“ತಾತ್ಯಾ ಓ ತಾತ್ಯಾ ಈ ಹತಭಾಗ್ಯ ಹಿಂದುಸ್ಥಾನದಲ್ಲಿ ನೀನೇಕೆ ಹುಟ್ಟಿಬಂದೆ. ಇನ್ನಾವುದಾದರೂ ದೇಶದಲ್ಲಿ ಹುಟ್ಟಿದ್ದರೆ ಅಲ್ಲಿನ ಜನ ನಿನ್ನನ್ನು ಚಿನ್ನದ ಪಲ್ಲಕ್ಕಿಯಲ್ಲಿ ಮೆರೆಸುತ್ತಿದ್ದರು.” ಇದನ್ನು ತಾತ್ಯಾ ಟೋಪೆಯ ಕುರಿತಾಗಿ ಹೇಳಿದವರು ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್, ಆದರೆ ಇಂದಿನ ಪರಿಸ್ಥಿತಿಯಲ್ಲಿ ಅದೇ ತರಹದ ಉಕ್ತಿ ಸಾವರ್ಕರ್ (ಅವರನ್ನು ಮನೆಯಲ್ಲಿ ತಾತ್ಯಾ ಅಂತಲೇ ಕರೆಯುತ್ತಿದ್ದುದು) ಗೆ ಹೇಳುವುದು ಸೂಕ್ತವೆನಿಸುತ್ತದೆ.
‘ಹೊಸದಿಗಂತ’ ದಲ್ಲಿ ಹಿರಿಯ ಪತ್ರಕರ್ತರಾದ ದು ಗು ಲಕ್ಷ್ಮಣರ ಲೇಖನ.

ಕ್ಷಮಿಸಿ ಸಾವರ್ಕರ್‌ಜೀ, ನೀವು ಹುಟ್ಟಿದ್ದು ಭಾರತದಲ್ಲಿ !
– ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತರು

ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಹೆಸರನ್ನು ನಾಮಕರಣ ಮಾಡುವ ಸರಕಾರದ ಪ್ರಸ್ತಾಪಕ್ಕೆ ಪ್ರತಿಪಕ್ಷ ನಾಯಕರ ತೀವ್ರ ವಿರೋಧ ಹಾಗೂ ಈ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನೆ ಮುಂದೂಡಿದ ರಾಜ್ಯ ಬಿಜೆಪಿ ಸರಕಾರದ ಕ್ರಮ- ಇವೆರಡು ವಿದ್ಯಮಾನಗಳೂ ದೇಶ ಕಂಡ ಶ್ರೇಷ್ಠ ದೇಶಭಕ್ತ, ಮಹಾನ್ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ಗೆ ಮಾಡಿದ ಘೋರ ಅಪಮಾನವೇ ಸರಿ.

ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ನಿರ್ಧಾರ ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನವೆಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ನಗಬೇಕೋ ಅಳಬೇಕೋ ಅಥವಾ ಕ್ಯಾಕರಿಸಿ ಉಗಿಯಬೇಕೋ ಜನರೇ ನಿರ್ಧರಿಸಬೇಕಷ್ಟೆ. ಸಿದ್ದರಾಮಯ್ಯ ಹೇಳುವ ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರೆಂದರೆ ಯಾರು? ಸಾವರ್ಕರ್ ಇದೇ ಭಾರತದ ಮಣ್ಣಿನಲ್ಲಿ ಹುಟ್ಟಿ ಹೋರಾಡಿದ ರಣಕಲಿಯಲ್ಲವೆ ? ಸಿದ್ದರಾಮಯ್ಯನವರ ದೃಷ್ಟಿಯಲ್ಲಿ ಮಣ್ಣಿನ ಮಕ್ಕಳೆಂದರೆ ಕನ್ನಡ ನಾಡಿನ ಮಹಾಪುರುಷರೆಂದಿರಬಹುದು. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಈ ಮಣ್ಣಿನ ಮಕ್ಕಳ ನೆನಪು ಯಾಕೆ ಆಗಲಿಲ್ಲ ? ಆಗ ಅವರು ಆರಂಭಿಸಿದ ಜನಪರ ಯೋಜನೆ ಇಂದಿರಾ ಕ್ಯಾಂಟೀನ್‌ಗೆ ರಾಣಿ ಚೆನ್ನಮ್ಮ ಕ್ಯಾಂಟೀನ್ ಅಥವಾ ಅಬ್ಬಕ್ಕ ಕ್ಯಾಂಟೀನ್ ಅಥವಾ ಅಕ್ಕಮಹಾದೇವಿ ಕ್ಯಾಂಟೀನ್ ಎಂದು ನಾಮಕರಣ ಮಾಡದೆ ಈ ರಾಜ್ಯದ ಹೊರಗೆಲ್ಲೋ ಹುಟ್ಟಿದ ಇಂದಿರಾ ಅವರ ಹೆಸರನ್ನು ಇಟ್ಟದ್ದೇಕೆ ? ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ೨೦೧೬ರಲ್ಲಿ ತುಮಕೂರು ಮಹಾನಗರ ಪಾಲಿಕೆಯ ಉದ್ಯಾನವನಕ್ಕೆ ‘ಸ್ವಾತಂತ್ರ್ಯವೀರ ವಿ.ದಾ. ಸಾವರ್ಕರ್ ಉದ್ಯಾನವನ’ ಎಂದು ನಾಮಕರಣ ಮಾಡಲಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರಾಗಿದ್ದ ಡಾ. ಜಿ. ಪರಮೇಶ್ವರ್, ರೋಷನ್ ಬೇಗ್, ಟಿ.ಬಿ. ಜಯಚಂದ್ರ ಮೊದಲಾದ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು. ಆಗ ಸಿದ್ದರಾಮಯ್ಯನವರು ನಿದ್ದೆಯಲ್ಲಿದ್ದರೆ? ಸಾವರ್ಕರ್ ಹೆಸರನ್ನು ತುಮಕೂರಿನ ಉದ್ಯಾನಕ್ಕೆ ನಾಮಕರಣ ಮಾಡಲು ಅವರೇಕೆ ಬಿಟ್ಟರು ? ತುಮಕೂರಿನ ಉದ್ಯಾನಕ್ಕೆ ಸಾವರ್ಕರ್ ಹೆಸರು ಇಡಬಹುದಾದರೆ ಬೆಂಗಳೂರಿನ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವುದು ಹೇಗೆ ಪ್ರಮಾದವಾಗುತ್ತದೆ?

ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನೇ ರಾಜ್ಯದಲ್ಲಿ ಬೇರೆ ಬೇರೆ ನಿರ್ಮಾಣಗಳಿಗೆ ಇಡಬೇಕೆನ್ನುವುದಾಗಿದ್ದರೆ ರಾಜ್ಯದ ಹಲವು ಕ್ರೀಡಾಂಗಣಗಳು , ಕಟ್ಟಡಗಳು, ತಾರಾಲಯ, ಪಾರ್ಕ್, ಸರ್ಕಲ್‌ಗಳು, ರಸ್ತೆ, ಮೊಹಲ್ಲಾಗಳಿಗೆ ಸ್ವಾತಂತ್ರ್ಯ ಬಂದಾಗಿನಿಂದ ಒಂದೇ ಕುಟುಂಬಕ್ಕೆ ಸೇರಿದ ಅದೇ ನೆಹರು, ಇಂದಿರಾ , ರಾಜೀವ್ ಗಾಂಧಿಯವರ ಹೆಸರುಗಳನ್ನೆ ಇಟ್ಟು ಕಾಂಗ್ರೆಸಿಗರು ಕೃತಾರ್ಥರಾಗಿದ್ದೇಕೆ ? ಆಗೆಲ್ಲ ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ, ಒನಕೆ ಓಬವ್ವ, ರಾಣಿ ಅಬ್ಬಕ್ಕ ದೇವಿ, ಶಿವಪ್ಪ ನಾಯಕ, ಮುಂಡರಗಿ ಭೀಮರಾಯ, ಮುಂತಾದ ಸ್ವಾತಂತ್ರ್ಯ ವೀರರ ನೆನಪೇಕೆ ಆಗಲಿಲ್ಲ ? ಈಗ ಮಾತ್ರ ಅವರ ನೆನಪಾಗುತ್ತಿರುವುದೇಕೆ ?

