Article by Pratap Simha in Kannada Prabha dated August 6, 2011 http://pratapsimha.com/2011/08/07/rss-3/

ಆರೆಸ್ಸೆಸ್ ಬಾಂಬ್ ತಯಾರಿಸುವ ಕಾರ್ಖಾನೆಯೇ?

ನಾನು ಕ್ರೈಸ್ತ. ಜನ್ಮತಃ ಕ್ರೈಸ್ತ. ನಾನು ಪಾಲಿಸುವುದು, ಅನುಸರಿಸುವುದು, ವಿಶ್ವಾಸಿಸುವುದೂ ಕ್ರೈಸ್ತ ಧರ್ಮವನ್ನೇ. ಪ್ರತಿ ಭಾನುವಾರ ಚರ್ಚ್ ಗೆ ಹೋಗುತ್ತೇನೆ.

ಆದರೆ…

ನಾನು ಆರೆಸ್ಸೆಸ್ ನಿಂದಲೂ ಬಹಳಷ್ಟು ವಿಚಾರಗಳನ್ನು ಕಲಿತಿದ್ದೇನೆ. ನಾನು ಆರೆಸ್ಸೆಸ್ ನ ಅಭಿಮಾನಿಯಾಗಿದ್ದು 1979ರಲ್ಲಿ. ಆಗ ಕೋಯಿಕ್ಕೋಡ್ ನ ಜಿಲ್ಲಾ ನ್ಯಾಯಾಧೀಶನಾಗಿದ್ದೆ. ಸರಳ ಜೀವನ, ಉದಾತ್ತ ಚಿಂತನೆ ಆರೆಸ್ಸೆಸ್ ನ ಹೆಗ್ಗುರುತು. ಮಹಾತ್ಮ ಗಾಂಧೀಜಿ ಹತ್ಯೆಗೆ ಆರೆಸ್ಸೆಸ್ ಕಾರಣ ಎನ್ನುವ ಕೆಟ್ಟ ಪ್ರಚಾರಾಂದೋಲನ ಮೊದಲು ನಿಲ್ಲಬೇಕು. ಯಾವುದೋ ಒಂದು ಕಾಲದಲ್ಲಿ ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ವ್ಯಕ್ತಿ ಎಸಗಿದ ಕೃತ್ಯಕ್ಕೆ ಸಂಘಟನೆಯನ್ನೇ ದೂರುವುದು ಸರಿಯಲ್ಲ. ಆರೆಸ್ಸೆಸ್ಸನ್ನು ನ್ಯಾಯಾಲಯವೇ ನಿರ್ದೋಷಿಯೆಂದು ತೀರ್ಪಿತ್ತಿದೆ. ಮಿಗಿಲಾಗಿ ಇಡೀ ಸಿಖ್ ಸಮುದಾಯವೇ ಇಂದಿರಾ ಗಾಂಧಿ ಹತ್ಯೆಗೆ ಕಾರಣ ಎನ್ನಲು ಸಾಧ್ಯವೆ? ಆರೆಸ್ಸೆಸ್ ಅಲ್ಪಸಂಖ್ಯಾತ ವಿರೋಧಿ ಎಂಬ ಪ್ರಚಾರಾಂದೋಲನ ಕೂಡ ಆಧಾರರಹಿತ. ನಾನು ಆರೆಸ್ಸೆಸ್್ನ ದೊಡ್ಡ ಅಭಿಮಾನಿ. ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಭಾಗಿಯಾದ ಏಕಮಾತ್ರ ರಾಜಕೀಯೇತರ ಸಂಘಟನೆ ಆರೆಸ್ಸೆಸ್. ನಮ್ಮ ಮೂಲಭೂತ ಹಕ್ಕುಗಳನ್ನು ಮರಳಿ ಗಳಿಸಿಕೊಡುವುದಕ್ಕಾಗಿ ಹಲವು ಜೀವಗಳನ್ನೇ ಬಲಿಕೊಟ್ಟ ಆರೆಸ್ಸೆಸ್ ಗೆ ನಾವೆಲ್ಲ ಆಭಾರಿಯಾಗಿರಬೇಕು…….”

