ಸಕ್ಷಮ ಸಂಸ್ಥೆಯಿಂದ ಜಿಲ್ಲಾ ಸಮನ್ವಯ ಶಿಕ್ಷಣ ತರಬೇತಿ ಕಾರ್ಯಾಗಾರ
ಸಕ್ಷಮ (ಸಮದೃಷ್ಟಿ ಕ್ಷಮತ ವಿಕಾಸ ಮತ್ತು ಅನುಸಂಧಾನ ಮಂಡಲ) ಕರ್ನಾಟಕ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಉಪನಿರ್ದೇಶಕರು (ಆಡಳಿತ ) ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು,ಚಿಕ್ಕಬಳ್ಳಾಪುರ ಇವರ ಸಹಯೋಗದೊಂದಿಗೆ ದಿನಾಂಕ 21 -11 -2020 ರ ಶನಿವಾರದಂದು ಜಿಲ್ಲಾ ಸಮನ್ವಯ ಶಿಕ್ಷಣ ತರಬೇತಿ ಕಾರ್ಯಾಗಾರವನ್ನು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಿಗಾಗಿ (ಬಿ .ಐ .ಇ .ಆರ್. ಟಿ ) ಸಮಗ್ರ ಶಿಕ್ಷಣ ಸಭಾಂಗಣ ಉಪನಿರ್ದೇಶಕರ ಕಚೇರಿ ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಲಾಗಿತ್ತು. ಜಿಲ್ಲಾ ಉಪನಿರ್ದೇಶಕರಾದ ಶ್ರೀಯುತ ಎಸ್.ಜಿ.ನಾಗೇಶ್ ರವರ ಘನ ಅಧ್ಯಕ್ಷತೆಯಲ್ಲಿ, ಮುಖ್ಯ ಅತಿಥಿಗಳಾಗಿ ಸಕ್ಷಮ ಚಿಕ್ಕಬಳ್ಳಾಪುರ ಘಟಕದ ಪೋಷಕರು ಹಾಗೂ S. J. C ತಾಂತ್ರಿಕ ಮಹಾವಿದ್ಯಾಲಯ ಚಿಕ್ಕಬಳ್ಳಾಪುರದ ಪ್ರಾಂಶುಪಾಲರಾದ ಡಾ. ಕೆ. ಎಂ. ರವಿಕುಮಾರ್ ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳಾದ ಶ್ರೀಮತಿ ಸುಕನ್ಯಾರವರ ಉಪಸ್ಥಿತಿಯಲ್ಲಿ ಬೆಳಗಿನ ಅವಧಿಯ ಕಾರ್ಯಗಾರವು ಪ್ರಾರಂಭವಾಯಿತು.
DYPC ಶ್ರೀಮತಿ ಸುಕನ್ಯಾ ರವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಮಾತನಾಡುತ್ತಾ ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಹಾಗೂ ಸರ್ವತೋಮುಖ ಅಭಿವೃದ್ಧಿಯಲ್ಲಿ ಬಿ. ಐ. ಇ. ಆರ್.ಟಿ ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ .ಆದಕಾರಣ ಪ್ರಮುಖವಾಗಿ ಫಿಜಿಯೋಥೆರಪಿ ಬಗ್ಗೆ ಪ್ರಾಯೋಗಿಕ ತರಬೇತಿ ನೀಡುವ ಸಲುವಾಗಿ ಹಾಗೂ ವಿವಿಧ ನ್ಯೂನ್ಯತೆಗಳ ಬಗ್ಗೆ (ಬುದ್ದಿ ನ್ಯೂನತೆ, ವಾಕ್ ಶ್ರವಣ ನ್ಯೂನತೆ) ಸಂಪನ್ಮೂಲ ವ್ಯಕ್ತಿಗಳಿಂದ ಹೆಚ್ಚಿನ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ವಿಶೇಷ ಚೇತನ ವ್ಯಕ್ತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸೇವೆಸಲ್ಲಿಸುತ್ತಿರುವ ರಾಷ್ಟ್ರೀಯ ಸಂಘಟನೆಯಾದ ಸಕ್ಷಮ ಕರ್ನಾಟಕದ ಸಹಯೋಗದೊಂದಿಗೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಹಾಗೆಯೇ ಸಕ್ಷಮ ಕರ್ನಾಟಕದ ಕಾರ್ಯದರ್ಶಿಗಳಾದ ಶ್ರೀಯುತ ಡಾ. ಹರಿಕೃಷ್ಣ ರೈ ರವರು ವೆಬಿನಾರ್ ಮೂಲಕ ಸಕ್ಷಮದ ಕಿರುಪರಿಚಯ ಹಾಗೂ ಸಕ್ಷಮ ನಡೆಸುತ್ತಿರುವ ವಿವಿದ ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತ ಕಳೆದ 10 ವರ್ಷಗಳಿಂದ ಕರ್ನಾಟಕ ರಾಜ್ಯಾದ್ಯಂತ ವಿಶೇಷ ಚೇತನ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಕ್ಷಮ ಹಲವಾರು