ರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಅವಶ್ಯಕ. ಸಾಮಾಜಿಕ ನ್ಯಾಯವು ರಾಷ್ಟ್ರದೊಳಗಡೆ ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆಗೆ ಆಧಾರ. ವಿಶ್ವಾದ್ಯಂತ ಲಿಂಗ, ವಯಸ್ಸು, ಜನಾಂಗೀಯ, ಧರ್ಮ, ಸಂಸ್ಕೃತಿ, ಬಡತನ, ನಿರುದ್ಯೋಗ, ವಲಸೆ, ಆರ್ಥಿಕತೆ ಮುಂತಾದವುಗಳ ಆಧಾರಿತ ಸಾಮಾಜಿಕ ಸಮಸ್ಯೆಗಳು ಗಂಭೀರವಾಗಿದೆ. ಇಂತಹ ಸಮಸ್ಯೆಗಳನ್ನು ತೊಡೆದು ಹಾಕುವ ಪ್ರಯತ್ನಗಳಿಗೆ ಪ್ರೋತ್ಸಾಹಿಸಲು, ಸಾಮಾಜಿಕ ಅಸಮಾನತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಜುಲೈ 17 ರಂದು ವಿಶ್ವದಾದ್ಯಂತ ಅಂತರರಾಷ್ಟ್ರೀಯ ನ್ಯಾಯ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನವು ಯುದ್ಧ ಅಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯ ಅಡಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಜಗತ್ತಿನ ಶಾಂತಿ, ಭದ್ರತೆ ಮತ್ತು ಯೋಗಕ್ಷೇಮಕ್ಕೆ ಸವಾಲಾಗಿರುವ ಅಪರಾಧಗಳನ್ನು ತಡೆಯಲು ಸಹಾಯ ಮಾಡುತ್ತದೆ.


ಇತಿಹಾಸ
ಸರ್ವಾಧಿಕಾರಿ ಹಿಟ್ಲರ್‌ ನ ಅಂತ್ಯದೊಂದಿಗೆ ಎರಡನೇ ಮಹಾಯದ್ಧದ ಅಂತ್ಯವೂ ಆಯಿತು. ಯುದ್ಧದ ನಂತರ ಹಿಟ್ಲರ್ ನ ನಾಜಿ ಸೇನೆಯ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ಸಲುವಾಗಿ ನ್ಯೂರೆಂಬರ್ಗ್ ವಿಚಾರಣೆಯ ಮೂಲಕ ಕೆಲವು ಶಿಕ್ಷೆಗಳನ್ನು ನಿಡುವ ಶಾಸನವನ್ನು ಜಾರಿಗೆ ತರಲಾಯಿತು. ಇದೇ ಸಂದರ್ಭದಲ್ಲಿ ಟೋಕ್ಯೋ ವಿಚಾರಣೆಯ ಮೂಲಕ ಜಪಾನ್ ನ ನಾಯಕರಿಗೂ ಶಿಕ್ಷೆಯನ್ನು ವಿಧಿಸಲಾಗಿತ್ತು.
ಜುಲೈ 17, 1998 ರಂದು ಇಟಲಿಯ ರೋಮ್ ನಲ್ಲಿ ವಿಶ್ವದ ದೇಶಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಅಪರಾಧಗಳನ್ನು ಎದುರಿಸಲು ಬೇಕಾದ ನಿಯಮಗಳ ಕುರಿತು ಚರ್ಚಿಸಲು ವೇದಿಕೆ ಸಿದ್ಧಗೊಂಡಿತು, ಒಪ್ಪಂದಕ್ಕಾಗಿ ಅನೇಕ ದೇಶಗಳು ಒಟ್ಟುಗೂಡಿದವು. ನ್ಯೂರೆಂಬರ್ಗ್, ಟೋಕ್ಯೊ ಹಾಗೂ ಮತ್ತಿತರ ವಿಚಾರಣೆಗಳಲ್ಲಿ ಮಾನವೀಯತೆಯನ್ನು ಧಿಕ್ಕರಿಸುದವರ ವಿರುದ್ಧ ತೆಗೆದುಕೊಂಡ ನಿರ್ಧಾರಗಳನ್ನು ಗಣನೆಗೆ ತೆಗೆದುಕೊಂಡು ‘ರೋಮ್ ಶಾಸನ’ ಎಂದು ಕರೆಯಲ್ಪಡುವ ಒಪ್ಪಂದವನ್ನು ರೂಪಿಸಲಾಯಿತು. 120 ದೇಶಗಳು ಅದನ್ನು ಅಂಗೀಕರಿಸಿದವು. ಇದು 2002 ರಲ್ಲಿ ಇಂಟರ್ ನ್ಯಾಶನಲ್ ಕ್ರಿಮಿನಲ್ ಕೋರ್ಟ್ (ಐಸಿಸಿ) ರಚನೆಗೆ ಕಾರಣವಾಯಿತು. ಐಸಿಸಿ ಒಂದು ಶಾಶ್ವತ ನ್ಯಾಯಾಲಯವಾಗಿದ್ದು, ಇದು ನರಮೇಧ, ಮಾನವೀಯತೆಯ ವಿರುದ್ಧದ ಅಪರಾಧಗಳು, ಯುದ್ಧ ಅಪರಾಧಗಳು ಮತ್ತು 2018 ರಿಂದ ಆಕ್ರಮಣಕಾರಿ ಅಪರಾಧಗಳನ್ನು ಎಸಗಿದ್ದಾರೆ ಎಂದು ಶಂಕಿಸಲಾದ ಜನರನ್ನು ತನಿಖೆ ನಡೆಸಿ ಶಿಕ್ಷೆ ವಿಧಿಸಲಾಗುತ್ತದೆ. ನಂತರ 2010ರಲ್ಲಿ ರಾಜ್ಯ ಪಕ್ಷಗಳ ಅಸೆಂಬ್ಲಿ ರೋಮ್ ಶಾಸನದ ವಿಮರ್ಶೆ ಸಮ್ಮೇಳನದಲ್ಲಿ ಜುಲೈ 17ಅನ್ನು ಅಂತರರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನವಾಗಿ ಆಚರಿಸಲು ನಿರ್ಧರಿಸಿತು. ಅಂದಿನಿಂದ ಇಂದಿನವರೆಗೂ ಪ್ರತಿವರ್ಷ ಜುಲೈ 17 ರಂದು ಅಂತರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನವನ್ನಾಗಿ ಆಚರಿಸಲಾಗುತ್ತಿದೆ.

