ಬೆಂಗಳೂರಿನಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭೆಗೆ ಸರಸಂಘಚಾಲಕರಿಂದ ಚಾಲನೆ

BKR_7212

ಬೆಂಗಳೂರು ಮಾರ್ಚ ೦೭: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ ಮೋಹನರಾವ್ ಭಾಗವತರವರು ಇಂದು ಮುಂಜಾನೆ ಅಖಿಲ ಭಾರತೀಯ ಪ್ರನಿನಿಧಿ ಸಭಾಕ್ಕೆ ವಿದ್ಯುಕ್ತವಾಗಿ ಚಾಲನೆ ನಿಡಿದರು. ಬೆಂಗಳೂರಿನ ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಪ್ರತಿನಿಧಿ ಸಭೆಯಲ್ಲಿ ಆರೆಸ್ಸೆಸ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು, ದೇಶದ ವಿವಿಧ ಪ್ರಾಂತಗಳ ಆರೆಸ್ಸೆಸ್‌ನ ಆಯ್ದ ಸ್ವಯಂಸೇವಕರು ಮತ್ತು ವಿವಿಧ ಕ್ಷೇತ್ರ ಸಂಘಟನೆಗಳ ರಾಷ್ಟ್ರೀಯ ಪದಾಧಿಕಾರಿಗಳು ಸೇರಿದಂತೆ ಸುಮಾರು ೧೪೦೦ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.

ಪ್ರತಿನಿಧಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸರಕಾರ್ಯವಾಹ ಶ್ರೀ ಸುರೇಶ (ಭಯ್ಯಾಜಿ) ಜೋಶಿಯವರು ೨೦೧೩-೧೪ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು.

ಸರಕಾರ್ಯವಾಹರು ಮಂಡಿಸಿದ ವಾರ್ಷಿಕ ವರದಿಯ ಸಾರಾಂಶ ಇಲ್ಲಿದೆ:

ಹಿರಿಯ ಚೇತನಗಳಿಗೆ ಶ್ರದ್ಧಾಂಜಲಿ

ಸಮಾಜ ಪರಿವರ್ತನೆಯ ಕಾರ್ಯಕ್ಕೆ ವೇಗೋತ್ಕರ್ಷವನ್ನೊದಗಿಸಿ ತಮ್ಮ ನಶ್ವರ ದೇಹದ ತ್ಯಾಗಗೈದು ನಮ್ಮನ್ನಗಲಿದ ಹಿರಿಯ ಚೇತನಗಳಿಗೆ ಆರೆಸ್ಸೆಸ್ ಶ್ರದ್ಧಾಂಜಲಿ ಸಲ್ಲಿಸಿದೆ.

