ಆರೆಸ್ಸೆಸ್ ಸರಸಂಘಚಾಲಾಕರ ವಿಜಯದಶಮಿಯ ಭಾಷಣದ ವಿವರಣಾತ್ಮಕ ವಿಶ್ಲೇಷಣೆ

  • ಡಾ. ಎಂ ಕೆ ಶ್ರೀಧರನ್, ಮಾಧ್ಯಮ ವಿಶ್ಲೇಷಕರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರು (ಸರಸಂಘಚಾಲಕರು) ತಮ್ಮ ಸಂಘಟನೆಯ ವಾರ್ಷಿಕ ಸ್ಥಾಪನಾ ದಿನವಾದ ವಿಜಯದಶಮಿಯಂದು ಸ್ವಯಂಸೇವಕರನ್ನುದ್ದೇಶಿಸಿ ಒಂದು ಭಾಷಣವನ್ನು ಮಾಡುತ್ತಾರೆ. ಇದನ್ನು ದಿಕ್ಸೂಚೀ ಭಾಷಣ ಎಂದು ಪರಿಗಣಿಸಲಾಗುತ್ತದೆ. ಈ ಭಾಷಣವು ಸಂಘಟನೆಗಷ್ಟೇ ಅಲ್ಲದೇ ಭಾರತೀಯ ಸಮಾಜ ಮತ್ತು ಇತರರಿಗೂ ಅನ್ವಯಿಸುವ ವಿಷಯಗಳನ್ನು ಒಳಗೊಳ್ಳುವುದರಿಂದ ಎಲ್ಲರ ಆಸಕ್ತಿಯ ಪರಿಮಿತಿಯಲ್ಲೇ ಇರುತ್ತದೆ. ಈ ವರ್ಷದ (ಶುಕ್ರವಾರ, ಅಕ್ಟೋಬರ್ 15, 2021) ರಂದು ಮಾಡಿದ ಭಾಷಣದ ಅನುವಾದಿತ ಸಾರಾಂಶವನ್ನು ಕೆಲವು ವಿವರಣಾತ್ಮಕ ಹಾಗೂ ವಿಮರ್ಶಾತ್ಮಕ ಟಿಪ್ಪಣಿಗಳ ಸಹಿತ ಇಲ್ಲಿ ನೀಡಲಾಗಿದೆ. ದಿಕ್ಸೂಚೀ ಭಾಷಣದ ಪರಿಚಯ ಮತ್ತು ಮಹತ್ವವನ್ನು ತಿಳಿಸಲಾಗಿದೆ.

ರಾಸ್ವಸಂವು ಭಾರತದ 75 ನೇ ವಾರ್ಷಿಕ ಸ್ವಾತಂತ್ರ್ಯೋತ್ಸವವನ್ನು ಉತ್ಸಾಹದಿಂದ ಆಚರಿಸುತ್ತಿದೆ. ಅದರ ಉಲ್ಲೇಖದಿಂದಲೇ ಈ ಬಾರಿಯ ಭಾಷಣ ಪ್ರಾರಂಭವಾಗಿದೆ. “ಇರುಳು ಕಳೆದು ಹಗಲು ಆಗುವುದರೊಳಗಾಗಿ ನಮಗೆ ಸ್ವಾತಂತ್ರ್ಯ್ರ ಸಿಗಲಿಲ್ಲ. ಶಾಂತಿಯುತ ಧರಣಿಗಳಿಂದ ಹಿಡಿದು ಸಶಸ್ತ್ರ ಹೋರಾಟಗಳವರೆಗೆ ಎಲ್ಲಾ ವಿಧಾನಗಳೂ ಅಂತಿಮವಾಗಿ ಸ್ವಾತಂತ್ರ್ಯದ ಗುರಿ ಸಾಧಿಸುವಲ್ಲಿ ಪರ್ಯವಸಾನಗೊಂಡವು” ಎಂದು ಹೇಳುವಾಗ ಮಸುಕಾಗಿರುವ ಚಾರಿತ್ರಿಕ ಸತ್ಯ ಒಂದನ್ನು ಎತ್ತಿಹಿಡಿಯುವ ಆಗ್ರಹ ಕಾಣುತ್ತದೆ. ಬೋಸ್ ಮತ್ತು ಇತರ ಭಾರತೀಯ ಕ್ರಾಂತಿಕಾರಿಗಳು ಮಾಡಿರುವ ಹೋರಾಟಕ್ಕೆ, ಮತ್ತು ಹಲವಾರು ಜಾತಿ ಸಮುದಾಯಗಳಿಗೆ, ವಿವಿಧ ಪ್ರದೇಶಗಳಿಗೆ ಸೇರಿದ ಸ್ವಾತಂತ್ರ್ಯ ಹೋರಾಟಗಾರರು ಮಾಡಿರುವ ಅನೇಕ ತ್ಯಾಗಗಳಿಗೆ ದಕ್ಕಬೇಕಾಗಿದ್ದ ಮಾನ್ಯತೆ ಒದಗಿಸುವ ಮತ್ತು ನಮ್ಮ ಕರ್ತವ್ಯವಾದ ಕೃತಜ್ಞತೆ ಅರ್ಪಿಸುವ ಕಾರ್ಯಗಳೆರಡನ್ನೂ ಡಾ. ಮೋಹನ್ ಭಾಗವತ್ ಅವರು ಮಾಡಿದ್ದಾರೆ. ರಾಸ್ವಸಂವು ಇಂದಿನ ಭಾರತದ ಭೂಪ್ರದೇಶದ ಅಖಂಡತೆ ಮತ್ತು ಏಕತೆಗೆ ಬದ್ಧವಾಗಿದೆ. ಜೊತೆಗೆ ಅಖಂಡ ಭಾರತದ ಕಡೆ ದೂರ ದೃಷ್ಟಿ ಇಟ್ಟಿದೆ. ಈ ಹಿನ್ನೆಲೆಯಲ್ಲೇ “ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಉಳಿದು ಹೋಗಿರುವ ದೇಶ ವಿಭಜನೆಯ ಗಾಯದ ಗುರುತಿನ” ಬಗ್ಗೆ ನೆನಪಿಸಿದ್ದಾರೆ. “ಭಾರತದ ಏಕತೆ ಮತ್ತು ಸಮಗ್ರತೆಗಳನ್ನು ಮರುಸ್ಥಾಪಿಸುವ ಕಾರ್ಯದಲ್ಲಿ ತೊಡಗಿಕೊಳ್ಳಲು ನಮ್ಮ ಇಡೀ ಸಮಾಜ, ಮುಖ್ಯವಾಗಿ ತರುಣ ಜನಾಂಗವು, ವಿಭಜನೆಯ ಚರಿತ್ರೆಯನ್ನು ಗಮನಿಸಿ, ಅರ್ಥೈಸಿ ನೆನೆಪಿಟ್ಟುಕೊಳ್ಳಬೇಕಾದ ಅಗತ್ಯ”ವನ್ನು ಒತ್ತಿ ಹೇಳಿದ್ದಾರೆ.

ಸಾಮಾಜಿಕ ಸಾಮರಸ್ಯವು ಸಂಘದ ಕಾರ್ಯಯೋಜನೆಯಲ್ಲಿ ಒಂದು ಮುಖ್ಯ ಗಮನವಾಗಿದೆ. ದೇಶದ ಸ್ಥಿರತೆಯಲ್ಲಿ ಸಾಮರಸ್ಯದ ಮಹತ್ವವನ್ನು ಸಂಘ ಸರಿಯಾಗಿಯೇ ಗ್ರಹಿಸಿದೆ. ಸಾಮರಸ್ಯದ ತಾತ್ವಿಕ ಮತ್ತು ವ್ಯಾವಹಾರಿಕ ಮುಖಗಳೆರಡನ್ನೂ ಸಮರ್ಥವಾಗಿ ನಿರ್ವಹಿಸಬೇಕಾದ ಅಗತ್ಯದ ಅರಿವು ಅದಕ್ಕೆ ಇದೆ. “ಸಮಾನತೆಗೆ ಬದ್ಧವಾದ ಮತ್ತು ತಾರತಮ್ಯರಹಿತ ಸಮಾಜವು ದೇಶದ ಏಕತೆ ಮತ್ತು ಸಮಗ್ರತೆಗೆ ಒಂದು ಪೂರ್ವಭಾವೀ ಅಗತ್ಯವಾಗಿದೆ” – ಎಂದು ಸಂಘದ ತಾತ್ವಿಕ ನಿಲುವನ್ನು ಸ್ಫಷ್ಟಪಡಿಸುತ್ತಾ “ಸಂಘದ ಸ್ವಯಂಸೇವಕರು ಇಂಥಹಾ ಸಮಾಜದತ್ತ ಕಾರ್ಯತತ್ಪರರಾಗಿದ್ದಾರೆ” ಎಂಬ ಪ್ರತ್ಯಕ್ಷ ಪ್ರಯತ್ನಗಳನ್ನೂ ಉಲ್ಲೇಖಿಸಿದ್ದಾರೆ. ಹಲವಾರು ದಶಕಗಳ ಕಾಲ ಸಂಘವು