ಹಿಂದವೀ ಸ್ವರಾಜ್ಯ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ್
ಲೇಖನ: ಹರೀಶ್ ಕುಲಕರ್ಣಿ
ಹಿಂದೂ ಸಾಮ್ರಾಜ್ಯ ದಿನಕ್ಕೆ ಒಂದು ವಿಶೇಷ ಲೇಖನ.
ಜ್ಯೇಷ್ಠ ಶುಕ್ಲ ತ್ರಯೋದಶಿ (೬ ಜೂನ, ೧೬೭೪) ತಾಯಿ ಜೀಜಾ ಮಾತೆಯ ಸಂಕಲ್ಪದಂತೆ ಶಿವಾಜಿಯ ರಾಜ್ಯಾಭಿಷೇಕದ ಮೂಲಕ ಸ್ವರಾಜ್ಯ ಸ್ಥಾಪನೆಯಾಗುತ್ತದೆ. ಶಿವಾಜಿ….ಛತ್ರಪತಿ ಶಿವಾಜಿ ಮಹಾರಾಜನಾಗುತ್ತಾನೆ. ಪ್ರತಿ ವರ್ಷ ಈ ದಿನವನ್ನು ಹಿಂದೂ ಸಾಮ್ರಾಜ್ಯೋತ್ಸವ ದಿನವೆಂದು ಆಚರಿಸಲಾಗುತ್ತದೆ ಇದು ವ್ಯಕ್ತಿಯ ಜನ್ಮದಿನ ಅಲ್ಲ..ಬದಲಾಗಿ ಒಂದು ಘಟನೆಯ ದಿನದ ಆಚರಣೆ ಎಂಬುದು ಗಮನಿಸಬೇಕಾದ ಅಂಶ. ವ್ಯಕ್ತಿಗಿಂತ ಸ್ವರಾಜ್ಯ ದೊಡ್ಡದು ಎಂಬ ಈ ಕಲ್ಪನೆಗೆ ಶಿವಾಜಿಯೇ ಸ್ಫೂರ್ತಿ.
ಒಬ್ಬ ರಾಜನ ಯಾವುದೇ ಸಾಮರಿಕ ಅಥವಾ ಆಡಳಿತಾತ್ಮಕ ನಿರ್ಣಯಗಳಿರಲಿ, ಅವುಗಳಲ್ಲಿ ಪ್ರತಿಬಿಂಬಿಸುವುದು ನಿರ್ಣಯಗಳನ್ನು ತೆಗೆದುಕೊಂಡ ನಾಯಕನ ಗುಣಗಳು. ಇದೇ ವಿಷಯದಲ್ಲೇ ಶಿವಾಜಿ ಒಬ್ಬ ಮಹಾನಾಯಕನಾಗಿ ಹೊರಹೊಮ್ಮುವುದು.
ಛತ್ರಪತಿ ಶಿವಾಜಿ ಮಹಾರಾಜರ ಇಂತಹ ಗುಣಗಳನ್ನು ಯಥಾಶಕ್ತಿ (ಶಿವಾಜಿಯಂಥ ಮಹಾನಾಯಕನ ಸಂಪೂರ್ಣ ಪರಿಚಯಕ್ಕೆ ಪುಟಗಳಷ್ಟೇ ಅಲ್ಲ, ಗ್ರಂಥಗಳೂ ಸಾಲದು) ಪರಿಚಯಿಸುವುದೇ ಈ ಲೇಖನದ ಆಶಯ.
ಇತಿಹಾಸದ ಈ ಘಟನೆಯ ಮಹತ್ವ ಅರಿಯಲು, ಶಿವಾಜಿ ಹುಟ್ಟುವ ಮೊದಲು ದೇಶ ಹಾಗೂ ಸಮಾಜದಲ್ಲಿನ ಪರಿಸ್ಥಿತಿ, ಶಿವಾಜಿ ಹುಟ್ಟಿದ ನಂತರ ಆತ ತಂದ ಬದಲಾವಣೆ, ಮತ್ತು ಶಿವಾಜಿಯ ನಂತರವೂ ಆ ಬದಲಾವಣೆಗಳು ದೀರ್ಘ ಕಾಲದವರೆಗೆ ಜಾರಿಯಲ್ಲಿದ್ದದ್ದನ್ನು ನಾವು ಗಮನಿಸಲೇಬೇಕಾದ ಅಂಶಗಳು.
ವಿಜಯನಗರ ಸಾಮ್ರಾಜ್ಯದ ಪತನವಾದ ನಂತರ ಉತ್ತರದಲ್ಲಿ ಮೊಘಲರ ಮತ್ತು ದಕ್ಷಿಣದಲ್ಲಿ ಅದಿಲ್ ಶಾಹಿಗಳ ಬರ್ಬರ ಆಳ್ವಿಕೆಯಿಂದ ದೇಶ ಹಾಗೂ ಹಿಂದೂ ಸಮಾಜ ತತ್ತರಿಸಿ ಹೋಗಿತ್ತು. ಯುದ್ಧ ಗೆದ್ದರೆ ಆಕ್ರಮಿತ ಪ್ರದೇಶದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದೇವಾಲಯಗಳ ಮೇಲೆ ದಾಳಿ ಮತ್ತು ಅವುಗಳ ಲೂಟಿ, ದುರಾಡಳಿತ, ಮುಂತಾದ ಹಿಂಸೆಗಳಿಂದ ಹತಾಶೆಗೊಳಗಾಗಿ ಹಿಂದೂ ಸಮಾಜ ಅಸಹಾಯಕ ಸ್ಥಿತಿಯಲ್ಲಿತ್ತು. ಶಿವಾಜಿ ಹುಟ್ಚಿದಾಗ (ಜನನ: ಫಾಲ್ಗುಣ ಮಾಸದ ತೃತೀಯಾ. ೧೯ ಫೆಬ್ರವರಿ, ೧೬೩೦. ಸ್ಥಳ – ಶಿವನೇರಿ ದುರ್ಗ) ದೇಶ ಹಾಗೂ ಧರ್ಮ ಇಂತಹ ಸಂಕಷ್ಟಗಳ ಪರಿಸ್ಥಿತಿಯಲ್ಲಿತ್ತು. ತಂದೆ ಶಹಾಜಿ ಬಿಜಾಪುರ ಸುಲ್ತಾನನ ಸಾಮಂತರಾಗಿದ್ದರು. ತಾಯಿ ಮಾತೆ ಜೀಜಾಬಾಯಿ. ತಂದೆ ಯಾವಾಗಲೂ ಕೆಲಸನಿರತರಾಗಿದ್ದರಿಂದ ಶಿವಾಜಿಯ ಆರೈಕೆ ಮತ್ತು ಬೆಳವಣಿಗೆ ಆಗಿದ್ದು ತಾಯಿಯ ಆಶ್ರಯದಲ್ಲಿ. ಸ್ವರಾಜ್ಯದ ಕನಸು ಚಿಗುರೊಡೆದದ್ದೂ ಇಲ್ಲಿಯೇ. ತಾಯಿ ಹೇಳುತ್ತಿದ್ದ ರಾಮಾಯಣ, ಮಹಾಭಾರತ ಮುಂತಾದ ಕತೆಗಳನ್ನು ಕೇಳುತ್ತಲೇ ಪ್ರಾಪ್ತವಾದ ವಿದ್ಯೆ ಮತ್ತು ಸಂಸ್ಕಾರದಿಂದ ಸ್ವರಾಜ್ಯದ ಗುರಿಗೆ ಸುರಾಜ್ಯವೆಂಬ ಉದ್ದೇಶವೂ ದೊರಕಿತು.
