ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಇಂಡಿಯಾ ಗೇಟ್ನಲ್ಲಿದ್ದ ಕಿಂಗ್ ಜಾರ್ಜ್ನ ಪ್ರತಿಮೆಯನ್ನು ತೆರವುಗೊಳಿಸಲಾಯಿತು, ಅಂತೆಯೇ ಕ್ವೀನ್ ವಿಕ್ಟೋರಿಯಾ ಪ್ರತಿಮೆಯನ್ನು ದೆಹಲಿಯ ಚಾಂದನೀ ಚೌಕ್ನಿಂದ, ಹೀಗೆ ದೇಶದ ಹಲವೆಡೆಗಳಲ್ಲಿ ಪ್ರತಿಮೆಗಳನ್ನು ತೆರವುಗೊಳಿಸಲಾಯಿತು. ಇವುಗಳನ್ನು ತೆರವುಗೊಳಿಸಲು ಕಾರಣವಿಷ್ಟೇ. ಈ ಪ್ರತಿಮೆಗಳು ನಮ್ಮ ಮೇಲಿನ ಬ್ರಿಟೀಷ್ ದಬ್ಬಾಳಿಕೆಯ ಹಾಗೂ ನಮ್ಮ ಗುಲಾಮಿತನದ ಸಂಕೇತದಂತಿದ್ದವು. ಇದೇ ರೀತಿ ರಷ್ಯನ್ನರಿಂದ ಸ್ವಾತಂತ್ರ್ಯ ಪಡೆದ ಕೆಲವು ವರ್ಷಗಳ ನಂತರ ಪೋಲ್ಯಾಂಡ್ನಲ್ಲಿ ೧೯೨೦ ನೇ ದಶಕದಲ್ಲಿ ಅಲೆಗ್ಸ್ಯಾಂಡರ್ ನೆವ್ಸ್ಕಿ ಕೆಥೆಡ್ರಿಯಲ್ ಅಥವಾ ಚರ್ಚ್ ಸೇರಿದಂತೆ ಹಲವು ಚರ್ಚ್ಗಳನ್ನು ಕೆಡವಲಾಯಿತು. ಪೋಲ್ಯಾಂಡ್ನ ವಾರ್ಸಾದಲ್ಲಿದ್ದ ಅಲೆಗ್ಸ್ಯಾಂಡರ್ ನೆವ್ಸ್ಕಿ ಕೆಥೆಡ್ರಿಯಲ್ಲನ್ನು ೧೮೯೪ ರಿಂದ ೧೯೧೨ ರ ಅವಧಿಯಲ್ಲಿ ರಷ್ಯನ್ನರು ನಿರ್ಮಿಸಿದ್ದರು. ೭೦ ಮೀಟರ್ ಎತ್ತರವಿದ್ದ ಈ ಕಟ್ಟಡ ಆ ದಿನಗಳಲ್ಲಿ ವಾರ್ಸಾದಲ್ಲೇ ಅತ್ಯಂತ ಎತ್ತರದ ಕಟ್ಟಡವಾಗಿತ್ತು. ಪೋಲ್ಯಾಂಡ್ ಕೂಡ ಕ್ರಿಶ್ಚಿಯನ್ನರ ದೇಶವೇ ಆಗಿದ್ದರೂ ಅವರು ಈ ಎಲ್ಲಾ ರಷ್ಯನ್ ನಿರ್ಮಿತ ಕೆಥೆಡ್ರಿಯಲ್ಗಳನ್ನು ನೆಲಸಮಗೊಳಿಸಿದರು. ಪೋಲ್ಯಾಂಡಿನ ಜನರ ಮನದಲ್ಲಿ ಈ ಕೆಥೆಡ್ರಿಯಲ್ಗಳು ರಷ್ಯಾ ಚಕ್ರಾಧಿಪತ್ಯದ ಸಂಕೇತ ಹಾಗೂ ಅವರ ರಾಷ್ಟ್ರೀಯ ಭಾವನೆಯನ್ನು ನೋವಿಸುವುದಕ್ಕಾಗಿಯೇ ನಿರ್ಮಾಣಗೊಂಡ ಕಟ್ಟಡಗಳು ಎಂಬ ಭಾವನೆಯಿದ್ದುದೇ ಇದಕ್ಕೆ ಕಾರಣ.