ಸಾಮಾಜಿಕ ಸಾಮರಸ್ಯದ ಕಾರ್ಯದಲ್ಲಿ ನಿರತವಾಗಿರುವುದರಿಂದ ಹಲವಾರು ಸತ್ಯಗಳನ್ನೂ, ಸೂಕ್ಷ್ಮಗಳನ್ನೂ ಅದು ಗಮನಿಸಿ ಅರಿತುಕೊಂಡಿದೆ. ಸಮಾಜದಲ್ಲಿ ಇಂದು ಕಾಣುತ್ತಿರುವ ಗೊಂದಲಗಳ ಜಾಗತಿಕ, ಆರ್ಥಿಕ ಮತ್ತು ಮತೀಯ ಮುಖಗಳನ್ನು ನೇರವಾಗಿ ಗ್ರಹಿಸಿರುವ ಅಂಶ ಭಾಷಣದ ಈ ಭಾಗದಲ್ಲಿ ಕಾಣುತ್ತಿದೆ.

“ಭಾರತದ ಪ್ರಗತಿ ಮತ್ತು ಅದಕ್ಕೆ ದಕ್ಕಬೇಕಾದ ಮಾನ್ಯತೆಗಳು ಪ್ರಪಂಚದ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಮಾರಕವಾಗಿವೆ. ಈ ಹಿತಾಸಕ್ತಿಗಳು ಹಲವಾರು ದೇಶಗಳಲ್ಲಿ ಪ್ರಭಾವಿಯಾಗಿವೆ. ಈ ಸ್ವಾರ್ಥೀ ಶಕ್ತಿಗಳ ದುರ್ವರ್ತನೆಗಳು ಸನಾತನ ಮೌಲ್ಯಗಳು ಭಾರತದಲ್ಲಿ ಪ್ರತಿಷ್ಠಾಪಿತವಾಗುವುದರೊಂದಿಗೆ ಕೊನೆಗೊಳ್ಳುತ್ತವೆ. ಏಕೆಂದರೆ, ಭಾರತವು ಧಾರ್ಮಿಕ ದೃಷ್ಟಿಕೋನದಿಂದ ಸಮುದಾಯಗಳನ್ನು ಪ್ರಭಾವಿಸಲಿದ್ದು ಜಗತ್ತಿನ ಸಮತೋಲನವನ್ನು ಪುನಃ ತರುವ, ಸಹಕಾರ ಪ್ರವೃತ್ತಿಯನ್ನು ಉತ್ತೇಜಿಸುವ ಮತ್ತು ಹರ್ಷದ ವಾತಾವರಣವನ್ನು ನಿರ್ಮಾಣಮಾಡುವ ಸಾಮರ್ಥ್ಯ ಹೊಂದಿದೆ. ಇದನ್ನು ತಡೆಯುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ. ಪ್ರಪಂಚದಲ್ಲಿ ಭಾರತದ ಬಗ್ಗೆ ಗೊಂದಲ ಸೃಷ್ಟಿಸುವ ಮತ್ತು ಭಾರತೀಯರನ್ನು ಹಾದಿತಪ್ಪಿಸುವ ಪ್ರಯತ್ನಗಳನ್ನು ಅಪಪ್ರಚಾರದ ಮೂಲಕ ಮಾಡಲಾಗುತ್ತಿದೆ. ಬಹಿರಂಗವಾಗಿ ಮತ್ತು ಗೌಪ್ಯವಾಗಿ ಹಲವಾರು ಸಮಾಜವಿರೋಧೀ ಹಿತಾಸಕ್ತಿಗಳು ಒಳ ಒಪ್ಪಂದಗಳೊಂದಿಗೆ ಸಕ್ರಿಯವಾಗಿವೆ. ಇವರ ಮೋಸದ ಮತ್ತು ಕುತಂತ್ರದ ಯೋಜನೆಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ಸಮಾಜವು ಬಲಿಯಾಗದಂತೆ ನೋಡಿಕೊಳ್ಳಬೇಕಾಗಿದೆ. ಕಾಲ-ಕಾಲಕ್ಕೆ ಈ ಹಿತಾಸಕ್ತಿಗಳು ಉದ್ದೇಶ ಬದಲು