ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅವರು ಈ ಪ್ರಪಂಚವನ್ನೇ ಬದಲಿಸುತ್ತಾರೆ: ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆಯವರ ಜೀವನ ಸಂದೇಶ
ಲೇಖಕರು: ಸಿಂಚನ.ಎಂ.ಕೆ
ಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ಎಬಿವಿಪಿ ಸ್ವಯಂಸೇವಕರು
‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ’ ಎಂಬ ದೈವ ಆದರ್ಶವನ್ನು ಅನುಸರಿಸುತ್ತಿದ್ದ ಪುಣ್ಯಭೂಮಿಯಲ್ಲಿ ಸ್ತ್ರೀಯರ ಶಿಕ್ಷಣಕ್ಕಾಗಿ, ಏಳಿಗೆಗಾಗಿ ಸಂಘರ್ಷ ಮಾಡುವ ದುಃಸ್ಥಿತಿ ನಿರ್ಮಾಣವಾಗಿದ್ದೇಕೆ? ದೇವಕೀನಂದನ, ಗಂಗಾಪುತ್ರ, ಅಂಜನೀಪುತ್ರ, ಕುಂತೀಪುತ್ರ ಯಾವ ಭವ್ಯಭೂಮಿಯಲ್ಲಿ ಹೀಗೆ ವೀರಯೋಧರನ್ನು ಅವರ ತಾಯಿಯ ಹೆಸರಿನಿಂದ ಸಂಭೋದಿಸಲಾಗುತ್ತಿತ್ತೊ ಅಂತಹ ನಾಡಿನಲ್ಲಿ ಸ್ತ್ರೀಯರ ಸಮಾನತೆಗಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದೇಕೆ? ವೈದಿಕಯುಗದ ಗುರುಕುಲಗಳಲ್ಲಿ ಗುರುವಿನ ಮಹೋನ್ನತ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಸ್ತ್ರೀಯರು ಆಧುನಿಕ ಯುಗದ ಆರಂಭಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಷ್ಯೆಯಾಗಿ ವಿದ್ಯೆ ಕಲಿಯುವ ಹಕ್ಕಿಗಾಗಿ ಸಾವಿತ್ರಿಬಾಯಿ ಫುಲೆಯಂತಹ ಮಹಾನ್ ಸ್ತ್ರೀಶಕ್ತಿ ಕ್ರಾಂತಿಜ್ಯೋತಿಯನ್ನೇ ಹಚ್ಚಿ ಹೋರಾಡಬೇಕಾದ ವಿವಶತೆ ನಿರ್ಮಾಣವಾಗಿದ್ದೇಕೆ?
ಯಾವ ಪವಿತ್ರಭೂಮಿಯ ಕಣ-ಕಣದಲ್ಲೂ ಧರ್ಮವೇ ಆವಿರ್ಭವಿಸಿ ಧರ್ಮದ ಆಧಾರದಿಂದಲೇ ಅಖಂಡಭಾರತ ನಿರ್ಮಾಣವಾಗಿತ್ತೊ, ಆ ನಾಡಿನ ಧರ್ಮಪ್ರಿಯ ಪ್ರಜೆಗಳಿಗೆ ಒಂದಾದ ಮೇಲೊಂದು ಮತ್ತೊಂದರಂತೆ, ಮಗದೊಂದರಂತೆ ಸತತವಾಗಿ ತಮ್ಮ ಸಮೃದ್ಧಭೂಮಿಯ ಸಾರ್ವಭೌಮತ್ವವನ್ನು ಗಿಟ್ಟಿಸಿಕೊಳ್ಳಲು ಹಾಗೆಯೇ ಅಮೋಘ ಸಂಪತ್ತನ್ನು ಕೊಳ್ಳೆ ಹೊಡೆಯಲು ಪರಕೀಯ ಆಕ್ರಮಣಗಳು ಎಷ್ಟು ನಡೆದು ಹೋದವೆಂದರೆ ಅದನ್ನು ಶಾಂತಿಪ್ರಿಯ ರಾಷ್ಟ್ರ ಎಂದೂ ಕಲ್ಪನೆ ಮಾಡಿಕೊಂಡಿರಲಿಕ್ಕಿಲ್ಲ. ಟರ್ಕರು, ಅರಬ್ಬರು, ಆಫ್ಘನ್ನರು, ಪೋರ್ಚುಗೀಸರು, ಡಚ್ಚರು, ಬ್ರಿಟಿಷರು ಹೇಗೆ ಬರ್ಬರವಾಗಿ ಆಕ್ರಮಣ ಮಾಡಿದರೆಂದರೆ ಧರ್ಮಾನುಯಾಯಿ ಪ್ರಜೆಗಳಿಗೆ ಏನಾಗುತ್ತಿದೆ ಹೀಗೆಲ್ಲಾ ಇಷ್ಟೊಂದು ಅಧರ್ಮದಿಂದ ಜನರು ವ್ಯವಹರಿಸುವರಾ! ಎಂಬ ಆಘಾತದಲ್ಲಿರುವಾಗಲೇ ತಮ್ಮ ಆತ್ಮವೇ ಆಗಿರುವ ಸನಾತನ ಸಂಸ್ಕೃತಿಯನ್ನು ಪ್ರಾಣದ ಬಲಿ ಕೊಟ್ಟಾದರೂ ರಕ್ಷಿಸಬೇಕೆಂದು ಪಣತೊಟ್ಟರು. ಪರಕೀಯರು ತಮ್ಮ ತೆಕ್ಕೆಗೆ ತೆಗೆದುಕೊಂಡ ಪ್ರದೇಶಗಳ ದೇವಸ್ಥಾನದಲ್ಲಿ ಪ್ರಾಣಪ್ರತಿಷ್ಠಾಪನೆಯಾಗಿರುವ ಮೂರ್ತಿಗಳನ್ನೇ ನಿರ್ದಯವಾಗಿ ಧ್ವಂಸ ಮಾಡುತ್ತಿರುವ, ಪವಿತ್ರತೆಯ ಪ್ರತೀಕವಾಗಿರುವ ಪೂಜನೀಯ ಮಾತಾ ಸಹೋದರಿಯರನ್ನು ಭೋಗದ ವಸ್ತುವಿನಂತೆ ನಡೆಸಿಕೊಳ್ಳಲಾಗುತ್ತಿರುವ ಭೀಕರತೆಗೆ ಇನ್ನು ಸಾಕ್ಷಿಯಾಗಬಾರದೆಂದು ಇವುಗಳನ್ನು ತಡೆಯಲು ಆರಂಭಿಸಿದ ಮಹಾಯಜ್ಞದ ಪರಿಣಾಮವನ್ನು ಇಂದಿಗೂ ದೇವಾಲಯಗಳ ರಚನೆ ವಿನ್ಯಾಸಗಳಲ್ಲಾಗಿರುವ ಬದಲಾವಣೆ ಮತ್ತು ಸ್ತ್ರೀಯರ ಸ್ವಾತಂತ್ರ್ಯದಲ್ಲಿ ಆಗಿರುವ ನಿಯಂತ್ರಣದ ಬದಲಾವಣೆಗಳಲ್ಲಿ ಕಾಣಬಹುದು. ಇನ್ನು ಅಂದಿನ ಆ ಭೀಕರತೆಯ ಕಾಲದಲ್ಲಿ ಎಷ್ಟರ ಮಟ್ಟಿಗೆ ಅದು ಸ್ತ್ರೀಯರ ಸ್ವಾತಂತ್ರ್ಯ, ಹಕ್ಕಿನ ವಿಷಯಗಳಲ್ಲಿ ಪರಿಣಾಮ ಬೀರಿರಬಹುದು ಎಂಬುದನ್ನು ನೀವೇ ಸ್ವಯಂ ಚಿಂತಿಸಿ ನೋಡಿ. ಸ್ತ್ರೀಯರ ರಕ್ಷಣೆಗಾಗಿ ಪ್ರಾರಂಭವಾದ ಸ್ವಾತಂತ್ರ್ಯ ಕಡಿವಾಣವೆಂಬ ಸಕಾರಾತ್ಮಕ ಸಾಧನವು ಹಲವು ಕಾಲದ ನಂತರದಲ್ಲಿ ನಕಾರಾತ್ಮಕ ಸಾಧನವಾಗಿ ಬದಲಾಗಿದೆ ಎಂಬುದಾಗಿ ವಿಶ್ಲೇಷಿಸಬಹುದು. ಆ ವೇಳೆಗೆ ಸರಿಯಾಗಿ ಸ್ತ್ರೀಯರ ಸಮಾನತೆ, ಸ್ವಾತಂತ್ರ್ಯ, ಶಿಕ್ಷಣ, ಹಕ್ಕುಗಳ ಪುನರ್ ಸ್ಥಾಪನೆಗೆಂದೇ ಅವತಾರವೆತ್ತಿ ಬಂದಂತೆ ಸಾವಿತ್ರಿಬಾಯಿ ಫುಲೆಯವರು ಜೀವಿಸಿದರು.