ಶಿವಾಜಿ ತನ್ನ ಹದಿನಾರನೆಯ ವಯಸ್ಸಿನಲ್ಲಿ ಮಾವಳರ ಮತ್ತು ಗುಡ್ಡಗಾಡಿನ ಆದಿವಾಸಿಗಳಿಂದ ಕೂಡಿದ ಸೈನ್ಯದಿಂದ ಬಿಜಾಪುರ ಸುಲ್ತಾನನ ವಶದಲ್ಲಿದ್ದ ತೋರಣಗಡ ಕೋಟೆಯನ್ನು ವಶಪಡಿಸಿಕೊಳ್ಳುವ ಮೂಲಕ ಸ್ವರಾಜ್ಯದ ಅಭಿಯಾನ ಆರಂಭವಾಯಿತು. ಮುಂದೆ ಗೆರಿಲ್ಲಾ ಯುದ್ಧ ಪದ್ಧತಿಯ ಮೂಲಕ ಅನೇಕ ಕೋಟೆಗಳನ್ನು ಗೆದ್ದು (ರಾಜ್ಯ ವಿಸ್ತಾರದಲ್ಲಿ ಕೋಟೆಗಳನ್ನು ಗೆಲ್ಲುವುದಕ್ಕೆ ಬಹಳ ಮಹತ್ವ ಇದೆ) ಸ್ವರಾಜ್ಯ ಬೆಳೆಯತೊಡಗಿತು. ನಿಧಾನವಾಗಿ ಸಮಾಜದಲ್ಲಿ ನಿರಾಶೆಯ ವಾತಾವರಣ ದೂರವಾಗುತ್ತಾ ಭರವಸೆಯ, ಉತ್ಸಾಹದ ವಾತಾವರಣ ಮೂಡತೊಡಗಿತು.
ಆದರೆ ಶಿವಾಜಿಯ ಮನಸ್ಸಿನಲ್ಲಿ ಸ್ವರಾಜ್ಯದ ಬಗ್ಗೆ ವೈಚಾರಿಕ ಸ್ಪಷ್ಟತೆ ಇತ್ತು. ಸ್ವರಾಜ್ಯ ಕೇವಲ ಭೌಗೋಳಿಕ ವಿಸ್ತಾರಕ್ಕಾಗಷ್ಟೇ ಅಲ್ಲದೆ, ಅದಕ್ಕಿಂತ ಮುಖ್ಯವಾಗಿ ಆಡಳಿತದಲ್ಲಿ ಬದಲಾವಣೆಗಳ ಮೂಲಕ ಸಮಾಜದಲ್ಲಿ ಪರಿವರ್ತನೆ, ದೇಶದಲ್ಲಿ ಸುಭಿಕ್ಷೆ, ನಾಗರಿಕರ ಅದರಲ್ಲೂ ಮಹಿಳೆಯರ ಹಿತರಕ್ಷಣೆಯ ವಾತಾವರಣ ಮೂಡಿಸುವುದಾಗಿತ್ತು. ಇದೇ ಸುರಾಜ್ಯದ ಕಲ್ಪನೆ. ಹತಾಶೆಯಿಂದ ನರಳುತ್ತಿದ್ದ ಸಮಾಜದಲ್ಲಿ ಇಂತಹ ಪರಿವರ್ತನೆ ತರಲು ಗಟ್ಟಿಯಾದ, ದೃಢವಾದ ನಾಯಕತ್ವ ಅತ್ಯಂತ ಮುಖ್ಯವಾದುದು. ಅದಕ್ಕಿಂತ ಮುಖ್ಯವಾದುದು ನಾಯಕತ್ವ ವಹಿಸುವ ನಾಯಕನ ಗುಣಗಳು. ಏಕೆಂದರೆ ಯಾವುದೇ ಆಡಳಿತಾತ್ಮಕ ನಿರ್ಣಯಗಳಿರಲಿ, ಅವುಗಳಲ್ಲಿ ಪ್ರತಿಬಿಂಬಿಸುವುದು ನಿರ್ಣಯಗಳನ್ನು ತೆಗೆದುಕೊಂಡ ನಾಯಕನ ಗುಣಗಳು. ಇದೇ ವಿಷಯದಲ್ಲೇ ಶಿವಾಜಿ ಒಬ್ಬ ಮಹಾನಾಯಕನಾಗಿ ಹೊರಹೊಮ್ಮುವುದು.
