Aziz Burney

by Du Gu Lakshman

“ಪಾರ್ಲಿಮೆಂಟ್ ಭವನದ ಮೇಲೆ ದಾಳಿ ಹಾಗೂ ಮುಂಬೈಯಲ್ಲಿ ನಡೆದ ೨೬/೧೧ರ ದಾಳಿಯನ್ನು ಸಂಘಟಿಸಿದ್ದು ಸರ್ಕಾರವೇ. ಸರ್ಕಾರವು ಪಾರ್ಲಿಮೆಂಟ್‌ನಲ್ಲಿ ಒಂದು ನಿರ್ದಿಷ್ಟ ಸಮುದಾಯದ ಜನರನ್ನು ಗುರಿಯಾಗಿರಿಸಿಕೊಂಡು ಭಯೋತ್ಪಾದನೆ ವಿರುದ್ಧ ಕಠಿಣ ಕಾನೂನು ರೂಪಿಸಲು ಇಚ್ಛಿಸಿತ್ತು. ಆದರೆ ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಂಡರೆ, ಅದು ಆ ಸಮುದಾಯಕ್ಕೆ ಹೇಗೆ ನೆರವಾದೀತು? ಅದರಿಂದ ಭಯೋತ್ಪಾದನೆಯನ್ನು ತಡೆಗಟ್ಟಬಹುದೇ? ಇಲ್ಲ, ಖಂಡಿತ ಸಾಧ್ಯವಿಲ್ಲ… ಪ್ರಜಾತಂತ್ರದ ೪ನೇ ಆಧಾರಸ್ತಂಭ ಕೂಡ ಈ ಬಗ್ಗೆ ತೆಪ್ಪಗಿದ್ದಿದ್ದು ನನಗೆ ಆಶ್ಚರ್ಯವೆನಿಸಿದೆ…” (ಅಜೀಜುಲ್‌ಹಿಂದ್, ಜು. ೧೮, ೨೦೧೩)

Aziz Burney
Aziz Burney

“ವಕ್ಫ್ ಮಂಡಳಿಯ ಅನೇಕ ಮಸೀದಿಗಳು ಸರ್ಕಾರದ ಅಧೀನದಲ್ಲಿದ್ದು ಅಲ್ಲಿ ನಮಾಜ್ ಸಲ್ಲಿಸುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಈ ಮಸೀದಿಗಳಲ್ಲಿ ನಮಾಜು ಸಲ್ಲಿಸುವಂತೆ ಮಾಡಲು ಒಂದು ದೊಡ್ಡ ಚಳವಳಿ ನಡೆಯುವ ಅಗತ್ಯವಿಲ್ಲವೆ? ನಾನು ನನ್ನ ಪತ್ರಿಕೆ ಮೂಲಕ ಈ ಚಳುವಳಿಯನ್ನು ಆರಂಭಿಸಲು ನಿರ್ಧರಿಸಿರುವೆ. ಆದ್ದರಿಂದಲೇ ಮೊದಲ ದಿನದಿಂದಲೇ ಮಸೀದಿಗಳಿಗೆ ನನ್ನ ಪತ್ರಿಕೆಯಲ್ಲಿ ವಿಶೇಷ ಆದ್ಯತೆ ನೀಡಿರುವೆ. ನನ್ನ ಪತ್ರಿಕೆಯು ಮಸೀದಿಗಳ ಪ್ರವೇಶ ದ್ವಾರದಲ್ಲೇ ಲಭ್ಯವಿದೆ. ಆ ಪತ್ರಿಕೆಯ ಮಾರಾಟದ ನಾಲ್ಕನೇ ಒಂದು ಭಾಗವನ್ನು ಆ ಮಸೀದಿಯ ಇಮಾಂಗೆ ಕೊಡಲಾಗುವುದು” (ಅಜೀಜುಲ್‌ಹಿಂದ್, ಜೂ.೧೧, ೨೦೧೩)

“ಕಳೆದ ೬೩ ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಅನೇಕ ದಂಗೆಗಳಲ್ಲಿ ಹೆಚ್ಚು ಆಸ್ತಿಪಾಸ್ತಿ ನಷ್ಟವಾಗಿರುವುದು ಮುಸ್ಲಿಮರಿಗೇ. ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಮುಸ್ಲಿಂ ವಿರೋಧಿ ಶಕ್ತಿಗಳನ್ನು ನಿರಂತರವಾಗಿ ಬಲಪಡಿಸಲಾಗುತ್ತದೆ. ಕೋಮುದಂಗೆಗಳ ಸಂದರ್ಭಗಳಲ್ಲಿ ಅಂತಹ ಮುಸ್ಲಿಂ ವಿರೋಧಿ ಶಕ್ತಿಗಳನ್ನು ಮುಸ್ಲಿಮರನ್ನು ಸದೆಬಡಿಯಲು ಸಾಧನವನ್ನಾಗಿ ಬಳಸಲಾಗುತ್ತಿದೆ. ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಅಡಿಯಿಂದ ಮುಡಿಯವರೆಗೆ ಇರುವವರೆಲ್ಲರೂ ಮುಸ್ಲಿಂ ವಿರೋಧಿಗಳು. ದಂಗೆಯ ಸಂದರ್ಭದಲ್ಲಿ ಅವರೆಲ್ಲರೂ ಹಿಂದೂ ದಂಗೆಕೋರರನ್ನು ಬೆಂಬಲಿಸುತ್ತಾರೆ. ಆದ್ದರಿಂದ ಮಹಾರಾಷ್ಟ್ರ ಪೊಲೀಸ್ ಇಲಾಖೆ ಮುಸ್ಲಿಮರನ್ನು ಅವರ ಜನಸಂಖ್ಯೆಗೆ ತಕ್ಕ ಪ್ರಮಾಣದಲ್ಲಿ ನಿಯುಕ್ತಿಗೊಳಿಸಬೇಕು… ಮಹಾರಾಷ್ಟ್ರದಲ್ಲಿ ಒಟ್ಟು ಇರುವ ಪೊಲೀಸರ ಸಂಖ್ಯೆ ೧.೯೮ ಲಕ್ಷ. ಮಹಾರಾಷ್ಟ್ರದಲ್ಲಿರುವ ಮುಸ್ಲಿಮರ ಪ್ರಮಾಣ ಶೇ.೧೩.೫. ಆದರೆ ಪೊಲೀಸ್ ಪಡೆಯಲ್ಲಿರುವ ಮುಸ್ಲಿಮರಾದರೋ ಕೇವಲ ಶೇ.೩.೫. ಇದು ನ್ಯಾಯವೆ?” (ಅಜೀಜ್‌ಜುಲ್‌ಹಿಂದ್, ಜು. ೮, ೨೦೧೩)

“ಮಥುರಾ ಬಾಂಬ್‌ಸ್ಫೋಟ ಪ್ರಕರಣದಲ್ಲಿ ವಿಹೆಚ್‌ಪಿ ನಾಯಕ ಜಗದೀಶ್ ಅನಂತ್ ಅವರನ್ನು ಬಂಧಿಸಲಾಯಿತು. ಆದರೆ ಮಥುರಾದ ಎಸ್‌ಎಸ್‌ಪಿ ಅವರು ಜಗದೀಶ್ ಅನಂತ್ ಬಾಂಬ್‌ಸ್ಫೋಟಕ್ಕೆ ಮುನ್ನವೇ ಬಾಂಬ್‌ಸ್ಫೋಟದ ಜಾಗದಲ್ಲಿದ್ದರು ಎಂದು ಮಾಹಿತಿ ನೀಡಿದ್ದರು. ಹೀಗಿರುವಾಗ ಟಿ.ವಿ. ಚಾನೆಲ್‌ಗಳೇಕೆ ಇದನ್ನು ಪ್ರಸಾರ ಮಾಡಲಿಲ್ಲ? ಅದೇ ಒಬ್ಬ ಮುಸ್ಲಿಂ ಅಥವಾ ಮುಸ್ಲಿಂ ಸಂಘಟನೆ ಈ ಕೃತ್ಯ ಮಾಡಿದ್ದರೆ ಅದನ್ನು ಟಿ.ವಿ. ಚಾನೆಲ್‌ಗಳು ಹಾಗೂ ಪತ್ರಿಕೆಗಳು ಪ್ರಸಾರ ಮಾಡುತ್ತಿದ್ದವು. ಮಾಧ್ಯಮಗಳು ದುಷ್ಕರ್ಮಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿವೆ.” (ಅಜೀಜ್‌ಜುಲ್‌ಹಿಂದ್, ಜು.೨, ೨೦೧೩)

– ಮೇಲಿನ ಈ ಎಲ್ಲ ವಿವಾದಾತ್ಮಕ ಸುದ್ದಿ ವಿಶ್ಲೇಷಣೆಗಳನ್ನು ಪ್ರಕಟಪಡಿಸಿರುವ ಪತ್ರಿಕೆಯ ಹೆಸರು ಅಜೀಜುಲ್‌ಹಿಂದ್. ಅದೊಂದು ಉರ್ದು ಪತ್ರಿಕೆ. ಅದರ ಸಂಪಾದಕನ ಹೆಸರು ಅಜೀಜ್ ಬರ್ನಿ ಎಂದು. ಈ ಪತ್ರಿಕೆ ಪ್ರಕಟವಾಗುತ್ತಿರುವುದು ದೆಹಲಿಯಿಂದ. ಅಜೀಜ್ ಬರ್ನಿಯೇ ಆ ಪತ್ರಿಕೆಯ ಸಂಪಾದಕ, ಪ್ರಕಾಶಕ ಹಾಗೂ ಮಾಲೀಕ. ಅಜೀಜಿ ಬರ್ನಿಯ ಜೀವನಶೈಲಿ, ಗತ್ತುಗೈರತ್ತು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆತ ವಾಸಿಸುತ್ತಿರುವುದು ಒಂದು ವಿಲಾಸೀ ಬಂಗಲೆಯಲ್ಲಿ. ಆತನ ಬಳಿ ಅನೇಕ ಲಕ್ಷುರಿ ಕಾರುಗಳಿವೆ. ಪ್ರತೀ ೨-೩ ದಿನಗಳಿಗೊಮ್ಮೆ ಆತ ಊರಿಂದೂರಿಗೆ ಪ್ರಯಾಣಿಸುವುದು ವಿಮಾನದಲ್ಲೇ. ಹಾಗೆ ಊರಿಂದೂರಿಗೆ ಹೋಗುವ ಮೊದಲೇ ಆತ ಆ ಊರಿನ ಸಂಘಟಕರಿಗೆ ತನ್ನ ಯಾವುದೇ ಕಾರ್ಯಕ್ರಮಕ್ಕೆ ಕನಿಷ್ಠ ಒಂದು ಲಕ್ಷ ರೂ. ಖರ್ಚು ಮಾಡಬೇಕೆಂದು  ಅಪ್ಪಣೆ ಕೊಟ್ಟಿರುತ್ತಾನೆ. ೮ ರಾಜ್ಯಗಳಲ್ಲಿ ೩೦ ಆವೃತ್ತಿಗಳ ಸಹಿತ ೧೦ ಪತ್ರಿಕೆಗಳನ್ನು ಪ್ರಕಟಿಸಿ ಆತ ಮಾಧ್ಯಮ ಲೋಕದಲ್ಲಿ ಒಂದು ಚರಿತ್ರೆಯನ್ನೇ ನಿರ್ಮಿಸಿದ್ದಾನೆ. ಇದಲ್ಲದೆ ಉರ್ದು-ಹಿಂದಿಯಲ್ಲಿ ಒಂದು ವಾರಪತ್ರಿಕೆ, ಇಂಗ್ಲಿಷ್‌ನಲ್ಲೊಂದು ಮಾಸಪತ್ರಿಕೆಯನ್ನು ಕೇವಲ ೧೦೦ ದಿನಗಳೊಳಗೆ ಆರಂಭಿಸಿದ್ದಾನೆ. ಇವೆಲ್ಲವನ್ನೂ ಗಮನಿಸಿದರೆ ಆತ ಪತ್ರಿಕೋದ್ಯಮ ಮಾಡುತ್ತಿಲ್ಲ, ಆದರೆ ಹೊಸದೊಂದು ದಂಧೆ ಶುರು ಹಚ್ಚಿಕೊಂಡಿದ್ದಾನೆ ಎಂದು ಯಾರಿಗಾದರೂ ಅನಿಸದೇ ಇರದು. ಮುಸ್ಲಿಂ ಸಮುದಾಯದ ಹೆಸರಿನಲ್ಲಿ ಭಾವೋದ್ವೇಗ ಕೆರಳಿಸುತ್ತ, ಸಾಮಾನ್ಯ ಮುಸ್ಲಿಮರನ್ನು ಹಾದಿ ತಪ್ಪಿಸುವುದೇ ಈತನ ಕೆಲಸ.