ಇಷ್ಟೆಲ್ಲಾ ಕತೆ ಹೇಳಿದ್ದು ಯಾಕೆಂದರೆ, ಇಂದು ಡಿಸೆಂಬರ್ ೬. ಅಯೋಧ್ಯೆ ನೆನಪಾಗುವ ದಿನ. ವಿದೇಶಿ ದಾಳಿಕೋರ ಬಾಬರ್ನ ಮುಖ್ಯ ಕಮಾಂಡರ್ ಮೀರ್ ಬಾಕಿ ೧೫೨೮ರಲ್ಲಿ ರಾಮ ಜನ್ಮಭೂಮಿ ದೇವಸ್ಥಾನವನ್ನು ನಾಶಗೊಳಿಸಿ ಅದೇ ಜಾಗದಲ್ಲಿ ನಿರ್ಮಿಸಿದ ಬಾಬರಿ ಕಟ್ಟಡವೂ ಸಹ ಭಾರತದ ಸಂಸ್ಕೃತಿ ಹಾಗೂ ಸಾರ್ವಭೌಮತ್ವದ ಮೇಲೆ ನಡೆದ ಆಕ್ರಮಣದ ಪ್ರತೀಕವೇ ಹೊರತು ಯಾವುದೇ ಧಾರ್ಮಿಕ ಸಂಕೇತವಲ್ಲ. ಇಸ್ಲಾಂನ ಪ್ರಕಾರ ಬೇರೆಯವರಿಂದ ಕಬಳಿಸಿದ ಅಥವಾ ಬಲವಂತವಾಗಿ ಪಡೆದ ಭೂಮಿಯಲ್ಲಿ ಹಾಗೂ ಕಟ್ಟಡದಲ್ಲಿ ಮಾಡಿದ ನಮಾಜ್ ಅಲ್ಲಾಹುವಿಗೆ ಸ್ವೀಕೃತವಲ್ಲ. ಅಲ್ಲದೇ ಬಾಬರ್ಗೆ ನಿಜವಾಗಿಯೂ ಧಾರ್ಮಿಕ ಭವನ ಅಥವಾ ಮಸೀದಿ ನಿರ್ಮಿಸುವ ಉದ್ದೇಶವೇ ಇದ್ದಿದ್ದರೆ ಆತನಿಗೆ ಅದನ್ನು ನಿರ್ಮಿಸಲು ಜಾಗದ ಕೊರತೆಯಿರಲಿಲ್ಲ. ಆದರೆ ಭಾರತೀಯರನ್ನು ಅವಮಾನಿಸುವುದು ಹಾಗೂ ಭಾರತೀಯರು ತನ್ನ ಗುಲಾಮರು ಎಂದು ತೋರಿಸುವುದು ಅವನ ನಿಜವಾದ ಉದ್ದೇಶವಾಗಿತ್ತು. ಯಾವುದೇ ರೀತಿಯಲ್ಲಿ ವಿಶ್ಲೇಷಣೆ ಮಾಡಿ ಹೇಳುವುದಾದರೂ, ಭಾರತೀಯ ಮುಸ್ಲಿಮರಿಗೆ ಬಾಬರ್ನ ಜೊತೆ ಯಾವ ವಿಶೇಷ ಸಂಬಂಧವೂ ಇಲ್ಲ. ಇನ್ನೂ ಹೇಳುವುದಾದರೆ ಅವರಿಗೆ ನಿಜವಾಗಿಯೂ ಸಂಬಂಧವಿರುವುದು ಶ್ರೀರಾಮನೊಂದಿಗೆ. ಏಕೆಂದರೆ ಅವರ ಪೂರ್ವಜರು ರಾಮನನ್ನು ದೇವರು ಹಾಗೂ ಆದರ್ಶರಾಜನೆಂದು ನಂಬಿದ್ದವರು. ಆದ್ದರಿಂದ ನಿಜವಾದ ಅರ್ಥದಲ್ಲಿ ಡಿಸೆಂಬರ್ ೬ ರಂದು ಅಯೋಧ್ಯೆಯಲ್ಲಿ ನೆಲಸಮವಾಗಿದ್ದು ಭಾರತೀಯರು ಹಾಗೂ ಭಾರತೀಯ ಸಂಸ್ಕೃತಿಯ ಮೇಲಿನ ಆಕ್ರಮಣದ ಸಂಕೇತದಂತಿದ್ದ, ವಿದೇಶಿ ದಾಳಿಕೋರ ಬಾಬರನ ಕ್ರೌರ್ಯವನ್ನು, ನಮ್ಮ ಗುಲಾಮಿತನವನ್ನು ನೆನಪಿಸುತ್ತಿದ್ದ ಒಂದು ಕಟ್ಟಡ.