ಮೊನ್ನೆ ಆಗಸ್ಟ್ 1ರಂದು ಕೊಚ್ಚಿಯಲ್ಲಿ ನಡೆದ ಸಮಾರಂಭವೊಂದನ್ನು ಉದ್ದೇಶಿಸಿ ಸುಪ್ರೀಂ ಕೋರ್ಟ್್ನ ಮಾಜಿ ನ್ಯಾಯಮೂರ್ತಿ ಕೆ.ಟಿ. ಥಾಮಸ್ ಈ ರೀತಿ ಹೇಳುತ್ತಿದ್ದರೆ ನೆರೆದವರು ನಿಬ್ಬೆರಗಾಗಿ ನೋಡುತ್ತಿದ್ದರು!

ತುರ್ತು ಪರಿಸ್ಥಿತಿಯೊಂದೇ ಅಲ್ಲ. ಭಾರತ-ಪಾಕಿಸ್ತಾನ, ಭಾರತ-ಚೀನಾ ಯುದ್ಧಗಳ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವು ನೀಡಿದ ಸಂಘಟನೆ ಅದು. ಯಾವ ಪ್ರಧಾನಿ ನೆಹರು ಗಾಂಧೀ ಹತ್ಯೆ ನೆಪದಲ್ಲಿ ಆರೆಸ್ಸೆಸ್ ಮೇಲೆ ನಿಷೇಧ ಹೇರಿದ್ದರೋ ಅದೇ ನೆಹರು ಚೀನಾ ಯುದ್ಧದ ತರುವಾಯ ಗಣರಾಜ್ಯೋತ್ಸವ ದಿನದ ಪರೇಡ್ ಗೆ ಆರೆಸ್ಸೆಸ್ ಗೆ ಆಹ್ವಾನ ನೀಡಿದ್ದರು. ಇಂದಿಗೂ ಬರ, ನೆರೆ, ಪ್ರವಾಹ, ಪ್ರಕೋಪ, ವಿಕೋಪ, ಭೂಕಂಪ, ದುರ್ಘಟನೆ ಯಾವುದೇ ಅನಾಹುತಗಳು ಸಂಭವಿಸಿದರೂ ಮೊದಲಿಗೆ ಧಾವಿಸುವುದು ಆರೆಸ್ಸೆಸ್, ನಂತರ ಆಗಮಿಸುತ್ತದೆ ನಮ್ಮ ಸರ್ಕಾರಿ ಆಡಳಿತ ಯಂತ್ರ. ಇಷ್ಟಾಗಿಯೂ ಬಹಳಷ್ಟು ಜನ ಆರೆಸ್ಸೆಸ್ ಶಾಖೆಗೂ ಮದ್ರಸಾಗಳಿಗೂ ಯಾವುದೇ ವ್ಯತ್ಯಾಸವಿಲ್ಲದಂತೆ ಭಾವಿಸಿದ್ದಾರೆ, ಮಾಧ್ಯಮಗಳ ಒಂದು ವರ್ಗವೂ ಅದೇ ತೆರನಾದ ಪ್ರಚಾರಾಂದೋಲನ ಮಾಡುತ್ತದೆ, ಅನುಮಾನಗಳನ್ನು ಹೋಗಲಾಡಿಸುವ ಬದಲು ಹುಸಿ ವರದಿಗಳ ಮೂಲಕ ಅನುಮಾನಕ್ಕೆ ಇನ್ನಷ್ಟು ಆತಂಕಗಳ ಭಾರವನ್ನು ಹೊರಿಸುತ್ತವೆ. ಹಾಗಂತ ಆರೆಸ್ಸೆಸ್ ಬಗ್ಗೆ ಇರುವ ಅನುಮಾನಗಳು ನಿಜವಾಗಿ ಬಿಡುತ್ತವೆಯೇ? ಮದ್ರಸಾಗಳಿಗೂ, ಶಾಖೆಗಳಿಗೂ ವ್ಯತ್ಯಾಸವಿಲ್ಲವೆ? ಇಷ್ಟಕ್ಕೂ ಶಾಖೆಗಳಲ್ಲಿ ಹೇಳಿಕೊಡುವುದಾದರೂ ಏನನ್ನು? ತಥಾಕಥಿತ ವಿರೋಧಿಗಳು ಎಂದಾದರೂ ಶಾಖೆಗೆ ಹೋಗಿ ಸತ್ಯಾಸತ್ಯವನ್ನು ಪರೀಕ್ಷಿಸಿ ನೋಡಿದ್ದಾರೆಯೇ? ಆರೆಸ್ಸೆಸ್ ಕಚೇರಿಗಳಿಗೆ ಹೋಗಿ, ಅಲ್ಲಿರುವ ಗ್ರಂಥಾಲಯದ ಕಪಾಟುಗಳನ್ನು ತಡಕಾಡಿದರೆ ಏನು ಸಿಗಬಹುದು ಅಂದುಕೊಂಡಿರಿ?

ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಶಿವಾಜಿ ಮಹಾರಾಜ, ಚಂದ್ರಶೇಖರ ಆಝಾದ್, ಆಲ್ಫಾಕುಲ್ಲಾ ಖಾನ್ ಇಂತಹ ಅಪ್ರತಿಮ ಶೂರರ ಶೌರ್ಯ, ಸಾಹಸ, ಹೋರಾಟ, ತ್ಯಾಗ, ಬಲಿದಾನಗಳನ್ನು ಹೇಳುವ ಪುಸ್ತಕಗಳು ಸಿಗುತ್ತವೆಯೇ ಹೊರತು ಬಾಂಬ್್ಗಳಲ್ಲ. ಆರೆಸ್ಸೆಸ್ ನ ಶಾಖೆಗಳಲ್ಲಿ ಹೇಳಿಕೊಡುವುದೂ ಇಂತಹ ವೀರರ ಕಥೆಗಳನ್ನೇ. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ ಇಂತಹ ಕ್ರಾಂತಿಕಾರಿಗಳನ್ನು NCERT ಪುಸ್ತಕಗಳಲ್ಲಿ  “ಭಯೋತ್ಪಾದಕ “ರೆಂದು ಚಿತ್ರಿಸಿರುವ ಕಾಂಗ್ರೆಸ್ಸಿಗರಿಂದ ಆರೆಸ್ಸೆಸ್ ಬಗ್ಗೆ ಒಳ್ಳೆಯ ಮಾತುಗಳನ್ನು ನಿರೀಕ್ಷಿಸಲು ಸಾಧ್ಯವೇ? ಕಳೆದ ವಾರ ಸಿಎನ್ ಎನ್-ಐಬಿಎನ್ ಚಾನೆಲ್ ನ  “ಡೆವಿಲ್ಸ್ ಅಡ್ವೊಕೇಟ್  ” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್  “ಆರೆಸ್ಸೆಸ್ ಒಂದು ಬಾಂಬ್ ತಯಾರಿಸುವ ಕಾರ್ಖಾನೆ ” ಎಂದಿದ್ದಾರೆ! 2008ರಲ್ಲಿ ಮುಂಬೈ ಮೇಲೆ ದಾಳಿಯಾದಾಗಲೂ ಹಿಂದು ಭಯೋತ್ಪಾದಕರ ಕೈವಾಡವಿರಬಹುದು ಎಂದಿದ್ದ ಆಗಿನ ಕೇಂದ್ರ ಸಚಿವ ಎ.ಆರ್. ಅಂಟುಳೆ ಆರೆಸ್ಸೆಸ್ ನತ್ತ ಬೆರಳು ತೋರಿದ್ದರು. ಅದರ ಬೆನ್ನಲ್ಲೇ ತಮ್ಮ ಆಚಾರವಿಲ್ಲದ ನಾಲಗೆಯನ್ನು ಹೊರ ಹಾಕಿದ್ದ ದಿಗ್ವಿಜಯ್ ಸಿಂಗ್,  “ಮುಂಬೈ ದಾಳಿಯಲ್ಲಿ ಮಡಿದ ಹೇಮಂತ್ ಕರ್ಕರೆ ದಾಳಿಗಿಂತ 2 ಗಂಟೆ ಮೊದಲು ನನಗೆ ಕರೆ ಮಾಡಿ, ಹಿಂದು ಕಟ್ಟರ್ ವಾದಿಗಳಿಂದ ನನಗೆ ಜೀವ ಬೆದರಿಕೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು ” ಎನ್ನುವ ಮೂಲಕ ಮತ್ತೆ ಆರೆಸ್ಸೆಸ್-ವಿಶ್ವ ಹಿಂದು ಪರಿಷತ್ ಬಗ್ಗೆಯೇ ಸಲ್ಲದ ಟೀಕೆ ಮಾಡಿದ್ದರು. ಮೊನ್ನೆ ಜುಲೈ 13ರಂದು ಕಸಬ್ ಜನ್ಮದಿನದ ಕೊಡುಗೆ ರೂಪದಲ್ಲಿ ಮತ್ತೆ ಮುಂಬೈ ಮೇಲೆ ಆಕ್ರಮಣವಾದಾಗಲೂ ದಿಗ್ವಿಜಯ್ ಆರೆಸ್ಸೆಸ್ ನ ಕೈವಾಡದ ಬಗ್ಗೆ ಶಂಕೆ ವ್ಯಕ್ತಪಡಿಸಿದರು. ನನ್ನ ಬಳಿ ಸಾಕ್ಷ್ಯಾಧಾರವಿದೆ ಎಂದೂ ಪ್ರತಿಪಾದಿಸಿದರು. ಈತ ಎಂತಹ ಹರುಕುಬಾಯಿಯ ವ್ಯಕ್ತಿ ಎಂಬುದು ಇಡೀ ದೇಶಕ್ಕೇ ಗೊತ್ತಾಗಿದೆ. ಟ್ವಿಟ್ಟರ್ ನಲ್ಲಿ  “ಡಿಗ್ಗಿಲೀಕ್ಸ್  ” ಎಂಬ ಒಂದು ಥ್ರೆಡ್ ಇದ್ದರೆ, ಫೇಸ್ ಬುಕ್, ಆರ್ಕುಟ್ ಗಳಲ್ಲಿ ನಾಯಿಯ ಮುಸುಡಿಗೆ ಇವರ ಮುಖ ಅಂಟಿಸಿ,  “DOGvijay “  ಎಂದೇ ಸಂಬೋಧಿಸಲಾಗುತ್ತಿದೆ! ಹಾಗಿದ್ದರೂ ಮಾಧ್ಯಮಗಳೇಕೆ ಇಂತಹ ಮತಿಗೇಡಿ ಮನುಷ್ಯನ ಮಾತಿಗೆ ಸಲ್ಲದ ಪ್ರಚಾರ ಕೊಟ್ಟು ಆರೆಸ್ಸೆಸ್ಸನ್ನು ಪದೇ ಪದೆ ಕಟಕಟೆಗೆ ತಂದು ನಿಲ್ಲಿಸಲು, ಸಮಜಾಯಿಸಿ ನೀಡಬೇಕಾದ ಅನಿವಾರ್ಯತೆ ಸೃಷ್ಟಿಸಲು ಪ್ರಯತ್ನಿಸುತ್ತವೆ? ಪಾಕಿಸ್ತಾನದ ಅಬೋಟಾಬಾದ್್ನಲ್ಲಿ ಅಡಗಿದ್ದ ಒಸಾಮ ಬಿನ್ ಲಾಡೆನ್ ನನ್ನು ಕಳೆದ ಮೇ 2ರಂದು ಅಮೆರಿಕ ಪತ್ತೆಹಚ್ಚಿ ಕೊಂದಾಗ,  “ಒಸಾಮಾಜಿ ” ಎಂದು ಸಂಬೋಧಿಸಿದ್ದ ಈ ವ್ಯಕ್ತಿಯ ಯೋಗ್ಯತೆ ಏನೆಂದು ಗೊತ್ತಾಗಿಲ್ಲವೇ? ಆತನ ಮಾತಿಗೆ ಎಷ್ಟು ಬೆಲೆ ಕೊಡಬೇಕೆಂಬುದು ತಿಳಿದಿಲ್ಲವೆ? ಏಕೆ ಆರೆಸ್ಸೆಸ್ಸನ್ನು ಹಳಿಸಲು ಇಂತಹ ಅಯೋಗ್ಯ ವ್ಯಕ್ತಿಗಳನ್ನು ಬಳಸಿಕೊಳ್ಳುತ್ತಾರೆ?