ಹೀಗೆಂದು ನಾನು ಹೇಳುತ್ತಿರುವುದಲ್ಲ. ‘ಚೌತಿ ದುನಿಯಾ’ ಎಂಬ ಉರ್ದು ಸಾಪ್ತಾಹಿಕ ಪತ್ರಿಕೆಯೇ ಅಜೀಜ್ ಬರ್ನಿಯ ಬಗ್ಗೆ ಹೀಗೆ ಬರೆದಿದೆ. ಒಬ್ಬ ಸಾಧಾರಣ ಮನುಷ್ಯನಾಗಿದ್ದ ಅಜೀಜ್ ಬರ್ನಿಗೆ ಇಷ್ಟೆಲ್ಲ ಕಾರುಬಾರು ನಡೆಸಲು ತಾಕತ್ತು ಬಂದಿದ್ದಾದರೂ ಎಲ್ಲಿಂದ? ಇದ್ದಕ್ಕಿದ್ದಂತೆ ಅವನಿಗೆ ಲಾಟರಿ ಹೊಡೆಯಿತೆ? ಅಥವಾ ಯಾರಾದರೂ ಭಾರೀ ಹಣದ ನೆರವು ನೀಡಿದರೆ? ಹಾಗೇನೂ ಇಲ್ಲದೆ ಆತ ಇಷ್ಟೆಲ್ಲ ಕಾರುಬಾರು ನಡೆಸಲು ಹೇಗೆ ಸಾಧ್ಯ? ಈ ಪ್ರಶ್ನೆಗೂ ಚೌತಿ ದುನಿಯಾ ಪತ್ರಿಕೆಯೇ ಉತ್ತರ ನೀಡಿದೆ. ಅಜೀಜ್ ಬರ್ನಿಯ ಈ ಭಾರೀ ಉದ್ಯಮಕ್ಕೆ ಬೆಂಗಾವಲಾಗಿ ನಿಂತಿರುವವರು ಯುಪಿಎ ಸರ್ಕಾರದ ಅಲ್ಪಸಂಖ್ಯಾತ ಖಾತೆ ಸಚಿವರಾದ ಕೆ.ರೆಹಮಾನ್ ಖಾನ್. ಖಾನ್ ಅವರೇ ಸ್ವ ತಃ ಒಂದು ಉರ್ದು ಪತ್ರಿಕೆಯನ್ನು ನಿರ್ವಹಿಸುತ್ತಿದ್ದಾರೆ. ಹೀಗಿದ್ದೂ ಅವರು ಅಜೀಜ್ ಬರ್ನಿಗೆ ಆರ್ಥಿಕ ನೆರವನ್ನು ಭಾರೀ ಪ್ರಮಾಣದಲ್ಲಿ ನೀಡುತ್ತಿದ್ದಾರೆಂದರೆ ಅವರಿಗೆ ಹಣ ಎಲ್ಲಿಂದ ಬರುತ್ತದೆ? ಆರಂಭದಿಂದಲೂ ಅಜೀಜುಲ್‌ಹಿಂದ್ ಪತ್ರಿಕೆ ಸಮಾಜಘಾತುಕ, ಕೋಮುಭಾವನೆ ಕೆರಳಿಸುವ ಸುದ್ದಿಗಳಿಗೆ ಪ್ರಾಶಸ್ತ್ಯ ನೀಡುತ್ತಿರುವುದು ಎಲ್ಲರ ಗಮನಕ್ಕೂ ಬಂದಿದೆ. ಇದು ದೇಶದ ಕೋಮು ಸಾಮರಸ್ಯವನ್ನೇ ಹಾಳುಗೆಡವಲಿದೆ ಎಂಬುದು ಪ್ರೆಸ್ ಕೌನ್ಸಿಲ್‌ಗೆ ಕೂಡ ತಿಳಿದಿರುವ ಸಂಗತಿ. ಈ ಪತ್ರಿಕೆಯಲ್ಲಿ ಮಸೀದಿಗಳು, ಇಮಾಮರು, ಮದ್ರಸಾ ಈ ವಿಷಯಗಳನ್ನು ಬಿಟ್ಟು ಸಾಮಾನ್ಯ ಮುಸ್ಲಿಮರ ಬದುಕು, ಅವರ ಬಡತನ ಮುಂತಾದ ಜನಪರ ಕಾಳಜಿಯ ವಿಷಯಗಳೇ ಇರುವುದಿಲ್ಲ.

