ಸಂಸ್ಕೃತ ಪಂಡಿತನಾಗಬೇಕಿದ್ದವನು ಕ್ರಾಂತಿಕಾರಿಯಾದ ದೇಶಭಕ್ತ ಚಂದ್ರಶೇಖರ್ ಆಜಾದ್‌.
ಲೇಖನ: ಶಿವಾನಂದ ಶಿವಲಿಂಗ ಸೈದಾಪುರ, ಹವ್ಯಾಸಿ ಬರಹಗಾರರು, ಎಬಿವಿಪಿ ಕಾರ್ಯಕರ್ತರು.

ಅದೊಂದು ದಿನ ಕಾಶಿಯಲ್ಲಿ ದೇಶ ಭಕ್ತರೆಲ್ಲರೂ ಸೇರಿ ‘ವಂದೇಮಾತರಂ’ ಘೋಷಣೆ ಕೂಗುತ್ತಾ ಶಾಂತಿಯುತವಾಗಿ ಮೆರವಣಿಗೆ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಬ್ರಿಟಿಷ್ ಪೋಲಿಸ್ ಅಧಿಕಾರಿಗಳು ಮೆರವಣಿಗೆಯಲ್ಲಿ ನಿರತರಾದವರ ಮೇಲೆ ಲಾಠಿ ಚಾರ್ಜ್ ಮಾಡಿದರು. ಶಾಂತಿಯುತವಾಗಿ ಮೆರವಣಿಗೆಯಲ್ಲಿದ್ದವರಿಗೆ ಮನ ಬಂದಂತೆ ಥಳಿಸತೊಡಗಿದ್ದರು. ಇದನ್ನು ಗಮನಿಸಿದ ಕಾಶಿವಿದ್ಯಾಪೀಠದಲ್ಲಿ ಅಧ್ಯಯನ ಮಾಡುತಿದ್ದ ಬಾಲಕನೊಬ್ಬ ಬ್ರಿಟಿಷ್ ಪೊಲೀಸರಿಗೆ ಗುರಿಯಿಟ್ಟು ಅಟ್ಟಾಡಿಸಿ ಕಲ್ಲು ಹೊಡೆದು ಪರಾರಿಯಾದ. ಆತನ ಬೆನ್ನಟ್ಟಿದ ಪೊಲೀಸರು ಓಡಿ ಓಡಿ ಸುಸ್ತಾದರೆ ಹೊರತು ಬಾಲಕ ಸಿಗಲಿಲ್ಲ. ಮರುದಿನ ಯಾರದೋ ಮೋಸದ ಜಾಲದಿಂದ ಆ ಬಾಲಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಯ್ದರು. ಆತನ ಪ್ರತಿಯೊಂದು ಮಾತುಗಳನ್ನು ಕೇಳಿ ಜಡ್ಜನೇ ಹೌಹಾರಿದ. ಆ ಪುಟ್ಟ ಬಾಲಕನ ಬಾಯಿಂದ ಅಂತಹ ಮಾತುಗಳು ಬರುತ್ತಿದ್ದವು.