ರಾಮ ಜನ್ಮಭೂಮಿ ಹೋರಾಟವನ್ನು ಕೆಲವು ಸಂಘಟನೆಗಳು ೧೯೮೦ ರ ದಶಕದಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಹುಟ್ಟುಹಾಕಿದ್ದು ಎಂಬ ಆರೋಪವಿದೆ. ಹಾಗೆ ಹೇಳುವವರಿಗೆ ಸರಿಯಾದ ಇತಿಹಾಸ ಜ್ಞಾನವಿಲ್ಲವೆಂದೇ ಹೇಳಬೇಕಾಗುತ್ತದೆ. ೧೫೨೮ರಲ್ಲಿ ಬಾಬರ್ನ ಆಕ್ರಮಣಕ್ಕೊಳಗಾದ ಮರುದಿನದಿಂದಲೇ ಶ್ರೀರಾಮ ಜನ್ಮಭೂಮಿಯನ್ನು ಮರಳಿ ಪಡೆಯುವ ಜನಾಂದೋಲನ ನಡೆಯತ್ತಿದೆ. ವಾಸ್ತವವಾಗಿ, ಹಿಂದೂ ಸಮಾಜ ೧೫೨೮ರಿಂದ ಇಲ್ಲಿಯವರೆಗೆ ಇದಕ್ಕಾಗಿ ೭೬ ಕದನಗಳಲ್ಲಿ ಭಾಗಿಯಾಗಿದೆ. ಪ್ರತಿಯೊಂದು ಪೀಳಿಗೆಯೂ ಶ್ರೀರಾಮ ಜನ್ಮಭೂಮಿ ದೇವಾಲಯವನ್ನು ಮರುಪಡೆಯಲು ಹಾಗೂ ಈ ಚಳುವಳಿಯನ್ನು ಮುಂದೆ ತೆಗೆದುಕೊಂಡು ಹೋಗಲು ತನ್ನ ಕೈಲಾಗುವಷ್ಟರ ಮಟ್ಟಿಗೆ ಹೋರಾಡುತ್ತಲೇ ಬಂದಿದೆ. ಹಿಂದಿನ ದಿನಗಳಲ್ಲಿ ಹಿಂಸಾತ್ಮಕ ಮತ್ತು ರಕ್ತಸಿಕ್ತವಾಗಿದ್ದ ಸಂಘರ್ಷ ಕಾಲಕ್ರಮೇಣ ನ್ಯಾಯಾಂಗ ಹೋರಾಟವಾಗಿ ಮಾರ್ಪಟ್ಟಿದೆ. ಇದುವರೆಗೂ ರಾಮ ಜನ್ಮಭೂಮಿ ವಿಮೋಚನೆಗಾಗಿ ನಡೆದಿರುವ ಕದನಗಳನ್ನು ನೋಡಿದರೆ, ಈ ಸತ್ಯ ಅರ್ಥವಾಗುತ್ತದೆ.