ಈ ಆಧುನಿಕ ಯುಗದಲ್ಲಿ ನೀವೇನಾದರೂ ಇಂದು ಒಬ್ಬ ಸ್ತ್ರೀಯಾಗಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದೀರೆಂದರೆ, ಅದಕ್ಕಾಗಿ ನೀವು ಸಾವಿತ್ರಿಬಾಯಿ ಅವರಿಗೆ ಕೃತಜ್ಞವಾಗಿರಬೇಕು. ಹಾಗೆಯೇ ನೀವೇನಾದರೂ ಇಂದು ಒಬ್ಬ ಸ್ತ್ರೀಯಾಗಿ ಸ್ವಾತಂತ್ರ್ಯದಿಂದ ಜೀವಿಸುತ್ತಾ ನಿಮ್ಮ ಇಚ್ಛೆಯ ಉದ್ಯೋಗವನ್ನು ಮಾಡುತ್ತಿದ್ದರೆ, ಅದಕ್ಕಾಗಿ ನೀವು ಸಾವಿತ್ರಿಬಾಯಿ ಅವರಿಗೆ ಕೃತಜ್ಞವಾಗಿರಬೇಕು. ಇಂದು ಪುರುಷರಿಗೆ ಸಮನಾಗಿ ಸ್ತ್ರೀಯರು ಎಲ್ಲಾ ಕ್ಷೇತ್ರಗಳಿಗೂ ದಾಪುಗಾಲಿಡುತ್ತಿದ್ದಾರೆಂದರೆ, ಅದಕ್ಕಾಗಿ ಸಮರ್ಪಕ ತಳಹದಿ ಸೃಷ್ಟಿ ಮಾಡಿದ ಸಾವಿತ್ರಿಬಾಯಿ ಅವರಿಗೆ ನಾವೆಲ್ಲಾ ಕೃತಜ್ಞವಾಗಿರಬೇಕು. ಅದೆಲ್ಲಾ ಬಿಡಿ. ಇಂದು ನಾನು ಒಬ್ಬ ಸ್ತ್ರೀಯಾಗಿ ಶಿಕ್ಷಣ ಪಡೆದು ಈ ಲೇಖನವನ್ನು ಬರೆಯುತ್ತಿದ್ದೀನೆಂದರೆ ಹಾಗೂ ನೀವು ಸ್ತ್ರೀಯಾಗಿದ್ದು ಶಿಕ್ಷಣ ಪಡೆದು ಇದನ್ನು ಓದುತ್ತಿದ್ದೀರೆಂದರೆ, ಅದಕ್ಕಾಗಿ ಸ್ತ್ರೀಶಿಕ್ಷಣ ಕ್ರಾಂತಿಯನ್ನೇ ಆರಂಭಿಸಿದ ಸಾವಿತ್ರಿಬಾಯಿ ಅವರಿಗೆ ಕೃತಜ್ಞವಾಗಿರಲೇಬೇಕು.