ಇಂತಿಪ್ಪ ಈ ಅಜೀಜ್ ಬರ್ನಿಯ ಹಿನ್ನೆಲೆಯಾದರೂ ಏನು? ಆತನ ಪತ್ರಿಕೋದ್ಯಮದ ಹಿನ್ನೆಲೆಯೇನು? ಪತ್ರಿಕಾ ರಂಗಕ್ಕೆ ಕಾಲಿಟ್ಟ ಬಳಿಕ ಆತನ ಪಾತ್ರವೇನು? ಈ ಪ್ರಶ್ನೆಗಳು ಆತನ ಪತ್ರಿಕೋದ್ಯಮದ ಇನ್ನೊಂದು ಮುಖವನ್ನು ಅನಾವರಣಗೊಳಿಸುತ್ತದೆ. ಆತನ ವಿದ್ಯಾರ್ಹತೆ ಹಾಗೂ ವೃತ್ತಿಪರತೆಯ ಬಗ್ಗೆ ಅಜೀಜ್ ಬರ್ನಿಯೇ ವಾಸ್ತವವನ್ನು ನುಡಿಯುವುದು ಲೇಸು. ಆತನ ನಿಕಟವರ್ತಿಗಳಿಗೇ ಈ ಬಗ್ಗೆ ಏನೂ ಗೊತ್ತಿಲ್ಲ. ಒಮ್ಮೊಮ್ಮೆಯಂತೂ ತನ್ನ ಕುಟುಂಬದ ಸುದ್ದಿಗಳನ್ನೇ ಆತ ಪತ್ರಿಕೆಯ ಹೆಡ್‌ಲೈನ್ ಮಾಡುವುದೂ ಉಂಟು. ೨೦೧೩ರ ಆ. ೮ರ ಸಂಚಿಕೆಯಲ್ಲಿ ತನ್ನ ಮಗಳು ಹಾಗೂ ಅಳಿಯನ ನಡುವಣ ದಾಂಪತ್ಯ ಬಿರುಕು ಬಿಟ್ಟಿರುವುದನ್ನು ಆತ ಹೆಡ್‌ಲೈನ್ ಸುದ್ದಿಯಾಗಿ ಪ್ರಕಟಿಸಿದ್ದಾನೆ. ಅಳಿಯ ಮತ್ತು ಮಗಳು ಇಬ್ಬರ ಚಿತ್ರದ ಜೊತೆಗೆ ‘ನನ್ನ ಮಗಳು ಸಾಬಾ ಹಾಗೂ ಆಕೆಯ ಗಂಡನ ನಡುವೆ ಈಗ ಯಾವ ಸಂಬಂಧವೂ ಉಳಿದಿಲ್ಲ. ನನ್ನ ಅಳಿಯನಾಗಿದ್ದವನ ಜೊತೆ ಯಾರಾದರೂ ಸಂಬಂಧ ಮುಂದುವರಿಸಬೇಕೆಂದು ಬಯಸುವುದೇ ಆದಲ್ಲಿ ಅಂಥವರು ನಮ್ಮ ಕುಟುಂಬವನ್ನು ಮರೆತು ಬಿಡಬೇಕಾಗುತ್ತದೆ. ಈ ಸಂಬಂಧವಾಗಿ ನನ್ನ ಬಳಿ ಯಾರೂ ಮಾತನಾಡಕೂಡದು’ ಎಂದು ಬರೆದುಕೊಂಡಿದ್ದಾನೆ. ತನ್ನ ಮಗಳು ಹಾಗೂ ಅಳಿಯನ ನಡುವಿನ ದಾಂಪತ್ಯದ ಬಿರುಕಿನ ವಿಷಯ ತೀರಾ ಖಾಸಗಿಯಾದದ್ದು. ಅದನ್ನೇ ಆತ ತನ್ನ ಪತ್ರಿಕೆಯ ಹೆಡ್‌ಲೈನ್ ಮಾಡುತ್ತಾನೆಂದರೆ ಅಜೀಜ್ ಬರ್ನಿ ಯಾವ ಮಟ್ಟದ ಪತ್ರಿಕೋದ್ಯಮಿ ಎಂದು ಯಾರಾದರೂ ಊಹಿಸಬಹುದು. ಆತನ ಪತ್ರಿಕೆಯಲ್ಲಿ ಪ್ರಕಟವಾಗುವುದೆಲ್ಲವೂ ಸುಳ್ಳು ಸುದ್ದಿಗಳು, ವಿಶ್ವಾಸಾರ್ಹವಲ್ಲದ ತಿರುಚಿದ ಲೇಖನಗಳು. ಮಾನಹಾನಿಕರ ಸುದ್ದಿಗಳು, ಮುಸ್ಲಿಂ ಸಮುದಾಯದ ಮುಗ್ಧರನ್ನು ಕೆರಳಿಸುವ ಸಂಗತಿಗಳೇ ಆಗಿವೆ. ಆತನ ಪತ್ರಿಕೆಗೆ ಇದೇ ಬಂಡವಾಳ! ೨೬/೧೧ರ ಮುಂಬೈ ಸ್ಫೋಟದ ಪ್ರಮುಖ ಭಯೋತ್ಪಾದಕ ಅಜ್ಮಲ್ ಕಸಬ್ ಬಗ್ಗೆ ಬರ್ನಿಗೆ ಈಗಲೂ ಅದೇನೋ ಸಹಾನುಭೂತಿ. ನ್ಯಾಯಾಲಯವೇ ಕಸಬ್‌ಗೆ ಶಿಕ್ಷೆ ನೀಡಿ ಗಲ್ಲಿಗೇರಿಸಿದ್ದರೂ ಬರ್ನಿ ಮಾತ್ರ ಆತ ಅಪರಾಧಿಯೇ ಅಲ್ಲ ಎಂದು ಆಗಾಗ ತನ್ನ ಪತ್ರಿಕೆಯಲ್ಲಿ ಅಲವತ್ತುಕೊಳ್ಳುತ್ತಲೇ ಇರುತ್ತಾನೆ. ಅಜೀಜ್ ಬರ್ನಿ ದೃಷ್ಟಿಯಲ್ಲಿ ಮುಂಬೈ ಸ್ಫೋಟ ಪ್ರಕರಣದ ಹಿಂದಿರುವುದು ಆರೆಸ್ಸೆಸ್ ಕೈವಾಡ! ಇದೇ ಹಿನ್ನೆಲೆಯಲ್ಲಿ ಬರ್ನಿ ‘ಆರೆಸ್ಸೆಸ್ ಕೀ ಸಾಜಿಷ್ – ೨೬/೧೧?’ ಎಂಬ ವಿವಾದಾತ್ಮಕ ಪುಸ್ತಕವನ್ನು ಬರೆದಿದ್ದಾನೆ. ಈ ಪುಸ್ತಕದಲ್ಲಿ ಪಾಕಿಸ್ಥಾನದ ಪರವಾದ ಸಹಾನುಭೂತಿ ಎದ್ದು ಕಾಣುತ್ತದೆ. ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದು ಮಾತ್ರ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್. ಮುಂಬೈಯಲ್ಲಿ ೨೬/೧೧ರ ಸ್ಫೋಟ ಪ್ರಕರಣ ನಡೆದಾಗ ಬರ್ನಿ ಕರಾಚಿಯಲ್ಲಿದ್ದ. ಆತನಿಗೆ ಅದೇ ಸಮಯದಲ್ಲಿ ಅಲ್ಲೇನು ಅಂತಹ ಘನಾಂದಾರಿ ಕೆಲಸವಿತ್ತು? ಎಂದು ಹಿರಿಯ ಪತ್ರಕರ್ತ ಸೈಯದ್ ಅಸ್ದರ್ ಆಲಿ ಪ್ರಶ್ನಿಸಿದ್ದಾರೆ.

