by Du Gu Lakshman
ಒಂದು ರಾಜ್ಯದಲ್ಲಿ ೧೫ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣ ಘಟಿಸಿದ್ದರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಒಂದು ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ೫ ಮಂದಿ ನಾಯಕರು ನಿರ್ವಹಿಸುತ್ತಿದ್ದರೆ ಅದರ ದುಷ್ಪರಿಣಾಮ ಏನಾಗಬಹುದು?
ಈ ಪ್ರಶ್ನೆಗೆ ಉತ್ತರ – ಇದೀಗ ಪಶ್ಚಿಮ ಉತ್ತರ ಪ್ರದೇಶದ ಮುಝಫರ್ ನಗರದಲ್ಲಿ ನಡೆದಿರುವ ವಿದ್ಯಮಾನ. ಅಲ್ಲಿ ಕೋಮು ದಳ್ಳುರಿ ಭುಗಿಲೆದ್ದು ೫೦ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಸ್ಮಶಾನ ಮೌನ ಎಲ್ಲೆಡೆ ಆವರಿಸಿದೆ. ಆ ರಾಜ್ಯದ ಆಡಳಿತ ಯಂತ್ರ ನಿಸ್ತೇಜವಾಗಿದೆ. ಇಷ್ಟೆಲ್ಲ ನಡೆದಿದ್ದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಓಟ್ಬ್ಯಾಂಕನ್ನು ಭದ್ರಪಡಿಸಿ ಗೆಲ್ಲುವ ಬಗೆ ಹೇಗೆ ಎಂಬ ತಂತ್ರಗಾರಿಕೆ ಹೆಣೆಯುವಲ್ಲಿ ಅಲ್ಲಿನ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಆಡಳಿತ ಪಕ್ಷ ನಿರತವಾಗಿರುವುದು ಏನನ್ನು ಸೂಚಿಸುತ್ತದೆ? ಸಮಾಜವಾದಿ ಪಕ್ಷಕ್ಕೆ ಯಾವುದೇ ಜನಪರ ಕಾಳಜಿ ಬೇಕಿಲ್ಲ. ಮುಸ್ಲಿಂ ತುಷ್ಟೀಕರಣ ಮಾತ್ರ ಅದಕ್ಕೆ ಬೇಕಾಗಿರುವುದು ಎಂದಲ್ಲವೆ?
ಮುಝಫರ್ ನಗರ ಜಿಲ್ಲೆಯಲ್ಲಿ ಕೋಮುಗಲಭೆ ಇದ್ದಕ್ಕಿದ್ದಂತೆ ಭುಗಿಲೆದ್ದಿದ್ದಲ್ಲ. ೨೦೧೨ರ ಆಗಸ್ಟ್ ೨೩ರಿಂದಲೇ ಈ ಕೋಮುಗಲಭೆಗೆ ಬೀಜ ಬಿತ್ತಲಾಗಿತ್ತು. ೨೦೧೨ರ ಆಗಸ್ಟ್ ೧೫ರಂದು ಸಹರನ್ಪುರದ ಸರ್ಸವಾ ನಗರದಲ್ಲಿ ಬೆಳಿಗ್ಗೆ ಶಾಲಾ ಮಕ್ಕಳು ಸ್ವಾತಂತ್ರ್ಯ ದಿನದ ಅಂಗವಾಗಿ ಪ್ರಭಾತ್ಫೇರಿ (ಬೆಳಗಿನ ಮೆರವಣಿಗೆ) ನಡೆಸಿದ್ದರು. ಇದ್ದಕ್ಕಿದ್ದಂತೆ ಸಮಾಜವಿರೋಧಿ ವ್ಯಕ್ತಿಗಳು ಏನೂ ಅರಿಯದ ಆ ಅಮಾಯಕ ಮಕ್ಕಳ ಮೇಲೆ ಲಾಠಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದರು. ಹಾಗಿದ್ದರೆ ಸ್ವಾತಂತ್ರ್ಯದ ದಿನ ಅದಕ್ಕೆ ಪೂರಕವಾಗಿ ಪ್ರಭಾತ್ಫೇರಿ ನಡೆಸುವುದು ತಪ್ಪೆ? ಅದೇನು ಪ್ರಜಾತಂತ್ರ ವಿರೋಧಿ ಕೃತ್ಯವೆ? ಆದರೆ ಈ ದೌರ್ಜನ್ಯದ ವಿರುದ್ಧ ಒಬ್ಬನೇ ಒಬ್ಬ ಸೆಕ್ಯುಲರ್ವಾದಿ ಧ್ವನಿಯೆತ್ತಲಿಲ್ಲ. ಇಂತಹ ರಾಷ್ಟ್ರ ವಿರೋಧಿ ಕೃತ್ಯವನ್ನು ಯಾರೊಬ್ಬರೂ ಖಂಡಿಸುವ ಗೋಜಿಗೇ ಹೋಗಲಿಲ್ಲ.