ಸಂಘದ ಪಶ್ಚಿಮ ಕ್ಷೇತ್ರ ಹಿಂದಿನ ಕಾರ್ಯವಾಹರಾಗಿದ್ದ ವಿಲಾಸ್‌ಜೀ ಫಡ್ಣವೀಸ್, ಪಂಜಾಬನಲ್ಲಿ ಗೋ ಸೇವೆಯ ಕಾರ್ಯದಲ್ಲಿ ನಿರತರಾಗಿದ್ದ ರಾಜಾರಾಮ, ತಮ್ಮ ಸ್ಪಷ್ಟ ನಿಲುವಿಗಾಗಿ ಹೆಸರುವಾಸಿಯಾಗಿದ್ದ ಪೂರ್ವ ಸಂಸದ ಮತ್ತು ಪತ್ರಕರ್ತ ದೀನಾನಾಥಜೀ ಮಿಶ್ರಾ, ಚಂಪರಣ ವಿಭಾಗದ ಸಂಘಚಾಲಕರಾದ ಮಾ. ಶಿವಕುಮಾರಜೀ ಭರತೀಯಾ, ಹೌರಾ ದಕ್ಷಿಣ ಭಾಗ ಸಂಘಚಾಲಕ ಅರುಣದಾ ಚಕ್ರವರ್ತಿ, ಸವಾಯೀ ಮಾಧೋಪುರದ ಸಹ ವಿಭಾಗ ಸಂಘಚಾಲಕ ಡಾ. ಹರಿಚರಣಜೀ ಶರ್ಮಾ, ಕಾಶೀ ಪ್ರಾಂತದ ಹಿರಿಯ ಪ್ರಚಾರಕ ಗುರ್ಜನಸಿಂಗ್ ಠಾಕುರ್, ಅಮೃತಸರ್ ಜಿಲ್ಲೆಯ ಮಾನ್ಯ ಸಂಘಚಾಲಕ ಸಂತೋಕ ಸಿಂಹಜೀ, ವಿವೇಕಾನಂದ ಶಿಲಾ ಸ್ಮಾರಕ ಸಮಿತಿಯ ಪ್ರಾರಂಭದಲ್ಲಿ ಕಾರ್ಯಾಲಯ ಜವಾಬ್ದಾರಿ ನಿರ್ವಹಿಸಿ, ವಾನಪ್ರಸ್ಥರಾಗಿ ಚೆನ್ನೈ ಕಾರ್ಯಾಲಯ ಪ್ರಮುಖರಾಗಿ ಕಾರ್ಯನಿರ್ವಹಿಸಿದ ಆರ್ ಎನ್ ವೆಂಕಟರಾಮನ್‌ಜೀ, ಕರ್ಣಾವತಿಯ ಭಾಗ ಸಂಘಚಾಲಕರಾಗಿದ್ದ ಮನೇಕಲಾಲ್‌ಜೀ ಪಟೇಲ್ ಮೊದಲಾದ ಆರೆಸ್ಸೆಸ್ಸಿನ ಹಿರಿಯ ಕಾರ್ಯಕರ್ತರ ಕಾರ್ಯಗೌರವವನ್ನು ಸ್ಮರಿಸಲಾಯಿತು.

ಮಹಾರಾಷ್ಟ್ರದ ಹಿರಿಯ ಸಾಹಿತಿ ನಾಮದೇವಜೀ ಢಸಾಳ, ದಿಲ್ಲಿಯ ರಾಜೇಂದ್ರ ಯಾದವಜೀ, ಮುಂಬಯಿಯ ಉದ್ಯೋಗಪತಿ ದಾನಿ ದೀಪಚಂದ ಜೀ ಗಾಡಿ, ಮೈಸೂರಿನ ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ವೊಡೆಯರ್, ತಿರುವಾಂಕೂರಿನ ಮಹಾರಾಜ ಉತ್ತಾರದೀನ ತಿರುಮಲ ಮಾರ್ತಾಂಡ ವರ್ಮ, ಹಿರಿಯ ಸಂಸ್ಕೃತ ವಿದ್ವಾಂಸ ರಂಗನಾಥ ಶರ್ಮಾ, ಕನ್ನಡದ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ, ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಕ್ರಮ ಸಾವರ್ಕರ, ಭಾಜಪದ ಪೂರ್ವ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ, ಸಿನಿಮಾ ಕಲಾಕಾರರಾದ ಸುಚಿತ್ರಾ ಸೇನ್, ನಾಗೇಶ್ವರ ರಾವ್, ದಕ್ಷಿಣ ಆಫ್ರಿಕದ ರಾಷ್ಟ್ರಾಧ್ಯಕ್ಷರಾಗಿದ್ದ ನೆಲ್ಸನ್ ಮಂಡೇಲ, ದಾವೂದಿ ಬೋಹರಾ ಸಮಾಜದ ಧರ್ಮಗುರು ಸೈಯೆದ್ನಾ ಮುಫದ್ದಲ್ ಸೈಫುದ್ದೀನ್ ಇವರೆಲ್ಲರ ಸಾಮಾಜಿಕ ಕೊಡುಗೆಗಳನ್ನು ಆರೆಸ್ಸೆಸ್ ಸದಾ ಸ್ಮರಿಸುತ್ತದೆ. ಉತ್ತರಾಖಂಡದ ಪ್ರಾಕೃತಿಕ ದುರ್ಘಟನೆಯೂ ಸೇರಿದಂತೆ ದೇಶದ ವಿವಿಧ ಪ್ರದೇಶಗಳಲ್ಲಿ ವಿಪತ್ತು, ಭಯೋತ್ಪಾದಕ ದಾಳಿ, ಅಪಘಾತಗಳಲ್ಲಿ ಮರಣಹೊಂದಿದ ಎಲ್ಲರಿಗೆ ಆರೆಸ್ಸೆಸ್ ಶ್ರದ್ಧಾಂಜಲಿ ಸಲ್ಲಿಸುತ್ತದೆ.

