಲ. ಅದು ನಮ್ಮ ಹಕ್ಕಲ್ವಾ?

ಇಸ್ರೇಲಿನ ವ್ಯಾಖ್ಯಾನಗಳನ್ನು ಕೇವಲ 1948ರ ಈಚೆಗೆ ಕಟ್ಟುವ ಪ್ರಯತ್ನಗಳ ವಿರುದ್ಧವೂ ನಮಗಿರಬೇಕಾದದ್ದು ಇದೇ ಇತಿಹಾಸ ಪ್ರಜ್ಞೆ.

ಇವತ್ತಿಗೆ ಇಸ್ಲಾಂ ಸುಮಾರು 1,400 ವರ್ಷ ಹಳೆಯದು, ಕ್ರೈಸ್ತಮತ 2,000 ವರ್ಷ ಹಳೆಯದು… ಆದರೆ, ಇವುಗಳಂತೆಯೇ ಅಬ್ರಾಹಂ ವಂಶಮೂಲ ಹೊಂದಿ 3,000 ವರ್ಷಗಳ ಹಿಂದೆ ಹುಟ್ಟಿದ್ದು ಜುದಾಯಿಸಂ…ಇದರ ಅನುಯಾಯಿಗಳೇ ಯಹೂದಿಗಳು…ಅವರ ದೇಶ ಇಸ್ರೇಲ್.. ಅರ್ಥಾತ್, ಇವತ್ತಿನ ಇಸ್ಲಾಂ ಅದನ್ನು ತನ್ನ ನೆಲವಾಗಿಸಿಕೊಳ್ಳುವುದಕ್ಕಿಂತ ಸಾವಿರಾರು ವರ್ಷಗಳ ಕೆಳಗೆಯೇ ಅಲ್ಲೊಂದು ಇಸ್ರೇಲ್ ಇತ್ತು.

ಸುಮಾರು 70ನೇ ಇಸ್ವಿಯಲ್ಲಿ ರೋಮನ್ ಸಾಮ್ರಾಜ್ಯ ಈ ಯಹೂದಿಗಳ ನೆಲದ ಮೇಲೆ ಆಕ್ರಮಣ ಮಾಡಿತು. ಇವರ ದೇವಾಲಯವನ್ನು ಒಡೆದುಹಾಕಿತು. ಅಲ್ಲಿಂದ ಬೇರೆ ಅರಬ್ ನೆಲಗಳಿಗೆ ಯಹೂದಿಗಳು ಚದುರಿಹೋದರು. ನಂತರದ ಬೈಜಾಂಟಿಯನ್ ಸಾಮ್ರಾಜ್ಯದ ಕಾಲದಲ್ಲಿ ಯಹೂದಿಗಳಿಗೆ ತಮ್ಮ ಮತಾಚರಣೆ ಸ್ವಾತಂತ್ರ್ಯ ಇತ್ತು. ಆದರೆ, ಬಹಳಷ್ಟು ವೃತ್ತಿ ಮತ್ತು ಅಧಿಕಾರಗಳಿಂದ ಇವರನ್ನು ದೂರ ಇರಿಸಲಾಗಿತ್ತು. ನಂತರ ಕ್ರೈಸ್ತಮತದ ಉದಯವಾದಾಗ, ಸಹಜವಾಗಿಯೇ ಯಹೂದಿಗಳಿಂದಲೇ ಹೆಚ್ಚಿನವರು ಮತಾಂತರವಾಗಿದ್ದು. ಅದಾದ ನಂತರ ಇಸ್ಲಾಮಿಕ್ ಸಾಮ್ರಾಜ್ಯಗಳು ಬಂದಾಗಲಂತೂ ಪರಿಸ್ಥಿತಿ ಏನಾಗಿತ್ತು ಅಂತ ವಿವರಿಸಬೇಕಾದ ಅಗತ್ಯ ಇಲ್ಲ.