ಮಾಡಿಕೊಳ್ಳದೇ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಾ ಜನ ಸಮುದಾಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾ ಪರಿಸ್ಥಿತಿಯನ್ನು ಉದ್ರಿಕ್ತಗೊಳಿಸುತ್ತಿದ್ದಾರೆ. ಈ ರೀತಿಯ ಹಲವು ಪ್ರವೃತ್ತಿಗಳು / ಯೋಜನೆಗಳು ಇತ್ತೀಚೆಗೆ ಬಯಲಾಗಿವೆ. “

ಸಂಘದ ಮುಖ್ಯಸ್ಥರು ಮೇಲಿನ ಮಾತುಗಳಿಂದ ಸಾಮಾಜಿಕ ಸಮಸ್ಯೆಗಳ ಎಲ್ಲಾ ಮೂಲಗಳನ್ನೂ ಶೋಧಿಸಿದ್ದಾರೆ. ಸಮಾಜವನ್ನು ಎಚ್ಚರಿಸಿದ್ದಾರೆ. ಹಾಗೆ ಎಚ್ಚರಿಸುವಲ್ಲಿ ಅವರು ಸಾರ್ವಜನಿಕ ಸಂವಹನದಲ್ಲಿರುವ ಹಲವು ತೊಡಕುಗಳನ್ನು ಮೀರಿದ್ದಾರೆ. ಈ ಭಾಗವು ಈ ಬಾರಿಯ ವಿಶೇಷ ಎಂದರೆ ತಪ್ಪಾಗಲಾರದು.
ಆರ್ಥಿಕ, ಮಾಧ್ಯಮ ಮತ್ತು ಶಿಕ್ಷಣ ರಂಗದ ಇತ್ತೀಚಿನ ಬೆಳವಣಿಗೆಗಳ ಸಾಮಾಜಿಕ ಪರಿಣಾಮಗಳನ್ನು ಅವರು ಪ್ರಸ್ತಾಪಿಸಿದ್ದಾರೆ. “ಹೊಸ ತಂತ್ರಜ್ಞಾನಾಧಾರಿತ ಸರ್ಕಾರೀ ನಿಯಂತ್ರಣಕ್ಕೊಳಪಡದ ಬಿಟ್ ಕಾಯಿನ್ ರೂಪದ ಹಣವು ಜಾಗತಿಕ ಆರ್ಥಿಕತೆಯನ್ನು ಅಸ್ಥಿರಗೊಳಿಸುವ ಸಂಭವಗಳು ಕಂಡುಬರುತ್ತಿದೆ. ಮಾಧ್ಯಮ ಮತ್ತು ಸಿನಿಮಾ ರಂಗದಲ್ಲಿ ಓ.ಟಿ.ಟಿ (ಓವರ್ ದಿ ಏರ್ – ಅಥವಾ ಅಂತರ್ಜಾಲ ಪ್ರಸರಣ ) ವೇದಿಕೆಗಳು ಬಂದಿದ್ದು ಅವುಗಳ ಮೂಲಕ ವಿವೇಚನಾರಹಿತವಾಗಿ ವೀಕ್ಷಣಾ ವಿಷಯಗಳನ್ನು ನೀಡಲಾಗುತ್ತಿದೆ. ಕರೋನಾ ಸಾಂಕ್ರಾಮಿಕ ಜ್ವರದ ಹಿನ್ನೆಲೆಯಲ್ಲಿ ಶಿಕ್ಷಣವು ಅಂತರ್ಜಾಲದ ಮೂಲಕ ನಡೆಸಲಾಗುತ್ತಿದೆ. ಶಾಲಾ ವಿದ್ಯಾರ್ಥಿಗಳು ಮೊಬೈಲ್ ಉಪಕರಣಗಳನ್ನು ಉಪಯೋಗಿಸುತ್ತಿದ್ದು ಈ ವಿಚಾರದಲ್ಲಿ ವ್ಯಾವಹಾರಿಕ ವಿವೇಚನೆ ಬೇಕಾಗಿದೆ. ಸರ್ಕಾರವು ಈ ವಿಚಾರಗಳ ಬಗ್ಗೆ ಕಾನೂನು ಮತ್ತು ಮಾರ್ಗದರ್ಶೀ ಸೂತ್ರಗಳನ್ನು ರಚಿಸಬೇಕಾಗಿದೆ” ಎಂದು ಸಲಹೆ ನೀಡಿದ್ದಾರೆ.