ಕೆಲವು ತಿಂಗಳ ಹಿಂದೆ ಕೆಲವು ಸಮಾಜವಿರೋಧಿ ವ್ಯಕ್ತಿಗಳು ಮುಝಫರ್ ನಗರಕ್ಕೆ ತಾಗಿಕೊಂಡಿರುವ ದೇವ್ಬಂದ್ ಇಸ್ಲಾಮಿಕ್ ಅಧ್ಯಯನ ಕೇಂದ್ರಕ್ಕೆ ಬಲಾತ್ಕಾರವಾಗಿ ನುಗ್ಗಿ ಹಿಂಸಾಚಾರದಲ್ಲಿ ತೊಡಗಿದರು. ಅಲ್ಲಿನ ಸರ್ಕಾರಿ ವಿಶ್ರಾಂತಿ ಕೊಠಡಿಯ ಕಿಟಕಿಗಳನ್ನು ಪುಡಿಪುಡಿ ಮಾಡಿ, ಅಲ್ಲಿದ್ದ ಅಧಿಕಾರಿಗಳನ್ನು ಅಟ್ಟಾಡಿಸಿಕೊಂಡು ಹೋದರು. ಈ ಘಟನೆಯ ಬಗ್ಗೆಯೂ ಯಾರೂ ಸೊಲ್ಲೆತ್ತಲಿಲ್ಲ.
ಸಾಮೂಹಿಕ ಅತ್ಯಾಚಾರ ಸರಣಿ
ಅದೆಲ್ಲ ಹಾಗಿರಲಿ, ಮುಝಫರ್ ನಗರ ಜಿಲ್ಲೆಯಾದ್ಯಂತ ನಡೆದ ಅತ್ಯಾಚಾರ ಪ್ರಕರಣಗಳನ್ನು ಕೇಳಿದರೆ ಯಾರಿಗಾದರೂ ಷಾಕ್ ಆಗಲೇಬೇಕು. ೨೦೧೨ ಆ. ೨೩: ಶಾಲಾ ಬಾಲಕಿಯೊಬ್ಬಳ ಮೇಲೆ ಐವರು ಯುವಕರು ಸಾಮೂಹಿಕ ಅತ್ಯಾಚಾರ. ೨೦೧೨ ಡಿ. ೨೪: ಮುಝಫರ್ ನಗರದಲ್ಲಿ ಮೂವರು ಯುವಕರು ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ. ೨೦೧೨ ಡಿ. ೨೯: ಬಾಲಕಿಯರ ಶಾಲೆಯ ಅಧ್ಯಾಪಕಿಯ ಮೇಲೆ ಲೈಂಗಿಕ ದಾಳಿ. ೨೦೧೨ ಡಿ. ೩೦: ಮುಝಫರ್ ನಗರದಲ್ಲಿ ಇಬ್ಬರು ಮಹಿಳೆಯರ ಮೇಲೆ ಆಸಿಡ್ ದಾಳಿ. ೨೦೧೩ ಫೆ. ೧೮: ನಾಲ್ವರು ಗಂಡಸರಿಂದ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ. ಅಷ್ಟೇ ಅಲ್ಲ, ಆ ಅತ್ಯಾಚಾರ ಪ್ರಕರಣವನ್ನು ಚಿತ್ರೀಕರಿಸಲಾಯಿತು. ೨೦೧೩ ಏ. ೧೩: ಮುಝಫರ್ ನಗರದಲ್ಲಿ ಮೂವರು ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳ ಮೇಲೆ ಆಸಿಡ್ ದಾಳಿ. ೨೦೧೩ ಜೂ. ೩: ಮುಝಫರ್ ನಗರದಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ. ೨೦೧೩ ಜು. ೮: ಸಾಮೂಹಿಕ ಅತ್ಯಾಚಾರ ಎಸಗಿದವರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಹೊಡೆದು ಕೊಲೆ. ೨೦೧೩ ಜು. ೧೯: ಮಹಿಳೆಯೊಬ್ಬಳ ಬಲವಂತ ಮದುವೆ. ಅನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ. ೨೦೧೩ ಆ. ೩೦: ೧೧ ವರ್ಷದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಕ್ಕೆ ಮುಸ್ಲಿಂ ಮೌಲ್ವಿಯೊಬ್ಬನ ಬಂಧನ. ೨೦೧೩ ಆ. ೨೯: ದೇಗುಲದ ಬಳಿಯೊಂದರಲ್ಲಿ ಮಹಿಳಾ ಭಕ್ತೆಯರ ಮಾನಭಂಗ…
– ಹೀಗೆ ಒಂದಾದ ಮೇಲೊಂದರಂತೆ ಇಂತಹ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ನಡೆದರೆ ಏನಾಗಬಹುದು? ಮೇಲೆ ತಿಳಿಸಿದ ಎಲ್ಲ ಪ್ರಕರಣಗಳಲ್ಲೂ ಅತ್ಯಾಚಾರಕ್ಕೀಡಾದ ಬಾಲಕಿಯರು ಹಾಗೂ ಮಹಿಳೆಯರು ಹಿಂದೂ ಜಾಟ್ ಜನಾಂಗಕ್ಕೆ ಸೇರಿದವರು. ಅತ್ಯಾಚಾರ ಮಾಡಿದವರು ಮುಸ್ಲಿಂ ಜನಾಂಗಕ್ಕೆ ಸೇರಿದವರು. ಹಿಂದುಗಳನ್ನು ಆಸೆ, ಆಮಿಷ ಒಡ್ಡಿ ಮುಸ್ಲಿಂ ಧರ್ಮಕ್ಕೆ ಮತಾಂತರಿಸುವ ನೂತನ ಹಾಗೂ ಆಕರ್ಷಕ ತಂತ್ರ ‘ಲವ್ ಜಿಹಾದ್’ ಇಲ್ಲೆಲ್ಲ ಕೆಲಸ ಮಾಡಿದೆ. ಮುಝಫರ್ ನಗರ ಜಿಲ್ಲೆಯಲ್ಲಿ ಬಹು ಸಂಖ್ಯಾತರಾಗಿರುವ ಜಾಟ್ ಜನಾಂಗದ ಯುವತಿಯರನ್ನೇ ಗುರಿಯಾಗಿರಿಸಿ ಮತಾಂಧ ಮುಸ್ಲಿಮರು ಲವ್ ಜಿಹಾದ್ ತಂತ್ರ ಹೆಣೆದಿದ್ದಾರೆ. ಆದರೆ ಈ ತಂತ್ರಕ್ಕೆ ಮರುಳಾಗದವರ ಮೇಲೆ ಬಲವಂತವಾಗಿ ಅತ್ಯಾಚಾರವೆಸಗಲಾಗಿದೆ. ಒಂದೆರಡು ಇಂತಹ ಘಟನೆಗಳು ನಡೆದ ಕೂಡಲೇ ಆಡಳಿತ ಯಂತ್ರ ಎಚ್ಚೆತ್ತುಕೊಂಡು ಬಿಗಿಯಾದ ಕ್ರಮ ಕೈಗೊಂಡಿದ್ದರೆ, ಅತ್ಯಾಚಾರದ ಆರೋಪಿಗಳನ್ನು ಒದ್ದು ಒಳಗೆ ಹಾಕಿದ್ದರೆ ಮುಝಫರ್ ನಗರದಲ್ಲಿ ಕೋಮು ಗಲಭೆ ಭುಗಿಲೇಳುವ ಸಾಧ್ಯತೆ ಖಂಡಿತ ಇರುತ್ತಿರಲಿಲ್ಲ. ಆದರೆ ಪದೇಪದೇ, ಅವ್ಯಾಹತವಾಗಿ ಇಂತಹ ಅತ್ಯಾಚಾರ ಘಟನೆಗಳು ನಡೆದಾಗ ಅಲ್ಲಿನ ಹಿಂದುಗಳು ಆಗಲೂ ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವೆ? ಅದರಲ್ಲೂ ಸ್ವಾಭಿಮಾನಧನರಾದ, ಮಹಿಳೆಯರನ್ನು ವಿಶೇಷವಾಗಿ ಗೌರವಿಸುವ ಜಾಟ್ ಜನಾಂಗ ತೆಪ್ಪಗಿರಬೇಕಾಗಿತ್ತೆಂದು ಯಾರಾದರೂ ಹೇಳಿದರೆ ಅದಕ್ಕೇನಾದರೂ ಅರ್ಥವಿದೆಯ?