ಸಾವಿತ್ರಿ ಅವರ ಪೋಷಕರು ಆಕೆಗೆ 9ನೇ ವಯಸ್ಸಿನಲ್ಲೇ ವೈವಾಹಿಕ ಜೀವನದ ಮುನ್ನುಡಿ ಬರೆದರು. ಆದರೆ ಎಲ್ಲವೂ ದೈವದಾಟ ಎನ್ನುವಂತೆ ಸಾವಿತ್ರಿಯವರ ಪತಿ ಜ್ಯೋತಿ ಬಾ ಫುಲೆ ಅವರು ಸಾಮಾನ್ಯರಂತಲ್ಲದೆ ಶಿಕ್ಷಣದ ಮಹತ್ವವನ್ನು ತಿಳಿದಿರುವ ಪ್ರಜ್ಞಾವಂತ ವ್ಯಕ್ತಿಯಾಗಿದ್ದರು. ತಮ್ಮ ಪತ್ನಿಗೆ ಓದಿನ ಬಗೆಗಿರುವ ತೀವ್ರತರ ಆಸಕ್ತಿಯನ್ನು ಕಂಡು ಅವರ ಮೊದಲ ಗುರುವಾಗಿ ವಿದ್ಯೆ ಕಲಿಸಿದರು. ಮನೆಯ ಶಿಕ್ಷಣಕ್ಕೆ ಮಾತ್ರ ಮೀಸಲು ಮಾಡದೆ ತಮ್ಮ ಪತ್ನಿಯನ್ನು ಶಿಕ್ಷಕರ ವೃತ್ತಿಯ ತರಬೇತಿಗಾಗಿ ಅಹಮದಾಬಾದ್ ನ ಫರಾರ್ಸ್ ಇನ್ಸ್ಟಿಟ್ಯೂಷನ್ ಹಾಗೂ ಪುಣೆಯ ಮಿಂಚೆಲ್ಸ್ ಶಾಲೆಗೆ ಕಳುಹಿಸಿಕೊಟ್ಟರು. ಹೀಗೆ ಸಾವಿತ್ರಿ ಅವರು ತರಬೇತಿ ಪಡೆಯುತ್ತಿದ್ದಾಗ ಮುಂದೊಂದು ದಿನ ಅವರು ಹೊಸ ಇತಿಹಾಸವನ್ನೇ ಸೃಷ್ಟಿಸಲು ಹೊರಟಿದ್ದಾರೆ ಎಂದು ಯಾರಾದರೂ ಕಲ್ಪನೆ ಕೂಡ ಮಾಡಿದ್ದರೊ ಇಲ್ಲವೊ! ‘ಪ್ರಯತ್ನವೇ ಪರಮಧರ್ಮ’ ಎಂಬ ಶ್ರೇಷ್ಠಸಂದೇಶವನ್ನು ಇವರ ಜೀವನದಲ್ಲಿ ಕಾಣಬಹುದು. ಒಂದು ವೇಳೆ ಅಂದು ಕುಟುಂಬದ ಸಮಾಜದ ಕಟ್ಟುಪಾಡುಗಳಿಗೆ ಹೆದರಿ ಪ್ರಯತ್ನ ಮಾಡದೆ ಹೋಗಿದ್ದರೆ ಇಂದು ಸ್ತ್ರೀಯರ ಜೀವನದಲ್ಲಿ ಹೊಸಭಾಷ್ಯವನ್ನು ಬರೆಯಲಾಗುತ್ತಿರಲಿಲ್ಲ.