ನಮ್ಮ ನಾಗರೀಕ ಸಮಾಜದಲ್ಲಿ ಹಲವಾರು ಗೊಂದಲಮಯ ಚರ್ಚೆಗಳಿರುವುದು ಎಲ್ಲರ ಗಮನದಲ್ಲಿದೆ. ಈ ಗೊಂದಲಗಳು ಸಾರ್ವಜನಿಕ ಅಭಿಪ್ರಾಯಗಳಲ್ಲಿ ಒಮ್ಮತ ಮೂಡಲು ತೊಡಕಾಗಿದೆ. ಕುಟುಂಬದಲ್ಲೇ ಹಲವು ವಿಚಾರಗಳಲ್ಲಿ ಬಿನ್ನಮತ ಕಂಡುಬರುತ್ತಿದೆ. ಇದರ ಬಗ್ಗೆ ಮಾತನಾಡುತ್ತಾ ಡಾ. ಮೋಹನ್ ಭಾಗವತ್ ಅವರು “ಸರಿ-ತಪ್ಪುಗಳನ್ನೂ, ನೀತಿ-ಅನೀತಿಗಳನ್ನೂ ನಿಖರವಾಗಿ ಗುರುತಿಸುವ ವಾತಾವರಣವನ್ನು ನಮ್ಮ ಮನೆಗಳಲ್ಲಿ ನಿರ್ಮಿಸಬೇಕಾಗಿದೆ. ಸಾಮಾಜಿಕವಾಗಿ ಹಲವಾರು ಧಾರ್ಮಿಕ/ಸಾಮಾಜಿಕ ನೇತಾರರು ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಕುಟುಂಬಗಳಲ್ಲಿ ಸಹ ಈ ಚರ್ಚೆಯನ್ನು ಗಮನಿಸಿ ಸರಿ-ತಪ್ಪುಗಳ ಬಗ್ಗೆ ಕುಟುಂಬದ ಸದಸ್ಯರೆಲ್ಲರಲ್ಲಿ ಒಮ್ಮತ ಮೂಡುವ ಅಗತ್ಯ ಇದೆ. ” ಎಂದಿದ್ದಾರೆ. ಒಂದು ಸರಳ, ಆದರೆ ಪ್ರಭಾವೀ ಪರಿಹಾರ ಸೂಚಿಸಿದ್ದಾರೆ. ಕುಟುಂಬದ ಸ್ವಾಯುತ್ತತೆಯನ್ನೂ, ಪ್ರಾಮುಖ್ಯತೆಯನ್ನೂ ಗುರುತಿಸಿದ್ದಾರೆ.