ಹೀಗೆ ರಾಷ್ಟ್ರೀಯ ಐಕ್ಯತೆಗೆ ಕೊಳ್ಳಿಯಿಡುವ, ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೊಡ್ಡುವ, ಮೂರ್ಖತನದ ಅಸಂಬದ್ಧ ಬರವಣಿಗೆಯನ್ನೇ ಮಾಡುವ ಇಂತಹ ವಿವಾದಾತ್ಮಕ ವ್ಯಕ್ತಿಯನ್ನು ಲಾಲಾಲಜಪತ್‌ರಾಯ್, ಬಿಪಿನ್ ಚಂದ್ರಪಾಲ್, ಬಾಲಗಂಗಾಧರ ತಿಲಕ್ ಅಥವಾ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರಂಥವರಿಗೆ ಹೋಲಿಸುವುದು ಎಷ್ಟರಮಟ್ಟಿಗೆ ಸಮಂಜಸ? ಉರ್ದು ಪತ್ರಕರ್ತರೇ ಅಜೀಜ್ ಬರ್ನಿಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿಲ್ಲ. ಅವರೆಲ್ಲ  ಆತನನ್ನು ಉಪೇಕ್ಷಿಸಿದ್ದಾರೆ. ಸಂದರ್ಭ ಸಿಕ್ಕಿದಾಗಲೆಲ್ಲ ಉರ್ದು ಪತ್ರಕರ್ತರು ಬರ್ನಿಗೆ ಹಿಡಿಶಾಪ ಹಾಕುತ್ತಾರೆ. ಆದರೆ ಅಂತಹ ಅಯೋಗ್ಯನನ್ನು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ೨೦೦೯ರ ಜೂನ್ ೧೩ರಂದು ಹಾಡಿ ಹೊಗಳಿದರೆಂದರೆ ಅದಕ್ಕಿಂತ ದುರಂತ ಇನ್ನಾವುದು? ಸೋನಿಯಾ ಗಾಂಧಿಯಂಥ ಸರ್ಕಾರದ ಆಡಳಿತ ಸೂತ್ರ ಹಿಡಿದ ಮುಖ್ಯಸ್ಥರೇ ಬರ್ನಿಯನ್ನು ಹೊಗಳುತ್ತಾರೆಂದರೆ ಆತ ಸರ್ಕಾರದಲ್ಲಿರುವವರ ಮೇಲೆ ಅದು ಹೇಗೆ ಹಿಡಿತ ಸಾಧಿಸಿದ್ದಾನೆಂಬುದು ಚರ್ಚಾರ್ಹ ಸಂಗತಿ. ಅಜೀಜ್ ಬರ್ನಿಯ ತಾಕತ್ತು ಇರುವುದೇ ಇಲ್ಲಿ. ಹಾಗಾಗಿ ಆತ ಭಾರತೀಯ ಪತ್ರಿಕಾಮಂಡಳಿಗೂ ಕೂಡ ಕ್ಯಾರೇ ಎನ್ನುವುದಿಲ್ಲ. ತನ್ನ ಪತ್ರಿಕೆಯ ಜು.೧೨ರ ಸಂಚಿಕೆಯಲ್ಲಿ ಆತ ೨೪ ಮಂದಿ ಉಗ್ರರ ಚಿತ್ರ ಪ್ರಕಟಿಸಿ, ಇವರೆಲ್ಲರೂ ಆರೆಸ್ಸೆಸ್ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎಂದು ಸಂಪಾದಕೀಯದಲ್ಲಿ ಬರೆದಿದ್ದ. ತಾನು ನಿರ್ದಿಷ್ಟ ಸಮುದಾಯವೊಂದರ ಪರವಾಗಿ ಹೋರಾಡುತ್ತಿರುವುದರಿಂದ ಆರೆಸ್ಸೆಸ್ ತನ್ನನ್ನು ಕೊಲ್ಲಲೂಬಹುದು ಎಂದು ಕೂಡ ಸಂಪಾದಕೀಯದಲ್ಲಿ ಬರೆದುಕೊಂಡಿದ್ದ. ನಿಜವಾಗಿ ನೋಡಿದರೆ ಬರ್ನಿ ಸಾರಥ್ಯದ ಅಜೀಜುಲ್‌ಹಿಂದ್ ಒಂದು ಪತ್ರಿಕೆಯೇ ಅಲ್ಲ, ಅದೊಂದು ಕೋಮು ಭಾವನೆ ಕೆರಳಿಸುವ, ರಾಜಕಾರಣಿಗಳಿಂದ ಹಣ ಕೀಳುವ ದಂಧೆಯ ಕರಪತ್ರ, ಅಷ್ಟೇ.