ಮೇಲ್ವರ್ಗದ ಜಾತಿಯವರಿಗೆ ಮಾತ್ರ ಮೀಸಲಾಗಿದ್ದ ಅಂದಿನ ಶಾಲೆಗಳಿಗೆ ಸೆಡ್ಡು ಹೊಡೆದು, ಕೆಳವರ್ಗದ ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ 1848ರಲ್ಲಿ ಭಿಡೇವಾಡ ಎಂಬ ಪುಣೆ ಸಮೀಪದ ಪ್ರದೇಶದಲ್ಲಿ ಶಾಲೆಯೊಂದನ್ನು ಆರಂಭಿಸಿಯೇ ಬಿಟ್ಟರು. ನಂತರ ಅವರು ಎದುರಿಸಬೇಕಾಗಿ ಬಂದ ಅಪಮಾನದ, ಒತ್ತಡದ, ಅಸ್ವೀಕಾರದ ಸನ್ನಿವೇಶಗಳೇ ಅವರ ಜೀವನದ ಬಹು ದೊಡ್ಡ ತಿರುವಾದವು. ಹೆಣ್ಣು ಮಕ್ಕಳು ಹೊರಗೆ ಬರುವುದೇ ಕಷ್ಟವಾಗಿದ್ದ ಕಾಲಕ್ಕೆ ಅವರನ್ನು ಶಾಲೆಯಲ್ಲಿ ಓದಿಸಿ ಉದ್ಧಾರ ಮಾಡುತ್ತೇನೆಂದು ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದ ಸಾವಿತ್ರಿಬಾಯಿ ಅವರನ್ನು ಅಷ್ಟು ಬೇಗ ಸಮಾಜ ಒಪ್ಪಿಕೊಂಡು ಬಿಡುತ್ತದೆಯೇ? ಅವರು ಶಾಲೆಗೆ ಹೋಗುವಾಗ ಬರುವಾಗಲೆಲ್ಲ ಕೆಸರು, ಕಲ್ಲು, ಗೋವಿನ ಸಗಣಿಯನ್ನೆಲ್ಲಾ ಎರಚುತ್ತಿದ್ದರು. ಈ ಸನ್ನಿವೇಶದಲ್ಲಿ ನಮ್ಮನ್ನು ನಾವು ಕಲ್ಪಿಸಿಕೊಳ್ಳಲೂ ಭಯವಾಗುತ್ತದೆ. ಆದರೆ ಈ ಗಟ್ಟಿಗಿತ್ತಿ ಅದು ಹೇಗೆ ಇದನ್ನೆಲ್ಲಾ ಸಹಿಸಿಕೊಂಡರು? ಇದು ಪ್ರತಿಯೊಬ್ಬ ಸ್ತ್ರೀಯರಿಗೂ ಪಾಠವಾಗಬೇಕು. ಲೋಕದ ನಿಂದನೆ, ಅಪಮಾನಕ್ಕೆ ಹೆದರಿ ತಮ್ಮ ಗುರಿ ಕನಸುಗಳಿಗೆ ಕೊಳ್ಳಿ ಇಡುವ ಹೆಣ್ಣು ಮಕ್ಕಳು ಸಾವಿತ್ರಿಬಾಯಿ ಅವರ ಜೀವನವನ್ನು ಓದಿ ಪ್ರೇರಣೆ ಪಡೆಯಬೇಕು. ಸಾವಿತ್ರಿಬಾಯಿ ಅವರಿಗೆ ತಾನು ಮಾಡುತ್ತಿರುವುದು ಮಹೋನ್ನತವಾದ ಕಾರ್ಯ ಎಂಬ ಅರಿವು ಇದ್ದಿದ್ದರಿಂದಲೇ ಇದನ್ನೆಲ್ಲಾ ಸಮರ್ಥವಾಗಿ ಎದುರಿಸಿದರು. ಅಷ್ಟೇ ಅಲ್ಲದೆ ಈ ಸಮಸ್ಯೆಯ ಪರಿಹಾರಕ್ಕಾಗಿ ಯಾವಾಗಲೂ ತಮ್ಮ ಬ್ಯಾಗಿನಲ್ಲಿ ಒಂದು ಸೀರೆಯನ್ನು ಇಟ್ಟಕೊಳ್ಳುತ್ತಿದ್ದರು.