BKR_7250

ಕಾರ್ಯಸ್ಥಿತಿ

ಕಳೆದ ೨೦೧೩-೧೪ನೇ ಸಾಲಿನಲ್ಲಿ ದೇಶದಾದ್ಯಂತ ೪೮ ಸಾಮಾನ್ಯ ಪ್ರಥಮ ವರ್ಷ ಸಂಘ ಶಿಕ್ಷಾವರ್ಗ, ವಿಶೇಷ ೬ ಶಿಬಿರಗಳು, ೧೨ ದ್ವಿತೀಯ ವರ್ಷ ಶಿಬಿರ ಮತ್ತು ತೃತೀಯ ವರ್ಷದ ಶಿಬಿರವೂ ಸೇರಿದಂತೆ ಒಟ್ಟೂ ೬೮ ಸಂಘಶಿಕ್ಷಾವರ್ಗ ಶಿಬಿರಗಳು ಜರುಗಿದವು. ಪ್ರಥಮ ವರ್ಷ ಸಾಮಾನ್ಯ ವರ್ಗದಲ್ಲಿ ೬೭೫೯ ಸ್ಥಾನಗಳ ೧೦೪೩೫ ಶಿಕ್ಷಾರ್ಥಿಗಳು, ವಿಶೇಷ ವರ್ಗದಲ್ಲಿ ೨೮೬ ಸ್ಥಾನಗಳ ೩೮೬, ದ್ವಿತೀಯ ವರ್ಷ ವರ್ಗದಲ್ಲಿ ೧೮೨೫ ಸ್ಥಾನಗಳ ೨೨೩೧ ಶಿಬಿರಾರ್ಥಿಗಳು, ತೃತೀಯ ವರ್ಷದ ವರ್ಗದಲ್ಲಿ ೫೬೫ ಸ್ಥಾನಗಳ ೬೦೭ ಶಿಕ್ಷಾರ್ಥಿಗಳು ಪಾಲ್ಗೊಂಡರು.

ಪ್ರಸ್ತುತ ದೇಶದ ೨೯,೬೨೪ ಸ್ಥಾನಗಳಲ್ಲಿ ೪೪,೯೮೨ ಶಾಖೆಗಳು ನಡೆಯುತ್ತಿವೆ. ಜೊತೆಗೆ ೧೦,೧೪೬ ಸ್ಥಾನಗಳಲ್ಲಿ ಸಾಪ್ತಾಹಿಕ ಮಿಲನಗಳು ಮತ್ತು ೭೩೮೭ ಸ್ಥಾನಗಳಲ್ಲಿ ಸಂಘಮಂಡಳಿಗಳ ರೂಪದಲ್ಲಿ ಸಂಘಕಾರ್ಯ ನಡೆಯುತ್ತಿದೆ.

೨೦೧೩-೧೪ನೇ ಸಾಲಿನಲ್ಲಿ ೩೦ ಪ್ರಾಂತಗಳಲ್ಲಿ ಪ್ರಾಂತ ಸ್ತರದಲ್ಲಿ ನಡೆದ ಘೋಷ ಪ್ರಶಿಕ್ಷಣ ಶಿಬಿರಗಳಲ್ಲಿ ಒಟ್ಟೂ ೪೭೯೨ ಸ್ವಯಂಸೇವಕರು ಪಾಲ್ಗೊಂಡರು. ಬೆಂಗಳೂರಿನಲ್ಲಿ ನಡೆದ ಘೋಷ ಸಂಚಲನ ಮತ್ತು ಸಾಮೂಹಿಕ ವಾದನ ಕಾರ್ಯಕ್ರಮದಲ್ಲಿ ೧೦೭೨ ತರುಣರು ಭಾಗವಹಿಸಿದರು. ದೆಹಲಿಯಲ್ಲಿ ’ಇಂದ್ರಪ್ರಸ್ಥ ನಾದ’, ಚಿತ್ತೌಡದಲ್ಲಿ ’ಸ್ವರ ನಿನಾದ’ ಮುಂತಾದ ಘೋಷ ಕಾರ್ಯಕ್ರಮಗಳು ನಡೆದವು.