ಸಾಮಾಜಿಕ ಸೇವಾಕಾರ್ಯಗಳನ್ನು ಮಾಡುತ್ತಿದೆ, ವಿಶೇಷ ಚೇತನರಿಗೆ ಅವಕಾಶ ಹಾಗೂ ಪ್ರೋತ್ಸಾಹ ನೀಡಿದಾಗ ಅವರು ಸ್ವಾವಲಂಬಿಗಳಾಗಿ ಬದುಕಲು ಸಾಧ್ಯವಾಗುತ್ತದೆ ,ಈ ನಿಟ್ಟಿನಲ್ಲಿ ಸಕ್ಷಮ ದಿವ್ಯಾಂಗರ ಶೈಕ್ಷಣಿಕ, ಸಾಂಸ್ಕೃತಿಕ, ಆರೋಗ್ಯ ಹಾಗು ಆರ್ಥಿಕ ಸ್ವಾವಲಂಬನೆಗಾಗಿ ಅನೇಕ ಸೇವಾಕಾರ್ಯಗಳನ್ನು ಮಾಡುತ್ತಿದೆ ಎಂದು ತಿಳಿಸಿದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ S. J. C ತಾಂತ್ರಿಕ ಮಹಾವಿದ್ಯಾಲಯದ ಚಿಕ್ಕಬಳ್ಳಾಪುರದ ಪ್ರಾಂಶುಪಾಲರು ಹಾಗೂ ಸಕ್ಷಮ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಪೋಷಕರಾದ ಡಾಕ್ಟರ್ ಕೆ. ಎಂ. ರವಿಕುಮಾರ್ ರವರು ಕಾರ್ಯಾಗಾರವನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ,ಸಕ್ಷಮ ದ ಸೇವಾ ಚಟುವಟಿಕೆಗಳ ಬಗ್ಗೆ ಮಾತನಾಡುತ್ತಾ ಸ್ವಸ್ಥ ಸಮಾಜ ನಿರ್ಮಾಣ ಹಾಗೂ ರಾಷ್ಟ್ರದ ಏಳಿಗೆಯಲ್ಲಿ ವಿಶೇಷ ಚೇತನ ವ್ಯಕ್ತಿಗಳ ಪಾತ್ರವು ಸಹ ಅತ್ಯಂತ ಮಹತ್ವದ್ದಾಗಿರುತ್ತದೆ. ಸಕ್ಷಮವು 21 ವಿಧದ ನ್ಯೂನ್ಯತೆಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಸೇವಾಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು .ಹಾಗೆಯೇ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಮನ್ವಯ ಶಿಕ್ಷಣಕ್ಕೆ ಮಹತ್ವವಾದ ಸ್ಥಾನವನ್ನು ನೀಡಲಾಗಿದೆ. N. E. P ಯಲ್ಲಿನ ಸಮನ್ವಯ ಶಿಕ್ಷಣದ ಆಶೋತ್ತರಗಳನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಉಪನಿರ್ದೇಶಕರಾದ ಶ್ರೀಯುತ ಎಸ್. ಜಿ. ನಾಗೇಶ್ ರವರು ಮಾತನಾಡುತ್ತಾ ವಿಶೇಷ ಚೇತನ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರವು ಬಿ. ಐ. ಇ. ಆರ್. ಟಿ. ಗಳ ನೇಮಕಾತಿ ಮಾಡಿರುವ ಹಿನ್ನೆಲೆಯ ಸದುದ್ದೇಶದ ಬಗ್ಗೆ ಮನವರಿಕೆ ಮಾಡಿಕೊಟ್ಟರು ವಿಶೇಷಚೇತನ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶಿಕ್ಷಣ ಇಲಾಖೆ ಹಮ್ಮಿಕೊಳ್ಳುತ್ತಿರುವ ಹಲವಾರು ಯೋಜನೆಗಳನ್ನು ಯಶಸ್ವಿಗೊಳಿಸುವಲ್ಲಿ ಬಿ.ಐ.ಇ.ಆರ್ .ಟಿ ಗಳ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ .ವೃತ್ತಿಯೊಂದಿಗೆ ಸೇವೆಯನ್ನು ಮಾಡುವ ವಿಶೇಷವಾದ ಅವಕಾಶ ಹಾಗೂ ಸೌಭಾಗ್ಯ
ಬಿ ಇ ಆರ್ ಟಿ ಗಳಿಗೆ ಲಭಿಸಿದೆ ಆದಕಾರಣ ಸಮನ್ವಯ ಶಿಕ್ಷಣದ ಬಗ್ಗೆ ಬಿ ಐ ಇ ಆರ್ ಟಿ ಗಳು ಹೆಚ್ಚಿನ ಪ್ರಾಯೋಗಿಕ ಜ್ಞಾನವನ್ನು ಪಡೆಯುವ ಸಲುವಾಗಿ ಆಯೋಜಿಸಲಾಗಿರುವ ಸಕ್ಷಮದ ಕಾರ್ಯಾಗಾರದ ಸದುದ್ದೇಶ ವನ್ನು ಫಲಪ್ರದ ಗೊಳಿಸು ನಿಟ್ಟಿನಲ್ಲಿ ಜ್ಞಾನವನ್ನು ಪಡೆದು ಅದನ್ನು ಕಾರ್ಯರೂಪದಲ್ಲಿ ತರುವಲ್ಲಿ ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ಮತ್ತು ಮಾರ್ಗದರ್ಶನ ನೀಡಿದರು .