ನಾವು ಮಾಡುವ ಕಾರ್ಯವು ಪವಿತ್ರ ಉದ್ದೇಶಗಳಿಂದ ಕೂಡಿದ್ದು, ಸಮಾಜದ ಕಲ್ಯಾಣಕ್ಕಾಗಿ ಆದರೆ ಆ ಧರ್ಮದ ಶಕ್ತಿಯೇ ನಮ್ಮ ಕಾರ್ಯವನ್ನು ಸಾಕಾರಗೊಳಿಸುವುದು ಎಂಬಂತೆ ಸಮಾಜದಲ್ಲಿ ಅಸ್ವೀಕಾರದ ಹೋರಾಟವಾಗಿ ಆರಂಭವಾದ 8 ವಿದ್ಯಾರ್ಥಿನಿಯರ ಒಂದು ಶಾಲೆಯು 1851ರ ವೇಳೆಗೆ 150 ವಿದ್ಯಾರ್ಥಿನಿಯರನ್ನೊಳಗೊಂಡ ಮೂರು ಶಾಲೆಗಳಾಗಿ ಬೆಳೆದು ವಿಸ್ತಾರವಾಯಿತು. ಇಂದು ನಾವೆಲ್ಲಾ ಏನು ಸರ್ವಶಿಕ್ಷಣ ಅಭಿಯಾನ, ಮಧ್ಯಾಹ್ನದ ಬಿಸಿಯೂಟ, ಪೋಷಕರ ಮೀಟಿಂಗ್ ನಂತಹ ಸರ್ಕಾರದ ಕಾರ್ಯಕ್ರಮಗಳನ್ನು ಶ್ಲಾಘಿಸುತ್ತಿದ್ದೇವೆಯೊ ಅದನ್ನು 150 ವರ್ಷಗಳ ಹಿಂದೆಯೇ ಸಾವಿತ್ರಿಬಾಯಿ ಫುಲೆ ಅವರು ಆರಂಭಿಸಿ ಆಗಿತ್ತು. ಹಾಗೆಯೇ ಇಂದಿನ ಸರ್ಕಾರಗಳು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸುವಂತೆ, ಸಾವಿತ್ರಿಬಾಯಿ ಅವರು ಅಂದಿನ ಕಾಲದಲ್ಲೇ ಹೀಗೆ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಧನವನ್ನು ನೀಡುತ್ತಿದ್ದರು.
ಸ್ತ್ರೀಯರ ಶಿಕ್ಷಣದ ಬಗ್ಗೆ ಮಾತ್ರ ಗಮನಹರಿಸದೆ ಸಮಾಜವು ಗಮನವೇ ಕೊಡದೆ ತಿರಸ್ಕೃತವಾಗಿ ನೋಡಲ್ಪಟ್ಟವರ ಅಸಹಾಯಕ, ಶೋಚನೀಯ ಸ್ತ್ರೀಯರ ದುಃಖಕ್ಕೆ ಸ್ಪಂದಿಸಿದ ವಿರಳಾತಿ ವಿರಳ ವ್ಯಕ್ತಿ ಸಾವಿತ್ರಿಬಾಯಿ ಅವರು. ಗರ್ಭಾವತಿ ವಿಧವೆಯರು, ಅತ್ಯಾಚಾರಕ್ಕೊಳಗಾದ ವಿವಾಹಪೂರ್ವ ಗರ್ಭಾವತಿಯರು ಹಾಗೂ ಅವರ ಮಕ್ಕಳ ರಕ್ಷಣೆಗಾಗಿ ‘ಬಾಲಹತ್ಯಾ ಪ್ರತಿಬಂಧಕ ಗೃಹ’ವನ್ನು ಸ್ಥಾಪಿಸಿ ನಿರಾಶ್ರಿತರಿಗೆ ಆಶ್ರಯದಾತರಾದರು. ಇಂತಹದ್ದೇ ಒಂದು ನಿರಾಶ್ರಿತ ಮಗುವಾಗಿದ್ದ ಯಶ್ವಂತ್ ನನ್ನು ತಮ್ಮ ಪುತ್ರನಾಗಿ ಸ್ವೀಕರಿಸುವುದರ ಮೂಲಕ ಸಂತಾನರಹಿತವಾಗಿದ್ದ ದಂಪತಿಗಳು ಬದುಕಿನಲ್ಲಿ ಹೊಸ ಆಶಾಕಿರಣವನ್ನು ಕಂಡು ಕೊಂಡರು.