ಅಜೀಜ್ ಬರ್ನಿಯ ನಿಜವಾದ ಉzಶ ಈ ದೇಶವನ್ನು ತನ್ನ ಬರಹದ ಮೂಲಕ ಬರ್ಬಾದ್ ಮಾಡುವುದು. ಅದು ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣವಿರಲಿ, ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣವಿರಲಿ, ದುರ್ಗಾಶಕ್ತಿ ನಾಗ್ಪಾಲ್ ಪ್ರಕರಣ ಇತ್ಯಾದಿ ಯಾವುದೇ ಪ್ರಕರಣಗಳ ಸಂದರ್ಭದಲ್ಲಿ ದೇಶ ಹಿತಕ್ಕೆ ಮಾರಕವಾದ, ಸತ್ಯಕ್ಕೆ ದೂರವಾದ ಸುದ್ದಿಗಳನ್ನೇ ಅಜೀಜ್ ಬರ್ನಿ ಪ್ರಕಟಿಸಿದ್ದಾನೆ. ಕೆಲವು ಸ್ಯಾಂಪಲ್‌ಗಳು ಹೀಗಿವೆ: ‘ಡೇವಿಡ್ ಹೆಡ್ಲಿ ಇಶ್ರತ್ ಜಹಾನ್ ಹೆಸರನ್ನು ಹೇಳಲೇ ಇಲ್ಲ.’ ‘ಮೋದಿಗೆ ಹೆದರಿ ಸಿಬಿಐ ಇಶ್ರತ್ ಜಹಾನ್ ಕೇಸನ್ನು ದುರ್ಬಲಗೊಳಿಸುತ್ತಿದೆ’, ‘ಗುಜರಾತ್‌ನ ಉನ್ನತ ಪೊಲೀಸ್ ಅಧಿಕಾರಿಗಳು ರ‍್ಯಾಂಬೋ ಥರ ಕಾರ್ಯ ನಿರ್ವಹಿಸುತ್ತಿದ್ದಾರೆ’, ‘ಇಶ್ರತ್ ಜಹಾನ್ ಜೊತೆ ಕೊಲೆಗೀಡಾದ ಇನ್ನಿಬ್ಬರ ಬಗ್ಗೆ ಮಾಹಿತಿ ಒದಗಿಸಿದವರಿಗೆ ೫ ಲಕ್ಷ ರೂ…’

ಮುಂಬೈ ಮೇಲಿನ ೨೬/೧೧ರ ದಾಳಿಯ ಹಿಂದೆ ಪಾಕಿಸ್ಥಾನದ ಕೈವಾಡವಿದೆ ಎಂಬುದನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ. ಪ್ರಮುಖ ಆಪಾದಿತ ಕಸಬ್‌ನನ್ನು ನ್ಯಾಯಾಲಯದ ಆದೇಶದಂತೆ ಗಲ್ಲಿಗೇರಿಸಲಾಗಿದೆ. ಆದರೆ ಅಜೀಜ್ ಬರ್ನಿ ಮಾತ್ರ ಇದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಆತನ ದೃಷ್ಟಿಯಲ್ಲಿ ಮುಂಬೈ ಸ್ಫೋಟ ಪ್ರಕರಣದ ಹಿಂದೆ ಅಮೆರಿಕ ಮತ್ತು ಇಸ್ರೇಲ್‌ನ ಷಡ್ಯಂತ್ರವಿದೆಯಂತೆ! ಯಾರೋ ಒಬ್ಬ ಸಾಮಾನ್ಯ ವ್ಯಕ್ತಿ ಹೀಗೆ ಹೇಳಿದ್ದರೆ ಅದೇನೂ ಅಷ್ಟೊಂದು ಅಪರಾಧವೆನಿಸುತ್ತಿರಲಿಲ್ಲ. ಆದರೆ ಒಬ್ಬ ಜವಾಬ್ದಾರಿಯುತ ಪತ್ರಕರ್ತನಾದವನು ಹೀಗೆ ಹೇಳಿದರೆ ಅದು ನ್ಯಾಯಾಂಗ ನಿಂದನೆ ಆಗುತ್ತದೆಂಬ ಪರಿಜ್ಞಾನ ಕೂಡ ಬರ್ನಿಗೆ ಇಲ್ಲ. ಬರ್ನಿಗೆ ಅಸಲಿಗೆ ಭಾರತೀಯ ನ್ಯಾಯಾಲಯಗಳ ಅಥವಾ ಭಾರತೀಯ ಭದ್ರತಾಪಡೆಗಳ ಮೇಲೆ ನಂಬಿಕೆಯೇ ಇಲ್ಲ. ಆತನ ನಂಬಿಕೆ, ನಿಷ್ಠೆ ಏನಿದ್ದರೂ ಪಾಕಿಸ್ಥಾನದ ಪರವಾಗಿ – ಎಂದು ಕಾಣುತ್ತದೆ!

