ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಪ್ರಥಮ ದಿವಸ:

ಮಾಧ್ಯಮಗಳಿಗೆ ಸಂಘಕಾರ್ಯದ ವಿವರಣೆ ನೀಡಿದ ದತ್ತಾತ್ರೇಯ ಹೊಸಬಾಳೆ

BKR_7283

ಬೆಂಗಳೂರು ಮಾರ್ಚ ೦೭: ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ’ಇಂದು ಪ. ಪೂ. ಸರಸಂಘಚಾಲಕರು ದೀಪ ಬೆಳಗಿ ಅಖಿಲ ಭಾರತೀಯ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ಮೂರು ಬಾರಿ ಪ್ರತಿನಿಧಿ ಸಭಾ ನಡೆದಿದೆ. ಇತ್ತೀಚಿನ ವರ್ಷಗಳಲ್ಲ ಕರ್ನಾಟಕದಲ್ಲಿ ಮಂಗಳೂರು ಮತ್ತು ಪುತ್ತೂರಿನಲ್ಲಿಯೂ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಜರುಗಿತ್ತು. ಸುಮಾರಿ ೧೩೮೦ಕ್ಕೂ ಹೆಚ್ಚು ಪ್ರತಿನಿಧಿಗಳು ಉಪಸ್ಥಿತರಿರುವ ಆರೆಸ್ಸೆಸ್‌ನ ವಾರ್ಷಿಕ ಪ್ರತಿನಿಧಿ ಸಭೆಯಲ್ಲಿ ಕಳೆದ ಒಂದು ವರ್ಷಗಳ ಸಂಘಕಾರ್ಯದ ಬೆಳವಣಿಗೆ, ಕಾರ್ಯಕ್ರಮಗಳು, ರಾಷ್ಟ್ರೀಯ ಜೀವನದಲ್ಲಿ ಸಂಘಕಾರ್ಯದ ಪರಿಣಾಮಗಳ ಮೂಲ್ಯಾಂಕನ ಜೊತೆಗೆ ಪ್ರಸಕ್ತ ರಾಷ್ಟ್ರೀಯ ವಿಷಯಗಳನ್ನು ಚರ್ಚಿಸಲಾಗುತ್ತದೆ. ಹಾಗೂ ಮುಂದಿನ ಒಂದು ವರ್ಷದ ಕಾರ್ಯಕ್ರಮಗಳ ಯೋಜನೆ ನಡೆಯಲಿದೆ. ಸಂWಕಾರ್ಯದ ಜೊತೆಗೆ ಸೇವಾ, ಗ್ರಾಮವಿಕಾಸ, ಸಮರಸತಾ, ರಾಷ್ಟ್ರೀಯ ಸುರಕ್ಷೆ ಮೊದಲಾದ ಅನೇಕ ಕಾರ್ಯಗಳಲ್ಲಿ ಸಂಘದ ಸ್ವಯಂಸೇವಕರು ಕೈಗೊಂಡಿರುವ ಕೆಲಸಗಳ ಕುರಿತೂ ಚರ್ಚೆ ನಡೆಯಲಿದೆ’ ಎಂದು ತಿಳಿಸಿದರು.

’ಸಂಘಕಾರ್ಯದ ಬೆಳವಣಿಗೆಯನ್ನು ನೋಡಿದರೆ ಕಳೆದ ಮೂರು ವರ್ಷಗಳಲ್ಲಿ ಸತತವಾಗಿ ೨೦೦೦-೨೫೦೦ ಶಾಖೆಗಳ ಸಂಖ್ಯೆ ಹೆಚ್ಚಾಗಿದೆ. ಮೂರು ಹಂತಗಳಲ್ಲಿ ಸಂಘಕಾರ್ಯ ವಿಸ್ತರಣಾ ಯೋಜನೆಯ ನಿರ್ಧಾರವನ್ನು ಕೈಗೊಳ್ಳಲಾಗಿದೆ, ೨೦೧೫ರವರೆಗೆ ಮೊದಲ ಹಂತ, ೨೦೧೮ರ ವರೆಗೆ ೨ನೇ ಹಂತ ಮತ್ತು ೨೦೨೫ರವರೆಗೆ ಮೂರನೇ ಹಂತದ ವಿಸ್ತರಣೆಯ ಯೋಜನೆ ಮಾಡಲಾಗಿದೆ. ಪ್ರಸ್ತುತ ಸನ್ನಿವೇಶವನ್ನು ನೋಡಿದರೆ ೨೦೧೫ರ ಹೊತ್ತಿಗೆ ನಮ್ಮ ಎಲ್ಲ ಕಾರ್ಯದಲ್ಲಿ ೧೦-೧೨% ವಿಸ್ತರಣೆಯಾಗಬಹುದೆಂದು ಅನ್ನಿಸುತ್ತದೆ. ಸಂಘಕಾರ್ಯದ ಎಲ್ಲ ಆಯಾಮಗಳಲ್ಲಿ, ವಿಶೇಷವಾಗಿ ಸೇವಾ ಸಂಭಂಧಿತ ಚಟುವಟಿಕೆಗಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ.’ ಎಂದು ಅವರು ಅಭಿಪ್ರಾಯಪಟ್ಟರು.

