ಸತ್ಕ್ತಿಯ ಸುಸಂಘಟಿತ ಪ್ರರೂಪ

ಲೇಖನ: ಕಿರಣ ಹೆಗ್ಗದ್ದೆ, ಶಿವಮೊಗ್ಗ,

(ಲೇಖನ ಶಿವಮೊಗ್ಗ ಟೈಮ್ಸ್ ನಲ್ಲಿ 24 ಅಕ್ತೋಬರ್ ರಂದು ಪ್ರಕಟಗೊಂಡಿದೆ)


ಮನುಷ್ಯನ ಪಾಶವೀ ಶಕ್ತಿಗಳ ಮೇಲೆ ವಿಜಯಸಾಧಿಸುವ ಪರ್ವವೇ ವಿಜಯದಶಮಿ. ಶಮಾ ಗುಣವು ಯಾರಿಗಿರುತ್ತದೆಯೋ ಆತ ಸದಾ ವಿಜಯಪಥದಲ್ಲಿ ಮುಂದುವರಿಯುತ್ತಾನೆಂದು ಸೂಚಿಸುವಂತೆ ಇದನ್ನು ವ್ಯಾಕರಣ ವಿನೋದಕ್ಕಾಗಿ ವಿಜಯದ ಶಮಿ ಎಂದೂ ಹೇಳುವುದುಂಟು.
ದುಷ್ಟರ ಮೇಲೆ ಶಿಷ್ಟರ ವಿಜಯವನ್ನು ಸಾರುವ ದಿನವಿದು. ತಾಯಿ ಚಾಮುಂಡಿಯು ಮಹಿಷಾಸುರನನ್ನು ಅವನ ಸೇನ್ಯಸಮೇತ ವಧಿಸಿದ ದಿನವಿದು. ಶ್ರೀರಾಮನು ರಾವಣನನ್ನು ಅವನ ಸೈನ್ಯಸಮೇತ ಸಂಹರಿಸಿದ ದಿನವಿದು. ಇಲ್ಲಿ “ಸೈನ್ಯಸಮೇತ” ಎನ್ನುವ ಪದವು ಆ ದುಷ್ಟರಲ್ಲಿದ್ದ ಎಲ್ಲ ರೀತಿಯ ಸಮಾಜಘಾತುಕ ಸಾಮರ್ಥ್ಯಗಳ ಸಂಕೇತ. ಸಮಾಜಕಂಟಕನಿಗೆ ಆತನಿಗಿರುವ ಸಮಾಜಘಾತುಕ ಶಕ್ತಿಗಳೇ ನೈಜ ಆಯುಧ. ಅಂತಹ ವ್ಯಕ್ತಿಯೊಂದಿಗೆ ಸೆಣಸಾಡಲು ಮುಂದಾಗುವಾತನಿಗೆ ಆ ಶತ್ರುವಿನೊಂದಿಗೆ ಆ ಸಮಾಜಘಾತುಕ ಶಕ್ತಿಗಳನ್ನೂ ಮಟ್ಟಹಾಕುವ ಸವಾಲಿರುತ್ತದೆ. ಅದು ಒಬ್ಬ ವ್ಯಕ್ತಿಯಿಂದಾಗುವ ಕೆಲಸವಾಗಿರೋಕೆ ಸಾಧ್ಯವೇ ಆಗೋಲ್ಲ. ಆಗ ಅಂಥ ಸಮಾಜಘಾತುಕ ದುಷ್ಟಶಕ್ತಿಕೇಂದ್ರದ ಮೇಲೇರಿ ಹೋಗುವ ವ್ಯಕ್ತಿಯೂ ಸತ್ ಶಕ್ತಿಸಮೂಹದೊಂದಿಗೆ ಸುಸಂಘಟಿತನಾಗಬೇಕಾಗುತ್ತದೆ.

