ಬಾಳಾಶಾಸ್ತ್ರಿ ಹರದಾಸ್
ರಾಷ್ಟ್ರೀಯ ಸ್ವಯಂಸೇವಕ ಸಂಘದ ಆದ್ಯ ಸರಸಂಘಚಾಲಕ ದಿ. ಪೂಜ್ಯ ಡಾ. ಹೆಡಗೆವಾರ್ ಅವರ ಜೀವನದ ಹಲವು ಭಾಗಗಳು ಇಂದಿಗೂ ಅಜ್ಞಾತವಾಗಿ ತೆರೆಯಮರೆಯಲ್ಲಿವೆ. 1925 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಂತಹ ರಾಷ್ಟ್ರ ನಿರ್ಮಾಣದ ಬಹು ಮೂಲಭೂತ ಸ್ವರೂಪದ ಕಾರ್ಯಕ್ಕೆ ತಮ್ಮ ಜೀವನವನ್ನು ಮುಡಿಪಾಗಿಡುವುದಕ್ಕೆ ಮುಂಚೆ ಅವರು ರಾಷ್ಟ್ರೀಯ ಅಂದೋಲನದ ಸರ್ವ ರೀತಿಯ ಕ್ಷೇತ್ರಗಳಿಗೂ ಕಾಲಿಟ್ಟಿದ್ದರು. ಅವರ ಆ ಜೀವನದ ಸ್ಥೂಲ ಇತಿಹಾಸವು ಸಾಮಾನ್ಯವಾಗಿ ಲಭ್ಯವಾಗಿದ್ದರೂ, ಅದರಲ್ಲಿನ ಎಷ್ಟೋ ಸೂಕ್ಷ್ಮಭಾಗಗಳು ಲಭ್ಯವಿಲ್ಲ. ಡಾಕ್ಟರ್ಜಿಯವರ ಕ್ರಾಂತಿಜೀವನವು ಅವುಗಳಲ್ಲಿ ಒಂದು ಅನುಪಲಬ್ಧ ಭಾಗವೇ ಆಗಿದೆ.
ಸ್ವದೇಶದ ಬಗ್ಗೆ ಅಂತಃಕರಣದಲ್ಲಿನ ಅಪಾರ ಶ್ರದ್ಧೆ ಮತ್ತು ಮಾತೃಭೂಮಿಯನ್ನು ಪಾರತಂತ್ರದಲ್ಲಿ ತುಳಿದಿಟ್ಟ ಪರಸತ್ತೆಯ ಬಗ್ಗೆ ತಿರಸ್ಕಾರವು ಡಾಕ್ಟರ್ಜಿ ಅಂತಃಕರಣದಲ್ಲಿ ಚಿಕ್ಕಂದಿನಿಂದಲೂ ಇದ್ದಿತು. ಹೀಗಾಗಿ ನೀಲ ಸಿಟಿ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ತಮ್ಮ ಸುತ್ತಲೂ ಅವರು ತರುಣ ವಿದ್ಯಾರ್ಥಿಗಳ ತಂಡವನ್ನು ಕಟ್ಟಿಕೊಂಡಿದ್ದರು. ಅವರಂತಹ ಬಹು ಉಜ್ವಲ ದೇಶಭಕ್ತನ ಮನೋವೃತ್ತಿಯು ಅಂತಹ ಅವಸ್ಥೆಯಲ್ಲಿ ಕ್ರಾಂತಿಕಾರಕ ಮಾರ್ಗಗಳ ಕಡೆ ತಿರುಗಿದ್ದರೆ ಹಾಗೂ ತಮ್ಮ ಸುತ್ತಲೂ ಸೇರಿದ್ದ ತರುಣರನ್ನು ಅವರು ಅದೇ ಮಾರ್ಗಗಳ ಕಡೆ ತಿರುಗಿಸಿದ್ದರೆ ಅದು ಸ್ವಾಭಾವಿಕವೇ ಹೊರತು ಅಚ್ಚರಿಯೇನಿಲ್ಲ. ‘ದೇಶಬಂಧು ಸಮಾಜ’ ಎಂಬ ಹೆಸರಿನಲ್ಲಿ ಎಲ್ಲ ಮಂದಿ ಒಟ್ಟು ಸೇರುತ್ತಿದ್ದರು, ಪರಕೀಯ ಆಡಳಿತವನ್ನು ನಾಶಗೊಳಿಸುವ ವಿವಿಧ ರೀತಿಯ ಸಂಚು ಹೂಡುತ್ತಿದ್ದರು. ಡಾಕ್ಟರ್ಜಿ ಸುತ್ತಲಿದ್ದ ಮಿತ್ರ ಪರಿವಾರದಲ್ಲಿ ಪ್ರಾಣಕ್ಕೆ ಪ್ರಾಣ ಕೊಡಲೂ ಸಿದ್ಧವಾಗಿದ್ದ ಎಲ್ಲರಿಗಿಂತ ಮಹತ್ವದ ವ್ಯಕ್ತಿಯೆಂದರೆ ಭಾವೂಜಿ ಕಾವರೆ.