’ಈ ಸಂದರ್ಭದಲ್ಲಿ ಒಂದು ಉದಾಹರಣೆಯನ್ನು ನೀಡುವುದಾದರೆ, ೨೦೧೩ರ ಜನವರಿಯಿಂದ ಒಂದು ವರ್ಷಗಳ ಕಾಲ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮವರ್ಷಾಚರಣೆಯನ್ನು ದೇಶದಾದ್ಯಂತ ಆಚರಿಸಲಾಯಿತು. ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದ ಆಶ್ರಯದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರು ಸಂಪೂರ್ಣ ತೊಡಗಿಕೊಂಡರು. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ವಿಚಾರಗಳ ಪ್ರಸ್ತುತತೆ ಮತ್ತು ಸಂದೇಶಗಳನ್ನು ಎಲ್ಲರಿಗೂ ಮುಟ್ಟಿಸುವ ಕೆಲಸವನ್ನು ಸ್ವಯಂಸೇವಕರು ಮಾಡಿದರು. ಈ ಕಾರ್ಯಕ್ರಮಗಳ ಆಯೋಜನೆಯಲ್ಲಿ ಯುವಕರು ಬಹುಸಂಖ್ಯೆಯಲ್ಲಿ ಭಾಗವಹಿಸಿದರು.  ನಾಗಪುರದಲ್ಲಿ ನಡೆದ ಇಂತಹ ಒಂದು ಕಾರ್ಯಕ್ರಮದಲ್ಲಿ ಸುಮಾರು ೧೫೦೦೦ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನ ಮತ್ತು ತದನಂತರ ಗ್ರಾಮವಿಕಾಸ, ಸಮರಸತೆ, ಸೇವೆ ಮೊದಲಾದ ಸಮಾಜಹಿತ ಕೆಲಸಗಳಲ್ಲಿ ತೊಡಗಿಕೊಳ್ಳುವ ಶಪಥ ಸ್ವೀಕರಿಸಿದರು’ ಎಂದು ಶ್ರೀ ಹೊಸಬಾಳೆ ನುಡಿದರು.

’ವಿವೇಕಾನಂದರ ೧೫೦ನೇ ಜನ್ಮ ವರ್ಷಾಚರಣೆಯ ನಿಮಿತ್ತ ಕಳೆದ ನವೆಂಬರಿನಲ್ಲಿ ನಡೆದ ಇನ್ನೊಂದು ಮಹತ್ವದ ಸಂವಾದ ಕಾರ್ಯಕ್ರಮದಲ್ಲಿ ೧೦೫ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಭಾಗವಹಿಸಿದರು. ಪರಿಣಾಮವಾಗಿ ಶೈಕ್ಷಣಿಕ ಪಠ್ಯಕ್ರಮದಲ್ಲಿ ವಿವೇಕಾನಂದರ ವಿಚಾರಗಳನ್ನು ಅಳವಡಿಸಿ ವಿದ್ಯಾರ್ಥಿಗಳನ್ನು ಸಮಾಜಮುಖಿಯನ್ನಾಗಿಸುವ ಯೋಜನೆ ಮಾಡಿದರು.’ ಎಂದು ಅವರು ಹೇಳಿದರು.