ಶಾರೀರಿಕ ವಿಭಾಗದಲ್ಲಿ ಕಳೆದ ಡಿಸೆಂಬರಿನಲ್ಲಿ ’ಪ್ರಹಾರ ಮಹಾಯಜ್ಞ’ವನ್ನು ಆಯೋಜಿಸಲಾಯಿತು. ಬೌದ್ಧಿಕ ವಿಭಾಗದಲ್ಲಿ ಎರಡು ದಿವಸದ ದೀರ್ಘಕಥಾ ಕಥನ ಕಾರ್ಯಶಾಲಾ, ಪ್ರಾರ್ಥನಾ ಸಪ್ತಾಹ ಮುಂತಾದ ಕಾರ್ಯಕ್ರಮಗಳು ದೇಶದಾದ್ಯಂತ ಶಾಖೆಗಳಲ್ಲಿ ನಡೆದವು.

ಪ್ರಚಾರ ವಿಭಾಗದಲ್ಲಿ ಕೋಲ್ಕತಾ, ದೆಹಲಿ, ಬೆಂಗಳೂರು, ಕರ್ಣಾವತಿ ಮುಂತಾದ ಸ್ಥಾನಗಳಲ್ಲಿ ಅಂಕಣಕಾರರ ಗೋಷ್ಠಿಗಳು ನಡೆದವು. ಈ ಗೋಷ್ಠಿಗಳಲ್ಲಿ ಇಸ್ಲಾಂ ಸಮಸ್ಯೆಯ ಸ್ವರೂಪ, ಅನುಸೂಚಿತ ಸಮಾಜದ ಪ್ರಚಲಿತ ಒಳ ಪ್ರವಾಹಗಳು, ಜಮ್ಮು ಕಾಶ್ಮೀರದ ಬದಲಾದ ಸನ್ನಿವೇಶ, ನವಭಾರತದ ವಿಕಾಸದ ದಿಶೆ ಮೊದಲಾದ ವಿಷಯಗಳ ಮೇಲೆ ಚರ್ಚಾಗೋಷ್ಠಿಗಳು ನಡೆದವು.

’Join RSS’ ಎಂಬ ಅಂತರ್ಜಾಲ ವ್ಯವಸ್ಥೆಯ ಮೂಲಕ 2013ರಲ್ಲಿ 31,102 ಮಂದಿ ಹೊಸದಾಗಿ ಸಂಘವನ್ನು ಪ್ರವೇಶಿಸಿದ್ದಾರೆ

ಪ್ರಾಂತಗಳಲ್ಲಿ ನಡೆದ ವಿಶೇಷ ಕಾರ್ಯಕ್ರಮಗಳು

ಮಧ್ಯಪ್ರದೇಶ ಪ್ರಾಂತದಲ್ಲಿ ಸ್ವಾಮೀ ವಿವೇಕಾನಂದರ ೧೫೦ನೇ ಜನ್ಮ ವರ್ಷಾಚರಣೆಯ ನಿಮಿತ್ತ ೨೦೧೪ರ ಜನವರಿ ಮೊದಲವಾರದಲ್ಲಿ ನಡೆದ ಸಂಕಲ್ಪ ಮಹಾಶಿಬಿರಲ್ಲಿ ’ಹಿಂದುತ್ವ ಒಂದು ಜೀವನ ದೃಷ್ಟಿ’ ಎನ್ನುವ ವಿಷಯವನ್ನು ಕೇಂದ್ರವಾಗಿರಿಸಿ ಭವ್ಯ ಪ್ರದರ್ಶಿನಿಯನ್ನು ಆಯೋಜಿಸಲಾಗಿತ್ತು.