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಫಿಜಿಯೋಥೆರಪಿಸ್ಟ್ ಡಾ. ಕಿರಣ್ ಎಸ್ ಮೂರ್ತಿಯವರು, ಇಲಾಖೆಯ ವಿಷಯ ಪರಿವೀಕ್ಷಕರು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ಪ್ರಾರ್ಥನೆಯನ್ನು ಬಿ.ಐ.ಇ.ಆರ್ .ಟಿ ರಾಜಪ್ಪ ರವರು ಮಾಡಿದರು ,
ಫಿಜಿಯೋ ಥೆರಪಿಸ್ಟ್ ಹಾಗೂ ಸಕ್ಷಮ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷರೂ ಆದ ಡಾ. ಕಿರಣ್ ಎಸ್ ಮೂರ್ತಿಯವರು ವಿಶೇಷ ಚೇತನ ಮಕ್ಕಳಿಗೆ ಫಿಜಿಯೋಥೆರಪಿ ಚಿಕಿತ್ಸೆಯನ್ನು ಹೇಗೆ ನೀಡಬೇಕು ಎಂಬುದರ ಪ್ರಾಯೋಗಿಕ ತರಬೇತಿ ಬೆಳಗ್ಗಿನ ಅವದಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ನೀಡಿದರು. A. P. C. O ಶ್ರೀಯುತ ಸುಭಾಷ್ ಚಂದ್ರಬೋಸ್ ರವರು ಕಾರ್ಯಾಗಾರಕ್ಕೆ ಎಲ್ಲರನ್ನು ಸ್ವಾಗತಿಸಿದರು ,ಬಿ.ಐ.ಇ.ಆರ್ .ಟಿ. ಕೃಷ್ಣಪ್ಪರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.
ಮಧ್ಯಾಹ್ನದ ನಂತರದ ಅವಧಿಯ ಕಾರ್ಯಗಾರವನ್ನು ವೆಬಿನಾರ್ ಮೂಲಕ ಸಕ್ಷಮ ಕರ್ನಾಟಕದ ಕಾರ್ಯದರ್ಶಿಗಳಾದ ಡಾ .ಹರಿಕೃಷ್ಣ ರೈ ಯವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು . ಕಾರ್ಯಕಾರಣಿ ಸದಸ್ಯೆ ಹಾಗೂ ಸೇವ ಇನ್ ಅಕ್ಷನ್ ಸಂಸ್ಥೆಯ ಉಪ ನಿರ್ದೇಶಕರು ಆದ ಶ್ರೀಮತಿ ವರದ ಹೆಗಡೆಯವರು ಬುದ್ಧಿ ನ್ಯೂನತೆಗೆ ಸಂಬಂಧಿಸಿದಂತೆ ಯಶೋಗಾಥೆಯ ಬುದ್ದಿನ್ಯೂನತೆ ಮಗುವನ್ನು ಉದಾಹರಿಸಿ ಹೇಗೆ ಹಂತಹಂತವಾಗಿ ಮಗುವನ್ನು ಸಮಾಜದ ಮುಖ್ಯವಾಹಿನಿಗೆ ತರಲಾಯಿತು ಎಂಬುದನ್ನು ವಿವರಿಸಿದರು .ಈ ಮಕ್ಕಳಿಗೆ ದೈನಂದಿನ ಜೀವನದ ಕೌಶಲ್ಯಗಳ ಕಲಿಕೆಯನ್ನುಕಲಿಸಿ ಸ್ವಾವಲಂಬಿಯಾಗಿ ಬದುಕಲು ಹೇಗೆ ಕಲಿಸಬೇಕು ಎಂಬುದನ್ನುಉದಾಹರಣೆ ಯೊಂದಿಗೆ ವಿವರಿಸಿದರು.