Dr Keshava Baliram Hedgewar, RSS Founder


ಶ್ರೀರಾಮನ ಹನುಮತ್ಸಮೇತ ಕಪಿಸೈನ್ಯವು ಅಂಥ ಸುಸಂಘಟಿತ ಸ್ಥಿತಿ. ಆದಿಪರಾಶಕ್ತಿಯು ಸಕಲ ದೇವತೆಗಳ ಶಕ್ತಿಯನ್ನು ತನ್ನಲ್ಲಿಯೂ ತನ್ನ ಮಾತೃಗಣದಲ್ಲಿಯೂ ಆವಾಹಿಸಿಕೊಂಡಿದ್ದು ಅಂಥ ಸುಸಂಘಟಿತ ಸ್ಥಿತಿ. ಶ್ರೀಕೃಷ್ಣನ ನೇತೃತ್ವದಲ್ಲಿ ಸುಸಂಘಟಿತವಾದ ಪಾಂಡವ ಸೈನ್ಯವು ಅಂಥ ಸತ್ ಶಕ್ತಿ ಗಣದ ಒಂದು ಪ್ರರೂಪ.
ವಿಜಯದಶಮಿಯು 20 ನೇ ಶತಮಾನದಲ್ಲಿ ಇಂಥದೇ ಒಂದು ಆಧುನಿಕ ಸುಸಂಘಟಿತ ಪ್ರರೂಪವನ್ನು ಜಗತ್ತಿನ ಮುಂದಿರಿಸಿತು. ಅದು ಭಾರತದ ಸರ್ವತೋಮುಖ ವಿಕಾಸಕ್ಕೂ ವಿಶ್ವದ ಕಲ್ಯಾಣಕ್ಕೂ ಸಮರ್ಥವಾದ ಸಂಜೀವಿನಿಯಂತೆ ಒದಗಿಬಂದಿತು.


ಅಂದಿನ ಕಾಲದಲ್ಲಿ ಕಡುಬಡತನದಲ್ಲಿ ವಿದ್ಯಾಭ್ಯಾಸ ಮಾಡಿ ಎಂಬಿಬಿಎಸ್ ಪದವಿಯನ್ನು ಉನ್ನತಶ್ರೇಣಿಯಲ್ಲಿ ಪಡೆದ ವ್ಯಕ್ತಿಯೊಬ್ಬ ನಿಜಾರ್ಥದಲ್ಲಿ “ಮನೆ ಬಿಟ್ಟು ಬೀದಿ ಸುತ್ತಲು” ಶುರುಮಾಡಿದ. ಆದರೀ “ಬೀದಿಸುತ್ತುವ ಕೆಲಸ” ವು ಹಿಂದು ಸಮಾಜವನ್ನು ಸಂಘಟಿಸುವುದಕ್ಕಾಗಿತ್ತು. ರಾಷ್ಟ್ರಹಿತಕ್ಕಾಗಿಯಾಗಿತ್ತು. ಹಿಂದುಗಳಿಗೆ ಅವರ ನಿಜಸ್ವರೂಪವನ್ನು ತೋರಿಸುವುದಕ್ಕಾಗಿನ ರಕ್ತಸಂಚಾರದಂತೆ ಆತ ದೇಶಾದ್ಯಂತ ಪ್ರವಾಸಮಾಡಿದ. ಭಾರತೀಯರಿಗೆ ರಾಷ್ಟ್ರೀಯತೆಯ ಪ್ರಾಣಶಕ್ತಿ ತುಂಬಿದ ಆ ಮಹಾನ್ ವ್ಯಕ್ತಿ ಡಾ. ಕೇಶವ ಬಲಿರಾಂ ಹೆಡಗೇವಾರ್ ಎಂಬ 56 ಇಂಚಿನೆದೆಯ 36 ರ ತರುಣ ಈ ಘನ ಉದ್ದೇಶಕ್ಕಾಗಿ 1925ರ ವಿಜಯದಶಮಿಯ ವಿಜಯಸಂಕೇತದ ದಿನದಂದು ಸಂಸ್ಥಾಪಿಸಿದ ಸಂಘಟನೆಯೇ ಆರೆಸ್ಸೆಸ್. ಹೀಗೆ ವಿಜಯದಶಮಿಯು ಆರೆಸ್ಸೆಸ್ ನ ಹುಟ್ಟುಹಬ್ಬದ ದಿನ.