ಸಮಾಜಸೇವೆಯನ್ನೇ ತಮ್ಮ ಧ್ಯೇಯವಾಗಿಸಿಕೊಂಡು ಬದುಕುತ್ತಿದ್ದ ಈ ಆದರ್ಶ ದಂಪತಿಗಳು ಮಹಿಳಾ ಸೇವಾಮಂಡಲವನ್ನು ಸ್ಥಾಪಿಸಿ ಮಹಿಳೆಯರು ಅವರ ಹಕ್ಕು, ಸಮ್ಮಾನ, ಸಾಮಾಜಿಕ ರೀತಿ-ನೀತಿಗಳ ಬಗೆಗೆ ಜಾಗೃತವಾಗಿರುವಂತೆ ಅರಿವು ಮೂಡಿಸುತ್ತಿದ್ದರು. ಹಾಗೆಯೇ ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿ ಸರಳವಾದ, ವರದಕ್ಷಿಣೆರಹಿತವಾದ ವಿವಾಹಗಳಿಗೆ ಪ್ರೋತ್ಸಾಹ ಕೊಡುತ್ತಾಬಂದರು. ಇದೇ ರೀತಿಯಲ್ಲಿ ತಮ್ಮ ದತ್ತು ಪುತ್ರನ ವಿವಾಹವನ್ನೂ ಮಾಡಿ ಮಾದರಿಯಾದರು. ಬರಗಾಲದಿಂದ ಜನ ಜೀವನ ತತ್ತರಿಸಿ ಹೋಗಿದ್ದ ಕಾಲದಲ್ಲಿ ವಿಕ್ಟೋರಿಯಾ ಬಾಲಾಶ್ರಮವನ್ನು ಸ್ಥಾಪಿಸಿ ಸಾವಿರಾರು ಜನರಿಗೆ ಅನ್ನದಾತರಾದರು. ತಮಗಾಗಿ ನಿರ್ಮಿಸಿಕೊಂಡಿದ್ದ ಬಾವಿಯಲ್ಲಿ ದಲಿತರಿಗೆ ನೀರು ತೆಗೆದುಕೊಂಡು ಹೋಗಲು ಅವಕಾಶ ನೀಡಿ ಸಮಾನತೆಯ ಸಾರವನ್ನು ಅಂದೇ ಎತ್ತಿ ಹಿಡಿದಿದ್ದರು.
ಇಂದು ನಾವು ಕೊರೊನಾ ಮಹಾಮಾರಿಯನ್ನು ಎದುರಿಸುತ್ತಿರುವಂತೆ ಸಾವಿತ್ರಿಬಾಯಿ ಅವರ ಕಾಲಘಟ್ಟದಲ್ಲಿ ಪ್ಲೇಗ್ ಮಹಾಮರಿಯು ಅವರನ್ನೆಲ್ಲಾ ಕಾಡಿತ್ತು. ಅತ್ಯುನ್ನತ ಆರೋಗ್ಯ ವ್ಯವಸ್ಥೆ, ತಂತ್ರಜ್ಞಾನದ ವ್ಯವಸ್ಥೆಯನ್ನು ಹೊಂದಿರುವ ನಮ್ಮ ಕಾಲದಲ್ಲಿಯೂ ಎಷ್ಟೊಂದು ಸಾವು-ನೋವುಗಳನ್ನು ಇಂದು ಕಾಣುತ್ತಿದ್ದೇವೆ? ಇನ್ನು ಅಧಿಕ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರದ ಆ ಕಾಲದಲ್ಲಿನ ಸಾವುಗಳ ವಿಷಮಯ ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಿ. ತಮ್ಮ ಪುತ್ರ ಯಶ್ವಂತ್ ವೈದ್ಯನಾದ್ದರಿಂದ ಆತನಿಗೆ ಅಂದಿನ ಕಠಿಣ ಪರಿಸ್ಥಿತಿಯಲ್ಲಿ ಜೊತೆಯಾಗಿ ನಿಂತು, ಜಾತಿಭೇದಗಳಿಲ್ಲದೆ ಸರ್ವರಿಗೂ ಚಿಕಿತ್ಸೆ ನೀಡುವಂತೆ ತಿಳಿಸಿದರು. ಸಾವಿತ್ರಿಬಾಯಿ
ಅವರು ತಮ್ಮ ಪುತ್ರನ ಕ್ಲಿನಿಕ್ ಗೆ ಕರೆತರುವ ಪ್ಲೇಗ್ ರೋಗಸ್ಥ ಮಗುವಿನಿಂದ ಅವರಿಗೂ ಕೂಡ ಪ್ಲೇಗ್ ಹರಡಿಬಿಡುತ್ತದೆ. ಅವರು ಕರೆತಂದ ಆ ಪುಟ್ಟ ಕಂದನ ಪ್ರಾಣವೇನೊ ಉಳಿಯುತ್ತದೆ. ಆದರೆ ಅವರ ಪ್ರಾಣಪಕ್ಷಿಯೇ ಹಾರಿಹೋಗಿ ಬಿಡುತ್ತದೆ.