ಚಂದ್ರಶೇಖರ್ ಆಜಾದ್

ನಿನ್ನ ಹೆಸರು ಏನೆಂದು ಜಡ್ಜ ಕೇಳಿದರೆ “ಆಜಾದ್” ಎಂದು ಅಬ್ಬರಿಸಿದ. ತಂದೆಯ ಹೆಸರು ಸ್ವತಂತ್ರತಾ ಎಂದ. ಎಲ್ಲಿ ನಿನ್ನ ಮನೆ ಎಂದರೆ “ಜೈಲು..! ನನ್ನ ಮನೆ” ಎಂದು ಪ್ರತ್ಯುತ್ತರ ನೀಡಿದ ಆ ಬಾಲಕ. ಆ ಪುಟ್ಟ ಬಾಲಕನ ದಿಟ್ಟತನ ಕಂಡ ಕೋಪಿಷ್ಟ ಜಡ್ಜ ೧೫ ಛಡಿ ಏಟಿನ ಶಿಕ್ಷೆ ನೀಡಿದ. ಪ್ರತಿಯೊಂದು ಏಟು ಬಿದ್ದಾಗ ‘ವಂದೇಮಾತರಂ’, ‘ಭಾರತ್ ಮಾತಾ ಕೀ ಜೈ’, ‘ಗಾಂಧೀಜಿ ಕೀ ಜೈ’ ಎಂಬುವ ಘೋಷಣೆಗಳು ಆತನಿಂದ ಹೊರಡುತಿದ್ದವು. ಆತನ ಸಾಹಸಗಾಥೆಯನ್ನು ಕಂಡ ಜನತೆ ಒಂದು ಸಾರ್ವಜನಿಕ ಸಮಾರಂಭ ಏರ್ಪಡಿಸಿದ್ದರು. ಆ ಆಜಾದ್, ಜನರನ್ನು ಉದ್ದೇಶಿಸಿ ಮಾತನಾಡುತ್ತ ‘ದುಷ್ಮನೋಂಕಿ ಗೊಲಿಯೋಂ ಸೇ ಮೈ ಸಾಮ್ನಾ ಕರೂಂಗಾ… ಆಜಾದ್ ಹೂಂ ಮೇ ಆಜಾದ್ ಹೀ ರಹೂಂಗಾ’ ಎಂದು ಅಬ್ಬರಿಸಿದ. ಅಕ್ಷರಶಃ ಕೊನೆಯತನಕ ಅದನ್ನೇ ಪಾಲಿಸಿದ್ದರು ಚಂದ್ರಶೇಖರ ಆಜಾದ್. ಇನ್ಮುಂದೆ ನಾನು ಸಾಯುವವರೆಗೆ ನಿಮ್ಮ ಕೈಗೆ ಸಿಗಲ್ಲ, ನನ್ನ ಉಸಿರಿನ ಕೊನೆ ಕ್ಷಣದರೆಗೂ ನಿಮ್ಮ ನಿದ್ದೆಗೆಡಿಸಿಯೇ ತೀರುತ್ತೇನೆಂದು ಸಾರ್ವಜನಿಕ ಸಮಾರಂಭದಲ್ಲಿ ಬಹಿರಂಗವಾಗಿ ಘರ್ಜಿಸಿದ್ದ ಆ ಪುಟ್ಟ ಬಾಲಕನ ಹೆಸರು ಆಜಾದ್ ಚಂದ್ರಶೇಖರ್ ತಿವಾರಿ!

೧೯೦೬ರ ಜುಲೈ ತಿಂಗಳ ೨೩ ರಂದು ಮಧ್ಯಪ್ರದೇಶದ ಭಾವರಾ ಎಂಬ ಹಳ್ಳಿಯಲ್ಲಿ ಸೀತಾರಾಮ ತಿವಾರಿ ಮತ್ತು ಜಗರಾಣಿದೇವಿ ತಿವಾರಿ ದಂಪತಿಯ ಮಗನಾಗಿ ಚಂದ್ರಶೇಖರ್‌ ಜನಿಸಿದರು. ತಂದೆ ತೋಟ ಒಂದರಲ್ಲಿ ಮಾಲಿಯಾಗಿ, ತಾಯಿ ಗೃಹಿಣಿಯಾಗಿ ಕೆಲಸ ಮಾಡುತಿದ್ದರು. ಕೂಲಿನಾಲಿ ಮಾಡಿ ಬದುಕುತ್ತಿದ್ದರೂ ಮಕ್ಕಳಿಗೆ ಸತ್ಯ, ನ್ಯಾಯ, ನಿಷ್ಠೆಯನ್ನು ತುಂಬುವುದರಲ್ಲಿಯೇನು ಹಿಂದೆ ಇರಲಿಲ್ಲ. ಅದರಲ್ಲೂ ವಿಶೇಷವಾಗಿ ಈ ಪುಟ್ಟ ಬಾಲಕ ಚಂದ್ರಶೇಖರನಲ್ಲಿ ಇಂತಹ ಮೌಲ್ಯಗಳಿಗೆ ಕೊರತೆಯಂತು ಇದ್ದಿರಲೇ ಇಲ್ಲ. ತಪ್ಪನ್ನು ಯಾರೇ ಮಾಡಿದರು ಅದಕ್ಕೆ ತಕ್ಕಂತೆ ಶಿಕ್ಷೆಗೆ ಒಳಗಾಗಬೇಕೆನ್ನುವ ಜಾಯಮಾನ ಹೊಂದಿರುವ ಹುಡುಗ. ಇವರಿಗೆ ಪ್ರಾಥಮಿಕ ಶಿಕ್ಷಣ ನೀಡಿದ ಮನೋಹರಲಾಲ್ ತಿವಾರಿಯವರು ಅಜಾದರ ಬಾಲ್ಯದ ದಿನಗಳನ್ನು ನೆನಪಿಸುತ್ತ ನಾನು ಅಂತಹ ಶಿಷ್ಯನನ್ನು ನನ್ನ ಶಿಕ್ಷಕ ವೃತ್ತಿಯಲ್ಲಿಯೇ ನೋಡಿರಲಿಲ್ಲ. ಆತನಿಗೂ ಆತನ ಅಣ್ಣನಿಗೂ ನಾನು ಪಾಠ ಹೇಳಿಕೊಡುತ್ತಿದ್ದೆ. ಶಿಷ್ಯರು ತಪ್ಪು ಮಾಡಿದಾಗ ಅವರನ್ನು ದಂಡಿಸುವುದು ಸಾಮಾನ್ಯ. ಆ ಕಾರಣದಿಂದಲೇ ಬೆತ್ತವೊಂದು ಪಕ್ಕದಲ್ಲೇ ಇರುತಿತ್ತು. ಒಮ್ಮೆ ನಾನು ಪಾಠ ಹೇಳುವಾಗ ನಾನೇ ತಪ್ಪಾಗಿ ಹೇಳಿಬಿಟ್ಟಿದ್ದೆ. ತಕ್ಷಣ ನನ್ನ ಎದುರಿಗಿದ್ದ ಆ ಬಾಲಕ ಬೆತ್ತ ತೆಗೆದುಕೊಂಡು ನನಗೆ ಲತ್ತೆ ಕೊಟ್ಟು ಬಿಟ್ಟ. ಅಂತಹ ಧೈರ್ಯ ಆತನದು. ಹೀಗೆ ಅಜಾದರ ಬಗ್ಗೆ ಅವರ ಗುರುಗಳು ಹೇಳಿದುಂಟು. ಮುಂದೇ ಸಂಸ್ಕೃತ ಪಂಡಿತನಾಗಲು ಕಾಶಿವಿದ್ಯಾಪೀಠಕ್ಕೆ ತೆರಳಿದ ಚಂದ್ರಶೇಖರ ತಿವಾರಿ ತಾಯ್ನಾಡಿನ ದಾಸ್ಯ ವಿಮೋಚನೆ ಚಿಂತನೆಯಲ್ಲಿ ಮಗ್ನನಾದ.