ಈ ಎಲ್ಲ ತಲ್ಲಣಗಳ ಉದ್ದಕ್ಕೂ ಯಹೂದಿಗಳು ಯಾವುದೇ ಒಂದು ಭೂಗೋಳದಲ್ಲಿ ಏಕತ್ರವಾಗಿ ಇರುವುದಕ್ಕೆ ಆಗಲೇ ಇಲ್ಲ. ಎಲ್ಲ ಹರಿದುಹಂಚಿ ಹೋಗಿದ್ದರು. ಆದರೆ ಈ ಸಮಯದಲ್ಲೂ ಅವರು ಎರಡು ಕೆಲಸಗಳನ್ನು ಮಾಡಿದರು. ಒಂದು, ತಮ್ಮ ಪವಿತ್ರಗ್ರಂಥ ತೋರಾವನ್ನು ಮೌಖಿಕವಾಗಿ ಮತ್ತು ಗ್ರಂಥಸ್ಥವಾಗಿ ಕಾಪಾಡಿಕೊಂಡು ಬರುವ ಕೆಲಸ. ಅದಲ್ಲದೇ, ತಮ್ಮದೂ ಅಂತ ನೆಲ ಇಲ್ಲದೇ ಇರುವಾಗ ಇವರು ಆಯಾ ಕಾಲಘಟ್ಟದಲ್ಲಿ ಹುಟ್ಟಿದ ವೃತ್ತಿಗಳಲ್ಲೆಲ್ಲ ತಮ್ಮ ಕೌಶಲ ಸಾಧಿಸಿಕೊಳ್ಳುತ್ತ, ಬದುಕು ಕಟ್ಟಿಕೊಳ್ಳುತ್ತ ಹೋದರು…ಹೀಗಾಗಿ, ಉದ್ಯಮಗಳಲ್ಲಿ, ಲೇವಾದೇವಿ ವ್ಯವಹಾರಗಳಲ್ಲಿ, ಲೆಕ್ಕ-ನಿರ್ಮಾಣ ಕಾಮಗಾರಿಗಳ ಯೋಜನೆ ಇಂಥ ಎಲ್ಲ ಕಡೆಗಳಲ್ಲಿ ಯಹೂದಿಗಳು ತಮ್ಮ ಕೌಶಲ ಕಂಡುಕೊಂಡರು. ಹೊಸ ನಗರಗಳು-ವಿಸ್ತರಣೆಗಳನ್ನು ಮಾಡಿಕೊಳ್ತಿದ್ದ ಆಯಾ ಕಾಲದ ಕ್ರೈಸ್ತ ಮತ್ತು ಮುಸ್ಲಿಂ ಸಾಮ್ರಾಜ್ಯಗಳಿಗೆಲ್ಲ ಇವರ ಸೇವೆ ಬೇಕಾಯಿತು.

ಬಹುಶಃ ಯಹೂದಿಗಳು ತಮ್ಮದು ಅಂತ ಒಂದು ದೇಶವಿಲ್ಲದಿದ್ದರೂ ಜಗತ್ತಿನ ನಾನಾ ಭಾಗಗಳಲ್ಲಿ ಅಸ್ತಿತ್ವ ಉಳಿಸಿಕೊಂಡುಬಂದಿದ್ದಕ್ಕೆ ಹೀಗೊಂದು ಜ್ಞಾನ ಮಾರ್ಗದ ಮೂಲಕ ಗಳಿಸಿಕೊಂಡ ಪ್ರಭಾವ-ಆರ್ಥಿಕ ಶಕ್ತಿಗಳೇ ಕಾರಣ. ಹಾಗಾಗಿಯೇ ಹಿಟ್ಲರನ ಯಹೂದಿ ಹತ್ಯಾಕಾಂಡದ ನಂತರವೂ ಈ ಸಮುದಾಯ ಉಳಿದುಕೊಂಡಿತು. ನಾಜಿ ಕ್ರೌರ್ಯವನ್ನು ತನ್ನ ಮಾಧ್ಯಮ ಶಕ್ತಿಯ ಮೂಲಕ ಜಗತ್ತಿನೆದುರು ಪ್ರಭಾವಿಯಾಗಿ ತೆರೆದಿರಿಸಿತು.

ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಸೇರಿದಂತೆ ಹಿಂದುಗಳ ಮೇಲಾದ ನರಮೇಧಗಳನ್ನು ಜಗತ್ತಿನ ಸಂವಹನ ಮಾಧ್ಯಮದಲ್ಲಿ ಬಿಂಬಿಸುವುದು ಭಾರತದಿಂದ ಈವರೆಗೆ ಸಾಧ್ಯವಾಗಿಲ್ಲ ಎಂಬುದು ಈ ಹಂತದಲ್ಲಿ ಗಮನಿಸಬೇಕಾದ ಸಂಗತಿ.