’ರಾಷ್ಟ್ರದೆಲ್ಲಡೆ ಪರಿವರ್ತನೆಯ ವಾತಾವರಣ ಸ್ಟಷ್ಟವಾಗಿ ಗೋಚರವಾಗುತ್ತಿದೆ. ಪ್ರಜಾಪ್ರಭುತ್ವದ ಮಹತ್ವದ ಘಟನೆ ನಡೆಯುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಸಮಾಜಹಿತ ಕಾರ್ಯದಲ್ಲಿ ಪಾಲ್ಗೊಳ್ಳಬೇಕಿದೆ.  ಪ್ರಜಾಪ್ರಭುತ್ವವನ್ನು ಸಧೃಢಗೊಳಿಸುವ ಕಾರ್ಯದಲ್ಲಿ ಸಂಘದ ಸ್ವಯಂಸೇವಕರು ಸಕ್ರಿಯವಾಗಿ ತೊಡಗಿದ್ದಾರೆ. ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

’ಹದಿನಾರು ವರ್ಷದ ಸಣ್ಣ ಆಯುವಿನಲ್ಲೇ ಬ್ರಿಟಿಷ ಆಳ್ವಿಕೆಯ ವಿರುದ್ಧ ಹೋರಾಡಿ ಜೈಲು ಶಿಕ್ಷೆಗೂ ಗುರಿಯಾದ ನಾಗಾಲ್ಯಾಂಡಿನ ಕ್ವೀನ್ ಗೇಡಿನ್‌ಲಿಯುಳ ಜನ್ಮ ಶತಮಾನವನ್ನು ಸಂಘ ಈ ವರ್ಷ ಆಚರಿಸುತ್ತಿದೆ. ಜೈಲಿನಿಂದ ಬಿಡುಗಡೆಯಾದ ನಂತರ ಆಕೆ ಮತಾಂತರದ ವಿರುದ್ಧವೂ ಹೋರಾಡಿದಳು. ಕಳೆದ ೬೫ ವರ್ಷಗಳಿಂದ ಪೂರ್ವೋತ್ತರ ರಾಜ್ಯಗಳಲ್ಲಿ ಸಂಘದ ಚಟುವಟಿಕೆಗಳು ನಡೆದಿವೆ’ ಎಂದು ಶ್ರೀ ಹೊಸಬಾಳೆ ನುಡಿದರು.

ನಂತರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ದತ್ತಾತ್ರೇಯ ಹೊಸಬಾಳೆ ವಿವಿಧ ರಾಷ್ಟ್ರೀಯ ವಿಷಯಗಳ ಕುರಿತು ಸಂಘದ ನಿಲುವನ್ನು ಸ್ಪಷ್ಟಪಡಿಸಿದರು.

ಪ್ರ. ದೇಶದಲ್ಲಿ ಬದಲಾವಣೆಯ ಅಲೆ ಇದೆ ಎಂದು ಹೇಳಿದಿರಿ. ಇದರಲ್ಲಿ ಸಂಘದ ಪಾತ್ರವೇನು ? ಮೋದಿಯವರ ಬಗ್ಗೆ ಸಂಘದ ಅಭಿಪ್ರಾಯವೇನು?

ಉ: ಯುವಕರು ಸ್ವಾಮಿ ವಿವೇಕಾನಂದರ ಆದರ್ಶಗಳಿಂದ ಯುವಕರು ಪ್ರೇರಣೆ ಪಡೆಯಬೇಕು ಎನ್ನುವುದು ನಮ್ಮ ಅಪೇಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಅನೇಕ ಸರ್ಕಾರೇತರ ಸಂಸ್ಥೆಗಳ ಪ್ರಯತ್ನ ನಡೆದಿದೆ, ಇದು ನಮ್ಮ ಶಕ್ತಿ ಕೂಡ ಹೌದು. ಉತ್ತಮ ಆಡಳಿತ ಕಾರ್ಯನಿರ್ವಹಣೆ ಸರ್ಕಾರದ ಕರ್ತವ್ಯವಾಗಿದೆ. ಈ ದಿಕ್ಕಿನಲ್ಲಿ ಬದಲಾವಣೆಯ ವಾತಾವರಣ ಕಂಡುಬರುತ್ತಿದೆ. ನರೇಂದ್ರ ಮೋದಿ ಒಬ್ಬ ಸ್ವಯಂಸೇವಕರಾಗಿದ್ದು ಅವರು ಸಮರ್ಥ ಆಡಳಿತಗಾರ ಎಂದು ನಿರೂಪಿಸಿದ್ದಾರೆ.

ಪ್ರ: ಆಮ್ ಆದಮಿ ಪಾರ್ಟಿಯ ಪ್ರಚಾರ ಪಡೆದುಕೊಳ್ಳುತ್ತಿದೆ. ಆಪ್ ಬಗ್ಗೆ ಸಂಘದ ಅಭಿಪ್ರಾಯವೇನು?