ಭಾವೂಜಿ ಕಾವರೆ
ಉಗ್ರವಾದರೂ ಇತರರ ಬಗ್ಗೆ ಕೊಂಚ ಅನುಕಂಪದಿಂದ ಅವರ ಅಂತಃಕರಣವನ್ನು ಸಹಜವಾಗಿಯೇ ಭೇದಿಸುವ ತೇಜಸ್ವಿ ಕಣ್ಣುಗಳಿರುವ, ಭವ್ಯ ಮೀಸೆ, ಡಾಕ್ಟರ್ಜಿಯವರಂತೆಯೇ ಗಂಭೀರ-ಗಾಢ ಸ್ವರ, ಭವ್ಯ ಮತ್ತು ಸದೃಢ ಮೈಕಟ್ಟು ಹಾಗೂ ಮಾತನಾಡುವಾಗ ವಿಶಾಲ ಮೀಸೆಗಳುಳ್ಳ ಇವರದು ಸದಾಹಾಸ್ಯದ ಚಟಾಕಿ ಹಾರಿಸುವ ಪ್ರವೃತ್ತಿ. ಇಂತಹ ಭಾವೂಜಿ ಕಾವರೆಯವರು ಡಾಕ್ಟರ್ಜಿಯವರ ಮಿತ್ರಮಂಡಳಿಯ ಮೇರುಮಣಿಯಾಗಿದ್ದರು. ಡಾಕ್ಟರ್ಜಿಯವರ ಕೊಠಡಿಯಲ್ಲಿ ಕಾವರೆಯವರ ಭಾವಚಿತ್ರ ಕೊನೆಯವರೆಗೂ ಇತ್ತು ಮತ್ತು ಆ ಚಿತ್ರದ ಕಡೆ ನೋಡಿ ಡಾಕ್ಟರ್ಜಿಯವರ ವಜ್ರಸದೃಶ ಹೃದಯವೂ ಅನೇಕ ಬಾರಿ ಗದ್ಗದಿತವಾಗುತ್ತಿತ್ತು. ಕಾವರೆಯವರ ಸ್ವರೂಪ ದರ್ಶನವು ಸಾಮಾನ್ಯವಾಗಿ ಡಾಕ್ಟರ್ಜಿಯವರಂತೆ ಇತ್ತು. ಈಚೆಗಿನ ಭಾಷೆಯಲ್ಲಿ ವಿದ್ವತ್ತೆಂದು ಹೇಳುವ ಗುಣ ಅವರಲ್ಲಿ ಎಳ್ಳಷ್ಟೂ ಇರಲಿಲ್ಲ. ಅವರು ಜೀವನವಿಡೀ ಒಂದು ಸಂದರ್ಭದಲ್ಲೂ ಬಹಿರಂಗ ಸಭೆಯಲ್ಲಿ ಭಾಷಣ ಮಾಡಿರಲಿಲ್ಲ. ಆದರೆ ಸಂಘಟನಾ ಕೌಶಲ್ಯ ಮತ್ತು ಮನುಷ್ಯನ ಪರೀಕ್ಷೆಯ ಅವರಲ್ಲಿನ ಗುಣಗಳು ತೀರಾ ಅಪೂರ್ವವಾಗಿದ್ದು ಅದಕ್ಕೆ ಸಾಟಿಯಿರಲಿಲ್ಲ. ಕಾವರೆಯವರ ಮಿತ್ರ ಪರಿವಾರದಲ್ಲಿ ಸಮಾಜದ ಎಲ್ಲ ಸ್ತರಗಳ ವ್ಯಕ್ತಿಗಳಿದ್ದು, ಅವರಲ್ಲಿ ಪ್ರತಿಯೊಬ್ಬರನ್ನೂ ಅವರು ಡಾಕ್ಟರ್ಜಿಯವರ ಸಲಹೆಯಂತೆ ಯಥಾ ಯೋಗ್ಯ ಉಪಯೋಗಿಸಿಕೊಂಡರು. ಡಾಕ್ಟರ್ಜಿಯವರಿಗೆ ಕಾವರೆ ಮೇಲೆ ಅದೆಷ್ಟು ಗಾಢವಿಶ್ವಾಸ ಮತ್ತು ಪ್ರೇಮವಿತ್ತೆಂದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘಕಾರ್ಯ ಬೆಳೆದು ಅದರ ಮೊದಲ ಅದ್ದೂರಿಯ ಶಿಬಿರ ನಡೆದಾಗ ಅದನ್ನು ನೋಡಲು ಭಾವೂಜಿ ಕಾವರೆ ಇಹಲೋಕದಲ್ಲಿ ಇಲ್ಲವೆಂದು ಡಾಕ್ಟರ್ಜಿಯವರಿಗೆ ಅತೀವ ದುಃಖವಾಯಿತು. ಡಾಕ್ಟರ್ಜಿ ಆ ದಿವಸ ಜೀವನದಲ್ಲೊಂದೂ ಆಗಿಲ್ಲದಂತೆ ಮೂಕರೋದನ ಮಾಡುತ್ತಿದ್ದರು. ಡಾಕ್ಟರ್ಜಿ ಖಾಸಗಿ ಬೈಠಕ್ಗಳಲ್ಲಿ ಆಗಾಗ್ಯೆ ಕಾವರೆ ಅವರ ಮಹಾನ್ ಜೀವನದ ಕುರಿತು ತನ್ಮಯತೆಯಿಂದ ವಿವರಿಸುತ್ತಿದ್ದರು. ಕಾವರೆಯವರ ನಿಧನವಾಗಿದ್ದು 1927 ರಲ್ಲಿ, ಡಾಕ್ಟರ್ಜಿಯವರ ತೊಡೆಯ ಮೇಲೆಯೇ. ಭಾವೂಜಿ ಕಾವರೆಯವರಿಂದಾಗಿ ಡಾಕ್ಟರ್ಜಿಯವರ ಆಗಿನ ಸಹಕಾರಿಗಳಲ್ಲಿ ಬಕ್ಷಿ, ವೀರ ಹರಕರೆ, ನಾನಾಜಿ ಪುರಾಣಿಕ್, ಗಾಂಧಿ, ಉಪಾಸನೀ ಮುಂತಾದ ಅನೇಕರು ಸೇರಿದ್ದರು.
ಅನುಶೀಲನ ಸಮಿತಿ
ತಮ್ಮ ಶಾಲಾ ಶಿಕ್ಷಣ ಮುಗಿಸಿ ಕೇಶವರಾವ್ ಕಲ್ಕತ್ತೆಗೆ ವೈದ್ಯಕೀಯ ಶಿಕ್ಷಣ ಪಡೆಯಲು ಹೋದನಂತರ ಅವರಿಗೆ ಬಂಗಾಳಿ ಕ್ರಾಂತಿಕಾರಿಗಳೊಂದಿಗೆ ನಿಕಟ ಸಂಬಂಧವುಂಟಾಯಿತು. ಡಾಕ್ಟರ್ಜಿಯವರ ಗಂಗಾ ಪ್ರವಾಹದಂತಹ ನಿರ್ಮಲ ಚಾರಿತ್ರ್ಯ, ಅವರ ಸತ್ಯನಿಷ್ಠೆ, ಅಪೂರ್ವ ಸಂಘಟನಾ ಚಾತುರ್ಯ ಇತ್ಯಾದಿ ಗುಣಗಳಿಂದ, ಅವರ ಕಲ್ಕತ್ತೆಯ ವಾಸ್ತವ್ಯದಲ್ಲಿ ಅವರ ಸುತ್ತಲಿನ ಸಮಾನ ದೇಶಪ್ರೇಮದ ವಿಚಾರಗಳ ತರುಣ ಸಮುದಾಯದ ಮೇಲೆ ಪ್ರಭಾವವುಂಟಾಯಿತು. ಯೋಗೀಂದ್ರ ಮತ್ತು ಶ್ರೀ ಅರವಿಂದ ಘೋಷ್ ಅವರು ಸ್ಥಾಪಿಸಿದ್ದ, ಮುಂದೆ ಬಂಗಾಳಿ ಕ್ರಾಂತಿಕಾರಿಗಳ ಇತಿಹಾಸದಲ್ಲಿ ಮೆರೆದಿದ್ದ ‘‘ಅನುಶೀಲನ ಸಮಿತಿ’’ ಎಂಬ ವಿಖ್ಯಾತ ಕ್ರಾಂತಿಕಾರಿ ಸಂಸ್ಥೆಯ ಆಂತರಿಕ ಮಂಡಳಿಯಲ್ಲಿ ಡಾಕ್ಟರ್ಜಿ ಶೀಘ್ರವೇ ಪ್ರವೇಶ ಪಡೆದರು. ಒಬ್ಬರನ್ನೊಬ್ಬರು ನೈಜ ಹೆಸರುಗಳನ್ನು ಬಳಸದೆ ಅಡ್ಡ ಹೆಸರುಗಳಿಂದ ವ್ಯವಹರಿಸುವುದು ಅನುಶೀಲನ ಸಮಿತಿಯ ಪದ್ಧತಿಯಾಗಿತ್ತು. ಹೆಸರು ಮತ್ತು ನಿವಾಸ ಸ್ಥಾನಗಳನ್ನು ಸಾಧ್ಯವಾದಷ್ಟೂ ಒಬ್ಬರಿನ್ನೊಬ್ಬರಿಂದ ಗುಪ್ತವಾಗಿಡಲು ಅವರು ಗಮನವಹಿಸುತ್ತಿದ್ದರು. ಎಂದೋ ವಿಪತ್ತಿನ ಪ್ರಸಂಗ ಬಂದಲ್ಲಿ ಪೊಲೀಸರ ಜಾಲಕ್ಕೆ ಸಿಲುಕಿದ ಅಳ್ಳೆದೆಯ ವ್ಯಕ್ತಿಯೊಬ್ಬನಿಂದಾಗಿ ಅನೇಕರು ಬಲಿಬಿದ್ದು ಸರ್ವನಾಶವಾಗದಿರಲೆಂದು ಮುಖ್ಯವಾಗಿ ಈ ಎಚ್ಚರಿಕೆ ವಹಿಸಲಾಗುತ್ತಿತ್ತು. ಆದರೆ ಭಾವನಾಶೀಲತೆ ಮತ್ತು ವಿನಾಕಾರಣ ಸ್ವಂತದ ಸುತ್ತಲು ಗೂಢ ವಲಯವನ್ನು ನಿರ್ಮಿಸುವ ಬಂಗಾಳಿ ನಾಯಕರ ಪ್ರವೃತ್ತಿಯು ಈ ಅಡ್ಡಹೆಸರುಗಳಿಂದಲೂ ವ್ಯಕ್ತವಾಗದಿರಲಿಲ್ಲ. ಅನುಶೀಲನ ಸಮಿತಿಯ ನಾಯಕರು ಸಾದಾ ಪದ್ಧತಿಯಿಂದ ಈ ಅಡ್ಡಹೆಸರುಗಳನ್ನು ಆಯ್ಕೆ ಮಾಡದೆ ಸಾಧ್ಯವಾದಷ್ಟು ಬೆಡಗಿನ ಹೆಸರುಗಳನ್ನು ಇಟ್ಟುಕೊಂಡಿದ್ದರು. ಡಾಕ್ಟರ್ಜಿಯವರಿಗೂ ಅವರು ಅಂತಹದೇ ವಿಚಿತ್ರ ಹೆಸರನ್ನಿಟ್ಟಿದ್ದರು. ಆ ಹೆಸರು ‘ಕೊಕೇನ್’. ಡಾಕ್ಟರ್ಜಿ ಮುಂದೆ ನಾಗಪುರಕ್ಕೆ ಮರಳಿದ ಬಳಿಕ ಈ ಅಡ್ಡಹೆಸರಿನ ಪದ್ಧತಿಯನ್ನು ತಮ್ಮ ಕ್ರಾಂತಿಕಾರಿ ಜೀವನದಲ್ಲಿ ಬಳಸಿಕೊಂಡರು. ಆದರೆ ಸ್ವಭಾವತಃ ಅವರಿಗೆ ಬೆಡಗು-ಬಿನ್ನಾಣಗಳು ಅಸಹ್ಯವಾಗಿದ್ದು, ವ್ಯಥಾ ಸ್ವಪ್ನರಂಜನೆಯಲ್ಲಿ ರಮಿಸುವುದು ಇಷ್ಟವಿಲ್ಲದ್ದರಿಂದ, ತೀರಾ ಸಾದಾ ಮತ್ತು ಸಹಜವಾಗಿ ಯಾರ ಗಮನಕ್ಕೂ ಬಾರದಂತಹ ಅಡ್ಡಹೆಸರುಗಳನ್ನು ಬಳಸಿದರು.