ತಿರುಗಿಬಿದ್ದ ಹಿಂದುಗಳು
ಮುಸ್ಲಿಮರ ಈ ಅತ್ಯಾಚಾರ ಪ್ರಕರಣಗಳಿಂದ ಕಡು ನೊಂದ ಹಿಂದುಗಳು ‘ಬಹು – ಬೇಟಿ ಬಚಾವೋ ಮಹಾಪಂಚಾಯತ್’ (ಸೊಸೆ, ಮಗಳ ರಕ್ಷಣೆಯ ಮಹಾಪಂಚಾಯತ್) ನಡೆಸಲು ನಿರ್ಧರಿಸಿದರು. ೨೦೧೩ ಸೆ. ೭ರಂದು ನಾಗ್ಲಾಮಂದೌರ್ನಲ್ಲಿ ನಡೆದ ಇಂತಹ ಮಹಾಪಂಚಾಯತ್ ಸಮ್ಮೇಳನದಲ್ಲಿ ೧.೨ ಲಕ್ಷದಷ್ಟು ಬೃಹತ್ ಸಂಖ್ಯೆಯ ಹಿಂದುಗಳು ಪಾಲ್ಗೊಂಡಿದ್ದುದು ಅವರ ಆಕ್ರೋಶ ಎಷ್ಟು ಹೆಪ್ಪುಗಟ್ಟಿತ್ತು ಎಂಬುದಕ್ಕೆ ಸಾಕ್ಷಿ. ಆ ಸಮ್ಮೇಳನದಲ್ಲಿ ಭಾರತೀಯ ಕಿಸಾನ್ ಸಂಘದ ರಾಕೇಶ್ ಟಿಕಾಯತ್, ನರೇಶ್ ಟಿಕಾಯತ್ ಮತ್ತಿತರ ಹಿಂದೂ ಮುಖಂಡರು ಸೇರಿದಂತೆ ಅನೇಕರು ಪಾಲ್ಗೊಂಡು ಹಿಂದೂ ಹೆಣ್ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿ ಸರ್ಕಾರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದನ್ನು ಖಂಡತುಂಡವಾಗಿ ಖಂಡಿಸಿದರು. ಆ ಸಮ್ಮೇಳನ ಮುಗಿಸಿಕೊಂಡು ವಾಪಸ್ ಬರುತ್ತಿದ್ದವರ ಮೇಲೂ ಮಸೀದಿಯ ಬಳಿ ಮತ್ತೆ ಹಲ್ಲೆ ನಡೆದು, ಕೋಮುಗಲಭೆ ಇನ್ನಷ್ಟು ಭುಗಿಲೇಳುವುದಕ್ಕೆ ಕಾರಣವಾಯಿತು.
ಹುಸಿಯಾದ ಭರವಸೆ
ಅಖಿಲೇಶ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಅನೇಕರು ಆತನ ಬಗ್ಗೆ ಭಾರೀ ಭರವಸೆ ಇಟ್ಟುಕೊಂಡಿದ್ದರು. ಉ. ಪ್ರ. ರಾಜ್ಯ ಹಿಂಸಾಚಾರ, ಅತ್ಯಾಚಾರ, ದೌರ್ಜನ್ಯಮುಕ್ತ ರಾಜ್ಯವಾಗಬಹುದೆಂದು ಆಶಾಭಾವನೆ ಹೊಂದಿದ್ದರು. ಆದರೆ ಆದz ಬೇರೆ. ೨೦೧೨ರ ಒಂದೇ ವರ್ಷದಲ್ಲಿ ಆ ರಾಜ್ಯ ನೂರಕ್ಕೂ ಹೆಚ್ಚು ಕೋಮು ಗಲಭೆಗಳಿಗೆ ಸಾಕ್ಷಿಯಾಗಿದೆ. ಅಖಿಲೇಶ್ ಅಧಿಕಾರಕ್ಕೆ ಬಂದ ಬಳಿಕ ಹಳ್ಳಿಗಳಲ್ಲಿ ಖದೀಮರು ನಿರ್ಭಯವಾಗಿ ಗೋವುಗಳನ್ನು ಕದ್ದೊಯ್ಯತೊಡಗಿದ್ದಾರೆ. ಕಳ್ಳತನ, ದರೋಡೆ ಹಳ್ಳಿಗಳಲ್ಲಿ ಸಾಮಾನ್ಯ ಪ್ರಸಂಗವೆನಿಸಿಬಿಟ್ಟಿದೆ. ಅಕಸ್ಮಾತ್ ಪೊಲೀಸರು ಇಂತಹ ಕಳ್ಳ ಖದೀಮರನ್ನು ಬಂಧಿಸಿದರೆ, ಅವರು ಪೊಲೀಸ್ ಠಾಣೆಗೆ ತಲುಪುವಷ್ಟರಲ್ಲೇ ಸಮಾಜವಾದಿ ಪಕ್ಷದ ಪ್ರಭಾವೀ ಮುಖಂಡರಿಗೆ ಫೋನ್ಗಳು ಹೋಗುತ್ತವೆ. ತಕ್ಷಣ ಬಂಧಿಸಿದವರನ್ನು ಬಿಡುಗಡೆ ಮಾಡಲಾಗುತ್ತದೆ. ಇನ್ನು ಹಿಂದೂ ಹುಡುಗಿಯರನ್ನು ಚುಡಾಯಿಸುವುದಂತೂ ಆ ರಾಜ್ಯದಲ್ಲಿ ಒಂದು ಅಪರಾಧವೇ ಅಲ್ಲ. ಇಂತಹ ಕೃತ್ಯದ ಬಗ್ಗೆ ಯಾರಾದರೂ ಧ್ವನಿಯೆತ್ತಿದರೆ ಅದು ಹಿಂಸಾಚಾರಕ್ಕೆ ನಾಂದಿ ಹಾಡಿದಂತೆಯೇ. ಹಾಗಾಗಿ ಪೊಲೀಸರು ಕೂಡ ಇಂತಹ ಪರಿಸ್ಥಿತಿಯಲ್ಲಿ ಅಸಹಾಯಕರಾಗಿ ಕೈಚೆಲ್ಲಬೇಕಾಗುತ್ತದೆ. ಆಡಳಿತ ವ್ಯವಸ್ಥೆಯ ಹಾಗೂ ಪೊಲೀಸರ ಕೈಗಳನ್ನು ಕಟ್ಟಿ ಹಾಕಲಾಗಿರುವುದು ಸಾಮಾನ್ಯ ಜನರಲ್ಲಿ ಅಭದ್ರತೆಯ ಹಾಗೂ ಭೀತಿಯ ವಾತಾರವಣವನ್ನೇ ಸೃಷ್ಟಿಸಿದೆ.