“ಕರೋನಾ ಎರಡನೆಯ ಅಲೆಯ ವಿರುದ್ಧದ ಹೋರಾಟವನ್ನು ಸಮಾಜದ ಅಂತಃಶಕ್ತಿಯನ್ನು ಪ್ರದರ್ಶನ” ಎಂದು ಗಮನಿಸುತ್ತಾ ಡಾ ಮೋಹನ್ ಭಾಗವತ್ ಅವರು “ಕೋವಿಡ್ ನಂತರದ ಪರಿಸ್ಥಿತಿಯು ನಮಗೆ ಸ್ವಂತಿಕೆಯ ಆಧಾರದ ಮೇಲೆ ಮಾದರಿ ಜೀವನಶೈಲಿಯನ್ನು ರೂಪಿಸುವ ಅವಕಾಶ ಒದಗಿಸಿದೆ” ಎನ್ನುವ ಹೊಸ ದೃಷ್ಟಿಕೋನವನ್ನು ನೀಡಿದ್ದಾರೆ. “ವೈದ್ಯಕೀಯ ಪದ್ಧತಿಗಳ ಮೇಲಾಟವನ್ನು ಮೀರಿ, ಎಲ್ಲಾ ಪದ್ಧತಿಗಳ ಸೂಕ್ತ ಬಳಕೆಯಿಂದ ಪರಿಣಾಮಕಾರೀ ಆರೋಗ್ಯವ್ಯವಸ್ಥೆಯನ್ನು ಸುಲಭವಾಗಿ ಎಲ್ಲರಿಗೂ ದೊರಕುವಂತೆ ಮಾಡಬೇಕಾಗಿದೆ” ಎಂಬ ಸಾಮಯಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಡೀ ವಿಶ್ವದ ದೃಷ್ಟಿಯಿಂದ ಸಂಘದ ಮುಖ್ಯಸ್ಥರು ಆರ್ಥಿಕ ನೀತಿಯನ್ನು ಪ್ರತಿಪಾದಿಸಿರುವುದನ್ನು ಗಮನಿಸಬೇಕಾದ ಅಂಶ. ಅವರು ಹೇಳಿದಂತೆ,

“ಈಗಿನ ಸನ್ನಿವೇಶದಲ್ಲಿ ಇರುವ ಆರ್ಥಿಕ ದೃಷ್ಟಿಕೋನಗಳು ಆಧುನಿಕ ಸಮಸ್ಯೆಗಳನ್ನು ಪರಿಹರಿಸಲು ಅಸಮರ್ಥವಾಗಿದೆ ಎಂಬ ಅರಿವು ಮೂಡುತ್ತಿದೆ. ಭಾರತದಲ್ಲಿ ಪುರಾತನ ಜೀವನ ಶೈಲಿಯ ಅನುಭವವು ಒಂದು ವಿಶಿಷ್ಟ ಆರ್ಥಿಕ ದೃಷ್ಟಿಕೋನವನ್ನು ನೀಡಿದೆ. ಸುಖದ ಅನುಭವವು ಭೌತಿಕ ಸಂಪನ್ಮೂಲಗಳ ಮೇಲೆಯೇ ನಿಂತಿಲ್ಲ. ಸಂತೋಷವು ಭೌತಿಕ ಸುಖಕ್ಕೆ ಮಾತ್ರವೇ ಸೀಮಿತವೂ ಅಲ್ಲ. ಸುಖವು ಧಾರ್ಮಿಕತೆಯ ಪರಿಧಿಯಲ್ಲೇ ಇದ್ದಾಗ ಅದು ಮಾದರಿ ಆರ್ಥಿಕತೆಗೆ ದಾರಿಮಾಡಿಕೊಡುತ್ತದೆ. ನಮ್ಮಲ್ಲಿ ನಿಯಂತ್ರಣಕ್ಕೊಳಪಟ್ಟ ಭೋಗಕ್ಕೆ ಮಹತ್ವ ನೀಡಲಾಗಿದೆ. ಮನುಷ್ಯನು ಭೌತಿಕ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗಳಿಗೆ ಕಾಪಾಡುವವನು ಮಾತ್ರ. ಅದನ್ನು ಬೇಕಾದಂತೆ ಬಳಸಬಲ್ಲ ಒಡೆಯನಲ್ಲ. ಆರ್ಥಿಕತೆಯ ಗುರಿ ಯಾವುದೇ ಒಂದು ನಿರ್ದಿಷ್ಟ ಗುಂಪಿನ ಹಿತಾಸಕ್ತಿಗೆ ಸಂಪನ್ಮೂಲಗಳನ್ನು ಒದಗಿಸುವುದಲ್ಲ. ಬದಲಾಗಿ ಇಡೀ ಮನುಷ್ಯಕುಲವನ್ನು ಒಂದೇ ಸಮುದಾಯ ಎಂದು ಗುರುತಿಸಿ ಸೌಹಾರ್ದಯುತವಾಗಿ, ಸಂತುಲಿತ ರೀತಿಯಲ್ಲಿ ಸಂಪನ್ಮೂಲಗಳನ್ನು ಎಲ್ಲರಿಗೂ ಒದಗಿಸುವುದೇ ಆಗಿದೆ.”