೧. ಬಾಬರ್ ಆಡಳಿತದ ಅವಧಿ (೧೫೨೮ ರಿಂದ ೧೫೩೦) ಯಲ್ಲಿ – ೪ ಕದನಗಳು
೨. ಹುಮಾಯುನ್ ಆಡಳಿತದ ಅವಧಿ (೧೫೩೦ ರಿಂದ ೧೫೫೬) ಯಲ್ಲಿ – ೧೦ ಕದನಗಳು
೩. ಅಕ್ಬರ್ ಆಡಳಿತದ ಅವಧಿ (೧೫೫೬ ರಿಂದ ೧೬೦೬) ಯಲ್ಲಿ – ೨೦ ಕದನಗಳು
೪. ಔರಂಗಝೇಬ್ ಆಡಳಿತದ ಅವಧಿ (೧೬೫೮ ರಿಂದ ೧೭೦೭) ಯಲ್ಲಿ – ೩೦ ಕದನಗಳು
೫. ನವಾಬ್ ಸಾದತ್ ಅಲಿ ಆಡಳಿತದ ಅವಧಿ (೧೭೭೦ ರಿಂದ ೧೮೧೪) ಯಲ್ಲಿ – ೫ ಕದನಗಳು
೬. ನಸೀರುದ್ದಿನ್ ಹೈದರ್ ಆಡಳಿತದ ಅವಧಿ (೧೮೧೪ ರಿಂದ ೧೮೩೬)ಯಲ್ಲಿ – ೩ ಕದನಗಳು
೭. ವಾಜಿದ್ ಅಲಿ ಶಾಹ್ ಆಡಳಿತದ ಅವಧಿ (೧೮೪೭ ರಿಂದ ೧೮೫೭)ಯಲ್ಲಿ – ೨ ಕದನಗಳು
೮. ಬ್ರಿಟೀಷ್ ಆಡಳಿತದ ಅವಧಿ (೧೯೧೭ ರಿಂದ ೧೯೩೪)ಯಲ್ಲಿ – ೨ ಕದನಗಳು
ಇದಲ್ಲದೆ ೧೯೩೪ ರಲ್ಲಿ ಅಯೋಧ್ಯೆಯಲ್ಲಾದ ಹೋರಾಟದಲ್ಲಿ ಹಿಂದೂ ಸಮಾಜ ಬಾಬರಿ ಕಟ್ಟಡದ ಮೇಲೆ ದಾಳಿ ಮಾಡಿ, ಅದರ ಎಲ್ಲಾ ಮೂರು ಗುಮ್ಮಟಗಳಿಗೂ ಹಾನಿ ಮಾಡಿ ಆ ಕಟ್ಟಡವನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. ಆದರೆ ಅಂದಿನ ಬ್ರಿಟೀಷ್ ಸರ್ಕಾರ ಅದನ್ನು ಬಲವಂತವಾಗಿ ಹಿಂಪಡೆದುಕೊಂಡಿದ್ದಲ್ಲದೇ ಗುಮ್ಮಟಗಳ ದುರಸ್ತಿ ಕಾರ್ಯಕ್ಕಾಗಿ ಹಿಂದೂಗಳಿಗೆ ದಂಡವನ್ನೂ ಸಹ ವಿಧಿಸಿತು.
೧೯೮೯ರ ನವೆಂಬರ್ ೧೦ ರಂದು ಶ್ರೀರಾಮ ಜನ್ಮಭೂಮಿ ದೇವಾಲಯದ ಶಿಲಾನ್ಯಾಸ ಹರಿಜನ ಸಮುದಾಯಕ್ಕೆ ಸೇರಿದ ಬಿಹಾರದ ಶ್ರೀ ಕಾಮೇಶ್ವರ ಚೌಪಾಲ್ರವರಿಂದ ನೆರವೇರಿತು. ಇದು ಶ್ರೀರಾಮ ಜನ್ಮಭೂಮಿ ಚಳುವಳಿಗಿರುವ ಸಮಾಜವನ್ನು ಒಗ್ಗೂಡಿಸುವ ಶಕ್ತಿಯ ಒಂದು ನಿದರ್ಶನವೆನ್ನಬಹುದು.
ಇನ್ನು ದಾಖಲೆ ಮತ್ತು ಆಧಾರದ ವಿಷಯಕ್ಕೆ ಬರುವುದಾದರೆ, ವ್ಯಾಪಕ ಉತ್ಖನನದ ನಂತರ ಶ್ರೀರಾಮಜನ್ಮ ಭೂಮಿ ಸ್ಥಳದಲ್ಲಿ ಬೃಹತ್ತಾದ ಮಂದಿರವಿತ್ತೆಂಬುದನ್ನು ಭಾರತೀಯ ಪುರಾತತ್ವ ಇಲಾಖೆ ಖಚಿತಪಡಿಸಿದೆ. ಅಲ್ಲದೇ ಕ್ರಿಸ್ತ ಪೂರ್ವ ೭ನೇ ಶತಮಾನಕ್ಕಿಂತ ಮೊದಲಿನಿಂದಲೂ ಆ ಜಾಗ ಬಳಕೆಯಲ್ಲಿದೆ ಎಂಬುದನ್ನೂ ಸಹ ದೃಢಪಡಿಸಿದೆ. ಸಂಸ್ಕೃತ ಸಾಹಿತ್ಯಗಳಿರಬಹುದು, ಮುಸ್ಲಿಂ ಬರಹಗಾರರ ಪುಸ್ತಕಗಳಿರಬಹುದು ಅಥವಾ ವಿದೇಶೀ ಬರಹಗಾರರ ಕೃತಿಗಳು ಹಾಗೂ ವರದಿಗಳಿರಬಹುದು, ಈ ಎಲ್ಲಾ ಸಾಹಿತ್ಯಗಳಲ್ಲಿ ಲಭ್ಯವಿರುವ ಸಾಕ್ಷ್ಯಗಳು ಸಹ ಇದನ್ನೇ ಖಚಿತಪಡಿಸುತ್ತವೆ.