ದುರ್ಗಾಶಕ್ತಿ ನಾಗಪಾಲ್ ಎಂಬ ದಿಟ್ಟ ಐಎಎಸ್ ಅಧಿಕಾರಿಯನ್ನು ಸರ್ಕಾರವೇ ಅಮಾನತುಗೊಳಿಸಿದ ಬಳಿಕ ಇಡೀ ರಾಜ್ಯದ ಪೊಲೀಸ್ ಹಾಗೂ ಆಡಳಿತ ಯಂತ್ರದ ನೈತಿಕತೆಯೇ ಉಡುಗಿ ಹೋಗಿದೆ. ಯಾವುದೇ ಅಹಿತಕರ ಪ್ರಕರಣ ನಡೆದಿದ್ದು ಗಮನಕ್ಕೆ ಬಂದರೂ ಪೊಲೀಸರು ಹಾಗೂ ಸರ್ಕಾರಿ ಅಧಿಕಾರಿಗಳು ಅದರ ವಿರುದ್ಧ ತಾವಾಗಿಯೇ ಕ್ರಮ ಕೈಗೊಳ್ಳಲು ಹೋಗುತ್ತಿಲ್ಲ. ಅಖಿಲೇಶ್ ಸಂಪುಟದಲ್ಲಿ ಅತ್ಯಂತ ಪ್ರಭಾವೀ ಸಚಿವನಾಗಿರುವ ಅಝಂಖಾನ್ಗೆ ಇವರೆಲ್ಲರೂ ಹೆದರುತ್ತಾರೆ. ಮುಸ್ಲಿಂ ದುಷ್ಕರ್ಮಿಗಳ ವಿರುದ್ಧ ಯಾರಾದರೂ ಕ್ರಮ ಕೈಗೊಂಡಲ್ಲಿ ಅಝಂಖಾನ್ನ ಕೋಪಕ್ಕೆ ತುತ್ತಾಗಿ, ಅಮಾನತು ಇಲ್ಲವೇ ಕೆಲಸ ಕಳೆದುಕೊಳ್ಳುವ ಶಿಕ್ಷೆಗೆ ಗುರಿಯಾಗಬೇಕಾಗಿದೆ.
ನಿರುದ್ಯೋಗ ಸಮಸ್ಯೆಯಂತೂ ಉತ್ತರಪ್ರದೇಶದಾದ್ಯಂತ ತಾಂಡವವಾಡುತ್ತಿದೆ. ೨೦೧೪ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ಹೇಗಾದರೂ ಪರಿಹರಿಸಬೇಕೆಂಬ ಧಾವಂತದಲ್ಲಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿರುವುದು ಕಣ್ಣಿಗೆ ಹೊಡೆದಂತೆ ಎದ್ದು ಕಾಣುತ್ತಿದೆ. ಅಖಿಲೇಶ್ ಸಿಂಗ್ ಅಧಿಕಾರಕ್ಕೆ ಬರುವ ಮುನ್ನ ಎಲ್ಲ ನಿರುದ್ಯೋಗಿ ಯುವಕರಿಗೆ ಲ್ಯಾಪ್ಟಾಪ್ ಕೊಡಿಸುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು. ಅದನ್ನು ಪೂರೈಸುವುದಕ್ಕಾಗಿ ಇದೀಗ ಲ್ಯಾಪ್ಟಾಪ್ ವಿತರಣೆ ಆರಂಭಗೊಂಡಿದೆ. ಆದರೆ ಆ ಲ್ಯಾಪ್ಟಾಪ್ಗಳು ದೊರಕುವುದು ಕೇವಲ ಮುಸ್ಲಿಂ ಯುವಕರಿಗೆ ಮಾತ್ರ! ಇದು ಹಿಂದೂ ಯುವಕರ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಒಬ್ಬರಲ್ಲ, ಐವರು ಮುಖ್ಯಮಂತ್ರಿಗಳು!
