ಬೆಂಗಳೂರು: ಪ್ರಸ್ತುತ ಮನುಕುಲ ಡಿಜಿಟಲ್ ಯುಗದಿಂದ ಡೇಟಾ ಯುಗಕ್ಕೆ ಕಾಲಿಡುತ್ತಿದ್ದರೂ ಬದುಕುವ ಮೂಲಭೂತ ಅಂಶಗಳನ್ನು ಪ್ರಕೃತಿಯೇ ನೀಡಬೇಕು. ಹಾಗಾಗಿ ಪಂಚಭೂತಗಳ ರಕ್ಷಿಸುವ ಸಂಕಲ್ಪ ಮಾಡಬೇಕು. ಸುಸ್ಥಿರ ಬಳಕೆಯ ಜವಾಬ್ದಾರಿಯನ್ನು ನಮ್ಮ ಜೀವನ ಶೈಲಿಯಲ್ಲಿ ಮಾಡಿಕೊಳ್ಳುವ ಸಣ್ಣ ಪರಿಸರ ಸ್ನೇಹಿ ಬದಲಾವಣೆಯಿಂದ ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರ್ಯಾವರಣ್ ಗತಿವಿಧಿಯ ಅಖಿಲ ಭಾರತೀಯ ಸಂಯೋಜಕ ಗೋಪಾಲ್ ಆರ್ಯ ಹೇಳಿದರು.

ಬೆಂಗಳೂರಿನ ಸಮರ್ಥ ಭಾರತ ಸಂಸ್ಥೆಯು ವಿಶ್ವ ಪರಿಸರ ದಿನದ ಪ್ರಯುಕ್ತ ಆಯೋಜಿಸಿದ ಆನ್ ಲೈನ್ ಉಪನ್ಯಾಸದಲ್ಲಿ ಅವರು ಸೋಮವಾರ ಮಾತನಾಡಿದರು.
ಪ್ರಕೃತಿ ಮತ್ತು ಮನುಷ್ಯ, ಮನುಷ್ಯ ಮನಷ್ಯರೊಳಗಿನ ಸಂಬಂಧ ಹದಗೆಡುತ್ತಿರುವ ಈ ಸಂದರ್ಭದಲ್ಲಿ ವಸುಧೈವ ಕುಟುಂಬಕಮ್ ಎಂಬ ಭಾರತೀಯ ದೃಷ್ಟಿ ಜಾಗೃತವಾಗಬೇಕಿದೆ. ಪ್ರಕೃತಿಯ ಮೌಲ್ಯವನ್ನು ತಿಳಿದುಕೊಳ್ಳಲು ನಮ್ಮ ಹಿರಿಯರು ನೀಡಿದ ಪರಿಕಲ್ಪನೆಗಳ ಅನುಷ್ಠಾನವಾಗಬೇಕು ಎಂದು ನುಡಿದರು.
ಯುವಕರು ಈ ರಾಷ್ಟ್ರದ ಭವಿಷ್ಯ. ಅವರಲ್ಲಿ ಪರಿಸರದ ಕುರಿತಾಗಿ ಸಂವೇದನೆ ಮತ್ತು ಅದರ ರಕ್ಷಣೆಗೆ ಹೆಗಲು ಕೊಡುವ ಶಕ್ತಿಯೂ ಇದೆ. ಆದರೆ ಅವರನ್ನು ಪರಿಸರ ಪೂರಕ ದಿಕ್ಕಿಗೆ ಕೊಂಡೊಯ್ಯುವ ಮಾರ್ಗದರ್ಶನ ಸಿಗಬೇಕು. ಒಂದು ಮರ ದೇಶಕ್ಕಾಗಿ, ಒಂದು ನಿಮಿಷ ದೇಶಕ್ಕಾಗಿ ಎಂಬ ಧ್ಯೇಯಕ್ಕೆ ಯುವಕರು ಕಟಿಬದ್ಧರಾಗಬೇಕು ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಪ್ರತಿಷ್ಠಿತ ಸಂಸ್ಥೆ ಸಮರ್ಥ ಭಾರತದ ವತಿಯಿಂದ ಕಳೆದ ಏಳು ವರ್ಷಗಳಿಂದ ಪರಿಸರ ಸ್ನೇಹಿ ಚಟುವಟಿಕೆಗಳನ್ನು ನಿಯಮಿತವಾಗಿ ಆಯೋಜಿಸಲಾಗುತ್ತಿದೆ. ಅವುಗಳ ಪೈಕಿ 2016 ದಲ್ಲಿ ಆಯೋಜಿಸಿದ ‘ಕೋಟಿ ವೃಕ್ಷ ಅಭಿಯಾನ’ ಪ್ರಮುಖವಾದದ್ದು.