ಸಾವಿತ್ರಿಬಾಯಿ ಅವರ ದಿಟ್ಟ ಹೋರಾಟದ ಹಾದಿಯನ್ನು ಯಾವ ಸಾಂಸಾರಿಕ ಸಮಸ್ಯೆಯೂ ತಡೆಯಲಾಗಲಿಲ್ಲ. ತಮ್ಮ ಕುಟುಂಬದವರ ತಿರಸ್ಕಾರ, ತಮ್ಮ ಪತಿಯ ಶೀಘ್ರ ಮೃತ್ಯುವಿನ ಆಘಾತ, ತಮ್ಮದ್ದೇ ಸಮಾಜದವರಿಂದಾಗುತ್ತಿದ್ದ ಅಪಮಾನ ಯಾವುದೂ ಕೂಡ ಅವರ ಮನೋಸ್ಥೈರ್ಯವನ್ನು ಕುಂದಿಸಲಾಗಲಿಲ್ಲ. ಸ್ತ್ರೀಯರ ಮೇಲಾಗುತ್ತಿರುವ ಶೋಷಣೆ, ದಬ್ಬಾಳಿಕೆಗಳ ವಿರುದ್ಧ ಹೋರಾಡಲು ಅವರು ಬೆಳಗಿಸಿದ ಕ್ರಾಂತಿಜ್ಯೋತಿಯನ್ನು ಮತ್ತಷ್ಟು ಪ್ರಕಾಶಮಾನಗೊಳಿಸುವ ಧೃಡಸಂಕಲ್ಪ ಮಾಡಬೇಕಿದೆ. ಪ್ರತಿಯೊಂದು ಹೆಣ್ಣುಮಗುವನ್ನು ಬಲಶಾಲಿ, ಬುದ್ಧಿಶಾಲಿ, ಧೈರ್ಯಶಾಲಿ ಹಾಗೂ ಮುಖ್ಯವಾಗಿ ಶೀಲವಂತೆ ಸಂಸ್ಕಾರವಂತೆಯಾಗಿ ಬೆಳೆಸಿ ಅವರ ಬದುಕನ್ನು ಕಟ್ಟಿಕೊಳ್ಳುವ ಸಾಮರ್ಥ್ಯವನ್ನು ಅವರಲ್ಲಿ ತುಂಬಬೇಕಿದೆ. ಇಂದಿಗೂ ಕೂಡ ಸ್ತ್ರೀಯರ ಅಗ್ನಿಪಥದ ಬಾಳಿನಲ್ಲಿ ಭ್ರೂಣಹತ್ಯೆ, ಬಾಲ್ಯವಿವಾಹ, ಅತ್ಯಾಚಾರ, ವರದಕ್ಷಿಣೆ ಕಿರುಕುಳದಂತಹ ಪಿಡುಗುಗಳು ಜೀವಂತವಾಗಿವೆ. ಎಷ್ಟೇ ಕಾನೂನುಗಳು, ಶಿಕ್ಷೆಗಳು ಅಸ್ತಿತ್ವದಲ್ಲಿದ್ದರೂ ಈ ಸಮಸ್ಯೆಗಳನ್ನು ಪೂರ್ಣವಾಗಿ ಬಗೆಹರಿಸಲಾಗುತ್ತಿಲ್ಲ. ಎಲ್ಲಿಯವರೆಗೆ ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲಿ ಸ್ತ್ರೀಯರ ಬಗೆಗೆ ತನ್ನನ್ನು ಹೆಡೆದ ತಾಯಿಯಂತೆ ದೇವಿಯಂತೆ ಗೌರವ ನೀಡುವ ಸದ್ಭಾವನೆ ಬೆಳೆಯುವುದಿಲ್ಲವೊ, ಅಲ್ಲಿಯವರೆಗೆ ಸ್ತ್ರೀಯರ ದುಃಖಕ್ಕೆ ತಿಲಾಂಜಲಿ ಇಡಲು ಸಾಧ್ಯವೇ ಇಲ್ಲ.