೧೫೯೮ರಲ್ಲಿ ಮೊಘಲರ ಕಾಲದ ಪ್ರಸಿದ್ಧ ಲೇಖಕ ಅಬುಲ್ ಫಝಲ್ ಬರೆದ ‘ಅಯೀನ್-ಎ-ಅಕ್ಬರೀ’ಯಲ್ಲಿ ಅಯೋಧ್ಯೆಯಲ್ಲಿ ವಿಜೃಂಭಣೆಯಿಂದ ರಾಮನವಮಿಯನ್ನು ಆಚರಿಸುತ್ತಿದ್ದುದರ ಬಗ್ಗೆ ಉಲ್ಲೇಖವಿದೆ.
೧೭ನೇ ಶತಮಾನದ ಕೊನೆಯಲ್ಲಿನ ಕೃತಿ ‘ಸಹಿಫಾ-ಇ-ಚಹಲ್ ನಾಸಾ-ಇಹ್-ಬಹದ್ದೂರ್ ಶಾಹಿ’ಯಲ್ಲಿ ಶ್ರೀರಾಮ ಜನ್ಮಭೂಮಿ ದೇವಾಲಯವನ್ನುರುಳಿಸಿ ಇಸ್ಲಾಮಿಕ್ ಶಕ್ತಿ ಪ್ರದರ್ಶಿಸಲು ಮಸೀದಿಯಂತಹ ಕಟ್ಟಡವನ್ನು ಕಟ್ಟಲಾಗಿತ್ತಾದರೂ ಅಲ್ಲಿ ನಮಾಜ್ ಮಾಡಲು ಅನುಮತಿ ನೀಡಿರಲಿಲ್ಲ ಎಂದು ಹೇಳಲಾಗಿದೆ. ಆದರೆ ಈ ಜಾಗಗಳಲ್ಲಿ ಯಾವುದೇ ರೀತಿಯ ವಿಗ್ರಹಪೂಜೆ ಮತ್ತು ಶಂಖನಾದವಾಗದಂತೆ ಕಡ್ಡಾಯ ಆಜ್ಞೆ ಮಾಡಲಾಗಿತ್ತು ಎಂದೂ ಬರೆಯಲಾಗಿದೆ.
೧೮೫೬ರ ಮಿರ್ಜಾ ಜಾನ್ನ ಕೃತಿ ‘ಹದಿಕಾ-ಎ-ಶಹದಾ’ದಲ್ಲಿ ಅಯೋಧ್ಯೆಯಲ್ಲಿದ್ದ ರಾಮ ಮಂದಿರದ ಬಗ್ಗೆ, ‘ಸೀತಾ ರಸೋಯ್’ ಬಗ್ಗೆ ಬರೆಯಲಾಗಿದೆ.
