ಅಯೋಧ್ಯೆಯ ಶ್ರೀರಾಮ ಮಂದಿರದ ಪುನರ್ನಿರ್ಮಾಣದ ಅಭಿಯಾನ ಅಂತಿಮ ಹಂತಕ್ಕೆ ಬಂದು ಮುಟ್ಟುತ್ತಿರುವ ಸಂದರ್ಭದಲ್ಲಿ ರಾಷ್ಟ್ರೀಯತೆ, ಹಿಂದುತ್ವ ಜಾಗೃತಿಯ ಕುರಿತ ಚರ್ಚೆಗಳೂ ಹೆಚ್ಚಿವೆ. ಅದರಲ್ಲೂ ಮುಖ್ಯವಾಗಿ ಇತಿಹಾಸಕಾರ, ಪ್ರಾಧ್ಯಾಪಕ, ಸಂಶೋಧಕ, ಲೇಖಕ, ಸಾಹಿತಿ ಇತ್ಯಾದಿ ವಿವಿಧ ಹಣೆಪಟ್ಟಿಗಳಿದ್ದರೂ ಮೂಲದಲ್ಲಿ ರಾಷ್ಟ್ರ ವಿರೋಧಿಗಳೇ ಆಗಿರುವ ಕೆಲವು ನಗರನಕ್ಸಲರ ಅರೆ ಬೌದ್ಧಿಕ ಅರಚಾಟವಂತೂ ತಾರಕಕ್ಕೇರಿದೆ.
‘ಈ ದೇಶದಲ್ಲಿ ಈ ಹಿಂದೆ ನಾಶಗೊಂಡಿರುವ 35,000 ದೇವಾಲಯಗಳನ್ನು ಪುರ್ನಿರ್ಮಿಸ ಬೇಕು’ ಎಂಬ ಎಸ್.ಎಲ್.ಭೈರಪ್ಪನವರ ಹೇಳಿಕೆಗೆ ಕರ್ನಾಟಕದ ಹುಸಿ ಬುದ್ಧಿಜೀವಿಗಳು ಆಕಾಶ ಭೂಮಿ ಒಂದು ಮಾಡುವಂತೆ ಪ್ರಲಾಪಿಸಿ ವಿರೋಧಿಸುತ್ತಿದ್ದಾರೆ. ‘ಈಗಿರುವ ದೇವಸ್ಥಾನಗಳನ್ನೂ ಒಡೆದು ಹಾಕಿ ಅಲ್ಲಿ ಶಾಲೆ ನಿರ್ಮಿಸಿ, ಆಸ್ಪತ್ರೆ ನಿರ್ಮಿಸಿ’ ಎಂದು ಸಲಹೆಗಳನ್ನು ಕೊಡುತ್ತಿದ್ದಾರೆ. ಇದೇ ಧೈರ್ಯದ ಹೇಳಿಕೆಯನ್ನು ಮಸೀದಿ, ಚರ್ಚುಗಳಿಗೆ ಸಂಬಂಧಿಸಿದಂತೆ ನೀಡಲು ಅವರಿಗೆ ಸಾಧ್ಯವಾಗದು.
ಇನ್ನೂ ಕೆಲವರು ಹಿಂದೆ ಆಗಿರುವುದನ್ನು ಕೆದಕುತ್ತಾ ಕೂರುವುದೇಕೆ? ಈಗ ಇರುವುದನ್ನು ಒಪ್ಪಿಕೊಂಡು ಹೋಗಬೇಕು ಎಂಬ ದಾರ್ಶನಿಕ ಮಾತುಗಳನ್ನಾಡಿದ್ದಾರೆ. ಆದರೆ ಇಂತಹವರು ನೆರೆಯ ಆಂಧ್ರದಲ್ಲಿ ಜಗನ್ ನೇತೃತ್ವದ ಸರ್ಕಾರದ ಮೂಗಿನಡಿಯಲ್ಲೇ ನಡೆಯುತ್ತಿರುವ ನೂರಾರು ದೇವಾಯಲಗಳ ಹಾನಿ, ವಿಗ್ರಹ ಭಂಜನ ಮತ್ತು ಜಾತ್ರೆಯ ತೇರು, ರಥಗಳಿಗೆ ಬೆಂಕಿ ಹಚ್ಚುತ್ತಿರುವುದರ ಕುರಿತು ಜಾಣಮೌನ ವಹಿಸುತ್ತಾರೆ. ಅಷ್ಟೇಕೆ ಕರ್ನಾಟಕದಲ್ಲಿಯೂ ದೇವಸ್ಥಾನಗಳ ಪವಿತ್ರತೆ ಹಾಳು ಮಾಡುವ ಕಿಡಿಗೇಡಿಗಳ ಕೃತ್ಯವನ್ನು ಕಂಡೂಕಾಣದಂತೆ ಮೌನವಹಿಸುತ್ತಾರೆ. ಇವೆಲ್ಲವೂ ಈ ದೇಶದ ಸಂಸ್ಕೃತಿ ಹಾಗೂ ಪರಂಪರೆಯ ಕುರಿತು ಇವರಿಗೆ ಯಾವುದೇ ಅಭಿಮಾನವಿಲ್ಲ ಎಂಬುದನ್ನು ತೋರುತ್ತದೆ.