ಚಂದ್ರಶೇಖರ್ ಆಜಾದ್

ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ನೋಡಿದಾಗಲೆ ಚಂದ್ರಶೇಖರರಿಗೆ ಸ್ವತಂತ್ರ ಹೋರಾಟದ ಕಿಚ್ಚು ಹತ್ತಿಕೊಂಡಿತು. ಅದಕ್ಕೆ ಪ್ರೇರಣೆ ನೀಡಿದ್ದು ೧೯೨೧ರ ಹೊತ್ತಿಗೆ ಆರಂಭವಾದ ಅಸಹಕಾರ ಚಳವಳಿ. ಗಾಂಧೀಜಿಯವರ ಪ್ರಭಾವದಿಂದಾಗಿ ಅಸಹಕಾರ ಚಳವಳಿಯ ಮೂಲಕ ತಮ್ಮನ್ನು ತೊಡಗಿಸಿಕೊಂಡರು. ಆದರೆ ಗಾಂಧೀಜಿಯವರು ಚೌರಿಚೌರಾ ಘಟನೆಯಿಂದಾಗಿ ತಮ್ಮ ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡರು. ಗಾಂಧೀಜಿಯವರ ಈ ನಿರ್ಣಯಕ್ಕೆ ಬೇಸತ್ತು ಮಂದಗತಿಯ ನಿಲುವುಗಳಿಂದ ದೂರ ಸರಿದರೂ, ಹೋರಾಟದ ಕಿಚ್ಚಿನಿಂದ ಹೂರ ಬರಲಿಲ್ಲ. ಅನಂತರ ಅವರು ಕ್ರಾಂತಿಕಾರಿ ರಾಮಪ್ರಸಾದ ಬಿಸ್ಮಿಲ್ಲರ ಗುಂಪಿಗೆ ಸೇರಿಕೊಂಡರು.

೧೯೨೫ರಲ್ಲಿ ಭಾರತೀಯ ಕ್ರಾಂತಿಕಾರಿಗಳಿಂದ ಯೋಜಿಸಲ್ಪಟ್ಟ ಆಪರೇಷನ್ ಕಾಕೋರಿಯ (ಬ್ರಿಟಿಷರು ಅದನ್ನ ದರೋಡೆ ಎಂದು ಕರೆದರು) ಒಂಬತ್ತು ಜನರಲ್ಲಿ ಈ ಚಂದ್ರಶೇಖರ್ ಅಜಾದರು ಕೂಡ ಒಬ್ಬರು. ಆ ಕಾಕೋರಿ ದರೋಡೆಯ ಮೊಕದ್ದಮೆಯಲ್ಲಿ ಬ್ರಿಟಿಷರಿಗೆ ಸಿಕ್ಕಿಬೀಳದ ಏಕೈಕ ಕ್ರಾಂತಿಕಾರಿ ಎಂದರೆ ಅದು ಅಜಾದರು ಮಾತ್ರ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಕ್ರಾಂತಿಕಾರಿಗಳಲ್ಲಿ ಪೊಲೀಸರಿಗೆ ಬೇಕಾದ ಹಿಟ್ ಲಿಸ್ಟಲ್ಲಿ ಅಜಾದರು ಮೊದಲಿಗರಾಗಿದ್ದರು.

ಕಾಕೋರಿ ಮೊಕದ್ದಮೆಯಲ್ಲಿ ರಾಮಪ್ರಸಾದ ಬಿಸ್ಮಿಲ್ಲರ ಬಂಧನದ ನಂತರ ಕ್ರಾಂತಿ ಸಂಘಟನೆಯ ನಾಯಕತ್ವ ವಹಿಸಿಕೊಂಡ ಆಜಾದರು ಭಾರತ ಮಾತೆಯ ದಾಸ್ಯ ಮುಕ್ತಿಗಾಗಿ ಬಲಿದಾನಿಯಾಗಲು ಪಣ ತೊಟ್ಟು ನಿಂತರು. ೧೯೨೮ ರಲ್ಲಿ ಭಾರತಕ್ಕೆ ಸೈಮನ್ ಕಮಿಷನ್ ಬರುವ ಸಂದರ್ಭದಲ್ಲಿ ಅದರ ವಿರುದ್ಧ ಹೂಡಿದ ಮುಷ್ಕರದಿಂದಾಗಿ ಲಾಲಾ ಲಜಪತ್ ರಾಯರ ಮೇಲಾದ ಕ್ರೂರ ಹಿಂಸಾಚಾರಕ್ಕೆ ಪ್ರತ್ಯುತ್ತರವಾಗಿ ಆಜಾದರ ನೇತೃತ್ವದಲ್ಲಿ ಪೊಲೀಸ್ ಠಾಣೆ ಎದುರಿಗೆ ಭಗತ್ ಸಿಂಗ್, ರಾಜಗುರು, ಸುಖದೇವರು ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸನನ್ನು ಹತ್ಯೆ ಮಾಡಿದರು.

ಕ್ರಾಂತಿಕಾರಿಗಳನ್ನು ಹತ್ತಿಕ್ಕುತ್ತಿದ್ದ ಬ್ರಿಟಿಷ್ ಅಧಿಕಾರಿಗಳು ಆಗಿನ ಕಾಲದಲ್ಲಿಯೇ ಆಜಾದರ ತಲೆಗೆ ಮೂವತ್ತು ಸಾವಿರ ರೂಪಾಯಿ ನಗದು ಘೋಷಣೆ ಮಾಡಿದರು. ಪ್ರತಿ ಸಲವೂ ಚಳ್ಳೆ ಹಣ್ಣು ತಿನ್ನಿಸುತಿದ್ದ ಅಜಾದರಿಗೆ ಅದೊಂದು ಕರಾಳ ದಿನ ಎದುರಿಗೆ ಬಂತು. ಆವತ್ತು ೧೯೩೧ರ ಪೆಬ್ರುವರಿ ೨೭ ಆಜಾದರ ಸುಳಿವು ಸಿಗದೇ ಕೈ ಚೆಲ್ಲಿ ಕುಳಿತಿದ್ದ ಬ್ರಿಟಿಷರಿಗೆ ವೀರಭದ್ರ ತಿವಾರಿ ಎಂಬ ವಿಶ್ವಾಸ ಘಾತುಕನೊಬ್ಬನಿಂದ ದೇಶವನ್ನೆ ಬೆಳಗ ಬೇಕಿದ್ದ ಮಹಾನ್‌ ದೇಶಭಕ್ತನ ಅಂತ್ಯವಾಯಿತು.