ಮಹತ್ವ
ಜಾಗತಿಕ ನ್ಯಾಯದ ಅಗತ್ಯತೆ ಮತ್ತು ಐಸಿಸಿಯ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ವಿಶ್ವ ಅಂತರರಾಷ್ಟ್ರೀಯ ನ್ಯಾಯ ದಿನವು ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಅಂತರರಾಷ್ಟ್ರೀಯ ಅಪರಾಧ ಕಾನೂನು ಮತ್ತು ನ್ಯಾಯಯುತ ಸಮಾಜಗಳ ಅಗತ್ಯದ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.


ಜಾಗೃತಿ ಮುಡಿಸುವುದು: ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಅಪರಾಧಗಳ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂಬ ಸಂದೇಶವನ್ನು ತಿಳಿಸಲು ಈ ದಿನ ಸೂಕ್ತವಾಗಿದೆ.


ಸಂತ್ರಸ್ತರಿಗೆ ಬೆಂಬಲ: ಅಪರಾಧಗಳಿಗೆ ಬಲಿಯಾದವರಿಗೆ ಬೆಂಬಲ ಸೂಚಿಸಲಾಗುತ್ತದೆ. ಅವರ ನೋವನ್ನು ಗುರುತಿಸಿ ಕಾನೂನಿನ ಮೂಲಕ ಪರಿಹರಿಸಲಾಗುತ್ತದೆ.


ಅಪರಾಧ ತಡೆಗಟ್ಟುವಿಕೆ:  ಐಸಿಸಿ ವಿಚಾರಣೆ ನಡೆಸಿದ ಪ್ರಕರಣಗಳು ಮತ್ತು ಕ್ರಿಮಿನಲ್ ನ್ಯಾಯದ ಚೌಕಟ್ಟನ್ನು ಎತ್ತಿ ತೋರಿಸುವ ಮೂಲಕ ಗಂಭೀರ ಅಪರಾಧಗಳ ಸಂತ್ರಸ್ತರಿಗೆ ನ್ಯಾಯದ ಮಹತ್ವ ಮತ್ತು ಭವಿಷ್ಯದ ಅಪರಾಧಗಳನ್ನು ತಡೆಗಟ್ಟುವ ಅಗತ್ಯವನ್ನು ಈ ದಿನ ತಿಳಿಸಲಾಗುತ್ತದೆ.


ಅಂತರರಾಷ್ಟ್ರೀಯ ಸಹಕಾರ: ನ್ಯಾಯಯುತ ಮತ್ತು ಸಮಾನ ವಿಶ್ವಕ್ಕಾಗಿ ಅಂತರರಾಷ್ಟ್ರೀಯ ನ್ಯಾಯ ವ್ಯವಸ್ಥೆಯನ್ನು ಬಲಪಡಿಸಲು ರಾಷ್ಟ್ರಗಳ ನಡುವೆ ಸಹಯೋಗವನ್ನು ಉತ್ತೇಜಿಸಲು ಈ ದಿನ ಸಹಾಯಕವಾಗಿದೆ.


ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸುವುದು: ಪ್ರತಿದಿನ ನ್ಯಾಯ ಮತ್ತು ಸುರಕ್ಷತೆಗಾಗಿ ಕೆಲಸ ಮಾಡುತ್ತಿರುವ ಜನರ ಮೌಲ್ಯವನ್ನು ಸಾರಲು ಈ ದಿನ ಸೂಕ್ತವಾಗಿದೆ.


ನ್ಯಾಯವನ್ನು ಉತ್ತೇಜಿಸುವುದು: ಈ ದಿನವು ಗಂಭೀರ ಅಪರಾಧಗಳನ್ನು ಪರಿಹರಿಸಲು ಸಮುದಾಯಗಳು, ದೇಶಗಳು ಮತ್ತು ಸಂಸ್ಥೆಗಳನ್ನು ಒಟ್ಟುಗೂಡಿಸುತ್ತದೆ. ಇದು ಜಾಗತಿಕ ಮಟ್ಟದಲ್ಲಿ ಸಂತ್ರಸ್ತರಿಗೆ ನ್ಯಾಯವನ್ನು ಒದಗಿಸಲು ಪ್ರಯತ್ನಿಸುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.