ಅಷ್ಟೇಕೆ, ಉತ್ತರಪ್ರದೇಶದ ಸರ್ಕಾರ ಹೇಗೆ ನಡೆಯುತ್ತಿದೆ ಎಂದು ಯಾವುದೇ ಮಕ್ಕಳಿಗೆ ಪ್ರಶ್ನೆ ಹಾಕಿದರೆ, ಅವರು ಹೇಳುವ ಉತ್ತರವೇನು ಗೊತ್ತೆ? ಉ.ಪ್ರ.ದ ಮುಖ್ಯಮಂತ್ರಿ ಯಾರೆಂದು ಕೇಳಿದರೆ ಅವರು ‘ಮುಖ್ಯಮಂತ್ರಿಯಲ್ಲ , ಮುಖ್ಯಮಂತ್ರಿಗಳು’ ಎಂದು ಪ್ರಶ್ನೆ ಕೇಳಿದವರನ್ನೇ ತಿದ್ದುತ್ತಾರೆ. ಅದು ವಾಸ್ತವ ಕೂಡ ಹೌದು! ಉತ್ತರಪ್ರದೇಶವನ್ನು ಈಗ ಆಳುತ್ತಿರುವವರು ಅಖಿಲೇಶ್ ಸಿಂಗ್ ಒಬ್ಬರೇ ಅಲ್ಲ. ಅವರೇನೋ ಹೆಸರಿಗೆ ಮುಖ್ಯಮಂತ್ರಿ, ಅಷ್ಟೇ! ಆದರೆ ಮುಖ್ಯಮಂತ್ರಿಯ ಅಧಿಕಾರ ಚಲಾಯಿಸುತ್ತಿರುವ ಇನ್ನೂ ನಾಲ್ವರಿದ್ದಾರೆ. ಅವರೆಂದರೆ ಅತ್ಯಂತ ಪ್ರಭಾವೀ ಸಚಿವ ಅಝಂಖಾನ್, ಅಖಿಲೇಶ್ ಅವರ ಚಿಕ್ಕಪ್ಪಂದಿರಾದ ಶಿವಪಾಲ್ ಯಾದವ್ ಮತ್ತು ರಾಂಗೋಪಾಲ್ ಯಾದವ್ ಹಾಗೂ ಇವರೆಲ್ಲರಿಗೂ ಮಿಗಿಲಾಗಿ ಎಸ್ಪಿ ವರಿಷ್ಠ ಮುಲಾಯಂಸಿಂಗ್ ಯಾದವ್! ಹೀಗೆ ೫ ಮಂದಿ ಮುಖ್ಯಮಂತ್ರಿಗಳು ಅಧಿಕಾರವನ್ನು ಚಲಾಯಿಸಿದರೆ ಆ ರಾಜ್ಯದ ಗತಿ ಏನಾಗಬಹುದು ಎಂಬುದಕ್ಕೆ ಮುಝಫರ್ ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕೋಮು ಗಲಭೆಯೇ ಇದಕ್ಕೆ ಸಾಕ್ಷಿ.
ಅಖಿಲೇಶ್ ಸಿಂಗ್ ಸರ್ಕಾರವೇನೋ ಬಿಜೆಪಿ ಮತ್ತು ಬಿಎಸ್ಪಿ ಮುಖಂಡರೇ ಈ ಗಲಭೆಗಳು ಹೊತ್ತಿ ಉರಿಯುವುದಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಸರ್ಕಾರದ ವಿರುದ್ಧ ಈ ಮುಖಂಡರು ಷಡ್ಯಂತ್ರ ಹೆಣೆದಿದ್ದಾರೆ ಎಂದೂ ದೂರಿದ್ದಾರೆ. ಆದರೆ ಇದು ತನ್ನ ವೈಫಲ್ಯವನ್ನು ರಕ್ಷಿಸಿಕೊಳ್ಳಲು ಆಡುತ್ತಿರುವ ಮಾತು ಎಂಬುದು ಪ್ರತಿಯೊಬ್ಬರಿಗೂ ಗೊತ್ತು. ಉ.ಪ್ರ. ಸರ್ಕಾರ ಕಾನೂನು, ಸುವ್ಯವಸ್ಥೆ, ಶಿಕ್ಷಣ, ಮಹಿಳೆಯರ ರಕ್ಷಣೆ… ಹೀಗೆ ಎಲ್ಲ ರಂಗಗಳಲ್ಲೂ ಸಂಪೂರ್ಣ ವಿಫಲವಾಗಿವೆ. ಸಮಾಜವಾದಿ ಪಕ್ಷದ ಕೆಲವು ಮುಖಂಡರೇ ‘ಅಖಿಲೇಶ್ ಒಬ್ಬ ನಿಷ್ಪ್ರಯೋಜಕ ಮುಖ್ಯಮಂತ್ರಿ’ ಎಂದು ಈಗ ಭುಸುಗುಡುತ್ತಿದ್ದಾರೆ. ಹಾಗಿಲ್ಲದಿದ್ದರೆ ೫೦ಕ್ಕೂ ಹೆಚ್ಚು ಜನರು ಕೊಲೆಗೀಡಾದರೂ ಆರೋಪಿಗಳ ವಿರುದ್ಧ ಒಂದೇ ಒಂದು ದಿಟ್ಟ ಕ್ರಮ ಕೈಗೊಳ್ಳಲು ಅಖಿಲೇಶ್ಗೆ ಏಕೆ ಸಾಧ್ಯವಾಗಲಿಲ್ಲ?