ಮಧ್ಯಭಾರತ ಪ್ರಾಂತದಲ್ಲಿ ಕಾಲೇಜು ವಿದ್ಯಾರ್ಥಿ ಶಿಬಿರ, ಚಿತ್ತೌಡ ಪ್ರಾಂತದಲ್ಲಿ ವಿರಾಟ ಹಿಂದೂ ಧರ್ಮ ಸಮ್ಮೇಳನ, ತೇಜಪುರದ ನವಭಾರತ ಯುವ ಶಕ್ತಿ ಸಂಗಮ, ಗುವಾಹಾಟಿಯ ಆರೋಗ್ಯ ಚೇತನಾ ಶಿಬಿರ ಮುಂತಾದ ಸಮ್ಮೇಳನಗಳು ಸಂಪನ್ನಗೊಂಡವು.

ಜಮ್ಮು ಪ್ರಾಂತದಲ್ಲಿ ಪೂಜನೀಯ ಸರಸಂಘಚಾಲಕರು ಭಾಗವಹಿಸಿದ್ದ ಹಿಂದೂ ಶಕ್ತಿ ಸಂಗಮದಲ್ಲಿ ಜಮ್ಮು ಪ್ರಾಂತದ ೭೩೮ ಸ್ಥಾನಗಳ ೪೪೫೪ ಸ್ವಯಂಸೇವಕರು ಪಾಲ್ಗೊಂಡರು. ಗುಜರಾತಿನಲ್ಲಿ ನಡದ ಜಿಲ್ಲಾವಾರು ಸಮಾವೇಶದಲ್ಲಿ ಒಟ್ಟು ೨೩೮೬ ಪ್ರದೇಶಗಳ ೨೬,೫೧೯ ಸ್ವಯಂಸೇವಕರು ಭಾಗವಹಿಸಿದರು.

ರಾಷ್ಟ್ರೀಯ

ಕಳೆದ ವರ್ಷ (೨೦೧೩-೧೪)ರಲ್ಲಿ ಎರಡು ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಲಾಗತ್ತು. ೧೯೬೨ರ ಚೀನಾ ಆಕ್ರಮಣದ ೫೦ ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಹುತಾತ್ಮ ಸೈನಿಕರ ಸ್ಮರಣೆ ಮತ್ತು ಶ್ರದ್ಧಾಂಜಲಿ ಅರ್ಪಿಸುವ ಸಲವಾಗಿ ಸಂಸ್ಕಾರ ಭಾರತಿಯ ಆಶ್ರಯದಲ್ಲಿ ಅರುಣಾಚಲ ಪ್ರದೇಶದ ಇಟಾನಗರದಲ್ಲಿ ’ಸರಹದ್ ಕೋ ಸ್ವರಾಂಜಲೀ’ ಕಾರ್ಯಕ್ರಮ ಆಯೋಜಿಸಲಾಯಿತು. ದೇಶದ ವಿವಿಧ ಪ್ರದೇಶಗಳ ೧೦೦೦ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡು ಏಕಾತ್ಮ ಭಾರತ ಸಮಾಜ ದರ್ಶನ ಪ್ರದರ್ಶಿತವಾಯಿತು.

ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮ ವರ್ಷಾಚರಣೆ ನಿಮಿತ್ತ ದೇಶದಾದ್ಯಂತ ಆಯೋಜನೆಗೊಂಡ ವಿಭಿನ್ನ ಕಾರ್ಯಕ್ರಮಗಳಲ್ಲಿ ವನವಾಸಿ, ಗ್ರಾಮವಾಸಿ, ಮಾತೃಶಕ್ತಿ, ಯುವವರ್ಗ ಮತ್ತು ಸಮಾಜದ ಪ್ರಬುದ್ಧ ವರ್ಗಗಳ ಸಹಭಾಗಿತ್ವ ಅಭೂತಪೂರ್ವವಾಗಿತ್ತು. ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ವಿಚಾರಗಳ ಆಧಾರದ ಮೇಲೆ ವಿಭಿನ್ನ ವರ್ಗಗಳಲ್ಲಿ ಗೋಷ್ಠಿ, ಸಂವಾದಗಳನ್ನು ಆಯೋಜಿಸಲಾಯಿತು. ವಿವೇಕಾನಂದರು ಪ್ರತಿಪಾದಿಸಿದ ವಿಚಾರಗಳು ಇಂದಿಗೂ ಪ್ರಸ್ತುತವಾಗಿರುವುದನ್ನು ಅನುಭವಕ್ಕೆ ತರಲಾಯಿತು. ವಿಷೇಶತ: ವಿವೇಕಾನಂದರ ವ್ಯಕ್ತಿ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣದ ಧ್ಯೇಯಗಳು ಪುನರ್‌ಚಿಂತನೆಗೆ ಸಹಕಾರಿಯಾಯಿತು. ಅನೇಕ ವಿಶ್ವವಿದ್ಯಾಲಯಗಳ ಕುಲಪತಿಗಳು, ಶಿಕ್ಷಕರು, ನ್ಯಾಯಾಧೀಶರು, ಅಧಿಕಾರಿಗಳು, ಸೇನಾ ಅಧಿಕಾರಿಗಳು, ವಿಜ್ಞಾನಿಗಳು, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳ ಮುಖಂಡರುಗಳು ಮುಂತಾದ ಸಮಾಜದ ವಿಭಿನ್ನ ಸ್ತರದ ವ್ಯಕ್ತಿಗಳು ಭಾಗವಹಿಸಿದ್ದ ಕಾರ್ಯಕ್ರಮಗಳು ಅತ್ಯಂತ ಪ್ರೇರಣೆ ನೀಡಿದವು.

ದೇಶದ ಅಸುರಕ್ಷಿತ ಗಡಿಗಳು

ಕೇರಳದಲ್ಲಿ ನಡೆದ ಅಖಿಲ ಭಾರತೀಯ ಕಾರ್ಯಕಾರಣಿ ಮಂಡಳಿ ಸಭೆಯ ಸಂದರ್ಭದಲ್ಲಿ ಅಸುರಕ್ಷಿತ ಗಡಿಯ ಕುರಿತು ನಿರ್ಣಯವೊಂದನ್ನು ಅಂಗೀಕರಿಸಿ ದೇಶದ ಜನತೆ ಮತ್ತು ಶಾಸನದ ಗಮನ ಸೆಳೆಯಲಾಯಿತು. ಎಲ್ಲ ಭೂಗಡಿಗಳ ಸುರಕ್ಷತೆಯನ್ನು ದೃಢಗೊಳಿಸುವ ನಿಟ್ಟಿನಲ್ಲಿ ಗಂಭೀರವಾಗಿ ಗಮನ ಹರಿಸಬೇಕಾದ ಅಗತ್ಯವಿದೆ. ಇಂದಿಗೂ ಗಡಿಪ್ರದೇಶಗಳಿಗೆ ರಸ್ತೆ ಸಂಪರ್ಕ ಮುಂತಾದ ಸೌಲಭ್ಯಗಳು ತೃಪ್ತಿಕರವಾಗಿಲ್ಲ. ಲಡಾಖ್ ಮತ್ತು ಅರುಣಾಚಲ ಪ್ರದೇಶದ ಗಡಿಯಂಚಿನ ಪ್ರದೇಶಗಳು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿವೆ.