ಅದಿರಲಿ…

ಆಲ್ಬರ್ಟ್ ಐನ್ ಸ್ಟೀನ್, ಸಿಗ್ಮಂಡ್ ಫ್ರಾಯ್ಡ್, ಸ್ಟಿಫನ್ ಸ್ಪೀಲ್ಬರ್ಗ್ ಇವರೆಲ್ಲ ಯಹೂದಿಗಳೇ. ಹಾಲಿವುಡ್ ಪ್ರಖ್ಯಾತ ಸಂಸ್ಥೆಗಳಿರೋದು ಯಹೂದಿಗಳ ನಿಯಂತ್ರಣದಲ್ಲೇ. ತಂತ್ರಜ್ಞಾನ-ಹಣಕಾಸು ನಿರ್ವಹಣೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿರೋರು ಯಹೂದಿಗಳು. ಇವತ್ತಿಗೆ ಪಾಶ್ಚಾತ್ಯರು ಮತ್ತು ಮುಖ್ಯವಾಗಿ ಅಮೆರಿಕ ಇವರ ಮಾತು ಕೇಳೋದಕ್ಕೆ ಕಾರಣ ಇಂಥದೊಂದು ಪ್ರಭಾವವೇ ಹೊರತು ಮತ್ತೇನಲ್ಲ.

ಹೀಗೆ ಸಹಸ್ರ-ಸಹಸ್ರ ವರ್ಷಗಳಿಂದ ಎಲ್ಲ ಪ್ರತಿಕೂಲ ಪರಿಸ್ಥಿಗಳ ನಡುವೆ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿರುವ ಸಮುದಾಯವೊಂದು, ತನ್ನ ಭೌಗೋಳಿಕ ಅಸ್ತಿತ್ವದ ಬಗ್ಗೆ ಕಠೋರ ನಿಲುವು ತಾಳಿದ್ರೆ ತಪ್ಪೇನು? ರಸ್ತೆಯಲ್ಲಿ ಮಹಿಳೆಯರನ್ನು ರೇಪ್ ಮಾಡೋದೂ ಯುದ್ಧದ ಭಾಗ ಅಂದುಕೊಳ್ಳುವವರ ಬಗ್ಗೆ ಇಸ್ರೇಲಿಗರು ಮೃದುವಾಗಿರಬೇಕು ಅಂತ ಬಯಸೋದು ಪ್ರಾಕ್ಟಿಕಲ್ಲಾ?

ಇವೆಲ್ಲ ಪ್ರಶ್ನೆಗಳಿಗೆ ನೀವು ಕಂಡುಕೊಳ್ಳುವ ಉತ್ತರ ಅದು ಭಾರತಕ್ಕೂ ಅನ್ವಯಿಸುತ್ತದೆ, ಅಷ್ಟೇ ಏಕೆ, ನಾಗರಿಕತೆಯ ಉಳಿವಿಗೂ ಅನ್ವಯಿಸುತ್ತದೆ.

ಇಸ್ರೇಲ್ ಕುರಿತು ಭಾರತದ ನಿಲುವು ಪ್ರಾರಂಭದಲ್ಲಿ ಬಹಳ ಪ್ರತಿಕೂಲವೇ ಇತ್ತು. ಅದರ ಸೃಷ್ಟಿಯನ್ನು 1948ರಲ್ಲಿ ಭಾರತ ಬೆಂಬಲಿಸಿರಲಿಲ್ಲ. ನಂತರದಲ್ಲೂ ಅಡಿಗಡಿಗೆ ಪ್ಯಾಲಸ್ಟೀನ್ ನಿರಾಶ್ರಿತರ ಬಗ್ಗೆಯೇ ಭಾರತದಿಂದ ಕಳವಳ -ಕಾಳಜಿ ವ್ಯಕ್ತವಾಗಿದ್ದೇ ಹೆಚ್ಚು. 1973ರಲ್ಲಿ ಅರಬ್ಬರನ್ನು ಇಸ್ರೇಲ್ ಸದೆಬಡಿದಾಗಲೂ ಅದರ ವಿಸ್ತರಣ ನೀತಿಯನ್ನು ಭಾರತ ಖಂಡಿಸಿತ್ತು.

ಇಸ್ರೇಲ್ ಜತೆ ರಾಜತಾಂತ್ರಿಕ ಸಂಬಂಧ ಶುರುವಾಗಿದ್ದೇ 1992ರ ನಂತರ. ಆದರೇನಂತೆ, ಕಾರ್ಗಿಲ್ ಸಂಘರ್ಷ ಸೇರಿದಂತೆ ಎಲ್ಲ ಆಪತ್ತಿನ ಕ್ಷಣಗಳಲ್ಲೂ ಇಸ್ರೇಲ್ ಭಾರತಕ್ಕೆ ಸಹಕರಿಸಿದೆ.