ತದನಂತರ ಹೆಲನ್ ಕೆಲರ್ ವಿದ್ಯಾ ಸಂಸ್ಥೆಯ ಸಂಸ್ಥಾಪಕರು ಹಾಗೂ ಸಕ್ಷಮದ ಕಾರ್ಯಕಾರಣಿ ಸದಸ್ಯೆಯಾದ ಶ್ರೀಮತಿ ಗಾಯತ್ರಿ ಯವರು ವಾಕ್ ಶ್ರವಣ ನ್ಯೂನತೆ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುತ್ತಾ ವೈಯಕ್ತಿಕವಾಗಿ ತಮ್ಮ ಮಗನನ್ನು ಉದಾಹರಿಸಿ ಹೇಗೆ ವಾಕ್ ಶ್ರವಣ ಸಮಸ್ಯೆ ಇರುವ ತಮ್ಮ ಮಗುವಿಗೆ ಹೇಗೆ ಶಿಕ್ಷಣ ಮತ್ತು ಚಿಕಿತ್ಸೆಯನ್ನು ನೀಡಿ ಇಂದು ಇಂಜಿನಿಯರಿಂಗ್ ಪದವಿ ಪಡೆದು ಸಾಮಾನ್ಯ ವಿದ್ಯಾರ್ಥಿಗಳಿಗೆ ಬೋಧಿಸುವ ಸಾಮರ್ಥ್ಯ ಗಳಿಸಿದ್ದಾನೆ ಎಂಬ ಯಶೋಗಾಥೆಯನ್ನು ವಿವರಿಸುತ್ತ ವಾಕ್-ಶ್ರವಣ ವಿಕಲತೆಯ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳಿಗೆ ಹಲವು ಪರಿಹಾರ ಮಾರ್ಗೋಪಾಯಗಳನ್ನು ಸರಳವಾಗಿ ಹಾಗೂ ಮನಮುಟ್ಟುವಂತೆ ತಿಳಿಸಿದರು.
ಅಂತಿಮವಾಗಿ ಸಂವಾದ ಕಾರ್ಯಕ್ರಮದಲ್ಲಿ ಶ್ರೀಮತಿ ವರದ ಹೆಗಡೆ ಮತ್ತು ಶ್ರೀಮತಿ ಗಾಯತ್ರಿ ರವೀಶ್ ಅವರ ಜೊತೆಗೆ ಸಕ್ಷಮ ದ ಕಾರ್ಯಕಾರಿಣಿ ಸದಸ್ಯರಾದ ಶ್ರೀಯುತ ಸುಧೀಂದ್ರ ರವರು ಅವರು ದೃಷ್ಟಿ ನ್ಯೂನತೆವುಳ್ಳ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಾಗೂ ಸಂದೇಶ್ ಅವರು ದೈಹಿಕ ವಿಕಲತೆಯ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬಿ.ಐ.ಇ.ಆರ್ .ಟಿ. ರವರು ಕೇಳಿದ ಎಲ್ಲಾ ಸಮಸ್ಯೆಗಳು ಹಾಗೂ ಪ್ರಶ್ನೆಗಳಿಗೆ ಸೂಕ್ತವಾದ ಪರಿಹಾರ ಮಾರ್ಗವನ್ನು ಹಾಗೂ ಸೂಕ್ತ ಮಾರ್ಗದರ್ಶನಗಳನ್ನು ನೀಡಿ ಸಂವಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಕಾರ್ಯಕ್ರಮದ ಸಮರೋಪದ ಅವದಿಯಲ್ಲಿ, ಸಕ್ಷಮ ಕರ್ನಾಟಕದ ಕಾರ್ಯದರ್ಶಿಗಳಾದ ಡಾ .ಹರಿಕೃಷ್ಣ ರೈ ಯವರು ಸಕ್ಷಮದ ರಾಷ್ಟ್ರೀಯ ಯೋಜನೆಯಾದ ಕಾರ್ನಿಯಾ ಅಂಧತ್ವ ಮುಕ್ತ ಭಾರತ ಅಭಿಯಾನ ( ಕಾಂಬಾ)ದ ಬಗ್ಗೆ ಮಾಹಿತಿ ನೀಡಿ, ಸರಳ ನೇತ್ರದಾನ ಜಾಗೃತಿ ಕಾರ್ಯಕ್ರಮ ನಡೆಸಿ ಕೊಟ್ಟರು. DYPC ಶ್ರೀಮತಿ ಸುಕನ್ಯಾ ರವರು ಸಕ್ಷಮ ಕಾರ್ಯಗಾರದ ವಿಸ್ತೃತ ಅನುಭವಗಳನ್ನು ಹಂಚಿಕೊಂಡು ವಂದನಾರ್ಪಣೆಯೊಂದಿಗೆ ಕಾರ್ಯಗಾರ ಕೊನೆಗೊಳಿಸಿದರು.