ಹಿಂದೂ ಜೀವನಶೈಲಿಯೆದುರು ಗಂಭೀರ ಸವಾಲು

ಕಳೆದ ವರ್ಷದಲ್ಲಿ ವಿವಾಹರಹಿತ ಸಹಜೀವನ ಮತ್ತು ಸಲಿಂಗಕಾಮಕ್ಕೆ ಕಾನೂನಿನ ಮಾನ್ಯತೆ ಈ ಎರಡು ವಿಷಯಗಳ ಕುರಿತು ಪರ-ವಿರೋಧ ಚರ್ಚೆಗಳು ಪ್ರಾರಂಭವಾದವು. ಸಾವಿರಾರು ವರ್ಷಗಳಿಂದ ವಿಕಾಸಗೊಂಡ ವಿಶಿಷ್ಟ ಜೀವನಶೈಲಿ, ಸಂಸ್ಕೃತಿ ಪರಂಪರೆಗಾಗಿ ಭಾರತ ವಿಶ್ವದಲ್ಲಿ ಗುರುತಿಸಲ್ಪಡುತ್ತದೆ. ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳು ಮಾತ್ರವೇ ಕೌಟುಂಬಿಕ ಜೀವನಕ್ಕೆ ಭದ್ರತೆಯನ್ನೊದಗಿಸುವುದರ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನೂ ಕಾಪಾಡಬಲ್ಲದು.

ಚುನಾವಣೆಯ ಕುರಿತು

ದೇಶವಾಸಿಗಳ ಮುಂದೆ ಇದೀಗ ಲೋಕಸಭಾ ಚುನಾವಣೆಯ ಮತ್ತೊಂದು ಅವಕಾಶ ಸಿದ್ಧವಾಗಿದೆ. ಈಗಿನ ಕೇಂದ್ರ ಸರ್ಕಾರದ ವಿಶ್ವಾಸಾರ್ಹತೆ, ಪ್ರಾಮಾಣಿಕತೆ ಮತ್ತು ಬದ್ಧತೆ ಪ್ರಶ್ನಾರ್ಹವೆನಿಸಿದೆ. ಇಂದು ಇಡೀ ದೇಶವೇ ಒಂದು ಬದಲಾವಣೆಯ ನಿರೀಕ್ಷೆಯಲ್ಲಿದೆ. ಜಾಗೃತ ಮತದಾರ ದೇಶದ ಭವಿಷ್ಯವನ್ನು ನಿರೂಪಿಸಬಲ್ಲ. ಜನಸಾಮಾನ್ಯರ ಇಚ್ಛೆ ಮತ್ತು ಆಕಾಂಕ್ಷೆಗಳನ್ನು ಅರಿತು ಈ ಬದಲಾವಣೆಯ ಪ್ರಕ್ರಿಯೆಯಲ್ಲಿ ನಾವು ಪಾತ್ರವಹಿಸಬೇಕಾಗಿದೆ. ದೇಶಾದ್ಯಂತ ಆರೆಸ್ಸೆಸ್ ಕಾರ್ಯಚಟುವಟಿಕೆಗಳು ವ್ಯಾಪಕವಾಗಿದ್ದು ಆರೆಸ್ಸೆಸ್ ಕುರಿತು ತೀವ್ರ ನಿರೀಕ್ಷೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಕಳೆದೆರಡು ವರ್ಷಗಳಲ್ಲಿ ಸಂಘದ ಯೋಜನಾಬದ್ಧ ಕಾರ್ಯಶೈಲಿಯು ಧನಾತ್ಮಕ ಫಲಿತಾಂಶವನ್ನೇ ನೀಡುತ್ತಿವೆ. ಗುರೂಜಿ ಗೋಳ್ವಲ್ಕರ್ ನುಡಿದಂತೆ ’ಮಾತು ಕಡಿಮೆ, ಹೆಚ್ಚು ದುಡಿಮೆ’ ಎನ್ನುವುದನ್ನು ಅರ್ಥೈಸಿಕೊಂಡು ಸಂಘಟಿತ ಪ್ರಯತ್ನ ಮತ್ತು ಯೋಜನೆಗಳನ್ನು ಜಾರಿಗೊಳಿಸಿದಲ್ಲಿ ನಮ್ಮ ಕಾರ್ಯದಲ್ಲಿ ಯಶಸ್ಸು ಸದಾಸಿದ್ಧ.

Leave a Reply

Your email address will not be published.

This site uses Akismet to reduce spam. Learn how your comment data is processed.