                          ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್

ಬೆಂಗಳೂರಿನ ಎಂ.ಜಿ. ರಸ್ತೆಗೆ ವಿಶ್ವೇಶ್ವರಯ್ಯ ರಸ್ತೆ ಎಂದಿಡಬಹುದಿತ್ತು. ಏಕೆಂದರೆ ಗಾಂಧಿ ಕರ್ನಾಟಕದವರಲ್ಲ. ನೆಹರು ತಾರಾಲಯಕ್ಕೆ ರಾಜ್ಯದ ಪ್ರಸಿದ್ಧ ವಿಜ್ಞಾನಿಯೊಬ್ಬರ ಹೆಸರೇಕೆ ಇಡಲಿಲ್ಲ ? ನೆಹರು ವಿಜ್ಞಾನಿಯೂ ಆಗಿರಲಿಲ್ಲ. ನಮ್ಮ ರಾಜ್ಯದವರೂ ಆಗಿರಲಿಲ್ಲ. ಇಂದಿರಾ ಕ್ಯಾಂಟೀನ್ ಅಂತ ನಾಮಕರಣ ಮಾಡುವ ಮುನ್ನ ಲಕ್ಷಾಂತರ ಮಕ್ಕಳಿಗೆ ನಿತ್ಯದಾಸೋಹ ಏರ್ಪಡಿಸಿದ ಮಹಾನ್ ಸಂತ ಸಿದ್ಧಗಂಗಾ ಶ್ರೀಗಳು ಏಕೆ ನೆನಪಿಗೆ ಬರಲಿಲ್ಲ ? ರಾಜೀವ್ ಗಾಂಧಿ ಹೆಸರಿನ ಆಸ್ಪತ್ರೆ , ಶಿಕ್ಷಣ ಸಂಸ್ಥೆಗಳಿಗೆ ಕರ್ನಾಟಕದ ಪ್ರಮುಖ ವೈದ್ಯರು , ಶಿಕ್ಷಣ ತಜ್ಞರ ಹೆಸರೇಕೆ ಕಾಂಗ್ರೆಸಿಗರು ಇಡಲಿಲ್ಲ ? ರಾಜೀವ್ ಗಾಂಧಿಯವರೇನೂ ಕರ್ನಾಟಕದವರಾಗಿರಲಿಲ್ಲ.
ಬೆಂಗಳೂರಿನಲ್ಲಿರುವ ರಾಜೀವ್ ಗಾಂಧಿ ಆಸ್ಪತ್ರೆ , ಸಂಜಯಗಾಂಧಿ ಆಸ್ಪತ್ರೆ, ರಾಜಾಜಿನಗರ, ಇಂದಿರಾನಗರ, ಸಂಜಯ್‌ನಗರ, ಕಾಮರಾಜ್ ರಸ್ತೆ… ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಸರಕಾರವಿದ್ದಾಗಲೇ ಈ ಹೆಸರುಗಳನ್ನಿಟ್ಟದ್ದು. ಆಗೆಲ್ಲ ಮಣ್ಣಿನ ಹೋರಾಟಗಾರರ ನೆನಪಾಗದಿದ್ದುದೇಕೆ ?ಬಿಜೆಪಿ ಸರಕಾರ ಸಾವರ್ಕರ್ ಹೆಸರನ್ನಿಟ್ಟಾಗ ಮಾತ್ರ ಕಾಂಗ್ರೆಸಿಗರ ರಕ್ತ ಕುಣಿಯುವುದೇಕೆ ?

ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ಬಾಲಬಡುಕರು ಎಲ್ಲ ಕ್ಷೇತ್ರಗಳಲ್ಲಿ ಮೆರೆಸಿದ್ದು ನೆಹರು ಕುಟುಂಬದ ‘ಮಹಾಮಹಿಮ’ ಹೆಸರುಗಳನ್ನು ಮಾತ್ರ! ಪದವಿ ಪರೀಕ್ಷೆಗಳ ಕನ್ನಡ ಅಥವಾ ಇಂಗ್ಲಿಷ್ ಪಠ್ಯದಲ್ಲಿ ಪ್ರತಿವರ್ಷ ಜವಾಹರಲಾಲ್ ನೆಹರು ಅಥವಾ ಕಮಲಾ ನೆಹರುರವರ ಆದರ್ಶ ಬದುಕು , ಇಂದಿರಾಗಾಂಧಿಯವರ ದಿಟ್ಟ ಆಡಳಿತ… ಹೀಗೆ ನೆಹರು ಕುಟುಂಬವನ್ನು ಕುರಿತ ಪಠ್ಯವಿಲ್ಲದ ವರ್ಷವೇ ಇರಲಿಲ್ಲ. ಅನಂತರವೂ ಕಾಂಗ್ರೆಸ್ ಆಳ್ವಿಕೆಯ ಎಲ್ಲ ರಾಜ್ಯಗಳಲ್ಲಿ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಈ ನೆಹರೂ ಕುಟುಂಬದ ಕಥೆಗಳ ಮೂಲಕ ಒಂದೇ ಸಮನೆ ಅತ್ಯಾಚಾರ ಮಾಡಿಸುತ್ತಲೇ ಬಂದಿದ್ದಾರೆ. ಇದನ್ನು ತಲೆಗೆ ತುಂಬಿಕೊಂಡು ಮಂಕುದಿಣ್ಣೆಗಳಂತಾಗಿರುವ ಪ್ರಾಧ್ಯಾಪಕರು, ಪತ್ರಕರ್ತರು, ಟಿವಿ ನಿರೂಪಕರು , ಕಾಂಗ್ರೆಸ್ ಬಾಲಬಡುಕರು ಹರಿಕಥೆ ದಾಸರಂತೆ ನೆಹರೂ ಕುಟುಂಬದ ಮಹಿಮೆಯನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ಕೊಳಕು ಕೆಲಸ ಮಾಡುತ್ತಲೇ ಇದ್ದಾರೆ. ಅಂಥವರಿಗೆ ಸಾವರ್ಕರ್‌ರಂತಹ ಮಹಾನ್ ಹೋರಾಟಗರರ ತ್ಯಾಗ ಸಾಧನೆಗಳನ್ನು ತಿಳಿಯುವ ಚಿತ್ತಶುದ್ಧಿ , ಧೈರ್ಯ ಮೂಡುವುದಾದರೂ ಹೇಗೆ ?

ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟವರೇ ತಾವು ಎಂದು ಪೀಳಿಗೆ ಪೀಳಿಗೆಗಳನ್ನು ನಂಬಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಬೇರೆಯವರನ್ನು ದೇಶಭಕ್ತ ಎಂದು ಕರೆದರೆ ಚೇಳು ಕುಟುಕಿದಂತಾಗುತ್ತದೆ. ಹೀಗಾಗಿ ಅಂಥವರನ್ನು ಹೇಗಾದರೂ ತೇಜೋವಧೆ ಮಾಡಲು ಇನ್ನಿಲ್ಲದಂತೆ ಯತ್ನಿಸುತ್ತಾರೆ. ಭಾರತದ ಇತಿಹಾಸದಲ್ಲಿ ಇದಕ್ಕೆ ಅಸಂಖ್ಯ ನಿದರ್ಶನಗಳು ಸಿಗುತ್ತವೆ. ಜೀವನದಲ್ಲಿ ಎಂದೂ ಕಠಿಣ ಜೈಲುವಾಸ ಅನುಭವಿಸದ , ವಿಲಾಸಿ ಜೈಲುವಾಸ ಅನುಭವಿಸಿಯೇ ಸುಸ್ತಾದ ಜವಾಹರಲಾಲ್ ನೆಹರು ಕಾಂಗ್ರೆಸಿಗರಿಗೆ ದೇಶಭಕ್ತನಂತೆ, ಸ್ವಾತಂತ್ರ್ಯಸೇನಾನಿಯಂತೆ, ಮಹಾ ಮುತ್ಸದ್ಧಿಯಂತೆ ಗೋಚರಿಸುತ್ತಾರೆ. ೨೯ ವರ್ಷಗಳ ಕಾಲ ಕರಿನೀರ ಶಿಕ್ಷೆ ಅನುಭವಿಸಿದ, ಬ್ರಿಟಿಷರ ವಿರುದ್ಧ ನಿರಂತರ ಹೋರಾಡಿದ, ಅದಕ್ಕಾಗಿಯೇ ಸರ್ವಸ್ವ ಅರ್ಪಿಸಿದ ಸಾವರ್ಕರ್ ಹೇಡಿಯಾಗಿ, ಕ್ಷಮಾಪಣೆ ಕೇಳಿದ ಪುಕ್ಕಲನಾಗಿ ಕಾಣಿಸುತ್ತಾರೆ.