“ಸಂಪನ್ಮೂಲಗಳ ಕೊರತೆಯನ್ನು ಉಂಟುಮಾಡುವ ಜನಸಂಖ್ಯೆಯ ಬೆಳವಣಿಗೆ ಮತ್ತು ಅಸಮತೋಲನವನ್ನು 2015 ರ ಅಖಿಲ ಭಾರತೀಯ ಕಾರ್ಯಕಾರೀ ಮಂಡಳಿಯ ನಿರ್ಣಯವು ಉದ್ದೇಶಿಸಿತ್ತು. ಇದೇ ವಿಚಾರವನ್ನು ಇಂದಿನ ಸಂದೇಶದಲ್ಲಿ “ಜನಸಂಖ್ಯೆಯ ಹೆಚ್ಚಳವನ್ನು ಆರೋಗ್ಯಕರವಾಗಿ ನಿಭಾಯಿಸಲು ಬೇಕಾದ ಸಾರ್ವತ್ರಿಕ ಮತ್ತು ಪರಿಣಾಮಕಾರೀ ನೀತಿಗೆ ವ್ಯಾಪಕ ಜನಸ್ಪಂದನವನ್ನು ರೂಪಿಸುವುದು ಮತ್ತು ನಿಷ್ಪಕ್ಷಪಾತವಾಗಿ ಆ ನೀತಿಗಳನ್ನು ಅನುಷ್ಠಾನ ಮಾಡುವುದು ಪರಿಹಾರಗಳಾಗಿವೆ” ಎಂದು ಹೇಳಿದ್ದಾರೆ. ವಾಯುವ್ಯ ಗಡಿಯ ಬಗ್ಗೆ “ಇಸ್ಲಾಂ ಹೆಸರಿನಲ್ಲಿ ಅಸಹಿಷ್ಣುತೆ, ಹಿಂಸಾಚಾರ ಮತ್ತು ಭಯೋತ್ಪಾದನೆ ನಡೆಸುತ್ತಿರುವ ತಾಲೀಬಾನ್ ಗೆ ಪಾಕಿಸ್ತಾನ, ಟರ್ಕಿ ಮತ್ತು ಚೀನಾ ದೇಶಗಳು ಒಂದಾಗಿ ಬೆಂಬಲ ನೀಡುತ್ತಿದ್ದಾರೆ” ಎಂಬ ಕಳವಳ ವ್ಯಕ್ತಪಡಿಸುತ್ತಾ, “ಜಮ್ಮು ಮತ್ತು ಕಾಶ್ಮೀರದ ನಾಗರೀಕರು ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದು ಅವರಿಗೆ ಇಡೀ ದೇಶದ ಬೆಂಬಲ ಬೇಕಾಗಿದೆ” ಎಂದು ಹೇಳಿದ್ದಾರೆ. ಸಂಘದ ಮುಖ್ಯಸ್ಥರು ಈ ಸಮಸ್ಯೆಗಳನ್ನು ಮತೀಯ ಪರಿಧಿಯಲ್ಲಿ ಉಳಿಯದೇ ಪ್ರಸ್ತಾಪಿಸಿದ್ದಾರೆ. ಸಮಸ್ಯೆಯ ನಿರೂಪಣೆಯನ್ನು ನೇರವಾಗಿ ಮಾಡುತ್ತಾ ತಮ್ಮ ನಿಲುವಿನಲ್ಲಿ ಖಚಿತತೆಯನ್ನು ಪ್ರದರ್ಶಿಸಿದ್ದಾರೆ.