ವಿಜಯದಶಮಿಯಂದು ಆರೆಸ್ಸೆಸ್ ಶುರುವಾದಾಗ ಇದ್ದದ್ದು ಒಂದು ರೀತಿಯಲ್ಲಿ ಇಂಥ ಕಾರ್ಗತ್ತಲ ವಾತಾವರಣವೇ. ಪ್ರಥಮ ಮಹಾಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತೀಯರಲ್ಲಿ ಗುಲಾಮೀ ಮಾನಸಿಕತೆಯನ್ನು ಹೆಮ್ಮರವಾಗಿಸಲು ಬ್ರಿಟಿಷರು ನಡೆಸಿದ್ದ ತಂತ್ರಕ್ಕೆ ಅನೇಕ ಭಾರತೀಯ ರಾಜಸಂಸ್ಥಾನಗಳೇ ನೀರೆರೆದಿದ್ದವು. ಅವುಗಳು ಆಂಗ್ಲರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾ ತಮ್ಮ ತಮ್ಮ ಸ್ವಕ್ಷೇತ್ರದ ಹಿತಸಾಧಿಸುವುದರಲ್ಲಿಯೇ ಹಿತ ಕಾಣುತ್ತಿದ್ದವೇ ಹೊರತು ಸಮಗ್ರ ಭಾರತ ಹಿತದ ಬಗ್ಗೆಯಾಗಲೀ ಇಲ್ಲಿನ ನೆಲದ ಮೂಲಗುಣದ ಬಗ್ಗೆಯಾಗಲೀ ಯೋಚಿಸೋದನ್ನು ಮರೆತಿದ್ವು. ಇನ್ನು ಐರಿಷ್ ಸ್ವಾತಂತ್ರ್ಯ ಸಂಗ್ಯಾಮವನ್ನೇ ಹತ್ತಿಕ್ಕಿ ರಾಷ್ಟ್ರವಾದಿಗಳ ಪಾಲಿಗೆ ಮಗ್ಗುಲು ಮುಳ್ಳಾಗಿದ್ದ ಇಂಗ್ಲೀಷರ ಸೇನಾನಿ ಎ ಓ ಹ್ಯೂಮ್ ನಂತೂ ಭಾರತದಲ್ಲೂ ಅದೇ ವಾತಾವರಣ ನಿರ್ಮಿಸುವ ಸಲುವಾಗಿ ಸ್ಥಾಪಿಸಿದ್ದ , ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ಸಿನ ವಾಸ್ತವವಾದ ಅಜೆಂಡವನ್ನರಿಯುವುದರಲ್ಲೂ ಭಾರತದ ರಾಜಕೀಯ ನಾಯಕರು ಯಶಸ್ವಿಯಾಗಿರಲಿಲ್ಲ. ಅಂಥ ಸಂದರ್ಭದಲ್ಲಿ ಆ ಎಲ್ಲ ರಾಜಕೀಯ ಸ್ತರಗಳನ್ನೂ ಚೆನ್ನಾಗಿಯೇ ಪರಿಚಯಿಸಿಕೊಂಡಿದ್ದ ಡಾಕ್ಟರ್ ಜಿಯವರಿಗೆ ಭಾರತದೇಳಿಗೆಯು ಅಡಗಿರುವುದು ಇಲ್ಲಿನ ಮೂಲನಿವಾಸಿಗಳಾದ ಹಿಂದುಗಳ ಸರ್ವಾಂಗೀಣ ವಿಕಾಸದಲ್ಲಿಯೇ ಎಂಬ ಬೋಧೆಯಾಯಿತು. ಹಿಂದುತ್ವದ ನೈಜಜಾಗರಣದಲ್ಲಿಯೇ ಭಾರತದ ಹಿತಸಾಧನೆಯಡಗಿರೋದನ್ನು ಡಾಕ್ಟರ್ ಜಿ ಗಮನಿಸಿದರು. ಅದಕ್ಕಾಗಿ ಸ್ಥಾಪಿಸಬೇಕಾದ ಸಂಘಟನೆಯ ಸ್ವರೂಪವನ್ನು ನಿರ್ಧರಿಸಿದ ಡಾಕ್ಟರ್ ಜಿ ಅದನ್ನು ವಿಜಯದ ಸಂಕೇತವಾದ ವಿಜಯದಶಮಿಯಂದೇ ಆರಂಭಿಸಿದರು. ಅದಕ್ಕಾಗಿ ಮೊದಲು ಅವರು ಆರಿಸಿಕೊಂಡಿದ್ದು ಹದಿಹರೆಯದ ಕಿಶೋರರನ್ನು. ಚಟುವಟಿಕೆಯು ಮೋಹಿತೆವಾಡದ ರೇಶಿಂಭಾಗ್ ನ ಮೈದಾನದಲ್ಲಿ ಶುರುವಾಯ್ತು. ನೋಡನೋಡುತ್ತಿದ್ದಂತೆಯೇ ಅದು 14 ವರ್ಷಗಳಲ್ಲೇ ಅಖಿಲಭಾರತ ಮಟ್ಟ ತಲುಪಿತ್ತು.