ಒಬ್ಬ ನಾಯಕನ ಎಲ್ಲಾ ವಯಕ್ತಿಕ ಮತ್ತು ಆಡಳಿತಾತ್ಮಕ ಸದ್ಗುಣಗಳಿಗೂ ಮೂಲ ಶುದ್ಧ ಚಾರಿತ್ರ್ಯ ಮತ್ತು ಶುದ್ಧ ಹಸ್ತ. ಶಿವಾಜಿಗೆ ಇವೆರಡೂ ಗುಣಗಳು ಸಂಸ್ಕಾರ ರೂಪದಲ್ಲಿ ಪ್ರಾಪ್ತವಾಗಿದ್ದವು. ಶಿವಾಜಿಯ ಸೈನ್ಯ ಪುಣೆ ನವಾಬನ ವಿರುದ್ಧ ಗೆದ್ದು ನವಾಬನ ಅರಮನೆ ವಶಪಡಿಸಿಕೊಂಡಾಗ ಆಗ ಅಲ್ಲಿದ್ದ ನವಾಬನ ಸೊಸೆ ಹೆದರಿಕೆಯಿಂದ ನಡುಗುತ್ತಿದ್ದಳು (ಆಕೆಗೆ ತಮ್ಮವರು ಯುದ್ಧ ಗೆದ್ದಾಗ ಸೋತ ರಾಜ್ಯದ ಹೆಣ್ಣು ಮಕ್ಕಳ ಜೊತೆ ಯಾವ ರೀತಿ ವರ್ತಿಸುತ್ತಿದ್ದರು ಎಂಬ ಅರಿವಿತ್ತು). ಆಗ ಶಿವಾಜಿ ಆಕೆಯನ್ನು ನೋಡಿ ಆಕೆಗೆ ತಾಯಿ ಸ್ಥಾನದ ಗೌರವ ಕೊಟ್ಟು ಮಾತಾಡಿಸಿದ್ದಲ್ಲದೆ ಆಕೆಯನ್ನು ಆಕೆಯ ಕುಟುಂಬವನ್ನು ಅವರು ಹೋಗಲಿಚ್ಛಿಸಿದ ಕಡೆ ಗೌರವ ಮತ್ತು ರಕ್ಷಣೆಯೊಂದಿಗೆ ಬೀಳ್ಕೊಡುತ್ತಾನೆ. ಶಿವಾಜಿಯ ಈ ಗುಣ ಅವನ ಆಡಳಿತದಲ್ಲೂ ಕಾಣಸಿಗುತ್ತದೆ. ಆತನ ಆಡಳಿತದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಅಪಮಾನಗಳಂತಹ ಘಟನೆಗಳು ನಮಗೆ ಇತಿಹಾಸದಲ್ಲಿ ಕಂಡುಬರುವುದಿಲ್ಲ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ತಪ್ಪಿತಸ್ಥರಿಗೆ ತ್ವರಿತ ಮತ್ತು ಕಠಿಣ ಶಿಕ್ಷೆ ಖಚಿತವಾಗಿರುತ್ತಿತು. ಪುಣೆ ರಾಂಝೆ ಎಂಬ ಹಳ್ಳಿಯ ಪಾಟೀಲ ತನ್ನ ಶಕ್ತಿಯ ದುರ್ಬಳಕೆ ಮಾಡಿಕೊಂಡು ಒಂದು ಹೆಣ್ಣಿನ ಮೇಲೆ ಬಲಾತ್ಕಾರ ಮಾಡುತ್ತಾನೆ. ವಿಷಯ ತಿಳಿದ ಶಿವಾಜಿ ಕೂಡಲೇ ಪಾಟೀಲನನ್ನು ದರ್ಬಾರಿಗೆ ಕರೆಸಿಕೊಂಡು, ವಾದ ಪ್ರತಿವಾದ ಆಲಿಸಿ, ಪಾಟೀಲ ತಪ್ಪಿತಸ್ಥನೆಂದು ರುಜುವಾತು ಆದಮೇಲೆ ತಕ್ಷಣವೇ ಕಠಿಣ ಶಿಕ್ಷೆಯನ್ನು ವಿಧಿಸುತ್ತಾನೆ. ಶಿವಾಜಿಯು ಹಣಕಾಸು, ಕೋಟೆ ರಕ್ಷಣೆ, ಇನ್ನಿತರ ಕಾರ್ಯ ವಿಭಾಗಗಳ ಮೇಲ್ವಿಚಾರಣೆಗೆ ಎಂದಿಗೂ ತನ್ನ ಆಪ್ತ ಸಂಬಂಧಿಕರನ್ನು ನೇಮಿಸುತ್ತಿರಲಿಲ್ಲ. ಹಾಗೆಯೇ ಆಡಳಿತದಲ್ಲಿನ ಅಧಿಕಾರಿಗಳ ಸಂಬಧಿಕರು ತಪ್ಪು ಮಾಡಿದಲ್ಲಿ ಕ್ಷಮೆಯೂ ಇರುತ್ತಿರಲಿಲ್ಲ. ಶಿವಾಜಿ ತನಗೆ ಮಾಡಿದ ವಯಕ್ತಿಕ ದ್ರೋಹಗಳನ್ನು ಕ್ಷಮಿಸುತ್ತಿದ್ದ. ಆದರೆ ಆಡಳಿತದಲ್ಲಿ ದ್ರೋಹವಾದರೆ ಅವರುಯಾರೇ ಇರಲಿ ಶಿಕ್ಷೆ ಖಚಿತವಾಗಿರುತ್ತಿತ್ತು. ಕಾನ್ಹೋಜಿ ಜೈಧೆ ಸ್ವರಾಜ್ಯದ ಹಿರಿಯ ವ್ಯಕ್ತಿಯಾಗಿದ್ದರು ಮತ್ತು ಶಿವಾಜಿಯ ಅತ್ಯಂತ ಗೌರವಕ್ಕೆ ಪಾತ್ರರಾಗಿದ್ದರು. ಕಾನ್ಹೋಜಿಯ ಸಂಬಂಧಿ ಖಂಡೋಜಿ ಅಫ್ಜಲ ಖಾನ್ ಪರವಾಗಿ ಕೆಲಸ ಮಾಡಿ ರಾಷ್ಟ್ರ ದ್ರೋಹದ ಆರೋಪ ಹೊತ್ತಾಗ, ಶಿವಾಜಿ ಸಂಬಂಧಗಳನ್ನು ಲೆಕ್ಕಿಸದೆ ಖಂಡೋಜಿಗೆ ಕಠಿಣ ಶಿಕ್ಷೆ ವಿಧಿಸುತ್ತಾನೆ. ಆಡಳಿತದಲ್ಲಿ ಶಿವಾಜಿಯ ಈ ಕಠೋರತೆಗೆ ಕಾರಣವೂ ಇತ್ತು. ಸರಿಪಡಿಸಬೇಕಾದದ್ದು ಶತಮಾನಗಳ ದಾಸ್ಯದ ಅಸಹಾಯಕತೆ ಮತ್ತು ಅತ್ಯಚಾರಿ ವಿದೇಶಿ ಆಡಳಿತದ ಪರಿಣಾಮವನ್ನು. ಅದಕ್ಕೆ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸಾಗಳಾಗಬೇಕಿತ್ತು. ಇಂತಹ ಸಂದರ್ಭಗಳಲ್ಲಿ ಸ್ವಜನ ಪಕ್ಷಪಾತ ಮತ್ತು ನ್ಯಾಯ ಕೊಡುವಲ್ಲಿ ವಿಳಂಬ ಸ್ವರಾಜ್ಯದ ಉದ್ದೇಶವನ್ನೇ ಬುಡಮೇಲು ಮಾಡುವ ಅರಿವು ಶಿವಾಜಿಗೆ ಇತ್ತು. ಆದ್ದರಿಂದಲೇ ಶಿವಾಜಿಯ ಆಡಳಿತದಲ್ಲಿ ಈ ಕಠೋರತೆ ಮತ್ತು ದಕ್ಷತೆ ಕಂಡುಬರುತ್ತದೆ.