ಗೋಹತ್ಯೆ, ಭೂವಿವಾದ, ಅಕ್ರಮ ಧಾರ್ಮಿಕ ಕೇಂದ್ರಗಳ ನಿರ್ಮಾಣ ಮುಂತಾದ ಕಾನೂನುಬಾಹಿರ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದ್ದರೂ ಉ.ಪ್ರ. ಆಡಳಿತ ಕೈಕಟ್ಟಿ ಕುಳಿತಿದೆ. ಇದು ಹಿಂದುಗಳೆಲ್ಲರಿಗೂ ಅತ್ಯಂತ ನೋವು ತಂದ ಸಂಗತಿಯಾಗಿತ್ತು. ಸಮಾಜವಾದಿ ಪಕ್ಷದಲ್ಲಿರುವ ಹಿಂದೂ ಮುಖಂಡರು ಕೂಡ ಈ ಬಗ್ಗೆ ಸೊಲ್ಲೆತ್ತದಿರುವುದು ಹಿಂದುಗಳಿಗೆ ಇನ್ನಷ್ಟು ಆಘಾತವುಂಟು ಮಾಡಿದೆ. ಸಮಾಜವಾದಿ ಪಕ್ಷದಲ್ಲಿರುವ ಹಿಂದೂ ಮುಖಂಡರೂ ಕೂಡ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮುಸ್ಲಿಮರ ಹಿತಾಸಕ್ತಿಗಳ ಓಲೈಕೆಯಲ್ಲೇ ನಿರತರಾಗಿರುವುದು ಹಿಂದೂ ಸಮಾಜವನ್ನು ಸಿಟ್ಟಿಗೆಬ್ಬಿಸಿದೆ. ಸಮಾಜವಾದಿ ಪಕ್ಷದಿಂದ ಕ್ರಮೇಣ ಹಿಂದುಗಳು ದೂರ ಸರಿಯುತ್ತಿರುವುದಕ್ಕೆ ಇದೂ ಕೂಡ ಬಹುಮುಖ್ಯ ಕಾರಣ.
ಇದರ ಪರಿಣಾಮ ಸ್ವರೂಪವೇ, ಇದೀಗ ಹಿಂದೂ ಸಂಘಟನೆಗಳು, ಬಿಜೆಪಿ, ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಒಗ್ಗೂಡಿ ರಾಜ್ಯದಲ್ಲಿ ಹಿಂಸಾಚಾರವನ್ನು ಹರಡುತ್ತಿರುವ ಕಿಡಿಗೇಡಿಗಳ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕೆಂದು ಒಕ್ಕೊರಲಿನಿಂದ ಆಗ್ರಹಿಸುತ್ತಿರುವುದು. ದೇವ್ಬಂದ್, ನಾಗಾಲ್, ಗಾಗಲ್ಹೇದಿ, ಬೆಹತ್, ರಾಂಪುರ್ ಮಣಿಹರನ್, ಸರ್ಸವಾ, ನಾಕುಡ್, ಗಾಂಗೊವ್, ಮುಝಫರ್ ನಗರ, ಶಾಮ್ಲಿ ನಗರ ಮೊದಲಾದ ಕಡೆಗಳಲ್ಲಿ ನಡೆದ ಹಿಂಸಾಚಾರದ ವಿರುದ್ಧ ಆಡಳಿತ ಸಮಾಜವಾದಿ ಪಕ್ಷ ಉಗ್ರಕ್ರಮ ಕೈಗೊಳ್ಳಬೇಕೆಂದು ಈ ಎಲ್ಲಾ ಪಕ್ಷಗಳೂ ಬಲವಾಗಿ ಆಗ್ರಹಿಸಿವೆ. ಆದರೆ ಅಖಿಲೇಶ್ ಸಿಂಗ್ ಸರ್ಕಾರ ಮಾತ್ರ ಹೀಗೆ ದೂರು ಕೊಟ್ಟ ಪಕ್ಷಗಳ ಮುಖಂಡರನ್ನೇ ಬಂಧಿಸಿ, ಅವರ ವಿರುದ್ಧ ಕ್ರಿಮಿನಲ್ ಕೇಸ್ಗಳನ್ನು ಹಾಕುತ್ತಿದೆ. ಹಿಂಸಾಚಾರದ ಘಟನೆಗಳ ಹಿಂದಿರುವ ದುಷ್ಕರ್ಮಿಗಳು ಮಾತ್ರ ಹಾಯಾಗಿ ತಿರುಗಾಡಿಕೊಂಡಿದ್ದಾರೆ.