ನಿಜ. ಇಸ್ರೇಲ್ ಜತೆಯಲ್ಲೇ ಪ್ಯಾಲಸ್ಟೀನ್ ದೇಶವೂ ಸ್ಥಾಪನೆಯಾಗಬೇಕು ಎಂಬುದು ಭಾರತ ಸೇರಿದಂತೆ ಜಗತ್ತಿನ ಪ್ರಮುಖ ರಾಷ್ಟ್ರಗಳ ಅಧಿಕೃತ ನಿಲುವೇ ಆಗಿದೆ. ಹಾಗಂತ, ರಸ್ತೆಯಲ್ಲಿ ರೇಪ್ ಮಾಡುವುದನ್ನೂ ಯುದ್ಧ ಅಂತ ಸಮರ್ಥಿಸಿಕೊಳ್ಳುವವರನ್ನು ಖಂಡಿಸುವುದಕ್ಕೂ ಮುಲಾಜು ಇಟ್ಟುಕೊಳ್ಳಬೇಕಾ? ಈ ನಿಟ್ಟಿನಲ್ಲಿಯೇ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಕ್ರಿಯೆಗಳನ್ನು ತೂಗಿ ನೋಡಬೇಕಾಗುತ್ತದೆ.

ಇವತ್ತಿನ ಅರಬ್ ಸ್ಥಿತಿ ಹೇಗಿದೆ ಅಂತಂದ್ರೆ ಪ್ಯಾಲಸ್ಟೀನ್ ಪರ ಮತ್ತು ಇಸ್ರೇಲ್ ವಿರುದ್ಧ ಈ ಹಿಂದಿನ ದಶಕಗಳಲ್ಲಿದ್ದ ತೀವ್ರತೆ ಎಲ್ಲರಲ್ಲೂ ಇಲ್ಲ. ಇವತ್ತು, ಯುಎಇಯಂಥ ದೇಶ ಹಮಾಸ್ ಉಗ್ರರು ನಾಗರೀಕರನ್ನು ವಶಕ್ಕೆ ಪಡೆದಿರೋದು ಒಪ್ಪೋದಕ್ಕೆ ಸಾಧ್ಯವಿಲ್ಲ ಅಂತ ಹೇಳಿಕೆ ಕೊಡುವಷ್ಟರಮಟ್ಟಿಗೆ ಪರಿಸ್ಥಿತಿ ಬದಲಾಯಿಸಿದೆ. ಭಾರತದ ಜತೆಗೆ ಅರಬ್ ದೇಶಗಳು ವ್ಯಾಪಾರ ಕಾರಿಡಾರ್ ಹೊಂದುವುದಕ್ಕೆ ಇತ್ತೀಚಿನ ಜಿ20ಯಲ್ಲಿ ಮಾಡಿಕೊಂಡಿರುವಂಥ ಒಪ್ಪಂದ ಇಸ್ರೇಲನ್ನೂ ಒಳಗೊಳ್ಳುತ್ತದೆ ಅನ್ನೋದು ಬದಲಾವಣೆಗೆ ಹೊರಳಿಕೊಳ್ಳುತ್ತಲಿದ್ದ ಸ್ಥಿತಿಗೆ ಸಾಕ್ಷಿ.

ಇವೆಲ್ಲದರ ನಡುವೆಯೂ, ಹಮಾಸ್ ಉಗ್ರರನ್ನು ನಿರ್ಭಿಡೆಯಿಂದ ಖಂಡಿಸಿದರೆ ಇಲ್ಲಿನ ಮುಸ್ಲಿಮರಿಗೆ ಬೇಜಾರಾಗಿಬಿಡುತ್ತದೆ ಅಂತ ಕಾಂಗ್ರೆಸ್ ಯೋಚಿಸುತ್ತದೆ ಅಂತಾದರೆ, ಭಾರತದಲ್ಲಿ ತನ್ನ ಬೆಂಬಲಿಗರು ಯಾರು ಎಂಬುದನ್ನು ಅದು ಸ್ಪಷ್ಟವಾಗಿ ಕಂಡುಕೊಂಡಿದೆ ಎಂದಾಯಿತು.

Leave a Reply

Your email address will not be published.

This site uses Akismet to reduce spam. Learn how your comment data is processed.