ಶಿವಾಜಿಗಿದ್ದ ಇನ್ನೊಂದು ಗುಣ ಶ್ರದ್ಧೆ. ತಂದೆ ತಾಯಿಯರಲ್ಲಿ ಶ್ರದ್ಧೆ, ಗುರು ಹಿರಿಯರಲ್ಲಿ ಶ್ರದ್ಧೆ, ಹಾಗೆಯೇ ಸ್ವರಾಜ್ಯದ ಕಲ್ಪನೆಯಲ್ಲೂ ಅಪಾರವಾದ ಶ್ರದ್ಧೆಯಿತ್ತು. ಸ್ವರಾಜ್ಯದ ಎಲ್ಲ ಕೆಲಸಗಳನ್ನೂ ಶ್ರದ್ಧೆಯಿಂದ ಮಾಡುತ್ತಿದ್ದ ಶಿವಾಜಿಯನ್ನು ನೋಡಿ ಜೊತೆಗಾರರಲ್ಲೂ, ಸೈನಿಕರಲ್ಲೂ, ಮತ್ತು ಜನಸಾಮಾನ್ಯರಲ್ಲೂ ಸ್ವರಾಜ್ಯದ ಬಗ್ಗೆ ಶ್ರದ್ಧೆ ಮೂಡಿತು. ರಾಜ್ಯದ ಎಲ್ಲಾ ಜನರು ಸ್ವರಾಜ್ಯದ ಅಭಿಯಾನದಲ್ಲಿ ತಾವೂ ಕೂಡ ಭಾಗಿದಾರರೆಂದೇ ತಮ್ಮ ತಮ್ಮ ಕೆಲಸಗಳನ್ನು ಮಾಡಿದರು. ಇದರಿಂದ ಒಬ್ಬರಿಗೊಬ್ಬರ ಮೇಲೆ ವಿಶ್ವಾಸ ಮೂಡಿ ಈ ಪರಸ್ಪರ ವಿಶ್ವಾಸದಿಂದ ಕೂಡಿದ ಕೆಲಸಗಳೇ ಸ್ವರಾಜ್ಯದ ಬಹುದೊಡ್ಡ ಶಕ್ತಿಯಾಗಿ ಪರಿಣಮಿಸುತ್ತವೆ. ಶ್ರದ್ಧೆಯಿಂದ ಮೂಡಿದ ಈ ಪರಸ್ಪರ ವಿಶ್ವಾಸದ ಶಕ್ತಿ ಎಷ್ಟಿತ್ತೆಂದರೆ ಸುಬೇದಾರರು, ಸೈನಿಕರು, ಜನಸಾಮಾನ್ಯರೂ ಸಹ ಸ್ವರಾಜ್ಯಕ್ಕಾಗಿ ಪ್ರಾಣ ಕೊಡಲು ಎಂದಿಗೂ ಹಿಂಜರಿಯುತ್ತಿರಲಿಲ್ಲ. ಈ ವಿಶ್ವಾಸವೇ ತಾನಾಜಿ ಮಾಲುಸರೆ, ಬಾಜಿಪ್ರಭು ದೇಶಪಾಂಡೆ, ಯಸ್ಸೋ ಕಾಂಕ್, ನಾನಾ ಪಾಲಕರ್, ನೂರಖಾನ ಬೇಗ್, ದಾದಾಜಿ ನರಸ್ ಪ್ರಭು, ಬಹಿರಜಿ ನಾಯಕ್ ಹೀಗೆ ಮುಂತಾದ ಪರಾಕ್ರಮಿ ಸೇನಾನಾಯಕರು ಸೋಲು ಗೆಲುವು, ಕಷ್ಟ ಸುಖ, ಇನ್ನಿತರ ಯಾವುದೇ ಹಿನ್ನೆಲೆಯಲ್ಲಾಗಲಿ ಶಿವಾಜಿಯ ಜೊತೆ ಬಿಟ್ಟವರಲ್ಲ. ಒಟ್ಟಿಗೇ ಇದ್ದು ಕಷ್ಟಗಳನ್ನೆದುರಿಸಿದ್ದಷ್ಟೇ ಅಲ್ಲದೆ ಪ್ರಾಣವನ್ನೂ ಕೊಟ್ಟು ಸ್ವರಾಜ್ಯ ಸ್ಥಾಪನೆ ಮಾಡಿದವರು. ಶಿವಾಜಿಗೆ ಸ್ವರಾಜ್ಯದ ಮೇಲಿದ್ದ ಶ್ರದ್ಧೆ ಅವನ ಜೊತೆಗಾರರಲ್ಲಿ ರಾಷ್ಟ್ರ ನಿಷ್ಠೆ ಮತ್ತು ರಾಜ ನಿಷ್ಠೆ ಎರಡನ್ನೂ ಬೆಳೆಸಿತ್ತು.