ವಿಜಯದಶಮಿಯಂದು ಹಿಂದೂ ಸಮಾಜಕ್ಕಂಟಿದ್ದ ಜಾಡ್ಯಕ್ಕೆ ಡಾಕ್ಟರ್ ಜಿ ಸರಿಯಾದ ರೋಗನಿದಾನವನ್ನೇ ಕಂಡುಹಿಡಿದಿದ್ದರು.

ನವರಾತ್ರಿಗಳ ಒಂಬತ್ತು ರಾತ್ರಿಗಳ ಘನಘೋರ ಸಮರವು ಕಳೆದ ಮೇಲೆ ಹೇಗೆ ವಿಜಯದಶಮಿಯ ಜಯವು ದೊರೆಯುವುದೋ ಅದೇ ರೀತಿ ಕಳೆದೊಂಬತ್ತು ದಶಕಗಳಲ್ಲಿ ಆರೃಸ್ಸೆಸ್ ಅರಾಷ್ಟ್ರೀಯತೆಯೆಂಬ ದಾನವೀ ಶಕ್ತಿಯ ವಿರುದ್ನ ಘನಘೋರ ಸಮರವನ್ನೇ ಸಾರಿದೆ. ಸಮರನಿರತವಾಗಿದೆ. ಇದರಲ್ಲಿ 1920ರ ದಶಕದಿಂದಾರಂಭವಾಗಿರುವ ಒಂದೊಂದು ದಶಕವೂ ಒಂದೊಂದು ಯುದ್ಧ ರಾತ್ರಿಯ ಸಂಕೇತವೆಂದರೂ ತಪ್ಪಾಗಲಾರದು. ಆದರಿಲ್ಲಿ ಆರೆಸ್ಸೆಸ್ ಸೆಣಸಿರುವುದು ಖಂಡಿತವಾಗಿಯೂ ಕೊಲ್ಲುವ ಯುದ್ಧದಲ್ಲಲ್ಲ. ಅದಕ್ಕದರಲ್ಲಿ ಆಸಕ್ತಿಯೂ ಇಲ್ಲ. ಬದಲಿಗೆ ಹಿಂದೂಸಮಾಜದ ಜಾಡ್ಯವನ್ನು ದೂರೀಕರಿಸುವ ಯುದ್ಧದಲ್ಲಿ. ಪ್ರಜಾತಂತ್ರವನ್ನೇ ಕೊಲ್ಲುವವರ ಮಾನಸಿಕತೆಯನ್ನು ಸೋಲಿಸಿಹಾಕುವ ಯುದ್ಧದಲ್ಲಿ. ಬಾಬರೀ ರಚನೆಯನ್ನೇ ವೈಭವೀಕರಿಸಿ ರಾಮ ನನ್ನು ದೂರೀಕರಿಸುವ ರಾವಣಮತಿಗಳನ್ನು ಬೌದ್ಧಿಕವಾಗಿ ಬರಿದಾಗಿಸುವ ಯುದ್ಧದಲ್ಲಿ. “ರಾಮನೇನು ಇಂಜನಿಯರ್ರಾ…” ಎಂದು ಹೀಯಾಳಿಸುವವರ ಸೊಕ್ಕಡಗಿಸುವ ಯುದ್ಧದಲ್ಲಿ. ಮತಾಂತರಿತರಾಗಿ ತಮ್ಮ ಸತ್ವವನ್ನೂ ಸ್ವತ್ವವನ್ನೂ ಕಳೆದುಕೊಂಡ ಪೂರ್ವ ಹಿಂದುಗಳನ್ನು ಮರಳಿ ಮಾತೃಧರ್ಮಕ್ಕೆ ಗೌರವಪೂರ್ಣವಾಗಿ ಕರೆತರುವ ಸ್ವಬೋಧಜಾಗರಣದ ಯುದ್ಧದಲ್ಲಿ. 