ಉತ್ತರ ಪ್ರದೇಶದ ನಂತರ ಇದೀಗ ಮಧ್ಯಪ್ರದೇಶ ಸರ್ಕಾರ ಲವ್ ಜಿಹಾದ್ ವಿರೋಧಿ ಕಾನೂನು ತರಲು ಮುಂದಾಗಿದೆ. ಈ ಮಸೂದೆಯು ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡವನ್ನು ವಿಧಿಸುವ ಅವಕಾಶವನ್ನು ನೀಡಿದೆ.
ಇಂದು (ಡಿ.26, ಶನಿವಾರ) ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಲವಂತದ ಧಾರ್ಮಿಕ ಮತಾಂತರ ವಿರೋಧಿ ಮಸೂದೆ ‘ಧರ್ಮ ಸ್ವಾತಂತ್ರ್ಯ ಮಸೂದೆ-2020’ನ್ನು ಅಂಗೀಕರಿಸಲಾಯಿತು.
ಈ ತಿಂಗಳ ಅಂತ್ಯದಲ್ಲಿ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ. ತದನಂತರ ರಾಜ್ಯಪಾಲರ ಅಂಕಿತದ ಮೂಲಕ ಮಸೂದೆ ಕಾನೂನಾಗಿ ಜಾರಿಗೆ ಬರಲಿದೆ.
ಹೊಸ ಮಸೂದೆಯಡಿ, ಒತ್ತಾಯಪೂರ್ವಕ ಮತಾಂತರ ಮಾಡಿದರೆ 1 ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ 25,000 ರೂ. ದಂಡ ವಿಧಿಸಲಾಗುವುದು. ಬಲವಂತವಾಗಿ ಮತಾಂತರಗೊಂಡವರು ಎಸ್‌ಸಿ ಅಥವಾ ಎಸ್‌ಟಿಗೆ ಸೇರಿದ್ದರೆ 2 ರಿಂದ 10 ವರ್ಷಗಳ ಜೈಲು ಶಿಕ್ಷೆ ಹಾಗೂ ಗರಿಷ್ಠ 1 ಲಕ್ಷ ರೂ. ದಂಡ ವಿಧಿಸಬಹುದಾಗಿದೆ. ಪ್ರಕರಣದಲ್ಲಿ ಆರೋಪಿಯಷ್ಟೇ ಅಲ್ಲದೇ ಆತನ ಹಿಂದೆ ಇರುವ ಸಂಘಟನೆಗಳು ಮತ್ತು ಸಂಸ್ಥೆಗಳ ಮೇಲೆಯೂ ದೋಷಾರೋಪ ಮಾಡಬಹುದಾಗಿದೆ.
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಗೆ ಬಳಿಕ 35 ಮಂದಿಯನ್ನು ಬಂದಿಸಲಾಗಿದೆ.