“ಕ್ಷುದ್ರಂ ನ ಕಿಂಚಿತಿಹ ನಾನುಪಯೋಗಿ ಕಿಂಚಿತ್
ಸರ್ವಂ ಹಿ ಸಂಘಟಿತಮತ್ರ ಭವೇತ್ ಫಲಾಯ”
ಇದನ್ನು ಸರಿಯಾಗಿ ಅರ್ಥೈಸಿಕೊಂಡು ಸ್ವರಾಜ್ಯದ ಅಭಿಯಾನದಲ್ಲಿ ಸಮರ್ಪಕವಾಗಿ ಅಳವಡಿಸಿದ್ದು ಶಿವಾಜಿ. ಯಾರೂ ಕೀಳಲ್ಲ ಮತ್ತು ಯಾರೂ ಉಪಯೋಗಕ್ಕೆ ಬಾರದವರಲ್ಲ. ಎಲ್ಲರ ಯೋಗ್ಯ ಸಂಘಟನೆಯಾದಲ್ಲಿ ಪ್ರತಿಯೊಬ್ಬರ ಸಾಮರ್ಥ್ಯವೂ ಫಲ ನೀಡುತ್ತದೆ. ಶಿವಾಜಿ ತನ್ನ ಸೈನ್ಯ ಕಟ್ಟುವಾಗ ಈ ವಿಚಾರವನ್ನು ಅಕ್ಷರಶಃ ಪಾಲಿಸುತ್ತಾನೆ. ಮಾವಳರನ್ನು, ಕಾಡು ಗಿರಿಜನರನ್ನು ಸಂಘಟಿಸಿ ಶಿವಾಜಿ ಸೈನ್ಯ ಕಟ್ಟಿದ್ದಷ್ಟೇ ಅಲ್ಲದೆ ಅವರಲ್ಲಿಯೂ ಸ್ವರಾಜ್ಯ ಮತ್ತು ಸುರಾಜ್ಯದ ಕಲ್ಪನೆ ಸ್ಪಷ್ಟವಾಗುವಂತೆ ಅವರನ್ನು ಬೆಳೆಸಿದ. ಮುಂದೆ ಇವರೇ ಸ್ವರಾಜ್ಯದ ಆಧಾರ ಸ್ಥಂಭಗಳಾಗುತ್ತಾರೆ. ಹೀಗೆ ಶಿವಾಜಿ ಒಬ್ಬ ಸಂಘಟನಾ ಚತುರನ ಗುಣಗಳನ್ನು ಮೈಗೂಡಿಸಿಕೊಂಡಿದ್ದ.
ಶಿವಾಜಿ ಒಬ್ಬ ತೀವ್ರ ಮುಂದಾಲೋಚನೆಯುಳ್ಳ ರಾಜನಾಗಿದ್ದ. ಅವನ ಕಲ್ಪನೆ ಸ್ಪಷ್ಟವಾಗಿತ್ತು. ಸ್ವರಾಜ್ಯ ಮತ್ತು ಸುರಾಜ್ಯ ತನ್ನ ಕಾಲದಷ್ಷೇ ಅಲ್ಲ, ತನ್ನ ನಂತರವೂ ಗಟ್ಟಿಯಾಗಿರಬೇಕೆಂಬ ವಿಚಾರವೂ ಇತ್ತು. ಅದಕ್ಕಾಗಿ ಅವನು ಕಂಡುಕೊಂಡ ಮಾರ್ಗ ವ್ಯವಸ್ಥಾ ಕೇಂದ್ರಿತ ಆಡಳಿತ. ಪುರಂದರ ಕದನದಲ್ಲಿ ಹಿನ್ಡಡೆಯಾಗಿ ಹಲವಾರು ಕೋಟೆಗಳನ್ನು ಕಳೆದುಕೊಂಡು ಶಿವಾಜಿ ಔರಂಗಜೇಬನ ಬಂದಿಯಲ್ಲಿ ನಾಲ್ಕು ವರ್ಷಗಳನ್ನು ಕಳೆಯಬೇಕಾಯಿತು. ಇಂತಹ ಸಮಯದಲ್ಲೂ ಸ್ವರಾಜ್ಯದಲ್ಲಿ ದಿನನಿತ್ಯದ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಅಭೇದ್ಯವಾದ ಔರಂಗಜೇಬನ ಕಾವಲು ಭದ್ರತೆಗೆ ಹಗಲಿನಲ್ಲೇ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಂಡು ದೂರದ ಆಗ್ರಾದಿಂದ ಸ್ವರಾಜ್ಯದ ರಾಜಧಾನಿ ರಾಯಗಢಕ್ಕೆ ಸುರಕ್ಷಿತವಾಗಿ ತಲುಪಿದಾಗ, ರಾಜ ನಾಲ್ಕು ವರ್ಷಗಳ ಕಾಲ ಶತ್ರುವಿನ ಬಂಧನದಲ್ಲಿದ್ದರೂ ಕೂಡ ಆತನ ಗುಪ್ತಚರ ವ್ಯವಸ್ಥೆ ಎಷ್ಟು ಗಟ್ಟಿಯಾಗಿತ್ತೆಂಬುದನ್ನು ತೋರಿಸಿಕೊಡುತ್ತದೆ. ಸ್ವರಾಜ್ಯದ ಕನಸನ್ನು ಕಂಡಾಗಲೇ ಅದಕ್ಕೆದುರಾಗುವ ಕಂಟಕಗಳ ಅರಿವು ಮತ್ತು ಮುಂದಾಲೋಚನೆ ಶಿವಾಜಿಗಿತ್ತು. ಆ ಕಂಟಕಗಳು ಸ್ವರಾಜ್ಯಕ್ಕೆ ಬಾಧೆಯಾಗದಂತೆ ನೋಡಿಕೊಳ್ಳಲೆಂದೇ ವ್ಯವಸ್ಥಾ ಕೇಂದ್ರಿತ ಆಡಳಿತ ನಿರ್ಮಿಸಿದ್ದ. ಈ ಆಡಳಿತ ಪದ್ದತಿಯೇ ಶಿವಾಜಿಗಿಂತ ಅವನ ಕಾಲದ ನಂತರವೂ ಸ್ವರಾಜ್ಯ ಮತ್ತಷ್ಟು ಹೆಮ್ಮರವಾಗಿ ಬೆಳೆಯಲು ಕಾರಣ. ಇಂತಹ ಕರಾರುವಾಕ್ಕಾದ ವ್ಯವಸ್ಥೆ ಸೃಷ್ಟಿಸಲು ಸಮಯವೂ ಬೇಕು. ಅವಸರದಲ್ಲಿ ಮಾಡುವ ಕೆಲಸಗಳಿವಲ್ಲ. ಅದಕ್ಕಾಗಿ ಶಿವಾಜಿಯು ಮುಂದಾಲೋಚನೆ ಜೊತೆಗೆ ಸಹನೆಯನ್ನೂ ಮೈಗೂಡಿಸಿಕೊಂಡಿದ್ದ.
ಇನ್ನು ಈ ಎಲ್ಲಾ ಗುಣಗಳು ಒಂದೇ ಕಡೆ ಇದ್ದುದರಿಂದ ಅವುಗಳು ಸಂತೋಷಗೊಂಡು ಶಿವಾಜಿಗೆ ಕೊಟ್ಟ ಉಡುಗೊರೆಯೇ ಧೈರ್ಯ….ಅಗಾಧವಾದ ಧೈರ್ಯ.
