ವೈಯಕ್ತಿಕ ಅಭಿಪ್ರಾಯ ಎಂದೂ ಸಂಘಟನೆಯ ನಿಲುವಾಗಿರಲು ಸಾಧ್ಯವೇ ಇಲ್ಲ. ಸಂಘದ ನಿಲುವು ಎಂದಿಗೂ ಸಾಮೂಹಿಕವಾಗಿ ತೆಗೆದುಕೊಂಡ ನಿರ್ಧಾರವೇ ಆಗಿರುತ್ತದೆ ಎಂದು ಆರೆಸ್ಸೆಸ್‌ನ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ತಿಳಿಸಿದ್ದಾರೆ. ಆರ್ಗನೈಸರ್, ಪಾಂಚಜನ್ಯ ಪತ್ರಿಕೆಯ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಕೆಲ ಸ್ವಯಂಸೇವಕರು ಸಂಘದಲ್ಲಿ ತೆಗೆದುಕೊಂಡ ನಿಲುವನ್ನು ಸಂಪೂರ್ಣವಾಗಿ ಗಮನಿಸದೇ ತಮ್ಮ ವೈಯಕ್ತಿಕ ನಿಲುವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸುತ್ತಾರೆ. ಆದರೆ ವೈಯಕ್ತಿಕ ಅಭಿಪ್ರಾಯ ಸಾಮೂಹಿಕ ನಿಲುವಿನ ಒಂದು ಭಾಗವಾಗಿರುತ್ತದಷ್ಟೇ ಎಂದು ಹೇಳಿದರು. ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವಾಗ ಜಾಗರೂಕರಾಗಿರಬೇಕು, ಹಾಗೂ ತಮ್ಮ ನಿಲುವು ’ಸಂಘ’ದ ನಿಲುವು ಎಂಬ ಗ್ರಹಿಕೆ ಬರದಂತೆ ಎಚ್ಚರವಹಿಸಬೇಕು ಎಂದು ಕರೆಕೊಟ್ಟರು.
ಜಾಲತಾಣಗಳು, ಆ್ಯಪ್‌ಗಳ ಬಳಕೆಯ ಬಗೆಗಿನ ಪ್ರಶ್ನೆಯನ್ನು ಉತ್ತರಿಸುತ್ತಾ, ಇವೆಲ್ಲವೂ ಅತ್ಯುತ್ತಮವಾದ ಉಪಕರಣಗಳು. ಅವುಗಳಿಗಿರುವ ಇತಿಮಿತಿಗಳು, ಉಪಯುಕ್ತತೆಗಳನ್ನು ಅರ್ಥಮಾಡಿಕೊಂಡು ಬಳಸಬೇಕು. ಅವುಗಳು ಮನುಷ್ಯರನ್ನು ಹೆಚ್ಚು ಸ್ವಾರ್ಥಿ, ಹಾಗೂ ಸ್ವಯಂ ಕೇಂದ್ರಿತರನ್ನಾಗಿ ಮಾಡುತ್ತಿವೆ. ಸೋಷಿಯಲ್ ಮೀಡಿಯಾ ಎಂದರೆ ನಾನು, ನನ್ನದು, ಎಲ್ಲಾ ವಿಷಯಗಳ ಬಗ್ಗೆಯೂ ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳಲೇ ಬೇಕು ಎಂಬಂತಾಗಿಬಿಟ್ಟಿದೆ.
ನನ್ನ ಅಭಿಪ್ರಾಯ ಸಾಮೂಹಿಕ ಅಭಿಪ್ರಾಯಯದ ಒಂದು ಭಾಗವೆಂದು ತಿಳಿದಿದ್ದರೂ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತೇವೆ. ಹಲವೊಮ್ಮೆ ಈ ಅಭಿಪ್ರಾಯಗಳು ತಪ್ಪುಗ್ರಹಿಕೆಗಳನ್ನು ಸೃಷ್ಟಿಸುತ್ತದೆ. ನಮ್ಮ ನಮ್ಮವರ ಜೊತೆಗೆ ವಾಗ್ವಾದಕ್ಕೆ ಇಳಿದುಬಿಡುತ್ತೇವೆ, ಕೊನೆಗೆ ವಿವಾದಾತ್ಮಕ ಸಂದರ್ಭದಲ್ಲಿ ಪ್ರಕಟವಾದ ಅಭಿಪ್ರಾಯವನ್ನು ಅಳಿಸಿಬಿಡುತ್ತೇವೆ. ಸ್ವಯಂಸೇವಕರಷ್ಟೇ ಅಲ್ಲದೇ ಎಲ್ಲರಿಗೂ ಈ ಅನುಭವ ಆಗಿರುತ್ತದೆ. ’ಫೇಸ್ ಬುಕ್’ ಹೆಸರೇ ಹೇಳುವಂತೆ ವೈಯಕ್ತಿಕ ಅಭಿಪ್ರಾಯಕ್ಕೇ ಮನ್ನಣೆ ಹಾಗೂ ಅದೇ ಕಾರಣದಿಂದ ಸ್ವಯಂಕೇಂದ್ರಿತರನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು
ಸ್ವಯಂ ಕೇಂದ್ರಿತರಾಗುವುದರಿಂದ ವೈಯಕ್ತಿಕ ಮಟ್ಟದಲ್ಲಿ ಸೀಮಿತ ಪ್ರಾಮುಖ್ಯತೆ ಹೊಂದಬಹುದೇ ವಿನಾ ಸಂಘಟಿತ ಸ್ತರದಲ್ಲಿ ಯಾವುದೇ ಪ್ರಾಧಾನ್ಯತೆ ಇರುವುದಿಲ್ಲ.
ಸಂಘದ ಫೇಸ್ಬುಕ್, ಟ್ವಿಟರ್ ಖಾತೆಗಳಿವೆ. ನನ್ನ ವೈಯಕ್ತಿಕ ಖಾತೆಗಳಿಲ್ಲ. ಮುಂದೆಯೂ ಅವು ಬರುವುದಿಲ್ಲ. ರಾಜಕೀಯದಲ್ಲಿ ಕೆಲಸ ಮಾಡುವವರಿಗೆ ಇಂತಹ ಉಪಕರಣಗಳು ಸಹಾಯಕವಾಗಬಹುದು ಆದರೆ ಜಾಗರೂಕರಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಬೇಕಿರುವುದು ಇಂದಿನ ಅಗತ್ಯ. ತಂತ್ರಜ್ಞಾನದ ಇತಿಮಿತಿಗಳನ್ನು ಅರಿಯದೇ ಅದರ ಅಡಿಯಾಳುಗಳಾಗಬಾರದು ಎಂದು ಸರಸಂಘಚಾಲಕರು ಹೇಳಿದರು.