ಪ್ರಸಿದ್ಧ ಇಂಗ್ಲಿಷ್ ಅಂಕಣಕಾರರೊಬ್ಬರು ಭಾರತದಲ್ಲಿ ಏಳುತ್ತಿರುವ ಹಿಂದುತ್ವ, ರಾಷ್ಟ್ರೀಯತೆಯ ಸಿದ್ಧಾಂತಗಳು ಸಂಕುಚಿತ ಮನಸ್ಸಿನ ಜನರಿಂದ ಹೇರಲ್ಪಡುತ್ತಿದೆ. ಇದು ಅನಗತ್ಯವಾಗಿ ಶಕ್ತಿ ಸಂಗ್ರಹದ ಹಿಂದೆ ಬಿದ್ದು ಭಾರತವು ಎಲ್ಲ ರಾಷ್ಟ್ರಗಳ ವೈರತ್ವವನ್ನು ಕಟ್ಟಿಕೊಳ್ಳುತ್ತದೆ. ಇಂತಹ ವಿಚಾರ ದೇಶದೊಳಗೂ ಹಿಂಸೆಗೆ ಕಾರಣವಾಗುತ್ತದೆ. ನಮ್ಮ ಎಲ್ಲಾ ಸ್ಥಿತಿಗೆ, ಅವನತಿಗೆ ಬೇರೆಯವರನ್ನು (ಯೂರೋಪ್ ಮತ್ತು ಮುಸಲ್ಮಾನ ಆಕ್ರಮಣಕಾರರು) ದೂರುವುದು ತಪ್ಪು. ಅದಕ್ಕೂ ಮಿಗಿಲಾಗಿ ಅಖಂಡ ಭಾರತದಂತಹ ಭಾವನಾತ್ಮಕ ಸಂಗತಿಗಳನ್ನು ಹೆಕ್ಕಿ ದೊಡ್ಡದಾಗಿಸುತ್ತಾ ಜನರನ್ನು ತಪ್ಪುದಾರಿಗೆಳೆಯುವ ಕಾರ್ಯವನ್ನು ಹಿಂದು ಸಂಘಟನೆಗಳು ಮಾಡುತ್ತಿವೆ…. ಇತ್ಯಾದಿಯಾಗಿ ಆರೋಪಗಳನ್ನು ಮಾಡುತ್ತಿದ್ದಾರೆ.
ನಮ್ಮ ದುರಾದೃಷ್ಟಕ್ಕೆ ಸದಾ ಬೇರೆಯವರನ್ನೇ ಹೊಣೆಯಾಗಿಸುವುದು ಎನ್ನುವ ಪ್ರತಿಪಾದನೆಯನ್ನು ಹಿಂದುತ್ವವಾದಿಗಳಿಗೆ ಅನ್ವಯಿಸುವುದು ಅತಿಶಯದ ಹೇಳಿಕೆಯೇ ಸರಿ. ‘ತನ್ನ ಮೇಲೆ ಆಕ್ರಮಣ ಮಾಡುವವರನ್ನು ದೂರುತ್ತಾ ವ್ಯರ್ಥವಾಗಿ ಕಾಲ ಕಳೆಯದೇ ಜಾಗತಿಕ ಅಶಾಂತಿಯ ಮೂಲ ಕಾರಣವಾದ ತನ್ನ ದುರ್ಬಲತೆಯನ್ನು ಸರ್ವವಿಧ ಪ್ರಯತ್ನದಿಂದಲೂ ತೆಗೆದು ಹಾಕುವುದೇ ದುರ್ಬಲ ಸಮಾಜದ ಅತಿ ಶ್ರೇಷ್ಠ ಕರ್ತವ್ಯ’ ಎಂದು ರಾಷ್ಟ್ರೀಯಯವಾದದ ಮಂಚೂಣಿ ಸಂಘಟನೆಯಾದ ಆರೆಸ್ಸೆಸ್ಸನ್ನು ಆರಂಭಿಸಿದ ಕೇಶವ ಬಲಿರಾಂ ಹೆಡಗೆವಾರ್ ಉಲ್ಲೇಖಿಸಿದ್ದಾರೆ.