ಶಿವಾಜಿ ಯಾವುದೇ ನಿರ್ಣಯ ತೆಗೆದುಕೊಳ್ಳುವಾಗ ವಿಚಲಿತನಾಗುತ್ತಿರಲಿಲ್ಲ, ನಿರ್ಭೀತನಾಗಿರುತ್ತಿದ್ದ. ತೆಗೆದುಕೊಂಡ ನಿರ್ಧಾರಗಳಲ್ಲಿ ಅಳುಕಾಗಲಿ, ಅಸ್ಪಷ್ಟತೆಯಾಗಲಿ ಇವುಗಳಿಗೆ ಸ್ಥಾನವೇ ಇರುತ್ತಿರಲಿಲ್ಲ. ಇದಕ್ಕೆ ಸುಮಾರು ೩೦ ಸಾವಿರ ಸೈನ್ಯ ಬಲದೊಂದಿಗೆ ಸ್ವರಾಜ್ಯವನ್ನು ಮುಗಿಸಲು ಬಿಜಾಪುರ ಸುಲ್ತಾನನ ಆದೇಶದಂತೆ ದಂಡೆತ್ತಿ ಬಂದಿದ್ದ ಅಫ್ಜಲ್ ಖಾನನನ್ನು ಶಿವಾಜಿ ಎದುರಿಸಿದ ರೀತಿಯೇ ಸಾಕ್ಷಿ. ಈ ಘಟನೆಯನ್ನು ಆಧುನಿಕ ಯುದ್ಧ ನೀತಿಯಲ್ಲೂ War Psychology ವಿಷಯದಲ್ಲಿ ಒಂದು ಪಠ್ಯಕ್ರಮವಾಗಿ ಉಲ್ಲೇಖಿಸಲಾಗಿದೆ. ಶಿವಾಜಿ ಎಲ್ಲಾ ಸಂಭವನೀಯತೆಗಳನ್ನು ಊಹಿಸಿ, ಅದಕ್ಕೆ ಪೂರ್ವ ತಯಾರಿ ಮಾಡಿ ಅಫ್ಜಲ ಖಾನ ಜೊತೆಗೆ ಸಂಧಿಗೆ ಅವನ ಬಿಡಾರಕ್ಕೇ ಹೊರಡುತ್ತಾನೆ. ಮೊದಲೇ ಅಹಂಕಾರಿಯಾದ ಅಫ್ಜಲ ಖಾನ ಮುಂದೆ ಶಿವಾಜಿ ತಾನು ಹೆದರಿದಂತೆ ನಾಟಕವಾಡಿ ಅಫ್ಜಲ ಖಾನ ಮಾನಸಿಕವಾಗಿ ಸಡಿಲಗಒಳ್ಳುವಂತೆ ಮಾಡುತ್ತಾನೆ. ಅದೇ ಸಮಯದಲ್ಲಿ ಬಿಡಾರದ ಸುತ್ತ ತನ್ನ ಸೈನ್ಯದ ವ್ಯೂಹ ರಚನೆ ಮಾಡಿ ಅಫ್ಜಲ ಖಾನ ಬಿಡಾರವನ್ನು ಶಿವಾಜಿ ತನ್ನ ರಕ್ಷಣಾ ಕವಚವನ್ನಾಗಿ ಮಾಡಿಕೊಳ್ಳುತ್ತಾನೆ. ಮುಂಚಿತವಾಗಿ ಊಹಿಸಿದಂತೆ ಭೇಟಿಯ ಸಮಯದಲ್ಲಿ ಅಫ್ಜಲ ಖಾನ ಶಿವಾಜಿಯ ಮೇಲೆ ದಾಳಿ ಮಾಡಿದಾಗ, ಶಿವಾಜಿ ಮಾರಣಾಂತಿಕ ಪ್ರತಿದಾಳಿ ನಡೆಸಿದಷ್ಟೇ ಅಲ್ಲದೆ ಯೋಜನೆಯಂತೆ ಸನ್ನದ್ಧವಾಗಿದ್ದ ಶಿವಾಜಿಯ ಸೈನ್ಯ ಕ್ಷಿಪ್ರ ದಾಳಿ ನಡೆಸಿ ಅಫ್ಜಲ ಖಾನ ಸೈನ್ಯವನ್ನು ಹಿಮ್ಮೆಟ್ಟಿಸಿತು. ಅಫ್ಜಲ ಖಾನನ ಸೈನ್ಯದ ಮೋಜಿಗಾಗಿ ಕರೆತಂದಿದ್ದ ಮಹಿಳೆಯರನ್ನು ಗೌರವವಾಗಿ ಬೀಳ್ಕೊಡುತ್ತಾನೆ ಶಿವಾಜಿ. ಹೀಗೆ ಚಿಕ್ಕ ಸೈನ್ಯದಿಂದಲೇ ಭಾರಿ ಸಂಖ್ಯೆಯ ಶತ್ರು ಸೈನ್ಯವನ್ನು ಸೋಲಿಸುವುದರಲ್ಲಿ ಶಿವಾಜಿಯ ಧೈರ್ಯ ಮತ್ತು ಕರಾರುವಾಕ್ಕಾದ ಯುದ್ಧನೀತಿ ಕಾರಣ. ಇದೇ ರೀತಿ ಕೆಲವೇ ಸೈನಿಕರ ಬಲದೊಂದಿಗೆ ಸಹಸ್ರಾರು ಸೈನಿಕರ ರಕ್ಷಣೆಯಲ್ಲಿದ್ದ ಶಾಯಿಸ್ತಾ ಖಾನ (ಈತನ ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರ ಅತಿಯಾಗಿತ್ತು) ಮೇಲೆ ದಾಳಿ ಮಾಡಿ ಸೋಲಿಸಿದ್ದು, ಔರಂಗಜೇಬನ ಬಳಿ ಹೋಗುವುದೆಂದರೆ ಮೃತ್ಯುವಿಗೆ ಆಹ್ವಾನ ಕೊಟ್ಟಂತೆ ಎಂದು ಗೊತ್ತಿದ್ದರೂ ಸ್ವರಾಜ್ಯದ ಹಿತದೃಷ್ಟಿಯಿಂದ ನಿಶ್ಶಸ್ತ್ರವಾಗಿ ಹೋಗಿ ನಾಲ್ಕು ವರ್ಷಗಳ ಬಂಧನದಲ್ಲಿದ್ದದ್ದು, ಬಂಧನದಿಂದ ತಪ್ಪಿಸಿಕೊಂಡು ಬಂದ ನಂತರ ಕ್ಷಿಪ್ರವಾಗಿ ಕಾರ್ಯಾಚರಣೆಗಿಳಿದು ಕಳೆದುಕೊಂಡ ಕೋಟೆಗಳನ್ನು ಮತ್ತೆ ಗೆದ್ದಿದ್ದು.