ಅಂಡಮಾನಿನ ಸೆಕ್ಯುಲರ್ ಜೈಲಿನಲ್ಲಿ ಕೈಗೆ ಕಾಲಿಗೆ ಕಬ್ಬಿಣದ ಬೇಡಿ, ಮೈಮೇಲೆ ತುಂಡು ಅಂಗಿ, ಬೆಳಿಗ್ಗೆಯಿಂದ ಸಂಜೆ ವರೆಗೆ ಗಾಣ ತಿರುಗಿಸಿ ಎಣ್ಣೆ ತೆಗೆಯುವ ಕಠಿಣ ಕಾಯಕ, ಸುಸ್ತಾಗಿ ಮಧ್ಯೆ ನಿಂತರೆ ಬೆನ್ನ ಮೇಲೆ ಬಾಸುಂಡೆ ಮೂಡುವ ಜೈಲರನ ಛಡಿಯೇಟು. ಇಷ್ಟಾದರೂ ಸಾವರ್ಕರ್ ಅಂಜಿರಲಿಲ್ಲ. ಬ್ರಿಟಿಷ್ ಸರಕಾರವನ್ನು ಬಗ್ಗು ಬಡಿಯುವ ಅವರ ಅಚಲ ನಿರ್ಧಾರದಲ್ಲಿ ಎಳ್ಳಷ್ಟೂ ಬದಲಾವಣೆಯಾಗಿರಲಿಲ್ಲ. ಅವರು ಬ್ರಿಟಿಷ್ ಸರಕಾರಕ್ಕೆ ಕ್ಷಮಾಪಣೆ ಪತ್ರ ಬರೆದು ಬಿಡುಗಡೆಗೆ ಯಾಚಿಸಿದರೆಂದು ಕಮ್ಯುನಿಸ್ಟ್ ಜೀವಿಗಳು ಹಿಯಾಳಿಸುತ್ತಲೇ ಇರುತ್ತವೆ. ಹೌದು, ಅವರು ಒಂದಲ್ಲ, ಆರು ಪತ್ರ ಬರೆದಿದ್ದರು. ಅಷ್ಟೂ ಪತ್ರಗಳಲ್ಲಿ ಅವರು ಬಿಡುಗಡೆ ದಯಪಾಲಿಸಬೇಕು ಎಂದೇ ಕೇಳಿಕೊಂಡಿದ್ದರು. ಆ ಪತ್ರಗಳನ್ನು ನೋಡಿದ ಬ್ರಿಟಿಷ್ ಸರಕಾರ ಸಾವರ್ಕರ್ ಅವರ ಈ ಕ್ಷಮಾಪತ್ರದ ಹಿಂದಿನ ತಂತ್ರಗಾರಿಕೆ ಏನು ಎಂಬುದನ್ನು ಅರಿಯದಷ್ಟು ಮೂರ್ಖವಾಗಿರಲಿಲ್ಲ. ೧೯೦೯ರಲ್ಲಿ ಕೈದಿಯಾಗಿ ಭಾರತಕ್ಕೆ ಕರೆತರುತ್ತಿರುವಾಗಲೇ ಸಮುದ್ರಕ್ಕೆ ಹಾರಿ ಫ್ರಾನ್ಸ್ ದಡ ಸೇರುವ ದಿಟ್ಟ ಸಾಹಸ ಮೆರೆದ ಈ ವ್ಯಕ್ತಿ ಇನ್ನು ಜೈಲಿನಿಂದ ಬಿಡುಗಡೆ ಮಾಡಿದರೆ ಸುಮ್ಮನೆ ಕೂರುವ ಜಾಯಮಾನದವರಲ್ಲ ಎಂಬುದನ್ನು ಚೆನ್ನಾಗಿ ಅರಿತಿತ್ತು. ಸಾವರ್ಕರ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವುದೂ ಒಂದೇ, ಮೈಮೇಲೆ ಕೆಂಡ ಸುರಿದುಕೊಳ್ಳುವುದೂ ಒಂದೇ ಎಂಬುದರ ಅರಿವಿತ್ತು. ಹಾಗಾಗಿಯೇ ಅವರನ್ನು ಬಿಡಲಿಲ್ಲ. ಬಿಡುಗಡೆ ಮಾಡಿದರೂ ಗೃಹಬಂಧನದಲ್ಲೇ ಹಲವು ಕಾಲ ಇಟ್ಟಿತು.