ಅಯೋಧ್ಯೆಯ ಮಂದಿರವನ್ನುರುಳಿಸಿ ಬಾಬರ್ನ ಕಮಾಂಡರ್ ಮೀರ್ ಬಾಕಿ ಬಾಬರಿ ಕಟ್ಟಡ ನಿರ್ಮಿಸಿದ್ದರ ಬಗ್ಗೆ ಉಲ್ಲೇಖವಾಗಿರುವ ಇನ್ನಿತರ ಪ್ರಮುಖ ಮುಸ್ಲಿಂ ಬರಹಗಳೆಂದರೆ:
o ಮಿರ್ಜಾ ರಜಬ್ ಅಲಿ ಬೇಗ್ ಸರೂರ್ ಬರೆದ ಫಸಾನಾ-ಎ-ಇಬ್ರಾತ್
o ಶೇಕ್ ಮೊಹಮ್ಮದ್ ಅಜಮತ್ ಅಲಿ ಕಕೊರ್ವಿ ನಾನಿರ್ ಬರೆದ ತಾರೀಕ್-ಎ-ಅವಾಧ್ ಅಥವಾ ಮುರಕ್ಕಾ-ಎ-ಖುಸರಬಿ
o ಮೌಲ್ವಿ ಅಬ್ದುಲ್ ಕರೀಮ್ ಬರೆದ ಗುಮ್ಗಸ್ಟ್-ಎ-ಹಾಲತ್-ಎ-ಅಯೋಧ್ಯಾ ಅವಾಧ್
o ಅಲ್ಲಮ ಮೊಹಮ್ಮದ್ ನಜಾಮುಲ್ ಘನಿ ಖಾನ್ ರಾಂಪುರಿ ಲಿಖಿತ ತಾರೀಕ್-ಎ-ಅವಾಧ್
o ಹಜಿ ಮೊಹಮ್ಮದ್ ಹಸನ್ ಬರೆದ ಝಿಯಾ-ಎ-ಅಕ್ತರ್
o ಮೌಲಾನಾ ಹಕೀಮ್ ಸಯ್ಯಿದ್ ಅಬ್ದುಲ್ ಹೈ ಹಿಂದೋಸ್ತಾನ್ ಇಸ್ಲಾಮಿ ಅಹಾದ್.
ಹಾಗೆಯೇ ಈ ವಿಷಯ ಖಚಿತವಾಗಿ ಉಲ್ಲೇಖವಾಗಿರುವ ವಿದೇಶ ಬರಹಗಾರರ ಪ್ರಮುಖ ಕೃತಿಗಳು ಹಾಗೂ ವರದಿಗಳೆಂದರೆ:
o ೧೭೮೫ರ ಜೋಸೆಫ್ ಟೈಫೆಂತೆಲ್ಲರ್ನ ಹಿಸ್ಟರಿ ಅಂಡ್ ಜಿಯೋಗ್ರಫಿ ಆಫ್ ಇಂಡಿಯಾ
o ೧೮೩೮ರ ಮಾಂಟೆಗೋಮೆರ್ರಿ ಮಾರ್ಟೀನ್ನ ಸರ್ವೆ ರಿಪೋರ್ಟ್
o ೧೮೭೭ರ ಗೆಝೆಟೀರ್ಸ್ ಆಫ್ ಪ್ರೋವಿನ್ಸ್ ಆಫ್ ಔಧ್
o ೧೮೮೦ರ ಫೈಝಾಬಾದ್ ಸೆಟ್ಲಮೆಂಟ್ ರಿಪೋರ್ಟ್
o ೧೮೮೫ರಲ್ಲಿ ಜಡ್ಜ್ ಕರ್ನಲ್ ಎಫ್.ಇ.ಎ. ಚೈಮಿಯರ್ ನೀಡಿದ ಕೋರ್ಟ್ ತೀರ್ಪು
o ೧೮೯೧ರಲ್ಲಿ ಎ.ಫ್ಯೂರರ್ ನೀಡಿದ ಭಾರತೀಯ ಪುರಾತತ್ವ ಸಮೀಕ್ಷಾ ವರದಿ
o ಎ.ಆರ್. ನೆವಿಲ್ ೧೯೦೨ರಲ್ಲಿ ಸಿದ್ಧ ಪಡಿಸಿದ ಬಾರಾಬಂಕೀ ಜಿಲ್ಲಾ ಗೆಝೆಟೀರ್ಸ್ ಹಾಗೂ ೧೯೦೫ರಲ್ಲಿ ಸಿದ್ಧ ಪಡಿಸಿದ ಫೈಝಾಬಾದ್ ಜಿಲ್ಲಾ ಗೆಝೆಟೀರ್ಸ್
o ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ, ೧೫ನೇ ಆವೃತ್ತಿ, ಮೊದಲನೇ ಸಂಪುಟ – ೧೯೭೮
o ವಿಲಯಂ ಫಿಂಚ್ನ ಪ್ರಯಾಣ ವರದಿ – ೧೬೦೮-೧೬೧೧, ಪಿ. ಕರ್ನೆಗಿಯ
o ೧೮೭೦ರ ಹಿಸ್ಟೋರಿಕಲ್ ಸ್ಕೆಚ್ ಆಫ್ ಫೈಝಾಬಾದ್
o ೧೯೨೦ರಲ್ಲಿ ಎನೆಟೆ ಬೆಬೆರಿಸ್ ಬರೆದ ಬಾಬರ್ ನಾಮ
ಅಯೋಧ್ಯೆಯಲ್ಲಿ ಡಿಸೆಂಬರ್ ೬, ೧೯೯೨ರಂದು ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದ ಕರಸೇವಕರು ನಮ್ಮ ಗುಲಾಮಿತನವನ್ನು ನೆನಪಿಸುತ್ತಿದ್ದ ಒಂದು ಕಟ್ಟಡವನ್ನು ಉರುಳಿಸಿದರೇ ಹೊರತು ಬೇರಾವುದೇ ಕಟ್ಟಡಗಳಿಗಾಗಲಿ ಧಾರ್ಮಿಕ ತಾಣಗಳಿಗಾಗಲಿ ಯಾವುದೇ ರೀತಿಯ ಹಾನಿಯನ್ನು ಮಾಡಲಿಲ್ಲ. ಮುಸ್ಲಿಮರನ್ನು ಹಿಂಸಿಸುವುದಾಗಲಿ, ನೋವಿಸುವುದಾಗಲಿ ಮಾಡಲಿಲ್ಲ.