ಇನ್ನು ಶಕ್ತಿಯ ಗಳಿಕೆಯನ್ನು ಹಿಂಸೆಯೊಂದಿಗೆ ತಳುಕು ಹಾಕುತ್ತಿರುವ ಪ್ರತಿಪಾದನೆಯೂ ಸರಿಯಲ್ಲ. ಜಗತ್ತಿನ ಪ್ರತಿಯೊಂದು ರಾಷ್ಟ್ರವೂ ತನ್ನ ಸೇನೆ ಹಾಗೂ ಕದನ ಸನ್ನದ್ಧತೆಯನ್ನು ಸದಾಕಾಲವೂ ಹೆಚ್ಚಿಸುತ್ತಿರುತ್ತದೆ. ಇದರರ್ಥ ಅವೆಲ್ಲವೂ ಯುದ್ಧಕೋರ ರಾಷ್ಟçಗಳೆಂದಲ್ಲ. ‘ನಾವು ಬಲಿಷ್ಠರಾಗ ಬಯಸುವುದು ಹಿಂಸೆ ಮಾಡುವುದಕ್ಕಲ್ಲ ಆದರೆ, ಪ್ರಪಂಚದಲ್ಲಿನ ಹಿಂಸೆ, ಅತ್ಯಾಚಾರಗಳನ್ನು ಎಂದೆಂದಿಗೂ ಇಲ್ಲದಂತೆ ಮಾಡುವುದಕ್ಕಾಗಿ. ನಾವು ಯಾರ ಮೇಲೂ ಆಕ್ರಮಣ ಮಾಡಲು ಹೊರಟಿಲ್ಲ, ಆದರೆ ನಮ್ಮ ಮೇಲೆ ಆಕ್ರಮಣವೂ ನಡೆಯದಂತೆ ನಾವು ಎಚ್ಚರದಿಂದ ಇರಬೇಕು’ ಎನ್ನವುದೇ ಹೆಡಗೆವಾರ್ ಅವರ ನಂಬುಗೆಯಾಗಿತ್ತು.
ಅಖಂಡ ಭಾರತದ ಕನಸು ಹೊತ್ತವರನ್ನು ಅನ್ಯ ರಾಷ್ಟ್ರ ವಿರೋಧಿಗಳೆಂದಾಗಲೀ, ಅನ್ಯ ಸಂಸ್ಕೃತಿ ನಾಶಕರೆಂದಾಗಲೀ ಹಣೆಪಟ್ಟಿ ಹಚ್ಚುವುದು ಹೇಗೆ ಸರಿ? ಹಾಗಾದರೆ ‘ಭಾರತ ವಿಭಜನೆ ತಾತ್ಕಾಲಿಕ, ತುಂಡಾದ ಪ್ರದೇಶಗಳು ಮತ್ತೆ ಒಂದಾಗಿ ಅಖಂಡಭಾರತವಾಗುತ್ತದೆ’ ಎಂದು ಹೇಳಿದ ಯೋಗಿ ಅರವಿಂದರನ್ನೂ ಸಂಕುಚಿತವಾದಿಯೆನ್ನಬೇಕಾದೀತು. ‘ನಾವೊಂದು ಶ್ರೇಷ್ಠ ಜನಾಂಗಕ್ಕೆ ಸೇರಿದವರೆಂಬ ಹೆಮ್ಮೆ ನಮಗಿರಲಿ’ ಎಂದ ಸ್ವಾಮಿ ವಿವೇಕಾನಂದರನ್ನು ಅರೆಬರೆ ತಿಳುವಳಿಕೆಯುಳ್ಳವರು ಎನ್ನಲಾಗುತ್ತದೆಯೇ?
ಜಗತ್ತಿನ ಶಾಂತಿ ಸುವ್ಯವಸ್ಥೆಗೆ ಶಕ್ತಿಯ ಸಮತೋಲನ ಅಗತ್ಯ ಎಂಬುದು ಎಲ್ಲರೂ ಒಪ್ಪತಕ್ಕ ಮಾತೇ. ರಷ್ಯಾದ ವಿಘಟನೆಯ ನಂತರ ಅಮೇರಿಕಾದ ಅತಿರೇಕಗಳಿಗಳಿಗೆ ಸವಾಲೊಡ್ಡುವ ಜಾಗತಿಕಶಕ್ತಿ ಯಾವುದೂ ಇಲ್ಲದಿರುವುದರಿಂದ ಆದ ಅನಾಹುತಗಳನ್ನು ಗಮನಿಸಬಹುದು. ಪ್ರಸ್ತುತ ಜಗತ್ತಿನಲ್ಲಿ ಚೀನಾದ ಡ್ರಾಗನ್ ಇಡೀ ವಿಶ್ವವನ್ನು ನುಂಗಲು ಹೊರಟಿದೆ. ಇಂತಹ ಕಾಲಘಟ್ಟದಲ್ಲಿ ಸರ್ವರ ಒಳಿತನ್ನೂ ಬಯಸುವ ಹಿಂದು ಸಂಸ್ಕೃತಿಯ ಅಗತ್ಯ ವಿಶ್ವಕ್ಕೆ ಇನ್ನೂ ಹೆಚ್ಚಿದೆ. ಈ ಉದ್ದೇಶ ಸಾಕಾರಗೊಳ್ಳಲು ಹಿಂದು ಸಂಘಟಿತನಾಗಲೇ ಬೇಕು. ಭಾರತ ಬಲಿಷ್ಟ ಹಾಗೂ ಶಕ್ತಿಸಂಪನ್ನ ರಾಷ್ಟ್ರವಾಗಲೇ ಬೇಕು.
- ಸಂತೋಷ್ ಜಿ ಆರ್