23 ಜೂನ್, 2019 ಬೆಂಗಳೂರು: ನಾರದ ಜಯಂತಿ ನಿಮಿತ್ತ ವಿಶ್ವ ಸಂವಾದ ಕೇಂದ್ರ ಕರ್ನಾಟಕ ಇಂದು ಪತ್ರಕರ್ತರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಿತ್ತು. ನಗರದ ರಾಷ್ಟ್ರೋತ್ಥಾನ ಪರಿಷತ್ತಿನ ಕೇಶವ ಶಿಲ್ಪ ಸಭಾಂಗಣದಲ್ಲಿ ಈ ಕಾರ್ಯಕ್ರಮ ಜರುಗಿತು. ವಿ ಎಸ್ ಕೆ, ಕರ್ನಾಟಕ ನಾರದ ಜಯಂತಿ ಆಯೋಜಿಸುತ್ತಿರುವುದು ಇದು ನಾಲ್ಕನೆಯ ವರ್ಷವಾಗಿದೆ. ಪತ್ರಿಕೋದ್ಯಮದ ಭೀಷ್ಮ ಎನಿಸಿಕೊಂಡ ತಿ ತಾ ಶರ್ಮ ಹಾಗೂ ಕನ್ನಡದ ನಿಸ್ಪೃಹ ಪತ್ರಕರ್ತರೆನಿಸಿದ್ದ ವಿಕ್ರಮ ಪತ್ರಿಕೆಯ ಸಂಪಾದಕರಾಗಿದ್ದ ಬೆ ಸು ನಾ ಮಲ್ಯರ ಹೆಸರಿನಲ್ಲಿ ಈವರೆಗೂ ಪತ್ರಿಕೋದ್ಯಮ ಪ್ರಶಸ್ತಿಯನ್ನು ವಿ ಎಸ್ ಕೆ ನೀಡುತ್ತಾ ಬಂದಿದೆ.
ಅಂಕಣಕಾರರು ಹಾಗೂ ಅಸೀಮಾ ಮಾಸಿಕದ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀ ಸಂತೋಷ್ ತಮ್ಮಯ್ಯ ಅವರಿಗೆ ಬೆ ಸು ನಾ ಮಲ್ಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಖ್ಯಾತ ಬರಹಗಾರರು, ಹಾಗೂ ಅಂಕಣಕಾರರಾದ ಶ್ರೀ ರೋಹಿತ್ ಚಕ್ರತೀರ್ಥ ಅವರಿಗೆ ತಿ ತಾ ಶರ್ಮ ಪತ್ರಿಕೋದ್ಯಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತರು, ಲೇಖಕರು, ಅಂಕಣಕಾರರು, ಮಲ್ಲಾರ ಮಾಸಿಕದ ನಿರ್ವಾಹಕ ಸಂಪಾದಕರಾದ ಡಾ. ಬಾಬು ಕೃಷ್ಣಮೂರ್ತಿಯವರು ಸಂತೋಷ್ ಹಾಗೂ ರೋಹಿತ್ ಗೆ ಸನ್ಮಾನ ಮಾಡಿದರು.
ಡಾ. ಬಾಬು ಕೃಷ್ಣಮೂರ್ತಿಯವರು ತಮ್ಮ ಭಾಷಣದಲ್ಲಿ, ಬೆ ಸು ನಾ ಮಲ್ಯ ಹಾಗೂ ತಿ ತಾ ಶರ್ಮ ರ ಹೆಸರಿನಲ್ಲಿ ವಿ ಎಸ್ ಕೆ ಪತ್ರಕರ್ತರಿಗೆ ಸನ್ಮಾನ ಮಾಡುತ್ತಾರೆಂದು ತಿಳಿದ ಕೂಡಲೇ, ಇಬ್ಬರ ಜೊತೆಗೂ ಆತ್ಮೀಯ ಒಡನಾಟವಿತ್ತಾದ್ದರಿಂದ ಅವರಿಬ್ಬರಿಂದಲೂ ಕಲಿತದ್ದು ಬಹಳವಿದೆಯಾದ್ದರಿಂದ ಸಹರ್ಷದಿಂದ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಒಪ್ಪಿಕೊಂಡೆ ಎಂದು ತಿಳಿಸಿದರು. ಬೆ ಸು ನಾ ಮಲ್ಯರು ಬ್ಯಾಂಕ್ ಉದ್ಯೋಗಿಯಾಗಿದ್ದವರು, ಆರೆಸ್ಸೆಸ್ ಪ್ರಚಾರಕರಾದ ಮಾನ್ಯ ಯಾದವ ರಾವ್ ಜೋಶಿಯವರು ಹೇಳಿದ್ದೇ ತಡ ತಮ್ಮ ಉತ್ತಮ ಸಂಬಳ ತಂದುಕೊಡುತ್ತಿದ್ದ ಸಂಬಳದ ಉದ್ಯೋಗವನ್ನು ತ್ಯಜಿಸಿ ‘ವಿಕ್ರಮ’ ಪತ್ರಿಕೆಗೆ ತಮ್ಮ ಜೀವನವನ್ನು ಕೊಟ್ಟವರು ಎಂದು ಅಭಿಪ್ರಾಯಪಟ್ಟರು.