ಅದಿರಲಿ, ಕಳೆದ ಎಂಟೂವರೆ ದಶಕಗಳಿಂದ ರಾಷ್ಟ್ರಚಿಂತನೆಯ ಪ್ರಸಾರದಲ್ಲಿ, ರಾಷ್ಟ್ರಭಕ್ತಿಯನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿರುವ ಆರೆಸ್ಸೆಸ್್ನಲ್ಲಾಗಲಿ, ಅದಕ್ಕೆ ಹೊಂದಿಕೊಂಡಿರುವ ವಿಶ್ವ ಹಿಂದು ಪರಿಷತ್್ನಲ್ಲಾಗಲಿ ಅಸೀಮಾನಂದ, ಪ್ರಗ್ಯಾಸಿಂಗ್, ಇಂದ್ರೇಶ್ ಕುಮಾರ್ ಮುಂತಾದ ಕೋಪಾಗ್ನಿಗಳು ಏಕೆ ಸೃಷ್ಟಿಯಾದವು? ಈ ಬಗ್ಗೆ ದಿಗ್ವಿಜಯ್ ಸಿಂಗ್ ಅವರು ಹಾಗೂ ಅವರ ಮಾಧ್ಯಮ ಮಿತ್ರರು ಒಸಾಮನ ವಂಶಸ್ಥರನ್ನೇ ಪ್ರಶ್ನಿಸಬಹುದಲ್ಲವೆ? 900 ವರ್ಷಗಳ ಮುಸ್ಲಿಂ ಆಕ್ರಮಣಕಾರರ ದೌರ್ಜನ್ಯ, 150 ವರ್ಷಗಳ ಬ್ರಿಟಿಷ್ ದೌರ್ಜನ್ಯವನ್ನೇ ಸಹಿಸಿಕೊಂಡಿದ್ದ ಹಿಂದುಗಳಲ್ಲಿ ಈಗೇಕೆ ಕೋಪಾಗ್ನಿ ಸ್ಫೋಟಗೊಳ್ಳುತ್ತಿದೆ? ಮಾಲೆಗಾಂವ್ ಸ್ಫೋಟ, ಅಜ್ಮೇರ್ ದುರಂತಗಳು ಏಕೆ ಸಂಭವಿಸಿದವು? ಮುಸ್ಲಿಮರು ಭಯೋತ್ಪಾದನೆಯತ್ತ ಆಕರ್ಷಿತಗೊಳ್ಳಲು ಅನಕ್ಷರತೆ, ನಿರುದ್ಯೋಗ, ಹಿಂದು ಕೋಮುವಾದ ಹೀಗೆ ಕಾರಣ ಹುಡುಕುತ್ತಾರಲ್ಲಾ ಹಿಂದುಗಳ ಪ್ರತಿದಾಳಿಗೆ ಎಡೆಮಾಡಿಕೊಟ್ಟಿರುವ ಕಾರಣವನ್ನೂ ಹುಡುಕಬಹುದಲ್ಲವೆ? ಇನ್ನು ಎಷ್ಟು ವರ್ಷ ಅಂತ ಇಸ್ಲಾಮಿಕ್ ಭಯೋತ್ಪಾದನೆಯನ್ನು ಸಹಿಸಿಕೊಳ್ಳಬೇಕು? ಸುಮ್ಮನೆ ಕುಳಿತರೆ ಯಾವ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಕಾಶ್ಮೀರಿ ಪಂಡಿತರ ಉದಾಹರಣೆ ಕಣ್ಣಮುಂದಿಲ್ಲವೆ? ಇಸ್ಲಾಮಿಕ್ ಭಯೋತ್ಪಾದನೆಯನ್ನು ನಮ್ಮ ಸರ್ಕಾರವೇ ತಹಬಂದಿಗೆ ತರುವ ದಾಢಸಿತನ ತೋರಿದ್ದರೆ ಹಿಂದುಗಳ ಆಕ್ರೋಶಕ್ಕೆ ಕಾರಣವೇ ಇರುತ್ತಿರಲಿಲ್ಲ, ಅಲ್ಲವೆ?