೧೯೩೧ರ ಪೆಬ್ರುವರಿ ೨೭ ರಂದು ಆಲ್ಫ್ರೈಡ್ ಪಾರ್ಕ್‌ನಲ್ಲಿ ಆಜಾದ್‌ ಮತ್ತು ಸುಖದೇವರಾಜ ಭವಿಷ್ಯದ ಹೋರಾಟದ ಬಗ್ಗೆ ಚರ್ಚಿಸುತ್ತಲ್ಲಿದ್ದರು. ಹಣದ ಆಮಿಷಕ್ಕೆ ಒಳಗಾಗಿದ್ದ ವೀರಭದ್ರ ತಿವಾರಿಯ ಮಾತಿನಂತೆ ಅಂದು ಶಸ್ತ್ರಸಜ್ಜಿತ ಎಂಭತ್ತು ಪೊಲೀಸರು ನಾಟಭಾವರ್ ಎಂಬ ಬ್ರಿಟಿಷ್ ಅಧಿಕಾರಿಯೊಂದಿಗೆ ಸುತ್ತುವರೆದು ನಿಂತರು. ನಾಟಭಾವರ್ ಹಾರಿಸಿದ ಗುಂಡು ಆಜಾದರ ತೊಡೆಗೆ ತಾಗಿತು. ಅಪಾಯದ ಅರಿವಾದ ತಕ್ಷಣ ಎಚ್ಚೆತ್ತ ಆಜಾದ್‌ ಸುಖದೇವರಾಜನನ್ನು ಉಳಿಸಲು ಶತಪ್ರಯತ್ನ ನಡೆಸಿದರು. ಆ ಕಾಳಗದಲ್ಲಿ ಎಂಭತ್ತು ಪೊಲೀಸರೆದುರು ಒಬ್ಬ ಆಜಾದ್, ಚಿರತೆಯಂತೆ ಕಾದಾಡಿದರು. ಎದುರಾಳಿಗಳ ಮೇಲೆ ಗುಂಡಿನ ಮಳೆಗೆರೆದ ಆಜಾದ್ ಏಕಾಂಗಿಯಾಗಿದ್ದರೂ ತಕ್ಕ ಪ್ರತ್ತ್ಯುರ ನೀಡಿದರು. ದೇಶಭಕ್ತ ಆಜಾದರಿಗೆ ತನ್ನ ಪಿಸ್ತೂಲಿನಲಿದ್ದ ಗುಂಡುಗಳ ಲೆಕ್ಕವಿತ್ತು. ಅಂತಹ ದುರ್ಗಮ ಪರಿಸ್ಥಿತಿಯಲ್ಲಿಯು ಅವರ ಸಮಯ ಪ್ರಜ್ಞೆ ಕಾರ್ಯ ಪ್ರವೃತವಾಗಿತ್ತು. ಬಾಲ್ಯದಲ್ಲಿ ತಾನೇ ಹೇಳಿದಂತೆ ನನ್ನ ಜೀವಂತ ದೇಹದ ಮೇಲೆ ಕೈ ಹಾಕುವ ಪೊಲೀಸ್ ಇನ್ನೂ ಜನ್ಮ ತಾಳಿಲ್ಲ… ಆಜಾದ್ ಹೀ ರಹೇಂಗೆ.. ಆಜಾದ್ ಹೀ ಮರೇಂಗೆ ಎನ್ನುತ್ತ ತನ್ನ ಪಿಸ್ತೂಲಿನಲಿದ್ದ ಕೊನೆಯ ಗುಂಡನ್ನು ತನ್ನ ತಲೆಗೆ ಗುರಿಯಾಗಿಸಿಟ್ಟುಕೊಂಡರು. ಹೀಗೆ ಮಹಾನ್‌ ದೇಶಭಕ್ತ ಆಜಾದ್‌ ಚಂದ್ರಶೇಖರ ತಿವಾರಿ ಪ್ರಾಣ ಭಾರತ ಮಾತೆಯ ಮುಡಿಗೆ ಅರ್ಪಣೆಯಾಯಿತು.

ಪ್ರಯಾಗ ರಾಜ್ ದಲ್ಲಿನ ಚಂದ್ರಶೇಖರ್ ಆಜಾದ್ ಪಾರ್ಕ್ ನಲ್ಲಿನ ಪ್ರತಿಮೆ

Leave a Reply

Your email address will not be published.

This site uses Akismet to reduce spam. Learn how your comment data is processed.