ತಮ್ಮ ಹೆಣ್ಣು ಮಕ್ಕಳನ್ನು ಮುಸ್ಲಿಂ ಗೂಂಡಾಗಳಿಂದ ರಕ್ಷಿಸಲು ಉತ್ತರ ಪ್ರದೇಶದ ಹಿಂದುಗಳಿಗೆ ಇದ್ದ ಒಂದೇ ಮಾರ್ಗ ಎಂದರೆ ಜಾತಿ, ಮತಭೇದ ಮರೆತು ಒಂದಾಗುವುದು. ‘ಬಹು ಬೇಟಿ ಬಚಾವೋ ಮಹಾ ಪಂಚಾಯತ್’ ಸಮ್ಮೇಳನಕ್ಕೆ ಲಕ್ಷಲಕ್ಷ ಜನ ಒಗ್ಗೂಡುತ್ತಿರುವುದೂ ಅದೇ ಕಾರಣಕ್ಕೆ. ಇಷ್ಟನ್ನೂ ಮಾಡದೆ ಹಿಂದುಗಳು ತಮ್ಮ ಹೆಣ್ಣು ಮಕ್ಕಳ ಮಾನ ಹರಾಜಾಗುವುದನ್ನು ನೋಡಿ ಕೈಕಟ್ಟಿ ಕುಳಿತುಕೊಳ್ಳಬೇಕಾಗಿತ್ತೆ?
ಕೇವಲ ೧೮ ತಿಂಗಳ ತನ್ನ ಅಧಿಕಾರದ ಅವಧಿಯಲ್ಲೇ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ನೂರಕ್ಕೂ ಹೆಚ್ಚು ಹಿಂಸಾಚಾರ ಹಾಗೂ ಕೋಮುಗಲಭೆಗಳನ್ನು ನಿಯಂತ್ರಿಸಲಾಗದೆ ಅಸಹಾಯಕರಾಗಿಬಿಟ್ಟರೆ, ಇನ್ನುಳಿದ ೪೨ ತಿಂಗಳುಗಳಲ್ಲಿ ಅದೆಷ್ಟು ಇಂತಹ ಘಟನೆಗಳಿಗೆ ಆ ರಾಜ್ಯ ಸಾಕ್ಷಿಯಾಗಬೇಕಾದೀತು! ನೆನೆಸಿಕೊಂಡರೆ ಅಲ್ಲಿನ ಪ್ರಜೆಗಳಿಗೆ ಮೈ ಜುಂ ಎನ್ನದೆ ಇರಲು ಸಾಧ್ಯವೆ? ಗುಜರಾತ್ನ ಗೋಧ್ರಾ ಗಲಭೆಯ ಬಗ್ಗೆ ಅವಕಾಶ ಸಿಕ್ಕಾಗಲೆಲ್ಲ ಬಾಯಿಬಾಯಿ ಬಡಿದುಕೊಳ್ಳುವ ಸೆಕ್ಯುಲರ್ವಾದಿಗಳು, ಸೆಕ್ಯುಲರ್ ಮೀಡಿಯಾಗಳು, ಸೆಕ್ಯುಲರ್ ಬುದ್ಧಿಜೀವಿಗಳು ಮುಝಫರ್ ನಗರದ ಸರಣಿ ಗಲಭೆಗಳ ಬಗ್ಗೆ ಏಕೆ ಮೌನವಹಿಸಿದ್ದಾರೆ? ನರೇಂದ್ರ ಮೋದಿಯನ್ನು ‘ಸಾವಿನ ವ್ಯಾಪಾರಿ’ ಎಂದು ಜರೆಯುವವರಿಗೆ ಅಖಿಲೇಶ್ ಸಿಂಗ್ರನ್ನು ‘ಸಾವಿನ ವ್ಯಾಪಾರಿ’ ಎಂದು ಜರೆಯುವ ಧೈರ್ಯ ಏಕಿಲ್ಲ? ಉತ್ತರ ಪ್ರದೇಶ ಸರ್ಕಾರ ರಾಜೀನಾಮೆ ಕೊಡಬೇಕೆಂದು ಈ ಮಂದಿ ಏಕೆ ಆಗ್ರಹಿಸುತ್ತಿಲ್ಲ?
ಈ ಪ್ರಶ್ನೆಗಳಿಗೆ ಉತ್ತರ ನಿಮಗೆ ಗೊತ್ತಿರದೇ ಇರಲಿಕ್ಕೆ ಸಾಧ್ಯವೆ?