ನಿರ್ಭೀತ ಪತ್ರಕರ್ತರಾಗಿದ್ದ ತಿ ತಾ ಶರ್ಮ ತಮ್ಮ ಮೊನಚು ಬರಹಗಳಿಂದ ಸಮಾಜವನ್ನು, ಆಡಳಿತವನ್ನು, ಸರ್ಕಾರವನ್ನು ಜಾಗೃತಗೊಳಿಸಿದವರು ಹಾಗೂ ಪತ್ರಕರ್ತ ವೃತ್ತಿಗೆ ಆದರ್ಶರಾಗಿ ಬದುಕಿದರು ಎಂದು ತಿಳಿಸಿದರು.
ಸ್ವಾತಂತ್ರ್ಯ ಪೂರ್ವದ ಇಂತಹ ಪತ್ರಕರ್ತರ ದಿಟ್ಟತನ, ಪ್ರಾಮಾಣಿಕತೆ, ನಿಸ್ಪೃಹತೆ, ನಿಷ್ಠೆ ಇಂದಿನ ಪತ್ರಕರ್ತರಲ್ಲೂ ಆ ಗುಣಗಳಿರಬೇಕಾದ್ದು ಅಗತ್ಯ ಎಂದು ಆಗ್ರಹಿಸಿದರು.
ಕೊಡವರ ಸಂಸ್ಕೃತಿಯಂತೆ ಯಾವುದೇ ಮಂಗಳಕರ ಕೆಲಸದಲ್ಲೂ ಅವರ ಉಡುಗೆಯನ್ನು ತೊಡುತ್ತಾರಾದ್ದರಿಂದ ಸಂತೋಷ್ ಈ ಕಾರ್ಯಕ್ರಮದಲ್ಲಿ ಕೊಡವರ ಉಡುಗೆಯಲ್ಲಿದ್ದದ್ದು ವಿಶೇಷ. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸಂತೋಷ್ ತಮ್ಮಯ್ಯ ಈ ಅನಿರೀಕ್ಷಿತ ಪ್ರಶಸ್ತಿ ತಮ್ಮ ಬರವಣಿಗೆಯ ಜವಾಬ್ದಾರಿಯನ್ನು , ರಾಷ್ಟ್ರೀಯ ವಿಚಾರಗಳ ಚಿಂತನೆಗಳು ಮತ್ತಷ್ಟು ಗಟ್ಟಿಯಾಗಿಸುತ್ತವೆಂದು ನುಡಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ರೋಹಿತ್ ಚಕ್ರತೀರ್ಥ ಓದುಗರಿಂದಲೇ ಬರಹಗಾರ ಹೆಚ್ಚು ಗಟ್ಟಿಗೊಳ್ಳುತ್ತಾ ಹೋಗುತ್ತಾನೆ ಹಾಗೂ ತಮ್ಮನ್ನು ಪೋಷಿಸುತ್ತಿರುವ ಓದುಗ, ಪತ್ರಿಕಾ ಪ್ರಕಾಶಕ, ಸಂಪಾದಕರು, ತಮ್ಮ ಗುರುಗಳು ಎಲ್ಲರನ್ನು ನೆನೆದು ಅವರೆಲ್ಲರಿಗೂ ಈ ಸನ್ಮಾನ ಸೇರಬೇಕು ಎಂದು ಅಭಿಮಾನದಿಂದ ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಬಾಬು ಕೃಷ್ಣಮೂರ್ತಿಯವರಿಗೆ ವಿ ಎಸ್ ಕೆ ಸ್ಥಾಪಕ ವಿಶ್ವಸ್ತರಾದ ಬಿ ಎಸ ಮಂಜುನಾಥ್ ಗೌರವ ಸಮರ್ಪಣೆ ಮಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಕಾಂತ್ ಶರ್ಮ ನಿರ್ವಹಿಸಿದರು. ವಿಶ್ವ ಸಂವಾದ ಕೇಂದ್ರದ ಸಂಯೋಜಕರು, ವಿಶ್ವಸ್ತರು ಉಪಸ್ಥಿತರಿದ್ದರು.