ಹಿಂದೂ ದೇವಾಲಯಗಳು ಚಾರಿತ್ರಿಕವಾಗಿ ಸಾಮಾಜಿಕ-ಸಾಂಸ್ಕೃತಿಕ ಕೇಂದ್ರಗಳಾಗಿದ್ದವು ಎಂಬುದು ತಿಳಿದ ಸಂಗತಿ. ಆದರೆ, ಈಗ ಹಲವಾರು ದೇವಾಲಯಗಳು, ಮುಖ್ಯವಾಗಿ ದಕ್ಷಿಣ ಭಾರತದಲ್ಲಿರುವ ದೇವಾಲಯಗಳು ರಾಜ್ಯ ಸರ್ಕಾರಗಳ ನಿಯಂತ್ರಣದಲ್ಲಿ ಇದ್ದು ಅನೇಕ ರೀತಿಯ ಪಕ್ಷಪಾತಗಳಿಗೆ ಒಳಗಾಗಿವೆ. ದೇವಾಲಯಗಳ ಆಡಳಿತ ಕಳಪೆಯಾಗಿದ್ದು, ರಾಜ್ಯ ಸರ್ಕಾರಗಳು ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ. ದೇವಾಲಯಗಳ ಸ್ವತ್ತುಗಳು ಕಾನೂನಿಗೆ ವಿರುದ್ಧವಾಗಿ ಅತಿಕ್ರಮಣ ಆಗುತ್ತಿದ್ದು, ಧಾರ್ಮಿಕ ಶ್ರದ್ಧೆ ಇಲ್ಲದ ವ್ಯಕ್ತಿಗಳನ್ನು ದೇವಾಲಯಗಳ ಆಡಳಿತಮಂಡಳಿಗೆ ನೇಮಕಮಾಡಲಾಗುತ್ತಿದೆ. ಈ ವಿಚಾರಗಳು ಸಾರ್ವಜನಿಕ ಚರ್ಚೆಯಲ್ಲಿ ಮುನ್ನಲೆಗೆ ಬಂದಿದ್ದು, ಡಾ. ಮೋಹನ್ ಭಾಗವತ್ ಅವರು ಈ ಚರ್ಚೆಗೆ ದೇವಸ್ಥಾನದ ಪರವಾಗಿ ದನಿಕೂಡಿಸಿದ್ದಾರೆ.

ಭಾರತದ ಏಕತೆಯ ಆಧಾರದ ಬಗ್ಗೆ ಸಂಘದ ಆಳವಾದ ಅಧ್ಯಯನವಿದೆ. ಸನಾತನ ರಾಷ್ಟ್ರವಾದ ಭಾರತದಲ್ಲಿ ಇರುವುದು ಒಂದೇ ನಾಗರೀಕತೆ, ಸಂಸ್ಕೃತಿ ಮತ್ತು ಚರಿತ್ರೆ ಎಂದು ಹೇಳುವಾಗ ಅದರಲ್ಲಿ ಪ್ರಾಮಾಣಿಕ ಶ್ರದ್ಧೆಯಿದೆ. ಇಂದಿನ ಭಾರತೀಯರೆಲ್ಲರ ಪೂರ್ವಜರು ಮತ್ತು ಪರಂಪರೆ ಒಂದೇ ಮತ್ತು ಅದು ‘ಹಿಂದೂ’ ಎಂಬ ಅವರ ಪುನರುಚ್ಚಾರದಲ್ಲಿ ಸತ್ಯವಿದೆ. ಈ ಏಕತೆಯನ್ನು ಪ್ರಸರಿಸುವ ಪ್ರಕ್ರಿಯೆಯನ್ನು ರಾಸ್ವಸಂಘವು ತನ್ನ ಗುರಿಯೆಂದು ಭಾವಿಸಿ ದುಡಿಯುತ್ತಿದೆ. ಈ ಸಂಗತಿಗಳನ್ನು ಪ್ರಸ್ತಾಪಿಸುತ್ತಾ ಡಾ. ಮೋಹನ್ ಭಾಗವತ್ ಅವರು ಈ ವರ್ಷದ ತಮ್ಮ ವಿಜಯದಶಮೀ ಭಾಷಣವನ್ನು ಸಮಾಪ್ತಿಗೊಳಿಸಿದ್ದಾರೆ.

Leave a Reply

Your email address will not be published.

This site uses Akismet to reduce spam. Learn how your comment data is processed.