ಹಿಂದಿನ ಘಟನೆಗಳೇನೇ ಇರಲಿ, ಹೇಗೆ ಸ್ವಾತಂತ್ರ್ಯದ ನಂತರ ಸರ್ದಾರ್ ವಲ್ಲಭಭಾಯ್ ಪಟೇಲ್ ನೇತೃತ್ವದಲ್ಲಿ ಸೋಮನಾಥ ದೇವಾಲಯದ ಮರುನಿರ್ಮಾಣವಾಯಿತೋ ಹಾಗೆಯೇ ಅಯೋಧ್ಯೆಯಲ್ಲೂ ಯಾವುದೇ ಘರ್ಷಣೆಗಳಿಲ್ಲದೆ ಭವ್ಯವಾದ ಶ್ರೀರಾಮ ಮಂದಿರದ ಮರು ನಿರ್ಮಾಣವಾಗುವಂತಹ ವಾತಾವರಣ ಸೃಷ್ಟಿಯಾಗಲಿ ಎಂಬುದೇ ಸಾಮಾನ್ಯ ಭಾರತೀಯರ ಆಶಯ. ಸುಪ್ರಿಂ ಕೋರ್ಟಿನ ತೀರ್ಪಂತೂ, ಇತಿಹಾಸದ ಸಾಕ್ಷ್ಯಗಳ ಆಧಾರದ ಮೇಲೆ ಅಲ್ಲಿ ಶ್ರೀರಾಮ ಮಂದಿರವಿತ್ತು ಎಂದೇ ಹೇಳಿದೆ. ಮಂದಿರ ನಿರ್ಮಾಣಕ್ಕೆ ಹಿಂದುಗಳಿಗೆ ಜಾಗವನ್ನೂ ನೀಡಿದೆ. ಇದಕ್ಕೆ ಪೂರಕವೆಂಬಂತೆ, ೧೯೪೯ರಲ್ಲೇ ಅಯೋಧ್ಯೆಯ ಜನ್ಮಭೂಮಿ ಜಾಗ ಮುಸ್ಲಿಮರಿಗೆ ಸೇರಬೇಕೆಂದು ಕೋರ್ಟಿನಲ್ಲಿ ಹೋರಾಡುತ್ತಿದ್ದ ಹಶಿಮ್ ಅನ್ಸಾರಿ, ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ತಾವು ಸಿದ್ಧ ಎಂದು ಹೇಳಿರುವುದೂ, ಕೆಲವು ಮುಸ್ಲಿಂ ಸಂಘಟನೆಗಳು ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸಬೇಕೆಂದು ಇತ್ತೀಚೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವುದೂ ಒಳ್ಳೆಯ ಬೆಳವಣಿಗೆ.
ಇವೆಲ್ಲವನ್ನೂ ನೋಡಿದರೆ, ನೂರಾರು ವರ್ಷಗಳ ಹೋರಾಟಕ್ಕೊಂದು ಅಂತಿಮ ಸ್ವರೂಪ ಸಿಕ್ಕಿ ರಾಮಮಂದಿರ ನಿರ್ಮಾಣವಾಗುವ ಕಾಲ ಹತ್ತಿರ ಬರುತ್ತಿದೆ ಎಂಬ ಭಾವನೆ ಬಲವಾಗುತ್ತಿದೆ.