ಈ ರೀತಿಯ ಗುಣಗಳುಳ್ಳ ನಾಯಕತ್ವ ನೀಡಿ ಶಿವಾಜಿ ಹತಾಶೆಯಿಂದ ನಲಗುತ್ತಿದ್ದ ಹಿಂದು ಸಮಾಜಕ್ಕೆ ಸಂಘರ್ಷದ ದಾರಿ ಮತ್ತು ತನ್ಮೂಲಕ ವಿಜಯದ ಹಾದಿಯನ್ನು ತೋರಿದ ಮಹಾ ನಾಯಕ. ಆದ್ದರಿಂದ ಶಿವಾಜಿಯ ಪಟ್ಟಾಭಿಷೇಕದ ದಿನವನ್ನು ಹಿಂದೂ ಸಾಮ್ರಾಜ್ಯೋತ್ಸವ ದಿನವೆಂದು ಆಚರಿಸಲಾಗುತ್ತದೆ. ಸಂಪೂರ್ಣ ಭಾರತೀಯ ಜ್ಞಾನ ಸಂಸ್ಕಾರದಿಂದ ಕೂಡಿದ ಆಡಳಿತೇ ಹಿಂದೂ ಸಾಮ್ರಾಜ್ಯ. ಸರ್ವ ಧರ್ಮ ಸಹಿಷ್ಣುತೆಯ ಕಲ್ಪನೆಯೇ ಹಿಂದೂ ಸಾಮ್ರಾಜ್ಯ. ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ ಎಂಬ ಕಲ್ಪನೆಯ ರಾಜ್ಯವೇ ಹಿಂದೂ ಸಾಮ್ರಾಜ್ಯ. ಸರ್ವ ಜನರ ಸುಖ ಮತ್ತು ನೆಮ್ಮದಿ ಬಯಸುವ ರಾಜ್ಯವೇ ಹಿಂದೂ ಸಾಮ್ರಾಜ್ಯ. ಇಂತಹ ಪರಿಕಲ್ಪನೆಯ ಶಿವಾಜಿಯ ಹಿಂದೂ ಸಾಮ್ರಾಜ್ಯದ ಆಡಳಿತದಲ್ಲಿ ಜಾತಿ ಪಂಥಗಳಾಗಲಿ, ಬಡವ ಶ್ರೀಮಂತರಾಗಲಿ, ಬೇರಿನ್ನಾವುದೇ ಆಧಾರಗಳ ಮೇಲೆ ನಾಗರಿಕ ಹಕ್ಕುಗಳು, ಆಡಳಿತಾತ್ಮಕ ಸೌಲಭ್ಯಗಳು ಅಥವಾ ಇನ್ನಾವುದೇ ರೀತಿಯ ತಾರತಮ್ಯ ಮಾಡಿದ ಒಂದೇ ಒಂದು ಉದಾಹರಣೆಯೂ ಸಿಗುವುದಿಲ್ಲ.
ಕೊನೆಯದಾಗಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಸಂತ ಶ್ರೇಷ್ಠ ಸ್ವಾಮಿ ವಿವೇಕಾನಂದರ ಮಾತಿನಲ್ಲೇ ಕೇಳಬೇಕು….
ಶಿವಾಜಿಗಿಂತ ದೊಡ್ಡ ನಾಯಕ, ದೊಡ್ಡ ಸಂತ, ದೊಡ್ಡ ಭಕ್ತ ಹಾಗೂ ದೊಡ್ಡ ರಾಜ ಯಾರಾದರೂ ಇದ್ದಾರೆಯೇ? ನಮ್ಮ ಮಹಾಕಾವ್ಯಗಳಲ್ಲಿ ಹೇಳಿದ ಹುಟ್ಟು ನಾಯಕನ ಎಲ್ಲಾ ಗುಣಗಳೂ ಮೂರ್ತಿವೆತ್ತಂತೆ ಅವನಿದ್ದ. ದೇಶದ ನಿಜವಾದ ಅಂತರಾಳವನ್ನು ಪ್ರತಿನಿಧಿಸುವ ಆದರ್ಶ ಪುತ್ರನೀತ. ಒಂದು ಸೂರಿನಡಿ ನಿಂತಿರುವ ಹಲವು ಸ್ವತಂತ್ರ ಘಟಕಗಳು ಒಂದೇ ಸರ್ವೋಚ್ಚ ರಾಜಛತ್ರದಡಿ ಮುನ್ನಡೆಯಬೇಕಾದ ವ್ಯವಸ್ಥೆ ಇರುವ ಭಾರತ ಒಕ್ಕೂಟದ ಭವಿಷ್ಯ ಏನಾಗುತ್ತದೆ ಎಂಬುದನ್ನು ನಮಗೆಲ್ಲಾ ಅಂದೇ ಮನವರಿಕೆ ಮಾಡಿಸಿದ್ದು ಶಿವಾಜಿ: ಸ್ವಾಮಿ ವಿವೇಕಾನಂದ
ಶಿವಾಜಿಯು ಕಾನೂನು, ಆಡಳಿತ ವ್ಯವಸ್ಥೆ ಹಾಗೂ ರಕ್ಷಣಾ ಕಾರ್ಯಗಳನ್ನು ನಿಭಾಯಿಸುವಾಗ ಆಡಿದ ಮಾತುಗಳು, ನಡೆದುಕೊಂಡ ರೀತಿ ಹಾಗೂ ಅದರಿಂದ ಹೊರಬಿದ್ದ ಸಂದೇಶಗಳನ್ನೇ ಆಜ್ಞಾ ಪತ್ರಗಳ ಮೂಲಕ ದಾಖಲಿಸಲಾಗಿವೆ. ಸಾಂದರ್ಭಿಕವಾಗಿ ಕೆಲವು ಆಜ್ಞಾ ಪತ್ರಗಳ ಉಲ್ಲೇಖ ಇಲ್ಲಿ ಮಾಡಲಾಗಿದೆ.