1947ರಲ್ಲಿ ದೇಶ ವಿಭಜನೆಯಾದಾಗ ಪೂರ್ವಪಾಕಿಸ್ತಾನದಲ್ಲಿ (ಬಾಂಗ್ಲಾದೇಶ) 30 ಪರ್ಸೆಂಟ್ ಇದ್ದ ಹಿಂದುಗಳ ಸಂಖ್ಯೆ ಈಗ ಎಷ್ಟಿದೆ? 1991ರ ಬಾಂಗ್ಲಾ ಜನಗಣತಿಯ ಪ್ರಕಾರ ಹಿಂದುಗಳ ಸಂಖ್ಯೆ 10.5 ಪರ್ಸೆಂಟ್! ಇವತ್ತು ಆ ಪ್ರಮಾಣ 5 ಪರ್ಸೆಂಟ್್ಗಿಂತಲೂ ಕೆಳಗಿಳಿದಿದೆ. ಇದಕ್ಕೆ ಯಾರು ಕಾರಣ? ಇದುವರೆಗೂ 2 ಕೋಟಿ ಬಾಂಗ್ಲಾ ಹಿಂದುಗಳು ಕಣ್ಮರೆಯಾಗಿದ್ದಾರೆ. ಒಂದೋ ಅವರು ಬಲವಂತವಾಗಿ ಮತಾಂತರಗೊಂಡಿದ್ದಾರೆ, ಇಲ್ಲವೆ ಮಸಣ ಸೇರಿದ್ದಾರೆ. ಈ ಮಧ್ಯೆ ನಮ್ಮ ಪಶ್ಚಿಮ ಬಂಗಾಳದಲ್ಲಿ 1947ರಲ್ಲಿ ಶೇ 12ರಷ್ಟಿದ್ದ ಮುಸ್ಲಿಮರ ಸಂಖ್ಯೆ ಇವತ್ತು 26 ಪರ್ಸೆಂಟ್ ದಾಟಿದೆ! ಅದು ಸಾಲದೆಂಬಂತೆ ದೀಪಾವಳಿಯ ಮುನ್ನಾದಿನ ರಾಜಧಾನಿ ದಿಲ್ಲಿಯಲ್ಲಿ ಹಬ್ಬದ ಖರೀದಿಯಲ್ಲಿ ತೊಡಗಿದ್ದ 65 ಹಿಂದೂಗಳನ್ನು ಬಾಂಬ್ ಸ್ಫೋಟಿಸಿ ಕೊಂದರು, ಅಕ್ಷರಧಾಮದ ಮೇಲೆ ಆಕ್ರಮಣ ಮಾಡಿದರು. ಇಂತಹ ಘಟನೆಗಳನ್ನು ಹಿಂದುಗಳು ಎಷ್ಟು ದಿನ ಅಂತ ಸಹಿಸಿಕೊಂಡು ಕುಳಿತುಕೊಳ್ಳಬೇಕು? ಹಿಂದುಗಳು ಬಂದೂಕು ಎತ್ತುವಂತೆ, ಬಾಂಬಿಡುವಂತೆ ಮಾಡಿದವರಾರು? ಆತ್ಮರಕ್ಷಣೆಗಾಗಿ ಬಾಂಬ್ ಮೂಲಕವೇ ಪ್ರತ್ಯುತ್ತರ ನೀಡಲು ಹೊರಟರೆ ಅದನ್ನು ಹೇಗೆ ಭಯೋತ್ಪಾದನೆ ಎನ್ನಲು ಸಾಧ್ಯ? 1972ರ ಮ್ಯೂನಿಕ್ ಒಲಿಂಪಿಕ್ಸ್ ವೇಳೆ ಇಸ್ರೇಲಿ ಕ್ರೀಡಾ ತಂಡವನ್ನು ಒತ್ತೆಯಾಗಿ ತೆಗೆದುಕೊಂಡು ಕಗ್ಗೊಲೆಗೈದ ಇಸ್ಲಾಮಿಕ್ ಭಯೋತ್ಪಾದಕರು ಹಾಗೂ ಅವರಿಗೆ ಬೆಂಬಲ ಕೊಟ್ಟವರನ್ನು ಇಸ್ರೇಲ್ ಹೆಕ್ಕಿ ಕೊಲ್ಲಲಿಲ್ಲವೆ? 