ಉ: ಪ್ರಜಾಪ್ರಭುತ್ವದಲ್ಲಿ ಅನೇಕ ಪಕ್ಷಗಳು ಹುಟ್ಟುತ್ತವೆ, ಕೆಲವು ನಿಲ್ಲುತ್ತವೆ ಇನ್ನು ಕೆಲವು ಅಳಿಯುತ್ತವೆ. ಆದರೆ ಅವರ ಕಾರ್ಯವನ್ನು ನಾವು ಅಳೆಯಬೇಕು. ದೆಹಲಿಯಲ್ಲಿ ೪೯ ದಿನಗಳು ಆಪ್ ಪಕ್ಷ ಹೇಗೆ ಆಡಳಿತ ನಡೆಸಿತು ಎನ್ನುವುದು ನಮ್ಮ ಕಣ್ಣ ಮುಂದಿದೆ ಮಾಧ್ಯಮಗಳು ಇದಕ್ಕೆ ಸಾಕ್ಷಿಯಾಗಿವೆ. ಆದ್ದರಿಂದ ಆಪ್ ಆಗಲಿ ಅಥವಾ ಅನ್ಯ ಯಾವುದೇ ಪಕ್ಷವಾಗಲಿ ಜನರು ಅವರ ಕಾರ್ಯವನ್ನು ಸರಿಯಾಗಿ ಅಳೆಯಬೇಕು. ಈ ವಿಷಯದಲ್ಲಿ ಯಾರು ಚೆನ್ನಾಗಿ ಆಡಳಿತ ನಡೆಸಬಲ್ಲರು? ಎಂದು ಜನತೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಎಂದು ನಮಗೆ ವಿಶ್ವಾಸವಿದೆ.

ಪ್ರ: ಹಿರಿಯ ರಾಜಕಾರಣಿಗಳು ನಿವೃತ್ತಿ ಹೊಂದಿ ಕಿರಿಯರಿಗೆ ಅವಕಾಶ ಮಾಡಿಕೊಡಬೇಕೆಂಬುದು ಆರೆಸ್ಸೆಸ್ಸಿನ ವಾದವಾಗಿದೆ. ಈ ನಿಲುವಿಗೆ ಇಂದಿಗೂ ಸಂಘವು ಬದ್ಧವಾಗಿದೆಯೇ?

ಉ: ನಿವೃತ್ತಿಯ ಬಗ್ಗೆ ಸಂಘ ಎಂದೂ ಚರ್ಚೆಮಾಡಿಲ್ಲ. ನಿವೃತ್ತಿಯ ನಿರ್ಧಾರವನ್ನು ವೈಯಕ್ತಿಕ ನೆಲೆಯಲ್ಲಿ ಕೈಗೊಳ್ಳಬೇಕು. ಯುವಕರಿಗೆ ಕೇವಲ ರಾಜಕೀಯದಲ್ಲಿ ಮಾತ್ರವಲ್ಲ ಎಲ್ಲ ರಂಗದಲ್ಲೂ ಅವಕಾಶಗಳು ಸಿಗಬೇಕು ಎನ್ನುವುದು ಸಂಘದ ನಿಲುವಾಗಿದೆ.

ಪ್ರ: ಪೂರ್ವೋತ್ತರ ರಾಜ್ಯಗಳಲ್ಲಿ ಸಂಘ ನಡೆಸುತ್ತಿರುವ ಕೆಲಸಗಳು ಬಿಜೆಪಿಯನ್ನು ಸದೃಢಗೊಳಿಸುವ ರಾಜಕೀಯ ಅನಿವಾರ್ಯತೆಯಿಂದಾಗಿ ನಡೆದಿದೆಯೇ?