ರಾಜನ ಸ್ವಯಮಾಡಳಿತ:
ರಾಜ್ಯವನ್ನು ಮುನ್ನಡೆಸುವವನು ತನ್ನ ಊಟ ತಿಂಡಿಗೊಂದು ನಿಶ್ಚಿತ ಸಮಯ ನಿಗದಿ ಮಾಡಿಕೊಂಡಿರಬೇಕು. ನಶೆಯ ಪದಾರ್ಥಗಳನ್ನು ಸೇವಿಸಬಾರದು. ತನ್ನ ಅಕ್ಕಪಕ್ಕದಲ್ಲಿದ್ದುಕೊಂಂಡು ಪ್ರಮುಖ ಕಾರ್ಯಗಳನ್ನು ಮಾಡುವವರಿಗೂ ಮಾದಕ ಪದಾರ್ಥಗಳನ್ನು ಸೇವಿಸಲು ಬಿಡಬಾರದು. ರಾಜನ ಕೈಲಿ ಶಸ್ತ್ರ ಇಲ್ಲದಿದ್ದಾಗ ಭೂಮಿಯನ್ನು ನಿರಂತರವಾಗಿ ನೋಡಬಾರದು. ಕಲಿತ ವಿದ್ಯೆಯನ್ನು ಆಗಾಗ ಬಳಸಿ ನೆನಪಿನಲ್ಲಿಟ್ಟುಕೊಳ್ಳಬೇಕು. ಕುದುರೆ ಸವಾರಿ ಹಾಗೂ ಆನೆ ಸವಾರಿಯ ಅಭ್ಯಾಸವನ್ನು ಯಾವತ್ತೂ ಬಿಡಬಾರದು.
ಬೊಕ್ಕಸದ ಆರೋಗ್ಯ:
ರಾಜ ತನ್ನ ರಾಜ್ಯದ ಆದಾಯ ಹಾಗೂ ವೆಚ್ಚಗಳ ಬಗ್ಗೆ ಸದಾ ಎಚ್ಚರ ವಹಿಸಿರಬೇಕು. ಆದಾಯವನ್ನು ನಿರಂತರವಾಗಿ ಹೆಚ್ಚಿಸುತ್ತಿರಬೇಕು. ಏಕೆಂದರೆ ಹಣವೇ ರಾಜ್ಯದ ಪ್ರಾಣ. ಅಗತ್ಯ ಬಿದ್ದಾಗ ಮತ್ತು ಆಪತ್ಕಾಲದಲ್ಲಿ ಹಣವಿದ್ದರೆ ಎಲ್ಲಾ ಆತಂಕಗಳಿಂದಲೂ ಪಾರಾಗಲು ಸಾಧ್ಯವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಬೊಕ್ಕಸವನ್ನು ತುಂಬಿಸುತ್ತಿರಬೇಕು ಮತ್ತು ಸೋರಿಕೆಯಾಗದಂತೆ ನೋಡಿಕೊಳ್ಳಬೇಕು
ಸೇವೆ ಮತ್ತು ಸರ್ಕಾರ:
ರಾಜ್ಯದಲ್ಲಿರುವ ರೋಗಿಷ್ಠರು, ಕುರುಡರು, ಅಸಹಾಯಕರು ಹಾಗೂ ನಿರ್ಗತಿಕರ ಬಗ್ಗೆ ರಾಜನಿಗೆ ಸಹಾನುಭೂತಿ ಇರಬೇಕು. ಅವರ ಜೀವನ ನಿರ್ವಹಣೆಗೆ ಅಗತ್ಯವಿರುವ ಎಲ್ಲ ಸೌಕರ್ಯವನ್ನು ಸರ್ಕಾರದಿಂದಲೇ ಕೊಡಿಸಲು ವ್ಯವಸ್ಥೆ ಮಾಡಬೇಕು. ಅಗತ್ಯದಲ್ಲಿರುಷರಿಗೆ ಆ ವ್ಯವಸ್ಥೆ ತಲುಪುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.
ವ್ಯಾಪಾರಿಗಳ ಮಹತ್ವ:
ವ್ಯಾಪಾರಿಗಳು ಸಣ್ಣವರಾಗಿರಲಿ ಅಥವಾ ದೊಡ್ಡವರಾಗಿರಲಿ, ಅವರು ಶ್ರೀಮಂತ ರಾಜ್ಯವೊಂದಕ್ಕೆ ಅಲಂಕಾರವಿದ್ದಂತೆ. ರಾಜ್ಯದ ಸಂಪತ್ತು ಅವರಿಂದಲೇ ವೃದ್ಧಿಸುತ್ತದೆ. ರಾಜ್ಯ ಸಂಪನ್ನವಾಗಲು ಅವರೂ ಕಾರಣ. ರಾಜ್ಯದಲ್ಲಿ ಲಭ್ಯವಿಲ್ಲದ ವಸ್ತುಗಳನ್ನು ಅವರು ಪೂರೈಸುತ್ತಾರೆ. ಸಂಕಷ್ಟದ ಕಾಲದಲ್ಲಿ ಅವರು ರಾಜ್ಯಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಒದಗಿಸುತ್ತಾರೆ. ಆಪತ್ಕಾಲದಲ್ಲಿ ರಾಜ್ಯಕ್ಕೆ ಧನಸಹಾಯ ಬೇಕಾದರೆ ಅದನ್ನೂ ಮಾಡಬಲ್ಲರು. ಇದರಿಂದ ರಾಜ್ಯಕ್ಕೊದಗಿದ ಸಂಕಟ ನಿವಾರಿಸಿಕೊಳ್ಳಬಹುದು. ಹಾಗಾಗಿ ವ್ಯಾಪಾರಿಗಳನ್ನು ಚೆನ್ನಾಗಿ ನೋಡಿಕೊಂಡರೆ ರಾಜ್ಯಕ್ಕೆ ದೊಡ್ಡ ಲಾಭವಿದೆ.
As for as the Indian Kings of great valour and Great Rashtraprem, Shivaji maharaj stands at the pinnacle. He is the only one who did not have royal background, still with his great love for Bharatvarsh he played a pivotol role in the Country’s freedaom, first from Moghals, later he wanted to do with British But because of this advancing age, and he was really tired of his age as well.
ಲೇಖನ ಸಮಯೋಚಿತವಾಗಿದೆ ಮತ್ತು ಶಿವಾಜಿಯ ಯಾವ ಗುಣಗಳನ್ನು ನಾವು ಅನುಕರಿಸಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅನ್ನುವುದರ ಬಗ್ಗೆ ಎಡೆಮಾಡಿಕೊಡುವಂತೆ ಬರೆದಿದ್ದೀರಿ . ಶುಭವಾಗಲಿ