1991 ರಲ್ಲಿ ಕಾಶ್ಮೀರದಿಂದ ಒದ್ದೋಡಿಸಲ್ಪಟ್ಟ ಪಂಡಿತರಿಗೆ ಮತ್ತವರ ಗೌರವಾದರಗಳನ್ನು ವಸತಿಸಮೇತ ದೊರಕಿಸಿಕೊಡುವ ಯುದ್ಧದಲ್ಲಿ.
ಆರೆಸ್ಸೆಸ್ ಎಂದೂ ಯುದ್ಧಪ್ರಿಯ ಸಂಘಟನೆಯಲ್ಲ. ಜಗನ್ಮಾತೆಯು ದುಷ್ಟನಿಗ್ರಹಕ್ಕಾಗಿ ಮಾತ್ರ ರಣಚಂಡಿಯಾಗುತ್ತಾಳೆಯೇ ಹೊರತು ಆಕೆಯು ಗುರುತಿಸಲ್ಪಡುವುದು ವಿಶ್ವಪೋಷಕಿಯಾದ ಜಗದ್ಧಾತ್ರಿಯೆಂಬುಧಾಗಿಯೇ. ಆರೃಸ್ಸೆಸ್ಸೂ ಹಾಗೆಯೇ. ಇದಕ್ಕೆ ಜಗಳ ಕಲಹ ಯುದ್ಧ ಹಾಗು ವಾದವಿವಾದಗಳಲ್ಲಿ ಆಸಕ್ತಿಯೂ ಇಲ್ಲ. ಅವುಗಳಲ್ಲಿ ಕಳೆದುಹೋಗುವಷ್ಟು ಸಮಯವೂ ಇದಕ್ಕಿಲ್ಲ. ಆದರೆ ಅಂಥ ವಿಷಮಯ ಸಂದರ್ಭಗಳಲ್ಲಿ ಸುಮ್ಮನೆ ಕೂರುವ ಜಾಯಮಾನವೂ ಆರೆಸ್ಸೆಸ್ಸಿನದಲ್ಲ. ಅಂತೆಯೇ ಪ್ರವಾಹ ಭೂಕಂಪ ಅತಿವೃಷ್ಟಿಗಳ ಸಂದರ್ಭಗಳಲ್ಲಿ ಆರೆಸ್ಸೆಸ್ ಧುಮುಕುವುದು ಕೇವಲ ಹಿಂದುಗಳ ಸೇವೆಗೆ ಮಾತ್ರವಲ್ಲ. ಮಾನವಜನಾಂಗದೆಲ್ಲರ ಸೇವೆಗೆ. ಅಂತೆಯೇ ಆರೆಸ್ಸೆಸ್ ನಲ್ಲಿ ಹತ್ತಿರಹತ್ತಿರ 2 ಲಕ್ಷ ಸೇವಾಚಟುವಟಿಕೆಗಳಿವೆ.
ತನ್ನದು ನಿರ್ಮಾಣಕಾರ್ಯ ಎಂಬ ಸ್ಪಷ್ಟ ಬೋಧೆಯಿರುವ ಸಂಘಟನೆ ಆರೆಸ್ಸೆಸ್.
ಹೀಗೆ ಆರೆಸ್ಸೆಸ್ ಸಾಮೂಹಿಕ ಅರ್ಥದಲ್ಲೂ ವಿಜಯದಶಮಿಯ ಒಂದು ವೈಶ್ವಿಕ ಸಂಕೇತವಾಗಿ ನಮ್ಮೆದುರಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.