ವಿಶ್ವ ಸಂವಾದ ಕೇಂದ್ರ, ಕರ್ನಾಟಕದ ನೂತನ ಜಾಲತಾಣ ಸಂವಾದವರ್ಲ್ಡ್.ಕಾಮ್ (www.samvadaworld.com) ಇಂದು ಲೋಕಾರ್ಪಣೆಗೊಂಡಿದೆ. ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಸಂಘಚಾಲಕರಾದ ಶ್ರೀ ವಿ ನಾಗರಾಜ್ ಅವರು ಜಾಲತಾಣದ ಲೋಕಾರ್ಪಣೆಯನ್ನು ಇಂದು ನೆರವೇರಿಸಿದರು. SamvadaWorld, VSKKarnatakaMedia ನ ಫೇಸ್ಬುಕ್ ಪೇಜ್ ಗಳಿಂದ ಈ ಕಾರ್ಯಕ್ರಮ ನೇರ ಪ್ರಸಾರಗೊಂಡಿತು.
ಜಾಗತೀಕರಣದಿಂದ ನಾವು ಸೋತಿದ್ದೇವೆ. ನಾವು ನಮ್ಮ ಸುತ್ತಲಿನ ಜಗತ್ತನ್ನು ನೋಡುತ್ತಾ, ಅಲ್ಲಿನ ಆಗುಹೋಗುಗಳನ್ನು ಗಮನಿಸಿ ಸುಮ್ಮನಿದ್ದುಬಿಡಲು ಯಾವುದೇ ಅವಕಾಶವಿಲ್ಲ ಎಂದು ಶ್ರೀ ವಿ ನಾಗರಾಜ್ ಸಂವಾದವರ್ಲ್ಡ್ ಜಾಲತಾಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸ್ವಾಮಿ ವಿವೇಕಾನಂದರು ಈ ವಿಷಯವಾಗಿ ಹಿಂದೆ ಮಾತನಾಡಿ ಭಾರತ ಜಗತ್ತಿನ ಸಂಪರ್ಕದಲ್ಲಿ ಸದಾ ಇರಬೇಕು ಎಂದು ಎಚ್ಚರಿಸಿದ್ದರು ಎಂದು ಶ್ರೀ ನಾಗರಾಜ್ ತಿಳಿಸಿದರು.
ದೇಶದ ಸಾಮಾನ್ಯ ಪ್ರಜೆಯೂ ಸಹಿತ ಪ್ರಜಾಪ್ರಭುತ್ವದಲ್ಲಿ ಭಾಗಿಯಾಗಲೇಬೇಕು ಹಾಗೂ ಜಗತ್ತಿನ ಆಗುಹೋಗುಗಳಿಗೆ ಸರ್ಕಾರ, ರಾಜಕೀಯ ನಾಯಕರಷ್ಟೇ ಹೊಣೆ ಎಂದು ಹೇಳಿ ತಪ್ಪಿಸಿಕೊಳ್ಳುವ ಯಾವುದೇ ಆಸ್ಪದ ಇಂದಿನ ದಿವಸದಲ್ಲಿ ಯಾರಿಗೂ ಉಳಿದಿಲ್ಲ ಎಂದು ಅವರು ನುಡಿದರು.
ಸಂವಾದ ವರ್ಲ್ಡ್ ಕೈಗೊಂಡಿರುವ ಸಾಹಸವನ್ನು ಶ್ಲಾಘಿಸುತ್ತಾ ಮುಂದಿನ ದಿನಗಳಲ್ಲಿ ಕೇವಲ ಸುದ್ದಿಯನ್ನು ಬಿತ್ತರಿಸುವ, ಮಾಹಿತಿ ತಲುಪಿಸುವ ಕೆಲ್ಸವನ್ನಷ್ಟೇ ಮಾಡದೇ ವಿಚಾರ ವೇದಿಕೆಯ ಮಾಧ್ಯಮವಾಗಿ ಕಾರ್ಯ ನಿರ್ವಹಿಸಿ ಜನಸಾಮಾನ್ಯರಿಗೆ ದೇಶದ ಬಗ್ಗೆ, ವಿಶ್ವದ ಬಗ್ಗೆ ಮಂಥನ ನಡೆಸುವ ಲೇಖನಗಳು ಜಾಲತಾಣದಲ್ಲಿ ಮೂಡಿ ಬರಲಿ ಎಂದು ಆಶಿಸಿದರು.