9/11 ದಾಳಿಗೆ ಪ್ರತಿಯಾಗಿ ಅಮೆರಿಕ ಅಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಲಿಲ್ಲವೆ? ಒಸಾಮನನ್ನು ಬೆನ್ನಟ್ಟಿ ಹೋಗಿ ಕುಕ್ಕಿ ಸಾಯಿಸಲಿಲ್ಲವೆ? ಪಾಕಿಸ್ತಾನದ ಪರಮಮಿತ್ರ ಚೀನಾವೇ ತನ್ನ ನೆಲದಲ್ಲಿ ತಲೆಯೆತ್ತಿರುವ ಇಸ್ಲಾಮಿಕ್ ಭಯೋತ್ಪಾದನೆಗೆ ಮೊನ್ನೆ ಪಾಕಿಸ್ತಾನವನ್ನು ದೂರಿಲ್ಲವೆ? ಸ್ಥಳೀಯರ ಸಹಾಯವಿಲ್ಲದೆ ಮುಂಬೈನಂಥ ದಾಳಿಯನ್ನು, ಹೈದರಾಬಾದ್್ನ ಲುಂಬಿನಿ ಗಾರ್ಡನ್, ದಿಲ್ಲಿ, ಪುಣೆಯ ಜರ್ಮನ್ ಬೇಕರಿ ಸ್ಫೋಟಗಳಂಥ ದಾಳಿಗಳನ್ನು ಮಾಡಲು ಸಾಧ್ಯವಿತ್ತೆ? ಅಸೀಮಾನಂದ, ಪ್ರಗ್ಯಾಸಿಂಗ್್ರಂಥವರು ಇಂತಹ ದಾಳಿಗಳಿಂದ ಸೃಷ್ಟಿಯಾದ ಪ್ರತ್ಯಾಸ್ತ್ರಗಳೆನಿಸುವುದಿಲ್ಲವಾ?

ಈ ದೇಶ ಇಬ್ಭಾಗವಾಗಲು ಕಾರಣವಾದ ಮುಸ್ಲಿಂ ಲೀಗ್ ನ ಹೆಸರನ್ನಿಟ್ಟುಕೊಂಡಿರುವವರ ಜತೆ ಸೇರಿ ಕೇರಳದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ಸಿಗರಿಗೆ ಆರೆಸ್ಸೆಸ್ ಎಂಥ ರಾಷ್ಟ್ರವಾದಿ ಸಂಘಟನೆ, ಹಿಂದುಗಳ ಆತಂಕಗಳೇನು ಎಂಬುದು ಹೇಗೆ ತಾನೇ ಅರ್ಥವಾದೀತು?

Leave a Reply

Your email address will not be published.

This site uses Akismet to reduce spam. Learn how your comment data is processed.