ನೆಹರು ಜೈಲಿನಲ್ಲಿ ಹೇಗಿದ್ದರು ಎಂಬುದನ್ನು ಅವರ ತಂಗಿ ಕೃಷ್ಣಾ ಹತಿಸಿಂಗ್ ಅವರೇ ತಮ್ಮ ‘ನೆನಪು ಕಹಿಯಲ್ಲ’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅಣ್ಣನನ್ನು ನೋಡಲು ಜೈಲಿಗೆ ಹೋದಾಗ ಅವರ ಬಡತನದ ಸ್ಥಿತಿ ನೋಡಿ ಆಕೆಗೆ ಕಣ್ಣೀರೇ ಬಂತಂತೆ! ಮಂಚ, ನಾಲ್ಕೇ ನಾಲ್ಕು ಕುರ್ಚಿಗಳು ಇದ್ದವಂತೆ! ನೆಹರು ಇಂತ ಬಡತನದಲ್ಲಿ ಜೈಲುವಾಸ ಮಾಡಿದ್ದರೆ, ಸಾವರ್ಕರ್ ಕೈಕಾಲುಗಳಿಗೆ ಕಬ್ಬಿಣದ ಸರಪಳಿ ಬಿಗಿಸಿಕೊಂಡು ಎಣ್ಣೆಯ ಗಾಣವನ್ನು ಎತ್ತಿನಂತೆ ದಿನಕ್ಕೆ ಹತ್ತು ತಾಸು ಎಳೆಯುತ್ತಾ ಸರಿಯಾದ ಆಹಾರವಿಲ್ಲದೆ ಕ್ಷಯರೋಗ ಬಡಿದವರಂತೆ , ನೊಣಸೊಳ್ಳೆಗಳಿಂದ ಕಚ್ಚಿಸಿಕೊಂಡು ಅಂಡಮಾನಿನ ರಣ ಸೆಖೆಯಲ್ಲಿ ಶಿಕ್ಷೆ ಅನುಭವಿಸಿದ್ದರು. ಯಾರ ಜೈಲುವಾಸ ಕಠಿಣವಾಗಿತ್ತು ಎನ್ನುವುದಕ್ಕೆ ಇನ್ನು ವಿಶ್ಲೇಷಣೆ ಬೇಕೆ ?

ಸಾವರ್ಕರ್ ಬಿಡುಗಡೆಯಾದ ಮೇಲಷ್ಟೇ ಅಲ್ಲ, ಸ್ವಾತಂತ್ರ್ಯ ಬಂದ ಬಳಿಕವೂ ಅವರ ಮೇಲೆ ನಿಂದನೆ ತಪ್ಪಲಿಲ್ಲ. ಗಾಂಧಿ ಹತ್ಯೆ ಅಪವಾದವನ್ನೂ ಅವರ ಮೇಲೆ ಹೊರಿಸಲಾಯಿತು. ಅಂಡಮಾನ್ ಜೈಲಿನ ಹೊರಗೆ ಅವರ ನೆನಪಿಗಾಗಿ ಇಡಲಾಗಿದ್ದ ಅವರ ಧ್ಯೇಯವಾಕ್ಯದ ಫಲಕವನ್ನೂ ಕಿತ್ತು ಹಾಕಲಾಯಿತು. ಸಾವರ್ಕರ್ ಬಂಧನದಲ್ಲಿದ್ದ ಸೆಲ್ಯುಲರ್ ಜೈಲನ್ನೇ ನೆಲಸಮಗೊಳಿಸಿ ಅವರ ದಿವ್ಯಸ್ಮರಣೆಯನ್ನು ಶಾಶ್ವತವಾಗಿ ಅಳಿಸಿಹಾಕಬೇಕೆಂದು ನೆಹರೂ ಆಲೋಚಿಸಿದ್ದರು. ಆದರೆ ಸಂಸದ ಕೆ.ಆರ್. ಗಣೇಶ್ ಪ್ರತಿಭಟನೆಯಿಂದ ಅದು ಸಾಧ್ಯವಾಗಲಿಲ್ಲ. ಸಾವರ್ಕರ್ ನಿಧನರಾದಾಗ (೧೯೬೬, ಫೆ.೨೬) ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲು ಗನ್ -ಕ್ಯಾರೇಜ್ ಸಿಗದಂತೆ ಅಂದಿನ ರಕ್ಷಣಾ ಸಚಿವ ವೈ.ಬಿ. ಚವ್ಹಾಣ್ ನೋಡಿಕೊಂಡರು. ಸಂಸತ್ತಿನಲ್ಲಿ ಈ ಸ್ವಾತಂತ್ರ್ಯ ವೀರನಿಗೆ ಶ್ರದ್ಧಾಂಜಲಿ ಸಲ್ಲಿಸಲು ನೆಹರೂ ಒಪ್ಪಲಿಲ್ಲ. ಆದರೆ ರಷ್ಯಾದ ಸ್ಟಾಲಿನ್ ಸತ್ತಾಗ ಸಂಸತ್ತಿನಲ್ಲಿ ಭಾವಪೂರ್ಣ ಕಂಬನಿ ಹರಿದಿತ್ತು.
ಈಗಲೂ ಯಾವುದೋ ಒಂದು ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡಲು ಮುಂದಾದರೂ ನೆಹರು ಮಾನಸಿಕತೆಯ ಕಾಂಗ್ರೆಸ್ ಜೀವಿಗಳಿಗೆ ಸಹಿಸಲಾಗುವುದಿಲ್ಲ. ತಕರಾರು ತೆಗೆಯುತ್ತವೆ. ಇನ್ನಿಲ್ಲದಂತೆ ಈ ಕ್ಷುದ್ರ ಜೀವಿಗಳು ಹೀನಾಮಾನವಾಗಿ ಸಾವರ್ಕರ್ ನಿಂದನೆಗೆ ಮುಂದಾಗುತ್ತವೆ.

ಸಾವರ್ಕರ್ ಏನಾದರೂ ಬೇರೆ ದೇಶದಲ್ಲಿ ಜನಿಸಿದ್ದರೆ, ಆ ದೇಶದ ಸ್ವಾತಂತ್ರ್ಯಕ್ಕಾಗಿ ಈ ಪರಿ ಕಡುಕಷ್ಟ ಸಹಿಸಿ ಹೋರಾಡಿದ್ದರೆ ಆ ದೇಶದ ಇತಿಹಾಸದ ಸುವರ್ಣ ಅಧ್ಯಾಯವೇ ಅವರಾಗುತ್ತಿದ್ದರು. ಅಲ್ಲಿನ ರಸ್ತೆ, ಕಟ್ಟಡ, ಶಿಕ್ಷಣ ಸಂಸ್ಥೆ, ಕ್ರೀಡಾಂಗಣ, ಉದ್ಯಾನವನ, ಅಣೆಕಟ್ಟು … ಎಲ್ಲದರ ಮೇಲೆ ಅವರ ಹೆಸರು ರಾರಾಜಿಸುತ್ತಿತ್ತು. ಆ ದೇಶದ ಪೀಳಿಗೆ ಪೀಳಿಗೆ ಇಂತಹ ಪ್ರಾತಃಸ್ಮರಣೀಯನ ನೆನಪನ್ನು ಸದಾ ಜೀವಂತವಾಗಿಡುತ್ತಿತ್ತು. ನಿರಂತರ ಶ್ರದ್ಧಾ ನಮನಗಳನ್ನು ಸಲ್ಲಿಸುತ್ತಿತ್ತು.

ಆದರೆ ಕ್ಷಮಿಸಿ ಸಾವರ್ಕರ್‌ಜೀ, ನೀವು ಹುಟ್ಟಿದ್ದು ಭಾರತದಲ್ಲಿ !

Leave a Reply

Your email address will not be published.

This site uses Akismet to reduce spam. Learn how your comment data is processed.