ವಿಶ್ವ ಸಂವಾದ ಕೇಂದ್ರ, (ವಿ ಎಸ್ ಕೆ ) ಕರ್ನಾಟಕ ಎಂಬ ಮಾಧ್ಯಮ ಕೇಂದ್ರವು ಕಳೆದ ಹಲವು ವರ್ಷಗಳಿಂದ ಮುದ್ರಣ ಮತ್ತು ವಿದ್ಯುನ್ಮಾನ ಸಂಬಂಧಿತ ಬಹುವಿಧ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ವಿಶ್ವ ಸಂವಾದ ಕೇಂದ್ರ, ಕರ್ನಾಟಕ ಆಧುನಿಕ ಲೋಕದಲ್ಲಿ ಜಗತ್ತಿನ ಆದ್ಯ ಪತ್ರಕರ್ತರೆಂದು ಕರೆಯಲ್ಪಡುವ ನಾರದ ಮಹರ್ಷಿಯ ಜಯಂತಿಯಂದು ಸಮಾಜದ ಓರೇ ಕೋರೆಗಳನ್ನು ತಮ್ಮ ಲೇಖನ, ವರದಿಯ ಮುಖಾಂತರ ತಿದ್ದುವ ಪತ್ರಕರ್ತರನ್ನು ಸನ್ಮಾನಿಸುತ್ತಿದೆ. ಸಾಮಾಜಿಕ ಮಹತ್ತ್ವದ ವಿಷಯಗಳ ಕುರಿತು ವಿಚಾರಗೋಷ್ಠಿಗಳು, ಸಾಮಯಿಕ ಘಟನೆಗಳ ಬಗ್ಗೆ ವಿಶ್ಲೇಷಣೆ, ಪ್ರಮುಖ ನಾಯಕರ ಮತ್ತು ಚಿಂತಕರ ಸಂದರ್ಶನ, ಸಾಂದರ್ಭಿಕ ವಿದ್ಯಮಾನಗಳಿಗೆ ಸಂಬಂಧಿಸಿ ಅಧ್ಯಯನಪೂರ್ಣ ಲೇಖನಗಳ ಪ್ರಕಾಶನ, ಉದಯೋನ್ಮುಖ ಪತ್ರಕರ್ತರ ಅಭ್ಯಾಸ ವರ್ಗ, ಆಸಕ್ತ ಕಿರಿಯರಿಗೆ ’ಸಂಪಾದಕರಿಗೆ ಪತ್ರಲೇಖನ’ ಕಲೆಯ ಪ್ರಶಿಕ್ಷಣ ಮುಂತಾದ ಕೆಲಸಗಳನ್ನು ಮಾಡುತ್ತಲಿದೆ.
samvada.org ಎಂಬ ಜಾಲತಾಣದ ಮೂಲಕ, @VSKKarnataka ಎಂಬ ಟ್ವಿಟರ್ ಖಾತೆಯ ಮೂಲಕ ಸುದ್ದಿ ಸಮಾಚಾರಗಳನ್ನು, ಲೇಖನಗಳನ್ನು ಪ್ರಕಟಿಸುತ್ತಿದ್ದ ವಿಎಸ್ ಕೆ ಸಂಸ್ಥೆ, ಕಳೆದವರ್ಷ ತನ್ನ ಸಂವಾದ (samvada, samvadk) ಎಂಬ ಯುಟ್ಯೂಬ್/ಫೇಸ್ಬುಕ್ ವಾಹಿನಿಯ ಮೂಲಕ ನಾನಾ ತರಹದ ಸಮಾಜಮುಖಿ ವಿಡಿಯೋಗಳನ್ನು ಪ್ರಕಟಿಸುತ್ತಿದೆ. ಇತ್ತೀಚೆಗಷ್ಟೇ, ವಿಜಯದಶಮಿಯಂದು ವಿ ಎಸ್ ಕೆ ಯ ಹೊಸ ಟ್ವಿಟರ್ ಖಾತೆ ಆರಂಭವಾಯಿತು. @vsksamskritam ಟ್ವಿಟರ್ ಖಾತೆಯಿಂದ ಸಂಸ್ಕೃತ ಭಾಷೆಯಲ್ಲಿ ಸಮಾಚಾರವನ್ನು ಪ್ರಕಟಿಸುವ ಕೆಲಸದಲ್ಲಿ ಸಂಸ್ಕೃತ ಭಾರತೀಯ ಜೊತೆ ಕೈಜೋಡಿಸಿದೆ. ಇದೀಗ ಜಾಗತಿಕ ಮಟ್ಟದ ಸುದ್ದಿಗಳು, ಅವುಗಳ ವಿಶ್ಲೇಷಣೆ, ವಿಜ್ಞಾನ ತಂತ್ರಜ್ಞಾನ, ಭದ್ರತೆ ಮತ್ತು ರಕ್ಷಣೆ ಈ ವಿಷಯಗಳಲ್ಲಿ ಸಮಾಚಾರವನ್ನು ಓದಲು samvadaworld.com ರಚಿತವಾಗಿದೆ.
ಶ್ರೀ ಪ್ರಶಾಂತ್ ವೈದ್ಯರಾಜ್ ಹೊಸ ಜಾಲತಾಣದ ಸಂಪಾದಕರಾಗಿರುತ್ತಾರೆ. ಹಿಂದೆ ಅಸೀಮ (ಆಂಗ್ಲ) ಮಾಸಿಕ ಪತ್ರಿಕೆಯ ಸಂಪಾದಕರಾಗಿ, ಆರ್ಗನೈಸರ್ ಸಾಪ್ತಾಹಿಕದ ದಕ್ಷಿಣ ಭಾರತದ ಬ್ಯುರೋ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿರುವ ಅನುಭವ ಪ್ರಶಾಂತ್ ವೈದ್ಯರಾಜ್ ಅವರಿಗಿದೆ.
ಆರೆಸ್ಸೆಸ್ ದಕ್ಷಿಣ ಮಧ್ಯಕ್ಷೇತ್ರದ ಕಾರ್ಯವಾಹರಾದ ನ ತಿಪ್ಪೇಸ್ವಾಮಿಯವರು, ವಿಶ್ವ ಸಂವಾದ ಕೇಂದ್ರದ ವಿಶ್ವಸ್ತರು, ಸಂಯೋಜಕರು ಹಾಗೂ ಜಾಲತಾಣದ ಲೋಕಾರ್ಪಣೆಯನ್ನು ನೇರವಾಗಿ ನೋಡಲು ವಿ ಎಸ ಕೆ ಅಭಿಮಾನಿಗಳು ಇಂದು ರಾಷ್ಟ್ರೋತ್ಥಾನ ಪರಿಷತ್ತಿನ ಕೇಶವ ಶಿಲ್ಪದಲ್ಲಿ ನೆರೆದಿದ್ದರು.