ನಾಗಪುರಕ್ಕೆ ಬಂದ ನಂತರ
ಡಾಕ್ಟರ್ಜಿ ಕಲ್ಕತ್ತೆಯಲ್ಲಿ ತಮ್ಮ ವ್ಯಾಸಂಗ ಮುಗಿಸಿ ನಾಗಪುರಕ್ಕೆ ಬಂದ ಬಳಿಕ ಅವರೊಂದಿಗೆ ಅನುಶೀಲನ ಸಮಿತಿಯ ಕ್ರಾಂತಿಕಾರ್ಯದ ಸರಣಿ ನಾಗಪುರಕ್ಕೆ ಬಂದಿತು. ಡಾಕ್ಟರ್ಜಿ ನಾಗಪುರ ಮತ್ತು ಬಂಗಾಳ ನಡುವಿನ ಒಂದು ಬಹು ಮಹತ್ವದ ಕೊಂಡಿಯೆನಿಸಿದರು. ಅವರ ಜೀವನೋತ್ತರದಲ್ಲಿ ಅನೇಕ ಅಜ್ಞಾತ ಬಂಗಾಳಿ ಜನ ಅವರ ಬಳಿಗೆ ಬಂದು ಹೋಗುತ್ತಿದ್ದರು. ಇಂತಹ ಜನರೊಂದಿಗೆ ಯಾವ ಮಾತು-ಕೃತಿಗಳು ನಡೆಯುತ್ತಿದ್ದಿತೆಂದು ತಿಳಿಯಲು ಯಾವ ವಿಧಾನವೂ ಇಲ್ಲ. ಆದರೆ ಸಂಘಸ್ಥಾಪನೆಗೆ ಮುಂಚಿನ ಕಾಲದಲ್ಲಿ ಬಂಗಾಳದಿಂದ ಅವರ ಬಳಿಗೆ ಎಷ್ಟೋ ಸಲ ಸುಸ್ಥಿತಿಯ ಮತ್ತು ಕೆಟ್ಟಿದ್ದರೆ ರಿಪೇರಿ ಮಾಡಲೋಸುಗ ಪಿಸ್ತೂಲುಗಳು ಬರುತ್ತಿದ್ದವು ಹಾಗೂ ನಾಗಪುರದಿಂದ ಅವರ ಮೂಲಕವೇ ಮರಳಿ ಹೋಗುತ್ತಿದ್ದವು, ಎಂದಷ್ಟು ತಿಳಿದಿದೆ. ಆದರೆ ಇವೆಲ್ಲ ಕೆಲಸಗಳು ಅದೆಷ್ಟು ಸದ್ದಿಲ್ಲದೆ ನಡೆಯುತ್ತಿದ್ದವೆಂದರೆ ಅದೆಂದೂ ಈ ಕಿವಿಯಿಂದ ಆ ಕಿವಿಗೆ ಸುಳಿವು ಹತ್ತುತ್ತಿರಲಿಲ್ಲ. ಹಾಗೆಂದೇ ವರ್ಷಾನುವರ್ಷ ಸದಾಕಾಲವೂ ಅವರ ಹಿಂದೆ ಗುಪ್ತ ಪೊಲೀಸ್ ನಿಗಾ ಇರುತ್ತಿದ್ದರೂ, ದೊಡ್ಡ ದೊಡ್ಡ ಕಾರ್ಯಗಳು ಸದ್ದಿಲ್ಲದೆ ಯಶಸ್ವಿಯಾಗಿ ನಡೆದವು. ಇಂತಹದೇ, ಯಶಸ್ವಿಯಾದ ಒಂದು ಕೃತ್ಯದ ವೃತ್ತಾಂತವನ್ನು ನಾನು ಇಲ್ಲಿ ನೀಡುವೆ.
ಶಸ್ತ್ರಗಳ ಪೆಟ್ಟಿಗೆಯ ರಹಸ್ಯ
1915ನೇ ಇಸವಿಯ ಪ್ರಾರಂಭದ ಕಾಲ. ಪ್ರಥಮ ಮಹಾಯುದ್ಧ ಆಗತಾನೆ ಆರಂಭವಾಗಿತ್ತು. ನಾಗಪುರದಲ್ಲಿ ಈಗ ರೈಲ್ವೆ ಗೋದಾಮು ಇರುವ ಜಾಗದಲ್ಲಿ ರೈಲ್ವೆ ಸ್ಟೇಷನ್ ಇತ್ತು. ಆ ಕಾಲದಲ್ಲಿ ಬಂಗಾಳ-ನಾಗಪುರ ರೈಲ್ವೆಯ ವ್ಯಾಪ್ತಿಯು ನಾಗಪುರವರೆಗಿನದಾಗಿತ್ತು. ಮಹಾಯುದ್ಧದ ಕಾಲದಲ್ಲಿ ಬಂಗಾಳದಿಂದ ನಾಗಪುರಕ್ಕೆ ಬರುವ ರೈಲಿನಲ್ಲಿ ಸದಾ ಬಂದ್ ಇರುತ್ತಿದ್ದ, ಸೀಲ್ ಮಾಡಿದ ಒಂದು ಡಬ್ಬಿ ಬರುತ್ತಿತ್ತು, ಹಾಗೂ ಮುಂದೆ ಅದನ್ನು ನಾಗಪುರದಿಂದ ಮುಂಬಯಿಗೆ ಹೋಗುವ ರೈಲಿಗೆ ಜೋಡಿಸುತ್ತಿದ್ದರು. ಈ ಡಬ್ಬಿಯಲ್ಲಿ ಅಮ್ಯುನಿಶನ್ಸ್ (ಮದ್ದುಗುಂಡುಗಳು) ಇರುತ್ತಿದ್ದವು. ಶಸ್ತ್ರಾಸ್ತ್ರಗಳ ಪೆಟ್ಟಿಗೆಗಳಿಂದ ತುಂಬಿದ ಈ ಡಬ್ಬಿಯಿಂದ ಒಂದು ಪೆಟ್ಟಿಗೆಯನ್ನು ಸುರಕ್ಷಿತವಾಗಿ ಕೈವಶ ಮಾಡಿಕೊಳ್ಳಲು ಡಾಕ್ಟರ್ಜಿಯವರ ತರುಣ ಕ್ರಾಂತಿಕಾರಿ ಮಿತ್ರರು ಸಂಚು ಮಾಡುತ್ತಿದ್ದ ರೈಲ್ವೆ ಕರ್ಮಚಾರಿಗಳು ಈ ಟೋಳಿಗೆ ಚೆನ್ನಾಗಿ ಪರಿಚಿತರಾಗಿದ್ದರು. ಇದು ಡಾಕ್ಟರ್ಜಿಯವರ ಮಿತ್ರಮಂಡಳಿಯ ನಾನಾಜಿ ಪುರಾಣಿಕ್ರದೇ ಸಾಹಸಿ ಕಲ್ಪನೆಯಾಗಿತ್ತು. ಅವರು ಆ ರೈಲ್ವೆ ಕರ್ಮಚಾರಿಗಳೊಂದಿಗೆ ಸಂಧಾನ ಏರ್ಪಡಿಸಿ, ಡಬ್ಬಿಯು ಸ್ಟೇಷನ್ನಿಗೆ ಬರುತ್ತಲೇ ಅದರ ಸೀಲ್ ಮುರಿದು ಅದಲ್ಲಿನ ಒಂದು ಪೆಟ್ಟಿಗೆಯನ್ನು ಹೊರತೆಗೆದು ನೀಡಲು ಅವರನ್ನು ಒಪ್ಪಿಸಿದರು. ಆದರೆ ಪೆಟ್ಟಿಗೆ ಹೊರಕ್ಕೆ ತೆಗೆದರೂ, ಅದನ್ನು ಸ್ಟೇಶನ್ನಿನಿಂದ ಹೊರ ಸಾಗಿಸುವ ಬಗೆ ಹೇಗೆಂಬುದು ಮಹತ್ವದ ಪ್ರಶ್ನೆ. ಆದರೆ ಪುರಾಣಿಕ್ ಅವರು ಒಬ್ಬ ಪೊಲೀಸ್ ಜಮಾದಾರನಿಂದ ಈ ಕೆಲಸ ಮಾಡಿಸಿಕೊಳ್ಳುವ ವಚನ ಪಡೆದರು. ಅನಂತರ ಅವರು ಈ ಸಂಗತಿಯನ್ನು ಕಾವರೆ ಮತ್ತು ಡಾಕ್ಟರ್ಜಿಯವರ ಕಿವಿಗೆ ಹಾಕಿದರು. ಡಾಕ್ಟರ್ಜಿ ಮತ್ತು ಕಾವರೆ ಇಬ್ಬರೂ ಈ ವಿಷಯವನ್ನು ಕಟುವಾಗಿ ವಿರೋಧಿಸಿದರು. ಡಾಕ್ಟರ್ಜಿ ಹೇಳಿದರು, ‘‘ಈ ಕೆಲಸದಿಂದ ಲಾಭಕ್ಕಿಂತಲೂ ನಷ್ಟವೇ ಹೆಚ್ಚು. ಕೆಲಸ ಸಾಧಿಸಿದರೇನೊ ಸರಿಯೇ, ಆದರೆ ಸಾಧಿಸದಿದ್ದರೆ ಅಥವಾ ಬಯಲಾದರೆ ಅದರಿಂದ ಬಹು ಗಂಭೀರ ಪರಿಣಾಮವಾದೀತು. ಪ್ರತ್ಯಕ್ಷ ಯಾವ ಕಾರ್ಯವೂ ಕೈಗೂಡದೆ ಕೇವಲ ನಮ್ಮೆಲ್ಲ ಸಂಘಟನೆ ಮಾತ್ರ ಸರ್ವನಾಶವಾದೀತು.’’ ಆದರೆ ಕೆಲಸ ಕೈಗೂಡೀತೆಂಬ ಒಂದು ರೀತಿಯ ಖಾತರಿ ಹಾಗೂ ತಾರುಣ್ಯದ ಹುಮ್ಮಸ್ಸಿನಿಂದಾಗಿ ಆ ಟೋಳಿ ಒಪ್ಪಲಿಲ್ಲ. ಕೊನೆಗೆ ಆ ಮಂದಿಯನ್ನು ನಿವಾರಿಸಲು ಅಶಕ್ಯವೆಂದು ತೋರಿದ್ದರಿಂದ ಡಾಕ್ಟರ್ಜಿ ಮತ್ತು ಕಾವರೆ ಹೇಳಿದ್ದು, ‘‘ಕಡೇ ಪಕ್ಷ ಕೆಲಸ ಮಾಡುವ ಮುಂಚೆ ಮಾತ್ರ ನಮಗೆ ಹೇಳದಿರಬೇಡಿ’’, ಆ ಮಂದಿ ಅದಕ್ಕೆ ಒಪ್ಪಿದರು. ನಿತ್ಯವೂ ರೈಲ್ವೆಯ ಆ ಡಬ್ಬಿ ಬರುತ್ತಿದ್ದುದರಿಂದ ಸಹಜವಾಗಿಯೇ ಆ ಡಬ್ಬಿಯ ಬಗ್ಗೆ ರಕ್ಷಕ ಅಧಿಕಾರಿಗಳು ಅಷ್ಟೇನೂ ಗಮನವಿರುತ್ತಿರಲಿಲ್ಲ. ಅದರಿಂದಲೇ ಲಾಭ ಪಡೆಯೋಣ ಎಂದು ಈ ಮಂದಿ ನಿರ್ಧರಿಸಿದ್ದರು. ದಿವಸ ನಿಶ್ಚಿತಗೊಳ್ಳುತ್ತಲೇ ಈ ಮಂದಿ ಕಾವರೆ ಮತ್ತು ಡಾಕ್ಟರ್ಜಿಯವರಿಗೆ ಸೂಚನೆ ನೀಡಿದರು. ನಿಶ್ಚಿತವಾದಂತೆ ಒಂದು ಸ್ಪೆಶಲ್ ಟಾಂಗಾ ಮಾಡಿ ಮತ್ತು ಮೈಮೇಲೆ ಸಬ್ ಇನ್ಸ್ಪೆಕ್ಟರ್ ವೇಷ ಧರಿಸಿ ಪುರಾಣಿಕರು ಸ್ಟೇಶನ್ನಿಗೆ ಹೋಗಲು ಹೊರಟರು. ಆದರೆ ಹೊರಟಾಗಿನಿಂದ ಸ್ಟೇಶನ್ವರೆಗೆ ಅವರು ಆಚೀಚೆ ನೋಡಿದರೆ ಏನಾಶ್ಚರ್ಯ! ಹೆಜ್ಜೆಹೆಜ್ಜೆಗೂ ಭರವಸೆಯ ನಗುಮುಖದ ಜನ ಓಡಾಡುತ್ತಿದ್ದುದನ್ನು ಅವರು ಕಂಡರು. ಅವರಿಗೆ ತಾವು ಕೈಗೊಂಡ ಕಾರ್ಯದಲ್ಲಿ ಎಷ್ಟೋ ಧೈರ್ಯ ಬಂದಿತು. ನಾಯಕರು ವೈಚಾರಿಕ ನಿಲುವಿನಿಂದ ತಮ್ಮನ್ನು ವಿರೋಧಿಸಿದರೂ ಪ್ರತ್ಯಕ್ಷ ಕಾರ್ಯಕ್ಕೆ ತೊಡಗುತ್ತಲೇ ತಮಗೆ ಅವರ ಸಹಾಯದ ವರದಹಸ್ತ ಬೆನ್ನಿಗಿದ್ದುದನ್ನು ಕಂಡು ಅವರಿಗೆ ಧನ್ಯತೆ ಅನಿಸಿತು. ಅವರು ಹಾಗೆಯೇ ಸ್ಟೇಶನ್ನಿಗೆ ಹೋದರು. ವಚನ ನೀಡಿದ್ದ ಆ ಹೆಡ್ ಕಾನ್ಸ್ಟೇಬಲ್ ಉಮರಾವ್ ಸಿಂಗ್ ಟಾಂಗಾ ಬಳಿಗೆ ಬಂದು, ಒಳಗಿದ್ದ ವ್ಯಕ್ತಿಗೆ ಪೊಲೀಸ್ ಪದ್ಧತಿಯಂತೆ ವಂದಿಸಿದ. ಟಾಂಗಾವಾಲಾನಿಗೆ ತಿಳಿಯದಿರಲೆಂದು ಒಳಗಿನ ವ್ಯಕ್ತಿಯು ಉಮರಾವ್ ಸಿಂಗನಿಗೆ ಹೇಳಿದ, ‘‘ಹಮಾರೀ ಪೇಟೀ ಜಲ್ದೀ ಲಾವ್’’. ಆ ಸಂದರ್ಭದಲ್ಲಿ ರೈಲು ಬರಲು ಬರೀ ಐದು ನಿಮಿಷವಿತ್ತು. ರೈಲು ಬರುತ್ತಲೇ ರೈಲ್ವೆ ಕರ್ಮಚಾರಿಯು ಕ್ಷಣಾರ್ಧದಲ್ಲಿ ಸೀಟ್ ಮುರಿದು ಪೆಟ್ಟಿಗೆಯನ್ನು ಕೆಳಕ್ಕೆ ಇಳಿಸಿದ. ನಿಶ್ಚಯಿಸಿದ್ದ ಕೂಲಿಯು ಅದನ್ನು ಟಾಂಗಾಕ್ಕೆ ಒಯ್ದಿಟ್ಟ. ಟಾಂಗಾ ಪಾತಾಳೇಶ್ವರದ ಬಳಿ ಬರುತ್ತಲೇ ಕಾವರೆ ಭಾರ ಹೊರುವವನ ವೇಷದಲ್ಲಿ ಮುಂದೆ ಬಂದು ಪೆಟ್ಟಿಗೆಯನ್ನು ವಶಕ್ಕೆ ತೆಗೆದುಕೊಂಡರು ಮತ್ತು ಅದನ್ನು ಒಯ್ಯಬೇಕಾಗಿದ್ದ ಜಾಗಕ್ಕೆ ಒಯ್ಯಲಾಯಿತು.
ಆದರೆ ಡಾಕ್ಟರ್ಜಿ ಈ ವಿಷಯದಲ್ಲಿ ಅದೆಷ್ಟು ದಕ್ಷರಾಗಿದ್ದರೆಂದರೆ, ಕೇವಲ ಕೆಲಸ ಪೂರೈಸಿದ್ದರಿಂದ ಅವರಿಗೆ ಸಮಾಧಾನವಾಗಲಿಲ್ಲ. ಮುಂದೆ ಈ ಪ್ರಕರಣವನ್ನು ಪತ್ತೆಹಚ್ಚಲು ಯೋಗ್ಯ ದಿಶೆಯಲ್ಲಿ ಪ್ರಯತ್ನ ಶುರುವಾದರೆ ಯಾವ ಸುಳಿಹು ಸಿಗಬಾರದೆಂದು ಅವರು ಮತ್ತು ಅವರ ಮಿತ್ರರು ಆ ಸಬ್ ಇನ್ಸ್ಪೆಕ್ಟರ್ನ ದರಿಸನ್ನು ಸುಟ್ಟು ಬೂದಿ ಮಾಡಿದರು ಹಾಗೂ ನಾಗಪುರದ ಪ್ರಸಿದ್ಧ ನದಿ ಕಾಲುವೆಗೆ ಒಯ್ದು ಹಾಕಿದರು.
ಇತ್ತ ಪೆಟ್ಟಿಗೆ ಸ್ಟೇಶನ್ನಿನ ಹೊರಗೆ ಹೋಗುತ್ತಲೇ, ಡಬ್ಬಿಯ ಸೀಲು ಮುರಿದಿದ್ದಕ್ಕೆ ಆ ರೈಲ್ವೆ ಕರ್ಮಚಾರಿಯು ಒಂದೇ ಸಮನೆ ಕಿರುಚಾಡಿದ. ಆಗ ಅತ್ತಿತ್ತ ಒಂದೇ ಸಮನೆ ಗದ್ದಲವೆದ್ದು ‘‘ಈ ಸೀಲು ಮುರಿದಿದ್ದು ಎಲ್ಲಿ, ಹೇಗೆ’’ ಎಂದು ತನಿಖೆ ಶುರುವಾಯಿತು. ಆದರೆ ಬಹಳ ದಿನ ತನಿಖೆ ನಡೆದರೂ ಅದರಿಂದೇನೂ ಕೈಗೆ ಹತ್ತಲಿಲ್ಲ. ಡಾಕ್ಟರ್ಜಿಯವರ ಕ್ರಾಂತಿ ಜೀವನದ ಅತ್ಯಲ್ಪ ಪರಿಚಯವೆಂದೇ ನಾನು ಈ ಸಂಗತಿ ವಿವರವಾಗಿ ಬರೆದಿದ್ದೇನೆ. ಹೀಗೆಯೇ ಅವರ ಜೀವನದ ಇನ್ನೂ ಎಷ್ಟೋ ಪ್ರಸಂಗಗಳನ್ನು ಚಿತ್ರಿಸಬಹುದು.
Source: ‘Vikrama’ Weekly