ಉತ್ತರ ಪ್ರದೇಶದ ಐಎಎಸ್ ಅಧಿಕಾರಿ ದುರ್ಗಾಶಕ್ತಿ ನಾಗ್ಪಾಲ್ ಪ್ರಕರಣ ನಮಗೆಲ್ಲ ಗೊತ್ತೇ ಇದೆ. ಉ.ಪ್ರ. ಸರ್ಕಾರ ಆಕೆಯನ್ನು ಕ್ಷುಲ್ಲಕ ಕಾರಣಕ್ಕೆ ಅಮಾನತುಗೊಳಿಸಿ, ಇಡೀ ದೇಶದ ಒತ್ತಡ ಬಂದ ಬಳಿಕ ಇದೀಗ ಆಕೆಯನ್ನು ಮರುನೇಮಕ ಮಾಡಿದೆ. ಮಾಧ್ಯಮಗಳು ದುರ್ಗಾಶಕ್ತಿಯನ್ನು ಸತ್ಯ, ನ್ಯಾಯವನ್ನು ಎತ್ತಿಹಿಡಿದಿರುವ ದಿಟ್ಟ, ದಕ್ಷ ಅಧಿಕಾರಿಯೆಂದು ಬಿಂಬಿಸಿದರೆ, ಅಜೀಜ್ ಬರ್ನಿ ತನ್ನ ಪತ್ರಿಕೆಯಲ್ಲಿ ಆಕೆಯನ್ನು ಖಳ ನಾಯಕಿಯಂತೆ ಚಿತ್ರಿಸಿದ್ದಾನೆ. ‘ಸಂಘ ಪರಿವಾರ ಯಾವುದೇ ಸೆಕ್ಯುಲರ್ ಸರ್ಕಾರ ಇರುವುದನ್ನು ಬಯಸುವುದಿಲ್ಲ. ಉ.ಪ್ರ.ದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರುತ್ತಲೇ ಅಲ್ಲಿ ಕೋಮು ದಂಗೆಗಳಾಗುವಂತೆ ಪ್ರಚೋದಿಸಿದ್ದು ಸಂಘವೇ. ದುರ್ಗಾಶಕ್ತಿಗೆ ಮಸೀದಿ ಗೋಡೆ ಉರುಳಿಸಲು ಪ್ರಚೋದನೆ ನೀಡಿದ್ದೂ ಕೂಡ ಸಂಘವೇ…’ ಹೀಗೆ ಸಂಘದ ವಿರುದ್ಧ ಕೆಂಡ ಕಾರುತ್ತಾ ದುರ್ಗಾಶಕ್ತಿ ಪ್ರಕರಣಕ್ಕೂ ಆರೆಸ್ಸೆಸ್‌ಗೂ ತಳಕು ಹಾಕಿದ್ದಾನೆ. ಅಸಲಿಗೆ ದುರ್ಗಾಶಕ್ತಿಗೆ ಆರೆಸ್ಸೆಸ್ ಅಂದರೆ ಏನೆಂದು ಗೊತ್ತಿದೆಯೋ ಇಲ್ಲವೋ… ಆರೆಸ್ಸೆಸ್‌ಅನ್ನು ನಿಷೇಧಿಸಬೇಕೆಂದು ಆತ ತನ್ನ ಪತ್ರಿಕೆಯ ಮೂಲಕ ಕರೆ ಕೊಟ್ಟಿದ್ದಾನೆ. ಬಜರಂಗದಳ, ಆರೆಸ್ಸೆಸ್, ವಿಶ್ವಹಿಂದೂ ಪರಿಷತ್, ಶಿವಸೇನ, ಬಿಜೆಪಿ ಮುಂತಾದ ಸಂಘಟನೆಗಳು ಇರುವುದೇ ಕಾನೂನನ್ನು ಮುರಿಯುವುದಕ್ಕೆ. ರಾಷ್ಟ್ರ ವಿರೋಧಿ ಕೃತ್ಯಗಳಲ್ಲಿ ಅವೆಲ್ಲ ನಿರತವಾಗಿವೆ. ಹಾಗಾಗಿ ಅವುಗಳನ್ನು ನಿಷೇಧಿಸಬೇಕೆಂದು ಆತ ಅಪ್ಪಣೆ ಕೊಡಿಸುತ್ತಾನೆ. ಆರೆಸ್ಸೆಸ್ ನಿಷೇಧವನ್ನು ಸರ್ಕಾರವೇ ಈ ಹಿಂದೆ ೨ ಬಾರಿ ಬೇಷರತ್ತಾಗಿ ವಾಪಸ್ ಪಡೆದಿರುವುದು, ನ್ಯಾಯಾಲಯವೇ ಆರೆಸ್ಸೆಸ್‌ಅನ್ನು ನಿರ್ದೋಷಿ ಎಂದು ಸಾರಿರುವ ತೀರ್ಪು ಪ್ರಕಟವಾಗಿರುವುದು ಆತನಿಗೆ ಗೊತ್ತೇ ಇಲ್ಲವೆಂದು ಕಾಣುತ್ತದೆ! ಆರೆಸ್ಸೆಸ್ಸನ್ನು ಈ ಕೂಡಲೇ ನಿಷೇಧಿಸಬೇಕೆಂಬುದಕ್ಕೆ ಅಜೀಜ್ ಬರ್ನಿ ಸಮರ್ಥನೆಯಾಗಿ ಕೊಡುವ ಮುಖ್ಯ ಕಾರಣವೇನೆಂದರೆ ದೇಶದಾದ್ಯಂತ ನಡೆಯುವ ಪ್ರತಿಯೊಂದು ಬಾಂಬ್‌ಸ್ಫೋಟ ಪ್ರಕರಣದಲ್ಲೂ ಅದರ ಕೈವಾಡ ಇz ಇರುತ್ತದೆ ಎಂಬುದು! ಹೇಗಿದೆ ಅಜೀಜ್ ಬರ್ನಿಯ ಮಿಥ್ಯಾವಾದದ ಸರಣಿ.

ಇಂಡಿಯನ್ ಮುಜಾಹಿದ್ದೀನ್ ಎಂಬ ಉಗ್ರರ, ದೇಶದ್ರೋಹಿ ಸಂಘಟನೆ ಹೊಸತಾಗಿ ಹುಟ್ಟಿಕೊಂಡಿರುವುದನ್ನು ಭಾರತ ಸರ್ಕಾರ, ಗುಪ್ತಚರ ಇಲಾಖೆ ಮತ್ತಿತರ ಸರ್ಕಾರಿ ಸಂಸ್ಥೆಗಳೇ ಒಪ್ಪಿಕೊಂಡಿವೆ. ಆದರೆ ಅಜೀಜ್ ಬರ್ನಿಯ ಅಜೀಜುಲ್‌ಹಿಂದ್ ಪತ್ರಿಕೆಯ ಪ್ರಕಾರ, ಅಂತಹದೊಂದು ಸಂಘಟನೆಯೇ ಅಸ್ತಿತ್ವದಲ್ಲಿಲ್ಲವಂತೆ! ಇಂಡಿಯನ್ ಮುಜಾಹಿದ್ದೀನ್ ಎಂಬುದು ಸರ್ಕಾರವೇ ಸೃಷ್ಟಿಸಿರುವ ಒಂದು ಮಿಥ್ಯಾಸಂಘಟನೆ. ಮುಸ್ಲಿಮರನ್ನು ಬಗ್ಗುಬಡಿಯಲೆಂದೇ ಈ ಹೆಸರಿನ ಸಂಘಟನೆಯನ್ನು ಸೃಷ್ಟಿಸಲಾಗಿದೆ ಎಂದು ಅಜೀಜ್ ಬರ್ನಿ ಬರೆದಿದ್ದಾನೆ.