ಉ:ಕಳೆದ ಐದು ದಶಕಗಳ ಹಿಂದಿನಿಂದಲೇ ಪೂರ್ವೋತ್ತರ ರಾಜ್ಯಗಳಲ್ಲಿ ಸಂಘಕಾರ್ಯ ನಡೆದಿದೆ. ಪೂರ್ವೋತ್ತರ ರಾಜ್ಯಗಳಲ್ಲಿ ಸಂಘದ ಸ್ವಯಂಸೇವಕರು ಅನೇಕ ಸೇವಾ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಉದಾಹರಣೆಗೆ ಜನರ ಸ್ವಾಸ್ಥ್ಯ ಸಂವರ್ಧನೆಗಾಗಿ ’ಆರೋಗ್ಯ ಮಿತ್ರ’ ಎನ್ನುವ ಸೇವಾ ಪ್ರಕಲ್ಪ ನಡೆಯುತ್ತಿದೆ. ಅಲ್ಲದೇ ನೂರಾರು ಶಾಲೆಗಳನ್ನು ನಡೆಸಲಾಗುತ್ತಿದೆ, ಇವೆಲ್ಲ ಯಾವುದೇ ರಾಜಕೀಯ ಅನಿವಾರ್ಯತೆಯಿಂದ ನಡೆಸುತ್ತಿರುವ ಕಾರ್ಯಕ್ರಮಗಳಲ್ಲ. ಪೂರ್ವೋತ್ತರ ಪ್ರದೇಶಗಳು ಮತ್ತು ದೇಶದ ಇತರ ಭಾಗದ ನಡುವೆ ಒಂದು ತರಹದ ಮಾನಸಿಕ ಅಂತರವಿದೆ. ಅದನ್ನು ತೊಡೆದುಹಾಕಬೇಕಾಗಿದೆ, ಇದು ಯಾವದೇ ರಾಜಕೀಯದ ಉದ್ಧೇಶವಲ್ಲ, ಇದು ದೇಶವನ್ನು ಸಾಂಸ್ಕೃತಿಕವಾಗಿ ಒಂದುಗೂಡಿಸುವ ಕಾರ್ಯ. ನಮ್ಮ ಕಾರ್ಯದ ಉದ್ಧೇಶ ಅನೇಕ ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾದ ಪೋರ್ವೋತ್ತರ ರಾಜ್ಯಗಳ ಅಭಿವೃದ್ಧಿ.

ಪ್ರ: ಸಂಘ ವ್ಯಕ್ತಿ ವೈಭವೀಕರಣ ಆಧರಿಸಿದ ಪ್ರಚಾರವನ್ನು ವಿರೋಧಿಸರುವ ತತ್ವದಿಂದ ದೂರ ಬಂದಿದೆಯೇ? ಮೋದಿ ಕೇಂದ್ರಿತ ಪ್ರಚಾರದ ಬಗ್ಗೆ ಸಂಘದ ನಿಲುವೇನು?

ಉ: ಅಭ್ಯರ್ಥಿಗಳ ಆಯ್ಕೆ ಪಕ್ಷದ ವಿಶೇಷಾಧಿಕಾರ. ದೇಶ ಮತ್ತು ಸಮಾಜದ ಕುರಿತು ಸಂಘ ಕೇವಲ ತನ್ನ ಅಭಿಪ್ರಾಯಗಳನ್ನು ತಿಳಿಸುತ್ತದೆ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಪ್ರಣಾಳಿಕೆಯನ್ನು ನಿರ್ಧರಿಸುವುದು ಪಕ್ಷದ ಕೆಲಸವಾಗಿದೆ. ಅಭ್ಯರ್ಥಿಗಳನ್ನು ಆರಿಸುವ ಸಲುವಾಗಿ ಆರೆಸ್ಸೆಸ್ ಬಿಜೆಪಿಗೆ ಸಲಹೆಯನ್ನು ನೀಡುವುದಿಲ್ಲ. ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಮತದಾನದ ಪ್ರಮಾಣ ಹೆಚ್ಚಬೇಕು, ಜನತೆ ತಮ್ಮ ಅಧಿಕಾರವನ್ನು ಸಮಾಜದ ಹಿತದಲ್ಲಿ ಚಲಾಯಿಸಬೇಕು ಎನ್ನುವುದು ಸಂಘದ ಆಶಯವಾಗಿದೆ.

ಪತ್ರಿಕಾ ಸಂವಾದದ ಸಂದರ್ಭದಲ್ಲಿ ಅಖಿಲ ಭಾರತೀಯ ಪ್ರಚಾರ ಪ್ರಮುಖ ಡಾ ಮನಮೋಹನ ವೈದ್ಯ ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖ ನಂದಕುಮಾರ, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ವಾದಿರಾಜ, ವಿಶ್ವಸಂವಾದ ಕೇಂದ್ರ ಕರ್ನಾಟಕದ ಸಂಯೋಜಕ ರಾಜೇಶ ಪದ್ಮಾರ ಉಪಸ್ಥಿತರಿದ್ದರು. ಡಾ. ಗಿರಿಧರ ಉಪಾಧ್ಯಾಯ- ಅಸಿಸ್ಟಂಟ್ ಪ್ರೊಫೆಸರ್ ಕಿಮ್ಸ ಬೆಂಗಳೂರು, ಸ್ವಾಗತಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.