ಹೀಗೆ ಅಜೀಜ್ ಬರ್ನಿ ಸಾರಥ್ಯದ ಅಜೀಜುಲ್‌ಹಿಂದ್ ಪತ್ರಿಕೆ ಸುಳ್ಳುಗಳ ಕಂತೆಯನ್ನೇ ಪ್ರತಿದಿನ ಹೆಣೆದುಹೆಣೆದು ಓದುಗರಿಗೆ ಉಣಬಡಿಸುತ್ತಿದೆ. ಪತ್ರಿಕೋದ್ಯಮದ ಉzಶ ಜನಜಾಗೃತಿ ಹಾಗೂ ಸತ್ಯದ ಅನಾವರಣ. ಇದೇ ಹಿನ್ನೆಲೆಯಲ್ಲಿ ಪತ್ರಿಕೆಯಲ್ಲಿ ಸುದ್ದಿ , ವಿಶ್ಲೇಷಣೆ, ಸಂಪಾದಕೀಯ ಇತ್ಯಾದಿ ಪ್ರಕಟವಾಗುವುದು. ಪ್ರಜಾತಂತ್ರ ವ್ಯವಸ್ಥೆಯನ್ನು ಸುಭದ್ರವಾಗಿಡುವುದಕ್ಕೆ ಇವೆಲ್ಲ ಅತ್ಯಗತ್ಯ. ಅದಕ್ಕೇ ಪತ್ರಿಕಾರಂಗವನ್ನು ಪ್ರಜಾತಂತ್ರದ ನಾಲ್ಕನೇ ಆಧಾರಸ್ತಂಭ ಎಂದು ಕರೆದಿರುವುದು. ಅಜೀಜ್ ಬರ್ನಿಯಂಥವರ ಪತ್ರಿಕೋದ್ಯಮ ವೈಖರಿ ಮಾತ್ರ ಈ ಆಧಾರ ಸ್ತಂಭವನ್ನೇ ಬುಡಸಹಿತ ಕಡಿದು ಹಾಕುವಂತಿದೆ. ಆತನ ದೇಶವಿರೋಧಿ ಕೃತ್ಯಕ್ಕೆ ಸಾಥ್ ನೀಡುವ ಪತ್ರಕರ್ತರು, ಪತ್ರಿಕೆಗಳು, ರಾಜಕಾರಣಿಗಳು ಕೂಡ ಇದ್ದಾರೆ. ಭಾರತವನ್ನು ಛಿದ್ರವಿಚ್ಛಿದ್ರಗೊಳಿಸಲು ಕಸಬ್‌ನಂಥವರು, ಅಫ್ಜಲ್ ಗುರು ಥರದವರು ದಾಳಿ ನಡೆಸಬೇಕೆಂದೇನಿಲ್ಲ. ಭಾರತದಲ್ಲಿದ್ದುಕೊಂಡೇ ಉಂಡ ಮನೆಗೆ ದ್ರೋಹ ಬಗೆಯುವ ಅಜೀಜ್ ಬರ್ನಿಯಂಥವರು ಕೆಲವರಿದ್ದರೂ ಸಾಕು. ಆದರೆ ಅಂಥ ಖತರ್‌ನಾಕ್ ವ್ಯಕ್ತಿಗಳನ್ನು ಆಡಳಿತ ಸೂತ್ರ ಹಿಡಿದವರೇ ಹಾಡಿ ಹೊಗಳುತ್ತಾರಲ್ಲ, ಅದು ದೇಶದ ದೌರ್ಭಾಗ್ಯವಲ್ಲದೆ ಮತ್ತೇನು?

ಅಜೀಜ್ ಬರ್ನಿ ಸಾರಥ್ಯದ ಅಜೀಜುಲ್‌ಹಿಂದ್ ಎಂಬ ಉರ್ದು ಪತ್ರಿಕೆ ಸುಳ್ಳುಗಳ ಕಂತೆಯನ್ನೇ ಪ್ರತಿದಿನ ಹೆಣೆದು ಓದುಗರಿಗೆ ಉಣಬಡಿಸುತ್ತಿದೆ. ಸತ್ಯಕ್ಕೆ ದೂರವಾದ ಸುದ್ದಿಗಳು, ಕೋಮುಭಾವನೆ ಕೆರಳಿಸುವ ಬರಹಗಳು, ನ್ಯಾಯಾಂಗ ನಿಂದನೆ ಇತ್ಯಾದಿಗಳೇ ಆ ಪತ್ರಿಕೆಯ ಹೂರಣ. ಭಾರತವನ್ನು ಛಿದ್ರವಿಚ್ಛಿದ್ರಗೊಳಿಸಲು ಕಸಬ್, ಅಫ್ಜಲ್‌ಗುರು ಥರದವರು ದಾಳಿ ನಡೆಸಬೇಕೆಂದೇನಿಲ್ಲ. ಅಜೀಜ್ ಬರ್ನಿಯಂತಹ ಉಂಡ ಮನೆಗೆ ದ್ರೋಹ ಬಗೆಯುವ ಕೆಲವರಿದ್ದರೂ ಸಾಕು!

 

Leave a Reply

Your email address will not be published.

This site uses Akismet to reduce spam. Learn how your comment data is processed.